ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯಗೆ ಚುಕ್ಕಾಣಿ

Last Updated 31 ಮೇ 2017, 20:07 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಎದುರಿಸಲು ನಿರ್ಧರಿಸಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ), ಜಿ.ಪರಮೇಶ್ವರ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿ ಬುಧವಾರ ಅಧಿಕೃತ ಆದೇಶ ಹೊರಡಿಸಿದೆ.

ಇತ್ತೀಚೆಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿರುವ ಸಿದ್ದರಾಮಯ್ಯ ಅವರ ಮುಂದಾಳತ್ವಕ್ಕೇ ಒಲವು ತೋರಿರುವ ವರಿಷ್ಠರು, ಸಾಮೂಹಿಕ ನಾಯಕತ್ವದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

‘ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಿದ್ದರಾಮಯ್ಯ ಅವರ ನೇತೃತ್ವವೇ ಮುಖ್ಯ’  ಎಂಬುದನ್ನು ಲಿಖಿತ ಆದೇಶ ಪತ್ರದ ಆರಂಭದಲ್ಲೇ ಸ್ಪಷ್ಟಪಡಿಸಿರುವ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಈ ಕುರಿತು ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ದೊರೆಯದಂತೆ ನೋಡಿಕೊಂಡಿದ್ದಾರೆ.

ರಾಜೀನಾಮೆಗೆ ಸೂಚನೆ: ತಕ್ಷಣವೇ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ರಾಜ್ಯದಾದ್ಯಂತ ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಪರಮೇಶ್ವರ್‌ ಅವರಿಗೆ ಸೂಚಿಸಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್‌ ಸದಸ್ಯ ಎಸ್‌.ಆರ್. ಪಾಟೀಲ ಅವರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿ, ಉತ್ತರ ಕರ್ನಾಟಕದ ಜವಾಬ್ದಾರಿಯನ್ನು ವಹಿಸಲಾಗಿದೆ.

ಈ ಮೂಲಕ ಪಾಟೀಲ ಅವರನ್ನು ಬೆಂಬಲಕ್ಕೆ ನಿಂತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯಕ್ಕೂ ಆದ್ಯತೆ ನೀಡಲಾಗಿದೆ.

ಈಗಾಗಲೇ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ದಿನೇಶ ಗುಂಡೂರಾವ್‌ ಅವರಿಗೆ ರಾಜ್ಯದ ದಕ್ಷಿಣ ಭಾಗದ ಹೊಣೆಯನ್ನು ನೀಡಲಾಗಿದೆ.

ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ವಿಧಾನಸಭೆ ಚುನಾವಣೆಯ ಪ್ರಚಾರ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ನೇಮಿಸುವ ಮೂಲಕ
ಅಸಮಾಧಾನ ಭುಗಿಲೇಳದಂತೆ ನೋಡಿಕೊಳ್ಳಲಾಗಿದೆ.

ಸಣ್ಣ ಕೈಗಾರಿಕೆ ಸಚಿವ, ಸೋದರ ರಮೇಶ ಜಾರಕಿಹೊಳಿ ಅವರೊಂದಿಗಿನ ಭಿನ್ನಾಭಿಪ್ರಾಯವನ್ನು ಹೊರಹಾಕಿ, ಪಕ್ಷ ತ್ಯಜಿಸುವ ಇಂಗಿತ ವ್ಯಕ್ತಪಡಿಸಿದ್ದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಎಐಸಿಸಿ ಕಾರ್ಯದರ್ಶಿ ಸ್ಥಾನ ನೀಡಿ ಗೊಂದಲ ನಿವಾರಿಸಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮತ್ತೊಬ್ಬ ಆಕಾಂಕ್ಷಿಯಾಗಿದ್ದ ದಲಿತ ಸಮುದಾಯದ ಮುಖಂಡ, ಕೋಲಾರ ಸಂಸದ ಕೆ.ಎಚ್‌. ಮುನಿಯಪ್ಪ ಅವರನ್ನು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ)ಯ ವಿಶೇಷ ಆಹ್ವಾನಿತರನ್ನಾಗಿ ನೇಮಿಸಿ ಎಐಸಿಸಿಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಪ್ರಕಟಣೆ ಮೂಲಕ
ತಿಳಿಸಿದ್ದಾರೆ.

ತಿಂಗಳ ಹಿಂದಷ್ಟೇ ರಾಜ್ಯ ಉಸ್ತುವಾರಿ ಸ್ಥಾನದಿಂದ ದಿಗ್ವಿಜಯ್‌ ಸಿಂಗ್‌ ಅವರ ಸ್ಥಾನಕ್ಕೆ ಕೆ.ಸಿ. ವೇಣುಗೋಪಾಲ್‌ ಅವರನ್ನು ನೇಮಿಸಿ ರಾಜ್ಯದಲ್ಲಿನ ಪಕ್ಷದ ಸ್ಥಿತಿಗತಿ ಕುರಿತ ವರದಿ ತರಿಸಿಕೊಂಡಿದ್ದ ಹೈಕಮಾಂಡ್‌, ಪಕ್ಷದ ಪ್ರಮುಖ ಮುಖಂಡರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿತ್ತು.

ಕಾಂಗ್ರೆಸ್ ಲೆಕ್ಕಾಚಾರದ ನಡಿಗೆ
ನವದೆಹಲಿ: ರಾಜ್ಯ ಕಾಂಗ್ರೆಸ್‌ ಅಂಗಳದಲ್ಲಿ ಕಳೆದ ಒಂದು ತಿಂಗಳಿಂದ ಮುಂದುವರಿದಿದ್ದ ಪ್ರಹಸನ ಅಂತ್ಯಗೊಂಡಿದೆ. ಆರು ವರ್ಷಗಳ ಹಿಂದೆ ಜಿ.ಪರಮೇಶ್ವರ್‌ ಅವರ ಹೆಗಲೇರಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನವು, ಚುನಾವಣೆಯ ವರ್ಷದಲ್ಲಿ ಸ್ಥಾನಪಲ್ಲಟ ಮಾಡದೆ ಅಲ್ಲೇ ಉಳಿದಿದೆ.

ಯಾರಿಗೆ ಯಾವ ಸ್ಥಾನ?

* ಜಿ.ಪರಮೇಶ್ವರ್‌: ಕೆಪಿಸಿಸಿ ಅಧ್ಯಕ್ಷ
* ಎಸ್‌.ಆರ್. ಪಾಟೀಲ: ಕೆಪಿಸಿಸಿ ಕಾರ್ಯಾಧ್ಯಕ್ಷ (ಉತ್ತರ ಕರ್ನಾಟಕ ಹೊಣೆ)
* ದಿನೇಶ ಗುಂಡೂರಾವ್‌: ಕೆಪಿಸಿಸಿ ಕಾರ್ಯಾಧ್ಯಕ್ಷ (ದಕ್ಷಿಣ ಕರ್ನಾಟಕ ಹೊಣೆ)
* ಡಿ.ಕೆ. ಶಿವಕುಮಾರ್‌: ಪ್ರಚಾರ ಸಮಿತಿ ಮುಖ್ಯಸ್ಥ
* ಸತೀಶ ಜಾರಕಿಹೊಳಿ: ಎಐಸಿಸಿ ಕಾರ್ಯದರ್ಶಿ
* ಕೆ.ಎಚ್‌. ಮುನಿಯಪ್ಪ: ಸಿಡಬ್ಲ್ಯೂಸಿ ವಿಶೇಷ ಆಹ್ವಾನಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT