ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಕು ಬಿಟ್ಟ ಗೋಡೆ, ಹಾರಿ ಹೋದ ಹೆಂಚು

Last Updated 7 ಜೂನ್ 2017, 6:22 IST
ಅಕ್ಷರ ಗಾತ್ರ

ಹಾಸನ: ಬಿರುಕು ಬಿಟ್ಟ ಗೋಡೆಗಳು, ಸುತ್ತಲೂ ಗಿಡಗಂಟಿಗಳು, ಹಾರಿ ಹೋದ ಹೆಂಚುಗಳು, ಶಿಥಿಲಗೊಂಡಿರುವ ಕೊಠಡಿಗಳು...

ನಗರದ ಹೃದಯ ಭಾಗದಲ್ಲಿರುವ ಉತ್ತರ ಬಡಾವಣೆಯ (ಅರಳೇಪೇಟೆ) ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿಯಿದು. 1918ರಲ್ಲಿ ಆರಂಭಗೊಂಡ ಶಾಲೆ ಮುಂದಿನ ವರ್ಷ ಶತಮಾನೋತ್ಸವ ಆಚರಿಸಿಕೊಳ್ಳಲಿದೆ. ಅನುದಾನದ ಕೊರತೆಯಿಂದ ಶಾಲೆಗೆ ಮೂಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಹಾಗಾಗಿ ಮಕ್ಕಳು ಅವ್ಯವಸ್ಥೆಯ ನಡುವೆ ಪಾಠ ಕೇಳಬೇಕಾದ ಅನಿವಾರ್ಯತೆ ಉಂಟಾಗಿದೆ.

ಇಲ್ಲಿನ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಛಾವಣಿ, ಕಂಬಗಳು ಕುಸಿದು ಬೀಳುವ ಸ್ಥಿತಿ ತಲುಪಿವೆ. ಬಿರುಗಾಳಿಗೆ ಕೊಠಡಿಯ ಹೆಂಚುಗಳು ಹಾರಿಹೋದ ಕಾರಣ ಮಳೆ ಬಂದರೆ ನೀರು ಸೋರುತ್ತದೆ. ಉಳಿದ ಭಾಗವು ಕುಸಿಯುವ ಸಂಭವ ಹೆಚ್ಚಿದೆ. ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಶಾಲೆ ಸುತ್ತಲೂ ಗಿಡ, ಗಂಟಿಗಳು ಎದೆ ಮಟ್ಟಕ್ಕೆ ಬೆಳೆದು ನಿಂತಿವೆ. ಮಳೆಗಾಲದಲ್ಲಿ ಶಾಲಾ ಆವರಣ ಮತ್ತು ಕೊಠಡಿಗಳು ಜಲಾವೃತಗೊಳ್ಳುತ್ತವೆ. ಚಾವಣಿಯ ಕಂಬಗಳು ಬಾಗಿದ್ದು, ಜೋರಾಗಿ ಮಳೆ ಸುರಿದರೆ ನೆಲಕ್ಕೆ ಉರುಳುವ ಸಾಧ್ಯತೆ ಹೆಚ್ಚಿದೆ.

‘ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಮೊದಲು ಮೂಲಸೌಕರ್ಯ ಕಲ್ಪಿಸಬೇಕು. ಕಡಿಮೆ ಮಕ್ಕಳ ಸಂಖ್ಯೆ ಕಾರಣ ನೀಡಿ ಈಗಾಗಲೇ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಹೀಗಿರುವಾಗ ಶಿಕ್ಷಣ ಇಲಾಖೆ ಶಾಲಾ ಕಟ್ಟಡ ನವೀಕರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ ಸಂದೇಶ್‌ ಒತ್ತಾಯಿಸಿದರು.

ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಪಾಠ ಹೇಳಿಕೊಡುತ್ತಿದ್ದು, 7 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 2016–17ನೇ ಸಾಲಿನಲ್ಲಿ 123 ಮಕ್ಕಳು ದಾಖಲಾಗಿದ್ದಾರೆ. ಮೂಲ ಸೌಕರ್ಯ ಕೊರತೆಯಿಂದಾಗಿ ಮಕ್ಕಳ ಸಂಖ್ಯೆಯೂ ಕಡಿಮೆ ಆಗುತ್ತಿದೆ ಎನ್ನಲಾಗಿದೆ.

‘ಶಾಲಾ ಕಟ್ಟಡ ದುರಸ್ತಿಗೊಳಿಸುವಂತೆ ಹಲವು ಬಾರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ  ತರಲಾಗಿದೆ. ಈವರೆಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಎರಡು ವರ್ಷಗಳ ಹಿಂದೆ ರೈಲ್ವೆ ಇಲಾಖೆಯವರು ₹ 2.55 ಲಕ್ಷ ವೆಚ್ಚದಲ್ಲಿ ಶೌಚಗೃಹ ಕಟ್ಟಿಸಿಕೊಟ್ಟಿದ್ದಾರೆ. ಆದರೆ ನೀರಿನ ಸಮಸ್ಯೆಯಿಂದಾಗಿ ಸರಿಯಾಗಿ ಬಳಕೆ ಆಗುತ್ತಿಲ್ಲ’ ಎಂದು ಶಾಲೆಯ ಮುಖ್ಯಶಿಕ್ಷಕಿ ನೀಲಾವತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಮ್‌, ‘ಶಾಲಾ ಅನುದಾನದಲ್ಲಿ ತಕ್ಷಣಕ್ಕೆ  ಒಡೆದಿರುವ ಹೆಂಚುಗಳನ್ನು ಬದಲಿಸಿ ಹೊಸ ಹೆಂಚು ಹಾಕುವುದು ಹಾಗೂ ಸಣ್ಣಪುಟ್ಟ ದುರಸ್ತಿ ಮಾಡಲಾಗುವುದು. ಶಾಸಕರ ಅನುದಾನ ಬಿಡುಗಡೆ ಆದ ಬಳಿಕ ಕಟ್ಟಡ ಕೆಡವಿ ಹೊಸದಾಗಿ ಕಟ್ಟಲಾಗುವುದು. ಈಗ ಭೂ ಸೇನಾ ನಿಗಮದವರು ಅಂದಾಜು ವೆಚ್ಚ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸಿದ್ದಾರೆ’ ಎಂದು ಹೇಳಿದರು.

ಹೆಂಚುಗಳನ್ನು ತೆಗೆದು ಹಾಕಿ ಶೀಟ್‌ ಹಾಕಿಸಲಾಗುವುದು. ಉತ್ತರ ಬಡಾವಣೆ ಶಾಲೆ ಸೇರಿದಂತೆ ನಗರದ ನಾಲ್ಕು ಶಾಲೆಗಳನ್ನು ಶಾಸಕರ ಅನುದಾನದಲ್ಲಿ ನವೀಕರಣ ಮಾಡಲು ನಿರ್ಧರಿಸಲಾಗಿದೆ.  ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಂದ ಬಳಿಕ ಕಾಮಗಾರಿ ಆರಂಭಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT