ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗ್ಧತೆ ಪ್ರಬುದ್ಧತೆಗಳ ಮುದ್ದಾದ ಸಂಗಮ

Last Updated 2 ಜೂನ್ 2017, 11:37 IST
ಅಕ್ಷರ ಗಾತ್ರ

ಚಿತ್ರ: ಎಳೆಯರು ನಾವು ಗೆಳೆಯರು

ನಿರ್ಮಾಪಕ: ನಾಗರಾಜ್ ಗೋಪಾಲ್

ನಿರ್ದೇಶಕ: ವಿಕ್ರಮ್‌ ಸೂರಿ

ತಾರಾಗಣ: ತುಷಾರ್, ಮಹಿತಿ, ಮಹೇಂದ್ರ

‘ಮಕ್ಕಳ ಸಿನಿಮಾ’ ಎಂದತಕ್ಷಣ ಒಂದಿಷ್ಟು ಪೂರ್ವಗ್ರಹಗಳ ಎಳೆಗಳು ಮನಸ್ಸನ್ನು ಸುತ್ತಿಕೊಳ್ಳುತ್ತವೆ. ಇದಕ್ಕೆ ಕಾರಣ ಮಕ್ಕಳ ಚಿತ್ರವೊಂದು ಕನ್ನಡದ ಮುಖ್ಯವಾಹಿನಿಯ ಚಿತ್ರಮಂದಿರಗಳಲ್ಲಿ ತೆರೆಕಂಡು ಎಷ್ಟೋ ವರ್ಷಗಳೇ ಕಳೆದಿವೆ. ಮಕ್ಕಳ ಚಿತ್ರವೆಂಬ ಹಣೆಪಟ್ಟಿ ಹೊತ್ತು ರೂಪುಗೊಳ್ಳುವ ಚಿತ್ರಗಳು ಸಹಾಯಧನ ಮತ್ತು ಪ್ರಶಸ್ತಿಗಳ ಕಣದಲ್ಲಿಯಷ್ಟೇ ಸದ್ದುಮಾಡಿ ಕಾಣೆಯಾಗಿಬಿಡುವುದೂ ಮಕ್ಕಳ ಚಿತ್ರಗಳ ಕುರಿತಾಗಿ ಇರುವ ತಾತ್ಸಾರ ಮನಸ್ಥಿತಿಗೆ ಕಾರಣಗಳಲ್ಲೊಂದು. ಹಾಗೆಯೇ ವಸ್ತುವಿನ ವಿಷಯದಲ್ಲಿಯೂ ಮಕ್ಕಳು ದೊಡ್ಡವರ ಜಗತ್ತಿನ ವಂಚನೆಯನ್ನು ಬಯಲು ಮಾಡುವ ಸಾಹಸಕಥೆಗಳ ಸಿದ್ಧ ಮಾದರಿಯೇ ಮನಸ್ಸಿಗೆ ಬರುತ್ತದೆ.

‘ಎಳೆಯರು ನಾವು ಗೆಳೆಯರು’,  ಜನಪ್ರಿಯ ಸಿದ್ಧಸೂತ್ರಗಳನ್ನು ಪೂರ್ತಿಯಾಗಿ ಮುರಿಯದಿದ್ದರೂ ‘ಮಕ್ಕಳ ಚಿತ್ರ’ಗಳ ಕುರಿತಾದ ಹಳೆಯ ನಂಬಿಕೆಗಳನ್ನು ಒಮ್ಮೆ ಕೊಡವುವ ಕೆಲಸವನ್ನಂತೂ ಮಾಡುತ್ತದೆ.

ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ‘ಡ್ರಾಮಾ ಜ್ಯೂನಿಯರ್ಸ್‌’ ರಿಯಾಲಿಟಿ ಷೋದಲ್ಲಿ ಭಾಗವಹಿಸಿದ್ದ ಹತ್ತು ಮಕ್ಕಳನ್ನು ಇಟ್ಟುಕೊಂಡು ‘ಎಳೆಯರು ನಾವು ಗೆಳೆಯರು’ ಸಿನಿಮಾವನ್ನು ಕಟ್ಟಿದ್ದಾರೆ ನಿರ್ದೇಶಕ ವಿಕ್ರಮ್‌ ಸೂರಿ.

ಇಡೀ ಚಿತ್ರದಲ್ಲಿ ಒಂದೇ ಎನ್ನುವ ಕಥೆಯ ಎಳೆಯಿಲ್ಲ. ಇಲ್ಲಿ ಪಾತ್ರಗಳೇ ಎಳೆಗಳು. ಆ ಎಳೆಗಳನ್ನೆ ಇಟ್ಟುಕೊಂಡು ಹಲವು ಬಿಡಿ ಸನ್ನಿವೇಶಗಳನ್ನು ಹೆಣೆಯಲಾಗಿದೆ. ಪೇಪರ್‌ ಮೋಹನ್‌, ಮರಕೋತಿ ಸೀನ, ಮೆಕ್ಯಾನಿಕ್‌ ಉಸ್ತಾದ್‌, ಕಂಬರ್‌ಕಟ್‌ ಸ್ವಾಮಿ, ತಿಂಡಿಪೋತಿ ಪದ್ಮಾ, ಹಕ್ಕಿಪಿಕ್ಕಿ ರಾಮ, ಹೀರೊ ರಾಜ, ಕಲ್‌ಕಿರಿ ವಜ್ರಪ್ಪ, ಗೊರಕೆ ಶಂಕರ – ಹೀಗೆ ತಮ್ಮ ಚಿತ್ರವಿಚಿತ್ರ ಸ್ವಭಾವ, ವಿಶೇಷತೆಗಳಿಂದಲೇ ಅಡ್ಡಹೆಸರನ್ನೂ ಪಡೆದಿರುವ ಹಳ್ಳಿ ಹುಡುಗರ ಗುಂಪು ಯಾವಾಗಲೂ ಒಟ್ಟಿಗೇ ಇರುವುದು. ಆಟದ ಬಯಲಲ್ಲೂ ಪಾಠದ ಕೋಣೆಯಲ್ಲಿಯೂ ಅವರು ಜೊತೆ ಜೊತೆಯಾಗಿಯೇ ಇರುವವರು.

ಇವರ ಜಾಲಿ ಬಾಲ್ಯಕ್ಕೆ ವಿರುದ್ಧವೆಂಬಂತೆ ಇರುವ ಫಸ್ಟ್‌ ರ್‍ಯಾಂಕ್‌ ವಿದ್ಯಾ (ಮಹತಿ). ಅಂಚೆ ಕಚೇರಿಯಲ್ಲಿ ಕೆಲಸಕ್ಕಿದ್ದ ಅಪ್ಪನಿಗೆ ವರ್ಗವಾಗಿದ್ದರಿಂದ ಬೆಂಗಳೂರಿಗೆ ಬಂದ ಅವಳಿಗೆ ರ್‍ಯಾಂಕ್‌ ಪಡೆಯುವ ಹುಚ್ಚು. ಹಳ್ಳಿ ಹುಡುಗರ ಬಗ್ಗೆ ಒಂದು ಸಣ್ಣ ತಾತ್ಸಾರವೂ ಅವಳಲ್ಲಿದೆ. ಆದರೆ ಹಳ್ಳಿ ಮತ್ತು ನಗರದ ಮಕ್ಕಳ ಕುರಿತ ಈ ಜನಪ್ರಿಯ ಕಪ್ಪು–ಬಿಳುಪು ‘ದೃಷ್ಟಿಕೋನ’ವನ್ನು ನಿರ್ದೇಶಕರು ಹೆಚ್ಚಾಗಿ ಬೆಳಸಲು ಹೋಗುವುದಿಲ್ಲ. ನಾಟಕದ ನೆಪದಲ್ಲಿ ವಿದ್ಯಾ ಹಳ್ಳಿ ಹುಡುಗರ ಜೊತೆಗೆ ಬೆರೆತುಬಿಡುತ್ತಾಳೆ.

ಮೊದಲರ್ಧ ಪಾತ್ರಗಳ ಮೂಲಕವೇ ಬೆಳೆಯುತ್ತ ಹೋಗುವ ಸಿನಿಮಾ ದ್ವಿತೀಯಾರ್ಧದಲ್ಲಿ ಭಾವುಕ ಸನ್ನಿವೇಶಗಳಿಂದ ಮನಸ್ಸು ತಟ್ಟುತ್ತದೆ. ಪೂರ್ತಿಯಾಗಿ ಮಕ್ಕಳ ಜಗತ್ತಿನಲ್ಲಿಯೇ ಬೆಳೆಯುತ್ತ ಹೋಗುವುದು ಈ ಸಿನಿಮಾದ ಹೆಚ್ಚುಗಾರಿಕೆ. ಪುಟಾಣಿ ಅಚಿಂತ್ಯನ ಮೂಲಕ ಗಾಂಧಿನಗರದ ಬಿಲ್ಡಪ್‌ಪ್ರಿಯ ತಾರಾನಟರ ಕಾಲೆಳೆಯುವ ಕೆಲಸವನ್ನೂ ನಿರ್ದೇಶಕರು ಮಾಡಿದ್ದಾರೆ.

ಸಾರ್ವಜನಿಕ ಶೌಚಾಲಯಗಳ ಬಗ್ಗೆ, ಸ್ವಚ್ಛ ಭಾರತ್‌ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವ, ಮೂಢನಂಬಿಕೆ ವಿರುದ್ಧ ಮನಃಪರಿವರ್ತನೆ ಮಾಡುವ ಸನ್ನಿವೇಶಗಳು ಮಕ್ಕಳ ಜಗತ್ತಿನ ಮುಗ್ಧತೆಯ ಮೊಸರಿನಲ್ಲಿ ಕೃತಕತೆಯ ಕಲ್ಲಿನಂತೆ ಸಿಕ್ಕುತ್ತವೆ. ಆದರೆ ಅವ್ಯಾವವೂ ಸಿನಿಮಾದ ಓಘವನ್ನು ಹದಗೆಡಿಸುವ ಪ್ರಮಾಣದಲ್ಲಿಲ್ಲ.

ಮಧ್ಯಾಹ್ನದ ಬಿಸಿಯೂಟದ ಅಕ್ಕಿಯ ಅಕ್ರಮಗಳನ್ನು ಬಯಲಿಗೆಳೆಯುವ, ಕೇಡಿಗಳಿಗೆ ಜಾಣ್ಮೆಯಿಂದ ಮಣ್ಣುಮುಕ್ಕಿಸುವ ಹಳೆಯ ಸಿದ್ಧ ಸೂತ್ರವನ್ನೇ ಮತ್ತೆ ಬಳಸಿಕೊಳ್ಳಲಾಗಿದ್ದರೂ ಸಿನಿಮಾ ಅಲ್ಲಿಯೇ ನಿಲ್ಲುವುದಿಲ್ಲ ಎಂಬುದು ಗಮನಾರ್ಹ.

ತಮ್ಮಲ್ಲಿಯೇ ಒಬ್ಬವಳಾಗಿ ಸೇರಿಹೋಗಿರುವ ವಿದ್ಯಾಳಿಗೆ ಕ್ಯಾನ್ಸರ್‌ ಇದೆ. ಅವಳಿಗೆ ಚಿಕಿತ್ಸೆ ಕೊಡಿಸಲು ಇನ್ನು ಒಂದು ತಿಂಗಳಲ್ಲಿ ಆರು ಲಕ್ಷ ಹಣ ಸೇರಿಸಬೇಕಾದ ಅನಿವಾರ್ಯ ಪರಿಸ್ಥಿತಿಯೊಂದಿಗೆ ‘ಮಕ್ಕಳಾಟ’ ಕೊನೆಗೊಂಡು ಮುಗಿಸಿ ಒಮ್ಮಿಂದೊಮ್ಮೆಲೇ ಗಂಭೀರ ಭಾವುಕತೆಯ ಪಾತಳಿಗೆ ಇಳಿದುಬಿಡುತ್ತದೆ.

ಖಳನಾಯಕರನ್ನು ಸೃಷ್ಟಿಸುವ ಗೋಜಿಗೆ ಹೋಗದೆ, ವಿಧಿಯಾಟವನ್ನೇ ಖಳನನ್ನಾಗಿಸುವ ಮೂಲಕ ಸಿನಿಮಾ ಮುಗ್ಧತೆಯಿಂದ ಪ್ರಬುದ್ಧತೆಗೆ ಏರುತ್ತದೆ. ಸ್ನೇಹಕ್ಕಾಗಿ ಏನನ್ನಾದರೂ ಮಾಡಲು ಸಿದ್ಧರಾಗುವ ಮಕ್ಕಳು ತಮ್ಮ ಸಹಜ ಪ್ರತಿಭೆಯಿಂದ ಸರಿಯಾದ ದಾರಿಯಲ್ಲಿಯೇ ಅಂದುಕೊಂಡಿದ್ದನ್ನು ಸಾಧಿಸುವುದೂ ಒಟ್ಟಾರೆ ಸಿನಿಮಾ ನೀಡುವ ಅನುಭವಕ್ಕೆ ಸಕಾರಾತ್ಮಕತೆಯನ್ನು ಸೇರಿಸಿದೆ. ಕಥೆಗೆ ಅನುಗುಣವಾಗಿ ಪುಟಾಣಿಗಳ ಅಭಿನಯವೂ  ಗಮನಸೆಳೆಯುತ್ತದೆ. ಅದರಲ್ಲಿಯೂ ಮಹತಿ, ತುಷಾರ್‌ ಮತ್ತು ಮಹೇಂದ್ರ ಇವರ ವಯಸ್ಸಿಗೆ ಮೀರಿದ ಪ್ರಬುದ್ಧ ನಟನೆ ಬೆರಗು ಹುಟ್ಟಿಸುತ್ತದೆ. ಉಳಿದ ಚಿಣ್ಣರು ಮುಗ್ಧತೆಯ ಮೂಲಕವೇ ಮನಕದಿಯುತ್ತಾರೆ.

ಅನೂಪ್‌ ಸೀಳಿನ್‌ ಅವರ ಸಂಗೀತ ಈ ಸಿನಿಮಾದ ಪ್ರಮುಖ ಧನಾತ್ಮಕ ಅಂಶ. ಎಂ.ಎನ್. ವ್ಯಾಸರಾವ್‌ ಅವರ ‘ಮನಕೆ ಶಕ್ತಿ ನೀಡು ಗುರುವೆ ಸೂರ್ಯನಂತೆ ಬೆಳಗಲಿ’ ಹಾಡಿಗೆ ವಯಸ್ಸಿನ ಹಂಗು ಮೀರಿ ಎಲ್ಲರೆದೆಯ ಪ್ರಾರ್ಥನೆಯಾಗುವ ಶಕ್ತಿ ಇದೆ. ಬಿ.ಆರ್‌. ಲಕ್ಷ್ಮಣ್‌ ರಾವ್‌ ಅವರ ‘ಕಿಂಚಿತ್ತು ದಯವಿಲ್ಲವಾ’ ಎಂಬ ಗೀತೆ ಕಣ್ಣಂಚನ್ನು ತೇವವಾಗಿಸುತ್ತದೆ. ಅಶೋಕ್ ವಿ. ರಾಮನ್ ಛಾಯಾಗ್ರಹಣ ಅಚ್ಚುಕಟ್ಟಾಗಿದೆ.

ಒಟ್ಟಾರೆ ‘ಎಳೆಯರು ನಾವು ಗೆಳೆಯರು’ ಸಿನಿಮಾ, ಹಿರಿಯರಿಗೆ ತಮ್ಮ ಬಾಲ್ಯದ ದಿನಗಳನ್ನೂ, ಕಿರಿಯರಿಗೆ ತಾವು ಕಳೆದುಕೊಳ್ಳುತ್ತಿರುವ ಶ್ರೀಮಂತ ಜಗತ್ತನ್ನೂ ತುಸು ಸಿನಿಮೀಯತೆಯ ಮಿತಿಯಲ್ಲಿಯೇ ತೋರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT