ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ೦ದೇ ತಂಬಾಕಿಗೆ ಬೇಡವೆನ್ನಿ!

ಇಂದು ವಿಶ್ವ ತಂಬಾಕು ರಹಿತ ದಿನ
Last Updated 30 ಮೇ 2017, 19:30 IST
ಅಕ್ಷರ ಗಾತ್ರ
‘ನೀಲಿಯ ಸುಂದರವಾದ, ದೊಡ್ಡದಾಗಿ ಊದಿದ ಬಲೂನು. ಅದರ ಮೇಲೆ ನಮ್ಮ ಮ್ಯಾಪ್ ಬರೆಯಲಾಗಿದೆ. ಅದೊಂದು ಗ್ಲೋಬ್ ಮಾದರಿಯಲ್ಲಿದೆ. ಅತ್ತ ಕಡೆಯಿಂದ ಒಂದು ಉರಿಯುತ್ತಿರುವ ಸಿಗರೇಟು ನಿಧಾನವಾಗಿ ಹತ್ತಿರ ಬಂದು ಬಲೂನನ್ನು ಮುಟ್ಟುತ್ತಿದ್ದ ಹಾಗೇ, ಬಲೂನಿನೊಳಗೆ ಬೆಂಕಿಯ ಕೆಂಪು ಬಣ್ಣ ಕಾಣಿಸಿಕೊಳ್ಳುತ್ತದೆ’.
 
ಈ ವೀಡಿಯೋ ಎಷ್ಟು ಅರ್ಥಪೂರ್ಣ ಅಲ್ಲವೇ? ಸಿಗರೇಟು / ಬೀಡಿ ಇತ್ಯಾದಿಗಳಲ್ಲಿರುವ ತಂಬಾಕಿನ ಪರಿಣಾಮದಿಂದಾಗಿ ಇಡೀ ಜಗತ್ತೇ ಹೊತ್ತಿ ಉರಿಯುವ ಸ್ಥಿತಿ ಬಂದಿದೆ. ತಂಬಾಕು ಉಪಯೋಗಿಸುವ ವ್ಯಕ್ತಿ, ವ್ಯಕ್ತಿಯ ಕುಟುಂಬ, ಸಮಾಜ, ದೇಶ, ದೇಶದ ಆರ್ಥಿಕ ವ್ಯವಸ್ಥೆ, ದೇಶದ ಅಭಿವೃದ್ಧಿ, ಹೀಗೆ ಎಲ್ಲಕ್ಕೂ ಮಾರಕವಾಗುವ ಶಕ್ತಿ ಈ ‘ತಂಬಾಕು’ ಎಂಬ ವಸ್ತುವಿಗೆ ಇದೆ ಎಂದರೆ ತಪ್ಪಲ್ಲ. ಆದ್ದರಿಂದಲೇ ಈ ಬಾರಿಯ ಈ ಗುರಿಗಳನ್ನು ಸಾದರಪಡಿಸುವಲ್ಲಿ, ವ್ಯಕ್ತಿ, ಕುಟುಂಬ, ಸಮಾಜ ಮತ್ತು ಸರ್ಕಾರ ಹೀಗೆ ಎಲ್ಲರೂ ಮಹತ್ತರ ಪಾತ್ರ ಹೊಂದಿದ್ದಾರೆ.
 
ಏನಿದು ತಂಬಾಕು?
ತಂಬಾಕು ಅಥವಾ ಹೊಗೆಸೊಪ್ಪು ಎನ್ನುವಂತದ್ದು ಒಂದು ಹಸಿರುಗಿಡ. ಆ ಎಲೆಗಳನ್ನು ಒಣಗಿಸಿ, ಪುಡಿ ಮಾಡಿ ಬೇರೆ ಬೇರೆ ರೀತಿ ಉಪಯೋಗಿಸುತ್ತಾರೆ. ಈ ತಂಬಾಕಿನಲ್ಲಿ ಇರುವ ‘ನಿಕೋಟಿನ್’ ಎಂಬ ರಾಸಾಯನಿಕ ವಸ್ತು ಚಟ ಹಿಡಿಸುವಂಥದ್ದು. ತಂಬಾಕನ್ನು ಧೂಮರೂಪದಲ್ಲಿ - ಬೀಡಿ, ಸಿಗರೇಟು, ಪೈಪ್ ಮತ್ತು ಧೂಮರಹಿತರೂಪದಲ್ಲಿ - ಎಲೆಅಡಿಕೆಯೊಂದಿಗೆ, ಜರ್ದಾ, ಗುಟ್ಕಾ, ಮಿಶ್ರಿ, ನಶ್ಯಪುಡಿ, ಖೈನಿ – ಹೀಗೆ ವಿವಿಧ ರೂಪಗಳಲ್ಲಿ ಉಪಯೋಗಿಸಬಹುದು. ಆದರೆ ಒಂದು ಸಂಗತಿ ಮಾತ್ರ ಖಚಿತ.  ಉಪಯೋಗಿಸುವ ವಿಧಾನ ಯಾವುದೇ ಇರಲಿ, ಆರೋಗ್ಯಕ್ಕೆ ಹಾನಿಯಂತೂ ಖಂಡಿತ.
 
ಚಟವಾಗುವುದು ಹೇಗೆ?
ಈ ತಂಬಾಕಿನಲ್ಲಿ ನಿಕೋಟಿನ್ ಒಳಗೊಂಡು 3000ದಿಂದ 4000ದವರೆಗೆ ಜೀವಕ್ಕೆ ಮಾರಕವಾಗುವಂತ ರಾಸಾಯನಿಕ ವಸ್ತುಗಳಿರುತ್ತವೆ. ‘ನಿಕೋಟಿನ್’ ಎಂಬ ವಸ್ತು ನಮ್ಮ ಮಿದುಳಿನಲ್ಲಿ ‘ಡೋಪವೀನ್’ ಎಂಬ ನರವಾಹಕ ಹೆಚ್ಚುವಂತೆ ಮಾಡುತ್ತದೆ. ಇದರಿಂದಾಗಿ ಮನಸ್ಸಿಗೆ ಸೇವಿಸಿದಾಕ್ಷಣ ಆಗುವ ಭಾವನೆ ‘ಸಂತಸ’. ಈ ಕ್ಷಣಿಕ ಸಂತಸಕ್ಕಾಗಿ ಮತ್ತೆ ಮತ್ತೆ ತಂಬಾಕು ಸೇವಿಸುವ ಆಸೆಯಾಗುತ್ತದೆ.
 
 
ಕೆಲವೊಮ್ಮೆ ಮನಸ್ಸಿಗೆ ಬೇಸರವಾದಾಗ, ಕೋಪ ಬಂದಾಗ ಕೂಡ ಇದನ್ನು ಸೇವಿಸುತ್ತಾರೆ. ಕೆಲವರು, ಒತ್ತಡದ ಜೀವನವನ್ನು ಎದುರಿಸಲು, ಈ ಬೀಡಿ/ಸಿಗರೇಟು ಸೇದುವಿಕೆ, ತಂಬಾಕು ಅಗಿಯುವಿಕೆಯನ್ನು ಸಾಧನವಾಗಿ ಬಳಸುತ್ತಾರೆ.  ಈ ಮಾನಸಿಕ ಒತ್ತಡ ಕಡಿಮೆಯಾಗದ ಹೊರತು, ಇದನ್ನು ಬಿಡುವುದು ಕಷ್ಟವಾಗಬಹುದು.  ಮತ್ತಷ್ಟು ಜನ, ಅದರಲ್ಲೂ ಚಿಕ್ಕ ವಯಸ್ಸಿನ ಯುವಕರು ಸ್ನೇಹಿತರಿಗಾಗಿ, ಶೋಕಿಗಾಗಿ ಕೂಡ, ಈ ಚಟಕ್ಕೆ ಬಲಿಯಾಗುತ್ತಾರೆ.
 
ಪದೇ ಪದೇ ತಂಬಾಕು ಸೇವಿಸುವುದಕ್ಕೆ ಪ್ರಾರಂಭಿಸಿದಾಗ, ಯಾವಾಗಲೋ ಒಂದು ಬಾರಿ ಸೇವಿಸುವುದನ್ನು ನಿಲ್ಲಿಸಿದರೆ, ಆಗ ಕಾಣಿಸಿಕೊಳ್ಳುವುದು ಮನಸ್ಸಿಗೆ ‘ಚಡಪಡಿಕೆ’, ಗಾಬರಿ, ಹಸಿವು, ನಿದ್ರಾಹೀನತೆ ಹಾಗೂ ಮತ್ತೆ ಬೇಕೆಂಬ ತೀವ್ರ ಬಯಕೆ. ದಿನಕಳೆದಂತೆ ಒಂದು ಸಿಗರೇಟು ಸೇದಿದರೆ, ಮೊದಮೊದಲು ಆಗುತ್ತಿದ್ದ ಸಂತಸ, ಈಗ ನಾಲ್ಕು ಬಾರಿ ಸೇದಿದರೂ ಆಗುತ್ತಿಲ್ಲ. ನಿಧಾನವಾಗಿ ದಿನಕ್ಕೆ ಒಂದು / ಎರಡು ಬಾರಿ ಮಾಡುತ್ತಿದ್ದ ಸೇವನೆ ಈಗ ಈ ಮೇಲಿನ ಕಾರಣಗಳಿಂದಾಗಿ 10–15 ಬಾರಿಗೆ ಏರುತ್ತದೆ.  ಹೀಗೆ ಗಿಡವಾದದ್ದು ಹೆಮ್ಮರವಾಗಿ ಬೆಳೆಯುತ್ತದೆ. ತ್ಯಜಿಸಲು ಕಷ್ಟವಾದ ಚಟವಾಗುತ್ತದೆ. ಆದರೆ ನೆನಪಿಡಿ! ತ್ಯಜಿಸಲು ಕಷ್ಟವಾದರೂ ಅಸಾಧ್ಯವೇನಲ್ಲ.
 
ತಂಬಾಕು ಸೇವನೆಯಿಂದ  ಆಗುವ ಪರಿಣಾಮಗಳು
* ಒಂದು ಸಿಗರೇಟು ಅಥವಾ ಬೀಡಿ, ಒಂದು ವ್ಯಕ್ತಿಯ ಜೀವಿತಾವಧಿಯಲ್ಲಿ ಏಳು ನಿಮಿಷಗಳನ್ನು ಕಡಿತಗೊಳಿಸಿದರೆ ಒಂದು ಪ್ಯಾಕೆಟ್ ಗುಟ್ಕಾ/ಖೈನಿ ಜೀವಿತಾವಧಿಯಲ್ಲಿ ನಾಲ್ಕು ನಿಮಿಷಗಳನ್ನು ಕಡಿತಗೊಳಿಸುತ್ತದೆ.
* ತಂಬಾಕು ಸೇವಿಸುವವರಲ್ಲಿ ಮೇಲುದವಡೆ, ಬಾಯಿ, ಶ್ವಾಸಕೋಶ, ಗಂಟಲು ಕ್ಯಾನ್ಸರ್‌ಗಳು ಬರುವ ಸಂಭವ ಹೆಚ್ಚು.
* ಬಾಯಿಯಲ್ಲಿ ಹುಣ್ಣು, ದುರ್ವಾಸನೆ, ಹಲ್ಲಿನ ಮೇಲೆ ಕಪ್ಪು/ಬ್ರೌನ್ ಬಣ್ಣದ ಕಲೆ ತಂಬಾಕು ಉಪಯೋಗಿಸುವವರಲ್ಲಿ ಸಾಮಾನ್ಯ.
* ದೀರ್ಘಕಾಲಿಕ ಕೆಮ್ಮು, ರಕ್ತದ ಒತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶವಾಯು ಬರುವ ಸಾಧ್ಯತೆ ಹೆಚ್ಚು. 
* ತಂಬಾಕಿನಿಂದ ಪುರುಷರಲ್ಲಿ ಲೈಂಗಿಕ ಸಮಸ್ಯೆಗಳು, ಮಹಿಳೆಯರಲ್ಲಿ ಗರ್ಭಪಾತ, ಬಂಜೆತನ ಉಂಟಾಗುತ್ತದೆ.

ತಂಬಾಕು ತ್ಯಜಿಸುವುದರಿಂದ ಲಾಭಗಳು
* ತ್ಯಜಿಸಿದ ಇಪ್ಪತ್ತು ನಿಮಿಷಗಳ ನಂತರ, ನಾಡಿಮಿಡಿತ, ರಕ್ತದೊತ್ತಡ, ಸಹಜಸ್ಥಿತಿಗೆ ಮರಳುತ್ತದೆ. ದೇಹದ ಉಷ್ಣಾಂಶವು ಸಹಜವಾಗುತ್ತದೆ. 
* ತ್ಯಜಿಸಿದ ಎಂಟು ಗಂಟೆಗಳ ನಂತರ, ದೇಹದಲ್ಲಿರುವ ಕಾರ್ಬನ್ ಮೊನಾಕ್ಸೈಡ್ (Carbon monoxide)  ಕಡಿಮೆಯಾಗಿ, ರಕ್ತದಲ್ಲಿನ ಆಮ್ಲಜನಕಚಲನೆ ಸರಿಯಾಗುತ್ತದೆ.
* ತ್ಯಜಿಸಿದ ಎರಡು ದಿನಗಳ ನಂತರ ನಿಮ್ಮ ನಾಲಿಗೆಯ ರುಚಿಸುವ ಶಕ್ತಿ ಸರಿಯಾಗಿ, ಊಟ ಚೆನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ ಹೃದಯಾಘಾತದ ಸಾಧ್ಯತೆಗಳು ಕಡಿಮೆಯಾಗುತ್ತದೆ.
* ತ್ಯಜಿಸಿದ ನಾಲ್ಕು ದಿನಗಳ ನಂತರ ಶ್ವಾಸನಾಳ/ಶ್ವಾಸಕೋಶಗಳು ಸಹಜ ಸ್ಥಿತಿಗೆ ಮರಳಿ, ಉಸಿರಾಟ ಕ್ರಿಯೆ ಸುಲಭವಾಗುತ್ತದೆ. 
* ತ್ಯಜಿಸಿದ 1–3 ತಿಂಗಳೊಳಗೆ ದೇಹದ ರಕ್ತಚಲನೆ ಉತ್ತಮಗೊಂಡು, ದೈಹಿಕ ಸುಸ್ತು ಕಡಿಮೆಯಾಗುತ್ತದೆ.  ಶ್ವಾಸಕೋಶ ಮತ್ತಷ್ಟು ಸಹಜಸ್ಥಿತಿಗೆ ಮರಳುತ್ತದೆ. 
* ಒಂದು ವೇಳೆ, ಒಂದು ವರ್ಷಕಾಲ ತಂಬಾಕು ತ್ಯಜಿಸಿದ್ದಲ್ಲಿ ಹೃದಯಾಘಾತದ ಸಾಧ್ಯತೆಗಳು ಅರ್ಧದಷ್ಟು ಕಡಿಮೆಯಾದಂತೆಯೇ ಲೆಕ್ಕ.  ಹಾಗೆಯೇ ಮುಂದುವರಿಸಿ ಹತ್ತು ವರ್ಷಗಳ ಕಾಲ ತಂಬಾಕು ಮುಕ್ತರಾಗಿದ್ದರೆ, ಬರಬಹುದಾದ ಹಲವಾರು ಕ್ಯಾನ್ಸರ್‌ಗಳ ಸಾಧ್ಯತೆಗಳನ್ನು ಕಡಿಮೆ ಮಾಡಿದಂತೆ. 
ಇಂದೇ ನಿರ್ಧರಿಸಿ!
* ನೀವು ಯಾವುದೇ ರೀತಿಯ ತಂಬಾಕಿಗೆ ದಾಸರಾಗಿದ್ದಲ್ಲಿ, ಇಂದೇ ಸಂಪೂರ್ಣವಾಗಿ ಬಿಡುವ ನಿರ್ಧಾರ ಮಾಡಿ.  ಮನಸ್ಸಿನ ಇಚ್ಛಾಶಕ್ತಿಗಿಂತ ದೊಡ್ಡದು ಯಾವುದೂ ಇಲ್ಲ. 
* ನಿಮ್ಮ ಕೆಲಸ-ಕಾರ್ಯಗಳನ್ನು, ಗಮನದಲ್ಲಿರಿಸಿಕೊಂಡು, ಮುಂದಿನ ದಿನಗಳಲ್ಲಿ ಒಂದು ದಿನಾಂಕವನ್ನು ಗೊತ್ತು ಮಾಡಿ.  ಅದಕ್ಕೆ ‘Quit date’ ಎನ್ನುತ್ತೇವೆ.  ಈ ದಿನಾಂಕದಿಂದ ನೀವು ಸಂಪೂರ್ಣವಾಗಿ ತಂಬಾಕು ಮುಕ್ತರಾಗಬೇಕು. 
* ನಿಮ್ಮ ನಿರ್ಧಾರ ಗಟ್ಟಿ ಮಾಡಲು, ಒಂದು ಕಾಗದದಲ್ಲಿ ನೀವು ಏಕೆ ಬಿಡಬೇಕು, ಬಿಡುವುದರಿಂದ ನಿಮಗಾಗುವ ಲಾಭಗಳ ಬಗ್ಗೆ ಪಟ್ಟಿ ಮಾಡಿ.  ಪದೇ ಪದೇ ಈ ಪಟ್ಟಿಯನ್ನು ನೋಡಿ, ನಿಮ್ಮ ಮನಸ್ಸಿಗೆ ಪ್ರೇರಣೆ ತಂದುಕೊಳ್ಳಿ. 
* ಯಾವ ಸನ್ನಿವೇಶಗಳಲ್ಲಿ, ಸಂದರ್ಭಗಳಲ್ಲಿ ನೀವು ತಂಬಾಕು ಉಪಯೋಗುಸುತ್ತೀರೆಂಬುದನ್ನು ಗಮನಿಸಿ, ಅದಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳಿ. ಆ ಸಂದರ್ಭಗಳಲ್ಲಿ ತಂಬಾಕು ಸೇವನೆ ಬಿಡಲು ಮಾಡಬಹುದಾದ ಇತರೇ ಚಟುವಟಿಕೆಗಳನ್ನು ಗುರುತು ಮಾಡಿ. 
* ತಂಬಾಕು ಸೇವನೆಯ ಬದಲು ಸಕ್ಕರೆ ರಹಿತ ಚೂಯಿಂಗ್ ಗಮ್, ಲವಂಗ, ಪುದಿನಾ, ತುಳಸಿ ಎಲೆ ಇತ್ಯಾದಿಗಳನ್ನು ಅಗೆಯುವುದು. 
* ಮನಸ್ಸಿಗೆ ತಂಬಾಕು ಬೇಕೇಬೇಕೆಂಬ ತೀವ್ರ ಬಯಕೆಯಾದಾಗ, ಸ್ನೇಹಿತರೊಂದಿಗೆ ಮಾತನಾಡುವುದು, ವ್ಯಾಯಾಮ ಮಾಡುವುದು, ಒಳ್ಳೆಯ ಆಹಾರ ತಿನ್ನವುದು, ಹೀಗೆ ಇತರೇ ಕಾರ್ಯಗಳಲ್ಲಿ ಮನಸ್ಸನ್ನು ತೊಡಿಸಿಕೊಳ್ಳಿ. ಆರೋಗ್ಯಕರ ಜೀವನಶೈಲಿ ನಿಮ್ಮದಾಗಲಿ.
 

ಮನೋವೈದ್ಯರ ಚಿಕಿತ್ಸೆ ಯಾರಿಗೆ? 
* ತಂಬಾಕು ಉಪಯೋಗಿಸುವ ವ್ಯಕ್ತಿಗೆ ಖಿನ್ನತೆ / ಆತಂಕ / ತೀವ್ರ ಒತ್ತಡದ ಸಮಸ್ಯೆಗಳಿದ್ದರೆ, ಅದಕ್ಕೆ ಚಿಕಿತ್ಸೆ ಅಗತ್ಯ. 
* ಸ್ವತಃ ತಂಬಾಕು ತ್ಯಜಿಸುವ ಪ್ರಯತ್ನಗಳು ವಿಫಲವಾಗಿದ್ದಲ್ಲಿ, ಮನೋವೈದ್ಯರ ಬಳಿ ಹೋದರೆ, ಆಪ್ತ ಸಮಾಲೋಚನೆಯ ಜೊತೆ ಕೆಲವು ಮಾತ್ರೆಗಳೂ ಲಭ್ಯ.  ತಂಬಾಕಿನ ಕಡೆಗೆ ಉಂಟಾಗುವ ತೀವ್ರ ಆಸೆ ಕಡಿಮೆ ಮಾಡುವ ಮಾತ್ರೆಗಳು ಒಂದು ವಿಧವಾದರೆ ‘Nicotine replacement therapy’ ಇನ್ನೊಂದು ವಿಧದ ಚಿಕಿತ್ಸೆ. ಅಗಿಯುವ ತಂಬಾಕಿನ ಬದಲು, ಈ ನಿಕೋಟಿನ್ ಗಮ್‌ಗಳನ್ನು ನಿಯಮಿತವಾಗಿ ದವಡೆಯ ಸಂದಿಯಲ್ಲಿ ಇಟ್ಟುಕೊಳ್ಳಲು ಕೊಡಲಾಗುತ್ತದೆ. 
* ಆದರೆ ಮನೋವೈದ್ಯರ ಸಲಹೆ ಪಡೆಯದೇ ಈ ಯಾವ ಚಿಕಿತ್ಸೆ ತೆಗೆದುಕೊಳ್ಳುವುದೂ ಹಾನಿಕಾರಕ.

ತಂಬಾಕು ತ್ಯಜಿಸಿ, ದೇಶದ ಅಭಿವೃದ್ಧಿಗೆ ನೆರವಾಗಿ! 
ತಂಬಾಕು ತ್ಯಜಿಸುವುದರಿಂದ, ಕೇವಲ ಆ ವ್ಯಕ್ತಿಗಷ್ಟೇ ಅಲ್ಲದೆ, ದೇಶಕ್ಕೇ ಲಾಭವುಂಟು.  ತಂಬಾಕು ಮುಕ್ತರಾಗಿ ನಮ್ಮ ಆರೋಗ್ಯದ ಸಮಸ್ಯೆಗಳನ್ನು ತಡೆಗಟ್ಟುವುದು ಒಂದು ಆಯಾಮವಷ್ಟೆ.  ತಂಬಾಕಿಗಾಗಿ ದುಡ್ಡು ಖರ್ಚು ನಿಲ್ಲುತ್ತದೆ.  ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ.  ದೇಶದ ಅಭಿವೃದ್ಧಿಗೆ ಪರೋಕ್ಷವಾಗಿ ನಾವು ಕಾರಣರಾಗುತ್ತೇವೆ.   ತಂಬಾಕು ಮುಕ್ತರಾಗಲು ಇಂದೇ ನಿರ್ಧರಿಸಿ, ಕಾರ್ಯರೂಪಕ್ಕೆ ತನ್ನಿ!
****
* ಪ್ರತಿ ವರ್ಷ ತಂಬಾಕು ಸೇವನೆಯಿಂದ ಸಾವಿಗೀಡಾಗುವವರ ಸಂಖ್ಯೆ ಎಪ್ಪತ್ತು ಲಕ್ಷದಷ್ಟು.
* ತಂಬಾಕು ಬೆಳೆಯುವುದಕ್ಕೆ ನಲವತ್ತು ಲಕ್ಷ ಎಕರೆ ಭೂಮಿಯ ಕಾಡನ್ನು ನಾಶ ಮಾಡಬೇಕಾಗುತ್ತದೆ.
* ತಂಬಾಕಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ‘ಪೆಸ್ಟಿಸೈಡ್’ಗಳನ್ನು ಬಳಸಲಾಗುತ್ತದೆ.
* ತಂಬಾಕು ಉತ್ಪಾದನೆ ಎರಡು ಟನ್‌ಗಳಷ್ಟು ಕಚ್ಚಾ ತ್ಯಾಜ್ಯವನ್ನು ಹೊರಹಾಕುತ್ತದೆ.

****
ನಿಮಗೆ ತಂಬಾಕು ತ್ಯಜಿಸಲು ಪ್ರೇರಣೆ ಇದೆಯೇ?

* ನಿಮಗೆ ತಂಬಾಕು ಸಂಪೂರ್ಣವಾಗಿ ತ್ಯಜಿಸಲು ಇಚ್ಛೆ ಇದೆಯೇ?
* ನಿಮಗೆ ತಂಬಾಕು ತ್ಯಜಿಸಲು ಭವಿಷ್ಯದಲ್ಲಿ ಗಂಭೀರ ಪ್ರಯತ್ನ ಮಾಡುವ ಆಸೆ ಇದೆಯೇ?
* ನಿಮಗೆ ತಂಬಾಕು ತ್ಯಜಿಸಲು ಸಹಾಯ ತೆಗೆದುಕೊಳ್ಳುವ ಇರಾದೆ ಇದೆಯೇ? ಮೇಲಿನ ಈ ಮೂರು ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದಾದಲ್ಲಿ, ಹತ್ತಿರದ ಮನೋವೈದ್ಯರನ್ನು ಕಂಡು ಸಹಾಯ ಪಡೆಯಿರಿ.

-ಡಾ. ಕೆ.ಎಸ್. ಶುಭ್ರತಾ
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT