ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ಸ್‌ ಟ್ರೋಫಿ ಅಂಗಳದಲ್ಲಿ ಶಾಂತಿಯ ಪಾರಿವಾಳ ಹಾರಾಡಲಿ

Last Updated 31 ಮೇ 2017, 19:30 IST
ಅಕ್ಷರ ಗಾತ್ರ

ಮನುಕುಲದಲ್ಲಿ  ಶಾಂತಿ, ಸ್ನೇಹದ ಅಂತರವಾಹಿನಿಗೆ ಜೀವಜಲದಂತೆ ಕ್ರೀಡಾಕೂಟಗಳು ಪ್ರವಹಿಸುತ್ತಿವೆ. ಒಲಿಂಪಿಕ್ಸ್‌, ವಿಶ್ವಕಪ್‌ ಫುಟ್‌ಬಾಲ್‌  ಕೂಟಗಳ ಆಶಯವೇ ಇದು. ಕ್ರಿಕೆಟ್‌ ಇವತ್ತು ಜಗತ್ತಿನ ಅನೇಕ ದೇಶಗಳಲ್ಲಿ ಜನಪ್ರಿಯತೆ ಪಡೆದಿದೆ. ಭಾರತ, ಪಾಕಿಸ್ತಾನಗಳಲ್ಲಂತೂ ಈ ಕ್ರೀಡೆಗೆ ಅಪಾರ ಜನಮನ್ನಣೆ ಇದೆ. ಈ ಎರಡೂ ದೇಶಗಳ ಕ್ರಿಕೆಟಿಗರು ಉಭಯ ದೇಶಗಳಲ್ಲೂ ಚಿರಪರಿಚಿತರು. ಎರಡೂ ದೇಶಗಳ ನಡುವಣ ರಾಜಕಾರಣ ಅದೆಷ್ಟೇ ಹದಗೆಟ್ಟಿದ್ದರೂ, ಹಿಂದೆ ಎರಡೂ ದೇಶಗಳ ನಡುವೆ ಹಾಕಿ, ಕ್ರಿಕೆಟ್‌ಗೆ ಸಂಬಂಧಿಸಿದಂತೆ ಹತ್ತು ಹಲವು ಪಂದ್ಯಗಳು ನಡೆಯುತ್ತಿದ್ದವು. ಆದರೆ ಈಚೆಗಿನ ದಿನಗಳಲ್ಲಿ ಇಂತಹ ಕ್ರೀಡಾ ಸಂಬಂಧಗಳ ಮೇಲೂ ಕರಿಮೇಘ ಕವಿಯುತ್ತಿದೆ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಹಾಕಿ ಸರಣಿಗಳು ನಿಂತು ಹೋಗಿವೆ. ಚೆನ್ನೈಯಲ್ಲಿ ಈಚೆಗೆ ನಡೆದ ಏಷ್ಯನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಕಿಸ್ತಾನದ ಆಟಗಾರರಿಗೆ ಪಾಲ್ಗೊಳ್ಳಲಾಗಲಿಲ್ಲ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಜತೆಗಿನ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಸಂಬಂಧ ಹದಗೆಟ್ಟಿದೆ. 2015ರಿಂದ 23ರವರೆಗೆ ನಿರ್ದಿಷ್ಟ ಸಂಖ್ಯೆಯ ಟೆಸ್ಟ್‌ ಮತ್ತು ಏಕದಿನ ಸರಣಿ ನಡೆಯಬೇಕೆಂದು ಹಿಂದೆ ಒಪ್ಪಂದವಾಗಿತ್ತು. ಆದರೆ ಒಪ್ಪಂದ ಬಹುತೇಕ ಮುರಿದು ಬಿದ್ದಿದೆ. ಎರಡೂ ದೇಶಗಳ ನಡುವಣ ಗಡಿ ಭಾಗದಲ್ಲಿ ಸದಾ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ರಾಜಕೀಯ ಸಂಬಂಧ ಕೂಡಿ ಬರುತ್ತಲೇ ಇಲ್ಲ. ಇಂತಹದ್ದೊಂದು ಪ್ರತಿಕೂಲ ಸ್ಥಿತಿ ಎರಡೂ ದೇಶಗಳ ನಡುವಣ ಕ್ರೀಡಾ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಿದೆ. ಇದೀಗ ಈ ಎರಡೂ ದೇಶಗಳು ಇಂಗ್ಲೆಂಡ್‌ನಲ್ಲಿ ಗುರುವಾರ ಆರಂಭವಾಗಲಿರುವ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಆಡಲಿವೆ. ಈ ಟೂರ್ನಿಯಲ್ಲಿ ಈ ಎರಡೂ ದೇಶಗಳಲ್ಲದೆ ಆಸ್ಟ್ರೇಲಿಯಾ, ಶ್ರೀಲಂಕಾ, ಬಾಂಗ್ಲಾದೇಶ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ತಂಡಗಳು ಪಾಲ್ಗೊಳ್ಳಲಿವೆ. ಜಗತ್ತಿನ ಕ್ರಿಕೆಟ್‌ಪ್ರೇಮಿ ದೇಶಗಳೆಲ್ಲವೂ  18 ದಿನಗಳ ಕಾಲ  ಚಾಂಪಿಯನ್ಸ್‌ ಟ್ರೋಫಿಯ ಧ್ಯಾನ ನಡೆಸಲಿವೆ. ಭಯೋತ್ಪಾದಕ ಚಟುವಟಿಕೆಗಳ ಆತಂಕದಲ್ಲಿ ತಲ್ಲಣಿಸಿರುವ ಅನೇಕ ದೇಶಗಳಲ್ಲಿ ಈ ಮಿನಿ ವಿಶ್ವಕಪ್‌ ಪಂದ್ಯಗಳ ಪೈಪೋಟಿ  ಜನರನ್ನು ಹೊಸ ಚಿಂತನೆಗೆ ಹಚ್ಚಲು ಸಾಧ್ಯವಿದೆ.

ಭಾರತದ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಈಚೆಗಿನ ದಿನಗಳಲ್ಲಿ ನಿರಂತರವಾಗಿ ಕಿರಿಕಿರಿ ಉಂಟು ಮಾಡುತ್ತಿದೆ. ಉಗ್ರರಿಗೆ ಕುಮ್ಮಕ್ಕು ಕೊಟ್ಟು ಕಾಶ್ಮೀರದಲ್ಲಿ ಅಶಾಂತಿಗೆ ಕಾರಣವಾಗಿದೆ.  ಆದರೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯವರು ದುಬೈನಲ್ಲಿ ಎರಡು ದಿನಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ‘ಎರಡೂ ದೇಶಗಳ ನಡುವೆ ರಾಜಕೀಯ ಸಂಬಂಧ ಸರಿ ಇಲ್ಲ ಎಂಬುದು ಗೊತ್ತಿದ್ದೂ ಬಿಸಿಸಿಐ ಇಂತಹ ಸಭೆ ನಡೆಸಿದ್ದು ಸರಿಯಲ್ಲ’ ಎಂದು ಕೇಂದ್ರ ಕ್ರೀಡಾ ಸಚಿವ ವಿಜಯ್‌ ಗೋಯಲ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದ ಜತೆಗೆ ಕ್ರಿಕೆಟ್‌ ಚಟುವಟಿಕೆಗಳು ನಡೆಯುತ್ತಿಲ್ಲವಾದ್ದರಿಂದ ಪಾಕಿಸ್ತಾನದ ಕ್ರಿಕೆಟ್‌ ಮಂಡಳಿಯ ಆರ್ಥಿಕ ಶಕ್ತಿ ಸಂಪೂರ್ಣ ಕುಂದಿದೆ ಎನ್ನುವುದೂ ನಿಜ. ಹೀಗಾಗಿ ಬಿಸಿಸಿಐ ಜತೆಗೆ ಉತ್ತಮ ಬಾಂಧವ್ಯ ಇರಿಸಿಕೊಳ್ಳಲು ಪಿಸಿಬಿ ತುದಿಗಾಲಲ್ಲಿ ನಿಂತಿದೆ. ಆದರೆ  ಭಾರತದ ಗಡಿಯಲ್ಲಿ ಉಗ್ರರ ಜತೆಗೆ ಕೈಗೂಡಿಸಿರುವ ಪಾಕ್‌ ಸೈನಿಕರು ನಮ್ಮ ಭೂಪ್ರದೇಶದಲ್ಲಿ ಕಗ್ಗೊಲೆಗಳನ್ನು ನಡೆಸುತ್ತಿದ್ದಾರೆನ್ನುವುದು ಜಗಜ್ಜಾಹೀರಾಗಿದೆ. ಇಂತಹ ಸಂದರ್ಭದಲ್ಲಿ ಭಾರತ ಹೇಗೆ ಆಟದಂಗಣದಲ್ಲಿ ಪಾಕಿಸ್ತಾನದ ಜತೆಗೆ ಕೈಜೋಡಿಸಲು ಸಾಧ್ಯ  ಎಂದು ವಿಜಯ್‌ ಗೋಯಲ್‌ ಅವರು ಪ್ರಶ್ನಿಸಿದ್ದಾರೆ. ಈ ಬೆಳವಣಿಗೆ ವಿಷಾದನೀಯ. ಎರಡೂ ದೇಶಗಳ ನಡುವಣ ಕ್ರೀಡಾ ಸಂಬಂಧ ಸುಧಾರಿಸಬೇಕೆಂದರೆ ಪಾಕಿಸ್ತಾನದ ಆಡಳಿತಗಾರರ ಧೋರಣೆಯಲ್ಲಿಯೂ ಬದಲಾವಣೆ ಆಗಲೇಬೇಕಿದೆ.  

ಮತೀಯ ವಿಕೃತ ಸ್ವರೂಪ, ಜನಾಂಗೀಯ ಕ್ರೌರ್ಯ, ಜಾತೀಯತೆಗಳನ್ನು ಮೆಟ್ಟಿ ನಿಂತು ಸರ್ವ ಜನರ ಸಮಾನತೆಯ ತೊಟ್ಟಿಲಾಗಿ ಇರಬೇಕೆನ್ನುವುದೇ ಒಲಿಂಪಿಕ್ಸ್‌ ಮೌಲ್ಯ. ಕ್ರೀಡಾ ಕೂಟಗಳ ಆಶಯ. ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ನ ಮೂಲ ಆಶಯವೂ ಇದೇ ಆಗಿದೆ. ಈ ಟೂರ್ನಿಯ ಇತಿಹಾಸದಲ್ಲಿ ಇಂತಹ ಮೌಲ್ಯಗಳಿಗೆ ಧಕ್ಕೆ ಉಂಟಾಗಿರುವ ಪ್ರಸಂಗಗಳೂ ಇಲ್ಲದಿಲ್ಲ. ದಶಕದ ಹಿಂದೆ ಇದೇ ಕೂಟಕ್ಕೆ ಭಾರತ ಆತಿಥ್ಯ ವಹಿಸಿತ್ತು. ಆಗ ಟ್ರೋಫಿ ಗೆದ್ದ ಆಸ್ಟ್ರೇಲಿಯಾದ ಆಟಗಾರರು ಬಿಸಿಸಿಐಯ ಆಗಿನ ಅಧ್ಯಕ್ಷ ಶರದ್‌ ಪವಾರ್‌ ಎದುರು ಅಗೌರವದಿಂದ ನಡೆದುಕೊಂಡಿದ್ದರು. ಆಗ ಇಡೀ ಕ್ರೀಡಾ ಲೋಕವೇ ಅದನ್ನು ಖಂಡಿಸಿತ್ತು. ಆಸ್ಟ್ರೇಲಿಯಾದ ಆಟಗಾರರ ಅಹಂಕಾರದ ನಡೆಯನ್ನು ಟೀಕಿಸಿತ್ತು. ಅದೇ  ಸಂದರ್ಭದಲ್ಲಿ ಪಾಕಿಸ್ತಾನದ ಶೋಯಬ್‌ ಅಖ್ತರ್‌ ಮತ್ತು ಮಹಮ್ಮದ್‌ ಆಸೀಫ್‌ ಅವರು ‘ನ್ಯಾಂಡೊಲೊನ್‌’ ಉದ್ದೀಪನಾ ಮದ್ದು ಸೇವಿಸಿದ್ದು ಪತ್ತೆಯಾಗಿತ್ತು. ಪಾಕ್‌ ಕ್ರಿಕೆಟ್‌ ಮಂಡಳಿಯೂ ಕಠಿಣ ಕ್ರಮ ಕೈಗೊಂಡಿತ್ತು. ಆದರೂ ಆ ದೇಶದ ಆಟಗಾರರ ಕ್ರೀಡಾ ಸ್ಫೂರ್ತಿಗೆ ಪೂರಕವಲ್ಲದ ನಡೆಯನ್ನು ಕ್ರಿಕೆಟ್‌ ರಂಗ ಖಂಡಿಸಿತ್ತು. ಈ ಸಲ ಐಸಿಸಿ ನೀಡಿದ್ದ ಗಡುವು ಮುಗಿದ ನಂತರ ಬಿಸಿಸಿಐ ತನ್ನ ತಂಡದ ಆಟಗಾರರ ಹೆಸರನ್ನು ಪ್ರಕಟಿಸಿದ್ದೂ ವಿವಾದವಾಗಿದೆ. ತನ್ನ ಆದಾಯದ ಒಟ್ಟು ಮೊತ್ತವನ್ನು ಸಮನಾಗಿ ಎಲ್ಲಾ ಸದಸ್ಯ ದೇಶಗಳಿಗೂ ಹಂಚಬೇಕೆಂಬ ಐಸಿಸಿ ನಿಲುವನ್ನು ಬಿಸಿಸಿಐ ವಿರೋಧಿಸಿತ್ತು. ಇದರಿಂದ ಬಿಸಿಸಿಐಗೆ ಭಾರೀ ನಷ್ಟ ಉಂಟಾಗುತ್ತದೆ ಎನ್ನುವುದು ಸತ್ಯ.

ಆದರೆ ಇಂತಹ ಲಾಭ ನಷ್ಟಗಳ ಲೆಕ್ಕಾಚಾರಕ್ಕಿಂತ ಭಾರತ ಆ ಟೂರ್ನಿಯಲ್ಲಿ ಆಡುವುದು ಮುಖ್ಯ ಎಂದು ಕೊನೆಗೂ ಬಿಸಿಸಿಐ ನಿರ್ಧರಿಸಿತು. ಕ್ರಿಕೆಟ್‌ ಲೋಕದಲ್ಲಿ ಭಾರತಕ್ಕೆ ಆಗಲಿದ್ದ ಮುಜುಗರ ಇದರಿಂದ ತಪ್ಪಿದಂತಾಯಿತು. ಇಂತಹ ಹತ್ತು ಹಲವು ಏಳುಬೀಳುಗಳ ನಡುವೆ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಗರಿಗೆದರಲಿದೆ. ಉತ್ತರ ಕೊರಿಯಾ, ಮಧ್ಯಪ್ರಾಚ್ಯ ಸೇರಿದಂತೆ ಹಲವು ಕಡೆ ಉಂಟಾಗಿರುವ ಅಶಾಂತಿಯ  ನಡುವೆಯೂ ಚಾಂಪಿಯನ್ಸ್‌ ಟ್ರೋಫಿಯ ಅಂಗಣದಲ್ಲಿ ಶಾಂತಿಯ ಪಾರಿವಾಳಗಳು ಹಾರಾಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT