ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಶೋಭಾಯಾತ್ರೆ, ಯುವ ಸಮಾವೇಶ

Last Updated 10 ಜೂನ್ 2017, 10:02 IST
ಅಕ್ಷರ ಗಾತ್ರ

ಹಾಸನ: ಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೂ.11 ರಂದು ಬೃಹತ್ ಶೋಭಾಯಾತ್ರೆ ಹಾಗೂ ಯುವ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಹರಿಹರಪುರ ಶ್ರೀಧರ್ ತಿಳಿಸಿದರು.

ಯುವಕರಲ್ಲಿ ಆತ್ಮಾಭಿಮಾನ, ಯೋಗದ ಅರಿವು, ರಾಷ್ಟ್ರಭಕ್ತಿಯ ಜಾಗೃತಿ, ಸ್ವಾಭೀಮಾನ ಬದುಕಿನ ಅರಿವು ಹಾಗೂ ಸ್ವದೇಶಿ ಚಿಂತನೆ ಮೊದಲಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು  ಅಂದು ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಸಂಜೆ 5 ಗಂಟೆಗೆ ಬೃಹತ್ ಯುವ ಸಮಾವೇಶ ಏರ್ಪಡಿಸಲಾಗಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಮಾವೇಶಕ್ಕೂ ಮೊದಲು ಮಧ್ಯಾಹ್ನ 2 ಗಂಟೆಗೆ ನಗರದ ಹಾಸನಾಂಬ ಕಲಾಕ್ಷೇತ್ರದಿಂದ ಬೃಹತ್ ಶೋಭಾ ಯಾತ್ರೆ ನಡೆಸಲಾಗುತ್ತದೆ. ಸಮಾವೇಶದಲ್ಲಿ ಪತಂಜಲಿ ಯೋಗಪೀಠದ ರಾಜ್ಯ ಪ್ರಮುಖರಾದ ಭವರ್ಲಾಲ್ ಆರ್ಯ ಮತ್ತು ಯುವ ಭಾರತ್ ಸಂಸ್ಥೆ ರಾಜ್ಯ ಪ್ರಭಾರಿ  ಪ್ರದೀಪ್,  ಚಕ್ರವರ್ತಿ ಸೂಲಿಬೆಲೆ ಭಾಷಣ ಮಾಡುವರು.

ಮಾರ್ಗದರ್ಶಕ ಮಂಡಳಿ ಸಿ.ಎಸ್. ಕೃಷ್ಣಸ್ವಾಮಿ, ಸಚಿವ ಎ. ಮಂಜು, ಶಾಸಕ ಎಚ್.ಎಸ್. ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ವಿ. ಚೈತ್ರ,  ಅಶೋಕ್ ಹಾರನಹಳ್ಳಿ ಭಾಗವಹಿಸುವರು. ಸಮಾವೇಶದ ಅಂಗವಾಗಿ ನಗರದ  ಬಡಾವಣೆಗಳಲ್ಲಿ ಯೋಗ ರಥ ಯಾತ್ರೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ದೇಶಕ್ಕೆ ಯುವಕರು ಬಹುದೊಡ್ಡ ಆಸ್ತಿ, ಆದರೆ, ಯುವಕರಿಗೆ ಸರಿಯಾದ ದಿಕ್ಕು ತೋರಿಸದೆ ಅವರ ಸಾಮರ್ಥ್ಯ ಅಪವ್ಯಯವಾಗುತ್ತಿದೆ. ಸಂಪೂರ್ಣ ಯೋಗಮಯವಾಗಿರುವ ಜಿಲ್ಲೆಗಳಲ್ಲಿ  ಪತಂಜಲಿ ಯೋಗ ಪೀಠ ಸ್ಥಾಪನೆ ಮಾಡಲಾಗುತ್ತದೆ. ಯೋಗ ಶಕ್ತಿಯ ಸದುಪಯೋಗ ಪಡೆದುಕೊಳ್ಳಬೇಕು.

ಪತಂಜಲಿ ಹೆಸರಿನಲ್ಲಿ ಸ್ವದೇಶಿ ವಸ್ತುಗಳನ್ನು ತಯಾರಿಸಿ ಅದರಲ್ಲಿ ಬಂದ ಲಾಭದ ಹಣದಲ್ಲಿ ಶಿಕ್ಷಣ ಸೇರಿದಂತೆ ಅನೇಕ ಜನೋಪಯೋಗಿ ಕೆಲಸಕ್ಕೆ ಉಪಯೋಗಿಸಲಾಗುತ್ತಿದೆ. ಇದರಿಂದ 5 ಸಾವಿರ ಯೋಗ ಪ್ರಚಾರಕರ ಹುದ್ದೆ  ಸ್ಥಾಪಿಸಲಾಗುತ್ತಿದೆ.

ಮುಂದಿನ ಎರಡು ತಿಂಗಳ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರಿಗೆ  50 ಸಾವಿರ ಉದ್ಯೋಗ ನೀಡುವ ಉದ್ದೇಶ ಹೊಂದಿದೆ. ಮುಂದಿನ ವರ್ಷದಲ್ಲಿ ಆಚಾರ್ಯಗಳ ಹುದ್ದೆಗೆ ನಿರುದ್ಯೋಗಿಗಳನ್ನು ನೇಮಿಸಲಾಗುವುದು.

ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಶೋಭಾಯಾತ್ರೆಗೆ 4 ಸಾವಿರ ಜನರು ಪಾಲ್ಗೊಳ್ಳುವರು ಎಂದು ಹೇಳಿದರು. ಯುವ ಭಾರತ್ ಜಿಲ್ಲಾ ಪ್ರಭಾರಿ ಸುರೇಶ್ ಪ್ರಜಾಪತಿ, ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರಿ ಶೇಷಪ್ಪ, ಹಿರಿಯ ಸದಸ್ಯ ರಂಗನಾಥ್, ನಗರ ಸಹ ಪ್ರಭಾರಿ ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT