ಕಾನೂನು ಕೈಗೆತ್ತಿಕೊಳ್ಳುವುದು ಪರಿಹಾರವಲ್ಲ

ತಾರತಮ್ಯ ನಿವಾರಣೆಯ ನೀತಿಗಳು ಅನುಷ್ಠಾನದಲ್ಲಿ ಸೋಲುತ್ತಿರುವುದರಿಂದಲೇ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ

ಕಾನೂನು ಕೈಗೆತ್ತಿಕೊಳ್ಳುವುದು ಪರಿಹಾರವಲ್ಲ

ಅತ್ಯಾಚಾರಿಗಳ ಮೇಲಿನ ಆಕ್ರೋಶ ಅರ್ಥವಾಗುವಂತ ಹದ್ದು. ಆದರೆ ಕಾನೂನನ್ನೇ ಕೈಗೆತ್ತಿಕೊಳ್ಳುವಂತಾದರೆ? ಇತ್ತೀಚೆಗೆ  ಅತ್ಯಾಚಾರಕ್ಕೆ ಯತ್ನಿಸಿದ  ಸ್ವಯಂ ಘೋಷಿತ ದೇವ ಮಾನವನೊಬ್ಬನ ಮರ್ಮಾಂಗವನ್ನು ಕೇರಳದ 23 ವರ್ಷದ ಕಾನೂನು ವಿದ್ಯಾರ್ಥಿನಿ ಚಾಕುವಿನಿಂದ ತುಂಡರಿಸಿದ ಪ್ರಕರಣ ವರದಿಯಾಗಿದೆ. ನಿರಂತರವಾಗಿ ಎಂಟು ವರ್ಷಗಳಿಂದ  ಅತ್ಯಾಚಾರ ಎಸಗುತ್ತಿದ್ದ ಈತನ ವಿರುದ್ಧ ಆಕ್ರೋಶಗೊಂಡಿದ್ದ ಯುವತಿ ಕಡೆಗೆ ಈ ಕೃತ್ಯವೆಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಯುವತಿಯು ದಿಟ್ಟ ಕೆಲಸ ಮಾಡಿದ್ದಾಳೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಶ್ಲಾಘಿಸಿದ್ದಾರೆ. ಇದೇ ಸಂದರ್ಭದಲ್ಲೇ ಆಂಧ್ರಪ್ರದೇಶ  ಮಹಿಳಾ ಆಯೋಗದ ಅಧ್ಯಕ್ಷೆ  ನನ್ನಪನೇನಿ ರಾಜಕುಮಾರಿ ಹೇಳಿರುವ  ಮಾತುಗಳಿವು: ‘ಎಲ್ಲಾ ಪ್ರಯತ್ನಗಳ ನಂತರವೂ ಅತ್ಯಾಚಾರಿಗಳನ್ನು ನಿಯಂತ್ರಿಸಲಾಗುತ್ತಿಲ್ಲವೆ? ಅವರ ಚರ್ಮ ಸುಲಿದು ರಸ್ತೆಗಳಲ್ಲಿ ಮೆರವಣಿಗೆ ಮಾಡಿ. ಪೊರಕೆ ಹಾಗೂ ಚಪ್ಪಲಿಯಿಂದ ಬಡಿಯಿರಿ. ಕಾಲೇಜು ವಿದ್ಯಾರ್ಥಿನಿಯರಿಗೂ ಸ್ವಯಂರಕ್ಷಣೆಗೆ ಚಾಕು ನೀಡಬೇಕು. ಇದಕ್ಕಾಗಿ ಹೊಸ ಕಾನೂನು ಬೇಕು’.

ಇಂತಹದೊಂದು ಚರ್ಚೆ ಚಾಲ್ತಿಯಲ್ಲಿರುವಾಗಲೇ  ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ   ನಡುರಸ್ತೆಯಲ್ಲಿ 14 ಜನ ಪುಂಡರ ಗುಂಪೊಂದು ಇಬ್ಬರು ಯುವತಿಯರನ್ನು ಸುತ್ತುವರಿದು ಮೈಕೈ ಮುಟ್ಟಿ ಕಿರುಕುಳ ನೀಡಿರುವ ವಿಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರಗೊಂಡು ಜನರ ಆಕ್ರೋಶ ಹೆಚ್ಚಿಸಿದೆ. ಬೀದಿ ಪುಂಡರ ವಿರುದ್ಧ ಕ್ರಮ ಕೈಗೊಳ್ಳಲು ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ‘ರೋಮಿಯೊ ನಿಗ್ರಹ ದಳ’ ರಚಿಸಿತ್ತು. ಆದರೆ ಈ ದಳ ಅನೈತಿಕ ಪೊಲೀಸ್‌ಗಿರಿ ಶುರುಮಾಡಿ ಯುವಕ, ಯುವತಿಯರಿಗೆ ಕಿರುಕುಳ ನೀಡಲು ಶುರುಮಾಡಿದಾಗ ಇದನ್ನು ‘ನಾರಿ ಸುರಕ್ಷಾ ಬಲ’ ಎಂದು ಮರುನಾಮಕರಣ ಮಾಡಿ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿತ್ತು. ಹೀಗಿದ್ದೂ ಹೆಣ್ಣುಮಕ್ಕಳಿಗೆ ಬೀದಿ ಕಿರುಕುಳಗಳು ನಿಂತಿಲ್ಲ.

ಹೀಗೆ ದಿನನಿತ್ಯ ಒಂದಲ್ಲ ಒಂದು ರೀತಿಯಲ್ಲಿ ವರದಿಯಾಗುತ್ತಲೇ ಇರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹಾಗೂ ಈ ಪ್ರಕರಣಗಳಲ್ಲಿ ವ್ಯಕ್ತವಾಗುತ್ತಿರುವ ಹಿಂಸಾತ್ಮಕತೆ ತೀವ್ರತರವಾಗಿ ಕಾಡುವಂತಹದ್ದು. ಪ್ರತೀಕಾರ ಬೇಕೆಂದು ಮನಸ್ಸು ಉದ್ವಿಗ್ನಗೊಳ್ಳುವುದೂ ಅರ್ಥವಾಗುವಂತಹದ್ದು. ಆದರೆ ಕಾನೂನನ್ನೇ ಸ್ವತಃ ಕೈಗೆತ್ತಿಕೊಳ್ಳುವ ಮಟ್ಟಿಗೆ  ಸಾರ್ವಜನಿಕ ಆಕ್ರೋಶ ಉಕ್ಕುತ್ತಾ ಹೋದರೆ ಅದಕ್ಕೆ ಮುಂದೆ ನಿಯಂತ್ರಣ ಎಲ್ಲಿ?

ನಮಗೆ ನೆನಪಿರಬೇಕು.  ಸಂತ್ರಸ್ತೆ ತಟ್ಟುವ ಮೊದಲ ಬಾಗಿಲು ಪೊಲೀಸ್ ಠಾಣೆ.  ಪ್ರಕರಣವನ್ನು ಸಹಾನುಭೂತಿಪರವಾಗಿ ದಕ್ಷವಾಗಿ ನ್ಯಾಯಾಂಗ ವ್ಯವಸ್ಥೆ ಮುಂದೆ ಮಂಡಿಸುವ ಕಾರ್ಯಾರಂಭ ಆಗುವುದು ಅಲ್ಲೇ. ಆದರೆ ಸಾಮಾಜಿಕ ಭಯದಿಂದ ಪ್ರಕರಣ ದಾಖಲಿಸಲೇ ಅನೇಕ ಮಹಿಳೆಯರು ಹಿಂಜರಿಯುತ್ತಾರೆ.  ಅಭದ್ರತೆಯಿಂದ ನರಳುತ್ತಾರೆ. ಇವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದಲ್ಲಿ ಅರ್ಧ ಯುದ್ಧ ಗೆದ್ದಂತೆ. ಯಾವುದೇ ವಿಳಂಬವಿಲ್ಲದೆ ಕಾನೂನು ಕ್ರಮ ಕೈಗೊಳ್ಳುವಂತಿರಬೇಕು. ಎಲ್ಲಾ ಮಹಿಳೆಯರೂ ಚಾಕು ಇಟ್ಟುಕೊಂಡು ಪ್ರತಿರೋಧಿಸಲಾಗುವುದಿಲ್ಲ.

2013ರಲ್ಲಿ ಅತ್ಯಾಚಾರ ಕಾನೂನು ಬಿಗಿಯಾದ ನಂತರವೂ ರಾಷ್ಟ್ರದಲ್ಲಿ ಪ್ರತಿ 15 ನಿಮಿಷಗಳಿಗೆ ಒಬ್ಬಳು ಮಹಿಳೆ ಅತ್ಯಾಚಾರಕ್ಕೆ ಒಳಗಾಗುತ್ತಾಳೆ ಎಂಬುದನ್ನು ಅಪರಾಧ ದಾಖಲೆ ಅಂಕಿ ಅಂಶಗಳು ಹೇಳುತ್ತಿವೆ.  ಎಂದರೆ ಅತ್ಯಾಚಾರ ಮಾಮೂಲು ಸಂಗತಿಯಾಗಿಬಿಟ್ಟಿದೆ. 

ಬೆಂಗಳೂರು, ಭಾರತದಲ್ಲಿ ದೆಹಲಿ,  ಮುಂಬೈ  ನಂತರ ಮೂರನೇ ಅಸುರಕ್ಷಿತ ನಗರವೆಂಬ ಹೆಸರು ಅಂಟಿಸಿಕೊಂಡಿದೆ. ಅದೂ ಚಿಕ್ಕಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ. 2014ರ ಜನವರಿಯಿಂದ ಡಿಸೆಂಬರ್‌ ತನಕ ಉತ್ತರ ಬೆಂಗಳೂರು ವ್ಯಾಪ್ತಿಯಲ್ಲಿ ಮಕ್ಕಳ ಮೇಲೆ 78 ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿರುವುದು ಆಘಾತಕಾರಿ. ಅದರಲ್ಲೂ 14 ತಿಂಗಳ ಹಸುಗೂಸಿನ ಮೇಲೆ ಸೇನಾ ನೌಕರರೊಬ್ಬರಿಂದ ಅತ್ಯಾಚಾರ ನಡೆದಿದೆ. ಈತ ಸಂತ್ರಸ್ತ ಮಗುವಿನ ತಂದೆಯ ಸ್ನೇಹಿತ. ಸಮಾಜದ ಮೇಲಿನ ವಿಶ್ವಾಸವನ್ನೇ ಕಸಿಯುವಂತಹ ಪ್ರಕರಣಗಳು ಇವು.

2006ರಿಂದ 2016ರವರೆಗಿನ ದಶಕದಲ್ಲಿ ಬೆಂಗಳೂರಿನಲ್ಲಿ ವರದಿಯಾದ ಲೈಂಗಿಕ ದುರ್ವರ್ತನೆ  ಪ್ರಕರಣಗಳು ಐದು ಪಟ್ಟು ಹೆಚ್ಚಾಗಿವೆ.  ಭಾರತೀಯ ದಂಡ ಸಂಹಿತೆಯ (ಐಪಿಸಿ) 354ನೇ ಸೆಕ್ಷನ್ ಅಡಿ ದಾಖಲಾದ ದೂರುಗಳು 2006ರಲ್ಲಿ 150 ಇದ್ದದ್ದು 2016ರಲ್ಲಿ 776ಕ್ಕೆ ಏರಿವೆ. ಆದರೆ ಕೇವಲ 16 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಇವು,  ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ ತಡೆ ಕುರಿತಂತೆ ರಾಜ್ಯ ಸರ್ಕಾರ ರಚಿಸಿರುವ ವಿ.ಎಸ್.ಉಗ್ರಪ್ಪ ನೇತೃತ್ವದ  ತಜ್ಞರ ಸಮಿತಿಗೆ ಬೆಂಗಳೂರು ಪೊಲೀಸರು ನೀಡಿರುವ ಅಂಕಿಅಂಶಗಳು. 

ಇಂತಹ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ತಡೆಗೆ ಒತ್ತಾಯಿಸಿ  ‘ಲೈಂಗಿಕ ಹಿಂಸೆ ವಿರೋಧಿ ಜನ ಚಳವಳಿ’ ಸದಸ್ಯರು ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದ ಹಲವು ಮಹಿಳಾ ಸಂಘಟನೆಗಳು ಒಗ್ಗೂಡಿ ಈ  ಜನ ಚಳವಳಿ ಹುಟ್ಟುಹಾಕಲಾಗಿದೆ. ಜೊತೆಗೆ, 16 ಜಿಲ್ಲೆಗಳಲ್ಲಿ ಸಂಚರಿಸಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನ ನಡೆಸಿ ಪ್ರಾಥಮಿಕ ವರದಿ ಸಿದ್ಧಪಡಿಸಲಾಗಿದೆ. ಈ ವರದಿ ಆಧರಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು  ಇದನ್ನು ವಿಚಾರಣೆಗೆ ಕೋರ್ಟ್  ಅಂಗೀಕರಿಸಿದೆ. ಲೈಂಗಿಕ ದೌರ್ಜನ್ಯ  ಪ್ರಕರಣಗಳನ್ನು ತಡೆಯಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು  ಅರ್ಜಿಯಲ್ಲಿ ಕೋರಲಾಗಿದೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳು ಎಷ್ಟೇ ಪ್ರಭಾವಿಯಾಗಿದ್ದರೂ ಅವರನ್ನು ಶಿಕ್ಷಿಸಬೇಕು. ನೊಂದ ಮಹಿಳೆಯರ ರಕ್ಷಣೆ ಹಾಗೂ ಪರಿಹಾರ ನೀಡುವ ಸಂಬಂಧ ಇರುವ ಗೊಂದಲಗಳನ್ನು ನಿವಾರಿಸಿ ಏಕಗವಾಕ್ಷಿ ಪದ್ಧತಿ ಜಾರಿಗೆ ತರಬೇಕು  ಎಂಬುದು ಮುಖ್ಯ ಬೇಡಿಕೆ ಎನ್ನುತ್ತಾರೆ ಲೈಂಗಿಕ ಹಿಂಸೆ ವಿರೋಧಿ ಜನ ಚಳವಳಿ ಕಾರ್ಯಕರ್ತೆ ಮಲ್ಲಿಗೆ.

ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ಪೊಲೀಸ್ ಇಲಾಖೆಗಳಲ್ಲಿ ಇರಬೇಕಾದ ಸಂವೇದನಾಶೀಲತೆ, ಜಾಗೃತಿ ಹಾಗೂ ಮಾಹಿತಿಗಳ  ಕೊರತೆಯನ್ನು  ‘ಲೈಂಗಿಕ ಹಿಂಸೆ ವಿರೋಧಿ ಜನ ಚಳವಳಿ’ಯ ಅಧ್ಯಯನ ವರದಿಯಲ್ಲಿ ಕಂಡುಕೊಳ್ಳಲಾಗಿದೆ. ಘನತೆಯಿಂದ ಬದುಕಲು ಮಹಿಳೆಯರನ್ನು ಸಶಕ್ತವಾಗಿಸುವ ಹಾಗೂ ಸುರಕ್ಷಿತ ವಾತಾವರಣದಲ್ಲಿ ಬೆಳೆಯಲು ಮಕ್ಕಳಿಗೆ ಅವಕಾಶಗಳನ್ನು ಒದಗಿಸಿಕೊಡಬೇಕಾದ ಹೊಣೆಗಾರಿಕೆ  ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಇಲಾಖೆಗೆ ಇದೆ. ಅತ್ಯಾಚಾರ ಸಂತ್ರಸ್ತರಲ್ಲಿ ಹೆಚ್ಚಿನವರು, ಸಾಮಾಜಿಕ ಹಾಗೂ  ಆರ್ಥಿಕವಾಗಿ ಕೆಳವರ್ಗಗಳಿಗೆ ಸೇರಿದ ಮಹಿಳೆಯರು ಮತ್ತು ಮಕ್ಕಳು ಎಂಬುದೂ ಅಧ್ಯಯನದಲ್ಲಿ ವ್ಯಕ್ತವಾಗಿರುವ ಅಂಶ. 

ಸಮಾನತೆಯ ಹಕ್ಕು ನೀಡುವ ಸಂವಿಧಾನದ 14ನೇ ವಿಧಿ ಹಾಗೂ ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ನೀಡುವ ಸಂವಿಧಾನದ 21ನೇ ವಿಧಿ, ಅತ್ಯಾಚಾರ ಅಪರಾಧದಲ್ಲಿ  ಉಲ್ಲಂಘನೆಯಾಗುತ್ತದೆ. ಹೀಗಾಗಿ ಸುರಕ್ಷಿತತೆ ಒದಗಿಸಲು ವಿಫಲವಾದ ಪ್ರಭುತ್ವವು ಪರಿಹಾರ ನೀಡಬೇಕಾದುದು ಅಗತ್ಯ. ಪರಿಹಾರಾತ್ಮಕ ನ್ಯಾಯದ ತತ್ವವನ್ನು  ಸುಪ್ರೀಂ ಕೋರ್ಟ್ ಅನೇಕ ಸಂದರ್ಭಗಳಲ್ಲಿ  ಎತ್ತಿಹಿಡಿದಿದೆ. ಕಾನೂನು, ವೈದ್ಯಕೀಯ ಹಾಗೂ ಆಪ್ತಸಮಾಲೋಚನೆ ಸೇವೆಗಳನ್ನು ಪಡೆದುಕೊಳ್ಳಲು ಸಂತ್ರಸ್ತೆಯರಿಗೆ ಇದರಿಂದ ಸಹಾಯವಾಗುತ್ತದೆ.  ಆದರೆ ನಗದು ರೂಪದಲ್ಲಿ ನೀಡಲಾಗುವ ವಿವಿಧ ಪರಿಹಾರ ಯೋಜನೆಗಳ ಬಗ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳಲ್ಲಿ ಸರಿಯಾದ ಮಾಹಿತಿಯೇ  ಇಲ್ಲ ಎಂಬುದು ಶೋಚನೀಯ. ಪರಿಹಾರ ಮೊತ್ತದಲ್ಲೂ ಏಕರೂಪತೆ ಇಲ್ಲ. ಅನೇಕ ಪ್ರಕರಣಗಳಲ್ಲಿ ₹2000ದಿಂದ ₹75,000ದವರೆಗೆ ಪರಿಹಾರ ಮೊತ್ತ ನೀಡಲಾಗಿದೆ ಎಂಬುದನ್ನು ಅಧ್ಯಯನ ವರದಿ ದಾಖಲಿಸಿದೆ. ಆದರೆ  ಈ ಬಗ್ಗೆ ಏನೇನೂ ಮಾಹಿತಿ ಇಲ್ಲದೆ  ಹೆಚ್ಚಿನ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಜೊತೆಗೆ  ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರವೇ ಪರಿಹಾರ ಮಂಜೂರಾತಿ ಪ್ರಾಧಿಕಾರವಲ್ಲದೆ ಮೇಲ್ಮನವಿ ಪ್ರಾಧಿಕಾರವೂ ಆಗಿದೆ. ಇದು ಸಹಜ ನ್ಯಾಯ ಪ್ರಕ್ರಿಯೆಗೆ ತದ್ವಿರುದ್ಧವಾದದ್ದು ಎಂಬುದನ್ನು ಗಮನಿಸುವುದು ಅಗತ್ಯ.

ಇನ್ನು ಪೊಲೀಸ್ ಠಾಣೆಗಳಲ್ಲಂತೂ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಕಡೆಗಣಿಸುವುದೇ ಹೆಚ್ಚು. ಇಂತಹ ಪ್ರಕರಣಗಳನ್ನು ನಿರ್ವಹಿಸಲು ಅಗತ್ಯವಾದ ತರಬೇತಿ ಹಾಗೂ ಸಂವೇದನಾಶೀಲತೆಯ ಕೊರತೆಯಿಂದ  ಅನೇಕ ಸಂದರ್ಭಗಳಲ್ಲಿ  ಸಂತ್ರಸ್ತೆಗಿಂತ ಆರೋಪಿ ಪರ ಸಹಾನುಭೂತಿ ವ್ಯಕ್ತವಾಗುತ್ತದೆ ಎಂಬುದು ವಿಪರ್ಯಾಸ. ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ತುರ್ತು ಸಾಂತ್ವನ, ಚಿಕಿತ್ಸೆ ಹಾಗೂ ಪೊಲೀಸ್ ನೆರವು ಒದಗಿಸುವುದಕ್ಕಾಗಿ  ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆರಂಭಿಸಲಾಗಿರುವ ಮಹಿಳಾ ಮತ್ತು ಮಕ್ಕಳ ವಿಶೇಷ ಚಿಕಿತ್ಸಾ ಘಟಕಗಳು  ಸೌಲಭ್ಯ ಹಾಗೂ ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ. ಜೊತೆಗೆ ಈ ಘಟಕಗಳಿಗೆ ನೇಮಕವಾಗುವ ಆಪ್ತಸಮಾಲೋಚಕ, ವಕೀಲ ಅಥವಾ ಪೊಲೀಸರಿಗೆ ಮಹಿಳಾ ಹಕ್ಕುಗಳ ಬಗ್ಗೆ ಜಾಗೃತಿ ಇರಬೇಕಾದುದು ಅವಶ್ಯ. ಮಹಿಳಾ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳು, ಅಂತರರಾಷ್ಟ್ರೀಯ ನಿರ್ಣಯಗಳು. ನ್ಯಾಯಾಂಗ ವರದಿಗಳು ಅಥವಾ  ಇತ್ತೀಚಿನ ನ್ಯಾಯಮೂರ್ತಿ ವರ್ಮಾ ಸಮಿತಿ ಶಿಫಾರಸುಗಳು– ಹೀಗೆ  ಮಹಿಳಾ ಹಕ್ಕುಗಳ ಬಗ್ಗೆ ಆಗಿರುವ ಬೆಳವಣಿಗೆಗಳ ಬಗ್ಗೆ ತಿಳಿವಳಿಕೆ ಇದ್ದಾಗ ಮಾತ್ರ ಇಂತಹ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದು ಸಾಧ್ಯ.

ಮಹಿಳೆ ವಿರುದ್ಧದ ಎಲ್ಲಾ ತಾರತಮ್ಯ ನಿವಾರಣೆ ಮಾಡುವ 1979ರ ಅಂತರರಾಷ್ಟ್ರೀಯ ನಿರ್ಣಯಕ್ಕೆ  (ಸೀಡಾ) ಭಾರತ ಸಹಿ ಹಾಕಿದೆ. ಹೆಣ್ಣೆಂಬ ಕಾರಣಕ್ಕಾಗಿಯೇ ನೀಡುವ ಹಿಂಸೆ, ಪುರುಷರಿಗೆ ಸರಿಸಮವಾಗಿ ಸಮಾನತೆ ಹಾಗೂ ಹಕ್ಕುಗಳನ್ನು ಅನುಭವಿಸುವುದಕ್ಕೆ ಮಹಿಳೆಗೆ ತಡೆ ಒಡ್ಡುತ್ತದೆ. ಆದರೆ ಇಂತಹ ತಾರತಮ್ಯ ನಿವಾರಣೆ ಮಾಡುವ ಸರ್ಕಾರದ ನೀತಿಗಳು, ಯೋಜನೆಗಳು
ಅನುಷ್ಠಾನದ ಹಂತದಲ್ಲಿ ಸೋಲುತ್ತಿರುವುದರಿಂದಲೇ ಲೈಂಗಿಕ ದೌರ್ಜನ್ಯ ಪ್ರಕರಣಗಳು ರಾಷ್ಟ್ರದಲ್ಲಿ ಹೆಚ್ಚಾಗುತ್ತಲೇ ಇವೆ. ಜೊತೆಗೆ, ಹಲವು ವರ್ಷಗಳವರೆಗೆ ಅತ್ಯಾಚಾರ ಸಂತ್ರಸ್ತರು ಇಂದು ನ್ಯಾಯಕ್ಕಾಗಿ ಕಾಯಬೇಕಾಗಿರುವುದನ್ನು ನೋಡುತ್ತಿದ್ದೇವೆ. ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಕಾರ್ಯದಕ್ಷತೆ ಹೆಚ್ಚಾದಲ್ಲಿ  ಕಾನೂನನ್ನೇ ಕೈಗೆತ್ತಿಕೊಳ್ಳುವಂತಹ ಹತಾಶ ಸ್ಥಿತಿ ತಪ್ಪಬಹುದು.

ಸೆಕ್ಷನ್ 354ರ (ಮಹಿಳೆಯ ಮಾನಕ್ಕೆ ಧಕ್ಕೆ ಉಂಟುಮಾಡುವ ಅತಿಕ್ರಮಣ) ಅಡಿ 1988ರಲ್ಲಿ  ಭಾರತದಲ್ಲಿ ಮೊಟ್ಟಮೊದಲಿಗೆ ಪ್ರಕರಣ ದಾಖಲಿಸಿದ ಐಎಎಸ್ ಅಧಿಕಾರಿ ರೂಪನ್ ದಿಯೋಲ್ ಬಜಾಜ್ ಅವರೂ 17 ವರ್ಷಗಳಷ್ಟು ದೀರ್ಘ ಕಾಲ ಕಾನೂನು ಹೋರಾಟ ಮಾಡಬೇಕಾಯಿತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅವರು ಹೋರಾಡಿದ್ದು  ಕಳೆದ ವಾರ ನಿಧನರಾದ ಸೂಪರ್ ಕಾಪ್ ಕೆ.ಪಿ.ಎಸ್.ಗಿಲ್ ವಿರುದ್ಧ. ಔತಣಕೂಟದಲ್ಲಿ ಕುಡಿದು ಮದ್ಯದ ಅಮಲಿನಲ್ಲಿದ್ದ ಗಿಲ್ ಅವರು  ರೂಪನ್ ಜೊತೆ ಅಸಭ್ಯವಾಗಿ ವರ್ತಿಸಿ ಪೃಷ್ಠ ಚಿವುಟಿದ ಆರೋಪಕ್ಕೆ ಗುರಿಯಾಗಿದ್ದರು. ಪಂಜಾಬ್‌ನಲ್ಲಿ ಭಯೋತ್ಪಾದನೆ ತಾರಕ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಪಂಜಾಬ್‌ ಪೊಲೀಸ್ ಮಹಾನಿರ್ದೇಶಕರಾಗಿದ್ದ ಗಿಲ್ ವಿರುದ್ಧ ಕಾನೂನು ಹೋರಾಟ ನಡೆಸುವುದು ಸುಲಭವೇನೂ ಆಗಿರಲಿಲ್ಲ. ಹೀಗಿದ್ದೂ ಛಲಬಿಡದೆ ಕಾನೂನು ಹೋರಾಟ ನಡೆಸಿದ ನಂತರ  ಗಿಲ್ ವಿರುದ್ಧ ಶಿಕ್ಷೆಯನ್ನು ಎತ್ತಿಹಿಡಿದ  ಸುಪ್ರೀಂ ಕೋರ್ಟ್ ದಂಡ ವಿಧಿಸಿದ್ದು ಚರಿತ್ರಾರ್ಹ.  ‘ನಾನು ಗಿಲ್ ವಿರುದ್ಧ ಅಲ್ಲ ಹೋರಾಡಿದ್ದು. ಸಮಾಜದಲ್ಲಿ ಹೆಣ್ಣಿನ ಕುರಿತಾಗಿ ಇರುವ ಮನಸ್ಥಿತಿಯ ವಿರುದ್ಧ ’ ಎನ್ನುತ್ತಾರೆ  ರೂಪನ್ ದಿಯೋಲ್ ಬಜಾಜ್. ಇಂತಹ ಕಾನೂನು ಹೋರಾಟಗಳ ಮಾದರಿಗಳಿದ್ದರೂ ವ್ಯವಸ್ಥೆಯಲ್ಲಿ ಇನ್ನೂ ಮನಸ್ಥಿತಿಗಳು ಬದಲಾಗುತ್ತಿಲ್ಲ ಎಂಬುದೇ ವಿಷಾದನೀಯ. ಹೀಗಾಗಿಯೇ ಉತ್ತರಪ್ರದೇಶದ ನಗರಾಭಿವೃದ್ಧಿ ಸಚಿವ ಅಜಂ ಖಾನ್, ‘ಮಹಿಳೆ ಮೇಲಿನ ಅಪರಾಧಗಳು ತಪ್ಪಬೇಕಾದರೆ ಆಕೆ ಮನೆಯೊಳಗಿರಬೇಕು’ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ. ಲಿಂಗತಾರತಮ್ಯ ಧ್ವನಿಸುವ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುವವರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸುವಂತಾಗಬೇಕಲ್ಲವೆ?

Comments
ಈ ವಿಭಾಗದಿಂದ ಇನ್ನಷ್ಟು
ಡಬ್ಲ್ಯುಟಿಒ: ಲಿಂಗತ್ವ ವಿಚಾರ ವಿವಾದ

ಕಡೆಗೋಲು
ಡಬ್ಲ್ಯುಟಿಒ: ಲಿಂಗತ್ವ ವಿಚಾರ ವಿವಾದ

21 Mar, 2018
ಯಥಾಸ್ಥಿತಿ ಬದಲಿಸಲು ಮುನ್ನುಡಿಯಾಗಲಿ

ಕಡೆಗೋಲು
ಯಥಾಸ್ಥಿತಿ ಬದಲಿಸಲು ಮುನ್ನುಡಿಯಾಗಲಿ

7 Mar, 2018
ಲಿಂಗತ್ವ ಸಂವೇದನಾಶೀಲ ನೀತಿಯ ಜೊತೆಗೆ ಹಣಹೂಡಿಕೆಯ ಅಗತ್ಯ

ಕಡೆಗೋಲು
ಲಿಂಗತ್ವ ಸಂವೇದನಾಶೀಲ ನೀತಿಯ ಜೊತೆಗೆ ಹಣಹೂಡಿಕೆಯ ಅಗತ್ಯ

21 Feb, 2018
ಗುಲಾಬಿ ಬಣ್ಣದ ಸಾಂಕೇತಿಕತೆ ಆಚೆಗೆ ದಕ್ಕಿದ್ದು ಏನು?

ಕಡೆಗೋಲು
ಗುಲಾಬಿ ಬಣ್ಣದ ಸಾಂಕೇತಿಕತೆ ಆಚೆಗೆ ದಕ್ಕಿದ್ದು ಏನು?

7 Feb, 2018
‘ದಿ ಪೋಸ್ಟ್’ ನೀಡುವ ಚೈತನ್ಯಶೀಲ ಸಂದೇಶ

ಕಡೆಗೋಲು
‘ದಿ ಪೋಸ್ಟ್’ ನೀಡುವ ಚೈತನ್ಯಶೀಲ ಸಂದೇಶ

24 Jan, 2018