ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ದೇವೋ ಭವ

Last Updated 10 ಜೂನ್ 2017, 19:30 IST
ಅಕ್ಷರ ಗಾತ್ರ

ಹಿಂದಿ ಮೂಲ: ಪ್ರೊ. ಅಬ್ದುಲ್ ಬಿಸ್ಮಿಲ್ಲಾಹ್
ಕನ್ನಡ ಅನುವಾದ: ಡಾ. ಮಾಧವಿ ಎಸ್. ಭಂಡಾರಿ

ನೆತ್ತಿ ಸುಡುವಂತಹ ಬಿಸಿಲು. ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಬೀಸುತ್ತಿರುವ ಬಿಸಿ ಗಾಳಿ. ಹಲವಾರು ಕಡೆಗಳಲ್ಲಿ ಹೆಣ ಬಿದ್ದ ಸುದ್ದಿ. ಸುತ್ತಲಿನ ರಸ್ತೆಗಳಂತೂ ಉರಿವ ಒಲೆಯ ಮೇಲಿಟ್ಟ ಕಾವಲಿಯಂತೆ ಕಾದು ಕೆಂಪಾಗಿದ್ದವು. ಸಿರಿವಂತರು ತಮ್ಮ ಮನೆ ಬಾಗಿಲುಗಳಿಗೆ ಲಾವಂಚದ ತಡಿಕೆಗಳನ್ನು ಇಳಿಬಿಟ್ಟಿದ್ದರು. ಮತ್ತವರ ಆಳುಗಳು ಆರದಂತೆ ಅವುಗಳಿಗೆ ನೀರುಣಿಸುತ್ತಿದ್ದರು.

ಅಂಗಡಿ ಮುಂಗಟ್ಟುಗಳಲ್ಲಂತೂ ಸಂಜೆಯವರೆಗೂ ಇಳಿಬಿಟ್ಟ ಪರದೆಗಳು. ಹಳಿಗಳ ಪಕ್ಕ ಠಿಕಾಣಿ ಹೂಡುವ ನಾಪಿತರು, ಕಡ್ಲೆಪುರಿ ಮಾರುವವರು, ಲಾಟರಿ ಟಿಕೆಟುಗಳಿಂದ ಪರರ ಅದೃಷ್ಟ ಬದಲಾಯಿಸುವವರು ಫ್ಲೈಓವರ್ ಕೆಳಗಡೆ ಸೇರಿಕೊಂಡು ಕತ್ತಲಾಗುವುದನ್ನೇ ಕಾಯುತ್ತಿದ್ದರು. ರಿಕ್ಷಾ ಸವಾರರ ಅವಸ್ಥೆ ಹೇಳತೀರದು, ಶರೀರದ ಯಾವುದಾದರೊಂದು ಭಾಗ ಹೊರಬಿದ್ದರೆ ಅದು ಕರಕಲಾಗಿಬಿಡುವುದೇನೋ ಎಂಬ ಭಯದಲ್ಲಿ ಸಾಧ್ಯವಾದಷ್ಟು ಮುದುಡಿ ಮುದ್ದೆಯಾಗುತ್ತಿದ್ದರು.

ಒತ್ತರಿಸಿ ಬರುವ ಬೆವರೊರೆಸಿಕೊಳ್ಳುತ್ತ ಹೆಚ್ಚಿನವರ ಕರವಸ್ತ್ರ ಬಣ್ಣಗೆಟ್ಟಿದ್ದವು. ದೊಡ್ಡ ದೊಡ್ಡ ಬೈರಾಸ ಅಥವಾ ಟವಲುಗಳಿಂದ ಹಳ್ಳಿಗರು ಮುಖ ಸುತ್ತಿಕೊಂಡ ಪರಿಯನ್ನು ದೂರದಿಂದ ನೋಡಿದರೆ ಅವರೆಲ್ಲ ಕೊಳ್ಳೆಹೊಡೆಯಲು ಬಂದ ಸುಲಿಗೆಕೋರರಂತೆ ತೋರುತ್ತಿದ್ದರು. ದಾರಿಹೋಕರಂತೂ ಒಂದೋ ತಲೆಯಮೇಲೆ ಕೊಡೆಯನ್ನು ಬಿಡಿಸಿಕೊಂಡಿದ್ದರು ಅಥವಾ ಕೈಯಲ್ಲಿರಬೇಕಾದ ಬ್ಯಾಗನ್ನು ತಲೆಗೇರಿಸಿಕೊಂಡಿದ್ದರು. ಕೆಲವರಂತೂ ತಮ್ಮ ಕರವಸ್ತ್ರವನ್ನೇ ನೀಟಾಗಿ ತಲೆಗೆ ಕಟ್ಟಿಕೊಂಡಿದ್ದರು. ತಳ್ಳುಗಾಡಿಯಮೇಲೆ ಮಾರಾಟವಾಗುತ್ತಿದ್ದ ಕುಡಿಯುವ ನೀರಿನ ಬೆಲೆಯಂತೂ ಇದ್ದಕ್ಕಿದ್ದಂತೆ ದುಪ್ಪಟ್ಟಾಗಿಬಿಟ್ಟಿತ್ತು!

ಹೀಗೆ ಬಿಸಿಲಿನ ಝಳ ಸಾಮಾಜಿಕ ವ್ಯವಸ್ಥೆಯನ್ನಷ್ಟೇ ಅಲ್ಲ, ಆರ್ಥಿಕ ವ್ಯವಸ್ಥೆಯನ್ನೂ ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಜನರು ಸ್ವತಂತ್ರ ದೇಶದ ಪ್ರಜೆಗಳಾಗಿದ್ದರೂ ಗುಲಾಮಗಿರಿಯಲ್ಲೇ ದಿನದೂಡುತ್ತಿರುವವರಂತೆ ಕಾಣಿಸುತ್ತಿದ್ದರು. ಕಾರಣವಿಷ್ಟೆ, ಆ ಬಿಸಿಲನ್ನು ಎದುರಿಸಿ ಗೆಲ್ಲುವ ತಾಕತ್ತು ಅವರಲ್ಲಿರಲಿಲ್ಲ. ಹಾಗಾಗಿ ಆ ಬಿಸಿಲು ಮತ್ತು ಬಿಸಿಗಾಳಿಗಳಿಂದ ತಪ್ಪಿಸಿಕೊಳ್ಳಲು ಅವರು ತಮ್ಮ ಜೇಬುಗಳಲ್ಲಿ ಚಿಕ್ಕ–ಚಿಕ್ಕ ನೀರುಳ್ಳಿಗಳನ್ನು ಇಟ್ಟುಕೊಂಡು ಕೃತಾರ್ಥರಾಗುತ್ತಿದ್ದರು.

ಒಂದು ಚಿಕ್ಕ ನೀರುಳ್ಳಿ ಸಲ್ಮಾನ್ ಸಾಹೇಬರ ಕಿಸೆಯಲ್ಲೂ ಇತ್ತು. ಇದನ್ನವರ ಪತ್ನಿ ಗುಟ್ಟಾಗಿ ಅಲ್ಲಿಟ್ಟಿದ್ದಳು. ಅವರಿಗೆ ಅದರ ಅರಿವಿತ್ತು, ಆದರೂ ತಮಗೇನೂ ಗೊತ್ತೇ ಇಲ್ಲ ಎಂಬಂತೆ ಇದ್ದರು. ಕಾರಣವಿಷ್ಟೆ, ಬಿಸಿಗಾಳಿಗೂ ನೀರುಳ್ಳಿಗೂ ಎತ್ತಣಿಂದೆತ್ತಣ ಸಂಬಂಧ ಎಂಬ ಬಲವಾದ ನಂಬಿಕೆ ಅವರ ಮನದಾಳದಲ್ಲಿತ್ತು.

ಸಲ್ಮಾನ್ ಸಾಹೇಬರು ತಮ್ಮ ಸೂಟ್‌ಕೇಸ್ ಎತ್ತಿಕೊಂಡು ಚೊಂಯ್‌ಗುಡುವ ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದರು. ಉಳಿದ ದಾರಿಹೋಕರಂತೆ ತಾನೂ ಜೇಬಿನಲ್ಲಿದ್ದ ಕರವಸ್ತ್ರವನ್ನು ತಲೆಗೆ ಕಟ್ಟಿಕೊಳ್ಳಬೇಕು, ಬೈರಾಸ್ ತೆಗೆದು ಮುಖಕ್ಕೆ ಸುತ್ತಿಕೊಳ್ಳಬೇಕು ಎಂದು ಅವರಿಗೂ ಅನ್ನಿಸುತ್ತಿತ್ತು. ಆದರೆ ಇದರಿಂದುಂಟಾಗಬಲ್ಲ ಅನನುಕೂಲವನ್ನು ನೆನೆದು ಆ ಗೊಡವೆಗೆ ಹೋಗಲಿಲ್ಲ. ಇವೆಲ್ಲಕ್ಕಿಂತ ಮುಖ್ಯವಾಗಿ ಮಿಶ್ರೀಲಾಲನ ಮನೆ ತಲುಪುವ ಆತುರ ಅವರಲ್ಲಿತ್ತು. ರಿಕ್ಷಾ ಸಿಕ್ಕಿರಲಿಲ್ಲ. ಸ್ಟೇಶನ್‌ನಿಂದ ಅವನ ಮನೆ ಅಷ್ಟೇನೂ ದೂರದಲ್ಲಿಲ್ಲ ಎಂದು ತಮ್ಮ ಮನಸ್ಸಿಗೆ ತಾವೇ ಸಮಾಧಾನ ಹೇಳಿಕೊಂಡರು. ಅದೂ ಅಲ್ಲದೆ ತುಂಬಾ ಹತ್ತಿರದಲ್ಲಿದೆ ಎಂದು ಹೇಳಿದ್ದೂ ಮಿಶ್ರೀಲಾಲನೇ.

ಸಲ್ಮಾನ್ ಸಾಹೇಬರು ಮಿಶ್ರೀಲಾಲ ಗುಪ್ತಾನನ್ನು ಭೇಟಿಯಾಗಲು ಮೊದಲಬಾರಿಗೆ ಅವನೂರಿಗೆ ಹೊರಟಿದ್ದರು. ಅವನ ಮನೆ ನಂಬರ್ ಅವರ ನಾಲಿಗೆ ತುದಿಯಲ್ಲಿತ್ತು. ಆದರೆ ಪರಿಸ್ಥಿತಿಯ ಆಳ–ಅಗಲದ ಅರಿವು ಅವರಿಗಿರಲಿಲ್ಲ. ಆದರೇನಂತೆ, ಮಿಶ್ರೀಲಾಲ ಗುಪ್ತಾನನ್ನು ಹುಡುಕಿಯೇ ತೀರುತ್ತೇನೆಂಬ ಅಚಲ ವಿಶ್ವಾಸ ಅವರಿಗಿತ್ತು.

ತನ್ನ ಕ್ರಾಂತಿಕಾರಿ ವಿಚಾರಗಳಿಂದಾಗಿ ಸುತ್ತೆಲ್ಲ ಖ್ಯಾತಿಪಡೆದಿದ್ದ ಮಿಶ್ರೀಲಾಲ ಗುಪ್ತಾ ಸಲ್ಮಾನ್ ಸಾಹೇಬರ ನೆರಮನೆಯವನು. ಮಾಂಸ ತಿನ್ನಲು ಕಲಿತಿದ್ದ ಹಾಗೂ ಮುಸಲ್ಮಾನರ ಹೊಟೆಲನಲ್ಲಿ ಚಹಾ ಸೇವಿಸುತ್ತಿದ್ದ ಗುಪ್ತಾ ವಂಶದ ಮೊದಲ ಯುವಕ... ಹೌದಪ್ಪಾ ಹೌದು... ನೋಡಿ, ಬನಾರಸ್ ಯುನಿವರ್ಸಿಟಿ ಅಂದ್ರೆ ಹೇಗೆ ಹಿಂದುವೋ ಹಾಗೆಯೇ ಅಲೀಗಢ ಯುನಿವರ್ಸಿಟಿ ಅಂದ್ರೆ ಮುಸಲ್ಮಾನ್. ಅದೇ ರೀತಿ ಅವರವರ ಬಡಾವಣೆಗಳಲ್ಲಿರುವ ಹೊಟೆಲ್ಲುಗಳು ಕೂಡ ಹಿಂದು ಮತ್ತು ಮುಸಲ್ಮಾನ ಆಗಿದ್ದವು. ಹಾಗಂತ ಹಿಂದೂ ಹೊಟೆಲುಗಳಿಗೆ ಮುಸಲ್ಮಾನರು ಹೋಗುವುದಕ್ಕಾಗಲಿ ಅಥವಾ ಮುಸಲ್ಮಾನರ ಹೊಟೆಲುಗಳಿಗೆ ಹಿಂದುಗಳು ಬರುವುದಕ್ಕಾಗಲಿ ನಿಷೇಧವೇನೂ ಇರಲಿಲ್ಲ.

ಆದರೂ ಧರ್ಮಾಚರಣೆಗಳ ನಂಬಿಕೆಯಿರುವವರಿಗೆ ಇದು ಸರಿಯಾಗುತ್ತಿರಲಿಲ್ಲ. ಸಲ್ಮಾನ್ ಸಾಹೇಬರ ಪಕ್ಕದ ಮನೆಯ ಜ಼ಕೀರ್ ಸಾಹೇಬರು ಯಾವತ್ತೂ ಮುಸಲ್ಮಾನರ ಸ್ವೀಟ್ ಸ್ಟಾಲ್‌ನಿಂದಲೇ ಮಿಠಾಯಿ ಖರೀದಿಸ್ತಾ ಇದ್ದರು, ಯಾಕೆಂದರೆ ಸ್ವೀಟ್‌ಮಾರ್ಟ್‌ನ ಶಿವಶರಣ ಲಘುಶಂಕೆಗೆ ಹೋದ ನಂತರ ಮಣ್ಣಿನ ಹೆಂಟೆಯಿಂದ ಇಂದ್ರಿಯ ಶುದ್ಧಿ ಮಾಡಿಕೊಳ್ತಾ ಇರಲಿಲ್ಲವಂತೆ.

ಅಂದಿನ ದಿನಗಳಲ್ಲಿ ಆ ಬಡಾವಣೆಯಲ್ಲಿ ಒಂದೇ ಶಾಲೆಯಿತ್ತು. ಎಲ್ಲರೂ ಕಡ್ಡಾಯವಾಗಿ ಸಂಸ್ಕೃತ ಕಲಿಯಲೇಬೇಕಾಗಿತ್ತು. ಹಾಗಾಗಿ ಸಲ್ಮಾನ್ ಸಾಹೇಬರೂ ‘ರಾಮಃ, ರಾಮೌ, ರಾಮಾಃ’ ಕಲಿಯಬೇಕಾಗಿ ಬಂತು. ಇದರಿಂದಾಗಿ ಅವರ ಪಾಲಿಗೆ ಉರ್ದು ಕಲಿಯುವ ಪ್ರಸಂಗ ಬರಲೇ ಇಲ್ಲ! ಅದೇ ರೀತಿ ಮಿಶ್ರೀಲಾಲನ ಅಜ್ಜ ಗಿರಿಧಾರಿಲಾಲ ಗುಪ್ತಾರಿಗೆ ತಮ್ಮ ಕಾಲಕ್ಕೆ ಕೇವಲ ಉರ್ದುವನ್ನಷ್ಟೇ ಕಲಿಯಬೇಕಾಗಿ ಬಂದಿತ್ತು, ಸಂಸ್ಕೃತ ಕಲಿಯುವ ಸಂದರ್ಭವೇ ಬಂದಿರಲಿಲ್ಲ.

ಮೊದಲಾಗಿ ಅವರು ವರ್ಣದಲ್ಲಿ ವೈಶ್ಯರು, ಮೇಲಾಗಿ ಮದರಸಾದಲ್ಲಿ ಸಂಸ್ಕೃತ ಕಲಿಸುವ ವ್ಯವಸ್ಥೆ ಇದ್ದಿರಲಿಲ್ಲ. ಈ ರೀತಿಯ ಅನಿವಾರ್ಯತೆ ಸಲ್ಮಾನ್ ಸಾಹೇಬರನ್ನು ಸಂಸ್ಕೃತ ಕಲಿಯುವಂತೆ ಮಾಡಿತ್ತು. ಮುಂದೆ ಅವರು ಉಚ್ಚ ಶಿಕ್ಷಣ ಪಡೆಯುವುದಕ್ಕಾಗಿ ಊರು ಬಿಟ್ಟು ಪಟ್ಟಣ ಸೇರಿದರಾದರೂ ಅಲ್ಲೂ ಅವರು ಕಲಿತದ್ದು ಸಂಸ್ಕೃತವೇ. ಎಂ.ಎ. ಮುಗಿಸಿದ ಮೇಲೆ ಎಲ್ಲಿಯಾದರೂ ಸಂಸ್ಕೃತ ಲೆಕ್ಚರರ್ ಆಗಬಹುದು ಎಂಬ ದೃಢವಾದ ನಂಬಿಕೆ ಅವರಲ್ಲಿತ್ತು. ಆದರೆ ಹಾಗಾಗಲಿಲ್ಲ. ಈಗವರು ತಮ್ಮ ಮನೆಯ ಹತ್ತಿರದಲ್ಲೇ ಹೊಸದಾಗಿ ಆರಂಭಗೊಂಡ ಇಸ್ಲಾಮಿಯಾ ಮಿಡ್ಲ್ ಸ್ಕೂಲಲ್ಲಿ ಹಿಸ್ಟ್ರಿ ಕಲಿಸೋದಕ್ಕೆ ಸೇರಿಕೊಂಡಿದ್ದರು.

ಮಿಶ್ರೀಲಾಲ ಇಂಟರ್ ಓದುತ್ತಿದ್ದಾಗ ಸಲ್ಮಾನ್ ಸಾಹೇಬರು ಮುಂಜಾನೆ ಮತ್ತು ಸಂಜೆ ಅವನಿಗೆ ಸಂಸ್ಕೃತ ಹೇಳಿಕೊಟ್ಟಿದ್ದರು. ಹಾಗಾಗಿ ಇವರ ಬಗ್ಗೆ ಅವನಿಗೆ ಅಪಾರವಾದ ಗುರು ಗೌರವ. ಅವರ ಚರಣಸ್ಪರ್ಶ ಮಾಡುತ್ತಿದ್ದ. ಈಗವನು ಬಿ.ಎ. ಮುಗಿಸಿ ಯಾವುದೋ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದ. ಸಲ್ಮಾನ್ ಸಾಹೇಬರು ಊರಿಗೆ ಬಂದಾಗ ತನ್ನ ಮನೆಗೆ ಬರಲೇಬೇಕೆಂಬುದು ಅವನ ಪ್ರಬಲ ಇಚ್ಛೆಯಾಗಿತ್ತು. ಮಿಶ್ರೀಲಾಲನ ಈ ಆಸೆಯನ್ನು ನೆರವೇರಿಸುವುದಕ್ಕಾಗಿ ಸಾಹೇಬರು ಅವನಿಗೆ ಪೂರ್ವ ಸೂಚನೆ ನೀಡದೆ ಅವನೂರಿಗೆ ಬಂದಿದ್ದರು. ಒಮ್ಮೆಲೆ ಅವನ ಮನೆಯ ಬಾಗಿಲು ಬಡಿದೋ ಅಥವಾ ಕರೆಗಂಟೆ ಬಾರಿಸಿಯೋ ಅವನನ್ನು ದಂಗುಬಡಿಸಬೇಕೆಂದಿದ್ದರು.

ಸಲ್ಮಾನ್ ಸಾಹೇಬರು ಆ ವಠಾರದ ಹೆಸರನ್ನು ನೆನಪಿಸಿಕೊಂಡರು – ಗೋಪಾಲಗಂಜ್. ಹಾಂ, ಹೌದು ಇದೇ ಹೆಸರು. ಮನೆ ನಂಬರ್  ಬಿ–562. ಸ್ಟೇಶನ್‌ನಿಂದ ಹೆಚ್ಚೂಕಡಿಮೆ ಅರ್ಧ ಮೈಲು ದೂರದಲ್ಲಿರುವ ರಾಧಾರಮಣ ಮಿಶ್ರರ ಮನೆ.

‘ಏನಣ್ಣಾ, ಗೋಪಾಲಗಂಜ್ ಯಾವ ಕಡೆಗೆ ಬರ್ತದೆ?’ ಅವರೊಂದು ಅಂಗಡಿಯಲ್ಲಿ ಕೇಳಿದರು. ಬಾಯ್ತುಂಬ ಎಲೆಯಡಿಕೆ ಹಾಕಿಕೊಂಡಿದ್ದವ ಅದನ್ನು ಉಗುಳುವ ತೊಂದರೆ ತೆಗೆದುಕೊಳ್ಳದೆ ಗೊಳಗೊಳ ಮಾಡುತ್ತ ಹೇಳಿದ, ‘ಅಯ್ಯಯ್ಯೊ, ನೀವು ಸ್ವಲ್ಪ ಮುಂದಕ್ಕೆ ಬಂದುಬಿಟ್ರಿ. ಚೂರು ಹಿಂದಕ್ಕೆ ಹೋಗಿ, ಆ ಕರೆಂಟ್ ಕಂಬ ಕಾಣಿಸ್ತಿದೆಯಲ್ವಾ, ಅದಕ್ಕೆ ತಾಗಿದ್ದ ರಸ್ತೆಯಲ್ಲಿ ನೇರ ಹೋಗಿಬಿಡಿ’.

ಸಲ್ಮಾನ್ ಸಾಹೇಬರು ಅವನ ಅಂಗಡಿಯ ಮಾಡಿನಿಂದ ಹೊರಗೆ ಕಾಲಿಟ್ಟಿದ್ದೇ ತಡ, ಬಿಸಿಗಾಳಿಯ ಹೊಡೆತವೊಂದು ಅವರ ಕೆನ್ನೆಗೆ ಬಡಿದಂತಾಯ್ತು. ಕೂಡಲೇ ಅಂಗೈಯಿಂದ ಕೆನ್ನೆಯನ್ನು ಗಟ್ಟಿಯಾಗಿ ಒತ್ತಿಕೊಂಡರು. ಅದೇ ಹೊತ್ತಿಗೆ ತಮ್ಮ ಕಿಸೆಯಲ್ಲಿದ್ದ ನೀರುಳ್ಳಿ ನೆನಪಿಗೆ ಬಂದು ಅರೆ ಕ್ಷಣ ಅಬ್ಬಾ! ಅನಿಸಿತು. ಅರೆ, ಇದೇ ವಠಾರ. ಕರೆಂಟ್ ಕಂಬವನ್ನೊಮ್ಮೆ ದಿಟ್ಟಿಸಿ ನೋಡಿ ಅಲ್ಲೇ ತಿರುಗಿದರು.

ಬಲಗಡೆ ‘ಎ’ ಬ್ಲಾಕ್ ಇತ್ತು. ಹಾಗಿದ್ದರೆ ಎಡಗಡೆಯದು ‘ಬಿ’ ಬ್ಲಾಕ್ ಇರಬೇಕು. ಆದರೆ ಅಲ್ಲಿ ಇದ್ದುದು ‘ಎಚ್‌’ ಬ್ಲಾಕ್. ಸಾಹೇಬರು ತುಸು ಮುಂದಕ್ಕೆ ಹೋದರು. ಬಹುಶಃ ‘ಎ’ಯ ಪಕ್ಕದಲ್ಲೇ ಸ್ವಲ್ಪ ಮುಂದಕ್ಕೆ ಹೋದರೆ ‘ಬಿ’ ಬರಬಹುದು. ಆದರೆ ‘ಎ’ ಮುಗಿದ ಬಳಿಕ ಆರಂಭವಾದದ್ದು ‘ಎಮ್’. ಅದರ ಎಡಗಡೆ ‘ಸಿ’ ಇತ್ತು. ಏನಪ್ಪಾ ಇದು? ತಲೆ ತಿರುಗಿದಂತಾಯಿತು.

‘ಎಲ್ಲಿಗೆ ಹೋಗಬೇಕು?’. ಅಲ್ಲೊಬ್ಬ ಗೃಹಸ್ಥ ಹುರಿಹಗ್ಗ ಬಿಗಿದಿದ್ದ ಮಂಚವನ್ನು ಎತ್ತಿ–ಎತ್ತಿ ಲಘುವಾಗಿ ನೆಲಕ್ಕೆ ಅಪ್ಪಳಿಸುತ್ತ ನೆಲಕ್ಕೆ ಬಿದ್ದ ತಿಗಣೆಗಳನ್ನು ಉಂಗುಷ್ಠದಿಂದ ಅರೆದರೆದು ಸಾಯಿಸುತ್ತಿದ್ದ. ಅವನಿಗೆ ಇವರ ದುಗುಡ ಅರ್ಥವಾಗಿರಬೇಕು. ಸಲ್ಮಾನ್ ಸಾಹೇಬರೂ ತಮ್ಮ ಬೂಟಿನಿಂದ ತಿಗಣೆಯ ಚಿಕ್ಕ ಮರಿಯೊಂದನ್ನು ಸಿಕ್ಕಲ್ಲೇ ಹೊಸಕಿದರು. ‘ಬಿ–562 ಎಲ್ಲಿ ಬರ್ತದೆ?’

‘ಓಹ್! ಮಿಸಿರಜೀಯವರ ಮನೆಯಾ? ಅದು ಹಳೆಯ ಗೋಪಾಲಗಂಜ್‌ನಲ್ಲಿದೆ. ನೀವು ಇಲ್ಲಿಂದಲೇ ಹೋಗಿಬಿಡಿ. ಮುಂದಕ್ಕೆ ಹೋಗಿ ಆ ದೇವಸ್ಥಾನದ ಹತ್ತಿರ ಬಲಗಡೆ ಹೊರಳಿಬಿಡಿ. ಅಲ್ಲಿಗೆ ಹೋದಮೇಲೆ ಯಾರನ್ನು ಬೇಕಾದರೂ ಕೇಳಬಹುದು’. ಧನ್ಯವಾದ ಹೇಳಿ ಸಾಹೇಬರು ಅಲ್ಲಿಂದ ಹೊರಟರು. ದೇವಸ್ಥಾನದ ಹತ್ತಿರ ಹೋಗಿ ಬಲಗಡೆ ತಿರುಗಿದರೆ ಒಂದು ಮನೆಯ ಹಿಂಭಾಗದಲ್ಲಿ ಐದಾರು ಎಮ್ಮೆ ಕಾಣಿಸಿದವು.

ಹುಡುಗಿಯೊಬ್ಬಳು ವರಾಂಡಾದಲ್ಲಿ ನಿಂತು ಮುಂದಕ್ಕೆ ಸಾಗುತ್ತಿದ್ದ ಬಳೆಗಾರನನ್ನು ಕರೆಯುತ್ತಿದ್ದಳು. ‘ಹಳೆ ಗೋಪಾಲಗಂಜ್ ಇದೇನಾ?’ – ಸಾಹೇಬರು ಆ ಹುಡುಗಿಯಿಂದ ಮಾಹಿತಿ ಪಡೆಯುವ ಪ್ರಯತ್ನ ಮಾಡಿದರಾದರೂ ಅವಳ ದೃಷ್ಟಿ ಇವರ ಕಡೆಗೆ ಹರಿದರೆ ತಾನೆ? ಆಕೆಯ ಸಂಪೂರ್ಣ ನೋಟ ಆ ಬಳೆಗಾರನ ತಳ್ಳುಗಾಡಿಯ ಮೇಲೆ ನೆಟ್ಟಿತ್ತು. ಸಲ್ಮಾನ್ ಸಾಹೇಬರು ಮುಂದಕ್ಕೆ ನಡೆದರು.

ತುಸು ಮುಂದಕ್ಕೆ ಹೋಗುತ್ತಿದ್ದಂತೆ ಹಳೆಯ ಮಾದರಿಯ ಎತ್ತರೆತ್ತರದ ಮನೆಗಳು ಕಂಡುಬಂದವು. ಅವುಗಳ ನೆರಳಲ್ಲಿ ಆ ಪ್ರದೇಶದ ಇಕ್ಕಟ್ಟಾದ ರಸ್ತೆಗಳು ಸಾಕಷ್ಟು ತಂಪಾಗಿದ್ದವು. ಮೊಣಕಾಲವರೆಗಿನ ಚಡ್ಡಿ ಧರಿಸಿದ ಹುಡುಗರು ಬರಿಮೈಯಲ್ಲಿ ಅತ್ತಿತ್ತ ಜಿಗಿದಾಡುತ್ತಿದ್ದರು. ಕೆಲಕಾಲ ಅಲ್ಲೇ ನಿಂತುಬಿಡೋಣವೆಂದು ಅವರಿಗೆ ಅನ್ನಿಸಿತಾದರೂ ಯಾಕೋ ಬೇಡವೆಂದೆನಿಸಿ ನಿಲ್ಲದೆ ಮುಂದಕ್ಕೆ ಹೋದರು.

ಎದುರುಗಡೆಯಿಂದ ಹುಡುಗನೊಬ್ಬ ಓಡಿಕೊಂಡು ಬರುತ್ತಿದ್ದ. ಅವನು ತನ್ನ ಹಿಂದೆ ಬಲಿಷ್ಠವಾದ ಹೆಗ್ಗಣವೊಂದನ್ನು ದರದರನೆ ಎಳೆದುಕೊಂಡು ಬರುತ್ತಿರುವುದು ಕಂಡಿತು. ಆ ಹುಡುಗ ಹೆಗ್ಗಣದ ಬಾಲಕ್ಕೆ ಗೋಣಿನಾರು ಬಿಗಿದು ಹಗ್ಗದ ತುದಿಯನ್ನು ಉರುಳಂತೆ ಮಾಡಿ ಮಣಿಕಟ್ಟನ್ನು ಅದರಲ್ಲಿ ತೂರಿಸಿಕೊಂಡಿದ್ದ. ಓಡುವ ಭರಾಟೆಯಲ್ಲಿ ಇವನೀಗ ಬಂದು ನನಗೆ ಡಿಕ್ಕಿ ಕೊಡ್ತಾನೆ. ಸಲ್ಮಾನ್ ಸಾಹೇಬರು ಯೋಚಿಸಿದ ಹಾಗೆ ಆಯ್ತು. ಅಲ್ಲಿಯೇ ಕೇಳಿಬಿಟ್ಟರು, ‘ಈ ಬಿ–562 ಎಲ್ಲಿದೆ? ನಿನಗೆ ಗೊತ್ತಾ, ಮಿಶ್ರಾಜೀಯವರ ಮನೆ?’.

ಆ ಹುಡುಗ ಪೂರ್ತಿಯಾಗಿ ಅವರ ಕಡೆಗೆ ತಲೆಯೆತ್ತಿಯೂ ನೋಡದೆ, ಒಂದು ಮನೆಯತ್ತ ಕೈ ತೋರಿಸುತ್ತ ಓಡಿಬಿಟ್ಟ. ಹೆಗ್ಗಣವೂ ಅವನ ಹಿಂದೆಯೇ ಹೋಯಿತು.

ಸಲ್ಮಾನ್ ಸಾಹೇಬರು ದೀರ್ಘವಾದೊಂದು ನಿಟ್ಟುಸಿರು ಬಿಟ್ಟು ಆ ವಿಶಾಲ ಕಟ್ಟಡದ ಎದುರಿಗೆ ಬಂದು ನಿಂತರು. ಅಲ್ಲಿ ಹೊರ ಜಗುಲಿಯಲ್ಲಿ ಹಾಕಿಟ್ಟ ಹುರಿಹಗ್ಗದ ಮಂಚದಮೇಲೆ ಇಬ್ಬರು ಮಹಿಳೆಯರು ಕುಳಿತುಕೊಂಡು ಪಂಜಾಬ ಸಮಸ್ಯೆಯನ್ನು ತಮ್ಮದೇ ರೀತಿಯಲ್ಲಿ ಬಿಡಿಸುವುದರಲ್ಲಿದ್ದರು. ‘ಅಯ್ಯೋ ಜಲಜಮ್ಮ, ಹಿಂದುಸ್ತಾನದಲ್ಲಿ ಹುಟ್ಟಿದ್ದಕ್ಕಾಗಿ ನಮ್ಮ ಭಾಗ್ಯಕ್ಕೆ ನಾವೇ ಶಹಬಾಸ್ ಕೊಟ್ಟುಕೊಳ್ಳಬೇಕು. ಪಂಜಾಬಿನಲ್ಲಿ ಹುಟ್ಟಿದ್ದರೆ ಇನ್ನು ಏನ್ ಗತಿಯಾಗ್ತಿತ್ತೋ ಏನೋ!’

‘ರಾಧಾರಮಣ ಮಿಶ್ರಾರವರ ಮನೆ ಇದೇನಾ?’
ಆ ಮಹಿಳೆಯರು ಕುಳಿತೇ ಇದ್ದರು. ನಮ್ಮಲ್ಲೆಲ್ಲ ಇರುವಂತೆ ಈ ಹೆಂಗಸರೂ ಎದ್ದುನಿಲ್ಲಬಹುದು ಎಂದು ಸಲ್ಮಾನ್ ಸಾಹೇಬರು ಎಣಿಸಿದ್ದರು.
‘ಮಿಸಿರಜೀ ಇಲ್ಲಿ ಇರೋದಿಲ್ಲ, ಅವರು ಜವಾಹರ ನಗರದಲ್ಲಿ ಇರ್ತಾರೆ. ಇಲ್ಲಿ ಅವರ ಬಾಡಿಗೆದಾರರು ಇರ್ತಾರೆ’. ಇಷ್ಟು ಮಾಹಿತಿ ಕೊಟ್ಟು ಆ ಹೆಂಗಸು ಬಾಯಿಯ ಮೇಲೆ ಕೈಯಿಟ್ಟು ಸುಮ್ಮನಾದಳು.

‘ಏನಾದರೂ ಕೆಲಸವಿತ್ತಾ?’ ಮತ್ತೊಬ್ಬಳು ತಲೆ ತುರಿಸಿಕೊಳ್ಳುತ್ತ ಕೇಳಿದಳು.
‘ಅವರ ಮನೆಯಲ್ಲಿ ಒಬ್ಬ ಹುಡುಗ ಇದ್ದಾನೆ, ಮಿಶ್ರೀಲಾಲ ಗುಪ್ತಾ ಅಂತ. ಅವನನ್ನು ಭೇಟಿಯಾಗಬೇಕಿತ್ತು’.
‘ಹಾಗಿದ್ದರೆ ಮೇಲ್ಗಡೆ ಹೋಗಿ. ಮೆಟ್ಟಲು ಹತ್ತಿ ಹೋದಮೇಲೆ ಎರಡನೆಯ ಕೋಣೆ ಅವನದೆ’. ತಲೆ ತುರಿಸಿಕೊಳ್ತಾ ಇದ್ದವಳು ಇಷ್ಟು ಹೇಳುತ್ತ ಎದ್ದುನಿಂತಳು.

ಸಲ್ಮಾನ್ ಸಾಹೇಬರು ಒಳಗಡೆ ನಡೆದರು. ಬಿಸಿಲಲ್ಲಿ ಬಂದುದರಿಂದ ಕಣ್ಣಿಗೆ ಮಬ್ಬು ಕವಿದಂತಾಗಿ ಒಳಗಡೆ ಕತ್ತಲಿನ ಅನುಭವವಾಯಿತು. ಮೆಟ್ಟಲುಗಳು ಎಲ್ಲಿವೆಯೆಂದೇ ತೋಚುತ್ತಿರಲಿಲ್ಲ. ಅಲ್ಲಿಯೇ ಸ್ವಲ್ಪ ಹೊತ್ತು ನಿಂತಿದ್ದಂತೆ ಮೂಲೆಯಲ್ಲೊಂದು ನಳ್ಳಿ ಕಾಣಿಸಿತು. ಪಕ್ಕದಲ್ಲಿ ಮೆಟ್ಟಲುಗಳೂ ಕಾಣಿಸತೊಡಗಿದವು. ನಿಧಾನವಾಗಿ ಮೇಲೇರಲಾರಂಭಿಸಿದರು.

ಮಿಶ್ರೀಲಾಲ ಇಷ್ಟು ಹೊತ್ತಿಗೆ ಮಲಗಿದ್ದಿರಬಹುದು. ನಾನು ಬಾಗಿಲು ಬಡಿದು ಅವನನ್ನು ಎಬ್ಬಿಸಬೇಕಾದೀತು. ಅವನು ದಡಬಡಿಸಿಕೊಂಡು ಎದ್ದು ಚಿಲಕ ತೆಗೆದು ಕಣ್ಣುಜ್ಜಿಕೊಳ್ಳುತ್ತ ಹೊರಗಡೆ ಇಣುಕಬಹುದು. ಎದುರಿಗೆ ನನ್ನನ್ನು ಕಂಡು ಪಾದಕ್ಕೆರಗಬಹುದು... ಎಂದೆಲ್ಲ ಸಾಹೇಬರು ಯೋಚಿಸತೊಡಗಿದರು.

‘ಯಾರು?’
ಮೆಟ್ಟಿಲುಗಳು ಮುಗಿಯುತ್ತಿದ್ದಂತೆ ಆಚೆ ಮೂಲೆಯಿಂದ ಹೆಣ್ಣು ದನಿಯಲ್ಲಿ ಪ್ರಶ್ನೆಯೊಂದು ತೂರಿಬರುತ್ತಿದ್ದಂತೆ ಅವರು ಅಲ್ಲೇ ಸ್ತಬ್ಧರಾಗಿ ನಿಂತುಬಿಟ್ಟರು.
‘ಮಿಶ್ರೀಲಾಲರು ಇದ್ದಾರಾ?’
‘ಸ್ವಲ್ಪ ನಿಲ್ಲಿ’.
ಆ ಹೆಂಗಸು ಸ್ವಲ್ಪ ಗಡುಸಾಗಿಯೇ ಹೇಳಿದಳು. ಸಲ್ಮಾನ್ ಸಾಹೇಬರು ತುದಿಯ ಮೆಟ್ಟಲಿನ ಮೇಲೆ ನಿಂತು ಯೋಚಿಸಲಾರಂಭಿಸಿದರು. ಅವಳು ಯಾವುದೋ ಮಹತ್ತರವಾದ ಕೆಲಸದಲ್ಲಿದ್ದಿರಬಹುದು. ಮುಖ ತಿರುಗಿಸಿ ನೋಡುವಷ್ಟರಲ್ಲಿ ಗೌರವರ್ಣದ ಮಧ್ಯವಯಸ್ಕ ಸ್ತ್ರೀಯೊಬ್ಬಳು ಲಂಗ ಮತ್ತು ಬ್ರೇಸಿಯರ್ ತೊಟ್ಟು ಓಡಿಬಂದು ಒಳಕೋಣೆ ಸೇರಿಕೊಂಡವಳು ಲಗುಬಗೆಯಿಂದ ಸೀರೆ ಸುತ್ತಿಕೊಂಡು ರವಿಕೆಯ ಹುಕ್ಸ್ ಹಾಕುತ್ತ ಹೊರಗಿಣುಕಿದಳು.

‘ಬನ್ನಿ!’ ಅವಳು ಕರೆಯುತ್ತಿದ್ದಂತೆ ಕೆಲ ಹೊತ್ತಿನ ಮೊದಲು ಅವಳು ಅರೆಬರೆಯಾಗಿ ಒಳಗೆ ಓಡಿದ್ದನ್ನು ನೋಡಿಯೇ ಇಲ್ಲವೆಂಬಂತೆ ಸಲ್ಮಾನ್ ಸಾಹೇಬರು ಒಳಗಡೆ ಹೋದರು. ಆ ಮಹಿಳೆಯೂ ಹಾಗೆಯೇ ಎಣಿಸಿರಬೇಕು. ಹಾಗಾಗಿ ಯಾವುದೇ ಮುಜುಗರದ ಭಾವನೆಯಿಲ್ಲದೆ ಎದುರಿಗೆ ನಿಂತುಕೊಂಡಿದ್ದಳು. ಎದುರಿಗೆ ನಳ್ಳಿಯ ಪಕ್ಕದಲ್ಲಿ ಒಗೆಯಲೆಂದು ಇಟ್ಟ ಒದ್ದೆ ಸೀರೆ ಬಿದ್ದುಕೊಂಡಿತ್ತು. ಜೊತೆಗೆ ‘ಜಯ್’ ಸಾಬೂನಿನ ಪರಿಮಳ ಸುತ್ತಲಿನ ವಾತಾವರಣವನ್ನೇ ಕಬಳಿಸಿಕೊಂಡಂತಿತ್ತು. ‘ಮಿಶ್ರೀಲಾಲರು ಇದ್ದಾರಾ?’

‘ಮಿಶ್ರೀಲಾಲರು ಪಕ್ಕದ ಕೋಣೆಯಲ್ಲೇ ಇರ್ತಾರೆ. ಆದರೆ ಈಗ ಅವರಿಲ್ಲ. ಬೆಳಿಗ್ಗೆ ಎದ್ದವರೆ ಎಲ್ಲಿಗೋ ಹೋಗಿದ್ದಾರೆ. ನೀವು ಎಲ್ಲಿಂದ ಬರ್ತಾ ಇದ್ದೀರಾ?... ಕುಳಿತುಕೊಳ್ಳಿ’.

ಆ ಮಹಿಳೆ ಅತ್ಯಂತ ವಿನಮ್ರತೆಯಿಂದ ಇಷ್ಟೆಲ್ಲ ಹೇಳಿದವಳು ಅಲ್ಲೆ ಹೊರಗಡೆಯಲ್ಲಿದ್ದ ಮಂಚದಮೇಲೆ ಸುತ್ತಿಟ್ಟ ಜಮಖಾನೆಯನ್ನು ಬಿಡಿಸಿಕೊಟ್ಟು ಒಳಗಡೆ ನಡೆದಳು. ಸ್ವಲ್ಪ ಹೊತ್ತಲ್ಲಿ ಚಿಕ್ಕ ತಾಟಿನಲ್ಲಿ ಬೆಲ್ಲ ಮತ್ತು ಉದ್ದನೆಯ ಸ್ಟೀಲ್ ಲೋಟದಲ್ಲಿ ಕುಡಿಯಲು ನೀರು ಹಿಡಿದುಕೊಂಡು ಬಂದು ಮಂಚದ ತುದಿಯಲ್ಲಿಟ್ಟಳು.

‘ನೀರು ಕುಡಿಯಿರಿ. ಇವತ್ತು ಎಂದಿಗಿಂತ ತುಸು ಜಾಸ್ತಿಯೇ ಸೆಕೆಯಿದೆ’.
ಇಷ್ಟು ಹೇಳಿದವಳು ಬಿಚ್ಚಿಟ್ಟ ಸೀರೆಯ ಕಡೆಗೊಮ್ಮೆ ನೋಡಿದಳು. ಮತ್ತೆ ಏನೋ ಯೋಚನೆಮಾಡಿ ನೀರನ್ನು ಕೆಳಗಿಟ್ಟು ಒಳಗೆ ಹೋಗಿ ಮರಳಿ ಬರುವಾಗ ತಾಳೆಗರಿಯ ಬೀಸಣಿಗೆ ತಂದು ಮಂಚದ ಮೇಲಿಟ್ಟಳು.

ಸಲ್ಮಾನ್ ಸಾಹೇಬರು ಬೆಲ್ಲ ಬಾಯಿಗೆಸೆದು ನೀರು ಕುಡಿದರು. ಬೀಸಣಿಗೆ ಎತ್ತಿಕೊಂಡು ನಿಧಾನವಾಗಿ ಬೀಸಿಕೊಳ್ಳಲಾರಂಭಿಸಿದರು.
‘ಮಿಶ್ರೀಲಾಲ ಎಲ್ಲಿಯಾದರೂ ಪರಸ್ಥಳಕ್ಕೆ ಹೋಗಿಬಿಟ್ಟಿದ್ದಾನೋ ಹೇಗೆ?’

‘ಹಾಗೆ ಹೊರಗಡೆ ಎಲ್ಲಿಗೂ ಹೋಗಿಲ್ಲ, ಊರಲ್ಲೇ ಎಲ್ಲೋ ಇದ್ದಿರಬಹುದು. ಸಿನೇಮಾ–ಗಿನೇಮಾ ನೋಡಲಿಕ್ಕೆ ಹೋಗಿರಬೇಕು ಅಥವಾ ಯಾವುದಾದರೂ ಗೆಳೆಯನ ಮನೆಯಲ್ಲಿ ಪಟ್ಟಾಂಗ ಹೊಡಿತಿರಬೇಕು. ದಿನಾಲು ಕೋಣೆಯಲ್ಲೇ ಇರ್ತಿದ್ದರು, ಇವತ್ತೇ ಮನೆಯಿಂದ ಹೊರಗಡೆ ಕಾಲಿಟ್ಟಿದ್ದು’.

ಸಲ್ಮಾನ್ ಸಾಹೇಬರು ವಾಚ್ ನೋಡಿಕೊಂಡರು. ಮೂರು ಗಂಟೆಯಾಗಿತ್ತು. ತುಂಬಾ ಸುಸ್ತಾದಂತೆ ಅನ್ನಿಸಿತು. ಮಂಚದಮೇಲೆ ಕಾಲು ಚಾಚಿ ಅಲ್ಲೇ ಅಡ್ಡಾದರು. ಮಹಿಳೆ ಒಳಗಡೆ ಹೋಗಿ ಒಂದು ತಲೆದಿಂಬು ತಂದಳು.

‘ನೀವು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ಗುಪ್ತಾಜೀ ಸಂಜೆತನಕ ಬಂದೇಬರ್ತಾರೆ’. ಅವರ ತಲೆಯ ಹತ್ತಿರ ತಲೆದಿಂಬು ಇಟ್ಟು, ತನ್ನ ಒದ್ದೆ ಸೀರೆಯನ್ನು ಬಾಲ್ದಿಗೆ ಹಾಕಿಕೊಂಡು ಕೆಳಗಡೆ ಇಳಿದುಹೋದಳು.

ಸಲ್ಮಾನ್ ಸಾಹೇಬರು ಮಲಗಲು ಯತ್ನಿಸುತ್ತಿರುವಾಗ ಕಿಸೆಯಲ್ಲಿರುವ ನೀರುಳ್ಳಿ ಚುಚ್ಚುತ್ತಿರುವ ಅನುಭವವಾಯ್ತು. ಅದನ್ನು ತೆಗೆದು ಮಂಚದ ಕೆಳಗಡೆ ಬಿಸಾಡಿ ಅಲ್ಲೇ ನಿದ್ದೆಗೆ ಜಾರಿದರು. ಅಲ್ಲೂ ಒಂದು ಕನಸು. ಶಾಲೆಯಲ್ಲಿ ಮೇಸ್ಟ್ರುಗಳ ನಡುವೆ ಜಗಳ. ಪಿ.ಡಿ. ಸತ್ಯನಾರಾಯಣ ಯಾದವರಿಗೆ ಹೆಡಮಾಸ್ಟ್ರು ಬಾಯಿಗೆ ಬಂದಹಾಗೆ ಬೈಯುತ್ತಿದ್ದಾರೆ. ಸಲ್ಮಾನ್ ಸಾಹೇಬರು ಅವರ ಪಕ್ಷವಹಿಸಿ ಮಾತಾಡಬೇಕೆಂದು ಮುಂದಕ್ಕೆ ಹೋಗುತ್ತಾರೆ. ಆವಾಗ ಉಳಿದೆಲ್ಲ ಮೇಸ್ಟ್ರುಗಳು ಅವರಮೇಲೆ ಎರಗಿಬೀಳುತ್ತಾರೆ. ಒಮ್ಮೆಲೆ ಎಚ್ಚರಾಗಿ ಎದ್ದು ಕುಳಿತುಬಿಡುತ್ತಾರೆ.

ಬಹುಶಃ ಕತ್ತಲಾಗಿರಬೇಕು. ಒಳಗಡೆ ಒಂದು ಮಬ್ಬುಮಬ್ಬಾದ ವಿದ್ಯುದ್ದೀಪ ಉರಿಯುತ್ತಿತ್ತು. ಅದರ ಮಂದಪ್ರಕಾಶ ಹೊರ ಜಗುಲಿಯವರೆಗೂ ಬರುತ್ತಿತ್ತು. ಹೊರಗಡೆ ಮತ್ತಾವುದೇ ಬಲ್ಬ್ ಇರಲಿಲ್ಲ. ಒಳಗಿನಿಂದ ಬರುವ ಆ ಚೌಕಾಕಾರದ ಬೆಳಕಿನ ತುಂಡಿನಲ್ಲಿಯೇ ಒಂದು ಸ್ಟೋವ್ ಉರಿಯುತ್ತಿದೆ. ಅದರ ಮೇಲಿಟ್ಟ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಮಸಾಲೆ ಸಾಮಗ್ರಿಗಳನ್ನೆಲ್ಲ ಹಾಕಿ ತರಕಾರಿ ತುಂಬುತ್ತಿದ್ದಾಳೆ. ಮಧ್ಯಾಹ್ನದ ಹೊತ್ತಲ್ಲಿ ‘ಜಯ್’ ಸಾಬೂನಿನ ಪರಿಮಳ. ಈಗ ಸಂಜೆ ಹೊತ್ತಲ್ಲಿ ಒಗ್ಗರಣೆಗೆ ಹಾಕಿದ ಜೀರಿಗೆಯ ಕಂಪು.
‘ಮಿಶ್ರೀಲಾಲ ಇನ್ನೂ ಬಂದಿಲ್ವಾ?’

‘ಅಯ್ಯೋ! ಅವರು ಎಲ್ಲಿಗೆ ಹೋಗಿದ್ದಾರೆ ಅಂತ ನಾವೀಗ ಏನು ಹೇಳೋದು? ದಿನಾ ಕೋಣೆಯಲ್ಲೇ ಬಿದ್ದುಕೊಂಡಿರ್ತಿದ್ದರು’. ಆ ಹೆಂಗಸು ಚಿಂತಾಕ್ರಾಂತಳಾಗಿ ಹೇಳಿದಳು. ಚಿಕ್ಕ ಸ್ಟೀಲ್ ಲೋಟಾದಲ್ಲಿ ಮೊದಲೇ ಮಾಡಿಟ್ಟ ಚಹಾದೊಂದಿಗೆ ಎದುರಿಗೆ ಬಂದುನಿಂತಳು. ‘ಅಯ್ಯೋ, ನೀವ್ಯಾಕೆ ತೊಂದರೆ ತೊಗೊಂಡ್ರಿ?’ ‘ಇದರಲ್ಲಿ ತೊಂದರೆ ಏನ್ ಬಂತು? ಸಂಜೆ ಹೊತ್ತು ಚಹಾ ಮಾಡೋದಂತೂ ಇದ್ದೇ ಇದೆ’.

ಸಲ್ಮಾನ್ ಸಾಹೇಬರು ಚಹಾದ ಲೋಟಾವನ್ನು ಎತ್ತಿಕೊಂಡರು. ಹೆಂಗಸು ಹಚ್ಚಿಟ್ಟ ಸ್ಟೋವ್ ಅತ್ತ ಹಿಂದಿರುಗಿದಳು. ಅದೇ ಹೊತ್ತಿಗೆ ಮಹಾನುಭಾವರೊಬ್ಬರು ಸ್ನಾನ ಮುಗಿಸಿ ಸೊಂಟಕ್ಕೆ ಟವಲು ಸುತ್ತಿಕೊಂಡು ಜನಿವಾರ ಹುರಿಮಾಡುತ್ತ ಮೆಟ್ಟಲೇರಿ ಮೇಲಕ್ಕೆ ಬಂದವರು, ನೇರವಾಗಿ ಕೋಣೆಗೆ ಹೋಗಿ ಹನುಮಾನ್ ಚಾಳೀಸಾ ಓದಲಾರಂಭಿಸಿದರು. ಜೀರಿಗೆಯ ಕಂಪಿನೊಂದಿಗೆ ಊದಿನಕಡ್ಡಿ ಸುಗಂಧವೂ ವಾತಾವರಣದಲ್ಲಿ ಮಿಳಿತವಾಗತೊಡಗಿತು.

ಸಲ್ಮಾನ್ ಸಾಹೇಬರು ಒಳಗಡೆ ಇಣುಕಿ ನೋಡಿದರೆ ಅಲ್ಲಿ ಸಂಪೂರ್ಣ ದೇವಲೋಕವೇ ಇಳಿದುಬಂದು ಸಿಂಗರಿಸಿಕೊಂಡು ನಿಂತಂತಿತ್ತು. ಗೋಡೆಗಳ ತುಂಬೆಲ್ಲ ರಾಮ, ಕೃಷ್ಣ, ಹನುಮಂತ, ಶಿವ, ಪಾರ್ವತಿ, ಲಕ್ಷ್ಮಿ, ಗಣಪತಿ ಮುಂತಾದ ದೇವ–ದೇವತೆಗಳ ಫೋಟೋಗಳು ರಾರಾಜಿಸುತ್ತಿದ್ದವು. ಅಲ್ಲೇ ಒಂದೆಡೆ ಮರದ ಚಿಕ್ಕ ಹಲಗೆಯೊಂದಿತ್ತು.

ಅದರಮೇಲೆ ಬರೆದಿತ್ತು – ರಾಮ ಮನೋಹರ ಪಾಂಡೇಯ, ಅಸಿಸ್ಟೆಂಟ್ ಟೆಲಿಫೋನ್ ಆಪರೇಟರ್. ಆ ಮಹಾನುಭಾವರು ತಮ್ಮ ಬಲಗೈಯಲ್ಲಿ ಊದಿನಕಡ್ಡಿಗಳನ್ನು ತೆಗೆದುಕೊಂಡು, ಎಡಗೈಯಿಂದ ತಮ್ಮ ಬಲಗೈಯ ದಂಡವನ್ನು ಹಿಡಿದು ಚಿತ್ರಪಟಗಳನ್ನೆಲ್ಲ ಸುಗಂಧಿತ ಧೂಪದಿಂದ ಸುವಾಸಿತಗೊಳಿಸುತ್ತಿದ್ದರು. ನಡುನಡುವೆ ಗೀತೆಯ ಕೆಲವು ಶ್ಲೋಕಗಳನ್ನು ಸರಿ–ತಪ್ಪು ಉಚ್ಚಾರಣೆಗಳೊಂದಿಗೆ ಪಠಿಸುತ್ತಿದ್ದರು. ಕೊಳೆಹಿಡಿದು ಕಪ್ಪಾದ ಸೀಲಿಂಗ್ ಫ್ಯಾನೊಂದು ನಿಧಾನ ಗತಿಯಲ್ಲಿ ಸುತ್ತುತ್ತಿತ್ತು.

ಗೃಹಿಣಿ ಆಗಲೇ ಪಲ್ಯ ಮಾಡಿ ಮುಗಿಸಿ ಚಪಾತಿ ಮಾಡುವುದಕ್ಕೆ ಅಣಿಯಾಗುತ್ತಿದ್ದಳು. ಈಗಾಗಲೇ ರಾತ್ರಿಯಾಗಿಬಿಟ್ಟಿದೆ. ಈಗಲೇ ಅಲ್ಲಿಂದ ಹೊರಟು ಯಾವುದಾದರೂ ಹೊಟೆಲಿನಲ್ಲಿ ರಾತ್ರಿ ಕಳೆದರಾಯಿತು, ಇನ್ನೂ ಮಿಶ್ರೀಲಾಲನ ಪತ್ತೆಯಿಲ್ಲ. ಹೇಗೂ ಬೆಳಿಗ್ಗೆ ಬಂದು  ಅವನನ್ನು ಭೇಟಿಯಾದರಾಯಿತು... ಸಲ್ಮಾನ್ ಸಾಹೇಬರು ಹೀಗೆ ಯೋಚಿಸುತ್ತ ಹೊರಡಬೇಕೆಂಬ ಇರಾದೆಯಿಂದ ಎದ್ದುನಿಂತರು.

‘ನಾನೀಗ ಹೊರಡ್ತೇನೆ. ನಾಳೆ ಮುಂಜಾನೆ ಬಂದು ಆತನನ್ನು ಕಾಣ್ತೇನೆ’. ಅವರು ತಮ್ಮ ಬ್ಯಾಗ್ ಎತ್ತಿಕೊಂಡರು. ‘ಎಲ್ಲಿಗೆ ಹೋಗ್ತೀರಾ?’ ಮಹಿಳೆ ನೇರವಾಗಿ ಕೇಳಿದ್ದಲ್ಲದೆ, ಹಿಂದಿರುಗಿ ಅವರನ್ನೇ ದಿಟ್ಟಿಸತೊಡಗಿದಳು. ‘ಯಾವುದಾದರೂ ಹೋಟೆಲ್‌ನಲ್ಲಿ ಇದ್ದುಬಿಡ್ತೇನೆ’.

‘ಯಾಕಣ್ಣಾ, ಹೋಟೆಲನಲ್ಲಿ ಯಾಕೆ ಇರ್ತೀರಾ, ಏನ್ ನಮ್ಮ ಮನೆಯಲ್ಲಿ ಜಾಗ ಇಲ್ವಾ? ಊಟ ತಯಾರಾಗಿದೆ. ಹೊಟ್ಟೆತುಂಬ ಊಟಮಾಡಿ ಟೆರೇಸ್ ಮೇಲೆ ಮಲಗಿಬಿಡಿ. ಗುಪ್ತಾಜೀ ಹೇಗೂ ರಾತ್ರಿ ಬಂದೇ ಬರ್ತಾರೆ. ಒಂದುವೇಳೆ ಬರಲಿಲ್ಲ ಅಂತಾನೇ ಇಟ್ಕೊಳ್ಳಿ, ಬೆಳಿಗ್ಗೆ ಹೋದರಾಯ್ತು. ಈ ಹೊತ್ತಲ್ಲಂತೂ ನಾನು ನಿಮಗೆ ಹೊರಗಡೆ ಹೋಗೋದಕ್ಕೆ ಬಿಡೋದಿಲ್ಲ. ಬನ್ನಿ, ಬನ್ನಿ ನಿಮ್ಮ ಬೂಟು–ಗೀಟು ಕಳಚಿ ಬದಿಗಿಡಿ, ಕೈ–ಕಾಲು–ಮುಖ ತೊಳೆದುಕೊಂಡು ಊಟಕ್ಕೆ ಕುಳಿತುಬಿಡಿ’.

‘ಇಲ್ಲ ಅಕ್ಕಾ, ನೀವ್ಯಾಕೆ ಸುಮ್ಮನೆ ತೊಂದರೆ ತೊಗೊಳ್ತೀರಾ?’. ಆ ಹೆಂಗಸನ್ನು ಅಕ್ಕಾ ಎಂದು ಬಾಯಿತುಂಬ ಕರೆಯುವುದಕ್ಕೆ ಸಲ್ಮಾನ್ ಸಾಹೇಬರಿಗೆ ಯಾವುದೇ ಆಕ್ಷೇಪ ಇರಲಿಲ್ಲ.  ‘ತೊಂದರೆ ಏನ್ ಬಂತು. ಬನ್ನಿ ಊಟ ಮಾಡಿ’.

ಸಲ್ಮಾನ್ ಸಾಹೇಬರಿಗೆ ಬೇರೆ ದಾರಿಯಿರಲಿಲ್ಲ. ಬೂಟು ತೆಗೆದು ಬದಿಗಿಟ್ಟು ಮುಖ ಮತ್ತು ಕೈ ತೊಳೆದು ಬಂದರು. ಅಲ್ಲಿಯವರೆಗೆ ಪಾಂಡೇಜೀ ತಮ್ಮ ಪೂಜಾವಿಧಿಗಳನ್ನೆಲ್ಲ ಮುಗಿಸಿ ಒಳಗಡೆ ಚಾಪೆಯಮೇಲೆ ಕುಳಿತು ಕಾಗದ–ಪತ್ರಗಳ ಪರಿಶೀಲನೆಯಲ್ಲಿ ಮಗ್ನರಾಗಿದ್ದರು. ಬಂದು ಇಷ್ಟು ಹೊತ್ತಾದರೂ ಅವರಿಗೆ ನಮಸ್ಕಾರ ಎಂದು ಹೇಳುವ ಸಂದರ್ಭ ಒದಗಿಬಂದಿರಲಿಲ್ಲ. ಅದಕ್ಕಾಗಿ ಸಲ್ಮಾನ್ ಸಾಹೇಬರು ತುಂಬ ನೊಂದುಕೊಂಡರಾದರೂ ಇಷ್ಟು ಹೊತ್ತಿನಮೇಲೆ ನಮಸ್ಕಾರ ಹೇಳುವುದರಲ್ಲಿ ಯಾವ ಔಚಿತ್ಯವೂ ಇಲ್ಲ. ಹಾಗಾಗಿ ಅವರೊಂದಿಗೆ ನೇರವಾಗಿ ಸಂವಾದಕ್ಕೆ ಇಳಿಯುವ ಪ್ರಯತ್ನ ಮಾಡಿದರು.

‘ನೀವೂ ಬಂದುಬಿಡಿ’. ‘ಇಲ್ಲ... ಇಲ್ಲ... ನೀವು ಊಟ ಮಾಡಿ. ನಾನು ಸ್ವಲ್ಪ ಹೊತ್ತಿನಮೇಲೆ ಮಾಡ್ತೇನೆ’. ಅವರು ತುಸು ಒರಟಾಗಿಯೇ ಹೇಳಿ ಸಾಹೇಬರ ಕಡೆಗೆ ತಿರುಗಿಯೂ ನೋಡದೆ ತಮ್ಮ ಕಾಗದ–ಪತ್ರಗಳಲ್ಲಿ ಮುಳುಗಿಹೋದರು.

‘ನೀವು ಕುಳಿತುಕೊಳ್ಳಿ. ಇಡೀದಿನ ಏನೂ ತಿಂದಿರಲಿಕ್ಕಿಲ್ಲ. ಅವರು ಮತ್ತೆ ಊಟ ಮಾಡ್ತಾರೆ. ಆಫೀಸಿನಿಂದ ಬಂದವರೆ ಸ್ವಲ್ಪ ತಿಂಡಿ ತಿಂದಿದ್ದಾರೆ. ಆಗ ನೀವು ಮಲಗಿದ್ದಿರಲ್ಲ...’

ಮಹಿಳೆ ಮತ್ತೊಮ್ಮೆ ಅವರನ್ನು ಒತ್ತಾಯಿಸಿ ಮಣೆ ತಂದಿಟ್ಟು ಅದರೆದುರಿಗೆ ಬಟ್ಟಲನ್ನಿಟ್ಟಳು. ಸ್ಟೀಲಿನ ಲೋಟಾದಲ್ಲಿ ನೀರಿಟ್ಟು ಪಕ್ಕದಲ್ಲಿ ನೀರಿನ ತಂಬಿಗೆಯನ್ನೂ ಇಟ್ಟಳು.

ಸಲ್ಮಾನ್ ಸಾಹೇಬರು ಕುಳಿತುಕೊಂಡರು. ಅವರು ಒಳಗೊಳಗೆ ತುಂಬ ಆಹ್ಲಾದಿತರಾಗಿದ್ದರು. ಜಾತಿ–ಧರ್ಮದ ಬಗ್ಗೆ ಪೂರ್ವಭಾವಿಯಾಗಿ ವಿಚಾರಿಸದೆ ತಮ್ಮ ಅಡುಗೆಮನೆಯಲ್ಲಿ ಕುಳ್ಳಿರಿಸಿ ಊಟ ಹಾಕುವುದು ಅವರ ವಠಾರದಲ್ಲಂತೂ ಗಗನಕುಸುಮ! ಆದರೆ ಇದು ಪಟ್ಟಣ ಅಲ್ವಾ... ಇಲ್ಲೆಲ್ಲ ಯಾವುದೇ ರಿಸ್ಟ್ರಿಕ್ಶನ್ಸ್ ಇರೋದಿಲ್ಲ... ಹಾಗೆ ನೋಡಿದರೆ ಇದು ಮುಂಬೈ–ದಿಲ್ಲಿಯಂತಹ ಮಹಾನಗರವೇನೂ ಅಲ್ಲ.

ಇಲ್ಲಿಯ ಜನರು ಕೂಡ ಗ್ರಾಮೀಣ ಸಂಸ್ಕಾರವನ್ನು ಪೂರ್ತಿಯಾಗಿ ಬಿಟ್ಟವರೇನೂ ಅಲ್ಲ. ಆದರೂ ಪೇಟೆ–ಪಟ್ಟಣವೆಂದರೆ ಅದಕ್ಕಿರುವ ಮಾನ್ಯತೆಯೇ ಬೇರೆ! ಇಲ್ಲಿಯ ಶಿಕ್ಷಿತ ಸಮುದಾಯದವರು ವೈಚಾರಿಕ ಪ್ರಜ್ಞೆಯುಳ್ಳವರಾಗಿರುತ್ತಾರೆ. ಅವರಲ್ಲಿ ಸಂಕೀರ್ಣತೆ ಇರುವುದಿಲ್ಲ. ಅವರು ಧರ್ಮಪ್ರವಣರಾಗಿದ್ದೂ ರೂಢಿಗತ ಮಾನ್ಯತೆಗಳಿಂದ ಮುಕ್ತರಾಗಿರುತ್ತಾರೆ.

ಸಲ್ಮಾನ್ ಸಾಹೇಬರು ಇದೇ ಯೋಚನಾಲಹರಿಯಲ್ಲೇ ಊಟ ಆರಂಭಿಸಿದರು. ಬದನೆಕಾಯಿ ಪಲ್ಯ ತುಂಬ ರುಚಿಯಾಗಿತ್ತು. ಹೊಸದಾಗಿ ಹಾಕಿದ ಉಪ್ಪಿನಕಾಯಿಯ ಮಾವಿನಕಾಯಿಗೆ ಇನ್ನೂ ಉಪ್ಪು–ಖಾರ ಹಿಡಿದಿರಲಿಲ್ಲ, ಆದರೂ ಸ್ವಾದಿಷ್ಟವಾಗಿತ್ತು. ಚಪಾತಿಯೂ ಅಷ್ಟೆ, ತುಪ್ಪಕ್ಕೇನೇನೂ ಕೊರತೆಯಿರಲಿಲ್ಲ. ಅವರ ಮನೆಯಲ್ಲಿ ಇಂಥ ಚಪಾತಿ ಕನಸಿನ ಮಾತು.

ಅವರ ಮನೆಯಲ್ಲೋ, ಅಡಿಮೇಲಾಗಿಟ್ಟ ಕಾವಲಿಯ ಡುಬ್ಬದಮೇಲೆ ವಿಶಾಲಕಾಯ ರೊಟ್ಟಿಗಳನ್ನು ಅರೆಬೇಯಿಸಿ ಮತ್ತದನ್ನು ಅಗ್ಗಿಷ್ಟಿಕೆಯ ಕೆಂಡದಮೇಲೆ ಹೊರಳಾಡಿಸಿ ಹಳೆ ಬಟ್ಟೆಯಲ್ಲಿ ಸುತ್ತಿಡುವುದು ವಾಡಿಕೆ. ಆ ಮಹಿಳೆ ಪೂರ್ತಿ ಉಬ್ಬಿದ ಹಬೆಯಾಡುತ್ತಿರುವ ಇನ್ನೊಂದು ಚಪಾತಿಯನ್ನು ತಂದು ಅವರ ತಾಟಿಗೆ ಹಾಕಿದಳು.

‘ನೀವು ಗುಪ್ತಾಜೀಯವರ ಊರಿಂದ ಬಂದಿದ್ದೀರಾ?’ ಸಲ್ಮಾನ್ ಸಾಹೇಬರು ತಲೆಯೆತ್ತಿದರು. ಪಾಂಡೇಜೀ ಕಾಗದ–ಪತ್ರಗಳ ತಪಾಸಣೆ ಮುಗಿಸಿ ಬದಿಗಿಟ್ಟಿದ್ದರು. ಈಗವರು ಮಾವಿನ ಹಣ್ಣನ್ನು ತುಂಡು ಮಾಡುವುದರಲ್ಲಿ ತೊಡಗಿಕೊಂಡಿದ್ದರು. ಅವರ ಆ ಧ್ವನಿಯಲ್ಲಿ ಮೊದಲಿನಂತಹುದೇ ಶುಷ್ಕತೆಯಿತ್ತು.

‘ಹಾಂ. ಹೌದು!’. ಉತ್ತರಿಸಿದ ಸಾಹೇಬರು ಉಪ್ಪಿನಕಾಯಿ ರಸವನ್ನು ಬೆರಳಿಗೆ ತಾಗಿಸಿಕೊಂಡು ನೆಕ್ಕಲಾರಂಭಿಸಿದರು. ಪಾಂಡೇಜೀ ಸನ್ನೆಮಾಡಿ ಹೆಂಡತಿಯನ್ನು ಒಳಗಡೆ ಕರೆದು ಮಾವಿನಹಣ್ಣಿನ ಹೋಳುಗಳನ್ನು ಅವಳ ಕೈಗಿತ್ತರು. ಹೆಂಡತಿ ಅದನ್ನು ತಂದು ಸಲ್ಮಾನ್ ಸಾಹೇಬರ ತಾಟಿಗೆ ಹಾಕಿದಳು.

‘ನೀವು ಅವರ ಅಣ್ಣನಾ?’ – ಅದೇ ಶುಷ್ಕ ಸ್ವರ.
ಸಲ್ಮಾನ್ ಸಾಹೇಬರಿಗೆ ಹೊಟ್ಟೆಯಲ್ಲೇನೋ ತಳಮಳ ಶುರುವಾದಂತಾಯಿತು.
‘ಅಲ್ಲ...ಅಲ್ಲ... ಅವನು ನನ್ನ ಶಿಷ್ಯ’.
‘ಓಹೋ... ಹಾಗಿದ್ದರೆ ನೀವು ಅಧ್ಯಾಪಕರಾ?’
‘ಹೌದು’.
‘ಎಲ್ಲಿ ಕಲಿಸ್ತೀರಾ?’
‘ನಮ್ಮ ಊರಲ್ಲೇ’.
‘ನೀವೂ ಗುಪ್ತಾರಾ?’
‘ಅಲ್ಲ...’
‘ಬ್ರಾಹ್ಮಣರಾ?’
‘ಅಲ್ಲ... ನಾನು ಮುಸಲ್ಮಾನ, ನನ್ನ ಹೆಸರು ಮುಹಮ್ಮದ್ ಸಲ್ಮಾನ್ ಅಂತ’.

ಅವರು ತಮ್ಮ ಸಮಗ್ರ ಪರಿಚಯ ಮಾಡಿಕೊಟ್ಟು ತಾಟಿನಲ್ಲಿದ್ದ ಪಲ್ಯಕ್ಕೆ ಚಪಾತಿಯ ಕೊನೆಯ ತುಂಡನ್ನು ಸುತ್ತಲಾರಂಭಿಸಿದರು.
ಪಾಂಡೇಜೀ ತಮ್ಮ ಹೆಂಡತಿಯ ಕಡೆಗೆ ನೋಡಿದರೆ ಅವಳ ದೃಷ್ಟಿಯೂ ಗಂಡನ ಮುಖದೆಡೆಗೇ ಇತ್ತು. ಇಬ್ಬರೂ ಕಣ್ಣುಗಳಲ್ಲೇ ಸಂವಾದ ನಡೆಸುತ್ತಿರುವಂತಿತ್ತು. ಅದೇನೆಂಬುದು ಸಲ್ಮಾನ್ ಸಾಹೇಬರಿಗೆ ಸ್ಪಷ್ಟವಾಗಲಿಲ್ಲ.

ಸಲ್ಮಾನ್ ಸಾಹೇಬರು ಮುಂದಿನ ಚಪಾತಿಯ ನಿರೀಕ್ಷೆಯಲ್ಲಿದ್ದರು, ಆದರೆ ಆ ಮಹಿಳೆ ಅಡುಗೆಕೋಣೆ ಬಿಟ್ಟು ಒಳಗಿನ ಕೋಣೆಗೆ ಹೋಗಿ ಅಲ್ಲಿ ಏನನ್ನೋ ತಡಕಾಡುತ್ತಿದ್ದಳು. ಸಾಹೇಬರು ಮಾವಿನಹಣ್ಣಿನ ಹೋಳುಗಳನ್ನು ತಿನ್ನತೊಡಗಿದರು.

ಮಹಿಳೆ ಅಲ್ಲಿಂದ ಹೊರಬಂದಾಗ ಅವಳ ಕೈಯಲ್ಲಿ ಗಾಜಿನ ಗ್ಲಾಸ್ ಇತ್ತು. ಕಣ್ಣುಗಳಲ್ಲಿ ಭಯವೂ ಆವರಿಸಿಕೊಂಡಿತ್ತು. ಸಾಹೇಬರ ಹತ್ತಿರದಲ್ಲಿದ್ದ ಸ್ಟೀಲ್ ಲೋಟವನ್ನು ಎತ್ತಿಕೊಂಡು ಗಾಜಿನ ಗ್ಲಾಸನ್ನು ಆ ಜಾಗದಲ್ಲಿ ಇಟ್ಟಳು.

ಸಲ್ಮಾನ್ ಸಾಹೇಬರು ಒಂದೊಂದೇ ಘಟನೆಯನ್ನು ನೆನಪಿಸಿಕೊಂಡರು. ಬಿಸಿಲಲ್ಲಿ ಬಂದಾಗ ಬೆಲ್ಲದ ಜೊತೆ ಬಂದ ನೀರಿನ ಲೋಟ, ಸಂಜೆ ಚಹಾ ಸೇವಿಸಿದ ಲೋಟ, ಈಗ ಊಟ ಮಾಡುತ್ತಿರುವ ಪ್ಲೇಟು ಇವೆಲ್ಲ ಸ್ಟೀಲಿನದೇ.

ಕ್ಷಣಕಾಲ ಚಿಂತಾಕ್ರಾಂತರಾದರು. ತಮ್ಮ ಪ್ಲೇಟನ್ನೆತ್ತಿಕೊಂಡು ನಳ್ಳಿಯ ಬಳಿಗೆ ಹೋಗಿ ಕುಕ್ಕರುಗಾಲಲ್ಲಿ ಕುಳಿತು ಪಾತ್ರೆ ತೊಳೆಯುವ ಸಿಂಬೆಯನ್ನೆತ್ತಿಕೊಂಡು ಡಿಶ್‌ವಾಶ್ ಬಾರ್‌ಗೆ  ಉಜ್ಜಿ ಉಂಡ ಪ್ಲೇಟನ್ನು ತಿಕ್ಕತೊಡಗಿದರು. ಮಹಿಳೆ ಸ್ವಲ್ಪ ತಿರುಗಿ ಅವರನ್ನು ನೋಡಿದಳಾದರೂ ಕೂಡಲೇ ತನ್ನ ಕೆಲಸದಲ್ಲಿ ತೊಡಗಿಕೊಂಡಳು. ಮಿಶ್ರೀಲಾಲ ಇನ್ನೂ ಬಂದಿರಲಿಲ್ಲ.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT