ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 8–6–1967

Last Updated 7 ಜೂನ್ 2017, 19:30 IST
ಅಕ್ಷರ ಗಾತ್ರ

* ಈಜಿಪ್ಟಿಗೆ ಪೂರ್ಣ ಪರಾಭವ ಎಂದು ಇಸ್ರೇಲ್
ಸಂಯುಕ್ತ ಅರಬ್ ಗಣರಾಜ್ಯ ಪೂರ್ಣವಾಗಿ ಪರಾಭವಗೊಂಡಿದೆ. ಜೋರ್ಡಾನ್ ನದಿಯ ಪಶ್ಚಿಮ ದಂಡೆಯಿಂದ ಹಿಡಿದು ಸೂಯೆಜ್ ಕಾಲುವೆವರೆಗಿರುವ ಬಹ್ವಂಶ ಅರಬ್ ಪ್ರದೇಶದ ಮೇಲೆ ಇಸ್ರೇಲ್ ಹತೋಟಿ ಸ್ಥಾಪಿಸಿದೆ ಎಂದು ಇಸ್ರೇಲಿನ ರಾಜಧಾನಿ ಟೆಲ್ ಅವೀವ್‌ನಲ್ಲಿ ಬುಧವಾರ ರಾತ್ರಿ ಪ್ರಕಟಿಸಲಾಯಿತು.

ಈಜಿಪ್ಷಿಯನ್ನರನ್ನು ಸೋಲಿಸಲಾಗಿದೆ. ಸೂಯೆಜ್ ಕಾಲುವೆಯ ಹಿಂದುಗಡೆಗೆ ಕಾಲ್ತೆಗೆಯುವುದೇ ಈಗ ಅವರ ಹಿನ್ನಡೆಯ ಮುಖ್ಯ ಗುರಿಯಾಗಿದೆ. ಅದನ್ನು ನಾವು ವಿಚಾರಿಸಿಕೊಳ್ಳುತ್ತೇವೆ. ಇಡೀ ಪ್ರದೇಶ ನಮ್ಮ ಕೈಯಲ್ಲಿದೆ’ ಎಂದು ಇಸ್ರೇಲಿ ಸೇನೆಯ ದಂಡನಾಯಕ ಮೇಜರ್ ಜನರಲ್ ರಾಬಿನ್‌ರವರು ಪ್ರಕಟಿಸಿದರು.

* ಗುರುವಾರ ರಾತ್ರಿ ಕದನಸ್ತಂಭನಕ್ಕೆ ಭದ್ರತಾ ಸಮಿತಿ ಸರ್ವಾನುಮತ ಕರೆ
ವಿಶ್ವ ರಾಷ್ಟ್ರ ಸಂಸ್ಥೆ, ಜೂನ್ 7–
ಗುರುವಾರ ರಾತ್ರಿ 1.30 ಗಂಟೆಗೆ ಅರಬ್ ರಾಷ್ಟ್ರಗಳು ಮತ್ತು ಇಸ್ರೇಲ್ ಕದನ ವಿರಾಮ ಜಾರಿಗೆ ತರಬೇಕೆಂಬ ರಷ್ಯದ ನಿರ್ಣಯವನ್ನು ಇಂದು ಇಲ್ಲಿ ಸಮಾವೇಶಗೊಂಡಿದ್ದ ಭದ್ರತಾ ಸಮಿತಿ ಸಭೆ ಸರ್ವಾನುಮತದಿಂದ ಅಂಗೀಕರಿಸಿತು.

ರಷ್ಯ ಸಲಹೆಗೆ ಅಮೆರಿಕ ಬೆಂಬಲ ನೀಡಿತು. ಮಂಗಳವಾರ ಭದ್ರತಾ ಸಮಿತಿ ನೀಡಿದ ಕದನ ವಿರಾಮ ಕರೆಗೆ ಸಂಬಂಧಪಟ್ಟ ರಾಷ್ಟ್ರಗಳು ಇದುವರೆಗೆ ಓಗೊಟ್ಟಿಲ್ಲ.

* ರಾಷ್ಟ್ರಪತಿ ಆಯ್ಕೆ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ 13 ಜನ ಎಂಪಿಗಳ ಅರ್ಜಿ
ನವದೆಹಲಿ, ಜೂನ್ 7–
ಭಾರತದ ರಾಷ್ಟ್ರಪತಿಗಳಾಗಿ ಡಾ. ಜಾಕೀರ್ ಹುಸೇನ್ ಆಯ್ಕೆಯಾದುದರ ಕ್ರಮಬದ್ಧತೆಯನ್ನು ಪ್ರಶ್ನಿಸಿ ಹದಿಮೂರು ಮಂದಿ ಪಾರ್ಲಿಮೆಂಟ್ ಸದಸ್ಯರು   ಇಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು.

ಇವರಲ್ಲದೆ ಶ್ರೀ ಬಾಪೂರಾವ್ ಪಟೇಲ್, ದಿಗ್ವಿಜಯ್‌ನಾಥ್, ಹರದಯಾಳ್ ದೇವ್‌ ಗುಣ್, ಕೆ.ಕೆ. ನಯಾರ್, ಶ್ರೀಮತಿ ಶಕುಂತಲಾ ನಯಾರ್, ಮತ್ತಿತರರು ಒಂದು ಅರ್ಜಿ ಸಲ್ಲಿಸಿ ನ್ಯಾಯಾಲಯದಲ್ಲಿ ಇದು ಇತ್ಯರ್ಥವಾಗುವವರೆಗೆ ಡಾ. ಜಾಕೀರ್ ಹುಸೇನ್ ಅವರು ರಾಷ್ಟ್ರಪತಿಗಳಾಗಿ ಕೆಲಸ ಮಾಡುವುದನ್ನು ತಡೆಯಬೇಕೆಂದು ಕೋರಿದ್ದಾರೆ.

* ಇಸ್ರೇಲಿಗೆ ಭಾರತದ ಶ್ರೀ ಸಾಮಾನ್ಯನ ಬೆಂಬಲ
ಮುಂಬೈ, ಜೂನ್ 7–
‘ನಮ್ಮ ಬೆಂಬಲ ಇಸ್ರೇಲ್‌’ಗೆ ಎಂಬ ಅನೇಕ ಭಾರತೀಯರ ಪತ್ರಗಳು ಇಲ್ಲಿನ ಇಸ್ರೇಲ್ ಕಾನ್ಸುಲೇಟ್ ಕಚೇರಿಗೆ ತಾನೇ ತಾನಾಗಿ ಹರಿದು ಬರುತ್ತಿವೆ.

ಹೆಚ್ಚಿನ ಪತ್ರಗಳೆಲ್ಲಾ ಜನ ಸಾಮಾನ್ಯರದೆಂದು ಕಚೇರಿಯ ಅಧಿಕಾರಿ  ಇಂದು ಯು.ಎನ್.ಐ.ಗೆ ಹೇಳಿದರು. ಇಸ್ರೇಲ್ ಪರ ಹೋರಾಟಕ್ಕೆ ಕೆಲವು ಭಾರತೀಯರು ತಾವಾಗಿ ಮುಂದೆ ಬಂದಿರುವುದಾಗಿ ತಿಳಿಸಿದರು.

* ರಷ್ಯಾ ಮೌನದ ಬಗ್ಗೆ ಈಜಿಪ್ಟ್ ಆಶ್ಚರ್ಯ: ವಿವರಣೆಗೆ ಕರೆ
ಮಾಸ್ಕೊ, ಜೂನ್ 7–
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಘರ್ಷಣೆಯಲ್ಲಿ ಅಮೆರಿಕ ಮತ್ತು ಬ್ರಿಟನ್‌ಗಳು ಇಸ್ರೇಲ್ ಪರವಾಗಿ ಭಾಗವಹಿಸಿವೆ ಎಂಬ ಈಜಿಪ್ಟ್ ಆಪಾದನೆಯನ್ನು  ರಷ್ಯ ಒಪ್ಪಿಕೊಂಡರೆ ಇಲ್ಲವೆ ಸಮರ್ಥಿಸಿದರೆ ಆಗ ಅದು ಅರಬ್ ರಾಷ್ಟ್ರಗಳಿಗೆ ಸಹಾಯ ಮಾಡಲೇ ಬೇಕಾಗುವುದು.
ಬ್ರಿಟನ್ ಮತ್ತು ಅಮೆರಿಕಗಳನ್ನು ಆಪಾದಿಸುವ ಈಜಿಪ್ಟ್‌ನ ಘೋಷಣೆ ಪ್ರಕಟವಾದ 24 ಗಂಟೆಗಳ ನಂತರವೂ  ರಷ್ಯದ ಪತ್ರಿಕೆಗಳಲ್ಲಾಗಲಿ, ರೇಡಿಯೋದಲ್ಲಾಗಲಿ ಈ ಬಗ್ಗೆ ಯಾವೊಂದು ಪ್ರಸ್ತಾಪವೂ ಕಂಡು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT