ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಗೆ ಇನ್ನೂ 20 ಬಸ್‌: ಸಚಿವ

ಉಡುಪಿ– ಶಿವಮೊಗ್ಗ ಬಸ್‌ಗೆ ಹಸಿರು ನಿಶಾನೆ; 55 ಪರ್ಮಿಟ್‌– 39 ಹೊಸ ಬಸ್‌
Last Updated 1 ಜೂನ್ 2017, 5:21 IST
ಅಕ್ಷರ ಗಾತ್ರ

ಉಡುಪಿ:  ಕೆಲವೇ ದಿನಗಳಲ್ಲಿ ಇನ್ನೂ 20 ಹೊಸ ಬಸ್‌ಗಳು ಉಡುಪಿಗೆ ಬರಲಿದ್ದು, ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಉಡುಪಿ– ಶಿವಮೊಗ್ಗ ಮಾರ್ಗದ ಹೊಸ ಬಸ್‌ಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿಯೇ ದಾಖಲೆ ಎಂಬಂತೆ ಹೊಸದಾಗಿ 55 ಪರ್ಮಿಟ್‌ಗಳನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ನೀಡಿತ್ತು. ಅದಕ್ಕೆ ಪೂರಕವಾಗಿ ಈಗಾಗಲೇ 39 ಹೊಸ ಬಸ್‌ಗಳು ಬಂದಿದ್ದು, ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿವೆ.

ಇನ್ನೂ 20 ಹೊಸ ಬಸ್‌ಗಳಿಗ ಬೇಡಿಕೆ ಸಲ್ಲಿಸಲಾಗಿದ್ದು ಅದರಲ್ಲಿ 10 ವಾಹನಗಳಿಗೆ ಕುಷನ್ ಅಳವಡಿಸುವ ಕೆಲಸ ನಡೆಯುತ್ತಿದೆ ಮತ್ತು 10 ಬಸ್‌ಗಳ ಕವಚ ನಿರ್ಮಾಣ ಕಾರ್ಯ (ಬಾಡಿ ಬಿಲ್ಡಿಂಗ್‌) ಪ್ರಗತಿಯಲ್ಲಿದೆ. ಹಳೆಯ ಬಸ್‌ಗಳನ್ನು ತೆಗೆದುಕೊಳ್ಳಿ ಎಂದಿದ್ದರು, ಆದರೆ ಹೊಸ ಬಸ್‌ಗಳೇ ಬೇಕು ಎಂದು ಕೇಳಿದ್ದರಿಂದ ಸ್ವಲ್ಪ ತಡವಾಗುತ್ತಿದೆ.

ಯಾವ ಮಾರ್ಗಕ್ಕಾಗಿ ಜನರಿಂದ ಬೇಡಿಕೆ ಬಂದಿದೆಯೋ ಮತ್ತು ಖಾಸಗಿ ಬಸ್‌ಗಳಿಗೆ ಒತ್ತಡ ಇರುವ ಮಾರ್ಗಗಳಲ್ಲಿ ಹೊಸ ಬಸ್‌ಗಳು ಸಂಚರಿಸಲಿವೆ. ಆಗುಂಬೆ ಮೂಲಕ ಶಿವಮೊಗ್ಗ– ಉಡುಪಿ ಮಾರ್ಗದಲ್ಲಿ ಬಸ್ಸಿನ ಅಗತ್ಯ ಇದೆ ಎಂದು ಜನರು ಮನವಿ ಮಾಡಿದ್ದರಿಂದ ಆರಂಭಿಸಲಾಗಿದೆ ಎಂದರು.

₹4 ಕೋಟಿ ವೆಚ್ಚದಲ್ಲಿ ಹಳೆಯ ಡಿಡಿಪಿಐ ಕಚೇರಿ ಜಾಗದಲ್ಲಿ ನರ್ಮ್‌ ಬಸ್‌ ನಿಲ್ದಾಣ ನಿರ್ಮಿಸಲಾಗುವುದು. ಬನ್ನಂಜೆಯ ನಾರಾಯಣ ಗುರು ಸಭಾ ಭವನದ ಎದುರು ₹30 ಕೋಟಿ ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನಿರ್ಮಾಣವಾಗಲಿದೆ.

ಮೊದಲು ಖಾಸಗಿ ಸಹಭಾಗಿತ್ವದಲ್ಲಿ ಈ ಬಸ್‌ ನಿಲ್ದಾಣ ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು, ಆದರೆ ಈಗ ಕೆಎಸ್‌ಆರ್‌ಟಿಸಿಯೇ ನಿರ್ಮಾಣ ಮಾಡಲಿದೆ. ಮಲ್ಪೆ ಮತ್ತು ಮಣಿಪಾಲದಲ್ಲಿಯೂ ಹೊಸ ನಿಲ್ದಾಣ ನಿರ್ಮಿಸಲಾಗುವುದು ಎಂದರು. ಕಾಂಗ್ರೆಸ್‌ ಮುಖಂಡರಾದ ಜನಾರ್ದನ ತೋನ್ಸೆ, ಚಂದ್ರಿಕಾ ಶೆಟ್ಟಿ ಇದ್ದರು.

****
‘8ತಿಂಗಳಲ್ಲಿ 65 ನರ್ಮ್ ಬಸ್‌ ರಸ್ತೆಗೆ’
ಚೇರ್ಕಾಡಿ(ಬ್ರಹ್ಮಾವರ) :
  ಉಡುಪಿ ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕಳೆದ 8ತಿಂಗಳಲ್ಲಿ 65ನರ್ಮ್‌ ಬಸ್‌ಗಳ ಸಂಚಾರ ಆರಂಭಿಸಿವೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಬ್ರಹ್ಮಾವರ ಬಳಿಯ ಪೇತ್ರಿಯಲ್ಲಿ ಬುಧವಾರ ಅವರು ಹೆಬ್ರಿ ಉಡುಪಿ ಮಾರ್ಗದಲ್ಲಿ ಸಂಚರಿಸುವ ನರ್ಮ್ ಬಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ನಗರ ಪ್ರದೇಶಗಳಲ್ಲಿ 12 ಮತ್ತು 53ಬಸ್‌ಗಳು ಗ್ರಾಮಾಂತರ ಭಾಗದಲ್ಲಿ ಸಂಚಾರ ಆರಂಭಿಸಿವೆ.

ನರ್ಮ್‌ ಬಸ್‌ಗಳಿಂದ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಅನುಕೂಲವಾಗಿದೆ. 10ತಿಂಗಳ ಪಾಸ್‌ ಮಾಡಿಕೊಂಡು ದಿನಕ್ಕೆ ಎಷ್ಟು ಬಾರಿಯಾದರೂ ಶಾಲೆಗೆ ಹೋಗಬಹುದಾಗಿದೆ. ಪ್ರಾಥಮಿಕ ಶಾಲೆಗೆ ಹೋಗುವ ವಿದ್ಯಾರ್ಥಿಗಳು  ರೂ.130, ಪ್ರೌಢಶಾಲೆಯ ವಿದ್ಯಾರ್ಥಿನಿಯರು ರೂ.400, ಹುಡುಗರಿಗೆ ರೂ.600, ಪದವಿ ಪೂರ್ವ ವಿದ್ಯಾರ್ಥಿಗಳು 1,100, ಪದವಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ರೂ.1,400 ನೀಡಿ ಬಸ್‌ನಲ್ಲಿ ಸಂಚರಿಸಬಹುದಾಗಿದೆ.

ಇದಲ್ಲದೇ ಹಿರಿಯ ನಾಗರಿಕರಿಗೆ ಶೇ.25ರಿಯಾಯಿತಿ ದರದಲ್ಲಿ ಮತ್ತು ಅಂಗವಿಕಲರು ಸಂಪೂರ್ಣ ಉಚಿತವಾಗಿ ಸಂಚರಿಸಬಹುದು ಎಂದು ಅವರು ತಿಳಿಸಿದರು. ಉಡುಪಿ ಜಿಲ್ಲೆಗೆ ಇನ್ನೂ 20ಹೊಸ ಬಸ್‌ಗಳು ಬರಲಿವೆ. 

ಜನರ ಸಲಹೆಗಳನ್ನು ಸ್ವೀಕರಿಸಿ ಬಸ್‌ಗಳ ಸಮಯವನ್ನು ನಿಗದಿ ಪಡಿಸಲು ನಿರ್ಣಯಿಸಲಾಗಿದೆ ಮತ್ತು ಗ್ರಾಮಸ್ಥರ ಬೇಡಿಕೆಯಿದ್ದಲ್ಲಿ ಬಸ್‌ಗಳನ್ನು ಆ ಮಾರ್ಗಗಳಲ್ಲಿ ಓಡಿಸಲಾಗುವುದು ಎಂದರು.

ಸಾರಿಗೆ ಅಧಿಕಾರಿ ಉದಯ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಅಕ್ರಮ ಸಕ್ರಮ ಅಧಿಕಾರಿ ಮೈರ್ಮಾಡಿ ಅಶೋಕ್ ಕುಮಾರ್ ಶೆಟ್ಟಿ, ಚೇರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
****
2 ಬಸ್‌ಗಳು 5 ಬಾರಿ ಸಂಚಾರ
ಹೆಬ್ರಿ, ಸಂತೆಕಟ್ಟೆ, ಪೇತ್ರಿ, ಬ್ರಹ್ಮಾವರ ಮಾರ್ಗದ ಮೂಲಕ ಸದ್ಯ ಉಡುಪಿಗೆ 2 ಬಸ್‌ಗಳು ತಲಾ 5ಬಾರಿ ಸಂಚರಿಸಲಿವೆ. ಹೊನ್ನಾಳ ಮತ್ತು ಕೊಕ್ಕರ್ಣೆಯಿಂದಲೂ ನೂತನ ನರ್ಮ್‌ ಬಸ್‌ಗಳಿಗೆ ಚಾಲನೆ ನೀಡಲಾಯಿತು.

ಸಮಯ: ನೂತನ ಬಸ್‌ಗಳು ಉಡುಪಿಯಿಂದ 7.15, 11.10, 12.45, 5.45 ಮತ್ತು ಹೆಬ್ರಿಯಿಂದ ಬೆಳಿಗ್ಗೆ 9, 12.45 ಮತ್ತು 4ಗಂಟೆಗೆ ಸಂಚರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT