ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲು ಮಂಟಪದ ಅನ್ನಪೂರ್ಣೆಯರು

Last Updated 29 ಮೇ 2017, 19:30 IST
ಅಕ್ಷರ ಗಾತ್ರ

‘ಮಳೀ ಆಗಾವಲ್ದೊ ತಮ್ಮಾ, ಇನ್ನು ಬೆಳಿ ಎಲ್ಲಿಂದ ತರೋದು. ಏನೋ ಅಕಿ ಪುಣ್ಯಾದಿಂದ ಎರಡು ಕಾಸು ಕಾಣ್ತೀವಿ. ಮನ್ಯಾಗ ಕುಂತ್ರ ಏನಾಗ್ತೈತಿ. ಇಲ್ಲಿಗೆ ಬಂದ್ರ ಸಂತಿ, ಪ್ಯಾಟಿ, ಉಪ್ಪು, ಮೆಣಸಿನಕಾಯಿಗೆ ಖರ್ಚು ನೀಗತೈತಿ’ ಎನ್ನುತ್ತಲೇ  ಬಾದಾಮಿಯ ಬನಶಂಕರಿ ದೇವಾಲಯ ಎದುರಿನ ಸಾಲುಮಂಟಪದ ನೆರಳಿನಾಸರೆಯಲ್ಲಿ ಕುಳಿತ ಗುರಮ್ಮಜ್ಜಿ ಬುತ್ತಿಯ ಗಂಟು ಬಿಚ್ಚಿದರು.

ಆಕೆ ತಿನ್ನಲು ಕೊಟ್ಟ ಎರಡು ಸಜ್ಜೆ ರೊಟ್ಟಿಯನ್ನು ಶೇಂಗಾ, ಪುಟಾಣಿಯ ಚಟ್ನಿ ಪುಡಿ, ಕೆಂಪು ಮೆಣಸಿನಕಾಯಿ ಚಟ್ನಿ, ಗುರೆಳ್ಳು, ಮೊಸರು, ಎಣ್ಣಿಗಾಯಿ, ಮಡಕಿಕಾಳು ಪಲ್ಯ ಅಲಂಕರಿಸಿದ್ದವು. ಈರುಳ್ಳಿ ತುಂಡು ನೆಂಚಿಕೆಗಾಯಿತು. ಹೆಂಚಿನ ಮೇಲೆ ತುಸು ಹೆಚ್ಚೇ ಹರಿದಾಡಿದ್ದ ಸಜ್ಜೆ ರೊಟ್ಟಿಯ ಮೇಲ್ಪದರದಲ್ಲಿ ಪಲ್ಯ, ಚಟ್ನಿಯ ಪುಡಿ ಹಾಗೂ ಮೊಸರಿನ ಮಿಶ್ರಣ ಹರಡಿ ಹದಗೊಂಡು ಬಾಯಲ್ಲಿ ಇಡುತ್ತಲೇ ಕರಗಿತು. 20 ರೂಪಾಯಿಗೆ ಪುಷ್ಕಳ ಊಟ ಬಡಿಸಿದ ಗುರಮ್ಮ ನಂತರ ಕೆಲಹೊತ್ತು ಮಾತಿಗೆ ಸಿಕ್ಕರು.

ಮಳೆ ಮುನಿಸಿಕೊಂಡು ಬೆಳೆ ಇಲ್ಲದೇ ಮಲಪ್ರಭೆಯ ತಟದಲ್ಲಿನ ತನ್ನೂರು ಢಾಣಕಶಿರೂರು ಹಾಗೂ ಸುತ್ತಲಿನ ಹಳ್ಳಿಗಳ ಜನ ಮಂಗಳೂರು, ಗೋವಾ ಕಡೆಗೆ ಗುಳೇ ಹೋಗಿರುವುದನ್ನು ಹೇಳಿಕೊಂಡರು. ರೊಟ್ಟಿಯ ಬುಟ್ಟಿ ಹೊತ್ತು ಬರದಿದ್ದರೆ ತನ್ನ ಕುಟುಂಬವೂ ಗುಳೇ ಹೋಗಬೇಕಿತ್ತು ಎಂದರು. ಆಕೆಯ ಮಾತಿಗೆ ಪಕ್ಕದಲ್ಲಿಯೇ ನಾಲ್ಕು ವರ್ಷಗಳಿಂದ ನೀರಿನ ಪಸೆ ಕಾಣದ ಹರಿದ್ರಾತೀರ್ಥ ಹೊಂಡದ ಒಡಲು ಕನ್ನಡಿ ಹಿಡಿದಿತ್ತು.

ಅದೇ ಹೊತ್ತಿಗೆ ಗುರಮ್ಮಜ್ಜಿಯ ಸಹವರ್ತಿಗಳಾದ ಪಂಪಮ್ಮ, ಹನುಮವ್ವ, ಮುದುಕವ್ವ, ಯಮನಮ್ಮ ಕೂಡ ಅಲ್ಲಿ ಸೇರಿಕೊಂಡರು. ಹನುಮವ್ವ, ಸೊಂಟದ ಚೀಲದಲ್ಲಿ ಎಲೆ ಅಡಿಕೆಯ ತಲಾಶೆಗಿಳಿದಿದ್ದರು. ಮಧ್ಯಾಹ್ನ ಪ್ರವಾಸಿಗರಿಗೆ ರೊಟ್ಟಿ ಉಣಬಡಿಸಿ ದಣಿದಿದ್ದ ಆ ಅಮ್ಮಂದಿರ ಮುಖದಲ್ಲಿ ಬರಗಾಲದಲ್ಲೂ ಮನೆ ಮಂದಿಗೆ ತುತ್ತು ಉಣಿಸಲು ದಾರಿ ಕಂಡುಕೊಂಡ ನೆಮ್ಮದಿಯಭಾವ ನೆಲೆಸಿತ್ತು.

ಬಾದಾಮಿಯ ಬನಶಂಕರಿ, ಪಟ್ಟದಕಲ್ಲಿನಲ್ಲಿ ನಿತ್ಯ ನೂರಾರು ಸಂಖ್ಯೆಯಲ್ಲಿ ಕಾಣಸಿಗುವ ಈ ಅನ್ನಪೂರ್ಣೆಯರು, ಅದೇ ತಾಲ್ಲೂಕಿನ ಢಾಣಕಶಿರೂರ, ನಂದಿಕೇಶ್ವರ, ನೀರಲಗಿ, ಜಾಲಿಹಾಳ, ಪಟ್ಟದಕಲ್ಲು, ಕಾಟಾಪುರದವರು. ಮುಂಜಾನೆಯೇ ರೊಟ್ಟಿ ತುಂಬಿದ ಬುಟ್ಟಿ ಹೊತ್ತು ಮನೆಯಿಂದ ಹೊರಟು ಬಸ್ಸು, ಟಂಟಂ, ರಿಕ್ಷಾ ಹಿಡಿದು ಬನಶಂಕರಿಯ ಸಾಲು ಮಂಟಪ, ಪಟ್ಟದಕಲ್ಲು ದೇವಾಲಯಗಳ ಸಮುಚ್ಛಯದ ಬಳಿ ಬರುತ್ತಾರೆ.

ಹಗಲು ನೆತ್ತಿಗೇರುತ್ತಿದ್ದಂತೆಯೇ ಪ್ರವಾಸಿಗರ ಹೊಟ್ಟೆ ತುಂಬಿಸುವ ಕಾಯಕ ಆರಂಭಿಸುತ್ತಾರೆ. ಪ್ರವಾಸಿ ವಾಹನಗಳು ಬರುತ್ತಿದ್ದಂತೆಯೇ ತಾವೇ ಮುಂದಾಗಿ ಒಳಗೆ ಕುಳಿತವರನ್ನು ಮಾತಾಡಿಸಿ, ಬುಟ್ಟಿಯೊಳಗಿನ ಅನ್ನದ ವೈವಿಧ್ಯ ಬಣ್ಣಿಸುತ್ತಾರೆ. ಊಟ ಮಾಡುವಂತೆ ಕೇಳುತ್ತಾರೆ. ಹಸಿವಿಲ್ಲ ಎಂದರೆ ಕೊನೆಯ ಪಕ್ಷ ಮಜ್ಜಿಗೆ ಕುಡಿದು ದಣಿವಾರಿಸಿಕೊಳ್ಳುವಂತೆ ಕೋರುತ್ತಾರೆ. ಈ ಅಮ್ಮಂದಿರ ಪ್ರೀತಿಯ ಆಹ್ವಾನಕ್ಕೆ ಪ್ರವಾಸಿಗರು ಮನಸೋತರೆ ಸಂಜೆ ಊರ ಕಡೆ ನೆಮ್ಮದಿಯ ಹಜ್ಜೆ. ಇಲ್ಲದಿದ್ದರೆ ಅದೇ ಬುತ್ತಿಗಂಟು ರಾತ್ರಿ ಮನೆ ಮಂದಿಯ ಊಟಕ್ಕೆ ದಾರಿ.

ಗುರಮ್ಮಜ್ಜಿ ಕಳೆದ 30 ವರ್ಷಗಳಿಂದ ಬನಶಂಕರಿಗೆ ಬರುತ್ತಿದ್ದಾರೆ. ಢಾಣಕಶಿರೂರಿನಿಂದ ಬರುವ 20ಕ್ಕೂ ಹೆಚ್ಚು ಮಹಿಳೆಯರಿಗೆ ಆಕೆಯೇ ಮಾರ್ಗದರ್ಶಕಿ. ಮನೆ ಮಂದಿಯೆಲ್ಲಾ ಸೇರಿ ಬೆಳಗಿನ ಜಾವವೇ ರೊಟ್ಟಿ ಬಡಿಯುತ್ತಾರೆ. ಹೊಲದಲ್ಲಿ ಬೆಳೆದ ಜೋಳ, ಸಜ್ಜೆ, ಅಕ್ಕಡಿಕಾಳು, ಕಾಯಿಪಲ್ಲೆ (ತರಕಾರಿ) ಅಡುಗೆಗೆ ಬಳಕೆಯಾಗುತ್ತದೆ.

ಕಟ್ಟಿಗೆ ಒಲೆಯಲ್ಲಿ ಮಾಡಿದ ಅಡುಗೆಗೆ ರುಚಿ ಜಾಸ್ತಿ. ಪ್ರವಾಸಿಗರಿಗೆ ಮನೆ ಊಟ ಸಿಕ್ಕಂತಾಗುತ್ತದೆ. ಒಬ್ಬರು ದಿನಕ್ಕೆ 50ರಿಂದ 60 ರೊಟ್ಟಿ ಮಾರಾಟ ಮಾಡುತ್ತಾರೆ.  ಸರಾಸರಿ ₹600 ಗಳಿಸುತ್ತಾರೆ. ಖರ್ಚು ಕಳೆದು ₹ 300ರಿಂದ ₹400ರಷ್ಟು ಉಳಿಯುತ್ತದೆ.

‘ಮೊದಲೆಲ್ಲಾ ಐದು ರೂಪಾಯಿಗೆ ಊಟ ಕೊಡುತ್ತಿದ್ದೆವು. ನಂತರ ಹತ್ತಾಯ್ತು. ಈಗ ಜೋಳ, ಸಜ್ಜೆಯ ಬೆಲೆ ದುಬಾರಿಯಾಗಿದೆ. ವರ್ಷದಿಂದ ₹20ಕ್ಕೆ ಮಾರಾಟ ಮಾಡುತ್ತಿದ್ದೇವೆ. ಬೆಂಗಳೂರು–ಮೈಸೂರು ಕಡೆ ಮಂದಿ ಬಂದರೆ ರೊಟ್ಟಿ ಇಷ್ಟಪಡುತ್ತಾರೆ. ಊಟ ಮಾಡುವ ಜೊತೆಗೆ ಪಾರ್ಸೆಲ್‌ ಕೂಡ ಒಯ್ಯುತ್ತಾರೆ’ ಎಂದು ಹೇಳುವ ಮುದುಕವ್ವನಿಗೆ ನಾಲ್ವರು ಮಕ್ಕಳಿದ್ದಾರೆ. ಪತಿ ಅಂದೆಪ್ಪ ಹಾಗೂ ಮೂವರು ಹೆಣ್ಣು ಮಕ್ಕಳಿಗೆ ಮಾತು ಬರುವುದಿಲ್ಲ. ಹಾಗಾಗಿ ಮನೆಯ ಜವಾಬ್ದಾರಿ ಆಕೆಯ ಬೆನ್ನಿಗಿದೆ. 

ಪತಿ ಯಲಬುರ್ಗದಲ್ಲಿ ಸಾರಿಗೆ ಸಂಸ್ಥೆಯ ಬಸ್ ಚಾಲಕ. ಆದರೂ ಯಮನಮ್ಮ ನದಾಫ ಕಳೆದ 18 ವರ್ಷಗಳಿಂದ ಬನಶಂಕರಿ ಸನ್ನಿಧಿಗೆ ಬುತ್ತಿಯ ಬುಟ್ಟಿ ತರುತ್ತಿದ್ದಾರೆ. ಸಂಸಾರದ ಬಂಡಿ ಸಾಗಿಸಲು ತಮ್ಮದೂ ಪಾಲು ನೀಡುತ್ತಿದ್ದಾರೆ.

ಪಂಪಮ್ಮನ ಕುಟುಂಬಕ್ಕೆ ಇರುವುದು ಮೂರು ಎಕರೆ ಒಣಭೂಮಿ. ಮಗ ಪಿಯುಸಿ ಓದುತ್ತಿದ್ದಾನೆ. ಮಳೆ ಇಲ್ಲದೇ ಪೀಕು ಇಲ್ಲ. ರೊಟ್ಟಿಯ ವ್ಯಾಪಾರದ ಆದಾಯವೇ ಮನೆ ಖರ್ಚಿಗೆ ಮೂಲ. ಎರಡು ವರ್ಷಗಳಿಂದ ಬನಶಂಕರಿ ದೇವಸ್ಥಾನದಲ್ಲಿ ಯಾತ್ರಾರ್ಥಿಗಳಿಗೆ ಮಧ್ಯಾಹ್ನ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಅದರಿಂದ ಈ ಮಹಿಳೆಯರ ರೊಟ್ಟಿ ವ್ಯಾಪಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಆದರೆ ಹರಿದ್ರಾತೀರ್ಥ ಹೊಂಡ ಖಾಲಿಯಾಗಿರುವುದು ಚಿಂತೆಗೆ ಕಾರಣವಾಗಿದೆ. ಹೊಂಡದಲ್ಲಿ ನೀರಿಲ್ಲದ ಕಾರಣ ಪ್ರವಾಸಿಗರು ಸ್ನಾನಕ್ಕೆ ಬರುವುದಿಲ್ಲ.

ಮಹಾಕೂಟದಲ್ಲಿಯೇ ಮುಗಿಸಿ ದೇವರ ದರ್ಶನಕ್ಕೆ ಇಲ್ಲಿಗೆ ಬರುತ್ತಾರೆ. ಹೀಗಾಗಿ ಸಾಲುಮಂಟಪದತ್ತ ಬರುವವರ ಸಂಖ್ಯೆ ಮೊದಲಿಗಿಂತ ಈಗ ಕಡಿಮೆ ಎಂಬುದು ಪಂಪಮ್ಮನ ಅಳಲು. ಮಹಾಕೂಟದಲ್ಲಿ ಮೊದಲು ರೊಟ್ಟಿ ಮಾರಾಟಕ್ಕೆ ಅವಕಾಶವಿತ್ತು. ಆದರೆ ದೇವಸ್ಥಾನದ ಮುಂಭಾಗದ ಹೋಟೆಲ್‌ಗಳಲ್ಲಿ ವ್ಯಾಪಾರ ಕಮ್ಮಿಯಾಗಿದೆ ಎಂಬ ಕಾರಣಕ್ಕೆ ಅಲ್ಲಿ ರೊಟ್ಟಿ ಮಾರಾಟಕ್ಕೆ ನಿಷೇಧ ಹೇರಿದ್ದಾರೆ. ಹರಿದ್ರಾತೀರ್ಥಕ್ಕೆ ನೀರು ಬಂದಲ್ಲಿ ಪ್ರವಾಸಿಗರು ಬರುವುದು ಹೆಚ್ಚಳವಾಗುತ್ತದೆ ಎಂಬುದು ಆಕೆಯ ಲೆಕ್ಕಾಚಾರ.

ಪ್ರತಿವರ್ಷ ಜನವರಿಯಲ್ಲಿ ತಿಂಗಳು ಪರ್ಯಂತ ನಡೆಯುವ ಬನಶಂಕರಿ ಜಾತ್ರೆಯಲ್ಲಿ ಇವರ ಆದಾಯ ದುಪ್ಪಟ್ಟಾಗುತ್ತದೆ. ಆಗ ಬುತ್ತಿಯ ಬುಟ್ಟಿ ತರುವವರ ಸಂಖ್ಯೆಯೂ ಹೆಚ್ಚುತ್ತದೆ. ಜಾತ್ರೆ ವೇಳೆ ರೊಟ್ಟಿಯ ಜೊತೆ ಹೋಳಿಗೆ ಊಟ ಸಿಗುವುದು ಇಲ್ಲಿಯ ವಿಶೇಷ.

ಪಟ್ಟದಕಲ್ಲಿನಲ್ಲಿ ದೇವಾಲಯದ ಸಮುಚ್ಛಯದ ಹೊರಗೆ ನೀರಿನ ವ್ಯವಸ್ಥೆ ಇಲ್ಲ. ಪ್ರವಾಸಿಗರು ಕುಳಿತು ಊಟ ಮಾಡಲು ಸ್ಥಳಾವಕಾಶವಿಲ್ಲ. ಉತ್ತಮ ಹೋಟೆಲ್ ಇಲ್ಲದ ಕಾರಣ ಇಲ್ಲಿಗೆ ಬರುವವರಿಗೆ ಅಮ್ಮಂದಿರ ಆತಿಥ್ಯವೇ ಅಪ್ಯಾಯಮಾನ. ಬಹುತೇಕರು ವಾಹನದಲ್ಲಿಯೇ ಕುಳಿತು ಊಟ ಮಾಡುತ್ತಾರೆ. ಸರ್ಕಾರದವರು ಕುಡಿಯಲು ನೀರು, ಪ್ರವಾಸಿಗರು ಕುಳಿತುಕೊಳ್ಳಲು ಸ್ಥಳಾವಕಾಶ ಮಾಡಿದರೆ ನಮ್ಮ ವ್ಯಾಪಾರ ಇನ್ನಷ್ಟು ವೃದ್ಧಿಯಾಗುತ್ತದೆ ಎಂಬುದು ಅದೇ ಊರಿನ ಬಸಮ್ಮ ಕಾಲಗಗ್ಗರಿ ಅವರ ಅಭಿಮತ.

ಬಾದಾಮಿಯ ಅಗಸ್ತ್ಯತೀರ್ಥ, ಬನಶಂಕರಿ ದೇವಾಲಯದ ಕಲಶ, ಪಟ್ಟದಕಲ್ಲಿನ ದೇವಾಲಯ ಸಮುಚ್ಛಯದ ರೀತಿಯೇ ಸಾಲುಮಂಟಪದ ಬುತ್ತಿಯ ಬುಟ್ಟಿಗಳಿಗೂ ಮಳೆ, ಬಿಸಿಲು, ಚಳಿಯ ನಜರು ತಾಕುವುದಿಲ್ಲ. ಅಮ್ಮಂದಿರಿಗೆ ಕಾಯಿಲೆ–ಕಸಾಲೆಯಾದರೆ ಮಾತ್ರ ಮಗಳು ಇಲ್ಲವೇ ಸೊಸೆಯ ತಲೆಗೆ ಬುತ್ತಿಯ ಬುಟ್ಟಿ ಬದಲಾಗುತ್ತದೆ.

ದೋನ ಭಾಕರಿ, ಚಟ್ನಿ, ಉಸುಳ್, ದಹಿ...
ಆಗಷ್ಟೇ ದೇವರದರ್ಶನ ಪಡೆದು ಬಂದಿದ್ದ ಮಹಾರಾಷ್ಟ್ರದ ಮೀರಜ್‌ನ ಕುಟುಂಬದ ಸದಸ್ಯರನ್ನು ಸಾಲು ಮಂಟಪದಲ್ಲಿ ಕೂರಿಸಿ ಗಂಗಮ್ಮ ಮಾಗಿ, ಊಟ ಬಡಿಸಲು ಸಿದ್ಧತೆ ನಡೆಸಿದ್ದರು. ದೋನ ಭಾಕರಿ (ಎರಡು ರೊಟ್ಟಿ), ಚಟ್ನಿ, ಉಸುಳ್ (ಪಲ್ಯೆ), ದಹಿ (ಮೊಸರು), ಬಾತ್‌ (ಅನ್ನ) ಎಂದು ಅವರಿಗೆ ಮೆನು ಒಪ್ಪಿಸಿದ್ದನ್ನು ಕೇಳಿ ಕುತೂಹಲಗೊಂಡು ನಿಮಗೆ ಮರಾಠಿ ಬರುತ್ತದೆಯೇ ಎಂದು ಪ್ರಶ್ನಿಸಿದೆ.

 ‘ಇಲ್ರೀ ನಾವು ಕನ್ನಡದ ಮಂದಿ. ನಮ್ಮೂರಾಗ ಆ ಭಾಷಾ ಎಲ್ಲಿಂದ ಬರಬೇಕ್ರೀ. ದೇವಿ ದರ್ಶನಕ್ಕೆ ಬರುವ ಮಹಾರಾಷ್ಟ್ರದವರನ್ನು ಮಾತಾಡಿಸಿ ಕಲಿತಿರುವೆ. ಅವರ ಭಾಷೆಯಲ್ಲಿ ಮಾತನಾಡಿದರೆ ಖುಷಿಯಾಗಿ ಊಟ ಮಾಡಿ ಹೋಗುತ್ತಾರೆ’ ಎಂದು ಗಂಗಮ್ಮ ಹೇಳಿಕೊಂಡರು.

‘ವಿದೇಶಿಯರು ಆಗಾಗ ಇಲ್ಲಿ ಊಟ ಸವಿಯುತ್ತಾರೆ. ರೊಟ್ಟಿ ಮುರಿದುಹಾಕಿ ಅದನ್ನು ಮೊಸರಿನಲ್ಲಿ ಮುಳುಗಿಸಿ ಚಮಚದಿಂದ ಎತ್ತಿಕೊಂಡು ತಿನ್ನುವುದನ್ನು ನೋಡುವುದೇ ಸೋಜಿಗ’ ಎಂದು ಆಕೆ ನಕ್ಕರು. ಗಂಗಮ್ಮ ಕೂಡ 18 ವರ್ಷಗಳಿಂದ ಸಾಲುಮಂಟಪಕ್ಕೆ ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT