ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತುರದ ನಿರ್ಣಯ ಮಾಡದಿರಿ...

Last Updated 30 ಮೇ 2017, 19:30 IST
ಅಕ್ಷರ ಗಾತ್ರ
ಇಪ್ಪತ್ತು ವರ್ಷದ ಯುವಕನೊಬ್ಬ ತನ್ನ ತಂದೆಯೊಡನೆ ರೈಲಿನಲ್ಲಿ ಪಯಣಿಸುತ್ತಿದ್ದ. ಕ್ಷಣಕ್ಕೊಮ್ಮೆ ಆತ ಹೊರಗೆ ಕಾಣುವ ದೃಶ್ಯಗಳ ಬಗ್ಗೆ ತನ್ನ ತಂದೆಗೆ ತೋರಿಸುತ್ತಾ ಉತ್ಸಾಹದಿಂದ ಕೂಗಿ ಹೇಳುತ್ತಿದ್ದ: ‘ಅಪ್ಪಾ, ಮರಗಳು ಹಿಂದೆ ಹೋಗುತ್ತಿವೆ!‘ ‘ಅಪ್ಪಾ, ಮೋಡಗಳು ನಮ್ಮೊಂದಿಗೇ ಬರುತ್ತಿವೆ!!’ ಅವನ ತಂದೆ ಮಂದಸ್ಮಿತನಾಗಿ ಮಗನ ಮಾತುಗಳನ್ನು ಕೇಳುತ್ತಿದ್ದರು.
 
ಇದನ್ನೆಲ್ಲಾ ಗಮನಿಸುತ್ತಿದ್ದ ದಂಪತಿಗಳಿಬ್ಬರು ಮರುಕದಿಂದ ಆ ಹುಡುಗನ ತಂದೆಗೆ, ‘ನಿಮ್ಮ ಮಗನನ್ನು ಒಳ್ಳೆಯ ವೈದ್ಯರಲ್ಲಿ ತೋರಿಸಿ’ ಎಂದು ಸಲಹೆಯಿತ್ತರು. ಆ ಹುಡುಗನ ತಂದೆ ಮುಗುಳು ನಗುತ್ತಾ, ‘ಈಗ ತಾನೆ ವೈದ್ಯರಲ್ಲಿ ತೋರಿಸಿ ಬರುತ್ತಿದ್ದೇನೆ. ನನ್ನ ಮಗನಿಗೆ ಈಗಷ್ಟೇ ದೃಷ್ಟಿ ಬಂದಿದೆ. ಆತ ಹುಟ್ಟು ಕುರುಡನಾಗಿದ್ದ’ ಎಂದರು.
 
ಹೀಗೆ ಕೆಲವೊಮ್ಮೆ ನಾವು ವಿಷಯವನ್ನು ಅರಿಯದೆ ಆತುರದ ನಿರ್ಧಾರಕ್ಕೆ ಬಂದು ಬಿಡುತ್ತೇವೆ. ಯೋಚನೆಗೆ ಆಸ್ಪದವನ್ನೇ ಕೊಡುವುದಿಲ್ಲ. ನಾವು ನೋಡುವ ದೃಶ್ಯಗಳು ನಮ್ಮ ದೃಷ್ಟಿಕೋನದ ಮೇಲೆ ಆಧಾರವಾಗಿರುತ್ತದೆ. ಹಾಗೆಯೇ ನಾವು ಕೇಳುವ ಪ್ರತಿಯೊಂದು ವಿಷಯವೂ ಮತ್ತೊಬ್ಬರ ಅಭಿಪ್ರಾಯವಾಗಿರುತ್ತದೆ. ಅದರಲ್ಲಿ ಪೂರ್ತಿಯಾಗಿ ನಿಜಾಂಶ ಇರುತ್ತದೆ ಎಂದು ಹೇಳಲಾಗುವುದಿಲ್ಲ.
 
ಬಹಳಷ್ಟು ಸಂದರ್ಭಗಳಲ್ಲಿ ನಾವು ನಿಜವನ್ನು ತಿಳಿಯದೆ, ವ್ಯಕ್ತಿಯ ಬಗ್ಗೆಯೋ ಅಥವಾ ಸಂದರ್ಭದ ಬಗ್ಗೆಯೋ ಯೋಚಿಸದೆ ನಮ್ಮದೇ ಆದ ನಿರ್ಣಯಕ್ಕೆ ಬಂದುಬಿಡುತ್ತೇವೆ. ಸತ್ಯಾಸತ್ಯತೆ ತಿಳಿದ ನಂತರ ಪಶ್ಚಾತ್ತಾಪಪಡುವ ಸರದಿ ನಮ್ಮದಾಗಿರುತ್ತದೆ.  ಯಾವ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ ಎಂದು ಯಾರೊಬ್ಬರ ನಡವಳಿಕೆಯ ಬಗ್ಗೆಯೂ ತೀರ್ಮಾನಕ್ಕೆ ಬರುವುದು ಸರಿಯಲ್ಲ.
 
ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೂ ಮುನ್ನ ನಿಜಾಂಶವನ್ನು ಅರಿಯಬೇಕು. ಒಬ್ಬ ವ್ಯಕ್ತಿ ಅಥವಾ ಒಂದು ಸಂದರ್ಭವನ್ನು ಪೂರ್ಣವಾಗಿ ಅರಿತ ಮೇಲೆಷ್ಟೇ ನಿರ್ಣಯಕ್ಕೆ ಬರಬೇಕು. ಇಲ್ಲಿ ತಾಳ್ಮೆ–ಸಮಾಧಾನಗಳು  ಮುಖ್ಯ.  ಪರಿಸ್ಥಿತಿಯ ಬಗ್ಗೆ ಪೂರ್ಣವಾಗಿ ತಿಳಿಯದೆ ನಾವು ಮಾಡುವ ನಿರ್ಧಾರ ಅನಾಹುತಗಳಿಗೆ ಕಾರಣವಾಗುತ್ತದೆ. ಆತುರದ ನಿರ್ಧಾರದಿಂದ ಬಹಳಷ್ಟು ಸಂಬಂಧಗಳು ಮುರಿದು ಬೀಳುತ್ತವೆ.
 
ಜನರು ನಾವು ಮಾಡುವ ಒಳ್ಳೆಯ ಕೆಲಸದ ಬಗ್ಗೆ ಸಾವಿರ ರೀತಿಯಲ್ಲಿ ಪ್ರಶ್ನಿಸುತ್ತಾರೆ. ಅದೇ ಜನರು ನಮ್ಮ ಬಗ್ಗೆ ಯಾರಿಂದಲೋ ಕೇಳಿದ  ಕೆಟ್ಟ ಸುದ್ದಿಯನ್ನು ವಿಚಾರಿಸಿದೆಯೇ, ನೋಡದೆಯೇ ನಂಬುತ್ತಾರೆ. ಒಳ್ಳೆಯದರ ಬಗ್ಗೆ ಪ್ರಶ್ನೆಗಳನ್ನು ಕೇಳುವ ಜನರು ಕೆಟ್ಟ ವಿಷಯದ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿ ವಿಷಯವನ್ನು ತಿಳಿದರೆ, ಆಗುವ ಅನಾಹುತಗಳು ಆಗ ತಪ್ಪುತ್ತವೆ.
 
ಒಬ್ಬ ವ್ಯಕ್ತಿಯ ಬಗ್ಗೆ ವೈಯಕ್ತಿಕವಾಗಿ ತಿಳಿಯುವುದಕ್ಕೂ ಹಾಗೂ ಅವರ ಬಗ್ಗೆ ಇನ್ನೊಬ್ಬರ ಬಳಿ ಕೇಳಿ ತಿಳಿಯುವುದಕ್ಕೂ ಬಹಳ ವ್ಯತ್ಯಾಸವಿದೆ. ಬೇರೊಬ್ಬ ವ್ಯಕ್ತಿಯ ಬಗ್ಗೆಯೇ ಅಲ್ಲದೆ ನಮ್ಮ ಜೀವನದಲ್ಲಿ ನಡೆಯುವ ಬಹಳಷ್ಟು ವಿಷಯಗಳ ಬಗ್ಗೆಯೂ ನಾವು ಆತುರದ ತೀರ್ಮಾನಕ್ಕೆ ಬರುತ್ತೇವೆ. ಬದುಕೆನ್ನುವುದು ಏರಿಳಿತಗಳಿಂದ ಕೂಡಿರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರಬೇಕಾದ ಸಂಗತಿ.
 
ಸುಖ ಬಂದಾಗ, ಯಾರನ್ನೂ, ಯಾವುದನ್ನೂ ನಾವು ಸ್ಮರಿಸುವುದಿಲ್ಲ. ಅದೇ ಕಷ್ಟ ಬಂದಾಗ, ದೇವರಿಂದ ಹಿಡಿದು ಸಿಕ್ಕ ಸಿಕ್ಕವರನ್ನೆಲ್ಲಾ ದೂಷಿಸುತ್ತೇವೆ. ಆ ಕಷ್ಟದ ಹಿಂದೆಯೂ ಒಂದು ಕಾರಣವಿರುತ್ತದೆ. ಪರಿಸ್ಥಿತಿ ಯಾವುದಾದರೂ ಅದು ಶಾಶ್ವತವಲ್ಲ. ಸುಖವಾಗಲೀ, ದುಃಖವಾಗಲೀ – ಕಾಲ ಎಲ್ಲವನ್ನೂ ಮರೆಸುತ್ತದೆ. ಆದರೆ ಆತುರದಲ್ಲಿ ನಾವು ತೆಗೆದುಕೊಳ್ಳುವ ನಿರ್ಣಯ ನಮಗೂ ನಮ್ಮವರಿಗೂ ನೋವನ್ನುಂಟುಮಾಡುತ್ತದೆ.
 
ಪರಿಸ್ಥಿತಿ ಏನೇ ಇರಲಿ,ಹೇಗೇ ಇರಲಿ – ನಿಧಾನವಾಗಿ ಯೋಚಿಸಿ ಅದರ ಬಗ್ಗೆ ನಿರ್ಣಯಕ್ಕೆ ಬಂದರೆ ಒಳ್ಳೆಯದು. ಸಂದರ್ಭ ಯಾವುದೇ ಆಗಿರಲಿ, ಕೂಡಲೇ ಪ್ರತಿಕ್ರಿಯಿಸುವುದು ಮಾನವನ ಸಹಜ ಗುಣ. ಮಾತನಾಡುವುದಕ್ಕೂ ಮುನ್ನ ಕೇವಲ ಒಂದೇ ಒಂದು ಕ್ಷಣ ತಡೆದು, ಯೋಚಿಸಿ ಮಾತನಾಡಿದರೆ, ನಮ್ಮ ಬಾಯಿಂದ ಬರುವ ವಿಷಯಗಳು ನಾವು ಅಂದುಕೊಂಡಿದ್ದಕ್ಕಿಂತ ಭಿನ್ನವಾಗಿರುತ್ತವೆ. ಇದನ್ನು ಪ್ರಯತ್ನಿಸಿ ನೋಡಿ; ಇದೊಂದು ಅತಿ ಸುಲಭವಾದ ಹಾಗೂ ಅತಿ ಕಷ್ಟಕರವಾದ ಕೆಲಸ! ಆದರೆ ಯಾವುದೂ ಅಸಾಧ್ಯವಲ್ಲ. ಎಲ್ಲಾ ಸಂದರ್ಭಗಳಲ್ಲೂ ಮಾತನಾಡಿಯೇ ತೀರ್ಮಾನಕ್ಕೆ ಬರಬೇಕೆಂದಿಲ್ಲ.
 
ಮಾತನಾಡದೆಯೇ ಮನಸ್ಸಿನಲ್ಲಿಯೇ ಲೆಕ್ಕಾಚಾರದ ಸರಗಳನ್ನು ಪೋಣಿಸಿ ದೊಡ್ಡ ಮಾಲೆಯನ್ನೇ ಮಾಡಿ ನಮಗೆ ನಾವೇ ಹಾಕಿಕೊಂಡಿರುತ್ತೇವೆ. ಈ ಮಾಲೆಯ ಸರಪಣಿಯಿಂದ ಬಿಡಿಸಿಕೊಳ್ಳುವುದು  ತ್ರಾಸಿನ ಕೆಲಸ. ಅದರ ಬದಲು ತಾಳ್ಮೆಯಿಂದ ವಿಷಯವರಿತು ನಿರ್ಣಯಿಸಿದರೆ ಅನುಕೂಲ. ಕೆಲವೊಮ್ಮೆ ಎಷ್ಟೇ ಜಾಗರೂಕತೆಯಿಂದ ಮಾತನಾಡಿದರೂ, ಅದು ಒಬ್ಬರಿಂದ ಮತ್ತೊಬ್ಬರಿಗೆ ತಲುಪುವಷ್ಟರಲ್ಲಿ ವಿಷಯ ಸ್ವಲ್ಪವಾದರೂ ಬದಲಾಗಿರುತ್ತದೆ. ಇನ್ನು ವಿಷಯವೇ ತಿಳಿಯದೆ ನಿರ್ಧಾರಕ್ಕೆ ಬಂದರಂತೂ ಅನರ್ಥವಾಗುವುದು ಖಚಿತ. 
 
ಸದಾ ನಗುತ್ತಾ ಇರುವವರೆಲ್ಲಾ ಸಂತೋಷವಾಗಿದ್ದಾರೆ ಎಂದು ಅರ್ಥವಲ್ಲ. ಆ ನಗುವಿನ ಹಿಂದೆ ಎಷ್ಟೋ ನೋವುಗಳು ಅಡಗಿರಬಹುದು. ಅದನ್ನು ಮರೆಯಲು ಅವರು ನಗುವಿನ ಮುಖವಾಡವನ್ನು ಧರಿಸಿರಬಹುದಲ್ಲವೇ? ಇನ್ನು, ಮುಖ ಗಂಟಿಕ್ಕಿಕೊಂಡಿರುವವರು ಅಥವಾ ಗಂಭೀರವಾಗಿರುವವರೆಲ್ಲಾ ಕೆಟ್ಟವರೂ ಆಗಿರುವುದಿಲ್ಲ! 
-ಲಾವಣ್ಯಗೌರಿ ವೆಂಕಟೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT