ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಸಬಲೀಕರಣಕ್ಕೆ ಬೇಕು ಪ್ರಬಲ ಸಂಕಲ್ಪಶಕ್ತಿ

Last Updated 5 ಜೂನ್ 2017, 19:30 IST
ಅಕ್ಷರ ಗಾತ್ರ

ಸರ್ಕಾರಿ ಶಾಲೆಗಳ ಬಗೆಗಿನ ಅನಾದರ ದಿನೇ ದಿನೇ ಹೆಚ್ಚುತ್ತಿದೆ. ಈ ಶಾಲೆಗಳು ಯಾರಿಗೂ ಬೇಡವಾಗಿವೆ. ಸಮವಸ್ತ್ರ, ಪಠ್ಯಪುಸ್ತಕ, ಶೂ, ಸೈಕಲ್‌, ಬಿಸಿಯೂಟ... ಎಲ್ಲವನ್ನೂ ಉಚಿತವಾಗಿ ಪೂರೈಸಿದರೂ ಕಟ್ಟಕಡೆಯ ಆಯ್ಕೆ ಎಂಬಂತಾಗಿವೆ. ವಿದ್ಯಾರ್ಥಿಗಳ ಕೊರತೆಯ ಕಾರಣ ಮುಂದೊಡ್ಡಿ ಶಾಲೆಗಳನ್ನು ವಿಲೀನಗೊಳಿಸಲಾಗುತ್ತಿದೆ. ವಿಲೀನಕ್ಕೆ ಸಾಂಸ್ಕೃತಿಕ ವಲಯದಿಂದ ಏನೇ ವಿರೋಧ ವ್ಯಕ್ತವಾದರೂ ಆ ಪ್ರಕ್ರಿಯೆ ಸದ್ದುಗದ್ದಲವಿಲ್ಲದೆ ಮುಂದುವರಿದೇ ಇದೆ.

ರಾಜ್ಯದಲ್ಲಿ ಹತ್ತು ವರ್ಷಗಳಲ್ಲಿ 10 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಬಾಗಿಲು ಬಂದ್‌ ಆಗಿರುವುದೇ ಇದನ್ನು ದೃಢಪಡಿಸುತ್ತದೆ. ಸರ್ಕಾರಿ ಶಾಲೆಗಳಿಗೆ ಬೀಗ ಬೀಳುವುದೆಂದರೆ ಅಲ್ಲಿನ ಬಹುಜನರ ಭಾಷೆಗೆ ಅಷ್ಟರಮಟ್ಟಿಗೆ ಹಿನ್ನಡೆ ಎಂದೇ ಅರ್ಥ. ಬಹುಪಾಲು ಖಾಸಗಿ ಶಾಲೆಗಳಲ್ಲಿನ ಬೋಧನಾ  ಮಾಧ್ಯಮ ಇಂಗ್ಲಿಷ್‌. ಮಕ್ಕಳನ್ನು ಎಳವೆಯಲ್ಲೇ ಮಾತೃಭಾಷೆಯಿಂದ ದೂರ ಸರಿಸುವ ಈ ಪ್ರವೃತ್ತಿ, ಮಗುವಿನ ಕಲಿಕೆಯ ಮೇಲೆ, ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುವಂತಹುದು.

ಪೋಷಕರು ಇಂಗ್ಲಿಷ್ ಮೋಹಪಾಶಕ್ಕೆ ಸಿಲುಕಿದ್ದಾರೆ. ಇಂಗ್ಲಿಷ್‌ ಮಾಧ್ಯಮ  ಶಾಲೆಗಳಲ್ಲಿ ಓದಿದರೆ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂಬ ಭ್ರಮೆ ಸಮಾಜದಲ್ಲಿ ಆವರಿಸಿದೆ. ಜಾಗತೀಕರಣದ ಅಲೆ ಬೀಸಲಾರಂಭಿಸಿದ ಬಳಿಕ ಈ ಭ್ರಮೆ, ರೆಕ್ಕೆಪುಕ್ಕ ಪಡೆದಿದೆ.

ಉದ್ಯೋಗಾವಕಾಶಗಳ ಸ್ವರೂಪ ಬದಲಾಗಿದ್ದರಿಂದ ಇಂಗ್ಲಿಷ್‌ ಮಾಧ್ಯಮ ಶಿಕ್ಷಣದ ಸೆಳೆತವೂ ಹೆಚ್ಚಾಗತೊಡಗಿತು. ಬಹುಕಾಲ ಶಿಕ್ಷಣದಿಂದ ವಂಚಿತವಾಗಿದ್ದ ಅಂಚಿನ ಸಮುದಾಯದವರ ಮಕ್ಕಳು  ಕೂಡ ಖಾಸಗಿ ಶಾಲೆಗಳತ್ತ ಮುಖ ಮಾಡಿದವು. ಸರ್ಕಾರಿ ಶಾಲೆಗಳು ಆಕರ್ಷಣೆ ಕಳೆದುಕೊಂಡು ಬಸವಳಿದವು.

ಊರಿನಲ್ಲಿ ಮಕ್ಕಳಿದ್ದೂ ಅವರು ಸರ್ಕಾರಿ ಶಾಲೆಗೆ ಬರುತ್ತಿಲ್ಲ ಎನ್ನುವುದಾದರೆ ಅದಕ್ಕೆ ಕಾರಣ ಏನು ಎಂದು ಸರ್ಕಾರ ಪತ್ತೆಹಚ್ಚಬೇಕಿತ್ತು. ನ್ಯೂನತೆ ಇದ್ದರೆ ಅದನ್ನು ಆದ್ಯತೆ ಮೇಲೆ ಸರಿಪಡಿಸಬೇಕಿತ್ತು. ಆದರೆ ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಎಂದೂ ಯೋಚಿಸಲೇ ಇಲ್ಲ. ಸೌಕರ್ಯಗಳ ಕೊರತೆ ಇದೆ. ಆದರೆ ಅದೊಂದೇ ನ್ಯೂನತೆಯಲ್ಲ.

ಕಲಿಕಾ ಪ್ರಕ್ರಿಯೆ ಸಮರ್ಪಕವಾಗಿ ನಡೆಯದ ನ್ಯೂನತೆಯೇ ಪ್ರಮುಖ ತೊಡಕಾಗಿ ಪರಿಣಮಿಸಿದೆ. ಇದಕ್ಕೆ ಶಿಕ್ಷಕರ ಕೊರತೆಯಷ್ಟೇ ಕಾರಣ ಅಲ್ಲ. ಇರುವ ಶಿಕ್ಷಕರೂ ದಕ್ಷತೆಯಿಂದ, ಶ್ರದ್ಧೆಯಿಂದ ಕಾರ್ಯನಿರ್ವಹಿಸದಿರುವ ಸ್ಥಿತಿ ಇದೆ.

ಇದನ್ನೆಲ್ಲ ಸರಿಪಡಿಸುವ ಕಷ್ಟ ತೆಗೆದುಕೊಳ್ಳುವ  ಬದಲು ಮಕ್ಕಳ ಕೊರತೆಯ ನೆಪದಲ್ಲಿ ಶಾಲೆಗಳನ್ನು ಮುಚ್ಚಿ ಕೈತೊಳೆದುಕೊಳ್ಳುವುದೇ ವಾಸಿ ಎಂದು ನಮ್ಮ ಅಧಿಕಾರಿವರ್ಗ ಮತ್ತು ಜನಪ್ರತಿನಿಧಿಗಳು ಭಾವಿಸಿದಂತಿದೆ. ಆದರೆ ಇದರ ದೂರಗಾಮಿ ಪರಿಣಾಮಗಳ ಬಗ್ಗೆ ಅವರ್‍ಯಾರೂ ಯೋಚಿಸುತ್ತಿಲ್ಲ ಎಂಬುದು ದುರದೃಷ್ಟಕರ. ಸನಿಹದಲ್ಲಿ ಶಾಲೆ ಇಲ್ಲ ಎಂದರೆ ತಳವರ್ಗಗಳ ಹೆಣ್ಣುಮಕ್ಕಳಿಗೆ ಶಿಕ್ಷಣ ಎಂಬುದು ಮರೀಚಿಕೆ ಎಂದೇ ಅರ್ಥ. ಈ ಕಹಿವಾಸ್ತವವನ್ನು ಸರ್ಕಾರ ಗ್ರಹಿಸಬೇಕು.

ಎಲ್‌.ಕೆ.ಜಿ, ಯು.ಕೆ.ಜಿ ಮಾದರಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ  ಪೂರ್ವ ಪ್ರಾಥಮಿಕ ತರಗತಿಗಳನ್ನು  ಆರಂಭಿಸಿದರೆ ಮಾತ್ರ ಈ ಶಾಲೆಗಳನ್ನು ಉಳಿಸಿಕೊಳ್ಳಲು ಸಾಧ್ಯ. ಇದಕ್ಕೆ ಪೂರಕವಾಗಿ ತಕ್ಷಣ ನೀತಿ ರೂಪಿಸಬೇಕು ಎಂಬ ಶಿಫಾರಸು  ‘ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ’ಯ ಇನ್ನೂ ಸಲ್ಲಿಕೆಯಾಗದ ವರದಿಯಲ್ಲಿ ಅಡಕವಾಗಿದೆ ಎಂದು ವರದಿಯಾಗಿದೆ.

ಕಲಿಕೆ ಪ್ರಕ್ರಿಯೆ ಶುರುವಾಗುವ ಹಂತದಲ್ಲೇ ಮಕ್ಕಳನ್ನು ಹಿಡಿದಿಡುವ ಈ ಯೋಚನೆ ಒಳ್ಳೆಯದೇ. ಅಲ್ಲದೇ ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆಗಳಂಥ ಯಶಸ್ವಿ ಮಾದರಿಗಳು ನಮ್ಮ ಮುಂದೆ ಇವೆ. ಅಂದರೆ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುವುದಿಲ್ಲ ಎಂದೇನೂ ಇಲ್ಲ. ಚೆನ್ನಾಗಿದ್ದರೆ ಬಂದೇ ಬರುತ್ತಾರೆ.

ಆದಕಾರಣ ಈ ಮಾದರಿಯ ಶಾಲೆಗಳ ಗುಣಾತ್ಮಕ ಅಂಶಗಳನ್ನು ಅಭ್ಯಸಿಸಿ, ಅದರ ಆಧಾರದ ಮೇಲೆ ಸರ್ಕಾರಿ ಶಾಲೆಗಳನ್ನು ಬಲಪಡಿಸುವ, ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಬಗ್ಗೆ ಯೋಚಿಸಬಹುದು. ಇದಕ್ಕೆ ಬೇಕಿರುವುದು ಸಂಕಲ್ಪಶಕ್ತಿ.

ಸರ್ಕಾರಿ ಶಾಲೆಗಳ ದುಃಸ್ಥಿತಿಯ ಹಿಂದಿರುವ ಕಾರಣಗಳ ಬಗ್ಗೆ ಸರ್ಕಾರ ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅನುತ್ಪಾದಕ ಯೋಜನೆಗಳಿಗೆ ಕೋಟಿಗಟ್ಟಲೆ ಸುರಿಯುವ ಬದಲು ಸರ್ಕಾರಿ ಶಾಲೆಗಳನ್ನು ಬಲಪಡಿಸುವುದರತ್ತ ಆಸ್ಥೆ ವಹಿಸುವುದು ಅಗತ್ಯ. ಇದನ್ನು ಸರ್ಕಾರ ಮನಗಾಣುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT