ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಳು ಹಾದಿಯಲ್ಲಿ ‘ಕೆಂಪು ಸೂರ್ಯ’!

Last Updated 4 ಜೂನ್ 2017, 8:12 IST
ಅಕ್ಷರ ಗಾತ್ರ

ಹಿಂದೊಮ್ಮೆ ಗುವಾಹಟಿಗೆ ಹೊರಟಿದ್ದಾಗ ಜತೆಗಿದ್ದ ಗೆಳೆಯರೊಬ್ಬರು ‘ನಕ್ಸಲ್ಬರಿ ಇಲ್ಲಿಂದ ತುಂಬಾ ಹತ್ತಿರದಲ್ಲೇ ಇದೆ’ ಎಂದರು. ಸಿಲಿಗುರಿಯಿಂದ ಅಲ್ಲಿಗೆ ಒಂದು ಗಂಟೆಯ ಪ್ರಯಾಣವಷ್ಟೆ ಎಂಬ ಮಾಹಿತಿಯನ್ನೂ ನೀಡಿದರು.

ಕೃಷಿ ಕಾರ್ಮಿಕರು ಕ್ರಾಂತಿ ಗೀತೆಯನ್ನು ಮೊಳಗಿಸಿದ ಆ ಕೆಂಪು ನೆಲವನ್ನೊಮ್ಮೆ ನೋಡಬೇಕಲ್ಲ ಎನ್ನುವ ಕುತೂಹಲ. ಆದರೆ, ಪೂರ್ವ ನಿರ್ಧರಿತ ಕೆಲಸದ ನಡುವೆ  ಪುರುಸೊತ್ತು ಮಾಡಿಕೊಂಡು ಅತ್ತ ಹೋಗಲು ಸಾಧ್ಯವಾಗಲಿಲ್ಲ.

ಬರೋಬ್ಬರಿ ಐವತ್ತು ವರ್ಷಗಳ ಹಿಂದೆ ಮಾವೋವಾದಿಗಳ ಸಶಸ್ತ್ರ ದಂಗೆಗೆ ಚಿಮ್ಮು ಹಲಗೆಯಾದ ಊರು ನಕ್ಸಲ್ಬರಿ. ಅದು ಕೇವಲ ಊರಿನ ಹೆಸರಾಗಿ ಉಳಿಯದೆ ಕ್ರಾಂತಿಕಾರಿ ಮಾರ್ಗವೊಂದರ ದ್ಯೋತಕವಾಗಿ ದೇಶದ ತುಂಬಾ ಸಂಚಲನ ಮೂಡಿಸಿದ ಘೋಷವಾಯಿತು. ಶೋಷಣೆಗೆ ಒಳಗಾದ ಸಮುದಾಯಗಳ ಯುವಕರ ಎದೆಯೊಳಗಿನ ಹಾಡಾಯಿತು. ಆ ಮಾರ್ಗದಲ್ಲಿ ಹೆಜ್ಜೆ ಹಾಕಿದವರನ್ನು ‘ನಕ್ಸಲೀಯರು’ ಎಂದು ಗುರ್ತಿಸಲಾಯಿತು.

ಭೂಮಾಲೀಕರಿಂದ ನಿರಂತರವಾಗಿ ಅನುಭವಿಸಿದ ಶೋಷಣೆಯಿಂದ ಮಡುವುಗಟ್ಟಿದ್ದ ಕೃಷಿ ಕಾರ್ಮಿಕರ ಆಕ್ರೋಶಕ್ಕೆ ಚಾರು ಮಜುಂದಾರ್‌ ನೇತೃತ್ವದ ಕ್ರಾಂತಿಕಾರಿ ಕಮ್ಯುನಿಸ್ಟ್‌ ಕಾರ್ಯಕರ್ತರು ಹಳ್ಳಿ–ಹಳ್ಳಿಗಳಲ್ಲಿ ಓಡಾಡಿ ಕಾವು ಕೊಟ್ಟರು. ರಷ್ಯಾ ಹಾಗೂ ಚೀನಾ ಕ್ರಾಂತಿಗಳ ಯಶಸ್ಸಿನ ಕಥೆಗಳು ಹೋರಾಟಕ್ಕೆ ಹುರುಪು ತುಂಬಿದ್ದವು.

ಅದು 1967ರ ಮಾರ್ಚ್‌ ತಿಂಗಳು. ಜಮೀನ್ದಾರರ ವಶದಲ್ಲಿದ್ದ ಭೂಮಿಯನ್ನು ಸುತ್ತುವರಿದ ರೈತರ ಗುಂಪು, ಅಲ್ಲಿ ಕೆಂಬಾವುಟ ನೆಟ್ಟು, ಬಲು ವೀರಾವೇಶದಿಂದ ಬೆಳೆಯನ್ನೆಲ್ಲ ಕೊಯ್ಲು ಮಾಡಿಬಿಟ್ಟಿತು. ಪ್ರತಿದಾಳಿಯನ್ನು ಸಶಸ್ತ್ರ ಹೋರಾಟದ ಮೂಲಕವೇ ಹಿಮ್ಮೆಟ್ಟಿಸಲು ನಿರ್ಧರಿಸಿದ ಈ ಗುಂಪು, ಬಿಲ್ಲು–ಬಾಣ, ಕೃಷಿ ಸಲಕರಣೆ, ಲಾಠಿಗಳೊಂದಿಗೆ ಸಾಗಿ ಹಳ್ಳಿಗಳ ಭೂಮಾಲೀಕರ ತಿಜೋರಿಗಳಲ್ಲಿದ್ದ ದಸ್ತಾವೇಜುಗಳನ್ನೆಲ್ಲ ವಶಪಡಿಸಿಕೊಂಡು ಸುಟ್ಟುಹಾಕಿತು.

ಬಿಗುಲ್‌ ಕಿಸನ್‌ ಎಂಬ ಗೇಣಿ ರೈತನ ಮೇಲೆ ಭೂಮಾಲೀಕರು ಮಾರಣಾಂತಿಕ ಹಲ್ಲೆ ನಡೆಸಿದಾಗ ನೇರ ಘರ್ಷಣೆ ಆರಂಭವಾಯಿತು. ಬಂಗಾಳದಲ್ಲಿ ಸಂಯುಕ್ತರಂಗದ ಆಡಳಿತದ ಕಾಲವದು. ಹೋರಾಟದ ಕಾವನ್ನು ತಗ್ಗಿಸಲು ಕಮ್ಯುನಿಸ್ಟ್‌ ನಾಯಕರು ಪ್ರಯತ್ನ ಮಾಡಿದರಾದರೂ ಚಾರು ನೇತೃತ್ವದ ತಂಡ ಅದನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.

ಆಗ ಗೃಹ ಮಂತ್ರಿಯಾಗಿದ್ದ ಕಮ್ಯುನಿಸ್ಟ್‌ ನಾಯಕ ಜ್ಯೋತಿಬಸು, ಹೋರಾಟವನ್ನು ಹತ್ತಿಕ್ಕಲು ಒಂದುಕಾಲದ ತಮ್ಮ ಸಂಗಾತಿಗಳ ಮೇಲೆ ಪೊಲೀಸ್‌ ಬಲ ಪ್ರಯೋಗಕ್ಕೆ ಆದೇಶ ನೀಡಿದರು. ಅದೇ ವರ್ಷ ಮೇ 25ರಂದು ಆದಿವಾಸಿ ಹಟ್ಟಿಯೊಂದರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಲು ಬಂದಾಗ ನಡೆದ ಘರ್ಷಣೆಯಲ್ಲಿ ಸೋನಮ್‌ ವಾಂಗಡಿ ಎಂಬ ಇನ್‌ಸ್ಪೆಕ್ಟರ್‌ ಹತ್ಯೆಗೀಡಾದರು. ಹೌದು, ಮುಂದಿನ ಐವತ್ತು ವರ್ಷಗಳಲ್ಲಿ ಸಶಸ್ತ್ರ ಕ್ರಾಂತಿ ಹಾಗೂ ಅದನ್ನು ಹತ್ತಿಕ್ಕಲು ನಡೆಸಿದ ಪೊಲೀಸ್‌ ಕಾರ್ಯಾಚರಣೆಗಳು ಹರಿಸಿದ ರಕ್ತದ ಹೊನಲಿಗೆ ನಾಂದಿಯಾದ ಘಟನೆ ಇದು.

ಇನ್‌ಸ್ಪೆಕ್ಟರ್‌ ವಾಂಗಡಿ ಹತ್ಯೆಯಿಂದ ರೊಚ್ಚಿಗೆದ್ದ ಪೊಲೀಸರು ‘ಪ್ರಸಾದ್‌ ಜೋತೆ’ ಎಂಬ ಹಳ್ಳಿಯಲ್ಲಿ ಗೋಲಿಬಾರ್‌ ಮಾಡಿದರು. ಏಳು ಮಂದಿ ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಗುಂಡಿನ ಸುರಿಮಳೆಯಲ್ಲಿ ಆಹುತಿಯಾದರು. ಆಕ್ರೋಶದಿಂದ ಕುದಿದ ನಕ್ಸಲ್ಬರಿ, ಖಾರೀಬರಿ, ಫನ್ಸಿದೇವಾ ಪ್ರದೇಶಗಳಲ್ಲಿ ಭೂಮಾಲೀಕರ ಮನೆಗಳಿಗೆ ನುಗ್ಗಿದ ರೈತರು ಬಂದೂಕು, ಮದ್ದುಗುಂಡುಗಳನ್ನು ಸಂಗ್ರಹಿಸಿ ಪ್ರತಿಹೋರಾಟಕ್ಕೆ ಸಜ್ಜಾಗುತ್ತಿದ್ದಾಗಲೇ ಸಾವಿರಾರು ಸಂಖ್ಯೆಯಲ್ಲಿ ಸೆರೆಸಿಕ್ಕರು.

ವಸಂತ ಮೇಘ ಗರ್ಜನೆ
ನಕ್ಸಲ್ಬರಿ ಬಂಡಾಯವನ್ನು ಚೀನಾ ಸರ್ಕಾರ ‘ವಸಂತ ಮೇಘ ಗರ್ಜನೆ’ ಎಂದು ಕಾವ್ಯಾತ್ಮಕವಾಗಿ ಬಣ್ಣಿಸಿತು. ‘ಭಾರತ ಭೂಮಿಯ ಮೇಲೆ ವಸಂತ ಮೇಘ ಗರ್ಜನೆಯ ನಾದವೊಂದು ಮೊಳಗಿದೆ. ಭಾರತೀಯ ಕಮ್ಯುನಿಸ್ಟ್‌ ಪಕ್ಷದ ಕ್ರಾಂತಿಕಾರಿ ಗುಂಪಿನ ನಾಯಕತ್ವದಲ್ಲಿ ಗ್ರಾಮೀಣ ಕ್ರಾಂತಿಕಾರಿ ಸಶಸ್ತ್ರ ಹೋರಾಟದ ಕೆಂಪು ಪ್ರದೇಶವೊಂದು ರೂಪುಗೊಂಡಿದೆ’ ಎಂದು ಅಲ್ಲಿನ ಸರ್ಕಾರ ಸಂಭ್ರಮಿಸಿತು.

ತಣ್ಣನೆಯ ಹಿಮಾಲಯಕ್ಕೆ ಹತ್ತಿರದಲ್ಲಿರುವ, ದಟ್ಟ ಕಾಡಿನಿಂದ ಸುತ್ತುವರಿದ, ಚಹಾ ತೋಟಗಳ ನಡುವೆ ಪವಡಿಸಿದ ನಕ್ಸಲ್ಬರಿ ಎಂಬ ಪುಟ್ಟ ಊರಿನಲ್ಲಿ ನಡೆದ ಬಂಡಾಯದ ಕಿಚ್ಚು ಹಿರಿದಾದ ಪರ್ವತಗಳು, ದಟ್ಟ ಕಾಡುಗಳು, ನದಿ–ತೊರೆಗಳನ್ನೆಲ್ಲ ದಾಟಿಕೊಂಡು ಉಲ್ಕೆಗಳಂತೆ ಉರಿಯುತ್ತಾ ಬಿದ್ದ ಪರಿಣಾಮ, ಬಿಹಾರ, ಒಡಿಶಾ, ಪಂಜಾಬ್‌, ತೆಲಂಗಾಣ, ಆಂಧ್ರಪ್ರದೇಶದಲ್ಲಿ ನಕ್ಸಲ್‌ ಚಟುವಟಿಕೆಗಳ ಅಗ್ನಿಕುಂಡಗಳು ದಿಗ್ಗನೆ ಹೊತ್ತಿಕೊಂಡವು.

ಈ ಮಧ್ಯೆ ಸಿಪಿಎಂ ನಾಯಕತ್ವ ನಕ್ಸಲ್ಬರಿ ಹೋರಾಟವನ್ನು ಕೈಬಿಡಬೇಕೆನ್ನುವ ತನ್ನ ನಿಲುವಿಗೆ ಬಲವಾಗಿ ಅಂಟಿಕೊಂಡಿತು. ಆ ಪಕ್ಷದಲ್ಲಿದ್ದ ಕ್ರಾಂತಿಕಾರಿ ಹೋರಾಟದ ಪ್ರತಿಪಾದಕರು, ಅಲ್ಲಿಂದ ಸಿಡಿದುಬಂದು ಸಶಸ್ತ್ರ ಬಂಡಾಯವನ್ನು ಮುನ್ನಡೆಸಲು ‘ಸಿಪಿಐ’ (ಎಂ.ಎಲ್‌; ಮಾರ್ಕ್ಸ್‌ ಮತ್ತು ಲೆನಿನ್‌ ವಾದ) ಪಕ್ಷ ಕಟ್ಟಿದರು. ನಕ್ಸಲ್ಬರಿ ದಂಗೆಯ ನೇತಾರ ಚಾರು, ಅದರ ಮೊದಲ ಕಾರ್ಯದರ್ಶಿಯಾದರು.

ಮಾವೋ ಪ್ರತಿಪಾದಿಸಿದ ‘ಬಂದೂಕಿನ ನಳಿಕೆಯಿಂದ ಮಾತ್ರ ಅಧಿಕಾರ ಪ್ರವಹಿಸುತ್ತದೆ’, ‘ಸುದೀರ್ಘ ಪ್ರಜಾಯುದ್ಧದ ಮೂಲಕ ಮಾತ್ರ ಹಿಂದುಳಿದ ದೇಶಗಳಲ್ಲಿ ಕ್ರಾಂತಿ ಸಾಧ್ಯ’ ಎಂಬ ಚಿಂತನೆಗೆ ಈ ಪಕ್ಷ ಒತ್ತು ನೀಡಿತು. ಕೋಲ್ಕತ್ತದ ರೈಲ್ವೆ ಕಾಲೊನಿಯ ಮನೆಯೊಂದರಲ್ಲಿ ಮದುವೆ ಸಮಾರಂಭದ ಸೋಗಿನಲ್ಲಿ ಸಭೆ ನಡೆಸಿ, ‘ಭಾರತದ ಕ್ರಾಂತಿಯ ಪಥ’ದ ದಸ್ತಾವೇಜನ್ನು ಅಂತಿಮಗೊಳಿಸಿದ ನಾಯಕರು, ‘ಚೀನಾದ ಅಧ್ಯಕ್ಷರೇ ನಮ್ಮ ಅಧ್ಯಕ್ಷರು’, ‘ಚೀನಾದ ಹಾದಿಯೇ ನಮ್ಮ ಹಾದಿ’ ಎಂದು ಸಾರಿದರು.

ಹಳ್ಳಿಗಳಲ್ಲಿ ಭೂಮಾಲೀಕರನ್ನು ಇಲ್ಲವಾಗಿಸಿದರೆ ರೈತ ಸಮಿತಿಗಳ ಮೂಲಕ ಅಲ್ಲಿ ವಿಮೋಚಿತ ಪ್ರದೇಶಗಳನ್ನು ನಿರ್ಮಾಣ ಮಾಡಬಹುದು. ನಂತರ ನಗರಗಳನ್ನು ಸುತ್ತುವರಿದು ವಶಕ್ಕೆ ಪಡೆಯಬಹುದು ಎಂಬ ಲೆಕ್ಕಾಚಾರದಲ್ಲಿತ್ತು ಆ ಪಕ್ಷದ ನಾಯಕತ್ವ. ಕ್ರಾಂತಿಯ ವಸಂತ ಋತು ಶುರುವಾಗಿ ಹತ್ತು ವರ್ಷಗಳಲ್ಲಿ ಸಂಪೂರ್ಣ ಗುರಿ ಸಾಧನೆಯಾಗುತ್ತದೆ ಎಂಬ ಭ್ರಾಂತಿಯಲ್ಲೂ ಮುಳುಗಿತು. ಸಶಸ್ತ್ರ ಹೋರಾಟಕ್ಕಾಗಿ ಸೈನ್ಯವನ್ನು ಕಟ್ಟಲು ನಿರ್ಧರಿಸಿ, ವರ್ಗಶತ್ರುವಿನ ರಕ್ತದಲ್ಲಿ ಕೈ ಅದ್ದಿದವರು ಇಲ್ಲವೇ ಪ್ರಭುತ್ವದಿಂದ ಬಂದೂಕು ಕಿತ್ತುಕೊಂಡು ಬಂದವರಿಗೆ ಪಕ್ಷದ ಸದಸ್ಯತ್ವ ಎಂಬ ಬಿಗಿ ಷರತ್ತನ್ನು ಹಾಕಿಕೊಳ್ಳಲಾಯಿತು!

ಕ್ರಾಂತಿಕಾರಿ ಶಕ್ತಿಗಳ ಧ್ರುವೀಕರಣದ ಜೊತೆ ಜೊತೆಗೆ ಸಶಸ್ತ್ರ ಹೋರಾಟ ಮತ್ತೆ ಹರಡತೊಡಗಿತು. ಊಳಿಗಮಾನ್ಯ ವ್ಯವಸ್ಥೆ ವಿರುದ್ಧ ಬಂಡೆದ್ದ ವಿದ್ಯಾರ್ಥಿಗಳು ಸಾವಿರ, ಸಾವಿರ ಸಂಖ್ಯೆಯಲ್ಲಿ ಹೋರಾಟಕ್ಕೆ ಧುಮುಕಿದರು. ಆದರೆ, ದಂಗೆಯನ್ನು ಸರ್ಕಾರ ಬಲವಾಗಿ ಹತ್ತಿಕ್ಕಿತು. ನಕ್ಸಲ್ಬರಿ ಬಂಡಾಯವನ್ನು 1972ರ ಹೊತ್ತಿಗೆ ಸರ್ಕಾರ ಹತ್ತಿಕ್ಕಿದ ಬಗೆಯನ್ನು ಪಶ್ಚಿಮ ಬಂಗಾಳದ ಪತ್ರಕರ್ತ ಸುಮಂತ ಬ್ಯಾನರ್ಜಿ ಹೀಗೆ ದಾಖಲಿಸಿದ್ದಾರೆ:

‘ಕೋಲ್ಕತ್ತದ ಬಾರಾನಗರ ಹಾಗೂ ಕಾಸಿಪುರ ಪ್ರದೇಶಗಳಲ್ಲಿ ಮನೆ–ಮನೆಗೂ ನುಗ್ಗಿದ ಪೊಲೀಸರು, ಯುವಕರನ್ನು ಬೀದಿಗೆ ಎಳೆತಂದು ಕೊಂದುಹಾಕಿದರು. ಎಲ್ಲೆಡೆ ರುಂಡವಿಲ್ಲದ, ಕೈಕಾಲು ಕಳೆದುಕೊಂಡ, ಕಣ್ಣುಗಳು ಜಜ್ಜಲ್ಪಟ್ಟ, ಕರುಳು ಬಗೆದ ಶವಗಳು. ರಿಕ್ಷಾಗಳಲ್ಲಿ, ಕೈಗಾಡಿಗಳಲ್ಲಿ ಅವುಗಳನ್ನೆಲ್ಲ ಹೇರಿಕೊಂಡು ಹೋಗಿ ಹೂಗ್ಲಿ ನದಿಗೆ ಎಸೆಯಲಾಯಿತು.’ ಆ ವೇಳೆಗೆ ದೇಶದಾದ್ಯಂತ ಅಜಮಾಸು 30 ಸಾವಿರ ನಕ್ಸಲೀಯರು ಜೈಲು ಸೇರಿದ್ದರು. ಚಾರು ಸಹ ಪೊಲೀಸರ ವಶದಲ್ಲಿದ್ದಾಗಲೇ ಸಾವನ್ನಪ್ಪಿದರು. ಮುಂದಾಳತ್ವ ವಹಿಸುವವರಿಲ್ಲದೆ ಬಂಡಾಯ ಕುಸಿದುಬಿತ್ತು.

ಮಾವೋವಾದಿಗಳಿಂದ ವಶಪಡಿಸಿಕೊಂಡ ಮದ್ದುಗುಂಡುಗಳು

ವಿಪ್ಲವ ರಚಯಿತಲ ಸಂಘಂ
1980ರ ದಶಕದ ಮಧ್ಯಭಾಗದ ಹೊತ್ತಿಗೆ ಆಂಧ್ರ, ಬಿಹಾರ ಮತ್ತು ದಂಡಕಾರಣ್ಯದಲ್ಲಿ (ಆಂಧ್ರ, ಮಹಾರಾಷ್ಟ್ರ, ಛತ್ತೀಸ್‌ಗಡ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಮೈಚಾಚಿಕೊಂಡಿರುವ ಅರಣ್ಯ ಪ್ರದೇಶ; ಗೋಂಡಿ ಆದಿವಾಸಿಗಳ ನೆಲೆ) ಸಶಸ್ತ್ರ ಚಳವಳಿ ಮತ್ತೆ ಎದ್ದುನಿಂತಿತು. ಆಂಧ್ರದ ಕ್ರಾಂತಿಕಾರಿ ಕವಿಗಳು ‘ವಿಪ್ಲವ ರಚಯಿತಲ ಸಂಘಂ’ (ವಿರಸಂ; ಕ್ರಾಂತಿಕಾರಿ ಬರಹಗಾರರ ಸಂಘ) ಕಟ್ಟಿಕೊಂಡು, ಕ್ರಾಂತಿಕಾರಿ ಸಾಹಿತ್ಯದ ಹೊಳೆಯನ್ನೇ ಹರಿಸಿದರು. ಗದ್ದರ್‌ ನೇತೃತ್ವದಲ್ಲಿ ‘ಜನ ನಾಟ್ಯ ಮಂಡಳಿ’ ರಚನೆಯಾಗಿ, ಹಾಡು, ಲಾವಣಿ, ನೃತ್ಯ, ನಾಟಕ, ಉಗ್ಗುಕಥಾ, ಬುರ್ರಕಥಾ ಪ್ರಸಂಗಗಳ ಮೂಲಕ ಕ್ರಾಂತಿಕಾರಿ ಸಂದೇಶವನ್ನು ಹರಡತೊಡಗಿತು. ಕಲಾವಿದರು, ಕವಿಗಳು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಾ, ಹಾಡುತ್ತಾ ಹೋರಾಟಕ್ಕೆ ಕೆಚ್ಚು ತುಂಬಿದರು. ತಾವು ಜೀವನದುದ್ದಕ್ಕೂ ವಿರೋಧಿಸಿಕೊಂಡು ಬಂದಿದ್ದ ವ್ಯವಸ್ಥೆಯ ಎದುರೇ ಮುಂದೆ ಅದೇ ಗದ್ದರ್‌ ಶರಣಾದರು.

ಇದೇ ವೇಳೆ ‘ರ್‌್ಯಾಡಿಕಲ್‌ ಸ್ಟೂಡೆಂಟ್ಸ್‌ ಯೂನಿಯನ್‌’ (ಆರ್‌ಎಸ್‌ಯು) ಹುಟ್ಟಿಕೊಂಡಿತು. ವಿದ್ಯಾರ್ಥಿಗಳನ್ನು ರೈತಾಪಿ ಬದುಕಿನ ಜತೆ ಬೆಸೆಯಲು ‘ಹಳ್ಳಿಗಳಿಗೆ ಹೋಗೋಣ’ ಎಂಬ ಆಂದೋಲನವನ್ನು ಹುಟ್ಟುಹಾಕಲಾಯಿತು. ‘ರೈತ ಕೂಲಿ ಸಂಘ’ವನ್ನೂ ಆರಂಭಿಸಲಾಯಿತು. ಸಂಘಟನೆ ಮತ್ತೆ ಬಲವಾಗುತ್ತಾ ಹೋದಂತೆ ಮಾವೋವಾದಿಗಳ ಬಹುತೇಕ ತೊರೆಗಳೆಲ್ಲ ಒಂದಾಗಿ ಸಿಪಿಐ (ಎಂಎಲ್‌) (ಪೀಪಲ್ಸ್‌ ವಾರ್‌) ಪಕ್ಷದ ಉದಯವಾಯಿತು. ನಕ್ಸಲ್‌ ಚಳವಳಿಯ ಮುಂದಿನ ಎಲ್ಲ ಘಟನೆಗಳಿಗೆ ಈ ಪಕ್ಷವೇ ವಾರಸುದಾರನಾಯಿತು.

ಚಳವಳಿಯನ್ನು ವಿಸ್ತರಿಸಲು ‘ಗೆರಿಲ್ಲಾ ವಲಯದ ದೃಕ್ಪಥ’ ಎಂಬ ಹೊಸ ದಸ್ತಾವೇಜನ್ನು ಅದು ಹೊರತಂದಿತು. ಉತ್ತರ ತೆಲಂಗಾಣ ಪ್ರದೇಶವನ್ನು ಗೆರಿಲ್ಲಾ ವಲಯವನ್ನಾಗಿ (ಹೊಂಚುಹಾಕಿ ದಾಳಿ ನಡೆಸುವ ತಾಣ) ಪರಿವರ್ತಿಸಲು ನಿರ್ಣಯ ಕೈಗೊಂಡು, 1980ರ ಜೂನ್‌ ಮಾಹೆಯಲ್ಲಿ ತಲಾ ಐದರಿಂದ ಒಂಬತ್ತು ಸಶಸ್ತ್ರ, ಸಮವಸ್ತ್ರಧಾರಿ ಸದಸ್ಯರನ್ನೊಳಗೊಂಡ ಏಳು ದಳಗಳನ್ನು ದಂಡಕಾರಣ್ಯದೊಳಗೆ ನುಗ್ಗಿಸಲಾಯಿತು. ನಂತರದ ಅವಧಿಯಲ್ಲಿ ಈ ದಳಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಗೆರಿಲ್ಲಾಗಳು ಹಾಗೂ ಪೊಲೀಸರ ನಡುವಿನ ಸಂಘರ್ಷದಲ್ಲಿ ಸಾಲು–ಸಾಲು ನರಮೇಧಗಳು ನಡೆದದ್ದು ಈಗ ಇತಿಹಾಸ.

ಕನ್ನಡನಾಡು–ಕಾಡಿನೊಳಗೆ...

‘ಪೀಪಲ್ಸ್‌ ವಾರ್‌’ ಪಕ್ಷದ ಚಟುವಟಿಕೆಗಳು ರಾಜ್ಯದಲ್ಲಿ ಶುರುವಾಗಿದ್ದು ಹೇಗೆ? ಮೂರು ದಶಕಗಳವರೆಗೆ ನಕ್ಸಲ್‌ ಚಳವಳಿ ಭಾಗವೇ ಆಗಿದ್ದ, ಈಗ ಅದರಿಂದ ಹೊರಬಂದು ಜನಸಮೂಹದ ಹೋರಾಟಗಳ ಜತೆ ಗುರ್ತಿಸಿಕೊಂಡಿರುವ ನೂರ್‌ ಶ್ರೀಧರ್‌ (ನೂರ್‌ ಜುಲ್ಫಿಕರ್‌) ಅವರ ಮುಂದೆ ಈ ಪ್ರಶ್ನೆ ಇಟ್ಟಾಗ ಚರಿತ್ರೆಯ ಕೆಲವು ಪುಟಗಳನ್ನು ಅವರು ತೆರೆದಿಟ್ಟರು.

ರಾಜ್ಯದ ಕೆಲವು ಕ್ರಾಂತಿಕಾರಿಗಳು 1980ರ ದಶಕದ ಉತ್ತರಾರ್ಧದಲ್ಲಿ ‘ಪೀಪಲ್ಸ್‌ ವಾರ್‌’ ಪಕ್ಷದ ಕರ್ನಾಟಕ ಘಟಕವನ್ನು ಪ್ರಾರಂಭಿಸಿದರು. ‘ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ’ದಲ್ಲಿ (ಜೆಎನ್‌ಯು) ಅಧ್ಯಯನ ನಡೆಸಿಬಂದ ಮೇಧಾವಿ ಸಾಕೇತ್‌ ರಾಜನ್‌ (ಸಂಗಾತಿಗಳಿಗೆ ಸಾಕಿ) ಅವರೇ ರಾಜ್ಯದ ನಕ್ಸಲೀಯ ಚಟುವಟಿಕೆಗಳ ಪ್ರಮುಖ ರೂವಾರಿ

‘ಮೇಕಿಂಗ್‌ ಹಿಸ್ಟರಿ’ಯಂತಹ  ಅನನ್ಯ ಕೃತಿಯನ್ನು ಕರ್ನಾಟಕಕ್ಕೆ ಕೊಡುಗೆಯಾಗಿ ಕೊಟ್ಟವರು ಅವರು. ಪಾಳೆಗಾರಿಕೆ ವಿರುದ್ಧ ಸಿಡಿದೆದ್ದಿದ್ದ ಆಂಧ್ರದ ವಿದ್ಯಾರ್ಥಿಗಳಿಂದ ರಾಜ್ಯದ ಬಿಸಿರಕ್ತದ ತರುಣರಿಗೂ ‘ಆರ್‌ಎಸ್‌ಯು’ನ ಪರಿಚಯವಾಯಿತು. ಅಲ್ಲಿನ ವಿದ್ಯಾರ್ಥಿಗಳು ಹಳ್ಳಿಗಳಿಗೆ ತೆರಳಿ, ರೈತಾಪಿ ಜನರೊಂದಿಗೆ ಬೆರೆತು, ಅವರ ಹಕ್ಕುಗಳಿಗೆ ಹೋರಾಡುತ್ತಾ, ಪೊಲೀಸರೊಂದಿಗೆ ಘರ್ಷಣೆಯಲ್ಲಿ ಮಡಿದ ಯುದ್ಧದ ಕಥೆಗಳನ್ನು ಕೇಳಿ ಇಲ್ಲಿನ ಯುವಕರಲ್ಲಿ ಭಾವೋದ್ವೇಗದಿಂದ ಮೈ ನವಿರೆದ್ದಿತು. ಆಂಧ್ರದ ಕ್ರಾಂತಿಕಾರಿ ಚಳವಳಿಯ ನೇತಾರರ ಮಾರ್ಗದರ್ಶನದಲ್ಲಿ ರಾಜ್ಯದಲ್ಲೂ ‘ಆರ್‌ಎಸ್‌ಯು’ ಚಟುವಟಿಕೆಗಳು ಶುರುವಾದವು.

ಸಿರಿಮನೆ ನಾಗರಾಜ್‌ ಮತ್ತು ನೂರ್‌ ಶ್ರೀಧರ್‌

ಅದು 1990ರ ದಶಕದ ಆರಂಭಿಕ ಘಟ್ಟ. ಕ್ರಾಂತಿಕಾರಿ ಹೋರಾಟವನ್ನು ಬೀದರ್‌ನಿಂದ ಆರಂಭಿಸಲು ಕೆಲವು ಪ್ರಯತ್ನಗಳು ನಡೆದವು. ಆದರೆ, ಹೆಚ್ಚಿನ ಉತ್ತೇಜನ ಸಿಗದಿದ್ದಾಗ ಆ ತಂಡ ರಾಯಚೂರಿನತ್ತ ಮುಖ ಮಾಡಿತು. ಚಂದ್ರಬಂಡ ಹೋಬಳಿಯಲ್ಲಿ ಹೋರಾಟದ ಪಡೆಯನ್ನು ಕಟ್ಟಿದ್ದೂ ಆಯಿತು. ಅಲ್ಲಿ ನಕ್ಸಲೀಯ ಚಟುವಟಿಕೆಗಳು ಎದ್ದು ಕಾಣುವಷ್ಟು ಹೆಚ್ಚತೊಡಗಿದಾಗ, ಹೋರಾಟವನ್ನು ಹತ್ತಿಕ್ಕಲು 1997ರಲ್ಲಿ ಸರ್ಕಾರ ಯಾಪಲದಿನ್ನಿಯಲ್ಲಿ ಪೊಲೀಸ್‌ ಠಾಣೆಯನ್ನೇ ತೆರೆಯಿತು. ಈ ನಡೆಯನ್ನು ವಿರೋಧಿಸಿ ನಕ್ಸಲೀಯರ ಜತೆಗೂಡಿ ಗ್ರಾಮಸ್ಥರು ಠಾಣೆಯ ಮೇಲೆ ಕಲ್ಲು ತೂರಿದರು.

ಚಂದ್ರಬಂಡ ಹೇಳಿ–ಕೇಳಿ ಬಯಲು ಪ್ರದೇಶ. ಮಾವೋವಾದಿಗಳ ಅಡಗುತಾಣಗಳ ನಿರ್ಮಾಣಕ್ಕಾಗಿ ಬೆಟ್ಟ–ಗುಡ್ಡವಾಗಲೀ, ದಟ್ಟ ಕಾಡಾಗಲೀ ಅಲ್ಲಿಲ್ಲ. ದಾಳಿಯನ್ನು ತೀವ್ರಗೊಳಿಸಿದ ಪೊಲೀಸರು, ಸಂಘಟನೆ ಕಟ್ಟಲು ಆಂಧ್ರದಿಂದ ಬಂದಿದ್ದ ಭಾಸ್ಕರ್‌ ಅವರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈದರು. ಮತ್ತೊಬ್ಬ ನಾಯಕಿ ಸುಮಾ ಅವರನ್ನು ಸೆರೆ ಹಿಡಿದರು. ರಾಯಚೂರಿನಲ್ಲಿ ಸಶಸ್ತ್ರ ರೈತ ಚಳವಳಿಯನ್ನು ಕಟ್ಟುವ ಪ್ರಯತ್ನ 2001ರ ಹೊತ್ತಿಗೆ ವಿಫಲವಾಯಿತು.
ಚಂದ್ರಬಂಡದಂತಹ ಬಯಲುಸೀಮೆ ಪ್ರದೇಶದ ಬದಲು ಅಡಗುತಾಣ ನಿರ್ಮಿಸಿಕೊಳ್ಳಲು ಪ್ರಶಸ್ತ ತಾಣವಾದ ಮಲೆನಾಡಿನಲ್ಲಿ ಚಳವಳಿ ಕಟ್ಟಬೇಕು ಎಂಬ ಠರಾವನ್ನು ನಕ್ಸಲೀಯರ ‘ಬೌದ್ಧಿಕ ಬೈಠಕ್‌’ನಲ್ಲಿ ಪಾಸು ಮಾಡಲಾಯಿತು.

‘ಕರ್ನಾಟಕ ವಿಮೋಚನಾ ರಂಗ’ದ ನೇತೃತ್ವದಲ್ಲಿ ಮಲೆನಾಡಿನೊಳಗೆ ಅಲ್ಲಿನ ಆದಿವಾಸಿಗಳಾದ ಗೌಡ್ಲು ಜನಾಂಗದವರ ವಿಶ್ವಾಸ ಕುದುರಿಸಿಕೊಂಡು, ಸಂಘಟನೆಯನ್ನು ಬೆಳೆಸಿದ್ದೂ ಆಯಿತು. ಮೆಣಸಿನಹಾಡ್ಯದಲ್ಲಿ ನಕ್ಸಲೀಯರು ಬಂದೂಕು ತರಬೇತಿ ನಡೆಸುತ್ತಿದ್ದಾಗ ಅವರ ಕೋವಿಯಿಂದ ಹಾರಿದ ಗುಂಡು ಚೀರಮ್ಮ ಎಂಬ ಮಹಿಳೆಗೆ ತಗುಲಿದ್ದರಿಂದ ಮಲೆನಾಡಿನ ಮಡಿಲಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ನಕ್ಸಲೀಯರ ಚಟುವಟಿಕೆಗಳು ಹೊರಜಗತ್ತಿನ ಗಮನಕ್ಕೆ ಬಂದವು.

ಈ ಮಧ್ಯೆ ನಕ್ಸಲೀಯರ ಒಂದು ಗುಂಪು ಸಶಸ್ತ್ರ ಹೋರಾಟಕ್ಕಿಂತ ಜನಸಾಗರದ ವಿಶಾಲ ಚಳವಳಿಯನ್ನು ನಡೆಸುವ ಅಗತ್ಯದ ಕುರಿತು ಪ್ರತಿಪಾದಿಸಿತು. ಆದರೆ, ಇನ್ನೊಂದು ಬಣ ಅದನ್ನು ಸಾರಾಸಗಟಾಗಿ ತಿರಸ್ಕರಿಸಿತು. ವಿಶಾಲ ಚಳವಳಿ ನಡೆಸಬೇಕೆಂಬ ಒತ್ತಡ ಒಳಗಿನಿಂದ ಹೆಚ್ಚಾದಾಗ ಹೋರಾಟದ ಹಾದಿಯನ್ನು ತೀರ್ಮಾನಿಸಲು 2003ರಲ್ಲಿ ಮಲೆನಾಡಿನ ನಕ್ಸಲೀಯ ಕ್ಯಾಂಪ್‌ನಲ್ಲಿ ಮತದಾನ ನಡೆಯಿತು. ಸೋಜಿಗವೆಂದರೆ ಮತ ಎಣಿಕೆ ನಡೆಸಿದಾಗ ಎರಡೂ ವಾದಗಳು ರೋಚಕ ‘ಟೈ’ ಸಾಧಿಸಿದವು. ಇಂತಹ ಸಂದರ್ಭದಲ್ಲಿ ಪಕ್ಷದ ಕೇಂದ್ರ ನಾಯಕರ ನಿರ್ಧಾರವೇ ಅಂತಿಮ ಎನ್ನುವುದು ಆಂತರಿಕವಾಗಿ ಮಾಡಿಕೊಂಡ ಕಟ್ಟಳೆ. ಕೇಂದ್ರ ನಾಯಕತ್ವ ಸಶಸ್ತ್ರ ಹೋರಾಟದ ಪರವೇ ನಿಂತುಕೊಂಡಿತು. 

ಮಲೆನಾಡಿನಲ್ಲಿ ನಕ್ಸಲೀಯರ ಹೋರಾಟ ಕಾವೇರುತ್ತಾ ಹೊರಟಾಗ ಅದನ್ನು ಹತ್ತಿಕ್ಕಲು ಸರ್ಕಾರದ ಕಾರ್ಯಾಚರಣೆ ತೀವ್ರಗೊಂಡಿತು. ಪ್ರಮುಖ ಮುಂದಾಳು ಸಾಕಿ ಪೊಲೀಸರ ಗುಂಡಿಗೆ ಬಲಿಯಾದರು. ಚಳವಳಿ ಬೆಳೆಸಲು ಕಾರಣರಾದ ಪಾರ್ವತಿ, ಹಾಜಿಮಾ ಅವರಿಗೂ ಅದೇ ಗತಿ ಒದಗಿತು. ರಕ್ತರಂಜಿತವಾಗಿದ್ದ ಆ ದಿನಗಳಲ್ಲಿ ಶಿವಲಿಂಗು, ಉಮೇಶ್‌, ಅಜಿತ್‌, ಚನ್ನಪ್ಪ, ಮನೋಹರ್‌, ದಿನಕರ್‌, ಆನಂದ್‌... ಹೀಗೆ ಸಾಲು, ಸಾಲು ನಕ್ಸಲೀಯರು ಪೊಲೀಸರ ಗುಂಡಿಗೆ ಬಲಿಯಾದರು. ಪ್ರತೀಕಾರದ ಹೋರಾಟಗಳಿಂದ ನಕ್ಸಲೀಯರೂ ಸದ್ದು ಮಾಡಿದರು. ಪೊಲೀಸರಿಗೆ ಮಾಹಿತಿಕೊಟ್ಟ ಶೇಷಯ್ಯ ಎಂಬುವರನ್ನು ಅವರ ಕುಟುಂಬದ ಸದಸ್ಯರ ಎದುರೇ ಹತ್ಯೆ ಮಾಡಿದರು. ನಂತರದ ದಿನಗಳಲ್ಲಿ ಶಸ್ತ್ರ ಕೆಳಗಿಟ್ಟು ಹಲವರು ಮುಖ್ಯವಾಹಿನಿಗೆ ಬಂದರೆ, ಉಳಿದವರು ಬೇರೆ ನೆಲೆಗಳನ್ನು ಕಂಡುಕೊಂಡರು.

ನೈತಿಕತೆಯ ಪಾಠ ಮತ್ತು ಎಡವಟ್ಟು
ನಕ್ಸಲೀಯರು ಶಿಸ್ತುಬದ್ಧ ಜೀವನ ನಡೆಸುತ್ತಾರೆ ಎಂಬ ನಂಬಿಕೆ ಸಾಮಾನ್ಯವಾಗಿದೆ. ಹಾಗಾದರೆ ಅವರ ಕಿಟ್‌ಗಳಲ್ಲಿ ಕಾಂಡೋಮ್‌ಗಳು ಸಿಕ್ಕಿದ್ದೇಕೆ ಎಂಬ ಪ್ರಶ್ನೆ ಸಹ ಚರ್ಚೆಗೆ ಒಳಗಾಗಿದೆ. ಅದಕ್ಕೆ ನೂರ್‌ ಶ್ರೀಧರ್‌ ನೀಡುವ ಉತ್ತರ ಹೀಗಿದೆ: ‘ನಕ್ಸಲ್‌ ಸಂಘಟನೆಯೊಳಗೇ ಮದುವೆಗಳು ನಡೆಯುತ್ತವೆ. ಹಲವು ಜೋಡಿಗಳಿರುತ್ತವೆ. ಸಾಮಾನ್ಯವಾಗಿ ಮದುವೆಯಾದ ನಕ್ಸಲೀಯರು ಮಕ್ಕಳನ್ನು ಮಾಡಿಕೊಳ್ಳುವುದಿಲ್ಲ. ಮೊದಲಾದರೆ ಫ್ಯಾಮಿಲಿ ಪ್ಲಾನಿಂಗ್‌ ಆಪರೇಶನ್‌ ಮಾಡಿಸಿಕೊಳ್ಳುವುದಿತ್ತು. ಈಗ ಒಳಗೆ–ಹೊರಗೆ ಓಡಾಟ ಅಷ್ಟು ಸುಲಭವಿಲ್ಲ. ಹಾಗಾಗಿ ಮದುವೆಯಾದ ಹೊಸ ಜೋಡಿಗಳಿಗೆ ಸಂಘಟನೆ ವತಿಯಿಂದಲೇ ಕಾಂಡೋಮ್‌ ಸಪ್ಲೈ ಇರುತ್ತದೆ. ನೈತಿಕ ವಿಚಾರದಲ್ಲಿ ಕಟ್ಟುನಿಟ್ಟು ಇದ್ದರೂ ಅಲ್ಲೊಂದು, ಇಲ್ಲೊಂದು ತಪ್ಪುಗಳಾಗುತ್ತವೆ. ಅಂಥವರಿಗೆ ಪಾಠ ಕಲಿಸಲಾಗುತ್ತದೆ.’

ಪೊಲೀಸ್‌ ಎನ್‌ಕೌಂಟರ್‌ಗಳಲ್ಲಿ ನಕ್ಸಲ್‌ ಸಂಗಾತಿಗಳು ಕೊಲೆಯಾದರೆ ಉಳಿದವರು ಅದರಿಂದ ಧೈರ್ಯಗೆಡದೆ ಅವರನ್ನು ಹಾಡುಗಳಲ್ಲಿ ಬದುಕಿಸುತ್ತಾರೆ. ಹೋರಾಟಕ್ಕೆ ಹೊಸ ಉಮೇದು ಪಡೆಯುತ್ತಾರೆ. ಉದಾಹರಣೆ ಬೇಕೆ? ಎನ್‌ಕೌಂಟರ್‌ನಲ್ಲಿ ಹತರಾದ ತೆಲಂಗಾಣದಲ್ಲಿ ಏಳು ಜನ ಯುವತಿಯರು, ಮರುಕ್ಷಣದಲ್ಲೇ ‘ಕರೀಂನಗರದ ಏಳು ಹುಡುಗಿಯರು, ಏಳು ಪರ್ವತಗಳಂತಿದ್ದ ಏಳು ಹುಡುಗಿಯರು, ಹರಡಿದರು ಆಕಾಶದಗಲಕ್ಕೂ ಮಿನುಗು ತಾರೆಗಳಾಗಿ, ಅರಳಿದರು ಕಡುಗೆಂಪು ಹೂವುಗಳಾಗಿ...’ ಎಂಬ ಲಾವಣಿ ಆಗಿಬಿಟ್ಟಿದ್ದರು.

ದಂಡಕಾರಣ್ಯದಷ್ಟು ಕಠಿಣವಲ್ಲದಿದ್ದರೂ ಮಲೆನಾಡಿನ ಕಾಡುವಾಸಿಗಳ ಬದುಕು ಸಹ ನಾಡಿನಲ್ಲಿ ಇರುವಷ್ಟು ಆರಾಮದಾಯಕ ಆಗಿರಲಾರದು. ಕಾಡಿನ ಜೀವನ ಸುಸೂತ್ರವಲ್ಲದಿದ್ದರೂ, ಊಟ ಸಿಗುವುದು ಗ್ಯಾರಂಟಿ ಇಲ್ಲದಿದ್ದರೂ, ಪೊಲೀಸ್‌ ಬಂದೂಕುಗಳು ತಮ್ಮತ್ತ ಗುರಿ ನೆಟ್ಟಿದ್ದರೂ ಯುವಕರು ಗೆರಿಲ್ಲಾ ಪಡೆಯತ್ತ ಒಲವು ತೋರಿದ್ದೇಕೆ? ದೇಶದ ಬಹುದೊಡ್ಡ ಸಾಮಾಜಿಕ–ಆರ್ಥಿಕ ಸಮಸ್ಯೆಯನ್ನು ಸರ್ಕಾರ ಕಾನೂನು ಸುವ್ಯವಸ್ಥೆ ಪರಿಧಿಯೊಳಗಿಟ್ಟು ನೋಡುತ್ತಿದೆಯೇ ಹೊರತು ಈ ಪ್ರಶ್ನೆಗೆ ಉತ್ತರ ಹುಡುಕುತ್ತಿಲ್ಲ ಎನ್ನುವುದು ಮಾನವ ಹಕ್ಕುಗಳ ಪ್ರತಿಪಾದಕರ ತಕರಾರು.

ನಕ್ಸಲೀಯರೇನು ಕಡಿಮೆಯೇ? ಅವರೂ ಕಗ್ಗೊಲೆಗಳಲ್ಲಿ ತೊಡಗಲಿಲ್ಲವೇ? ಸೇತುವೆಗಳನ್ನು ಉಡಾಯಿಸಲಿಲ್ಲವೇ? ರೈಲ್ವೆ ಹಳಿಗಳನ್ನು ಕೀಳಲಿಲ್ಲವೇ? ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ನಾಶ ಮಾಡಲಿಲ್ಲವೇ? ಗ್ರಾಮಗಳಲ್ಲಿ ದಬ್ಬಾಳಿಕೆಯನ್ನು ನಡೆಸಲಿಲ್ಲವೇ? ಅಮಾಯಕರಿಗೆ ತೊಂದರೆ ಕೊಟ್ಟಿಲ್ಲವೇ – ಮಾವೋವಾದಿಗಳ ಹೋರಾಟದ ವಿರೋಧಿಗಳಿಂದ ಎತ್ತಲಾಗುತ್ತಿರುವ ಪ್ರಶ್ನೆಗಳು. ಆರೋಪದ ರೂಪದಲ್ಲಿರುವ ದಬ್ಬಾಳಿಕೆ ಕುರಿತ ಪ್ರಶ್ನೆಗೆ ಪೂರಕ ಎನ್ನುವಂತೆ ಬಿಹಾರ ಮತ್ತು ಒಡಿಶಾಗಳಲ್ಲಿ ಕೆಲವು ನಕ್ಸಲೀಯರು ಹಫ್ತಾ ವಸೂಲಿ ಮಾಡುತ್ತಿರುವ ಪ್ರಕರಣಗಳು ಸಹ ವರದಿಯಾಗಿವೆ.

ಕ್ಷೀಣಿಸಿದ ‘ಕೆಂಪು ಕಾರಿಡಾರ್’
1980ರ ದಶಕದ ಭಾರತ ನಕಾಶೆಯನ್ನು ಎದುರಿಗಿಟ್ಟುಕೊಂಡು ನೋಡಿದರೆ ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಮಧ್ಯಪ್ರದೇಶ (ಈಗಿನ ಛತ್ತೀಸ್‌ಗಡ ಭಾಗ) ಹಾಗೂ ಆಂಧ್ರ ಪ್ರದೇಶದ ಬಹುಭಾಗ, ಕರ್ನಾಟಕ ಮತ್ತು ಕೇರಳದ ಕೆಲವು ಭಾಗಗಳು ಕೆಂಪು ಕಾರಿಡಾರ್‌ಗಳಾಗಿ ಗೋಚರಿಸುತ್ತವೆ. ಬಂಗಾಳ ಕೊಲ್ಲಿಯಿಂದ ಅರಬ್ಬಿ ಸಮುದ್ರದವರೆಗೆ ಈ ಚಳವಳಿ ಹಬ್ಬಿರುವುದು ಎದ್ದು ಕಾಣುತ್ತದೆ. ದೇಶದ ಈಗಿನ ನಕಾಶೆಯಲ್ಲಿ ಅಲ್ಲಲ್ಲಿ ಕೆಂಪು ಚುಕ್ಕಿಗಳು ಕಾಣುತ್ತವೆಯಾದರೂ ಸಶಸ್ತ್ರ ಹೋರಾಟದ ಮೊದಲಿನ ಮೊನಚು ಮಾಯವಾಗಿದೆ.

ಭೂಮಿ ವಂಚಿತರ, ಆದಿವಾಸಿಗಳ ಹಕ್ಕುಗಳ ರಕ್ಷಣೆಗಾಗಿ ನಕ್ಸಲೀಯ ಚಳವಳಿ ಶುರುವಾಗಿ 50 ವರ್ಷಗಳಾದವು. ಇಷ್ಟೊಂದು ಸುದೀರ್ಘ ಅವಧಿಯವರೆಗೆ ಹೋರಾಟದಲ್ಲಿ ತೊಡಗಿದರೂ ತನ್ನ ಗುರಿ ಸಾಧನೆಯ ಹತ್ತಿರಕ್ಕೂ ಹೋಗಲು ಅದರಿಂದ ಸಾಧ್ಯವಾಗಿಲ್ಲ. ಆದಿವಾಸಿಗಳ, ಕೃಷಿಕಾರ್ಮಿಕರ, ಬಡವರ ಬದುಕು ಬದಲಾಗಿಲ್ಲ. ಹಾಡಿಗಳು, ಹಳ್ಳಿಗಳು ಹಿಂದೆ ಹೇಗಿದ್ದವೋ ಈಗಲೂ ಹಾಗೇ ಇವೆ.

ಬಡವರಿಗೆ ಸೌಲಭ್ಯ ಒದಗಿಸಿ, ಅವರ ಹಕ್ಕುಗಳನ್ನು ಗೌರವಿಸಿ ನಕ್ಸಲೀಯ ಚಟುವಟಿಕೆಯನ್ನು ತಂತಾನೆ ನಿಲ್ಲುವಂತೆ ಮಾಡುವ ಜಾಣ ನಡೆಯತ್ತ ಸರ್ಕಾರ ಕೂಡ ಕಾರ್ಯಪ್ರವೃತ್ತವಾಗಲಿಲ್ಲ. ಬಂಡೇಳುವ, ದಮನ ಮಾಡುವ ಈ ಹಾವು–ಏಣಿ ಆಟದಲ್ಲಿ ಮೂಲ ಸಮಸ್ಯೆಗಳು ಹಾಗೇ ಉಳಿದಿರುವುದು ಎರಡೂ ಪಾಳೆಯಗಳ –ನಕ್ಸಲ್‌ ಪಡೆ ಹಾಗೂ ಸರ್ಕಾರ– ಸೋಲಿನ ದ್ಯೋತಕಗಳು.

ಚೀನಾ ಕ್ರಾಂತಿಯ ದಿನಗಳಿಗೆ ಹೋಲಿಸಿದರೆ ಈಗ ಜಗತ್ತಿನ ಸ್ವರೂಪವೇ ಸಂಪೂರ್ಣ ಬದಲಾಗಿದೆ. ಈಗಲೂ ಮಾವೋವಾದವನ್ನೇ ಧರ್ಮಗ್ರಂಥ ಮಾಡಿಕೊಂಡು, ಬದಲಾವಣೆಗೆ ತೆರೆದುಕೊಳ್ಳದೆ ಅದಕ್ಕೆ ಬಲವಾಗಿ ಅಂಟಿಕೊಂಡಿರುವುದು ನಕ್ಸಲ್‌ ಚಳವಳಿ ಸೋಲಿಗೆ ಕಾರಣವೇ?
‘ಕಟ್ಟಾಳುಗಳನ್ನು ತಯಾರಿಸಿದ, ಶೋಷಕರನ್ನು ಅಲುಗಾಡಿಸಿದ ದೊಡ್ಡ ಹೋರಾಟವನ್ನೇ ನಕ್ಸಲ್‌ ಪಡೆಗಳಿಂದ ನಡೆಸಲಾಯಿತಾದರೂ ತೀರಾ ಹಿಂದುಳಿದ ಪ್ರದೇಶಗಳಲ್ಲಿ ಮಾತ್ರ ಅದರ ಚಟುವಟಿಕೆಗಳಿಗೆ ನೆಲೆ ಸಿಕ್ಕಿದೆ. ಜಾತಿ ಆಧಾರಿತ ವರ್ಗ ವ್ಯವಸ್ಥೆಯುಳ್ಳ ಭಾರತದ ವೈವಿಧ್ಯವನ್ನು ಗುರುತಿಸುವಲ್ಲಿ, ಅದಕ್ಕೆ ತಕ್ಕಂತೆ ಮಾರ್ಗ ರೂಪಿಸುವಲ್ಲಿ ಹೋರಾಟಗಾರರು ಯಶಸ್ವಿಯಾಗಿಲ್ಲ’ ಎಂದು ಶ್ರೀಧರ್‌ ಮತ್ತು ನಕ್ಸಲ್‌ ಚಟುವಟಿಕೆಯಿಂದ ಹೊರಬಂದ ಮತ್ತೊಬ್ಬ ಹೋರಾಟಗಾರ ಸಿರಿಮನೆ ನಾಗರಾಜ್‌ ಒಪ್ಪುತ್ತಾರೆ.

‘ಆಗಿನ ಊಳಿಗಮಾನ್ಯ ಪದ್ಧತಿ ಈಗಿನ ಬಂಡವಾಳಶಾಹಿ ರೂಪದಲ್ಲಿ ಬಂದು ಕುಳಿತಿದೆ. ಸಾಮಾಜಿಕ ಗ್ರಹಣದ ಕಾಲ ಇದಾಗಿದ್ದು, ಕಾರ್ಪೊರೇಟ್‌ ಸಂಸ್ಕೃತಿ ವಿಜೃಂಭಿಸುತ್ತಿದೆ. ಕೋಮುವಾದ, ಜಾತಿವಾದ, ಕೊಳ್ಳುಬಾಕತನದಂತಹ ಧಾತುಗಳು ಅದರ ಪೋಷಕ ಕವಚಗಳಾಗಿವೆ. ಅದರ ವಿರುದ್ಧ ಹೋರಾಡಲು ಮಾರ್ಕ್ಸ್‌ ವಾದ, ಲೆನಿನ್‌ ವಾದ ಮಾವೋವಾದ ಎಲ್ಲವೂ ನಮಗೆ ಬೇಕು. ಅದರೊಂದಿಗೆ ಈ ನೆಲದ ಅಂಬೇಡ್ಕರ್‌ ವಾದ ಹದವಾಗಿ ಬೆರೆಯಬೇಕು. ಅಂತಹ ಪ್ರಯತ್ನಗಳು ಈಗ ಶುರುವಾಗಿವೆ’ ಎನ್ನುತ್ತಾರೆ.

ಜಿಗ್ನೇಶ್‌ ಮೇವಾನಿ, ಕನ್ಹಯ್ಯಕುಮಾರ್‌ ಅವರಂತಹ ಯುವನಾಯಕರಿಂದ ಹೊಸ ತಲೆಮಾರು ಸೈದ್ಧಾಂತಿಕ ನೆಗೆತಕ್ಕಾಗಿ ಕಾಯುತ್ತಿದೆ. ಜನಸಮೂಹದ ಹೊಸ ಹೋರಾಟವೊಂದು ರೂಪಗೊಳ್ಳುತ್ತಿದೆ ಎನ್ನುವುದು ಕಮ್ಯುನಿಸ್ಟರ ಬಲವಾದ ನಂಬಿಕೆ. ಅವರ ದೃಷ್ಟಿಯಲ್ಲಿ ‘ಕೆಂಪು ಸೂರ್ಯ’ ಈಗ ಹೊರಳು ಹಾದಿಯಲ್ಲಿದೆ. ಹಾಗಾದರೆ ನಕ್ಸಲೀಯರ ಇದುವರೆಗಿನ ಹೋರಾಟಕ್ಕೆ ಚರಿತ್ರೆಯಲ್ಲಿ ಯಾವ ಸ್ಥಾನವಿದೆ? ಪ್ರಾಯಶಃ ಕಾಲವೇ ಈ ಪ್ರಶ್ನೆಗೆ ಉತ್ತರವನ್ನು ನೀಡಲಿದೆ.

****
ಜಂಗಲ್‌ ನಾಮಾ
ದಂಡಕಾರಣ್ಯದಲ್ಲಿ ಗೆರಿಲ್ಲಾ ಬದುಕನ್ನು ಕಣ್ಣಾರೆ ಕಂಡುಬಂದ ಪಂಜಾಬ್‌ನ ಸತ್ನಾಮ್‌ (ಗುರುಮೀತ್‌ ಸಿಂಗ್‌) ಅವರು ಅಲ್ಲಿನ ಚಿತ್ರಣವನ್ನು ‘ಜಂಗಲ್‌ನಾಮಾ’ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಕಮಾಂಡರ್‌ನ ಬೆಳಗಿನ ಸೀಟಿಯೊಂದಿಗೆ ಅಲ್ಲಿನ ದಿನಚರಿ ಶುರುವಾಗುತ್ತದೆ. ಯಾವುದೇ ಸಶಸ್ತ್ರ ದಳದಂತೆಯೇ ನಕ್ಸಲೀಯರು ಕೂಡ ಪ್ರತಿದಿನ ರೋಲ್‌ಕಾಲ್‌ ನಡೆಸುತ್ತಾರೆ.

ಅಲ್ಲಿರುವುದು ಮಿಲಿಟರಿ ಶಿಸ್ತು. ವ್ಯಾಯಾಮವನ್ನು ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ಸಹಜೀವನ ಅವರ ಮಂತ್ರ. ಮಿಲಿಟರಿ ತರಬೇತಿ ಜತೆಜತೆಗೆ ಮೌಲಿಕ ಕೃತಿಗಳ ಅಧ್ಯಯನಕ್ಕೂ ಅವಕಾಶ. ಅಕ್ಷರದ ಸಹವಾಸವೇ ಇಲ್ಲದ ಆದಿವಾಸಿಗಳಿಂದ ಹಿಡಿದು ಜಗತ್ತಿನ ಎಲ್ಲ ಸಿದ್ಧಾಂತಗಳ ಕುರಿತು ಆಳವಾಗಿ ಅಧ್ಯಯನ ನಡೆಸಿದ ಮೇಧಾವಿಗಳವರೆಗೆ ಅಲ್ಲಿನ ಸೈನ್ಯದಲ್ಲಿ ವೈವಿಧ್ಯ ತುಂಬಿದೆ. ಮಿಲಿಟರಿ ಸಮವಸ್ತ್ರದಲ್ಲಿ ಅವರ ಸಾಮಾಜಿಕ ಹಿನ್ನೆಲೆಗಳೆಲ್ಲ ಅಳಿಸಿಹೋಗಿವೆ. ಅಡುಗೆ ಮನೆಯಿಂದ ಚಹಾ, ತಿಂಡಿ, ಊಟಕ್ಕಾಗಿ ಸಮಯಕ್ಕೆ ಸರಿಯಾಗಿ ಸೀಟಿ ಮೊಳಗುತ್ತದೆ. ಅನ್ನ–ಸಾರು ಇಲ್ಲಿನ ನಿತ್ಯದ ಸಾಮಾನ್ಯ ಮೆನು. ಅನಕ್ಷರಸ್ಥರಿಗೆ ಪಾಠಗಳು ಸಹ ನಡೆಯುತ್ತವೆ.

ನಾಡಿನಿಂದ ಕಾಡು ಸೇರುವ ಪಯಣಕ್ಕೆ ಅವರಿಗೆ ರಾತ್ರಿಯೇ ಪ್ರಶಸ್ತ ಸಮಯ. ಕಾಡು ಹಾದಿಯಲ್ಲಿ ಯಾವಾಗ ಊಟ ಸಿಗುವುದೋ ಗೊತ್ತಿಲ್ಲ. ಎಷ್ಟೋ ಸಲ ನುಚ್ಚಕ್ಕಿ ಅನ್ನ, ಒಣಗಿದ ಮೀನೇ ಆಹಾರ. ಸರದಿಯ ಮೇಲೆ ಸೆಂಟ್ರಿಯಾಗಿ ಪಹರೆ ಕಾಯಬೇಕು. ಯುವತಿಯರು ಸಹ ಸೆಂಟ್ರಿಯಾಗುವುದು ಸೇರಿದಂತೆ ಪುರುಷರಿಗೆ ಸರಿಸಮವಾಗಿ ಎಲ್ಲ ಕೆಲಸ ಮಾಡುತ್ತಾರೆ. ಗೆರಿಲ್ಲಾ ಬದುಕು ಯಾವತ್ತೂ ಒಂದೆಡೆ ನಿಲ್ಲುವುದಿಲ್ಲ. ಒಂದು ಕಡೆಯಿಂದ ಮತ್ತೊಂದೆಡೆ ನಿರಂತರ ಸಂಚಾರ. ಹಳ್ಳಿಯಿಂದ ಹಳ್ಳಿಗೆ, ಕಾಡಿನಿಂದ ಕಾಡಿಗೆ, ಬೆಟ್ಟದಿಂದ ಬೆಟ್ಟಕ್ಕೆ ತೆರಪಿಲ್ಲದ ಓಡಾಟ.

ಕುಡಿಯಲು ಬೆಳಿಗ್ಗೆ ಒಂದು ನದಿಯ ನೀರಾದರೆ, ಸಂಜೆ ಮತ್ತೊಂದು ನದಿಯದ್ದು. ಸುರಿಯುವ ಮಂಜು, ಕೊರೆಯುವ ಚಳಿ, ಮುಸಲಧಾರೆಯ ಕಾಟದಿಂದ ಇಲ್ಲಿನ ಶಿಬಿರಗಳಲ್ಲಿ ಮಲೇರಿಯಾದಿಂದ ನರಳುವವರು ಮಾಮೂಲಿ. ಕಾಡುಹಾದಿಗಳು ಈ ಸೈನ್ಯದ ಪ್ರತಿ ಹೆಜ್ಜೆ ಗುರುತುಗಳನ್ನೂ ನೆನಪಿನಲ್ಲಿ ಇಟ್ಟುಕೊಳ್ಳುತ್ತವೆ, ಗೊತ್ತೆ?... ಸತ್ನಾಮ್‌ ಅವರ ವಿವರಣೆ ಹೀಗೇ ಸಾಗುತ್ತದೆ.

****
‘ಸಮಗ್ರ ಪ್ಯಾಕೇಜ್‌ ರೂಪಿಸಿದ್ದೆವು’
‘ನಕ್ಸಲ್‌ ಸಮಸ್ಯೆಯನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆ ಚೌಕಟ್ಟಿನಲ್ಲಿಟ್ಟು ನೋಡದೆ ಅದರ ಸೈದ್ಧಾಂತಿಕ ಹೋರಾಟದ ಹಿನ್ನೆಲೆಯನ್ನು ಅರ್ಥೈಸಿಕೊಂಡು ಪರಿಹಾರ ಕ್ರಮ ಕೈಗೊಳ್ಳಬೇಕು ಎನ್ನುವುದು ನಾನು ಮಾಡಿದ ಶಿಫಾರಸಿನ ಬಹುಮುಖ್ಯ ಅಂಶವಾಗಿತ್ತು’ ಎಂದು ವಿವರಿಸುತ್ತಾರೆ ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್‌.

ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಅಗತ್ಯ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರವನ್ನು ಗ್ರಾಮ ಪಂಚಾಯ್ತಿಗಳಿಗೆ ನೀಡುವುದು, ಸ್ಥಳೀಯ ಆಡಳಿತಕ್ಕೆ ಆರ್ಥಿಕ ಅಧಿಕಾರ ಬಿಟ್ಟು ಕೊಡುವುದು, ಹಾಡಿಗಳಿಗೆ ವಿದ್ಯುತ್‌ ಹಾಗೂ ರಸ್ತೆ ಸಂಪರ್ಕ ಕಲ್ಪಿಸುವುದು ಮುಖ್ಯವಾಗಿ ಆಗಬೇಕಿದ್ದ ಕೆಲಸಗಳಾಗಿದ್ದವು.


ಚಿರಂಜೀವಿ ಸಿಂಗ್‌

ಅಲ್ಲಿನ ಆದಿವಾಸಿಗಳಿಗೆ ಅರಣ್ಯದ ಹೊರಭಾಗದಲ್ಲಿ ವಸತಿ ಮತ್ತು ಭೂಮಿ ಸೌಲಭ್ಯ ಒದಗಿಸುವುದು, ನಿರುದ್ಯೋಗ ಸಮಸ್ಯೆ ಪರಿಹರಿಸುವುದು, ಮುಖ್ಯವಾಗಿ ಅರಣ್ಯ ಇಲಾಖೆಯ ಗಾರ್ಡ್‌ಗಳಂತಹ ಹುದ್ದೆಗಳಿಗೆ ಆದಿವಾಸಿ ಯುವಕರ ನೇಮಕ ಮಾಡುವುದು, ಶಾಲೆ ತೆರೆಯುವುದು, ಆರೋಗ್ಯ ಸೌಲಭ್ಯ ಒದಗಿಸುವುದು... ಹೀಗೆ ಅಲ್ಲಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತಹ ಸಮಗ್ರ ಪುನರ್ವಸತಿ ಯೋಜನೆಯನ್ನು ರೂಪಿಸಲಾಗಿತ್ತು.

‘ಶಿಫಾರಸುಗಳ ಅನುಷ್ಠಾನಕ್ಕಾಗಿ ರಾಜ್ಯ ಸಂಪುಟ ಸಭೆಯಲ್ಲೇ ನಿರ್ಣಯ ಕೈಗೊಳ್ಳಲಾಗಿತ್ತು. ಮೊದಲ ಕೆಲವು ತಿಂಗಳುಗಳಲ್ಲಿ ಗ್ರಾಮ ಪಂಚಾಯ್ತಿಗಳ ಸಬಲೀಕರಣ ಪ್ರಕ್ರಿಯೆಗಳು ನಡೆದವು. ಅಷ್ಟರಲ್ಲಿ ನಿವೃತ್ತನಾದೆ. ಮುಂದೆ ಈ ಯೋಜನೆಯನ್ನು ಯಾವ ರೀತಿ ಅನುಷ್ಠಾನಕ್ಕೆ ತರಲಾಯಿತು ಎಂಬ ವಿವರಗಳು ನನಗೆ ತಿಳಿದಿಲ್ಲ’ ಎಂದು ವಿವರಿಸುತ್ತಾರೆ.

‘ಛತ್ತೀಸ್‌ಗಡದಷ್ಟು ತೀವ್ರವಾದ ನಕ್ಸಲ್‌ ಚಟುವಟಿಕೆಗಳು ಇಲ್ಲಿ ನಡೆಯಲಿಲ್ಲ. ಮಲೆನಾಡಿನಲ್ಲಿ ಬೇರೆಭಾಗದ ನಕ್ಸಲೀಯರು ತರಬೇತಿಗಾಗಿ ಬರುತ್ತಿದ್ದರು. ಈ ಸಮಸ್ಯೆಯನ್ನು ಗೃಹ ಇಲಾಖೆಯಿಂದ ನಿಭಾಯಿಸಲಾಯಿತು’ ಎನ್ನುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT