ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಬರಹಗಾರರ ಮಾರ್ಗದರ್ಶಕ ಸಿಂಪಿ

ಬದುಕಿನ ಉದ್ದಕ್ಕೂ ಕನ್ನಡ ಸೇವೆ ಮಾಡಿದ ಸಾಹಿತಿ, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃಷಿ
Last Updated 1 ಜೂನ್ 2017, 11:02 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ಹಿರಿಯ ತಲೆಮಾರು ಹಾಗೂ ಉದಯೋನ್ಮುಖ ಸಾಹಿತಿಗಳ ನಡುವೆ ಕೊಂಡಿಯಂತಿದ್ದ ಪ್ರೊ. ವೀರೇಂದ್ರ ಸಿಂಪಿ ಬುಧವಾರ ಕೊನೆಯು ಸಿರೆಳೆದಿದ್ದಾರೆ. ಈ ಮೂಲಕ ಜಿಲ್ಲೆಯ ಸಾಹಿತ್ಯ ಲೋಕದ ಕೊಂಡಿ ಯೊಂದು ಕಳಚಿ ಬಿದ್ದಿದೆ.

33 ವರ್ಷಗಳ ಕಾಲ ಬೀದರ್‌ನಲ್ಲಿ ನೆಲೆಯೂರಿ ಅವರು ಸಾಹಿತ್ಯ ಕೃಷಿಯನ್ನು ಅಷ್ಟೇ ಮಾಡಲಿಲ್ಲ;ಸಾಹಿತ್ಯದ ಸಾವಿ ರಾರು ವಿದ್ಯಾರ್ಥಿಗಳನ್ನೂ  ಸೃಷ್ಟಿಸಿದ್ದರು. ಸಿಂಪಿ ಅವರು ವೃತ್ತಿಯಿಂದ ಪ್ರಾಧ್ಯಾಪಕರಾಗಿದ್ದರೂ ಪ್ರವೃತ್ತಿಯಿಂದ ಸಾಹಿತಿಯಾಗಿದ್ದರು.

1966ರಿಂದ 2015ರ ವರೆಗೂ ಸಾಹಿತ್ಯದ ಎಲ್ಲ  ಪ್ರಕಾರಗಳಲ್ಲಿ ಕೃಷಿ ಮಾಡಿದ್ದರು. ಲಲಿತ ಪ್ರಬಂಧ, ವಿಮರ್ಶೆ, ಸಮೀಕ್ಷೆ, ಜೀವನ ಚರಿತ್ರೆ, ವಚನ ಸಾಹಿತ್ಯ ಅಂಕಣ ಬರಹಗಳ ಮೂಲಕ ನಾಡಿನ ಸಾಹಿತಿಗಳ ಗಮನ ಸೆಳೆದಿದ್ದರು.

ಸಾಹಿತ್ಯ ಕೃಷಿಯಲ್ಲಿ ತೊಡಗಿಸಿ ಕೊಳ್ಳುವ ಜತೆಗೆ ಉದಯೋನ್ಮುಖ ಬರಹಗಾರರಿಗೂ ಮಾರ್ಗದರ್ಶನ ನೀಡುತ್ತಿದ್ದರು. ಅವರ ಬರಹಗಳು ಬೀದರ್‌ ಜಿಲ್ಲೆಯ ಸಾಹಿತ್ಯ ಲೋಕದಲ್ಲಿ ವಿಶೇಷ ಛಾಪು ಮೂಡಿಸಿವೆ. ಸಿಂಪಿ ಅವರು ಬರೆದ ‘ಭಾವ ಮೈದುನ’ ಪ್ರಬಂಧ 1981ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿದೆ.

ಸಿಂಪಿ ಅವರು 1997ರಲ್ಲಿ ಬೀದರ್‌ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ 2001ರಲ್ಲಿ  ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾ ಧ್ಯಕ್ಷರಾಗಿದ್ದರು.  ಅವರಿಗೆ 2014ರ ವರೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿರಲಿಲ್ಲ. ಜಿಲ್ಲೆಯ ಸಾಹಿತಿಗಳು ಹಾಗೂ ಅಭಿಮಾನಿಗಳು ಸರ್ಕಾರದ ಮೇಲೆ ಒತ್ತಡ ತಂದು 2015ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬರುವಂತೆ ಮಾಡಿದ್ದರು.

ವೀರೇಂದ್ರ, 1955ರಲ್ಲಿ ಚಡಚಣ ಪ್ರೌಢ ಶಾಲೆಯಲ್ಲಿದ್ದಾಗ ಬರೆದಿದ್ದ ಮೊದಲ ಸಣ್ಣ ಕತೆ ‘ಖೊಟ್ಟಿ ನಾಣ್ಯ’ ಹಸ್ತಾಕ್ಷರದ ಶಾಲಾ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. 1956ರಲ್ಲಿ ‘ಏಕಲವ್ಯ’ ಹಿಂದಿ ಏಕಾಂಕ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು. ಅದು ರಂಗಭೂಮಿಯ ಮೇಲೆ ಪ್ರದರ್ಶನ ಸಹ ಕಂಡಿತು. 1961ರಿಂದ 1964ರ ವರೆಗೆ ಅವರ ಅನೇಕ ಲೇಖನಗಳು ದಿನ ಪತ್ರಿಕೆ ಹಾಗೂ ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು.

1966ರಲ್ಲಿ ಅರವಿಂದ ಬರೆದ ‘ELEMENTS OF YOGA’  ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ‘ಯೋಗಾರಂಭ’ ಪ್ರಕಟಿಸಿದರು. ‘ಕನ್ನಡಾನುವಾದಕಾಗದ ಚೂರು’, ‘ಭಾವ ಮೈದುನ’, ‘ಸ್ವಚ್ಛಂದ ಮನದ ಸುಳಿದಾಟ’, ‘ಇಂಡಿ ತಾಲ್ಲೂಕು ದರ್ಶನ’, ‘ಪರಿಸರ ಸ್ಪಂದನ’, ‘ಸಿಂಪಿ ಲಿಂಗಣ್ಣನವರ ಸಾಹಿತ್ಯ’, ‘ಮಾಸ್ತಿ ವೆಂಕಟೇಶ ಅಯ್ಯಂಗಾರ’, ‘ಸುಖ ಸಾಧನ’, ‘ಚೆನ್ನಬಸವಣ್ಣ’, ‘ಆರ್.ವಿ. ಬಿಡಪ’, ‘ಚನ್ನಬಸವಣ್ಣನವರ ವಚನಗಳು, ‘ಬೀದರ್ ಜಿಲ್ಲಾ ದರ್ಶನ’, ‘ಬೀದರ್ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು’, ‘ಬಣ್ಣಗಾರಿಕೆ ’, ‘ಜೀವನವೆಂದರೇನು ?’ ‘ಆಯ್ದಕ್ಕಿ ಮಾರಯ್ಯ’, ‘ಜೀವನ ಚರಿತ್ರೆ’, ‘ಮಾದಾರ ಚನ್ನಯ’, ‘ಬೆಳ್ಳಿ ನುಡಿಗಳು’, ‘ಸಿದ್ಧದ್ಧಾರೂಢ ಚರಿತ್ರೆ’, ‘ಸಿಂಪಿಲಿಂಗಣ್ಣ’ (ಜೀವನ ಚರಿತ್ರೆ), ‘ಬಸವ ಸಿರಿ’, ‘ಸಿಂಪಿ ಲಿಂಗಣ್ಣ ಸಮಗ್ರ ಜನಪದ ಸಂಪುಟ’, ‘ಶರಣರ ಆಯ್ದ ವಚನಗಳು’, ‘ಸಾಹಿತ್ಯ ಸೌರಭ’, ‘ಹತ್ತು ಪಾಶ್ಚಾತ್ಯ ಕಾದಂಬರಿಕಾರರ ಜೀವನ’, ‘ಬೆಳಕಿನ ಕಿರಣಗಳು’, ‘ಚಿಂತನೆಗಳು ಮತ್ತು ಸೂಕ್ತಿಗಳು’ ಸೇರಿ 37 ಕೃತಿಗಳನ್ನು ರಚಿಸಿದ್ದಾರೆ.

‘ಅವರ ಲಲಿತ ಪ್ರಬಂಧಗಳು ಜೀವನಾನುಭವದಿಂದ ಕೂಡಿವೆ. ಕಾಲ್ಪನಿಕವಾಗಿರದೆ ಬದುಕಿಗೆ ಹತ್ತಿರವಾಗಿವೆ. ಅವರು ಸಾಮಾಜಿಕ ವಿಡಂಬಣೆಗಳನ್ನು ಹಾಸ್ಯದ ಮೂಲಕ ಹೇಳುವ ಪ್ರವೃತ್ತಿ ಉಳ್ಳವರಾಗಿದ್ದರು’ ಎಂದು ಸಾಹಿತಿ ಡಾ. ಬಸವರಾಜ ಬಲ್ಲೂರ ಹೇಳುತ್ತಾರೆ.

‘ಸ್ವಚ್ಛಂದ ಮನದ ಸುಳಿದಾಟ’ ಲಲಿತ ಪ್ರಬಂಧವು ಗುಲಬರ್ಗಾ ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದ ಪದವಿಯ ಕಲಾ ವಿಭಾಗದಲ್ಲಿ 1984ರಿಂದ 1988ರ ವರೆಗೂ ಪಠ್ಯಪುಸ್ತಕದ ಭಾಗವಾಗಿತ್ತು. ‘ಚಹಾ ಹೋಟೆಲ್‌ಗಳು..’ ಪ್ರಬಂಧ  ಪ್ರಸ್ತುತ ದ್ವಿತೀಯ ಪಿಯುಸಿ ಪಠ್ಯದಲ್ಲಿದೆ.

ಸಿಂಪಿ ಅವರಿಗೆ ಪ್ರಭುರಾವ್ ಕಂಬಳಿವಾಲೆ ಪ್ರಶಸ್ತಿ,  ಗುಲಬರ್ಗಾ  ಲೇಖಕ ಬಳಗದಿಂದ ಕಾಯಕ ಸಮ್ಮಾನ ಪ್ರಶಸ್ತಿ, ಚನ್ನಬಸವ ಪಟ್ಟದ್ದೇವರ ಅನುಭವ ಮಂಟಪ ಪ್ರಶಸ್ತಿ, ಜನಸೇವಾ ಪ್ರತಿಷ್ಠಾನದ ಜನಸಿರಿ ಪ್ರಶಸ್ತಿ ಲಭಿಸಿವೆ.

****
ತ್ರಿಭಾಷಾ ಪ್ರವೀಣ ವೀರೇಂದ್ರ
ವಿಜಯಪುರ ಜಿಲ್ಲೆಯ ಚಡಚಣದಲ್ಲಿ ಲೇಖಕ ಸಿಂಪಿ ಲಿಂಗಣ್ಣ ಹಾಗೂ ಸೊಲಬವ್ವ  ದಂಪತಿಗೆ 1938ರ ಅಕ್ಟೋಬರ್‌ 18ರಂದು ಜನಿಸಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು 1962ರಲ್ಲಿ ಮಹಾರಾಷ್ಟ್ರದ ಸಾಂಗಲಿ ಕಾಲೇಜ್‌ನಲ್ಲಿ ಇಂಗ್ಲಿಷ್‌ ಉಪನ್ಯಾಸಕರಾಗಿ ಸೇವೆ ಆರಂಭಿಸಿದರು.

ಒಂದು ವರ್ಷ ಅಲ್ಲಿ ಕಾರ್ಯ ನಿರ್ವಹಿಸಿ ಬೀದರ್‌ಗೆ ಬಂದಿದ್ದರು. ಬೀದರ್‌ನ ಬಿ.ವಿ. ಭೂಮರೆಡ್ಡಿ ಕಾಲೇಜ್‌ನಲ್ಲಿ 1963ರಿಂದ 1996ರ ವರೆಗೆ 33 ವರ್ಷಗಳ ಕಾಲ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. 

ಮಾತೃ ಭಾಷೆ ಕನ್ನಡವಾಗಿದ್ದರೂ ವೃತ್ತಿ ಬದುಕಿಗೆ ಇಂಗ್ಲಿಷ್‌ ಅನ್ನು ಆಯ್ಕೆ ಮಾಡಿಕೊಂಡಿದ್ದರು. ಬದುಕಿನ ಉದ್ದಕ್ಕೂ ಕನ್ನಡ ಸೇವೆ ಮಾಡಿದರು. ಹಿಂದಿ ಭಾಷೆಯನ್ನೂ ಬಲ್ಲವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT