ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬರಗಾಲವಿರಲ್ಲ; ಬೆಳ್ಳಿ ಮೂರ್ತಿ ನೀಡೋಣ..!’

Last Updated 10 ಜೂನ್ 2017, 19:30 IST
ಅಕ್ಷರ ಗಾತ್ರ

ವಿಜಯಪುರ: ‘ಕಾವೇರಿ–ಕೃಷ್ಣೆಗೆ ಪೂಜೆ ಮಾಡಿ ಬೇಡಿಕೊಂಡ್ವೀನಿ. ಈ ವರ್ಷ ಬರ ಬರಲ್ಲ. ನೀವ್‌ ಚಿಂತಿ ಮಾಡಬ್ಯಾಡ್ರೀ. ಅದ್ಧೂರಿಯಾಗಿ ಕಾರ್ಯಕ್ರಮ ಮಾಡೋಣ. ಮುಖ್ಯಮಂತ್ರಿಗೆ ಅಕ್ಕಮಹಾದೇವಿಯ ಬೆಳ್ಳಿ ಮೂರ್ತಿಯನ್ನೇ ನೆನಪಿನ ಕಾಣಿಕೆಯಾಗಿ ನೀಡೋಣ...’
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರನ್ನು ಹುರಿದುಂಬಿಸಿದ ಪರಿಯಿದು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಈಚೆಗೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನಾಮಕರಣ ಸಮಾರಂಭಕ್ಕೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಯಲ್ಲಿ, ಗಣ್ಯರಿಗೆ ಸ್ಮರಣಿಕೆ ನೀಡುವ ವಿಷಯದ ಚರ್ಚೆಯ ನಡುವೆ ರಾಯರಡ್ಡಿ, ವಿಶ್ವವಿದ್ಯಾಲಯದ ನಿಯಮಾವಳಿಗಳಡಿ ಇದು ಕಷ್ಟ ಸಾಧ್ಯ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ನಮ್ಮೂರಿಗೆ ಬರುವ ಗಣ್ಯರನ್ನು ಸತ್ಕರಿಸುವುದು ನಮ್ಮ ಸಂಸ್ಕೃತಿ. ಸಚಿವರು, ಸಂಸದರಿಗೆ ಸ್ಮರಣಿಕೆಗಳನ್ನು ಉನ್ನತ ಶಿಕ್ಷಣ ಇಲಾಖೆಯಿಂದ ನೀವು ನೀಡಿ. ಸ್ವಾಮೀಜಿಗಳು ಸೇರಿದಂತೆ ಇನ್ನಿತರ ಗಣ್ಯರ ಸತ್ಕಾರ ನಮಗೆ ಬಿಡಿ. ಸ್ಮರಣಿಕೆ ಚಲೋ ಇರಲಿ’ ಎಂದು ಎಂ.ಬಿ.ಪಾಟೀಲ ಹೇಳುತ್ತಿದ್ದಂತೆ, ರಾಯರಡ್ಡಿ ‘ಬರಗಾಲವಿದೆ’ ಎಂಬ ಉದ್ಗಾರ ತೆಗೆದಿದ್ದಕ್ಕೆ ಜಲಸಂಪನ್ಮೂಲ ಸಚಿವರು ಮೇಲಿನಂತೆ ಪ್ರತಿಕ್ರಿಯಿಸಿದರು.

*
ನಮ್ಮೇಲೂ ಡಿಡಿಪಿಐ ದೌರ್ಜನ್ಯ ಮಾಡ್ದಂಗಲ್ವೇ?
ಯಾದಗಿರಿ: ಆಗಾಗ ಸಾಮಾನ್ಯ ಸಭೆಯನ್ನು ಬಹಿಷ್ಕರಿಸುತ್ತಿದ್ದ ಜಿಲ್ಲಾ ಪಂಚಾಯಿತಿ ಸದಸ್ಯರು ಮೊನ್ನೆ ನಿಗದಿಗೊಂಡ ಸಾಮಾನ್ಯ ಸಭೆಗೆ ಹಾಜರಾದರು. ಜಿಲ್ಲಾ ಪಂಚಾಯಿತಿ ಕ್ರಿಯಾಯೋಜನೆ ಕುರಿತು ಅಧ್ಯಕ್ಷರು ಮಾತು ಆರಂಭಿಸುತ್ತಿದ್ದಂತೆ ಸದಸ್ಯರು ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ಆಗಬೇಕು ಎಂಬ ಘೋಷಣೆ ಆರಂಭಿಸಿದರು.

ಮೊದಲು ಶಿಕ್ಷಣ ಇಲಾಖೆಯಲ್ಲಿ ಆಗಿರುವ ಭಾರೀ ಅವ್ಯವಹಾರ ತನಿಖೆಯಾಗಬೇಕು ಎಂದು ಎಲ್ಲರೂ ಪಟ್ಟು ಹಿಡಿದರು. ಅರ್ಧ ಗಂಟೆ ಪ್ರತಿಭಟನೆ ನಡೆಸಿದ ಸದಸ್ಯರು ರೊಚ್ಚಿಗೆದ್ದು, ‘ಸಾಹೇಬ್ರೆ ನಿಮ್ ನಿರ್ಧಾರ ಹೇಳಿ. ಡಿಡಿಪಿಐ ವಿರುದ್ಧ ಕ್ರಮ ಜರುಗಿಸ್ತೀರೋ ಇಲ್ವೋ ತಿಳಿಸಿ’ ಎಂದು ಒತ್ತಾಯಿಸಿದರು.

‘ಯಾವ್ದೇ ವಿಚಾರಣೆ ನಡೆಸದೇ ಕ್ರಮ ಅಸಾಧ್ಯ. ಹಾಗೆ ಮಾಡಿದರೆ ನಾನು ಅವ್ರ ಮೇಲೆ ದೌರ್ಜನ್ಯ ಮಾಡಿದ ಹಾಗಾಗುತ್ತೆ’ ಎಂದು ಸಿಇಒ ಉಲಿದರು.

‘ಅಲ್ರೀ ಸಾಹೇಬ್ರೆ... ನಾವ್‌ ಇಷ್ಟ್ ಮಂದಿ ಡಿಡಿಪಿಐ ವಿರುದ್ಧ ಕ್ರಮ ತಗೋರಿ ಅಂತ ಗೋಳಾಡಕತ್ತೀವಿ. ಯಾಕಂದ್ರ ಅವ್ರು ನಮ್ ಮೇಲೆ ದೌರ್ಜನ್ಯ ಮಾಡಾಕಹತ್ತಾರ ಅಂತ ನಿಮಗೆ ತಿಳೀವಲ್ದೇನು’ ಎಂದು ರೊಚ್ಚಿಗೆದ್ದು, ಮತ್ತೆ ಸಭೆ ಬಹಿಷ್ಕರಿಸಿಬಿಟ್ಟರು.

ಸದಸ್ಯರು ಹೊರಹೋಗುವುದನ್ನೇ ಎದುರು ನೋಡುತ್ತಿದ್ದ ಇತರೆ ಇಲಾಖೆ ಅಧಿಕಾರಿಗಳು ಪ್ರವಾಹ ತಪ್ಪಿಸಿಕೊಂಡವರಂತೆ ನಿಟ್ಟುಸಿರು ಬಿಟ್ಟು ಪತ್ರಕರ್ತರತ್ತ ನಗೆ ಬೀರಿದರು. 

*
ಮೊಬೈಲ್‌ನಲ್ಲೇ ಅಕ್ಷರಾಭ್ಯಾಸಕ್ಕೆ ಸ್ವಾಮೀಜಿ ಒಲವು
ದಾವಣಗೆರೆ:
‘ಮುಂದಿನ ವರ್ಷದಿಂದ ತಟ್ಟೆಯಲ್ಲಿ ಮೊಬೈಲ್‌ ಇಟ್ಟು, ಅದರಲ್ಲೇ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಬಹುದೇನೋ. ನಾವು ಭಾರತೀಯ ಪರಂಪರೆ ಬಿಟ್ಟಂತೆಯೂ ಆಗುವುದಿಲ್ಲ. ಆಧುನಿಕ ತಂತ್ರಜ್ಞಾನ ಬಳಸಿಕೊಂಡಂತೆಯೂ ಆಗುತ್ತದೆ...’

ಇಂಥ ಸಲಹೆ ನೀಡಿದವರು ಯಾವುದೋ ವಿಜ್ಞಾನಿ ಅಲ್ಲ; ಬದಲಾಗಿ ಚಿತ್ರದುರ್ಗ ಜಿಲ್ಲೆಯ ತರಳಬಾಳು ಬ್ರಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ.

ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಶುಕ್ರವಾರ ನಡೆದ ಅಕ್ಷರಾಭ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸ್ವಾಮೀಜಿ, ಮೊಬೈಲ್‌ ಮಹಿಮೆ ಬಗ್ಗೆಯೂ ಪ್ರವಚನ ನೀಡಿದರು.

ಮಕ್ಕಳಿಗೆ ಅಕ್ಷರಾಭ್ಯಾಸ ನಡೆಸಲು ತಾಯಂದಿರು ತಟ್ಟೆಯಲ್ಲಿ ಅಕ್ಕಿ ಇಟ್ಟುಕೊಂಡು ಕಾಯುತ್ತಿದ್ದರೆ, ಮಕ್ಕಳಿಗೆ ಆ ತಟ್ಟೆಗಿಂತ ತಂದೆ– ತಾಯಿಯ ಮೊಬೈಲ್‌ನಲ್ಲಿ ಆಡುವುದೇ ಹೆಚ್ಚು ಆಕರ್ಷಕವಾಗಿರುವುದು ಕಂಡು ಬಂತು. ಹೀಗಾಗಿ ಮುಂದಿನ ಬಾರಿ ಮೊಬೈಲ್‌ನಲ್ಲೇ ಅಕ್ಷರಾಭ್ಯಾಸ ನಡೆಸಿ ಮಕ್ಕಳ ಕುತೂಹಲ ತಣಿಸುವುದು ಒಳಿತು ಎಂದು ಸ್ವಾಮೀಜಿ ನುಡಿದಾಗ ಪಾಲಕರಿಂದ ಕರತಾಡನ ಮೊಳಗಿತು.

ಮಾತು ಮುಂದುವರಿಸಿದ ಸ್ವಾಮೀಜಿ, ಯಾವ ಶಬ್ದಕೋಶದಲ್ಲೂ ಮೊಬೈಲ್‌ ಪದಕ್ಕೆ ಅರ್ಥ ಸಿಗಲಿಲ್ಲ. ಈ ಬಗ್ಗೆ ಫ್ರಾನ್ಸ್‌ನಲ್ಲಿರುವ ಸಂಸ್ಕೃತ ಪ್ರಾಧ್ಯಾಪಕರೊಬ್ಬರನ್ನು ವಿಚಾರಿಸಿದಾಗ ಮೊಬೈಲ್‌ಗೆ ‘ಕರ್ಣ ಪಿಶಾಚಿ’ ಎನ್ನಬಹುದು ಎಂದರು! ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ಮಕ್ಕಳು, ಮಡದಿ ಜೊತೆಗೆ ಮಾತನಾಡುವುದನ್ನು ಬಿಟ್ಟು ಮೊಬೈಲ್‌ನಲ್ಲೇ ಮಾತನಾಡುತ್ತಿರುತ್ತಾರೆ. ಹೀಗಾಗಿಯೇ ಇದಕ್ಕೆ ‘ಕರ್ಣ ಪಿಶಾಚಿ’ ಎಂದಿರಬೇಕು ಎಂದು ಹೇಳಿದಾಗ ಸಭಿಕರು ಪರಸ್ಪರ ಮುಖ ಮುಖ ನೋಡಿಕೊಂಡರು.

ವೈಜ್ಞಾನಿಕ ಉಪಕರಣದ ಸದುಪಯೋಗ – ದುರುಪಯೋಗ ಅದನ್ನು ಬಳಕೆ ಮಾಡುವ ವಿವೇಕವನ್ನು ಆಧರಿಸಿದೆ. ಅಕ್ಷರಾಭ್ಯಾಸವು ಅಂಥ ವಿವೇಕವನ್ನು ಕಲಿಸುತ್ತದೆ ಎಂದು ಸ್ವಾಮೀಜಿ ಪಾಠ ಮಾಡಿದರು.
-ಡಿ.ಬಿ.ನಾಗರಾಜ, ಮಲ್ಲೇಶ್ ನಾಯಕನಹಟ್ಟಿ, ವಿನಾಯಕ ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT