ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 7–6–1967

Last Updated 6 ಜೂನ್ 2017, 19:30 IST
ಅಕ್ಷರ ಗಾತ್ರ

ಈಜಿಪ್ಟ್ ಪ್ರದೇಶದಲ್ಲಿ ಉಗ್ರ ಕದನ: ಇಸ್ರೇಲ್ ಪಡೆಗಳ ಮುನ್ನಡೆ
ಸಿನೈ ಮರುಭೂಮಿಯ ಈಶಾನ್ಯ ದಿಕ್ಕಿನಲ್ಲಿ ಸಂಯುಕ್ತ ಅರಬ್‌ ಗಣರಾಜ್ಯ ಪ್ರದೇಶದಲ್ಲಿ ಭೀಕರ ಕಾಳಗ ನಡೆದಿದೆಯೆಂದು ಅರಬ್ ಗಣರಾಜ್ಯ ಸೇನೆಯ ಸುಪ್ರೀಂ ಕಮಾಂಡ್ ಹೇಳಿದೆ.

ಈಜಿಪ್ಟ್ ಪ್ರದೇಶದೊಳಕ್ಕೆ ಇಸ್ರೇಲಿ ಸೇನೆಗಳು ಮುನ್ನುಗ್ಗಿವೆಯೆಂಬುದನ್ನು ಈ ಹೇಳಿಕೆ ಅಪ್ರತ್ಯಕ್ಷವಾಗಿ ಒಪ್ಪಿಕೊಂಡಿದೆ.

ಇಸ್ರೇಲ್ ಪರವಾಗಿ ಅಮೆರಿಕ ಮತ್ತು ಬ್ರಿಟಿಷ್ ವಿಮಾನಗಳು ಭಾರಿ ಪ್ರಮಾಣದಲ್ಲಿ ‘ಮಧ್ಯೆ ಪ್ರವೇಶಿಸಿರುವುದು’ ಇಸ್ರೇಲಿ ಸೇನೆಯ ಮುನ್ನಡೆಗೆ ಕಾರಣವೆಂದು ಅರಬ್ ಗಣರಾಜ್ಯ ತಿಳಿಸಿದೆ.

ಎಲ್ ಅರೀಷ್, ಅಬುಘೈಲಾ ಮತ್ತು ಕಿಸ್ಸೆಮದಲ್ಲಿರುವ ತಮ್ಮ  ಸ್ಥಾನಗಳ ಮೇಲೆ ಇಸ್ರೇಲ್ ನಡೆಸಿರುವ ದಾಳಿಯನ್ನು ಈಜಿಪ್ಟ್ ಸೇನೆ ಉಗ್ರವಾಗಿ ಪ್ರತಿರೋಧಿಸಿ ಹೋರಾಡುತ್ತಿದೆಯೆಂದು ಈ ಪ್ರಕಟಣೆ ಹೇಳಿದೆ.

‘ಆಧುನಿಕ ಹಿಟ್ಲರ್’
ಟೆಲ್ ಅವೀವ್, ಜೂನ್ 6– ‘ಇಸ್ರೇಲ್ ರಾಷ್ಟ್ರವನ್ನೇ ನಿರ್ನಾಮ ಮಾಡುವ ಪಣವನ್ನು ಅಧ್ಯಕ್ಷ ನಾಸೆರ್ ತೊಟ್ಟಿರುವುದನ್ನು’ ಗಮನಕ್ಕೆ ತಂದುಕೊಳ್ಳಬೇಕೆಂದು ಇಸ್ರೇಲಿನ ಪ್ರಧಾನಿ ಲೆವಿ ಎಸೋಲ್‌ರವರು ಸೋವಿಯತ್ ಪ್ರಧಾನಮಂತ್ರಿ ಕೂಸಿಗಿನ್‌ರವರಿಗೆ ಕಳುಹಿಸಿರುವ ಹೊಸ ಸಂದೇಶವೊಂದರಲ್ಲಿ ತಿಳಿಸಿದ್ದಾರೆ.

ಅಧ್ಯಕ್ಷ ನಾಸೆರ್‌ರವರ ಈ ನಿಲುವು ಹಿಟ್ಲರ್‌ನ ಯಹೂದಿ ಸಮಸ್ಯೆಯ ಅಖೈರು  ತೀರ್ಮಾನಕ್ಕೆ ಹೋಲುವಂತಹುದು ಎಂದೂ ಅವರು ವಿವರಿಸಿದ್ದಾರೆ.

ಯುದ್ಧಕ್ಕೆ ಇಸ್ರೇಲೇ ಕಾರಣ: ಇಂದಿರಾ
ನವದೆಹಲಿ, ಜೂನ್ 6– ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉಲ್ಬಣಗೊಂಡು ಸಮರ ಪ್ರಾರಂಭವಾಗಲು ಇಸ್ರೇಲೇ ಕಾರಣವೆನ್ನುವುದರಲ್ಲಿ ಯಾವ ಸಂದೇಹವೂ ಇಲ್ಲವೆಂದು ಇದುವರೆಗೆ ಬಂದಿರುವ ಸುದ್ದಿಗಳಿಂದ ತಿಳಿದು ಬರುತ್ತದೆಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಇಂದು ಲೋಕಸಭೆಗೆ ತಿಳಿಸಿದರು.
ಆದರೆ ಕಠಿಣ ನುಡಿಗಳನ್ನಾಡಲು ತಮಗೆ ಇಷ್ಟವಿಲ್ಲವೆಂದು ಅವರು ಪಶ್ಚಿಮ ಏಷ್ಯಾ ಪರಿಸ್ಥಿತಿ ಬಗ್ಗೆ ಹೇಳಿಕೆಯೊಂದನ್ನು ನೀಡುತ್ತಾ ಹೇಳಿದರು.

ಅರಬ್–ಇಸ್ರೇಲ್ ಯುದ್ಧ ಮತ್ತಷ್ಟು ವ್ಯಾಪಕಗೊಂಡು ತೃತೀಯ ವಿಶ್ವ ಸಮರವಾಗಬಹುದೆಂದೂ ಶ್ರೀಮತಿ ಗಾಂಧಿ ಹೇಳಿದರು.

 ಸೂಯಜ್‌ನಲ್ಲಿ ಭಾರತಕ್ಕೆ ಗೋಧಿ ಹೊತ್ತ ಅಮೆರಿಕನ್ ನೌಕೆಗೆ ಮಾತ್ರ ಅವಕಾಶ
ಕೈರೋ, ಜೂನ್ 6–
ಸೂಯೆಜ್ ಕಾಲುವೆಯನ್ನು ನೌಕಾ ಸಂಚಾರಕ್ಕೆ ವಾಸ್ತವವಾಗಿ ಮುಚ್ಚಲಾಗಿದ್ದರೂ ಭಾರತಕ್ಕೆ ಗೋಧಿಯನ್ನು ಕೊಂಡೊಯ್ಯುತ್ತಿರುವ 10,000 ಟನ್ ತೂಕದ ಅಮೆರಿಕ ನೌಕೆಗೆ ಭಾಗಶಃ ತೆಗೆದಿಡಲಾಗಿದೆಯೆಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT