ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ ಬೇಡ, ಕಾಳಜಿ ಇರಲಿ

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಬೇರೆಯೇ ರೀತಿಯ ಚರ್ಚೆ–ವಾದಗಳು ಆರಂಭವಾಗಿವೆ. ಒಂದು ರೀತಿಯಲ್ಲಿ ‘flavor of the season’ ಎನ್ನಬಹುದು. ಅದರ ಸ್ಯಾಂಪಲ್ ಇಲ್ಲಿದೆ: ‘ರಕ್ತದಲ್ಲಿ ಸಕ್ಕರೆ ಪ್ರಮಾಣ 400 ಇದ್ದರೂ, ಏನೂ ಹೆದರಬೇಡಿ; ರಕ್ತದೊತ್ತಡ 250 ದಾಟಿದರೂ ಏನೂ ಭಯ ಪಡಬೇಕಿಲ್ಲ; ಕೊಲೆಸ್ಟ್ರಾಲ್ ಎಷ್ಟಿದ್ದರೂ ತಲೆ ಕೆಡಿಸಿಕೊಳ್ಳಬೇಡಿ; ಮೈಯಲ್ಲಿ ಗಡ್ಡೆ ಕಾಣಿಸಿಕೊಂಡರೂ ಏನೂ ಗಾಬರಿಪಡಬೇಕಿಲ್ಲ.

ಇಂಗ್ಲಿಷ್ ಔಷಧ ಬೇಡ. ಡಾಕ್ಟರ್ ಮೋಸಗಾರ. ಧ್ಯಾನ ಮಾಡಿ. ಕ್ವಾಂಟಂ ಪರಿಣಾಮದಿಂದ ಕಾಯಿಲೆ ವಾಸಿಯಾಗುತ್ತದೆ. ದೇಹಕ್ಕೆ ತನ್ನನ್ನು ತಾನು ನೋಡಿಕೊಳ್ಳುವುದು ಗೊತ್ತು. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ.

ಈ ರೀತಿ ಪ್ರಚಾರದ ಮುಂಚೂಣಿಯಲ್ಲಿರುವವರು ಕೆಲವರು ವೈದ್ಯರುಗಳೇ ಆಗಿರುವುದು ವಿಪರ್ಯಾಸ. ಧೈರ್ಯ ತುಂಬಬೇಕು. ಆದರೆ ನಿರ್ಲಕ್ಷ ಆಕ್ಷೇಪಣೀಯ. ಅಲಕ್ಷದಿಂದ ಅನಾಹುತಗಳಾಗಿರುವ ಉದಾಹರಣೆಗಳು ಅನೇಕ ಇವೆ. ಅನೇಕ ಕಾಯಿಲೆಗಳನ್ನು ಮೊಳಕೆಯಲ್ಲಿಯೇ ಚಿವುಟುವುದಕ್ಕೆ ಸಾಧ್ಯತೆಗಳಿವೆ. ಹೀಗಾಗದಿದ್ದಾಗ, ಕೊನೆಗೆ ಉಗುರಲ್ಲಿ ಹೋಗುವುದಕ್ಕೆ ಕೊಡಲಿಯೇ ಬೇಕು ಎನ್ನುವಂತಾಗಬಹುದು.

ಅನೇಕರು ಮಧುಮೇಹವನ್ನು ಆರಂಭದಲ್ಲಿ ನಿರ್ಲಕ್ಷಿಸಿ ಕೊನೆಗೆ ಕಾಲು ಕತ್ತರಿಸಿಕೊಳ್ಳಬೇಕಾದಂಥ ಸಂದರ್ಭವನ್ನು ತಂದುಕೊಂಡಿದ್ದಾರೆ. ನಮ್ಮ ದೇಹ ಅನೇಕ ಸಂದರ್ಭಗಳಲ್ಲಿ ತನ್ನ ವ್ಯಾಪ್ತಿ ಮೀರದೆಯೇ ಹೊಂದಿಕೊಂಡು ಕೆಲಸ ಮಾಡುತ್ತಿರುತ್ತದೆ. ಉದಾಹರಣೆಗೆ ದೇಹದ ತಾಪಮಾನ, ರಕ್ತದ ಸಕ್ಕರೆ, ಉಪ್ಪು ಬಹಳ ಹೆಚ್ಚು ಕಡಿಮೆಯಾದರೆ ದೇಹ ಕುಗ್ಗಿ ಕ್ಷೀಣಿಸಿ ವಿವಿಧ ಕಾಯಿಲೆಗಳಿಗೆ ಆಹ್ವಾನ ಒಡ್ಡಬಹುದು.

‘Maintenance of homeostasis is vital for overall well–being.’ ಇವು ಮೂಲಭೂತ ವಿಷಯಗಳು. ಇವುಗಳನ್ನು ಉಪೇಕ್ಷಿಸುವುದು ನಮಗೆ ಒಳ್ಳೆಯದಲ್ಲ. ಸಾಧ್ಯವಾದಷ್ಟು ಆಹಾರ, ವ್ಯಾಯಾಮ, ಮಾನಸಿಕ ನೆಮ್ಮದಿ ಕಾಪಾಡಿಕೊಂಡರೆ ಆರೋಗ್ಯ ಕಾಪಾಡಿಕೊಳ್ಳಬಹುದು. ಆದರೂ ನಮ್ಮ ಕೈಮೀರಿ ಇತರ ಕಾರಣಗಳಿಂದ ಅನಾರೋಗ್ಯ ಬಂದಾಗ ಅಥವಾ ನಮ್ಮ ತಪ್ಪಿನಿಂದಲೇ ರೋಗ–ರುಜಿನಗಳು ಉಂಟಾದಾಗ ನಾವು ಸಂಬಂಧಪಟ್ಟ ತಜ್ಞರನ್ನೇ ಕಂಡು, ಪರಿಹಾರವನ್ನು ಶೀಘ್ರಗತಿಯಲ್ಲಿ ಕಂಡುಕೊಳ್ಳುವುವುದು ಸೂಕ್ತ. ವ್ಯವಸ್ಥೆಯಲ್ಲಿ ದೋಷಗಳಿದ್ದೂ, ಇನ್ನು ಅಲೋಪತಿ ಸರಿಯಿಲ್ಲ – ಎಂದು ಕಂಡ ಕಂಡ ನಕಲಿ ವೈದ್ಯರ ಬಳಿ ಹೋಗಿ ಎಷ್ಟೋ ಜನರು ಅಪತ್ತಿಗೀಡಾಗುತ್ತಿದ್ದಾರೆ.

ಡಾ. ಸಿ.ಎಂ. ಪರಮೇಶ್ವರ್ ಹೇಳುವಂತೆ ‘ಮೂಲವ್ಯಾಧಿಗೆ ಬಾಬವೈದ್ಯರಲ್ಲಿ ಹೋಗಿ ಕರುಳನ್ನು ಕತ್ತರಿಸಬೇಕಾದ ಸಂದರ್ಭಗಳು ಉಂಟಾಗುತ್ತಿವೆ.’
ಆಧುನಿಕ ವೈದ್ಯಕೀಯ ಕ್ಷೇತ್ರವು ವಾಣಿಜ್ಯೀಕರಣಗೊಂಡಿರುವುದನ್ನು ಖಂಡಿತ ಅಲ್ಲಗಳೆಯುವಂತಿಲ್ಲ. ಜನಸಾಮಾನ್ಯರಿಗೆ ವಾಸ್ತವ ಮಾಹಿತಿಯನ್ನು ಒದಗಿಸುವುದರ ಬದಲು ಭಯಭೀತರನ್ನಾಗಿಸುವ ಧಂಧೆಯನ್ನು ಸಮರ್ಥಿಸಲಾಗದು. ‘ನಮ್ಮಲ್ಲಿಗೆ ಬನ್ನಿ; ಅರ್ಧಗಂಟೆಯಲ್ಲಿ ಆಸ್ಪತ್ರೆಯಿಂದ ನೇರವಾಗಿ ಕೆಲಸಕ್ಕೆ ಹೋಗುವಂತೆ ಶಸ್ತ್ರಚಿಕಿತ್ಸೆ ಮಾಡಿ ಕಳಿಸುತ್ತೇವೆ’ ಎಂದು ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತನ್ನು ಪ್ರಕಟಿಸಿ, ಜನರಿಗೆ ಬಲೆ ಬೀಸುತ್ತಿರುವುದನ್ನು ಉಪೇಕ್ಷಿಸಲಾಗದು.

ಕಾಯಿಲೆಗಳನ್ನು ತಡೆಗಟ್ಟುವತ್ತ ಗಮನಹರಿಸದೆಯೇ,  ಹೆಚ್ಚು ತಾಂತ್ರಿಕವಾಗಿ, ಯಾಂತ್ರಿಕವಾಗಿ ರಿಪೇರಿ ಮಾಡುವುದಕ್ಕಷ್ಟೆ ಗಮನ ಕೊಡುತ್ತಿರುವುದೂ ಸತ್ಯ.  ಈ ಚೌಕಟ್ಟಿನಲ್ಲಿ ದೋಷ ಕಾಣುವುದು ಬಿಟ್ಟು ಇಡೀ ವೈದ್ಯಕೀಯ ವಿಜ್ಞಾನವನ್ನೇ ತಲೆಕೆಳಗೆ ಮಾಡಿ ದೋಷಾರೋಪ ಪಟ್ಟಿ ಮಾಡುತ್ತಿರುವುದನ್ನು ಗಮನಿಸಬಹುದು. ‘It is akin to throwing baby with bath water.’

ಆಧುನಿಕ ವೈದ್ಯಪದ್ಧತಿಯ ಇಂಥ ಬೆಳವಣಿಗೆಗಳು ಇನ್ನೊಂದು ರೀತಿಯ ಅಪಾಯ ಪರಂಪರೆಯ ಹುಟ್ಟಿಗೂ ಕಾರಣವಾಗುತ್ತಿವೆ. ಉತ್ತಮ ಸಂತಾನದ ಆಸೆ ಸಹಜ; ಇದು ಗರ್ಭಸಂಸ್ಕಾರ ಸಂಸ್ಕೃತಿ ಮತ್ತು ಅದರ ಪ್ರಚಾರಕ್ಕೆ ಉತ್ತೇಜನಕಾರಿಯಾಗಿದೆ.  ಬಿಳಿಬಣ್ಣದ ಮಗು ಹುಟ್ಟಲು ಗರ್ಭಿಣಿ ಎಳನೀರನ್ನು ಕುಡಿಯಬೇಕೆಂದು ದೃಶ್ಯಮಾಧ್ಯಮದ ಕಾರ್ಯಕ್ರಮವೊಂದರಲ್ಲಿ ಆಯುರ್ವೇದವೈದ್ಯರೊಬ್ಬರು ಸೂಚಿಸಿದರು. ಅಲ್ಲದೆ ಮಗುವಿಗೆ ಲಸಿಕೆಯನ್ನು ಹಾಕಿಸಬೇಡಿ ಎಂದೂ ಅವರು ಸಲಹೆ ಕೊಟ್ಟರು. ಗರ್ಭಿಣಿಯರಿಗೆ ಕಬ್ಬಿಣದ ಆಂಶವನ್ನು ಕೊಡಕೂಡದು ಎಂಬುದೂ ಅವರ ಸಲಹೆ. ಇಂಥವರ ಪರವಾಗಿ ನಾಲ್ಕಾರು ದೃಶ್ಯಮಾಧ್ಯಮಗಳು ನುರಿತ ವೈದ್ಯರನ್ನು ಕರೆಸಿ ‘ಇವು ಕೂಡ ವಿಜ್ಞಾನವೇ’ ಎಂದು ಬೋಧಿಸಿದರು.

ಆರ್ಯುವೇದ ಎಂದರೆ ಕೇವಲ ಬಾಡಿ ಮಸಾಜ್ ಎನ್ನುವಷ್ಟು ಮಟ್ಟಿಗೆ ಇಂದು ಕಾಣುವಂತಾಗಿದೆ. ಸುಶ್ರೂತ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಿದ್ದ ಎನ್ನುವ ಪ್ರಜ್ಞೆಯನ್ನು ನಾವು ಕಳೆದುಕೊಂಡಂತಿದೆ. ಹಾಗೆಯೇ ವಿಜ್ಞಾನ ನಿಂತ ನೀರಲ್ಲ ಎನ್ನುವುದನ್ನೂ ಗಮನಿಸಬೇಕಾಗಿದೆ. ಪರಂಪರೆಯ ಹೆಸರಿನಲ್ಲಿ ಈಗ ಆತ್ಮಚಿಕಿತ್ಸೆ, ಫೈಥ್ ಹಿಲೀಂಗ್, ಕ್ವಾಂಟಂ ಚಿಕಿತ್ಸೆ  ಎಂದೆಲ್ಲಾ ಜನರನ್ನು ಸುಲಭವಾಗಿ ವಂಚಿಸುವ ಜಾಲ ನಮ್ಮ ಸುತ್ತ ಹರಡಿದೆ.

ಕ್ವಾಂಟಂ ವಿಜ್ಞಾನ ಯಾರಿಗೂ ಅರ್ಥವಾಗದು ಎಂದಿದ್ದರು ಕ್ವಾಂಟಂ ವಿಜ್ಞಾನದ ಪ್ರಮುಖ ವಿಜ್ಞಾನಿ ರಿಚರ್ಡ್ ಫೇಯ್ನ್‌ಮನ್.  ಅದು ಅಣುವಿನ ಒಳಜಗತ್ತಿನ ಕ್ವಾಂಟಂ ವಿಜ್ಞಾನದ ವಿರೋಧಾಭಾಸಾತ್ಮಕ ವಿಸ್ಮಯದ ವಾಸ್ತವತೆಯನ್ನು ಕಂಡು ಅವರು ಬೆರಗಿನಿಂದ ಹೇಳಿರಬಹುದು. ಆದರೆ ಅಂತಹ ಸಂಕೀರ್ಣ ವಿಜ್ಞಾನದ ಹೆಸರನ್ನು ಮನಸ್ಸಿಗೆ ಬಂದ ಹಾಗೆ, ನಮಗೆ ತಿಳಿಯದ ಎಲ್ಲಾ ವಿಚಾರಕ್ಕೂ ಬಳಸುವುದು ವಾಡಿಕೆಯಾಗಿದೆ. ಅಜ್ಞಾನಕ್ಕೆ, ತಿಳಿಯದ ವಿಷಯಗಳಿಗೆ, ಅಂಧವಿಶ್ವಾಸಕ್ಕೆ ಇಂದು ಕ್ವಾಂಟಂ ವಿಜ್ಞಾನದ ಹೆಸರನ್ನು ಬಳಸುವುದು ಹೆಚ್ಚಾಗಿದೆ.

ಮನಸ್ಸಿನ ನೆಮ್ಮದಿ ಸರ್ವರೋಗಕ್ಕೂ ಮದ್ದು; ನೆಮ್ಮದಿಯಿಂದಿರಿ – ಏನೇ ಕಾಯಿಲೆ ಬರಲಿ ಎನ್ನುವುದು ಸಹಜವಾಗಿದೆ. ಇದು ಸರಿಯೇ. ಆದರೂ ಉಪ್ಪು ಹೆಚ್ಚು ತಿಂದರೆ ರಕ್ತದ ಒತ್ತಡ ಹೆಚ್ಚಾಗುತ್ತದೆ. ಒತ್ತಡ ಹೆಚ್ಚಾದಾಗ ನಮ್ಮ ಮನಸ್ಸಿನ ಹತೋಟಿ ಅಷ್ಟರ ಮಟ್ಟಿಗೆ ನಮ್ಮ ಕೈಯಲ್ಲಿರುವುದಿಲ್ಲ. ಒಂದು ಚಿಟಿಕೆ ಉಪ್ಪಿಗೂ ನಮ್ಮ ಮನಸ್ಸಿನ ಮೇಲೆ ಹತೋಟಿ ಇದೆ ಎಂದಾಯಿತು! ದೇಹ–ಮನಸ್ಸುಗಳ ಸಂಬಂಧ ಏಕಮುಖಿ ಸಂಚಾರವಲ್ಲ.

ದೇಹದ ಎಲ್ಲಾ ವಿಚಾರಗಳು ನಮಗೆ ತಿಳಿದಿಲ್ಲ. ತಿಳಿದ್ದದ್ದರಲ್ಲೂ ಕುಂದು–ಕೊರತೆಗಳು ಇರಬಹುದು. ಆದರೂ ನಮ್ಮ ಈಗಿನ ತಿಳಿವಳಿಕೆಯ ಜ್ಞಾನದ ಬೆಳಕಿನಲ್ಲೇ ನಾವು ಸಾಗುವುದು ಸೂಕ್ತ. ಆರೋಗ್ಯದ ವಿಷಯದಲ್ಲಿ ಭಯಭೀತರಾಗುವುದು ಎಷ್ಟು ಅಪೇಕ್ಷಣಿಯವಲ್ಲವೋ, ಅಷ್ಟೇ ನಿರ್ಲಕ್ಷ–ಉಪೇಕ್ಷೆಗಳು ಕೂಡ ಸಾಧುವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT