ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ, ಹಿಂದಿ ಮತ್ತು ಇಂಗ್ಲಿಷ್

Last Updated 1 ಜೂನ್ 2017, 19:30 IST
ಅಕ್ಷರ ಗಾತ್ರ

ಕರ್ನಾಟಕದ ಪ್ರದೇಶ ಭಾಷೆ ಮತ್ತು ಆಡಳಿತ ಭಾಷೆ ಕನ್ನಡ. ಆದ್ದರಿಂದ ಕರ್ನಾಟಕದಲ್ಲಿಯ ಎಲ್ಲ ವ್ಯವಹಾರಗಳು, ಅವು ಸರ್ಕಾರದ್ದಾಗಿರಲಿ, ಸರ್ಕಾರೇತರವಾಗಿರಲಿ, ಅಲ್ಲಿ ಕನ್ನಡ ಭಾಷೆಗೆ ಆದ್ಯತೆ ಇರಬೇಕಾದುದು ನ್ಯಾಯಸಮ್ಮತ.  ಪ್ರಾದೇಶಿಕ ಭಾಷೆಗಳು ಬೆಳೆಯಲಿ, ಪ್ರಜಾರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ಪ್ರಜೆಗಳು ನೇರವಾಗಿ ಭಾಗಿಯಾಗುವಂತಾಗಲಿ ಎಂಬ ಉದ್ದೇಶದಿಂದಲೇ ಭಾಷಾವಾರು ಪ್ರಾಂತ್ಯಗಳ ರಚನೆಯಾಯಿತು. ವಿವಿಧತೆಯಲ್ಲಿಯೂ ಭಾರತೀಯತೆ ಪ್ರವಹಿಸುವಂತೆ ಮಾಡಬೇಕೆಂಬ ಉದ್ದೇಶವೂ ಇತ್ತು.

ಆಯಾ ರಾಜ್ಯದಲ್ಲಿಯ ಆಡಳಿತ ಭಾಷೆಯನ್ನು ಸಾರ್ವತ್ರಿಕವಾಗಿ ಅನುಷ್ಠಾನಗೊಳಿಸಬೇಕಾದುದು ರಾಜ್ಯ ಸರ್ಕಾರದ ಕರ್ತವ್ಯ. ರಾಜ್ಯ ಭಾಷೆಯು ಸಮರ್ಪಕವಾಗಿ ಬಳಕೆಯಾಗದಿರಲು ಅಲ್ಲಿನ ಜನರ ನಿರಭಿಮಾನ ಎಷ್ಟು ಕಾರಣವೋ, ಅದಕ್ಕಿಂತಲೂ ಹೆಚ್ಚು ರಾಜ್ಯ ಸರ್ಕಾರದ ಸಂಕಲ್ಪದ ಕೊರತೆ ಕಾರಣವೆಂದು ತಿಳಿಯಬೇಕಾಗುತ್ತದೆ.

ಕರ್ನಾಟಕ ಏಕೀಕರಣವಾಗಿ ಅರವತ್ತು ವರ್ಷಗಳಾಗಿ, ರಾಜ್ಯದಲ್ಲಿ ಕನ್ನಡಿಗರ ಸರ್ಕಾರವೇ ಇದೆ. ಇಲ್ಲಿ ಕರ್ನಾಟಕ ಭಾಷಾಭಿವೃದ್ಧಿಗೆ ಪ್ರಾಧಿಕಾರ, ಕನ್ನಡ ಕಾವಲು ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತುಗಳಿವೆ. ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಮನ್ನಣೆ ಸಿಕ್ಕಿದೆ, ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಇದೆ, ಪ್ರತಿವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದರೂ, ಎರಡು ವಿಶ್ವ ಕನ್ನಡ ಸಮ್ಮೇಳನ ನಡೆದಿದ್ದರೂ ಮತ್ತು ರಾಜ್ಯದಾದ್ಯಂತ ಕನ್ನಡ ಅಭಿಮಾನಿ ಬಳಗದವರ ಸಂಘಟನೆಗಳಿದ್ದರೂ ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಮುಚ್ಚುವಂಥ ಮತ್ತು ಕರ್ನಾಟಕದಲ್ಲಿ ಕನ್ನಡಿಗರೇ ಎರಡನೇ ದರ್ಜೆಯ ಪ್ರಜೆಗಳಾಗುವಂಥ ಪರಿಸ್ಥಿತಿ ಏಕೆ ಬಂದಿತೆಂಬುದರ ಬಗ್ಗೆ ಕನ್ನಡ ಭಾಷಾಪ್ರೇಮಿಗಳು ಆತ್ಮಾವಲೋಕನ  ಮಾಡಿಕೊಳ್ಳಬೇಕಿದೆ.

ಕರ್ನಾಟಕದಲ್ಲಿ ಕನ್ನಡ ಭಾಷೆಯ ಪ್ರಾಬಲ್ಯ ಕಡಿಮೆಯಿರುವುದರಿಂದ ಹೊರ ರಾಜ್ಯಗಳಿಂದ ಬರುವ ಜನರು ಕನ್ನಡ ಕಲಿಯುವುದರ ಬದಲು ತಮ್ಮ ಭಾಷೆಯನ್ನೇ ಉಪಯೋಗಿಸಿ ಅದೇ ವ್ಯಾವಹಾರಿಕ ಭಾಷೆಯಾಗುವಂತೆ ಮಾಡುತ್ತಾರೆ. ತ್ರಿಭಾಷಾ ಸೂತ್ರವು ಕೇಂದ್ರ ಸರ್ಕಾರದಿಂದ ತಾತ್ವಿಕವಾಗಿ ಸ್ವೀಕೃತವಾಗಿದ್ದರೂ ಅದನ್ನು ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಇದುವರೆಗೆ ನಡೆದಿಲ್ಲ ಮತ್ತು ಮುಂದೆಯೂ ನಡೆಯುವ ಲಕ್ಷಣ ಕಾಣುತ್ತಿಲ್ಲ. ಎಲ್ಲ ಪ್ರಕಾರದ ವಿದ್ಯಾಸಂಸ್ಥೆಗಳಲ್ಲಿ ಕನ್ನಡವೇ ಶಿಕ್ಷಣದ ಮಾಧ್ಯಮವಾಗಿರಬೇಕು. ಎರಡನೇ ಭಾಷೆಯಾಗಿ ಹಿಂದಿ ಅಥವಾ ನೆರೆ ರಾಜ್ಯದ ಭಾಷೆಯಿರಬೇಕು. ಇಂಗ್ಲಿಷ್ ಮೂರನೇ ಭಾಷೆಯಾಗಿರಬೇಕು. ಸಂವಿಧಾನದ ಪ್ರಕಾರ ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಸ್ವೀಕರಿಸಲಾಗಿದೆ. ಹಿಂದಿಯೇತರ ಭಾಷಿಕರ ಅನುಕೂಲಕ್ಕಾಗಿ ಇಂಗ್ಲಿಷ್ ಭಾಷೆಯನ್ನು ಸಹ ಹದಿನೈದು ವರ್ಷಗಳವರೆಗೆ ಹಿಂದಿಯೊಂದಿಗೆ ಸಹಆಡಳಿತ ಭಾಷೆಯನ್ನಾಗಿ ಇಟ್ಟುಕೊಳ್ಳಬೇಕೆಂದು ತೀರ್ಮಾನಿಸಲಾಯಿತು.

ಆಕಾಶವಾಣಿ ಕೇಂದ್ರಗಳು ಹಿಂದಿಯ ಪ್ರಚಾರಕ್ಕೇ ಇರುವಂಥ ಕೇಂದ್ರಗಳಾಗಿವೆ. ಕೇಂದ್ರ ಸರ್ಕಾರದೊಡನೆ ಇಂಗ್ಲಿಷ್‌ನಲ್ಲಿ ವ್ಯವಹರಿಸುವುದಕ್ಕೆ ಸಂವಿಧಾನದಲ್ಲಿ ಅವಕಾಶ ಇರುವುದರಿಂದ ಕರ್ನಾಟಕದಲ್ಲಿ ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಕಲಿಸುವುದಕ್ಕೆ ಅವಕಾಶವಿದೆ. ಇಂಗ್ಲಿಷನ್ನು ಇಂದು ಜಾಗತಿಕ ಭಾಷೆಯಾಗಿ ಉಪಯೋಗಿಸಲಾಗುತ್ತಿದೆ. ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಇಂಗ್ಲಿಷ್ ಅನಿವಾರ್ಯ ಎಂಬ ಪರಿಸ್ಥಿತಿ ಇದೆ.  ಆದಾಗ್ಯೂ ವಿಶ್ವಸಂಸ್ಥೆಯಲ್ಲಿ ಇಂಗ್ಲಿಷ್ ಭಾಷೆಯ ಜೊತೆಗೆ ಫ್ರೆಂಚ್, ರಷ್ಯನ್, ಚೀನೀ, ಜಪಾನೀ, ಜರ್ಮನ್ ಮತ್ತು ಹಿಂದಿ ಭಾಷೆಗಳ ಉಪಯೋಗಕ್ಕೂ ಅವಕಾಶವಿದೆ.

ಜಾಗತೀಕರಣದಿಂದಾಗಿ ವಾಣಿಜ್ಯ ವ್ಯವಹಾರಗಳ ಮೂಲಕ ವಿವಿಧ ಭಾಷೆಗಳನ್ನಾಡುವ ದೇಶಗಳೊಂದಿಗೆ ಸಂಪರ್ಕ ಬರುತ್ತಿದೆ. ಆದ್ದರಿಂದ ಭಾರತೀಯ ಭಾಷೆಯೊಂದಿಗೆ ಇಂಗ್ಲಿಷ್ ಹೊರತಾಗಿ ಬೇರೆ ಜಾಗತಿಕ ಭಾಷೆಗಳ ಜ್ಞಾನವೂ  ಅಷ್ಟೇ ಅಗತ್ಯವಾಗುತ್ತದೆ. ಆದ್ದರಿಂದ ಭಾರತೀಯ ವಿದ್ಯಾಸಂಸ್ಥೆಗಳಲ್ಲಿ ಇಂಗ್ಲಿಷ್ ಒಂದನ್ನೇ ಕಲಿಸುವ ಬದಲಾಗಿ ಇತರ ಅಂತರರಾಷ್ಟ್ರೀಯ ಭಾಷೆಗಳನ್ನೂ ಕಲಿಸುವುದು ಅಷ್ಟೇ ಮುಖ್ಯವಾಗುತ್ತದೆ. ಇಂದು ಇಂಗ್ಲಿಷ್ ಹೊರತಾಗಿ ಇತರೆ ವಿದೇಶಿ ಭಾಷೆಗಳನ್ನು ಕಲಿಸುವ ವ್ಯವಸ್ಥೆ ಅಲ್ಪ ಪ್ರಮಾಣದಲ್ಲಿದೆ. ಆ ಪ್ರಯತ್ನ ಹೆಚ್ಚಾಗಬೇಕು.

ಸಂಸತ್ತಿನ ರಾಷ್ಟ್ರಭಾಷಾ ಅನುಷ್ಠಾನ ಸಮಿತಿಯು ಮಾಡಿದ ಎಲ್ಲ 117 ಶಿಫಾರಸುಗಳನ್ನು ರಾಷ್ಟ್ರಪತಿಯವರು ಒಪ್ಪಿ, ಅದರ ಅನುಷ್ಠಾನಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ದೇಶದ ಎಲ್ಲ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯ ಮಾಡಬೇಕೆಂಬ ಶಿಫಾರಸನ್ನು ಮಾತ್ರ ಅವರು ಅದೃಷ್ಟವಶಾತ್ ತಡೆಹಿಡಿದಿದ್ದಾರೆ. ಕೇಂದ್ರೀಯ ಪರೀಕ್ಷಾ ಮಂಡಳಿಯ ಪಠ್ಯಪುಸ್ತಕವನ್ನು ಅನುಸರಿಸುವ ಎಲ್ಲ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯ ಕಲಿಕಾ ವಿಷಯವನ್ನಾಗಿ ಮಾಡಲಾಗಿದೆ. ಸರ್ಕಾರದ ಎಲ್ಲ ಸಾರ್ವಜನಿಕ ಸೇವೆಗಳಲ್ಲಿ ಹಿಂದಿಗೆ ಮಾತ್ರ ಆದ್ಯತೆ ಕೊಡುವ ಶಿಫಾರಸಿಗೂ ರಾಷ್ಟ್ರಪತಿಯವರ ಒಪ್ಪಿಗೆ ಸಿಕ್ಕಿದೆ. ರಾಷ್ಟ್ರಪತಿಯವರ ಅಧಿಕಾರಾವಧಿ ನಾಲ್ಕರಿಂದ ಐದು ತಿಂಗಳು ಮಾತ್ರ ಉಳಿದಿದ್ದಾಗ ಬಹುವ್ಯಾಪಕವಾಗಿ ದೇಶದ ಸಾಂಸ್ಕೃತಿಕ ಜೀವನದ ಮೇಲೆ ಗಾಢ ಪರಿಣಾಮವನ್ನು ಉಂಟುಮಾಡುವ ಇಂಥ ಶಿಫಾರಸುಗಳಿಗೆ  ಅವರು ಒಪ್ಪಿಗೆ ಕೊಡುವ ಮೊದಲು ಆ ಶಿಫಾರಸುಗಳ ಪರಿಣಾಮದ ಬಗ್ಗೆ ವಿಚಾರ ಮಾಡಬೇಕಿತ್ತು.

ರಾಷ್ಟ್ರಪತಿಯವರಿಂದ ಒಪ್ಪಿಗೆ ಪಡೆಯುವುದರ ಮೂಲಕ ಕೇಂದ್ರ ಸರ್ಕಾರ ದೇಶದ ಜನರಲ್ಲಿ ಅಸಂತೋಷ ಮೂಡುವುದಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಈ ಬಗ್ಗೆ ಅಸಂತೋಷವಿದೆ. ಬೇರೆ ರಾಜ್ಯಗಳಲ್ಲಿಯೂ  ಇರಬಹುದು. ಬೇರೆಬೇರೆ ರಾಜ್ಯಗಳಲ್ಲಿ ಜನರ ಆಕ್ರೋಶ ಯಾವ ರೀತಿ ಪ್ರಕಟಗೊಳ್ಳುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಅಲ್ಲಿಗೆ ಸತ್ಯಶೋಧನಾ ಸಮಿತಿಯನ್ನು ಕಳುಹಿಸಬೇಕು. ಹಿಂದಿಯೇತರ ರಾಜ್ಯಗಳಲ್ಲಿಯ ಭಾಷಾಪ್ರೇಮಿಗಳೊಂದಿಗೆ ಸಂಪರ್ಕ ಏರ್ಪಡಿಸಿಕೊಳ್ಳ ಬೇಕು. ಸಂಸತ್ತಿನ ರಾಷ್ಟ್ರಭಾಷಾ ಸಮಿತಿಯ ಆ ಎಲ್ಲ 117 ಶಿಫಾರಸುಗಳ ಪರಿಣಾಮ ಕನ್ನಡ ಭಾಷಾ ಆಡಳಿತ ಮತ್ತು ಶೈಕ್ಷಣಿಕ ವ್ಯವಸ್ಥೆಯ ಮೇಲೆ ಯಾವ ರೀತಿ ಆಗುತ್ತದೆ ಎಂಬ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಸ್ತೃತವಾಗಿ ಪರಿಶೀಲಿಸಬೇಕು. ಅದಕ್ಕನುಗುಣವಾಗಿ ರಾಜ್ಯದಲ್ಲಿ ಕನ್ನಡದ ಪ್ರಾಮುಖ್ಯ ಹೆಚ್ಚಾಗುವಂತೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಶಿಫಾರಸು ನೀಡಬೇಕು.

ಹಿಂದಿ ಭಾಷೆಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರುವುದನ್ನು ವಿರೋಧಿಸುತ್ತಿರುವ ಪಕ್ಷಗಳ ಜೊತೆ ಸಂಪರ್ಕವಿರಿಸಿಕೊಂಡು ರಾಜ್ಯದ ಪಕ್ಷಗಳು ಹೋರಾಡಬೇಕು. ಹಿಂದಿಯೇತರ ರಾಜ್ಯಗಳ ಜನರ ಸಂಘಟನೆಯೊಂದಿಗೆ ಸೇರಿಕೊಂಡು ಅಸಹಕಾರ  ಪ್ರತಿಭಟನೆಯನ್ನು  ಬಲವಾಗಿ ಮಾಡುವುದರ ಮೂಲಕ ಹಿಂದಿ ಭಾಷಾ ಹೇರಿಕೆಯನ್ನು ತಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT