ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಸಿಒಎಸ್‌ ಋತುಬಂಧದ ಸಮಯದಲ್ಲಿ ದೂರವಾಗಬಹುದೇ?

Last Updated 9 ಜೂನ್ 2017, 19:30 IST
ಅಕ್ಷರ ಗಾತ್ರ

ಹಿಂದಿನ ಸಂಚಿಕೆಯಿಂದ...

ಇದಕ್ಕೆ ಉತ್ತರ ಹೌದು ಹಾಗೂ ಇಲ್ಲ. ಪಿಸಿಒಎಸ್‌, ದೇಹದ ಹಲವು ಕಾರ್ಯವೈಖರಿ ಮೇಲೆ ಪರಿಣಾಮವನ್ನು ಬೀರುತ್ತದೆ. ಪಿಸಿಒಎಸ್‌ ಇರುವ ಸಾಕಷ್ಟು ಮಹಿಳೆಯರಿಗೆ ಋತುಬಂಧದ ಸಮಯ ಹತ್ತಿರವಾಗುತ್ತಿದ್ದಂತೆ ಋತುಚಕ್ರವು ಸಹಜಸ್ಥಿತಿಗೆ ಬಂದ ಅನುಭವವಾಗಿದೆ. ಆದರೆ ವಯಸ್ಸಿನೊಂದಿಗೆ ಹಾರ್ಮೋನಿನ ಅಸಮತೋಲನವೇನೂ ಬದಲಾವಣೆ ಕಾಣುವುದಿಲ್ಲ ಎಂಬುದೂ ನಿಜ. ಆದ್ದರಿಂದ ಈ ಲಕ್ಷಣಗಳು ಮುಂದುವರೆಯುತ್ತವೆ. ಇದರೊಂದಿಗೆ ಪಿಸಿಒಎಸ್‌ ಸಂಬಂಧಿತ ಸಮಸ್ಯೆಗಳಾದ ಮಧುಮೇಹ, ಪಾರ್ಶ್ವವಾಯು, ಹೃದಯಾಘಾತದ ಸಾಧ್ಯತೆ ವಯಸ್ಸಿನೊಂದಿಗೆ ಹೆಚ್ಚುತ್ತದೆ.

ಪಿಸಿಒಎಸ್‌ ತಡೆ ಸಾಧ್ಯವೇ ಇಲ್ಲವೇ?
ಮನೆಯಲ್ಲೇ ಕೆಲವು ವಿಧಾನಗಳನ್ನು ಅನುಸರಿಸಬಹುದು.

ಈ ಸಮಸ್ಯೆಯಿಂದ ಉಂಟಾಗಬಹುದಾದ ಸಮಸ್ಯೆಗಳ ಲಕ್ಷಣಗಳನ್ನು ತೂಕವನ್ನು ಕಡಿಮೆ ಮಾಡಿಕೊಳ್ಳುವುದು–ಆರೋಗ್ಯಕರ ಆಹಾರಸೇವನೆ ಹಾಗೂ ದೈಹಿಕ ಚಟುವಟಿಕೆಗಳು ತಗ್ಗಿಸಬಹುದು. ತೂಕವನ್ನು ಕಡಿಮೆಮಾಡಿಕೊಳ್ಳುವುದರಿಂದ ರಕ್ತದಲ್ಲಿನ ಗ್ಲೂಕೋಸ್‌ ಮಟ್ಟವನ್ನು ತಗ್ಗಿಸಬಹುದು. ದೇಹವು ಇನ್ಸುಲಿನ್‌ ಬಳಸಿಕೊಳ್ಳುವುದನ್ನು ಸಹಜಸ್ಥಿತಿಗೆ ತಂದು ಹಾರ್ಮೋನು ಸಮತೋಲನದಲ್ಲಿರುವಂತೆ  ನೋಡಿಕೊಳ್ಳಬಹುದು. ಕೇವಲ ಶೇ.10ರಷ್ಟು ತೂಕ ಕಳೆದುಕೊಂಡರೂ ಸಾಕು, ಋತುಚಕ್ರ ಸಹಜಸ್ಥಿತಿಗೆ ಬಂದು ಗರ್ಭಧಾರಣೆಯನ್ನು ಸಾಧ್ಯವಾಗಿಸಬಹುದು.

ಕೂದಲು: ಅತಿ ಹೆಚ್ಚು ಕೂದಲು ಕಾಣುವುದನ್ನು ತಪ್ಪಿಸಲು ಫೇಷಿಯಲ್ ಹೇರ್‌ ರಿಮೂವರ್‌ ಕ್ರೀಂ, ಲೇಸರ್ ಚಿಕಿತ್ಸೆ ಅಥವಾ ಎಲೆಕ್ಟ್ರೋಲಿಸಿಸ್‌ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಚರ್ಮಕ್ಕೆ ಸಂಬಂಧಿಸಿದ ಕೆಲವು ಚಿಕಿತ್ಸೆಗಳು ಕೂದಲಿನ ಬೆಳವಣಿಗೆಯನ್ನು ತಡೆಯಬಲ್ಲವು. ಇದು ಬೇಡದೆ ಇರುವ ಜಾಗದಲ್ಲಿ ಹೊಸ ಕೂದಲು ಬೆಳೆಯುವುದನ್ನು ತಪ್ಪಿಸುತ್ತದೆ.

ಯಾವ ರೀತಿ ಔಷಧ ಲಭ್ಯ?: ಹಾರ್ಮೋನಲ್ ಬರ್ತ್‌ ಕಂಟ್ರೋಲ್‌ಗಳಾದ ಕೆಲವು ಮಾತ್ರೆಗಳು, ಪ್ಯಾಚ್‌ಗಳು, ರಿಂಗ್‌ ಹಾಗೂ ಅಂತರಗರ್ಭಾಶಯದ ಸಾಧನಗಳು ಪಿಸಿಒಎಸ್‌ ಇರುವ, ಗರ್ಭಧಾರಣೆ ಒಲ್ಲದ ಮಹಿಳೆಯರಿಗೆ ಅನುಕೂಲಕ್ಕೆ ಬರುತ್ತವೆ.

ಇದರಿಂದ ಸರಿಯಾದ ಸಮಯಕ್ಕೆ ಮುಟ್ಟಾಗುವುದು, ಎಂಡೋಮೆಟ್ರಿಯಲ್ ಸಾಧ್ಯತೆಯನ್ನು ತಡೆಯುವುದು ಸಾಧ್ಯ. ಮೊಡವೆ ಹಾಗೂ ಅಧಿಕ ಕೂದಲಿನ ಬೆಳವಣಿಗೆಯನ್ನೂ ತಗ್ಗಿಸಬಹುದು.

ಆ್ಯಂಟಿ ಆ್ಯಂಡ್ರೋಜೆನ್‌ ಔಷಧಗಳು: ಈ ಔಷಧಗಳು ಆ್ಯಂಡ್ರೋಜೆನ್‌ ಪರಿಣಾಮಗಳನ್ನು ತಡೆದು ತಲೆ ಬೊಕ್ಕಾಗುವುದನ್ನು ತಪ್ಪಿಸುತ್ತದೆ. ಆದರೆ ಇದು ಗರ್ಭಧಾರಣೆಯ ಸಮಯದಲ್ಲಿ ಸಲ್ಲದು.

ಮೆಟ್‌ಫಾರ್ಮಿನ್: ಪಿಸಿಒಎಸ್‌ ಸಮಯದಲ್ಲಿನ ಟೈಪ್‌ 2 ಡಯಾಬಿಟಿಸ್‌ಗೆ ಚಿಕಿತ್ಸೆಯಾಗಿ ಇದನ್ನು ಬಳಸಲಾಗುತ್ತದೆ. ಇದು ಇನ್ಸುಲಿನ್ ಸಾಮರ್ಥ್ಯವನ್ನು ಹೆಚ್ಚಿಸಿ, ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸುತ್ತದೆ. ಇದರಿಂದ ಇನ್ಸುಲಿನ್ ಹಾಗೂ ಆ್ಯಂಡ್ರೋಜೆನ್‌  ಮಟ್ಟ ನಿಯಂತ್ರಿಸಬಹುದು. ಇದರ ಬಳಕೆಯ ಕೆಲವು ತಿಂಗಳ ನಂತರ ಅಂಡೋತ್ಪತ್ತಿಯಾಗಲು ಸಹಕರಿಸಬಹುದು. ಇತ್ತೀಚಿನ ಸಂಶೋಧನೆಯೊಂದು ಈ ಮೆಟ್‌ಫಾರ್ಮಿನ್ ಇನ್ನಿತರ ಧನಾತ್ಮಕ ಪರಿಣಾಮ ಹೊಂದಿರುವುದಾಗಿಯೂ ತಿಳಿಸಿದೆ. 

ಪಿಸಿಒಎಸ್‌ ಇದ್ದಾಗ ಗರ್ಭ ಧರಿಸಬೇಕೆಂದರೆ ಇರುವ ಆಯ್ಕೆಗಳೇನು?
ಹಲವು ಆಯ್ಕೆಗಳಿವೆ. ಅತಿ ಹೆಚ್ಚು ತೂಕವಿದ್ದರೆ, ತೂಕ ಕಳೆದುಕೊಳ್ಳುವ ಮೂಲಕ, ಆದರೆ ಅಗತ್ಯ ಕ್ಯಾಲೊರಿಯನ್ನು ಸೇವಿಸುವ ಮೂಲಕ ಮಾಸಿಕ ಋತುಚಕ್ರವನ್ನು ತಹಬದಿಗೆ ತಂದು, ಗರ್ಭಧಾರಣೆಯನ್ನು ಸಾಧ್ಯವಾಗಿಸಬಹುದು. 

ಗರ್ಭಧಾರಣೆ ಸಮಸ್ಯೆಯ ಇನ್ನಿತರ ಕಾರಣಗಳನ್ನೂ ಪರಿಶೀಲಿಸಿದ ನಂತರ   ಕೆಲವು ಔಷಧಗಳನ್ನು ಶಿಫಾರಸ್ಸು ಮಾಡಬಹುದು.

* ಯಾವುದೇ ಔಷಧಗಳು ಪ್ರಯೋಜನಕಾರಿಯಾಗಿಲ್ಲವೆಂದರೆ ಕೃತಕ ಗರ್ಭಧಾರಣೆ(ಇನ್‌ವಿಟ್ರೊ ಫರ್ಟಿಲೈಸೇಷನ್)  ಉತ್ತಮ ಆಯ್ಕೆಯಾಗಬಹುದು.  ಈ ಚಿಕಿತ್ಸೆಯಲ್ಲಿ, ಲ್ಯಾಬೊರೇಟರಿಯಲ್ಲಿ ಅಂಡವನ್ನು ವೀರ್ಯದೊಂದಿಗೆ ಸೇರಿಸಿ ಫಲವತ್ತುಗೊಳಿಸಲಾಗುತ್ತದೆ. ನಂತರ ಗರ್ಭಾಶಯದಲ್ಲಿ ಅದನ್ನು ಅಳವಡಿಸಲಾಗುತ್ತದೆ.

* ಯಾವುದೇ ಆಯ್ಕೆ ಪ್ರಯೋಜನವಾಗಲಿಲ್ಲ ಎಂದರೆ ‘ಒವೇರಿಯನ್ ಡ್ರಿಲ್ಲಿಂಗ್’ ಶಸ್ತ್ರಚಿಕಿತ್ಸೆಯನ್ನು ಆರಿಸಿಕೊಳ್ಳಬಹುದು. ಇದುಅಂಡೋತ್ಪತ್ತಿಯನ್ನು ಪುನರಾರಂಭಗೊಳಿಸುತ್ತದೆ. 

ಪಿಸಿಒಎಸ್‌, ಹೇಗೆ ಗರ್ಭಧಾರಣೆಗೆ ತೊಂದರೆ ಮಾಡುತ್ತದೆ?
ಗರ್ಭಧಾರಣೆಯ ಸಮಯದಲ್ಲಿ ಪಿಸಿಒಎಸ್‌ ಇದ್ದರೆ, ತಾಯಿ ಹಾಗೂ ಮಗುವಿಗೂ ತೊಂದರೆಯಾಗಬಹುದು. ಗರ್ಭಪಾತ, ಗರ್ಭಾಶಯದ ಮಧುಮೇಹ, ಗರ್ಭಧಾರಣೆ ಸಮಯದಲ್ಲಿ ರಕ್ತದ ಏರೊತ್ತಡದಿಂದ ಆಗುವ ಸಮಸ್ಯೆ ಪ್ರೀಕ್ಲಾಂಪ್ಸಿಯ, ಸಿಸೇರಿಯನ್ ಆಗಬಹುದು. ಮಗುವಿನ  ಅತಿಯಾದ ತೂಕ (ಮ್ಯಾಕ್ರೊಸೋಮಿಯಾ) ಆಗಬಹುದು.

ತಡೆ ಹೇಗೆ
* ಗರ್ಭಧಾರಣೆಗೆ ಮುನ್ನ ಆರೋಗ್ಯಕರ ಆಹಾರಪದ್ಧತಿಯಿಂದ ಆರೋಗ್ಯಕರವಾಗಿ ತೂಕವನ್ನು ಹೆಚ್ಚಿಸಿಕೊಳ್ಳುವುದು.
* ಆರೋಗ್ಯಕರ ಆಹಾರಪದ್ಧತಿಯಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಸಮತೋಲನದಲ್ಲಿರುವಂತೆ ಕಾಯ್ದುಕೊಳ್ಳುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT