ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ, ಜಪ ಮತ್ತು ಸರ್ಕಾರ

Last Updated 4 ಜೂನ್ 2017, 20:10 IST
ಅಕ್ಷರ ಗಾತ್ರ

ಉತ್ತಮ ಮಳೆಗೆ ಪ್ರಾರ್ಥಿಸಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಲಕಾವೇರಿಯಲ್ಲಿ ಪರ್ಜನ್ಯ ಜಪ ನಡೆಸಿದ್ದಾರೆ. ‘ಮುಂಗಾರು ಮಳೆಗೂ ಮೊದಲು ತಲಕಾವೇರಿಯಲ್ಲಿ ಪೂಜೆ ಸಲ್ಲಿಸುವುದು ಮೈಸೂರು ಮಹಾರಾಜರ ಕಾಲದಿಂದಲೂ ಸಂಪ್ರದಾಯ’ ಎಂದು ನಿಗಮದ   ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡಿದ್ದಾರೆ (ಪ್ರ.ವಾ., ಜೂನ್‌ 2). ಮಹಾರಾಜರ ಕಾಲದ ಸಂಪ್ರದಾಯವೆಂದು ನಾವು ಈಗ ಏನನ್ನು ಅದೇ ರೀತಿ ಆಚರಿಸುತ್ತಿದ್ದೇವೆ?

ದಸರಾದಲ್ಲಿ ಅಂಬಾರಿಯ ಮೇಲೆ ಮಹಾರಾಜರನ್ನು ಕೂರಿಸಿ ವಿಜೃಂಭಣೆಯಿಂದ ಮೆರವಣಿಗೆ ಮಾಡುತ್ತಿದ್ದೇವೆಯೇ? ಗೋ– ಬ್ರಾಹ್ಮಣರ ಪಾದಪೂಜೆ ಮಾಡಿ ರಾಜ್ಯದ ಬೊಕ್ಕಸದಿಂದ ದಾನದಕ್ಷಿಣೆ ನೀಡುತ್ತಿದ್ದೇವೆಯೇ? ಬದಲಾಗಿ ಭುವನೇಶ್ವರಿಯ ಭಾವಚಿತ್ರವನ್ನಿಟ್ಟು ದಸರಾ ಹಬ್ಬವನ್ನು ನಾಡಹಬ್ಬವೆಂದು ಆಚರಿಸುತ್ತಿದ್ದೇವೆ.

ರಾಜ ಆಳರಸನಲ್ಲದ ಮತ್ತು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿರುವ ಬದಲಾದ ವ್ಯವಸ್ಥೆಯಲ್ಲಿ ಆ ಕಾಲದ ಸಂಪ್ರದಾಯಗಳನ್ನು ಏಕೆ ಮುಂದುವರಿಸಬೇಕು?  ನೆಹರೂ ಹೇಳುತ್ತಿದ್ದಂತೆ, ಈ ಹೊಸ ಕಾಲಮಾನದ ಮೌಲ್ಯಗಳಾದ ವೈಚಾರಿಕತೆ ಹಾಗೂ ವೈಜ್ಞಾನಿಕತೆಗಳನ್ನು ನಾವು ಬದ್ಧತೆಯಿಂದ ರೂಪಿಸಿಕೊಳ್ಳುವ ಅಗತ್ಯ ಇದೆ.

ಭಾಗಮಂಡಲದ ನಿವಾಸಿಯೊಬ್ಬರು ‘ಕೊಡಗು ಜಿಲ್ಲೆಯಲ್ಲಿ ಈ ವರ್ಷ ಮುಂಗಾರುಪೂರ್ವ ಮಳೆ ವಾಡಿಕೆಗೂ ಮೀರಿ ಬಿದ್ದಿದೆ. ರಾಜ್ಯಕ್ಕೆ ಮುಂಗಾರು ಇನ್ನೂ ಪ್ರವೇಶಿಸಿಲ್ಲ. ಆಗಲೇ ಸರ್ಕಾರ ಆತುರದ ನಿರ್ಧಾರ ಕೈಗೊಂಡು ಹಣ ವ್ಯಯಿಸುವ ಅಗತ್ಯವಿಲ್ಲ’ ಎಂದು ವಿವೇಕದ ಮಾತುಗಳನ್ನಾಡಿದ್ದಾರೆ.

ಮಳೆ ನಿಸರ್ಗದ ನಿಯಮಗಳನ್ನು ಅನುಸರಿಸುವ ಒಂದು ನೈಸರ್ಗಿಕ ಪ್ರಕ್ರಿಯೆ. ಇದರಲ್ಲಿ ನಿಸರ್ಗಾತೀತವಾದ ಯಾವ ಮಧ್ಯವರ್ತಿಯ ಅವಶ್ಯಕತೆಯೂ ಇರುವುದಿಲ್ಲ. ಜಪ, ಹವನ, ಹೋಮಗಳಿಗೂ ನಿಸರ್ಗದಲ್ಲಿ ಕಾಣಬರುವ ಋತುಮಾನದ ಬದಲಾವಣೆಗಳಿಗೂ ಯಾವ ಸಂಬಂಧವೂ ಇರುವುದಿಲ್ಲ ಎಂಬುದು ಇವರ ಮಾತುಗಳಲ್ಲಿ ಕಂಡುಬರುತ್ತದೆ.

ಮೌಢ್ಯನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳುತ್ತಲೇ ಬಂದಿದ್ದಾರೆ. ವಿಧಾನಮಂಡಲದ ಇದೇ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದೆಂಬ ಹೇಳಿಕೆಯನ್ನೂ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಸರ್ಕಾರ ಹಿಂದಿನ ಎಲ್ಲ ಸರ್ಕಾರಗಳಿಗಿಂತಲೂ ಭಿನ್ನವಾದ ಬದ್ಧತೆ ಪ್ರದರ್ಶಿಸುವ ಹೊಣೆಗಾರಿಕೆಯನ್ನು ಹೊತ್ತಿದೆ.

ಇಂತಹ ಸಂದರ್ಭದಲ್ಲಿ ಜಪವೋ ಹೋಮವೋ ಮಾಡಿದರೆ ಮಳೆಯಾಗುತ್ತದೆ ಎಂಬ ಮೂಢನಂಬಿಕೆಗೆ ಸರ್ಕಾರವೇ ಕಟ್ಟುಬಿದ್ದರೆ ಇಡೀ ಸರ್ಕಾರ ಮತ್ತು ಸರ್ಕಾರ ರಚಿಸಿರುವ ಪಕ್ಷ ನಗೆಪಾಟಲಿಗೆ ಒಳಗಾಗಬೇಕಾಗುತ್ತದೆ.

ಪರ್ಜನ್ಯ ಹೋಮವು ಮೂಢನಂಬಿಕೆಯಲ್ಲ ಎಂದು ಹೇಳುವವರು, ಯಜ್ಞ, ಯಾಗ (ಅಶ್ವಮೇಧ) ಗಳಂತಹ ಶಿಷ್ಟ ಮತ್ತು ಮಾಟ ಮಂತ್ರಗಳಂತಹ ಕ್ಷುದ್ರ ಅಕಾರಣವಾದಿ ಆಚರಣೆಗಳಲ್ಲಿ ನಂಬಿಕೆ ಇರುವವರು ಎಲ್ಲ ಪಕ್ಷಗಳಲ್ಲಿಯೂ ಇದ್ದಾರೆ. ದೈವದಲ್ಲಿ ನಂಬಿಕೆ ಇಡುವುದು ಬೇರೆ; ಹಿಂದಿನಿಂದ ಬಂದ ಕಾರಣವಾದಿ ನೆಲೆಯಿಲ್ಲದ ಕುರುಡು ಆಚರಣೆಗಳಲ್ಲಿ ನಂಬಿಕೆ ಇಡುವುದು ಬೇರೆ. ಹಾಗೆಯೇ ಮೂಢನಂಬಿಕೆಯ ವಿದ್ಯಮಾನಗಳನ್ನು ಕಾರಣವಾದಿ ನೆಲೆಯಿಲ್ಲದ ಕಾಕತಾಳೀಯ ನಿದರ್ಶನಗಳ ಮೂಲಕ ಸಮರ್ಥಿಸುವುದು ಬೇರೆ.

ಮೂಲನಂಬಿಕೆ ಮತ್ತು ಮೂಢನಂಬಿಕೆ ಎಂದು ವ್ಯಾಖ್ಯಾನಿಸುವುದು ಈ ವಿದ್ಯಮಾನವನ್ನೇ. ಆದ್ದರಿಂದಲೇ ಕಾಕತಾಳೀಯವಾಗಿ ಸಂಭವಿಸದೆ ಖಚಿತವಾಗಿ ಸಂಭವಿಸುವ ವಿದ್ಯಮಾನಗಳನ್ನು ಮಾತ್ರ ನಂಬಿ ನಡೆಯುವುದು ನಿಜಸಂಗತಿಯಾಗಿ ಹೊರಹೊಮ್ಮುತ್ತದೆ. ಈ ದೃಷ್ಟಿಕೋನದಿಂದ ನೋಡಿದಾಗ ಪರ್ಜನ್ಯ ಹೋಮವೆಂಬುದು ಮೂಢನಂಬಿಕೆಯೇ.

ಅದು ಮೂಢನಂಬಿಕೆಯಲ್ಲ ಎನ್ನುವುದಾದರೆ ಕೇರಳದಿಂದ ಬ್ರಾಹ್ಮಣ ಅರ್ಚಕರನ್ನು  ಕರೆಸುವ ಉದ್ದೇಶವನ್ನು ಏಕೆ ಹೊಂದಿದ್ದರು? ಅದರ ಬದಲಿಗೆ ರೈತರ ಮೂಲಕವೇ ಮಳೆಪೂಜೆ ಮಾಡಿಸುವುದು ಸ್ವಲ್ಪಮಟ್ಟಿಗಾದರೂ ಸಮರ್ಥಿಸಿಕೊಳ್ಳಬಹುದಾದ ಕ್ರಮವಾಗಿರುತ್ತಿತ್ತೇನೋ!

ಇಂತಹ ಸಂಗತಿಗಳು ಹೊಸವೇನಲ್ಲ. 1980ರಲ್ಲಿ ಮುಖ್ಯಮಂತ್ರಿಯೊಬ್ಬರು ಸರ್ಕಾರಿ ವೆಚ್ಚದಲ್ಲಿ ಕನ್ನಂಬಾಡಿ ಕಟ್ಟೆಗೆ ಪೂಜೆ ಮಾಡಿದ್ದನ್ನು ಮತ್ತು1985ರಲ್ಲಿ ಜಲಮಂಡಳಿಯ ಮೂಲಕ ಸರ್ಕಾರವು ಮಳೆಗಾಗಿ ತಿಪ್ಪಗೊಂಡನಹಳ್ಳಿಯಲ್ಲಿ ಪ್ರಾರ್ಥನೆ ಮಾಡಲು ಶಿವಬಾಲಯೋಗಿ ಅವರನ್ನು ಆಹ್ವಾನಿಸಿದ್ದನ್ನು ವಿಧಾನ ಪರಿಷತ್ ಸದಸ್ಯರಾಗಿ ಡಾ.ಎಚ್. ನರಸಿಂಹಯ್ಯ ನಿರ್ದಾಕ್ಷಿಣ್ಯವಾಗಿ ಸದನದಲ್ಲಿ ಖಂಡಿಸಿದ್ದರು.

‘ಅವರು ಪ್ರಾರ್ಥಿಸಿದ ನಂತರ ಎರಡಲ್ಲ ಎಂಟು ತಿಂಗಳ ನಂತರ ಮಳೆ ಬಂದುದಕ್ಕೆ ಯಾವ ಕಾರಣವಾದಿ ನೆಲೆಯಲ್ಲಿ ಉತ್ತರ ಕೊಡಲು ಸಾಧ್ಯ’ ಎಂದು ಕೇಳಿದ್ದರು.

ಆ ಅವಧಿಯಲ್ಲಿ ಅಧಿಕಾರದಲ್ಲಿದ್ದ ಇಬ್ಬರು ಮುಖ್ಯಮಂತ್ರಿಗಳು ಮೂಢನಂಬಿಕೆಗಳ ವಿರುದ್ಧವಾಗಲೀ ಮೌಢ್ಯನಿಷೇಧ ಕಾಯಿದೆಯನ್ನು ಜಾರಿಗೆ ತರಬೇಕೆನ್ನುವ ಮಾತನ್ನಾಗಲೀ ಆಡಿದವರಾಗಿರಲಿಲ್ಲ. ಆದರೆ ಸಿದ್ದರಾಮಯ್ಯನವರು ಈ ಮಾತನ್ನು ಹೇಳಿದ್ದಾರೆ. ಚಾಮರಾಜನಗರಕ್ಕೆ ಹಲವು ಬಾರಿ ಭೇಟಿ ಕೊಟ್ಟಿದ್ದಾರೆ.

ಭಿನ್ನಾಭಿಪ್ರಾಯಗಳಿದ್ದರೂ ಮೌಢ್ಯನಿಷೇಧ ಕಾಯಿದೆಯನ್ನು ಜಾರಿಗೆ ತರುವ ಸಂಕಲ್ಪವನ್ನು ಪ್ರದರ್ಶಿಸಿದ್ದಾರೆ. ಈ ನಡುವೆ ಅವರದೇ ಸರ್ಕಾರ ಇಂತಹ ಮೂಢನಂಬಿಕೆಯ ಆಚರಣೆಗಳಿಗೆ ಪ್ರೋತ್ಸಾಹ ನೀಡಿದರೆ ಇದರಿಂದ ಜನರಿಗೆ ಯಾವ ಸಂದೇಶವನ್ನು ಕೊಟ್ಟಂತಾಗುತ್ತದೆ?

ಪೂಜೆ ಸಲ್ಲಿಸಿದರೆ ತಪ್ಪೇನು?
ಬೇಗ ಮಳೆ ಬಂದು ಜಲಾಶಯಗಳು ತುಂಬಲಿ ಎಂಬ ಸದುದ್ದೇಶದಿಂದ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು ನದಿಗಳ ಉಗಮ ಸ್ಥಾನಕ್ಕೆ  ಅರ್ಚಕರನ್ನು ಕರೆಯಿಸಿ ಹೋಮವೋ ಹವನವೋ ಅಥವಾ ಜಪ–ತಪವೋ ಮಾಡಿಸಿದರೆ ತಪ್ಪೇನು?

ಭಾರತೀಯ ಸಾಮಾಜಿಕ ಜೀವನವೇ ನಂಬಿಕೆಯ ಮೇಲೆ ನಿಂತಿದೆ. ನಾವು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರಿದಿದ್ದರೂ  ಉಪಗ್ರಹಗಳನ್ನು ಉಡಾಯಿಸುವಾಗ, ಉಡಾವಣೆ ಯಶಸ್ವಿಯಾಗಲೆಂದು ತಿರುಪತಿ ತಿಮ್ಮಪ್ಪನನ್ನು ನೆನೆಸಿಲ್ಲವೇ? ಜಲಾಶಯಗಳು ತುಂಬಿದಾಗ ಸರ್ಕಾರಿ ವೆಚ್ಚದಲ್ಲಿ ಬಾಗಿನ ಅರ್ಪಿಸಿಲ್ಲವೇ?

ರಾಷ್ಟ್ರಪತಿ, ಪ್ರಧಾನ ಮಂತ್ರಿಗಳಾದಿಯಾಗಿ ನಮ್ಮ ಜನಪ್ರತಿನಿಧಿಗಳೆಲ್ಲ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಆಡಳಿತಾವಧಿ ಸುಗಮವಾಗಿ ನಡೆಯಲಿ ಎಂಬ ಉದ್ದೇಶದಿಂದ ದೇವಾಲಯಗಳನ್ನು ಸುತ್ತುವುದಿಲ್ಲವೇ?

ನಾಡದೇವಿಯು ಮಳೆ ಬೆಳೆ ಕೊಟ್ಟು ರಾಜ್ಯದ ಜನರನ್ನು ಸಂತೃಪ್ತಿಯಿಂದ ಇಡಲಿ ಎಂಬ ಉದ್ದೇಶದಿಂದ ಸರ್ಕಾರಿ ವೆಚ್ಚದಲ್ಲಿ ಆಡಂಬರದಿಂದ ದಸರಾ ಆಚರಿಸುವುದಿಲ್ಲವೇ? ವಾಸ್ತು ಹೆಸರಿನಲ್ಲಿ ವಿಧಾನಸೌಧದ ಕಿಟಕಿ– ಬಾಗಿಲುಗಳನ್ನೇ ಒಡೆದ ನಾವು, ಈಗ ನದಿಗಳಿಗೆ ಪೂಜೆ ಪುನಸ್ಕಾರ ಸಲ್ಲಿಸುವುದನ್ನು  ಪ್ರಶ್ನಿಸುವುದು ಮೂರ್ಖತನಆದೀತು.
-ವಿ.ಜಿ. ಇನಾಮದಾರ, ಸಾರವಾಡ, ವಿಜಯಪುರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT