ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ಘಾನಿಸ್ತಾನದಲ್ಲಿ ಮತ್ತೆ ಸ್ಫೋಟ: ಭಯೋತ್ಪಾದಕರ ನಿಗ್ರಹ ಅವಶ್ಯ

Last Updated 1 ಜೂನ್ 2017, 19:30 IST
ಅಕ್ಷರ ಗಾತ್ರ

ಆಫ್ಘಾನಿಸ್ತಾನದ  ಕಾಬೂಲ್‌ನಲ್ಲಿ ಮತ್ತೊಂದು  ಪ್ರಬಲ ಸ್ಫೋಟ ಸಂಭವಿಸಿದ್ದು 90 ಮಂದಿ ಸತ್ತಿದ್ದಾರೆ. ಭಾರತ ಸೇರಿದಂತೆ ವಿವಿಧ ದೇಶಗಳ ರಾಯಭಾರ ಕಚೇರಿಗಳು ಇರುವ ಪ್ರದೇಶದಲ್ಲೇ ಈ ಸ್ಫೋಟ ಸಂಭವಿಸಿರುವುದು ಆತಂಕಕಾರಿ.  ಭಾರತದ ರಾಯಭಾರ ಕಚೇರಿ ಕಟ್ಟಡಗಳಿಗೆ ಹಾನಿಯಾಗಿದ್ದರೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂಬುದು ಸಮಾಧಾನಕರ.  ರಾಷ್ಟ್ರದಲ್ಲಿ ವಿದೇಶಿಯರ ಇರುವಿಕೆಯ ಬಗ್ಗೆ ಅಸಹನೆ ಈ ಸ್ಫೋಟದಲ್ಲಿ ವ್ಯಕ್ತವಾಗಿದೆ. ರಾಯಭಾರ ಕಚೇರಿಗಳ ಸುತ್ತ ಸಾಮಾನ್ಯವಾಗಿ  ಇರುವ ತೀವ್ರ ಭದ್ರತಾ ವ್ಯವಸ್ಥೆಯ ನಡುವೆಯೂ ಸ್ಫೋಟ ಸಂಭವಿಸಿದೆ. ಇಸ್ಲಾಮಿಕ್ ಉಗ್ರ ಸಂಘಟನೆಗಳಾದ ತಾಲಿಬಾನ್ ಹಾಗೂ  ಐಎಸ್, ಆಫ್ಘಾನಿಸ್ತಾನ ನೆಲದಿಂದ ಕಾರ್ಯಾಚರಣೆ ನಡೆಸುತ್ತವೆ, ಆದರೆ ಇವು ಈವರೆಗೆ ದಾಳಿಯ ಹೊಣೆಗಾರಿಕೆ ಹೊತ್ತುಕೊಂಡಿಲ್ಲ.  ರಂಜಾನ್ ಮಾಸ ಆರಂಭದಲ್ಲೇ ಇಂತಹ ರಕ್ತಸಿಕ್ತ ದಾಳಿ ನಡೆದಿರುವುದು ವಿಷಾದನೀಯ.

ಐಎಸ್‌ನ  ಖೊರಾಸಾನ್ ಪ್ರಾಂತ್ಯ ಈ ವರ್ಷ ಆಫ್ಘನ್ ಹಾಗೂ ಅಮೆರಿಕ ವಿಶೇಷ ಪಡೆಗಳಿಂದ ತೀವ್ರ ಒತ್ತಡದಲ್ಲಿ ಸಿಲುಕಿದೆ ಎಂಬುದನ್ನು ಗಮನಿಸಬೇಕು. ಕಳೆದ ಏಪ್ರಿಲ್ 13ರಂದು ಬಾಂಬ್‌ಗಳ ಮಹಾತಾಯಿ ಎನಿಸಿದ ಅತಿ ದೊಡ್ಡ ಬಾಂಬ್ ಅನ್ನು ಈ ಪ್ರದೇಶದ ಮೇಲೆ ಅಮೆರಿಕ   ಹಾಕಿತ್ತು. ಆಫ್ಘಾನಿಸ್ತಾನದ  ಭಯೋತ್ಪಾದಕ ಮುಖಂಡ ಷೇಕ್ ಅಬ್ದುಲ್ ಹಸಿಬ್ ಈ ದಾಳಿ ನಂತರ  ಹತನಾಗಿದ್ದ. ಯುದ್ಧರಂಗದಲ್ಲಾಗುವ ಹಿನ್ನಡೆಗಳಿಗೆ ನಾಗರಿಕರನ್ನು ಗುರಿ ಮಾಡಿ ಆತ್ಮಹತ್ಯಾ ದಾಳಿಗಳ ಮೂಲಕ ಭೀತಿ ಹುಟ್ಟುಹಾಕುವ ಕಾರ್ಯವನ್ನು ಭಯೋತ್ಪಾದಕ ಸಂಘಟನೆಗಳು   ಈ ಹಿಂದಿನಿಂದಲೂ ನಡೆಸಿಕೊಂಡು ಬಂದಿವೆ.  ಈ ದಾಳಿಯೂ ಅಂತಹದೇ ಒಂದು ಯತ್ನ ಎಂಬ ವಿಶ್ಲೇಷಣೆಗಳಿವೆ.

ವಿಶ್ವದ ಅತ್ಯಂತ ಸುಸಜ್ಜಿತ ಸೇನೆ   ಎಂದೇ ಪರಿಗಣಿಸಲಾದ ಅಮೆರಿಕ ಸೇನೆ 16 ವರ್ಷಗಳಿಂದಲೂ ತಾಲಿಬಾನ್ ಶಕ್ತಿಯನ್ನು ಕುಂದಿಸುವಲ್ಲಿ ವಿಫಲವಾಗಿರುವುದು ದುರದೃಷ್ಟಕರ. 2001ರ ಅಕ್ಟೋಬರ್ 7ರಂದು ಆಫ್ಘಾನಿಸ್ತಾನದ ಮೇಲೆ ಅಮೆರಿಕ ದಾಳಿ ಮಾಡಿತ್ತು. ನಂತರದ ಕಾರ್ಯಾಚರಣೆಗಳಲ್ಲಿ ಅಮೆರಿಕದ 2,396 ಸೈನಿಕರು ಜೀವ ಕಳೆದುಕೊಂಡಿದ್ದಾರೆ. 2014ರ ಅಂತ್ಯದಲ್ಲಿ ಅಮೆರಿಕ ನೇತೃತ್ವದ ಅಂತರರಾಷ್ಟ್ರೀಯ ಸೇನಾಪಡೆಯನ್ನು  ಆಫ್ಘಾನಿಸ್ತಾನದಿಂದ ಹಿಂತೆಗೆದುಕೊಂಡ ನಂತರ ಮತ್ತೆ  ತಾಲಿಬಾನ್ ತನ್ನ ನೆಲೆ ಗಟ್ಟಿಗೊಳಿಸಲು ಯತ್ನಿಸುತ್ತಿದೆ. ಆಫ್ಘಾನಿಸ್ತಾನದಲ್ಲಿ ಹೋರಾಟದ ಜೊತೆಗೆ  ಪುನರ್‌ನಿರ್ಮಾಣಕ್ಕಾಗಿ ಕೋಟಿಕೋಟಿ ಡಾಲರ್‌ಗಳನ್ನು ಅಮೆರಿಕ ವ್ಯಯಿಸುತ್ತಿದೆ. ಹೀಗಿದ್ದೂ ಭಯೋತ್ಪಾದನಾ ದಾಳಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.  ಆಫ್ಘಾನಿಸ್ತಾನದಲ್ಲಿ ಸ್ಥಿರತೆ ತರಲು ಸಾಧ್ಯವಾಗುತ್ತಿಲ್ಲ. ಆಫ್ಘಾನಿಸ್ತಾನದಲ್ಲಿ  ಈಗಾಗಲೇ ನಿಯೋಜಿತಗೊಂಡಿರುವ  8,400 ಅಮೆರಿಕ ಸೈನಿಕರ ಜೊತೆ ಮತ್ತೆ 3,000ದಿಂದ 5,000ದಷ್ಟು ಸೈನಿಕರನ್ನು ಆಫ್ಘಾನಿಸ್ತಾನಕ್ಕೆ ಕಳಿಸಲು ಟ್ರಂಪ್ ಆಡಳಿತ  ಪರಿಶೀಲಿಸುತ್ತಿದೆ ಎಂಬುದು  ಮೇ   ತಿಂಗಳ ಮೊದಲ ವಾರದಲ್ಲಿ ವರದಿಯಾಗಿತ್ತು.  ಇದೇ ಸಂದರ್ಭದಲ್ಲಿ ಕಾಬೂಲ್‌ನಲ್ಲಿ ಈ  ಪ್ರಬಲ ಸ್ಫೋಟದ ಘಟನೆ ನಡೆದಿದೆ.

ಅತ್ಯಾಧುನಿಕ ಅಸ್ತ್ರಗಳು ಹಾಗೂ ಸ್ಫೋಟಕಗಳ ಈ ಕಾಲದಲ್ಲಿ ಬರೀ ಮಿಲಿಟರಿ ಕಾರ್ಯಾಚರಣೆಗಳಿಂದಲೇ  ಭಯೋತ್ಪಾದಕರನ್ನು ಮಟ್ಟ ಹಾಕುವುದು ಕಷ್ಟ. ಆಫ್ಘಾನಿಸ್ತಾನ ನೆಲದಲ್ಲಿನ ಭಯೋತ್ಪಾದನೆಗೆ ಭಾರತೀಯರೂ ಜೀವ ತೆತ್ತಿದ್ದಾರೆ. ಕಾಬೂಲ್ ರಾಯಭಾರ ಕಚೇರಿಯಲ್ಲಿದ್ದ ಐಎಫ್‌ಎಸ್ ಅಧಿಕಾರಿ ವಿ. ವೆಂಕಟೇಶ್ವರ ರಾವ್  ಸೇರಿದಂತೆ 50ಕ್ಕೂ ಹೆಚ್ಚು  ಭಾರತೀಯರು ಜೀವ ಕಳೆದುಕೊಂಡಿದ್ದಾರೆ. ಸದ್ಯದ ಸಂದರ್ಭದಲ್ಲಿ ಸಂಧಾನ ಮಾತುಕತೆಗಳಲ್ಲದೆ ಹಲವು ನೆಲೆಗಳಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಮುಂದಾಗಬೇಕಾದುದು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT