ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್–ಸರ್ಫರಾಜ್‌ಗೆ ಅಗ್ನಿಪರೀಕ್ಷೆ

Last Updated 4 ಜೂನ್ 2017, 8:37 IST
ಅಕ್ಷರ ಗಾತ್ರ

ಲಂಡನ್: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ  ಮತ್ತು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಅವರಿಗೆ ಭಾನುವಾರ ಅಗ್ನಿಪರೀಕ್ಷೆಯ ದಿನ. ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ  ಎರಡೂ ತಂಡಗಳು ಮುಖಾಮುಖಿಯಾಗಲಿವೆ.

ಎರಡೂ ದೇಶಗಳ ನಡುವಣ ಕ್ರಿಕೆಟ್‌ ಪಂದ್ಯವೆಂದರೆ ಅದು ಪ್ರತಿಷ್ಠೆಯ ಹಣಾಹಣಿ. ಉಭಯ ದೇಶಗಳ ಅಭಿಮಾನಿಗಳ ವಲಯದಲ್ಲಿ ವಿದ್ಯುತ್ ಸಂಚಾರವಾಗುವುದು ಖಚಿತ.  ಸೋತವರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಗೆದ್ದವರು   ಹೀರೊ ಪಟ್ಟ ಅಲಂಕರಿ ಸುತ್ತಾರೆ. ಆದ್ದರಿಂದ ಉಭಯ ತಂಡಗಳ ನಾಯಕರಿಗೂ ಇದು ಕಠಿಣ ಸವಾಲಿನ ಪಂದ್ಯ.

ಅದರಲ್ಲೂ ಈ ಬಾರಿ ಭಾರತಕ್ಕೆ ಇದು ಅತ್ಯಂತ ಸೂಕ್ಷ್ಮ ಮತ್ತು ಮಹತ್ವದ ಪಂದ್ಯ. ಹಾಲಿ ಚಾಂಪಿಯನ್‌ ಆಗಿರುವ ಭಾರತ ತಂಡವು ಪ್ರಶಸ್ತಿ ಉಳಿಸಿಕೊಳ್ಳಬೇಕಾದ ಸವಾಲು ಇದೆ. ಅಲ್ಲದೇ  ನಾಯಕ ವಿರಾಟ್ ಮತ್ತು ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರ ನಡುವಣ ಇದೆ ಎನ್ನಲಾಗಿರುವ ಭಿನ್ನಾಭಿಪ್ರಾಯದ ಬಿಸಿ ತಂಡಕ್ಕೆ ತಟ್ಟಿಲ್ಲ ಎಂದು ತೋರಿಸುವ ಸವಾಲು ಕೂಡ ಇದೆ.

ಪಾಕ್ ತಂಡವೂ ವಿವಾದಗಳಿಂದ ಹೊರತಾಗಿಲ್ಲ.  ಇತ್ತೀಚೆಗೆ ಅಜರ್ ಅಲಿ ಅವರನ್ನು  ನಾಯಕತ್ವದಿಂದ ಕೆಳಗಿಳಿಸಿದ್ದ ಪಾಕ್ ತಂಡವು ಸರ್ಫರಾಜ್ ಅವರಿಗೆ ಪಟ್ಟ ಕಟ್ಟಿದೆ.   ಅವರು ಯುವ ಆಟಗಾರರ ಪಡೆಯನ್ನು ಕಟ್ಟಿಕೊಂಡು ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಪಡೆ ಇರುವ ಭಾರತ ತಂಡವನ್ನು ಎದುರಿಸಬೇಕಿದೆ. ವಿರಾಟ್ ಬಳಗವು ಕಳೆದ ಆರು ತಿಂಗಳಿಂದ ಸಿದ್ಧತೆ ಮಾಡಿಕೊಂಡಿದೆ. ಆದ್ದರಿಂದ ಸರ್ಫರಾಜ್ ಬಳಗವು ವಿಶೇಷ ಯೋಜನೆಯೊಂದಿಗೆ ಕಣಕ್ಕಿಳಿಯುವುದು ಅನಿವಾರ್ಯ.

ಅದೇ ತಂಡ; ನಾಯಕ ಬದಲು: 2013ರಲ್ಲಿ ಮಹೇಂದ್ರಸಿಂಗ್ ನಾಯಕತ್ವದ ತಂಡವು ಇಲ್ಲಿ ಪ್ರಶಸ್ತಿ ಗೆದ್ದಿತ್ತು.  ಬಹುತೇಕ ಅದೇ ಬಳಗವು ಮತ್ತೆ ಇಲ್ಲಿ ಕಣಕ್ಕೆ ಇಳಿಯಲಿದೆ. ಆಗ ಆಡಿದ್ದ ಕೊಹ್ಲಿ ಈಗ ನಾಯಕನಾಗಿದ್ದಾರೆ.  ದೋನಿ ವಿಕೆಟ್‌ಕೀಪಿಂಗ್ ಹೊಣೆ ನಿರ್ವಹಿಸಲಿದ್ದಾರೆ.  ಆ ಟೂರ್ನಿಯ ಲೀಗ್‌ನಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಜಯಿಸಿತ್ತು. ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಎರಡೂ ತಂಡಗಳು ಮೂರು ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಪಾಕ್ ತಂಡವೇ ಎರಡು ಬಾರಿ ಮೇಲುಗೈ ಸಾಧಿಸಿದೆ. 

ಆದರೆ ಏಕದಿನ ವಿಶ್ವಕಪ್‌ ಮತ್ತು ವಿಶ್ವ ಟ್ವೆಂಟಿ–20 ಟೂರ್ನಿಗಳಲ್ಲಿ ಭಾರತ ತಂಡವು ಇದುವರೆಗೂ ಪಾಕ್ ಎದುರು ಸೋತಿಲ್ಲ. ಅದೇ ರೀತಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಒಟ್ಟು ಏಳು ಬಾರಿ ಎರಡೂ ತಂಡಗಳು ಮುಖಾಮುಖಿಯಾಗಿವೆ.  ಅದರಲ್ಲಿ ಭಾರತ ನಾಲ್ಕ ರಲ್ಲಿ, ಪಾಕ್ ಮೂರರಲ್ಲಿ ಗೆದ್ದಿವೆ. ಎರಡೂ ದೇಶಗಳ ನಡುವೆ ಐದು ವರ್ಷ ಗಳಿಂದ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ.  ಸರಣಿ ಆಯೋಜನೆಯ ಕುರಿತು ಹೋದ ವಾರ   ಬಿಸಿಸಿಐ ಮತ್ತು ಪಿಸಿಬಿ ನಡೆಸಿದ್ದ ಮಾತುಕತೆಯೂ ಮುರಿದು ಬಿದ್ದಿತ್ತು.

‘ಭಯೋತ್ಪಾದನೆ ಚಟುವಟಿಕೆ ನಿಲ್ಲಿಸದ ಹೊರತು ಎರಡೂ ದೇಶಗಳ ನಡುವೆ ಕ್ರಿಕೆಟ್ ಸರಣಿ ಸಾಧ್ಯವಿಲ್ಲ’ ಎಂದು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಹೇಳಿದ್ದರು. ಈ ಸನ್ನಿವೇಶದಲ್ಲಿ ಎರಡು ತಂಡಗಳ ನಡುವೆ ಪಂದ್ಯಕ್ಕೆ ವಿಶೇಷ ಮಹತ್ವ ಲಭಿಸಿದೆ. ವಾರದ ರಜಾ ದಿನಕ್ಕೆ ಕಾವೇರಿಸಿದೆ.

ಪ್ರಮುಖ ಮಾಹಿತಿಗಳು
* 1978ರ ಅಕ್ಟೋಬರ್‌ 1ರಂದು ಭಾರತ–ಪಾಕ್‌ ನಡುವೆ ಮೊದಲ ಏಕದಿನ ಪಂದ್ಯ ನಡೆದಿತ್ತು

* ಪಾಕಿಸ್ತಾನ ತಂಡ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ.
  * ಏಕದಿನ ವಿಶ್ವಕಪ್‌ ಮತ್ತು ವಿಶ್ವ ಟ್ವೆಂಟಿ–20ಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಒಮ್ಮೆಯೂ ಸೋತಿಲ್ಲ.

ಮಳೆಯೊ, ರನ್ ಹೊಳೆಯೊ?

ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಭಾನುವಾರ ಮಳೆಯ ಆಟ ನಡೆಯುವುದೋ ಅಥವಾ ರನ್‌ಗಳ ಹೊಳೆ ಹರಿಯುವುದೋ?
ಶುಕ್ರವಾರ ಇಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಣ ಪಂದ್ಯದಲ್ಲಿ ಮಳೆಯ ಆಟವೇ ಮೇಲುಗೈ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್ ತಂಡವು 45 ಓವರ್‌ಗಳಲ್ಲಿ 295 ರನ್‌ ಗಳಿಸಿತ್ತು. ಕೇನ್ ವಿಲಿಯಮ್ಸನ್‌ ಶತಕ ಬಾರಿಸಿದ್ದರು.
ಭಾನುವಾರವೂ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ಇದೆ.  ಒಂದೊಮ್ಮೆ ಮಳೆ ಬರದಿದ್ದರೆ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆಯೂ ಇದೆ. ಎಜ್‌ಬಾಸ್ಟನ್ ಅಂಗಳದ ಪಿಚ್ ಯಾವಾಗಲೂ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡಿದೆ. ಟಾಸ್ ಗೆದ್ದ ತಂಡಗಳು ಬ್ಯಾಟಿಂಗ್ ಮಾಡಿದ ಉದಾಹರಣೆಗಳೇ ಹೆಚ್ಚು. ಆದ್ದರಿಂದ ಈ ಪಂದ್ಯದ ಟಾಸ್ ಕೂಡ ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT