ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ನಗರ ವಾಸಯೋಗ್ಯವೇ?

Last Updated 30 ಮೇ 2017, 19:30 IST
ಅಕ್ಷರ ಗಾತ್ರ

ದೇಶದಲ್ಲಿ ವಾಸಯೋಗ್ಯ ನಗರಗಳು ಯಾವುವು ಎಂಬುದನ್ನು ಗುರುತಿಸುವುದಕ್ಕಾಗಿ ಮುಂದಿನ ತಿಂಗಳು ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯದ ವತಿಯಿಂದ ಸಮೀಕ್ಷೆಯೊಂದು ನಡೆಯಲಿದೆ. ದೇಶದಾದ್ಯಂತ 240 ನಗರಗಳು ಸಮೀಕ್ಷೆಗೆ ಒಳಪಡುತ್ತಿವೆ. ಇವುಗಳಲ್ಲಿ 100 ಸ್ಮಾರ್ಟ್ ಸಿಟಿಗಳೂ ಇವೆ.

ವಿದೇಶಗಳಲ್ಲಿ ಇಂತಹ ಸಮೀಕ್ಷೆಗಳು ಸಾಮಾನ್ಯ. ಆದರೆ ಭಾರತದಲ್ಲಿ ಹಿಂದೆಂದೂ ಇಂತಹ ಸಮೀಕ್ಷೆ ನಡೆದೇ ಇಲ್ಲ. ಮೊಟ್ಟಮೊದಲ ಬಾರಿಗೆ ಇಲ್ಲಿ ಇಂತಹ ಸಮೀಕ್ಷೆಯೊಂದು ನಡೆಯುತ್ತಿರುವುದು ವಿಶೇಷ.

ಈಗಾಗಲೇ ಸ್ವಚ್ಛಭಾರತ ಅಭಿಯಾನದಡಿ ಸ್ವಚ್ಛತೆಯಲ್ಲಿ ಮುಂದಿರುವ ನಗರಗಳ ಗುರುತಿಸುವಿಕೆ ನಡೆಯುತ್ತಿದ್ದು, ಕಳೆದ ವರ್ಷ ನಮ್ಮ ರಾಜ್ಯದ ಮೈಸೂರು ಪ್ರಥಮ ಸ್ಥಾನ ಪಡೆದದ್ದನ್ನು ನೆನಪಿಸಿಕೊಳ್ಳಬಹುದು. ಈ ವರ್ಷ ಆ ಸ್ಥಾನವನ್ನು ಮೈಸೂರು ಕಳೆದುಕೊಂಡಿದೆ. ಬೆಂಗಳೂರಿಗಂತೂ ಆ ಭಾಗ್ಯ ಸದ್ಯದಲ್ಲಿ ಪ್ರಾಪ್ತಿಯಾಗಲಾರದು. ಉಳಿದಂತೆ ದಕ್ಷಿಣದ ಇತರ ನಗರಗಳು ಆ ಹೆಗ್ಗಳಿಕೆಗೆ ಪಾತ್ರವಾಗಿಲ್ಲ. ಈ ಹೆಗ್ಗಳಿಕೆ ನೆರೆರಾಜ್ಯಗಳೊಂದಿಗೆ ಆರೋಗ್ಯಕರ ಪೈಪೋಟಿಯನ್ನು ಹುಟ್ಟು ಹಾಕುವಷ್ಟರ ಮಟ್ಟಿಗಾದರೂ ಆಡಳಿತದಲ್ಲಿ ಚುರುಕು ಮುಟ್ಟಿಸುವ ಕೆಲಸವನ್ನು ಮಾಡಿದೆ.

ಇದರ ಬೆನ್ನಲ್ಲೇ ಈಗ ವಾಸಯೋಗ್ಯ ನಗರಗಳ ಗುರುತಿಸುವಿಕೆ ಮಹತ್ವವನ್ನು ಪಡೆಯುತ್ತದೆ. ಮೂಲಭೂತ ಸೌಕರ್ಯಗಳ ಲಭ್ಯತೆಯ ಜೊತೆಗೆ ಇಂಧನ, ತ್ಯಾಜ್ಯನೀರು, ಘನತ್ಯಾಜ್ಯ ನಿರ್ವಹಣೆ, ಸಂಚಾರ ವ್ಯವಸ್ಥೆ, ಮಾಲಿನ್ಯ ನಿಯಂತ್ರಣವೇ ಮೊದಲಾದ ಸೂಚ್ಯಂಕಗಳು ಇದರಲ್ಲಿ ಪರಿಗಣಿತವಾಗುತ್ತಿರುವುದು ಗಮನಾರ್ಹ.

ಇವುಗಳ ಜೊತೆಗೆ ಆರೋಗ್ಯ, ಶಿಕ್ಷಣ, ಸಂಸ್ಕೃತಿ, ಸುರಕ್ಷತೆ ಮೊದಲಾದ ಸಾಮಾಜಿಕ ಆಯಾಮಗಳುಳ್ಳ ಸೂಚ್ಯಂಕಗಳೂ ಇವೆ. ವಾಣಿಜ್ಯ ಸಂಸ್ಥೆಗಳ ಸಂಖ್ಯೆ ಹಾಗೂ ನಿರುದ್ಯೋಗದ ಪ್ರಮಾಣ ಇವು ಆರ್ಥಿಕ ಸೂಚ್ಯಂಕಗಳಾಗಿವೆ. ಮೇಲ್ನೋಟಕ್ಕೆ ಕಾಣುವಂತೆ ನಗರಗಳ ವಾಸಯೋಗ್ಯ ಪರಿಸ್ಥಿತಿಯನ್ನು ಸುಧಾರಿಸುವುದು, ನಗರಗಳ ನಡುವೆ ಉತ್ತಮಿಕೆಗಾಗಿ ಆರೋಗ್ಯಕರ ಸ್ಪರ್ಧೆಯನ್ನು ಏರ್ಪಡಿಸುವುದು ಈ ಸಮೀಕ್ಷೆಯ ಉದ್ದೇಶವಾಗಿದೆ.

ಸಮೀಕ್ಷೆಯ ಬಳಿಕ ಸಹಜವಾಗಿಯೇ ಈ ಮೇಲೆ ಹೇಳಿದ ಸೂಚ್ಯಂಕಗಳ ಆಧಾರದ ಮೇಲೆ ಬದಲಾವಣೆಗಳನ್ನು ತರಲು ರಾಜ್ಯಗಳಿಗೆ ಸೂಚಿಸಬಹುದು. ಘನತ್ಯಾಜ್ಯ ನಿರ್ವಹಣೆ ಎಲ್ಲ ಜಿಲ್ಲೆಗಳಲ್ಲೂ ಒಂದು ಸವಾಲೇ ಸರಿ. ನಿರ್ವಹಣೆ ಎಂದರೆ ಊರ ಮಧ್ಯದಿಂದ ಕಸವನ್ನು ಊರ ಹೊರಭಾಗಕ್ಕೆ ವಿಲೇವಾರಿ ಮಾಡುವುದು ಮಾತ್ರ ಸದ್ಯ ಅನುಸರಿಸಿಕೊಂಡು ಬರಲಾಗುತ್ತಿರುವ ಕ್ರಮ. ಕರ್ನಾಟಕದ ಬಹುತೇಕ ಎಲ್ಲ ದೊಡ್ಡ, ಸಣ್ಣ ನಗರಗಳೂ ಇದನ್ನೇ ಮಾಡುತ್ತಿವೆ. ಈ ಸಾಲಿಗೆ ಬೆಂಗಳೂರೆಂಬ ಬಕಾಸುರನನ್ನು ಸೇರಿಸಲು ಸಾಧ್ಯವೇ ಇಲ್ಲ. ಇಲ್ಲಿ ಉತ್ಪನ್ನವಾಗುತ್ತಿರುವ ತ್ಯಾಜ್ಯ ನಿರ್ವಹಣೆಗಾಗಿ ಸರ್ಕಾರದ ಬೊಕ್ಕಸದಿಂದ ಹೇರಳ ಹಣ ವ್ಯಯವಾಗುತ್ತಿದೆ. ಆದರೆ ಫಲಿತಾಂಶ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಇತರ ನಗರಗಳಲ್ಲೂ ಈ ಸಮಸ್ಯೆ ಬೃಹದಾಕಾರವಾಗಿಯೇ ಬೆಳೆಯುತ್ತಿದೆ. ಕಸ ಸಂಗ್ರಹಣೆ, ನಿರ್ವಹಣೆ ಆಡಳಿತದ ಜವಾಬ್ದಾರಿಯಾಗಿ ಮಾತ್ರ ಪರಿಗಣಿತವಾಗುತ್ತಿದ್ದು, ಜನರ ಸಹಭಾಗಿತ್ವ ಇದರಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಪ್ರಮಾಣದಲ್ಲಿದೆ.

ಇನ್ನು ಸಂಚಾರ ವ್ಯವಸ್ಥೆಯು ಸಣ್ಣ ನಗರಗಳು, ಪಟ್ಟಣಗಳನ್ನೂ ಹದಗೆಡಿಸುತ್ತಿದೆ. ಸಾಮಾಜಿಕ ಆಯಾಮಕ್ಕೆ ಬಂದರೆ ಆರೋಗ್ಯ ಬಹಳ ಅಲಕ್ಷಿತ ಕ್ಷೇತ್ರವಾಗುತ್ತಿದೆ. ಸರ್ಕಾರದ ಅನೇಕ ಯೋಜನೆಗಳು ಕೋಟಿಕೋಟಿ ಸುರಿದು ಜಾರಿಗೊಳ್ಳುತ್ತಿದ್ದರೂ ನೈರ್ಮಲ್ಯ ಇನ್ನೂ ಸಾಧನೆಯಾಗಿರದ ಕಾರಣ ರೋಗರುಜಿನಗಳ ಭಯ ಸದಾ ಇದ್ದೇ ಇದೆ. ಶಿಕ್ಷಣವನ್ನು  ತೆಗೆದುಕೊಂಡರೆ ಇದೀಗ ಪ್ರಕಟವಾದ ಪಿ.ಯು.ಸಿ. ಹಾಗೂ ಎಸ್ಎಸ್ಎಲ್‌ಸಿ ಪರೀಕ್ಷೆಗಳ ಫಲಿತಾಂಶಗಳು ಕಳೆದ ವರ್ಷಗಳಿಗಿಂತ ಈ ವರ್ಷ ಹಿನ್ನಡೆಯನ್ನು ಕಂಡಿರುವುದು ಚಿಂತೆಗೀಡು ಮಾಡುವ ವಿಚಾರವಾಗಿದೆ. ಸುರಕ್ಷತೆಯ ಮಾತಿಗೆ ಬಂದರೆ ರಾಜ್ಯದಾದ್ಯಂತ ಅಪರಾಧ ಪ್ರಕರಣಗಳು ಹೆಚ್ಚಳ ಕಾಣುತ್ತಲೇ ಇವೆ. ಇದರಿಂದ ಕಾನೂನು ಸುವ್ಯವಸ್ಥೆಯು ಆಡಳಿತಕ್ಕೆ  ದೊಡ್ಡ ತಲೆನೋವಾಗಿದೆ. ಅಪರಾಧಗಳಲ್ಲಿ ತೊಡಗಿರುವವರು ಬಹುತೇಕ ಯುವಜನತೆ ಎಂಬುದನ್ನು ಮರೆಯುವಂತಿಲ್ಲ. ಇದಕ್ಕೆ  ಮೂಲಕಾರಣ ನಿರುದ್ಯೋಗ ಸಮಸ್ಯೆ. ವ್ಯಾಪಾರ ವಹಿವಾಟುಗಳು ಹೆಚ್ಚುತ್ತಿದ್ದರೂ, ಉದ್ಯೋಗ ಸೃಷ್ಟಿ ವಿದ್ಯಾವಂತ ವರ್ಗಕ್ಕೆ ಮಾತ್ರ ಸೀಮಿತವಾಗಿ ಆಗುತ್ತಿರುವುದು ಅಪರಾಧಗಳಲ್ಲಿ ಭಾಗವಹಿಸುತ್ತಿರುವವರನ್ನು ಗಣನೀಯವಾಗಿ ಹೆಚ್ಚಿಸಿದೆ.

ಈ ವಿಷಯಗಳನ್ನು ಪ್ರಸ್ತಾಪಿಸುತ್ತಿರುವುದು ಋಣಾತ್ಮಕತೆಯನ್ನು ಪಟ್ಟಿ ಮಾಡಲು ಖಂಡಿತಾ ಅಲ್ಲ. ಯಾವುದೇ ನಗರ ವಾಸಯೋಗ್ಯವಾಗಬೇಕಾದರೆ  ಎಲ್ಲಾ ಮೂಲಭೂತ ಸೌಕರ್ಯಗಳ ಲಭ್ಯತೆಯ ಜೊತೆಗೆ ಲಭ್ಯವಾಗುವ ಸೌಕರ್ಯಗಳ ಸದ್ಬಳಕೆ, ರಕ್ಷಣೆಯೂ ಆಗಬೇಕಾಗುತ್ತದೆ. ಇದು ಸಾರ್ವಜನಿಕ ಜವಾಬ್ದಾರಿ. ನಮ್ಮ ರಾಜ್ಯವನ್ನೇ ಗಮನಿಸುವುದಾದರೆ ಆಡಳಿತದ ಲೋಪದೋಷಗಳನ್ನು ಗಮನಿಸಿ, ಪ್ರಶ್ನಿಸುವ ಮನೋಭಾವ ಹಾಗೂ ಸ್ವಯಂಸೇವೆಗಾಗಿ ಮುಂದಾಗುವುದು ಇತ್ತೀಚೆಗೆ ಹೆಚ್ಚಾಗಿ ಕಾಣಬರುತ್ತಿದೆ. ಉದಾಹರಣೆಗೆ, ಬೆಂಗಳೂರಿನಲ್ಲಿ ಉಕ್ಕಿನ ಮೇಲ್ಸೇತುವೆಯ ವಿರುದ್ಧ ನಡೆದ ಜನಾಂದೋಲನ. ಅಹಿಂಸಾತ್ಮಕವಾಗಿ, ಆದರೆ ಪರಿಣಾಮಕಾರಿಯಾಗಿ ನಡೆದ ಈ ಜನಾಂದೋಲನದ ಪರಿಣಾಮವಾಗಿ ಆಡಳಿತ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿತು. ಅದರಂತೆ ನಾಡಿನ ಬೇರೆ ಬೇರೆ ಭಾಗಗಳಲ್ಲಿ ನಡೆಯುತ್ತಿರುವ ‘ಕೆರೆ ಉಳಿಸಿ’  ಕಾರ್ಯಕ್ರಮ. ಜನಸಮುದಾಯವೇ ಮುಂದೆ ಬಂದು ಆಯಾ ಊರಿನಲ್ಲಿ ಬತ್ತಿದ ಕೆರೆ-ಕುಂಟೆಗಳನ್ನು ಪುನಶ್ಚೇತನಗೊಳಿಸಿರುವುದು. ಎಲ್ಲೆಲ್ಲಿ ಆಡಳಿತ ಮೂಲಸೌಕರ್ಯಗಳನ್ನು ಒದಗಿಸಲು ವಿಫಲವಾಯಿತೋ ಅಲ್ಲೆಲ್ಲಾ ಸಾಮಾನ್ಯ ಜನರು ತಾವೇ ಮುಂದಾಗಿ ಕ್ರಮ ಕೈಗೊಂಡರು. ಇದು ನಮ್ಮ ರಾಜ್ಯದ ಬಹುತೇಕ ಸಣ್ಣ ದೊಡ್ಡ ನಗರಗಳ ಪರಿಸ್ಥಿತಿ. ಹೀಗಿರುವಾಗ ನಮ್ಮ ರಾಜ್ಯದ ಯಾವ ನಗರ, ಪಟ್ಟಣ ತಾನೇ ವಾಸಯೋಗ್ಯ ಎಂದು ಕರೆಸಿಕೊಳ್ಳಲು ಯೋಗ್ಯವಾದೀತು?

ಅಭಿವೃದ್ಧಿಯ ಪರಿಭಾಷೆಯನ್ನು ಆಡಳಿತ ಸರಿಯಾಗಿ ಅರ್ಥ ಮಾಡಿಕೊಂಡಂತಿಲ್ಲ. ಹೆದ್ದಾರಿಗಳು, ಸೇತುವೆಗಳು, ಮೇಲ್ಸೇತುವೆಗಳು, ವಾಹನ ದಟ್ಟಣೆ ಮೊದಲಾದುವೇ ಅಭಿವೃದ್ಧಿಯ ಮಾನದಂಡಗಳಲ್ಲ. ಇವುಗಳೊಂದಿಗೆ ಒಂದು ಪ್ರದೇಶದಲ್ಲಿ ವಾಸಿಸುವ ಜನಸಂಖ್ಯೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಅವರಿಗೆ ಅಗತ್ಯವಿದ್ದಷ್ಟು, ವ್ಯವಸ್ಥಿತವಾಗಿ ಪೂರೈಸಿಕೊಡುವ ಹಾಗೂ ಆ ಸೌಕರ್ಯ ಬಡವಬಲ್ಲಿದರೆನ್ನದೇ ಎಲ್ಲರಿಗೂ ಸಮನಾಗಿ ಸಿಗುವಂತೆ ಮಾಡುವ ಕಾರ್ಯ ಯಾವುದೇ ಪ್ರದೇಶದ ಅಭಿವೃದ್ಧಿಯೆಡೆಗೆ ಮೊದಲ ಹೆಜ್ಜೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೆ ನಮ್ಮ ರಾಜ್ಯವೇ ಏಕೆ ನಮ್ಮ ದೇಶದಲ್ಲೇ ಅಂತಹ ವಾಸಯೋಗ್ಯ ನಗರಗಳು ಹುಡುಕಾಡಿದರೂ ಸಿಗಲಾರವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT