ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಭದ್ರತೆಯಲ್ಲಿ ಬಿರುಕುಗಳು

Last Updated 9 ಜೂನ್ 2017, 19:30 IST
ಅಕ್ಷರ ಗಾತ್ರ

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ರೋಗಪೀಡಿತರಾಗುತ್ತಿದ್ದಾರೆ. ರಕ್ತ ಹೀನತೆ, ಮಧುಮೇಹ ಮತ್ತು ಬೊಜ್ಜು ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ರಾಜ್ಯದ ಸಚಿವರೊಬ್ಬರು ಹೇಳಿರುವುದು ವರದಿಯಾಗಿದೆ. ಕೆಲವು ವೈದ್ಯಕೀಯ ವರದಿಯ ಆಧಾರದ ಮೇಲೆ ಹೇಳಿದ್ದೇನೆ ಎಂದು ಸಹ ತಿಳಿಸಿದ್ದದಾರೆ. ಆಹಾರ ಭದ್ರತಾ ಕಾಯ್ದೆಯ ಪ್ರಕಾರ ಬಡತನ ರೇಖೆಯ ಕೆಳಗಿರುವ ಪ್ರತಿ ನಾಗರಿಕನಿಗೆ ತಿಂಗಳಿಗೆ ಐದು ಕೆ.ಜಿ. ಏಕದಳಧಾನ್ಯವನ್ನು ಕೊಡುವ ವ್ಯವಸ್ಥೆಯನ್ನು ಜನರ ಹಕ್ಕಿನ ರೂಪವಾಗಿ ಕಾನೂನಿನಲ್ಲಿ ಅಳವಡಿಸಲಾಗಿದೆ.

ಏಕದಳ ಧಾನ್ಯಗಳಲ್ಲಿ ಅಕ್ಕಿ, ಗೋಧಿ ಅಥವಾ ಸಿರಿಧಾನ್ಯಗಳನ್ನು ತಲಾ ಕೆ.ಜಿ.ಗೆ ಮೂರು ರೂಪಾಯಿ, ಎರಡು ಹಾಗೂ ಒಂದು ರೂಪಾಯಿ ದರದಲ್ಲಿ ಕೊಡುವ ಯೋಜನೆ ಇದು. ಕರ್ನಾಟಕದಲ್ಲಿ ಏಳು ಕೆ.ಜಿ. ಅಕ್ಕಿಯನ್ನು ಈ ಯೋಜನೆಯ ಪ್ರಕಾರ ಅರ್ಹರಿಗೆ ಉಚಿತವಾಗಿ ಕೊಡಲಾಗುತ್ತಿದೆ. ಅತಿ ಕಡಿಮೆ ಪ್ರಮಾಣದಲ್ಲಿ ಇಲ್ಲಿ ಗೋಧಿ, ರಾಗಿ ಮತ್ತು ಜೋಳವನ್ನೂ ವಿತರಿಸಿರುವ ಉದಾಹರಣೆಗಳಿವೆ. ಆದರೆ ಅಕ್ಕಿಯೇ ಕರ್ನಾಟಕದ ಬಡವರ ಮಟ್ಟಿಗೆ ಪ್ರಮುಖ ಧಾನ್ಯವಾಗಿ ವಿತರಿಸಲಾಗುತ್ತಿದೆ. ಈ ಅಕ್ಕಿ ಬಿಳಿ ಅಕ್ಕಿ; ಅದರಲ್ಲಿನ ಹೊರ ಪದರದಲ್ಲಿರುವ ಎಲ್ಲ ಪೌಷ್ಟಿಕಾಂಶಗಳನ್ನೂ ಬೇರ್ಪಡಿಸಿ ಕೊಡಲಾಗುತ್ತಿದೆ. ಅಕ್ಕಿತೌಡು ನಿಜವಾದ ಪೌಷ್ಟಿಕಾಂಶ ಕಣಜ.  ಶೇ.18ರಷ್ಟು ಪ್ರೊಟೀನ್,  ಶೇ.15ರಷ್ಟು  ಎಣ್ಣೆ ಮತ್ತು ಶೇ.19ರಷ್ಟು ಉತ್ತಮ ಗುಣಮಟ್ಟದ ನಾರಿನಾಂಶ, ಜೊತೆಗೆ ವಿಟಮಿನ್ ಬಿ1 ಮತ್ತು ಇತರ ಲಘು ಪೌಷ್ಟಿಕಾಂಶಗಳನ್ನು ಅದು ಒಳಗೊಂಡಿರುತ್ತದೆ. ಇಂತಹ ಪೌಷ್ಟಿಕಾಂಶಕವಚವನ್ನು ಹೊರತೆಗೆದು ಕೋಳಿ, ಎಮ್ಮೆ, ಹಸು ಮತ್ತು ಹಂದಿಗಳಿಗೆ ಕೊಟ್ಟು ನಾವು ಸತ್ವರಹಿತ ಬಿಳಿ ಅಕ್ಕಿಯನ್ನು ತಿನ್ನುತ್ತಿದ್ದೇವೆ. ಇದು ಕೇವಲ ಸರ್ಕಾರದ ‘ಅನ್ನಭಾಗ್ಯ ಯೋಜನೆ’ಗೆ ಮಾತ್ರ ಸೀಮಿತವಾಗಿಲ್ಲ. ದಕ್ಷಿಣ ಭಾರತದವರು ಹೆಚ್ಚಾಗಿ ಬಿಳಿ ಅಕ್ಕಿಗೆ ಜೋತುಬಿದ್ದಿರುವುದು ಗೊತ್ತಿರುವ ಸಂಗತಿಯೇ. ಇದಕ್ಕೇ ಸಾಮಾನ್ಯವಾಗಿ ನಮ್ಮ ಊಟವನ್ನು ಕೇವಲ ‘ಬಿಳಿ ಅನ್ನದ ಗುಡ್ಡ ಮತ್ತು ಸಾರಿನ ಹೊಳೆ’ ಎಂದು ಮೂದಲಿಸುವುದುಂಟು. ನಮ್ಮ ಆಹಾರದಲ್ಲಿ ಎದ್ದುಕಾಣುವ ಕುಂದುಕೊರತೆಯಲ್ಲಿ ಪ್ರೊಟೀನ್ ಮತ್ತು ಕೊಬ್ಬಿನ ಅಂಶ ಕಡಿಮೆ ಪ್ರಮಾಣದಲ್ಲಿರುತ್ತದೆ.

ಯೂರೋಪಿಯನ್ನರು ದಿನಕ್ಕೆ ಸುಮಾರು100 ಗ್ರಾಂ ಪ್ರೊಟೀನ್ ಪಡೆದರೆ, ನಮ್ಮ ಸರಾಸರಿ ಪ್ರಮಾಣ ಕೇವಲ 50 ಗ್ರಾಂ. ಹಾಗೆಯೇ ಶೇ.60ರಷ್ಟು ಜನಸಂಖ್ಯೆಯಲ್ಲಿ ಕೊಬ್ಬಿನ ಕೊರತೆಯಿದೆ. ಇದರಿಂದಾಗಿ ನಮ್ಮ ದೈಹಿಕ ಎತ್ತರದ ಪ್ರಮಾಣದಲ್ಲಿ ಕುಂಟಿತವಾಗಿದೆ. We are branded as country of cretins for this reason. ಜನಸಾಮಾನ್ಯರಲ್ಲಿ ಕೊರತೆ ಇರುವ ಪ್ರೊಟೀನ್‌ಯುಕ್ತ ಬೇಳೆಕಾಳುಗಳು ಮತ್ತು ಅಡುಗೆ–ಎಣ್ಣೆಯನ್ನು ಕಡಿಮೆ ಬೆಲೆಯಲ್ಲಿ ಒದಗಿಸುವುದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಆವಶ್ಯಕವಾಗಿರುತ್ತದೆ. ಹಾಗೆಯೇ ಈಗ ವಿತರಿಸುತ್ತಿರುವ ಸತ್ವರಹಿತ ಬಿಳಿ ಅಕ್ಕಿಯ ಬದಲು ಪಾಲಿಶ್ ಮಾಡದ ಅಕ್ಕಿಯನ್ನು ವಿತರಿಸಿದಲ್ಲಿ ಸತ್ವಭರಿತ ಆಹಾರವನ್ನು ಒದಗಿಸಿದಂತಾಗುತ್ತದೆ. ಇಲ್ಲವಾದಲ್ಲಿ ಆಹಾರಭದ್ರತೆ ಎನ್ನುವುದು ಕೇವಲ ಹೊಟ್ಟೆ ತುಂಬಿಸುವ ಕೆಲಸವಾಗುತ್ತದೆಯಷ್ಟೆ. ಆಹಾರಭದ್ರತೆಯೇ ಪೌಷ್ಟಿಕಾಂಶ ಭದ್ರತೆಗೂ ಕಾರಣವಾಗುವುದಿಲ್ಲ. ಹಾಗಾಗಿ ಆರೋಗ್ಯಕ್ಕೆ ಇದು ಭದ್ರ ಬುನಾದಿಯಾಗಿರದು.

ಹೀಗೆಂದ ಮಾತ್ರಕ್ಕೆ, ಏಕದಳಧಾನ್ಯದ ವಿತರಣೆಯೇ ಸರಿ ಇಲ್ಲ ಎನ್ನುವುದಲ್ಲ; ಅಥವಾ ಅಕ್ಕಿ ಬಿಟ್ಟು ದ್ವಿದಳಧಾನ್ಯಕ್ಕೆ ಒತ್ತು ಕೊಡುವುದೂ ಸಮಂಜಸವಲ್ಲ. ಸರ್ಕಾರ ಈಗ ವಿತರಿಸುತ್ತಿರುವ ತಲಾವಾರು ಏಳು ಕೆ.ಜಿ. ಅಕ್ಕಿಯು ಫಲಾನುಭವಿಗಳ ತಿಂಗಳ ಆವಶ್ಯಕತೆಯ ಸುಮಾರು ಶೇ.60ರಷ್ಟು ಮಾತ್ರ ನೀಗಿಸುತ್ತದೆ. ಇದನ್ನು ಸತ್ವಭರಿತವಾಗಿ ಮುಂದುವರಿಸಿಕೊಂಡೇ ಪ್ರೊಟೀನ್ ಮತ್ತು ಅಡುಗೆ–ಎಣ್ಣೆಯನ್ನು ಕಡಿಮೆ ಬೆಲೆಯಲ್ಲಿ ವಿತರಿಸಿದಲ್ಲಿ ಮಕ್ಕಳೂ ಸೇರಿದಂತೆ, ಜನಸಾಮಾನ್ಯರ ಆರೋಗ್ಯ ಮತ್ತು ದೈಹಿಕ ಬೆಳವಣಿಗೆಯಲ್ಲಿ ಗುಣಾತ್ಮಕವಾಗಿ ಬದಲಾವಣೆಯಾಗುತ್ತದೆ. ಬಿಳಿ ಅಕ್ಕಿಯನ್ನು ಹೆಚ್ಚು ಬಳಸುವ ದಕ್ಷಿಣ ಭಾರತದ ನಕ್ಷೆಯಲ್ಲಿ ಬೊಜ್ಜು ಮತ್ತು ಮಧುಮೇಹ ಅಧಿಕವಾಗಿ ಗೋಚರವಾಗುತ್ತಿದೆ. ಆಂಧ್ರ್ರಪ್ರದೇಶದ ನೆಲ್ಲೂರು, ವಿಜಯವಾಡದ ಸುತ್ತಮುತ್ತ   ಬೊಜ್ಜುರೋಗದ ಪ್ರಮಾಣ ಹೆಚ್ಚಿರುವುದನ್ನು ‘ನ್ಯಾಷನಲ್ ಫ್ಯಾಮಿಲಿ ಹೆಲ್ತ್‌ ಸರ್ವೆ 4’ ಗುರುತಿಸಿದೆ. ಕರ್ನಾಟಕದಲ್ಲೂ ರಾಗಿ ಮತ್ತು ಜೋಳ ಬಳಸುವ  ಪ್ರದೇಶಗಳಿಗಿಂತಲೂ, ಅಕ್ಕಿ ಬಳಸುವ ಪ್ರದೇಶಗಳಲ್ಲಿ ಮಧುಮೇಹ ಮತ್ತು ಬೊಜ್ಜು ಹೆಚ್ಚಾಗಿರುವುದು ಕಂಡುಬಂದಿದೆ. ಅಕ್ಕಿಯಲ್ಲಿರುವ ಸತ್ವವನ್ನು ತೌಡಾಗಿ ಬೇರ್ಪಡಿಸುತ್ತಿರುವುದು ಒಂದು ಕಾರಣವಾದರೆ, ಭತ್ತದ ತಳಿಗಳ ವೈವಿಧ್ಯವನ್ನು ಕಳೆದುಕೊಂಡಿರುವುದು ಇನ್ನೊಂದು ಪ್ರಮುಖ ಕಾರಣವಾಗಿದೆ. ಜೊತೆಗೆ ನಾವು ಪಡೆಯುವ ಹೆಚ್ಚು ಕ್ಯಾಲರಿಯನ್ನು ಕೇವಲ ಏಕದಳ ಧಾನ್ಯಗಳಿಂದಲೇ ಪಡೆಯುವುದರಿಂದ ಆರೋಗ್ಯಸಮಸ್ಯೆಗಳೂ ಉಂಟಾಗುತ್ತವೆ. ಹಿಂದಿನ ಹಳೆ ಮೈಸೂರು ಭಾಗದಲ್ಲಿ ಹುರುಳಿ ಇಲ್ಲದೆ ರಾಗಿ ಇರುತ್ತಿರಲಿಲ್ಲ. ಬಡತನ ರೇಖೆಯ ಕೆಳಗಿರುವವರು ಶೇ.80ರಷ್ಟು ಕ್ಯಾಲರಿಯನ್ನು ಕೇವಲ ಏಕದಳಧಾನ್ಯದಿಂದಲೇ ಪಡೆಯುವಂಥ ಸಂದರ್ಭವಿದೆ. ಉತ್ತಮ ಆರೋಗ್ಯಕ್ಕಾಗಿ ಇಂದಿನ ಹೆಚ್ಚಿನ ಆಹಾರತಜ್ಞರ ಪ್ರಕಾರ, ಏಕದಳಧಾನ್ಯದಿಂದ ಪಡೆಯುವ ಕ್ಯಾಲರಿಯ ಪ್ರಮಾಣವನ್ನು  ಶೇ.50ಕ್ಕೆ ಸೀಮಿತಗೊಳಿಸಿ ಉಳಿದುದನ್ನು ತಲಾ ಶೇ.25ರಷ್ಟು ಪ್ರೊಟೀನ್ ಮತ್ತು ಕೊಬ್ಬಿನಿಂದ ಪಡೆದಲ್ಲಿ ಮಧುಮೇಹ ನಿಯಂತ್ರಣ ಮತ್ತು ಬೊಜ್ಜುರೋಗದ ತಡೆಗಟ್ಟುವಿಕೆಯಲ್ಲಿ ಸಹಾಯವಾಗುವುದು. ಇಲ್ಲಿಯೂ ಸಹ ಒಟ್ಟು ಕ್ಯಾಲರಿ ತಮ್ಮ ಜೀವನಶೈಲಿಗೆ ಅನುಗುಣವಾಗಿ ಇರತಕ್ಕದ್ದು.

ನಮ್ಮಲ್ಲಿ ಆಹಾರ ಉತ್ಪಾದನೆ ಮತ್ತು ವಿತರಣೆಗಳು ಅಕ್ಕಿ ಮತ್ತು ಗೋಧಿಯನ್ನೇ ಆಶ್ರಯಿಸಿರುವುದು ನಮ್ಮ ನಿಜವಾದ ಆಹಾರಭದ್ರತೆ ಮತ್ತು ಆರೋಗ್ಯಕ್ಕೆ ಸಮಸ್ಯೆಯಾಗಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ನಮ್ಮ ಅನಾರೋಗ್ಯ ಮತ್ತು ಆಸ್ಪತ್ರೆಯ ಖರ್ಚು ಇನ್ನೂ ಅಗಾಧ ಪ್ರಮಾಣದಲ್ಲಿ ನಮ್ಮನ್ನು ಕಾಡಬಹುದು.

**

ನಮ್ಮಲ್ಲಿ ಆಹಾರ ಉತ್ಪಾದನೆ ಮತ್ತು ವಿತರಣೆಗಳು ಅಕ್ಕಿ ಮತ್ತು ಗೋಧಿಯನ್ನೇ ಆಶ್ರಯಿಸಿರುವುದು ನಮ್ಮ ನಿಜವಾದ ಆಹಾರಭದ್ರತೆ ಮತ್ತು ಆರೋಗ್ಯಕ್ಕೆ ಸಮಸ್ಯೆಯಾಗಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ನಮ್ಮ ಅನಾರೋಗ್ಯ ಮತ್ತು ಆಸ್ಪತ್ರೆಯ ಖರ್ಚು ಇನ್ನೂ ಅಗಾಧ ಪ್ರಮಾಣದಲ್ಲಿ ನಮ್ಮನ್ನು ಕಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT