ಹವಾಮಾನ ಬದಲಾವಣೆಯನ್ನು, ಅಂದರೆ ವಾತಾವರಣ ಮತ್ತಷ್ಟು ಬಿಸಿಯಾಗುವುದನ್ನು ತಡೆಯುವ ಮತ್ತು ಆ ಮೂಲಕ ಭೂಮಂಡಲವನ್ನು ಸಂರಕ್ಷಿಸುವ ಕಾರ್ಯತಂತ್ರಗಳುಳ್ಳ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದು ಇಡೀ ವಿಶ್ವಕ್ಕೇ ಪೆಟ್ಟು ಕೊಟ್ಟಿದೆ. ಇದು ಆ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಂತ ವಿವೇಕಹೀನ ನಿರ್ಧಾರ.

ಈ ಭೂಮಿಯ ಭವಿಷ್ಯದ ಬಗ್ಗೆ ಎಳ್ಳಷ್ಟೂ ಕಾಳಜಿಯೇ ಇಲ್ಲದವರು ಮಾತ್ರ ಇಂತಹ ಕೆಟ್ಟ ತೀರ್ಮಾನ ತೆಗೆದುಕೊಳ್ಳಬಲ್ಲರು. ಟ್ರಂಪ್ಗೂ ಮುನ್ನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಈ ಒಪ್ಪಂದದ ಬಗ್ಗೆ ತುಂಬ ಕಾಳಜಿ, ಕಳಕಳಿ ಹೊಂದಿದ್ದರು. ಮನುಕುಲದ ಒಳಿತಿಗೆ ಇದು ಅತ್ಯವಶ್ಯ ಎಂಬುದು ಅವರಿಗೆ ಮನವರಿಕೆ ಆಗಿತ್ತು.

ಅದಕ್ಕಾಗಿ, ‘ಪ್ರತಿಯೊಂದು ದೇಶ ಮತ್ತು ಪ್ರತಿಯೊಬ್ಬ ವ್ಯಕ್ತಿ ಒಂದಿಷ್ಟು ತ್ಯಾಗಕ್ಕೆ ಸಿದ್ಧರಾಗಲೇ ಬೇಕು; ಇಷ್ಟು ಕಾಲ ಪ್ರಕೃತಿಯ ಮೇಲೆ ಆಕ್ರಮಣ ನಡೆಸಿದ್ದು ಸಾಕು, ಇನ್ನಾದರೂ ಅದರ ರಕ್ಷಣೆಗೆ ಪಣ ತೊಡಬೇಕು’ ಎಂದು ಬಲವಾಗಿ ನಂಬಿದ್ದರು. ಆದರೆ ಪಕ್ಕಾ ಉದ್ಯಮದ ಹಿನ್ನೆಲೆಯಿಂದ ಬಂದ, ಸಿರಿವಂತಿಕೆಯ ಸುಪ್ಪತ್ತಿಗೆಯಲ್ಲಿಯೇ ಬೆಳೆದ ಟ್ರಂಪ್ ಅವರಿಗೆ ಇವೆಲ್ಲ ರುಚಿಸುವ ಮಾತುಗಳಲ್ಲ.

‘ಭೂಮಿಗೆ ಏನು ಬೇಕಾದರೂ ಆಗಲಿ; ನಮಗೂ ಅದಕ್ಕೂ ಸಂಬಂಧ ಇಲ್ಲ. ಅಮೆರಿಕದ ಸುಖಲೋಲುಪತೆಗೆ ಧಕ್ಕೆ ಬರದಿದ್ದರೆ ಸಾಕು’ ಎನ್ನುವುದು ಅವರ ಧೋರಣೆ. ಅಮೆರಿಕ ಮೊದಲು ಎನ್ನುವುದೇ ಅವರ ಏಕೈಕ ಧ್ಯೇಯ. ಪ್ಯಾರಿಸ್ ಒಪ್ಪಂದದಿಂದ ಹೊರಬರುವುದಾಗಿ ಚುನಾವಣೆ ಕಾಲದಲ್ಲಿಯೂ ಹೇಳುತ್ತಲೇ ಇದ್ದರು. ಆದರೆ ಅಮೆರಿಕದ ಅಧ್ಯಕ್ಷತೆಯಂತಹ ಭಾರಿ ಹೊಣೆಗಾರಿಕೆ ಕೂಡ ಅವರ ಈ ನಿರ್ಧಾರವನ್ನು ಬದಲಿಸಲೇ ಇಲ್ಲ.

ಈ ಜಗತ್ತಿನಲ್ಲಿ ಪ್ರಾಕೃತಿಕ ಸಂಪನ್ಮೂಲವನ್ನು ಮಿತಿ ಮೀರಿ ಬಳಸಿದ ಮತ್ತು ಅತಿಯಾದ ಔದ್ಯೋಗೀಕರಣದಿಂದ ಭೂಮಿಯ ತಾಪಮಾನ ಹೆಚ್ಚಲು ಕಾರಣವಾದ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಅಮೆರಿಕ. ಆದ್ದರಿಂದ ತಾಪಮಾನ ನಿಯಂತ್ರಿಸುವ ದೊಡ್ಡ ಹೊಣೆ ಕೂಡ ಅದರ ಮೇಲಿದೆ. ದುರ್ದೈವದ ಸಂಗತಿ ಎಂದರೆ, ‘ಅದ್ಯಾವುದೂ ತಮಗೆ ಅನ್ವಯಿಸುವುದಿಲ್ಲ’ ಎಂಬಂತೆ ಟ್ರಂಪ್ ನಡೆದುಕೊಂಡಿದ್ದಾರೆ.

‘ಒಪ್ಪಂದದಿಂದ ಹೆಚ್ಚು ಲಾಭ ಆಗುವುದು ಭಾರತ ಮತ್ತು ಚೀನಾಕ್ಕೆ; ಅತಿ ಹೆಚ್ಚು ಅನ್ಯಾಯ ಆಗುವುದು ಅಮೆರಿಕಕ್ಕೆ’ ಎಂಬ ವಿತಂಡ ವಾದ ಅವರದು. ಅಮೆರಿಕದ ಐಷಾರಾಮಿತನಕ್ಕೆ ಎಳ್ಳಷ್ಟೂ ತೊಂದರೆ ಆಗಬಾರದು ಎಂಬ ಸ್ವಾರ್ಥ, ಸಂಕುಚಿತ ಧೋರಣೆ. ‘ತಾಪಮಾನ ಏರಿಕೆಗೆ ಕಾರಣವಾಗುವ ಹಸಿರು ಮನೆ ಅನಿಲಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಚೀನಾಕ್ಕೆ 2030ರ ವರೆಗೂ ಅವಕಾಶವಿದೆ.

ಪ್ಯಾರಿಸ್ ಒಪ್ಪಂದದ ಪ್ರಕಾರ ₹ 1.61 ಲಕ್ಷ ಕೋಟಿ ನೆರವು ಸಿಗುವ ತನಕ ವಾಯು ಮಾಲಿನ್ಯ ತಡೆಯಲು ಭಾರತ ಮುಂದಾಗುವುದಿಲ್ಲ. ತಕ್ಷಣದ ಕ್ರಮ ತೆಗೆದುಕೊಂಡು ಅಮೆರಿಕನ್ನರೇಕೆ ಕಷ್ಟ ಪಡಬೇಕು’ ಎಂಬ ಅವರ ಸರ್ಕಾರದ ವಾದ ಕೂಡ ಸರಿಯಲ್ಲ. ಇತ್ತೀಚಿನ ವರ್ಷಗಳಲ್ಲಿ ಔದ್ಯಮಿಕ ಕ್ಷೇತ್ರದಲ್ಲಿ ಹೆಜ್ಜೆ ಊರುತ್ತಿರುವ ಭಾರತ, ಚೀನಾದಂತಹ ದೇಶಗಳ ಬಗ್ಗೆ ಅಸೂಯೆ ಪಡುವುದು, ಒಪ್ಪಂದದಿಂದ ಹಿಂದೆ ಸರಿಯುವುದು ಅಮೆರಿಕಕ್ಕಂತೂ ಶೋಭಿಸುವುದಿಲ್ಲ.

ತಾಪಮಾನ ಹೆಚ್ಚಳ ತಡೆ ಯಾವುದೋ ಒಂದು ದೇಶದ ಜವಾಬ್ದಾರಿ ಅಲ್ಲ. ಅದು ಇಡೀ ವಿಶ್ವದ ಸಮಸ್ತ ಮಾನವ ಕೋಟಿಯ ಹೊಣೆ. ಅಂದರೆ ಎಲ್ಲ ಸರ್ಕಾರಗಳ ಹೊಣೆ. ಏಕೆಂದರೆ ಈ ಭೂಮಿ ಉಳಿದರೆ ಮಾತ್ರ ಮನುಷ್ಯರಷ್ಟೇ ಅಲ್ಲ, ಎಲ್ಲ ಜೀವರಾಶಿಗಳು ಇರುತ್ತವೆ. ಭೂಮಿಯೇ ನಾಶವಾದರೆ? ನಾವ್ಯಾರೂ ಇರುವುದಿಲ್ಲ.

ಈ ಸಾಮಾನ್ಯ ಸಂಗತಿ ಮಕ್ಕಳಿಗೂ ಗೊತ್ತು. ಆದರೆ ವಿಶ್ವದ ನಾಯಕ ಎಂದು ಹೇಳಿಕೊಳ್ಳುವ ಅಮೆರಿಕಕ್ಕೆ ಗೊತ್ತಿಲ್ಲ ಎನ್ನುವುದು ಆಶ್ಚರ್ಯ ಮೂಡಿಸುತ್ತದೆ. ಆದ್ದರಿಂದ ಟ್ರಂಪ್ ನಿರ್ಧಾರ ಬದಲಾಗಬೇಕು. ಅದಕ್ಕಾಗಿ ಅವರ ಮೇಲೆ ಒತ್ತಡ ತರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.