ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು ಸಾಗಾಣೆ: ಕೃಷ್ಣೆ ಒಡಲ ಲೂಟಿ ಅವ್ಯಾಹತ

ಸಾವಳಗಿ ಹೋಬಳಿ: ಟ್ರ್ಯಾಕ್ಟರ್, ಎತ್ತಿನಬಂಡಿ, ಅಕ್ರಮವಾಗಿ ನಿತ್ಯ ಸಾವಿರಾರು ಲೋಡ್ ಸಾಗಣೆ
Last Updated 3 ಜೂನ್ 2017, 11:07 IST
ಅಕ್ಷರ ಗಾತ್ರ
ADVERTISEMENT

ಬಾಗಲಕೋಟೆ: ಜಮಖಂಡಿ ತಾಲ್ಲೂಕು ಸಾವಳಗಿ ಹೋಬಳಿಯ ಸಾವಳಗಿ, ಬಿದರಿ, ಜನ್ನೂರ ಹಾಗೂ ಬಬಲಾದಿ ಬಳಿ ಕೃಷ್ಣಾ ನದಿ ಪಾತ್ರದಲ್ಲಿ ಅವ್ಯಾಹತ ವಾಗಿ ಮರಳು ತೆಗೆಯಲಾಗುತ್ತಿದೆ. ಹಗಲು–ರಾತ್ರಿ ಎನ್ನದೇ ಟ್ರ್ಯಾಕ್ಟರ್, ಎತ್ತಿನಬಂಡಿಗಳಲ್ಲಿ ಅಕ್ರಮವಾಗಿ ಸಾವಿರಾರು ಲೋಡ್‌ ಮರಳು ಬಗೆದು ಸಾಗಿಸಲಾಗುತ್ತಿದೆ. ಇದರಿಂದ ನದಿಯ ಒಡಲು ಬರಿದಾಗುತ್ತಿದೆ.

24 ಗಂಟೆ ಮರಳು ತೆಗೆಯುತ್ತಾರೆ: ‘ಮೊದಲೆಲ್ಲಾ ರಾತ್ರಿ ವೇಳೆ ಕದ್ದು ಮುಚ್ಚಿ ಮರಳು ತೆಗೆಯುತ್ತಿದ್ದರು. ಆಗೆಲ್ಲಾ ಸ್ಥಳೀಯ ಪೊಲೀಸರೇ ಮುಂದೆ ನಿಂತು ಟ್ರ್ಯಾಕ್ಟರ್‌ಗಿಷ್ಟು ಎಂದು ಮಾಮೂಲಿ ಪಡೆದು ಬಿಡುತ್ತಿದ್ದರು. ಈಗ ಹಗಲು–ರಾತ್ರಿ ಎನ್ನದೇ ದಿನದ 24 ಗಂಟೆಯೂ ರಾಜಾರೋಷವಾಗಿ ಮರಳು ತೆಗೆಯಲಾಗುತ್ತಿದೆ. ನದಿಯ ಒಡಲಲ್ಲಿಯೇ ಟ್ರ್ಯಾಕ್ಟರ್‌ ಗಳನ್ನು ನಿಲ್ಲಿಸಿಕೊಂಡು ನೂರಾರು ಮಂದಿ ಕೂಲಿ ಕಾರ್ಮಿಕರು ಮರಳು ತೆಗೆದು ಲೋಡ್ ಮಾಡುತ್ತಾರೆ. ಈಗೆಲ್ಲಾ ಮೇಲಿನವರಿಗೆ ಮಾಮೂಲಿ ಫಿಕ್ಸ್ ಮಾಡಲಾಗಿದೆ. ಎಂದು ಮರಳು ಸಾಗಣೆ ಮಾಡುವವರೇ ಹೇಳುತ್ತಿದ್ದಾರೆ. ಹಾಗಾಗಿ ಪೊಲೀಸರು ಇಲ್ಲಿಗೆ ಬರುತ್ತಿಲ್ಲ’ ಎಂದು ಬಿದರಿ ಗ್ರಾಮಸ್ಥರು ಅರೋಪಿಸುತ್ತಾರೆ.

ನದಿ ದಂಡೆಯಲ್ಲಿ ಸಂಗ್ರಹ: ನದಿಯಿಂದ ಕೊಂಡೊಯ್ದ ಮರಳನ್ನು ಕೆಲವರು ಬ್ರಾಸ್‌ಗೆ ₹ 5ರಿಂದ 6 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೆಲ ವರು ಅಲ್ಲಿಯೇ ದಂಡೆಯಲ್ಲಿ ಸಂಗ್ರಹಿಸಿ ಡುತ್ತಾರೆ. ಮಳೆಗಾಲ ಆರಂಭವಾಗಿ ನದಿಯಲ್ಲಿ ನೀರು ಬಂದರೆ ಯಾರೂ ಇತ್ತ ತಲೆ ಹಾಕುವುದಿಲ್ಲ. ಆಗ ಮರಳು ಕೊಂಡೊಯ್ಯಲು ಸುಲಭ ಎಂಬುದು ಅವರ ಲೆಕ್ಕಾಚಾರ. ಇದರಿಂದ ನದಿ ದಡದಲ್ಲಿ ನೂರಾರು ಬ್ರಾಸ್‌ ಮರಳಿನ ಸಂಗ್ರಹ ಕಾಣುತ್ತದೆ. ‘ಬಿದರಿಯ ಸರ್ಕಾರಿ ಶಾಲೆಯ ಎದುರಿನ ರಸ್ತೆಯಿಂದಲೇ ನದಿಯತ್ತ ಟ್ರ್ಯಾಕ್ಟರ್‌ಗಳು ಹೋಗುತ್ತವೆ. ಅವುಗಳ ಅತಿಯಾದ ವೇಗ ಮಕ್ಕಳ ಸುರಕ್ಷತೆಯ ಬಗ್ಗೆ ಚಿಂತೆ ಮೂಡಿಸಿದೆ’ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.

ಸ್ಥಳೀಯ ಗುಂಪುಗಳಿಂದ ದರೋಡೆ: ಅಕ್ರಮವಾಗಿ ಮರಳು ಕೊಂಡೊಯ್ಯುವ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಸ್ಥಳೀಯ ಗುಂಪುಗಳು ದರೋಡೆ ಮಾಡುತ್ತಿರು ವುದು ಮತ್ತೊಂದು ವಿಶೇಷ. ಮರಳು ಸಾಗಣೆ ಮಾಡುವ ಪ್ರತೀ ಟ್ರ್ಯಾಕ್ಟರ್‌ ನವರು ಒಂದು ಲೋಡ್ ಅವರಿಗೆ ಕಾಣಿಕೆಯಾಗಿ ನೀಡಬೇಕು. ಇಲ್ಲವೇ ₹ 5 ಸಾವಿರ ಕೊಡಬೇಕು.

‘ಗುಡಿ ಕಟ್ಟುವ ನೆಪದಲ್ಲಿ ಮರಳು ಕೇಳುತ್ತಾರೆ. ಕೊಡದಿದ್ದರೆ ಒದೆಯು ತ್ತಾರೆ. ಅವಾಚ್ಯವಾಗಿ ನಿಂದಿಸುತ್ತಾರೆ. ಕೊನೆಗೆ ಟ್ರ್ಯಾಕ್ಟರ್ ಹಿಡಿದು ನಿಲ್ಲಿಸಿ ಪೊಲೀಸರನ್ನು ಕರೆಸಿ ಪ್ರಕರಣ ದಾಖಲಿಸುತ್ತಾರೆ. ಹೀಗೆ ಅಕ್ರಮ ಸಾಗಣೆ ದಾರರಿಂದ ಸಂಗ್ರಹಿಸಿದ ನೂರಾರು ಲೋಡ್‌ ಮರಳನ್ನು ಮಾರಿಕೊಳ್ಳ ಲಾಗುತ್ತದೆ. ನಿರಂತವಾಗಿ ನಡೆಯುತ್ತಿ ರುವ ಈ ದಂದೆಯ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ಇದೆ. ಆದರೆ ಅವರು ಕ್ರಮ ಕೈಗೊಳ್ಳುತ್ತಿಲ್ಲ’ ಎಂಬುದು ಸ್ಥಳೀಯರ ಆರೋಪ.

ನೆಪ ಮಾತ್ರಕ್ಕೆ ಪ್ರಕರಣ ದಾಖಲು: ಕೃಷ್ಣಾ ನದಿ ಬರಿದಾಗಿರುವ ಕಡೆಯಲ್ಲೆಲ್ಲಾ ನಿತ್ಯ ಸಾವಿರಾರು ಲೋಡ್ ಮರಳು ಅಕ್ರಮ ವಾಗಿ ಸಾಗಣೆಯಾಗುತ್ತಿದೆ. ಪೊಲೀಸರು ಮಾತ್ರ ತಿಂಗಳಿಗೆ ಎರಡು ಇಲ್ಲವೇ ಮೂರು ಟ್ರ್ಯಾಕ್ಟರ್‌ ಹಿಡಿದು ಪ್ರಕರಣ ದಾಖಲಿಸುತ್ತಾರೆ. ತಾವು ಕೈಗೊಂಡಿರುವ ಕ್ರಮದ ಬಗ್ಗೆ ಮೇಲಧಿಕಾರಿಗಳಿಗೆ ಲೆಕ್ಕ ಕೊಡಲು ಬೆರಳೆಣಿಕೆಯಷ್ಟು ಪ್ರಕರಣ ದಾಖಲಿಸಲಾಗುತ್ತಿದೆ.

ರಾತ್ರಿ ವೇಳೆ ನದಿ ಪಾತ್ರದಲ್ಲಿ ಕುರಿಮಂದೆಯಂತೆ ಟ್ರ್ಯಾಕ್ಟರ್‌ ಗಳು ಕಾಣಸಿಗುತ್ತವೆ. ನದಿಗೆ ಪೈಪ್ ಹಾಕಿ ನೀರು ತೆಗೆಯುವವರು ಕೂಡ ಪೈಪ್‌ ಮೇಲೆ ಟ್ರ್ಯಾಕ್ಟರ್ ಹಾಯ್ದು ಹೋಗು ವುದಿಂದ ಪ್ರತಿ ಟ್ರ್ಯಾಕ್ಟರ್‌ನಿಂದ ₹ 100 ವಸೂಲಿ ಮಾಡುತ್ತಾರೆ. ಬಿದರಿ ಬಳಿ ಅಕ್ರಮವಾಗಿ ಮರಳು ತೆಗೆಯುತ್ತಿರುವ ವರಿಗೆ ಇಬ್ಬರು ಪೊಲೀಸ್ಸಿ ಬ್ಬಂದಿಯೇ ಮುಂದೆ ನಿಂತು  ರಕ್ಷಣೆ ನೀಡುತ್ತಿರುವ ಬಗ್ಗೆ  20 ದಿನಗಳ ಹಿಂದೆ ಗ್ರಾಮಸ್ಥರು ನೀಡಿದ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಅವರಿಗೆ ‘ಪ್ರಜಾವಾಣಿ’ ನೀಡಿತ್ತು.

‘ಆಗಿನಿಂದ ಪೊಲೀಸರು ಸ್ಥಳಕ್ಕೆ ಬರುತ್ತಿಲ್ಲ. ಆದರೆ ಅಕ್ರಮ ಮರಳು ಗಾರಿಕೆ ಮಾತ್ರ ದುಪ್ಟಟ್ಟಾಗಿದೆ. ಇದರಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದಂಧೆಗೆ ಬೆಂಬಲವಾಗಿ ನಿಂತಿದ್ದಾರೆ’ ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಾರೆ.

**

ಘಟಪ್ರಭೆಯಲ್ಲೂ ಮರಳು ಸಾಗಣೆ..
ಬಾಗಲಕೋಟೆ ತಾಲ್ಲೂಕಿನ ಹಳೇ ವೀರಾಪುರ ಮತ್ತು ಹಳೇ ಕೆಸನೂರು ಬಳಿ ಘಟಪ್ರಭಾ ನದಿಯಿಂದ ರಾತ್ರಿಯೆಲ್ಲಾ ಟಿಪ್ಪರ್‌ಗಳಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಿಸಲಾಗುತ್ತಿದೆ. ವಿದ್ಯಾಗಿರಿಯ ಹೋಟೆಲ್ ಮಾಲೀಕರೊಬ್ಬರು ಮುಂದೆ ನಿಂತು ಮರಳು ತೆಗೆಸುತ್ತಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಯೊಬ್ಬರಿಗೆ ಅವರು ಆಪ್ತರಾದ ಕಾರಣ ಮಾಹಿತಿ ನೀಡಿದರೂ ಪೊಲೀಸರು ಏನೂ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಔತಣಕೂಟ ಏರ್ಪಡಿಸಿದ್ದರು: ಈ ಹಿಂದೆ ಬಾಗಲಕೋಟೆ ಉಪವಿಭಾಗದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ಮುಂದೆ ನಿಂತು ಅಕ್ರಮ ಮರಳುಗಾರಿಕೆ ದಂಧೆ ಪೋಷಿಸುತ್ತಿದ್ದರು. ಬಿ.ಎಂ.ಲಕ್ಷ್ಮೀಪ್ರಸಾದ್  ಎಎಸ್‌ಪಿಯಾಗಿ ಬಂದ ನಂತರ ತಹಶೀಲ್ದಾರ್ ವಿನಯಕುಲಕರ್ಣಿ ಜತೆ ಸೇರಿ ಕಡಿವಾಣ ಹಾಕಿದ್ದರು. ಎಎಸ್‌ಪಿ ಅವರು ಮದುವೆಯ ನಿಮಿತ್ತ ಸುದೀರ್ಘ ರಜೆ ಮೇಲೆ ತೆರಳಿದ ನಂತರ ಅಕ್ರಮ ಮರಳು ದಂಧೆ ಮತ್ತೆ ಮೊದಲಿನ ವೈಭವ ಪಡೆದಿದೆ. ಲಕ್ಷ್ಮೀಪ್ರಸಾದ್ ರಜೆ ಹಾಕಿ ತೆರಳಿದ ಸುದ್ದಿ ಕೇಳಿ ಮರಳು ಸಾಗಣೆದಾರರು ಔತಣಕೂಟ ನಡೆಸಿದ್ದರು ಎಂದು ಹೇಳಲಾಗುತ್ತಿದೆ.

**

ಇಲಾಖೆ ಸಿಬ್ಬಂದಿಯನ್ನು ತಕ್ಷಣ ಅಲ್ಲಿಗೆ ಕಳುಹಿಸುವೆ. ಅಕ್ರಮವಾಗಿ ಮರಳು ತೆಗೆಯುವವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡುವೆ
-ಸಿ.ಬಿ.ರಿಷ್ಯಂತ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT