ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಸಿಒಎಸ್‌: ಸಮಸ್ಯೆ ನಿವಾರಣೆಯ ಹಾದಿಯಲ್ಲಿ...

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

‘ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್’ (ಪಿಸಿಒಎಸ್) ಕುರಿತು ಕಳೆದ ಸಂಚಿಕೆಯಲ್ಲಿ ತಿಳಿಸಿಕೊಡಲಾಗಿತ್ತು. ಈ ಬಾರಿ ಈ ಸಮಸ್ಯೆ ಹಿಂದಿರುವ ಕಾರಣಗಳನ್ನು ತಿಳಿದುಕೊಳ್ಳೋಣ...

ಪಿಸಿಒಎಸ್‌ಗೆ ನಿರ್ದಿಷ್ಟ ಕಾರಣವಿಲ್ಲ. ಆದರೆ ಕೆಲವು ತಜ್ಞರು, ಆನುವಂಶಿಕ ಸೇರಿದಂತೆ ಹಲವು ಅಂಶಗಳು ಕಾರಣವಾಗಬಲ್ಲವು ಎಂದು ಅಭಿಪ್ರಾಯ ಪಡುತ್ತಾರೆ. ಅವುಗಳೆಂದರೆ:

ಅಧಿಕ ಮಟ್ಟದ ಇನ್ಸುಲಿನ್: ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ಸಮತೋಲನ ಕಾಯ್ದುಕೊಳ್ಳಲು ಇನ್ಸುಲಿನ್ ಸಹಕಾರಿ. ಆದರೆ ಪಿಸಿಒಎಸ್‌ ಇದ್ದಲ್ಲಿ, ದೇಹ ಇನ್ಸುಲಿನ್‌ಗೆ ಸ್ಪಂದಿಸುವುದಿಲ್ಲ. ಇದರಿಂದ ರಕ್ತದಲ್ಲಿನ ಇನ್ಸುಲಿನ್ ಮಟ್ಟ ಸಹಜಕ್ಕಿಂತ ಹೆಚ್ಚಾಗುತ್ತದೆ. ಅಧಿಕ ಇನ್ಸುಲಿನ್, ಅಂಡಾಶಯದಲ್ಲಿ, ಆ್ಯಂಡ್ರೋಜೆನ್‌ ಆದ ಟೆಸ್ಟೊಸ್ಟೆರಾನ್‌ನ ಅಧಿಕ ಉತ್ಪತ್ತಿಗೆ ದಾರಿ ಮಾಡಿಕೊಡುತ್ತದೆ.

ಅದರಲ್ಲೂ ಸ್ಥೂಲಕಾಯ, ಅನಾರೋಗ್ಯಕರ ಆಹಾರಕ್ರಮ, ಹೆಚ್ಚು ದೈಹಿಕ ಚಟುವಟಿಕೆ ಇಲ್ಲದವರು, ಕುಟುಂಬದಲ್ಲಿ ಮಧುಮೇಹದ ಹಿನ್ನೆಲೆ ಇದ್ದವರಲ್ಲಿ ಇನ್ಸುಲಿನ್ ಪ್ರತಿರೋಧಕವೂ ಅಧಿಕವಿರುತ್ತದೆ. ಕಾಲ ಕಳೆದಂತೆ, ಇನ್ಸುಲಿನ್ ಪ್ರತಿರೋಧಕವು ಟೈಪ್ 2 ಡಯಾಬಿಟಿಸ್‌ಗೆ ಎಡೆಮಾಡಿಕೊಡುತ್ತದೆ.

ಏರು ಮಟ್ಟದ ಆ್ಯಂಡ್ರೋಜೆನ್‌: ಆ್ಯಂಡ್ರೋಜೆನ್‌ ಅನ್ನು ಕೆಲವೊಮ್ಮೆ ಪುರುಷ–ಹಾರ್ಮೋನು ಎಂದೂ ಕರೆಯಲಾಗುತ್ತದೆ. ಮಹಿಳೆಯರಲ್ಲೂ ಸಣ್ಣ ಪ್ರಮಾಣದಲ್ಲಿ ಆ್ಯಂಡ್ರೋಜೆನ್‌ ಹಾರ್ಮೋನಿನ ಉತ್ಪತ್ತಿ ಇರುತ್ತದೆ. ಆದರೆ ಪಿಸಿಒಎಸ್‌ ಇದ್ದವರಲ್ಲಿ ಸ್ತ್ರೀ ಹಾರ್ಮೋನ್‌ ಆದ ಈಸ್ಟ್ರೋಜೆನ್‌ಗಿಂತ ಆ್ಯಂಡ್ರೋಜೆನ್‌ನ ಉತ್ಪತ್ತಿ ಅಧಿಕವಿರುತ್ತದೆ.

ಆ್ಯಂಡ್ರೋಜೆನ್‌ ಪ್ರಮಾಣದ ಹೆಚ್ಚಳವು  ಪ್ರತಿ ಋತುಚಕ್ರ ಸಮಯದಲ್ಲೂ ಅಂಡಾಶಯವು ಅಂಡೋತ್ಪತ್ತಿ ಮಾಡದಂತೆ ತಡೆಯಬಹುದು. ಆಗ ಮುಖ, ಚರ್ಮದ ಮೇಲೆ ಕೂದಲಿನ ಬೆಳವಣಿಗೆ, ಮೊಡವೆಗಳು ಹೆಚ್ಚಾಗುತ್ತವೆ. ಪಿಸಿಒಎಸ್ ಇದ್ದರೆ ಗರ್ಭಧಾರಣೆ ಸಾಧ್ಯವಿಲ್ಲವೇ?

ಸಮಸ್ಯೆ ಇದ್ದ ಮಾತ್ರಕ್ಕೆ ಗರ್ಭಧಾರಣೆ ಸಾಧ್ಯವೇ ಇಲ್ಲ ಎನ್ನುವಂತಿಲ್ಲ. ಇದು ಅತಿ ಸಾಮಾನ್ಯ ಹಾಗೂ ಗುಣಪಡಿಸಬಲ್ಲ ಸಮಸ್ಯೆ ಎಂಬುದು ಗಮನದಲ್ಲಿರಲಿ.

ಪಿಸಿಒಎಸ್ ಇರುವ ಮಹಿಳೆಯರಲ್ಲಿನ ಹಾರ್ಮೋನಿನ ಅಸಮತೋಲನದಿಂದಾಗಿ ಅಂಡದ ಬಿಡುಗಡೆ ಹಾಗೂ ಬೆಳವಣಿಗೆಗೆ ಅಡ್ಡಿ ಬರಬಹುದು.  ಹೀಗಿದ್ದಾಗ, ಅಂಡೋತ್ಪತ್ತಿ ಆಗದೇ ಇದ್ದರೆ, ಗರ್ಭಧಾರಣೆಯ ಸಾಧ್ಯತೆಗೆ ಅಡ್ಡಿಯಾದಂತೆ.

ಇನ್ನಿತರ ಆರೋಗ್ಯ ಸಮಸ್ಯೆಗಳನ್ನೂ ತರಬಹುದೇ?: ಹೌದು. ಪಿಸಿಒಎಸ್‌ಗೂ ಬೇರೆ ಆರೋಗ್ಯಸಮಸ್ಯೆಗಳಿಗೂ ಸಂಬಂಧವಿರುವುದನ್ನು ಕೆಲವು ಅಧ್ಯಯನಗಳು ಕಂಡುಕೊಂಡಿವೆ.

ಮಧುಮೇಹ: ಪಿಸಿಒಎಸ್‌ ಇರುವವರಲ್ಲಿ ಅರ್ಧದಷ್ಟು ಮಹಿಳೆಯರಿಗೆ 40 ವಯಸ್ಸಿಗೆ ಮುನ್ನ ಮಧುಮೇಹ (ಪ್ರಿ–ಡಯಾಬಿಟಿಸ್) ಬರಬಹುದು.
ರಕ್ತದ ಏರೊತ್ತಡ: ಪಿಸಿಒಎಸ್‌ ಜೊತೆಗೇ ರಕ್ತದ ಏರೊತ್ತಡ ಬರುವ ಸಾಧ್ಯತೆ ಇದೆ. ಇದು ಹೃದಯದ ತೊಂದರೆ ಹಾಗೂ ಪಾರ್ಶ್ವವಾಯುವಿಗೂ ಕಾರಣವಾಗಬಹುದು. 

ಅನಾರೋಗ್ಯಕರ ಕೊಬ್ಬು: ಪಿಸಿಒಎಸ್‌, ಕೆಟ್ಟ ಕೊಲೆಸ್ಟ್ರಾಲ್‌ನ ಮಟ್ಟವನ್ನು ಹೆಚ್ಚಿಸಿ, ಒಳ್ಳೆಯ ಕೊಬ್ಬಿನ ಮಟ್ಟ ಇಳಿಸುತ್ತದೆ. ಅತಿ ಹೆಚ್ಚು ಕೊಲೆಸ್ಟ್ರಾಲ್‌ನಿಂದ ಹೃದಯಸಮಸ್ಯೆಗೆ ದಾರಿ.

ನಿದ್ದೆಯಲ್ಲಿ ಉಸಿರುಗಟ್ಟುವಿಕೆ: ಪಿಸಿಒಎಸ್‌ ಇರುವ ಮಹಿಳೆಯರಲ್ಲಿ ಸ್ಥೂಲಕಾಯವೂ ಆಗುವುದರಿಂದ ಉಸಿರಾಟದಲ್ಲೂ ಏರುಪೇರು ಇರುತ್ತದೆ. ನಿದ್ದೆಯಲ್ಲೂ ಉಸಿರಾಟದ ತೊಂದರೆ ಎನಿಸಿ ನಿದ್ರಾಹೀನತೆ ಉಂಟಾಗುತ್ತದೆ. ಇದು ಮಧುಮೇಹಕ್ಕೆ ಕಾರಣವಾದಂತೆ.

ಆತಂಕ ಹಾಗೂ ಒತ್ತಡ: ಈ ಸಮಯದಲ್ಲಿ ಮಹಿಳೆಯರಿಗೆ ಆತಂಕ ಹಾಗೂ ಒತ್ತಡ ಸಹಜವಾಗಿ ಕಾಡುವ ಸಮಸ್ಯೆ. 

ಎಂಡೋಮೆಟ್ರಿಯಲ್ ಕ್ಯಾನ್ಸರ್:  ಪಿಸಿಒಎಸ್‌ ಇರುವವರಿಗೆ ಅಂಡೋತ್ಪತ್ತಿ ಸಮಸ್ಯೆ, ಸ್ಥೂಲಕಾಯ, ಇನ್ಸುಲಿನ್ ಪ್ರತಿರೋಧ ಮತ್ತು ಮಧುಮೇಹ ಇವೆಲ್ಲವೂ ಒಟ್ಟಾರೆ ಎಂಡೋಮೆಟ್ರಿಯಂ ಕ್ಯಾನ್ಸರ್‌ನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಮುಂದುವರಿಯುತ್ತದೆ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT