ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

1. ನನ್ನ ಹೆಸರು ವಿದ್ಯಾ. ನನಗೆ 18 ವರ್ಷ. ನನ್ನ ಅಮ್ಮನಿಗೆ ತುಂಬಾ ಕೋಪ. ಯಾವಾಗಲೂ ಅವರು ಸಿಟ್ಟಿನಲ್ಲೇ ಇರುತ್ತಾರೆ. ನಾನು  ಸಮಾಧಾನ ಮಾಡಲು ಪ್ರಯತ್ನಿಸಿ, ಏನಾದರು ಹೇಳಲು ಹೋದರೆ ಇನ್ನು ಕೋಪ ಮಾಡಿಕೊಳ್ಳುತ್ತಾರೆ. ಅವರಿಗೆ ದೇಹಾರೋಗ್ಯ ಸರಿಯಿಲ್ಲ. ಆದರೂ ಎಲ್ಲದಕ್ಕೂ ಅತಿಯಾಗಿ ಕೋಪ ಮಾಡಿಕೊಳ್ಳುತ್ತಾರೆ. ಇದರಿಂದ ನಾನು ತುಂಬಾ ನೊಂದಿದ್ದೇನೆ.  ನನಗೆ ಓದಿನ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ನನ್ನ ಸಹೋದರಿಯರು ಕೂಡ ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ನಾವು ಅಮ್ಮನ ಜೊತೆ ಹೇಗೆ ಇರಬೇಕು, ಹೇಗೆ ಅವರನ್ನು ಸಮಾಧಾನ ಮಾಡಬೇಕು –  ತಿಳಿಸಿ.
ಓದುವ ವಯಸ್ಸಿನಲ್ಲೇ  ನೀವು ಮನೆಯ ಜವಾಬ್ದಾರಿ  ವಹಿಸಿಕೊಂಡಿರುವುದಕ್ಕೆ  ತಂದೆ–ತಾಯಿ ನಿಮ್ಮ ಬಗ್ಗೆ ಹೆಮ್ಮೆ ಪಡಬೇಕು. ನಿಮ್ಮ ತಾಯಿಯ ಪರಿಸ್ಥಿತಿಯನ್ನು ನೀವು ಅರ್ಥೈಸಿಕೊಂಡಿದ್ದೀರಿ. ಹಾಗೆಯೇ ಒಂದು ಹೆಜ್ಜೆ ಮುಂದೆ ಹೋಗಿ ಅವರೊಂದಿಗೆ ಸಹಾನುಭೂತಿಯಿಂದ ಮಾತನಾಡಿ. ಅವರು ಕಾರಣವಿಲ್ಲದೆ ಕೋಪಗೊಳ್ಳುವುದು ಮತ್ತು ಕಿರಿಕಿರಿ ಅನುಭವಿಸುತ್ತಿರುವುದಕ್ಕೆ ಕಾರಣ ತಿಳಿದುಕೊಳ್ಳಲು ಯತ್ನಿಸಿ.

ನಿಮ್ಮ ತಾಯಿ ಋತುಬಂಧಕ್ಕೆ ಹತ್ತಿರವಿರಬಹುದು. ಹಾಗಾಗಿ ಹಾರ್ಮೋನ್‌ಗಳ ಬದಲಾವಣೆಯಿಂದ ಅವರು ಈ ರೀತಿ ವರ್ತಿಸುವ ಸಾಧ್ಯತೆಗಳಿವೆ. ಅಥವಾ ಅವರು ಹೇಳಿಕೊಳ್ಳಲಾಗದ ಋತುಬಂಧ ಪ್ರಕ್ರಿಯೆಗೆ ಒಳಗಾಗಿರಬಹುದು. ನೀವು ಮನೆಯವರೆಲ್ಲರೂ ನಿಮ್ಮ ತಾಯಿಗೆ ಒಂದಿಷ್ಟು ಸಮಯ ಮೀಸಲಿಡಿ. ಅವರು ಆಡುವ ಮಾತು, ಮಾಡುವ ಕೆಲಸವನ್ನು ವಿರೋಧಿಸದಿರಿ. ಎಲ್ಲರೂ ಅವರನ್ನು ಬೆಂಬಲಿಸಿ.

ಹೀಗೆ ಮಾಡುವುದರಿಂದ ಅವರಲ್ಲಿ ಸ್ವಲ್ಪ ಮಟ್ಟಿಗೆ ಸಾಮಾಧಾನ ಉಂಟಾಗಬಹುದು. ಧ್ಯಾನ ಹಾಗೂ ಯೋಗದಿಂದ ಮನಸ್ಸನ್ನು ಶಾಂತಗೊಳಿಸಿ ಅವರಿಗೆ ಮಾನಸಿಕ ವಿಶ್ರಾಂತಿ ನೀಡಬಹುದು. ಜೊತೆಗೆ ನೀವು ಹಾಗೂ ನಿಮ್ಮ ಸಹೋದರಿಯರು ಈ ಎಲ್ಲಾ ಸಮಸ್ಯೆಗಳ ಜೊತೆಜೊತೆಗೆ ಓದಿನ ಕಡೆ ಹೆಚ್ಚಿನ ಗಮನ ನೀಡಿ. ಇವೆಲ್ಲವೂ ಜೀವನದಲ್ಲಿ ಬಂದಿರುವ ಸವಾಲುಗಳು ಎಂದು ಪರಿಗಣಿಸಿ ಜೀವನವನ್ನು ಧೈರ್ಯದಿಂದ ಎದುರಿಸಿ.

2. ­ನನ್ನ ಹೆಸರು ನವೀನ್. ನನಗೆ ತುಂಬಾ ಸಮಸ್ಯೆಗಳಿವೆ.  ನಾನು ಯಾವುದೇ ಕೆಲಸ ಮಾಡುತ್ತಿರುವಾಗ ಮಧ್ಯದಲ್ಲಿ ಏನಾದರೂ ಅಡಚಣೆ ಉಂಟಾದರೆ ಆ ಕೆಲಸವನ್ನು ಮಧ್ಯದಲ್ಲೇ ನಿಲ್ಲಿಸುತ್ತೇನೆ, ಮತ್ತೆ ಆ ಕೆಲಸದ ಮೇಲೆ ಗಮನ ಕೊಡಲು ಆಗುವುದಿಲ್ಲ. ಅಲ್ಲದೇ, ನಾನು ತುಂಬಾ ಸೋಮಾರಿ. ಅಷ್ಟೇ ಅಲ್ಲದೇ ಕುಳಿತಲ್ಲೇ ನಿದ್ದೆ ಮಾಡುತ್ತೇನೆ. ನಾನು ತುಂಬಾ ದಪ್ಪ ಇದ್ದೇನೆ;  ಸಪೂರ ಆಗುವ ಬಯಕೆ. ನನಗೆ ಗ್ರಹಣಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ದಯವಿಟ್ಟು ನನ್ನ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಿ.
ನೀವು ಇಲ್ಲಿ ನಿಮ್ಮ ವಯಸ್ಸು ಎಷ್ಟು ಎಂಬುದನ್ನು ತಿಳಿಸಿಲ್ಲ. ಇರಲಿ, ನಾನು ಹೇಳುವುದೇನೆಂದರೆ ನೀವು ಈಗಾಗಲೇ ನಿಮಗೆ ಸಹಾಯ ಬೇಕು ಎಂಬುದನ್ನು ತಿಳಿದುಕೊಂಡಿದ್ದೀರಿ, ಜೊತೆಗೆ ಅದನ್ನು ಒಪ್ಪಿದ್ದೀರಿ ಕೂಡ. ಯಾವುದೇ ಕೆಲಸ ಮಾಡಲು ದೈಹಿಕ ಹಾಗೂ ಮಾನಸಿಕ ಆರೋಗ್ಯ  ತುಂಬಾ ಮುಖ್ಯ. ಹಾಗಾಗಿ ನೀವು ಮೊದಲು ಆರೋಗ್ಯದ ಮೇಲೆ ಗಮನಹರಿಸಿ.  ಜೀವನಶೈಲಿಯನ್ನು ಬದಲಾಯಿಸಿಕೊಳ್ಳಿ. ಜಿಮ್‌, ವಾಕಿಂಗ್‌ನಂತಹ ಕಠಿಣ ವ್ಯಾಯಾಮದ ಕಡೆ ಗಮನ ಹರಿಸಿ.

ಪ್ರತಿನಿತ್ಯ ಅರ್ಧಗಂಟೆ ವ್ಯಾಯಾಮ ಮತ್ತು ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಮಾನಸಿಕ ಸಮಾತೋಲನವನ್ನು ಕಾಪಾಡಿಕೊಳ್ಳಬಹುದು. ಒಮ್ಮೆ ನೀವು ದೈಹಿಕವಾಗಿ ಸದೃಢ ಹಾಗೂ ಕ್ರಿಯಾಶೀಲರಾದರೆ ನೀವು ಕೆಲಸ ಮಾಡುವ ಸ್ಥಳದಲ್ಲೂ ಖುಷಿಯಿಂದ ಇರುತ್ತೀರಿ.  ಯಾವುದೇ ಕೆಲಸದಲ್ಲಾದರೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಿ.

ಕೆಲಸವನ್ನು ಪ್ರೀತಿಸಿ. ಇದರಿಂದ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯ. ಅರ್ಧಕ್ಕೆ ನಿಲ್ಲಿಸಿದ ಕೆಲಸವನ್ನು ಕೂಡ  ಪೂರ್ಣ ಮಾಡಲು ಆಗ ಮನಸ್ಸು ಬಯಸುತ್ತದೆ. ನೀವು ಸೋಮಾರಿತನದಿಂದ ಹೊರಬರಲು  ಇರುವ ಒಂದೇ ಒಂದು ದಾರಿಯೆಂದರೆ ದೈಹಿಕವಾಗಿ ಕ್ರಿಯಾಶೀಲರಾಗಿ; ಅಲ್ಲದೇ ಎಲ್ಲ ಸಮಯದಲ್ಲೂ ಖುಷಿಯಿಂದ ಇರಿ. ನೀವೊಬ್ಬರೇ, ನಿಮ್ಮಿಂದಲೇ ಇವೆಲ್ಲವನ್ನೂ ಮಾಡಲು ಸಾಧ್ಯ.

3. ನನ್ನ ಹೆಸರು ಮೆಹಬೂಬ್‌ ಪಾಷಾ. ನನಗೆ ಈ ಜಗತ್ತೇ ಬೇಸರವಾಗಿದೆ. ಕಾರಣ ಮನೆಯಲ್ಲಿ ನಾನೇ ದೊಡ್ಡ  ಮಗ. ನಾನು ದುಡಿದರೆ ಮಾತ್ರ  ಮನೆ ನಡೆಯೋದು. ಅದರಿಂದ  ನಾನೇ ಕೆಲಸ ಮಾಡಿ ನನ್ನ ಸಂಸಾರವನ್ನು ನೋಡಿಕೊಳ್ಳಬೇಕು. ಆದರೆ  ಸರಿಯಾದ ಕೆಲಸವೇ ಸಿಗುತ್ತಿಲ್ಲ. ಸಿಕ್ಕರೂ ಸರಿಯಾದ ಸಂಬಳ ನೀಡುತ್ತಿಲ್ಲ. ಇವೆಲ್ಲಾ ನನಗೇ ಯಾಕೆ ಆಗುತ್ತಿದೆ ಎನ್ನಿಸುತ್ತಿದೆ. ಮನೆಗೆ ಹೋದರೆ ತಾಯಿ ಬೈಯುತ್ತಾಳೆ, ಸ್ನೇಹಿತರ ಜೊತೆ ಇರೋಣ ಎಂದರೆ ಅವರು ಗೇಲಿ ಮಾಡುತ್ತಾರೆ. ಇದರಿಂದ  ಮಾನಸಿಕವಾಗಿ ನೊಂದಿದ್ದೇನೆ. ಈ ಸಮಸ್ಯೆಗೆ ನಿಮ್ಮಲ್ಲಿ ಏನಾದರೂ ಪರಿಹಾರ ಇದ್ದರೆ ತಿಳಿಸಿ.
ನನಗೆ ಅರ್ಥವಾಗುತ್ತಿದೆ. ಒಬ್ಬರೇ ಇಡೀ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ಬೇರೆ ಯಾವುದೇ ದಾರಿಯಿಲ್ಲದಾಗ ನೀವು ಧೈರ್ಯದಿಂದ ಮುಂದೆ ನಿಂತು ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಳ್ಳಲೇಬೇಕು, ನೀವು ನಿಮ್ಮ ವಯಸ್ಸು ಮತ್ತು ಏನು ಕೆಲಸ ಮಾಡುತ್ತಿದ್ದೀರಿ ಎಂಬುದನ್ನು ಇಲ್ಲಿ ತಿಳಿಸಿಲ್ಲ. ನಿಮಗೆ ಸಮಾಧಾನ ತರುವ ಕೆಲಸವನ್ನು ಹುಡುಕಲು ಪ್ರಯತ್ನಿಸಿ. ಅವಕಾಶಗಳು ಬರುತ್ತಿರುತ್ತವೆ. ಆದರೆ ತಾಳ್ಮೆಯಿಂದ ಕಾಯುವ ಮನೋಭಾವವಿರಬೇಕು, ನಿಮಗೆ ತಿಳಿದಿರಬೇಕು; ಯಾವುದೇ ಕೆಲಸವಾದರೂ ಕಠಿಣ ಶ್ರಮ ಹಾಗೂ ಹೋರಾಟವಿಲ್ಲದೇ  ಸುಲಭವಾಗಿ ಜಯಗಳಿಸಲು ಸಾಧ್ಯವಿಲ್ಲ.

ಜೀವನವನ್ನು ಒಪ್ಪಿಕೊಂಡು, ಬಂದಿದ್ದನ್ನು ಸ್ವೀಕರಿಸಿ ಮುಂದೆ ಸಾಗಬೇಕು. ಜೀವನವನ್ನು ಸವಾಲಾಗಿ ಸ್ವೀಕರಿಸುವ ಮನಃಸ್ಥಿತಿ ಹೊಂದಿದ್ದರೆ ಖಂಡಿತ ಗೆಲುವು ನಿಮ್ಮದಾಗುತ್ತದೆ. ನಿಮ್ಮ ಜೀವನ ಹಾಗೂ ಪರಿಸ್ಥಿತಿಯನ್ನು ನೋಡಿ ನಗುವವರು ನಿಮ್ಮ ಸ್ನೇಹಿತರಲ್ಲ. ಅಂತಹವರಿಂದ ದೂರ ಇರಿ. ನಾನು ಕುಟುಂಬಕ್ಕೆ  ಕೈಲಾದ ಸಹಾಯ ಮಾಡುತ್ತೇನೆ ಎಂದು ನಿಮ್ಮ ತಾಯಿಗೆ ಭರವಸೆ ನೀಡಿ. ಖಂಡಿತ ಅವರು ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ.

4. ನನ್ನ ಹೆಸರು ಪ್ರವೀಣ್. ನಾನು 2014ರಲ್ಲಿ ಐಟಿಐ ಮುಗಿಸಿದೆ. ಮುಂದೆ ಏನು ಓದಬೇಕು ಎಂದು ತೋಚದೆ ಕೆಲಸಕ್ಕೆ ಸೇರಿದೆ. ಕೆಲಸಕ್ಕೆ ಸೇರಿದ ಮೇಲೆ ನನಗೆ ಕಷ್ಟದ ಅರಿವಾಯಿತು. ಮುಂದೆ ಓದಬೇಕಿತ್ತು ಎನ್ನಿಸಿತ್ತು. ಹಾಗಾಗಿ ನಾನು ಈ ವರ್ಷ ಡಿಪ್ಲೋಮಾ ಪಾಲಿಟೆಕ್ನಿಕ್ ಸೇರುತ್ತಿದ್ದೇನೆ. ಆದರೆ ನನಗೆ ಈ ನಡುವೆ ಏನೋ ಒಂದು ರಿತಿಯ ಭಯ. ನಾನು ಓದುತ್ತೇನೋ ಇಲ್ಲವೋ ಎಂದು ಮನಸ್ಸು ಚಂಚಲವಾಗುತ್ತಿದೆ. ಅದಕ್ಕಾಗಿ ನಾನು ಏನು ಮಾಡಬೇಕು ದಯವಿಟ್ಟು ತಿಳಿಸಿ.
ಮುಂದೆ ಓದುತ್ತೇನೆ ಎಂಬ ನಿಮ್ಮ ಈ ನಿರ್ಧಾರ ನಿಜಕ್ಕೂ ಶ್ಲಾಘನೀಯ. ಓದು ಮುಂದುವರಿಸುವುದರಿಂದ ತಾಂತ್ರಿಕವಾಗಿ ನೀವು ಇನ್ನಷ್ಟು ಮುಂದುವರಿಯಲು ಸಾಧ್ಯ. ಅಲ್ಲದೇ, ಈ ಕ್ಷೇತ್ರದಲ್ಲಿ ನಿಮ್ಮನ್ನು ಇನ್ನಷ್ಟು ತೆರೆದುಕೊಳ್ಳಬಹುದು. ಹಾಗಾಗಿ ಡಿಪ್ಲೋಮಾ ಓದುವ ನಿಮ್ಮ ಈ ನಿರ್ಧಾರ ಒಳ್ಳೆಯದು. ತರಗತಿಗಳನ್ನು ತಪ್ಪಿಸಬೇಡಿ, ನಿಮ್ಮ ಗುರಿಯ ಮೇಲೆ ನಿಗಾ ಇರಲಿ.

ಎಲ್ಲ ಪರೀಕ್ಷೆಗಳಲ್ಲೂ ಉತ್ತಮ ಅಂಕಗಳಿಸುವ ಗುರಿ ಇರಿಸಿಕೊಳ್ಳಿ. ಇದರಿಂದ ನೀವು ಒಳ್ಳೆಯ ಕೆಲಸವನ್ನು ಹುಡುಕಿಕೊಳ್ಳಲು ಸಾಧ್ಯ. ಬಹಳ ದಿನಗಳ ನಂತರ ಕಾಲೇಜಿಗೆ ಹೋಗುತ್ತಿದ್ದೀರಿ. ಹೀಗಾಗಿ ಭಯ ಸಾಮಾನ್ಯ.  ಆದರೆ ಭಯವನ್ನು ಬದಿಗೊತ್ತಿ ಓದಿನ ಕಡೆಗಷ್ಟೇ ಗಮನ ಕೊಡಿ. ಆಗ ಭಯ ತಾನಾಗಿಯೇ ದೂರವಾಗುತ್ತದೆ. ಪ್ರಾಣಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಏಕಾಗ್ರತೆ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT