ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ಅಕ್ಕಿ, ಮೊಟ್ಟೆ, ಸಕ್ಕರೆ ಎಲ್ಲುಂಟು?

Last Updated 12 ಜೂನ್ 2017, 5:36 IST
ಅಕ್ಷರ ಗಾತ್ರ

ತುಮಕೂರು: ಈಗ ಎಲ್ಲೆಲ್ಲೂ ಪ್ಲಾಸ್ಟಿಕ್‌ ಅಕ್ಕಿ, ಮೊಟ್ಟೆ, ಸಕ್ಕರೆಯದ್ದೇ ಚರ್ಚೆ. ದಿನಸಿ ಸಾಮಾನು ಖರೀದಿಸಲು ಅಂಗಡಿಗೆ ಹೋಗುವವರಿಗೆ ಅವ್ಯಕ್ತ ಆತಂಕವೂ ಕಾಡಲಾರಂಭಿಸಿದೆ. ‘ಇದು ಪ್ಲಾಸ್ಟಿಕ್‌ ಅಕ್ಕಿಯೇ, ಪ್ಲಾಸ್ಟಿಕ್‌ ಸಕ್ಕರೆಯೇ, ಪ್ಲಾಸ್ಟಿಕ್‌ ಮೊಟ್ಟೆಯೇ?’ ಎಂದು ಸಾಮಾನು ಖರೀದಿಸಿ ಮನೆಗೆ ತರುವಾಗ, ತಂದ ಮೇಲೂ ಚಿಕಿತ್ಸಕ ದೃಷ್ಟಿಯಿಂದ ಪರಿಶೀಲಿಸಿಕೊಳ್ಳುವಂತಾಗಿದೆ.

₹5ಕ್ಕೆ ಒಂದು ಮೊಟ್ಟೆ, ₹30ಕ್ಕೆ ಕೆ.ಜಿ. ಅಕ್ಕಿ, ₹40ಕ್ಕೆ ಕೆ.ಜಿ. ಸಕ್ಕರೆ ಸಿಗುವಾಗ, ನೂರಾರು ರೂಪಾಯಿ ವೆಚ್ಚ ತಗುಲುವ ಕೃತಕ ಅಕ್ಕಿ, ಸಕ್ಕರೆ, ಮೊಟ್ಟೆ ಮಾರುಕಟ್ಟೆಯಲ್ಲಿ ಹೇಗೆ ಲಭ್ಯ? ಎನ್ನುವುದೇ ಈಗ ಯಕ್ಷ ಪ್ರಶ್ನೆ. ಜರನ್ನು ಕಾಡುವ ಈ ಪ್ರಶ್ನೆಗಳಿಗೆ ಉತ್ತರ ನೀಡಲು, ಆತಂಕ, ಗೊಂದಲ ನಿವಾರಿಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ‘ಇದೊಂದು ವದಂತಿ, ಇದಕ್ಕೆ ಯಾರೂ ಕಿವಿಗೊಡಬೇಡಿ’ ಎಂದು ಪ್ರಾಧಿಕಾರದ ಅಧಿಕಾರಿಗಳು ಜನರಿಗೆ ಮನವಿ ಮಾಡಿದ್ದಾರೆ.

ನಗರದ ಮಂಡಿಪೇಟೆ ಮತ್ತು ಅಂತರಸನಹಳ್ಳಿಯಲ್ಲಿ ಇತ್ತೀಚೆಗೆ ಗ್ರಾಹಕರಿಗೆ ಸಿಕ್ಕಿದ್ದ ಪ್ಲಾಸ್ಟಿಕ್‌ ಹೋಲುವ ಸಕ್ಕರೆಯ ಮಾದರಿ ಸಂಗ್ರಹಿಸಿ, ಅಧಿಕಾರಿಗಳು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಮಂಡಿಪೇಟೆಯಲ್ಲಿ ಸಿಕ್ಕಿದ್ದ ಸಕ್ಕರೆ ಮಾದರಿಯ ಪರೀಕ್ಷಾ ವರದಿ ಬಂದಿದ್ದು ‘ಅದು ಪ್ಲಾಸ್ಟಿಕ್‌ ಸಕ್ಕರೆ ಅಲ್ಲ, ನಿಜವಾದ ಸಕ್ಕರೆ’ ಎಂದು ಪ್ರಯೋಗಾಲಯದ ತಜ್ಞರು ದೃಢಪಡಿಸಿರುವುದನ್ನು ಅಧಿಕಾರಿಗಳು ಇತ್ತೀಚೆಗಷ್ಟೆ ಮಾಧ್ಯಮಗಳಿಗೂ ತಿಳಿಸಿದ್ದರು.

ಕೃತಕ ತಯಾರಿಕೆ ಅಸಾಧ್ಯ: ‘ಮೊಟ್ಟೆಯನ್ನು ಕೃತಕವಾಗಿ ಚೀನಾದಲ್ಲಿ ತಯಾರಿಸಲಾಗುತ್ತಿದ್ದು, ನಮ್ಮ ದೇಶದಕ್ಕೆ ರಫ್ತು ಮಾಡಲಾಗುತ್ತಿದೆ. ದೇಶದ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿದೆ ಎನ್ನುವುದು ವದಂತಿಯೇ ಹೊರತು ನಿಜವಲ್ಲ. ನೈಸರ್ಗಿಕ ಮೊಟ್ಟೆಗೆ ಸರಿಸಮನಾದ ಕೃತಕ ಮೊಟ್ಟೆ ತಯಾರಿಸಲು ಸಾಧ್ಯವೇ ಇಲ್ಲ. ತಯಾರಿಕೆ ವೆಚ್ಚ ಒಂದು ಮೊಟ್ಟೆಗೆ ಅಂದಾಜು ₹250 ತಗುಲುತ್ತದೆ. ಆದರೂ ನೈಸರ್ಗಿಕ ಮೊಟ್ಟೆ ಹೋಲುವುದಿಲ್ಲ.

ಇದು ವ್ಯವಹಾರಿಕವಾಗಿಯೂ ಸಾಧ್ಯವಿಲ್ಲ’ ಎಂಬುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿಗಳ ಕಾರ್ಯಾಲಯ ಹೊರಡಿಸಿರುವ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ‘ಚೀನಾದಲ್ಲಿ ತಯಾರಾಗುತ್ತಿದ್ದ ಅಕ್ಕಿ ಹೋಲುವ ಯಾವುದೋ ಪದಾರ್ಥವನ್ನೇ ಕೃತಕ ಅಕ್ಕಿಯೆಂದು ಬಿಂಬಿಸಿ, ದೇಶದ ಮಾರುಕಟ್ಟೆಗೆ ಸರಬರಾಜಾಗುತ್ತಿದೆ ಎಂದು ವದಂತಿ ಹರಡಲಾಗಿದೆ. ಕೃತಕವಾಗಿ 1 ಕೆ.ಜಿ.ಅಕ್ಕಿ ತಯಾರಿಸಲು ಕನಿಷ್ಠ ₹200 ವೆಚ್ಚ ತಗುಲಬಹುದು.

ಆದರೂ ಅಂತಹ ಅಕ್ಕಿ ನೈಸರ್ಗಿಕ ಅಕ್ಕಿಗೆ ಸರಿಸಮಾನಾಗಿ ಭೌತಿಕವಾಗಿ, ರಸಾಯನಿಕ ರಚನಾತ್ಮಕವಾಗಿ ಇರಲು ಸಾಧ್ಯವೇ ಇಲ್ಲ. ಮಾರುಕಟ್ಟೆಯಲ್ಲಿ ಉತ್ತಮ ಅಕ್ಕಿ ಕೆ.ಜಿ. ₹20ರಿಂದ ₹30ಕ್ಕೆ ಸಿಗುತ್ತಿದೆ. ಈಗ ಜನರ ಗೊಂದಲಕ್ಕೆ ಕಾರಣವಾಗಿರುವ ಅಕ್ಕಿ ಕಳಪೆ ಗುಣಮಟ್ಟದ್ದೇ ಹೊರತು, ಕೃತಕ ಪ್ಲಾಸ್ಟಿಕ್‌ ಅಕ್ಕಿ ಅಲ್ಲ ಎನ್ನುವುದು ಪರೀಕ್ಷೆಗಳಿಂದ ದೃಢಪಟ್ಟಿದೆ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

‘ಇನ್ನು ಸಕ್ಕರೆ ವಿಚಾರದಲ್ಲೂ ಇದೇ ರೀತಿ ಗೊಂದಲ ಮೂಡಿಸಲಾಗುತ್ತಿದೆ. ನೈಸರ್ಗಿಕ ಸಕ್ಕರೆ ಬೆಲೆ ಕೆ.ಜಿ.ಗೆ ₹40ರ ಆಸುಪಾಸಿನಲ್ಲಿದೆ. ಸಾಧಾರಣ ಗುಣಮಟ್ಟದ 1 ಕೆ.ಜಿ. ಪ್ಲಾಸ್ಟಿಕ್‌ಗೆ ₹65 ದರ ಇದೆ. ಇದನ್ನು ಕೃತಕವಾಗಿ ಸಕ್ಕರೆಯಾಗಿ ಪರಿವರ್ತಿಸಲು ತಗುಲುವ ಖರ್ಚು ಸೇರಿ, ಇಷ್ಟು ಕಡಿಮೆ ದರದಲ್ಲಿ ಕೃತಕ ಸಕ್ಕರೆ ಮಾರಲು ಸಾಧ್ಯವೇ ಇಲ್ಲ.

ಸಕ್ಕರೆ ದಾಸ್ತಾನು ಮಾಡುವಾಗ ಹಾಳಾಗದಂತೆ ರಕ್ಷಿಸಲು ಆಹಾರ ಇಲಾಖೆ ಮಾರ್ಗಸೂಚಿಯಂತೆ ಸೋಡಿಂ ಸಿಲಿಕೇಟ್‌ ಮತ್ತು ಕ್ಯಾಲ್ಸಿಯಂ ಸಿಲಿಕೇಟ್‌ ರಾಸಾಯನಿಕ ಬಳಸಬಹುದು. ಈ ಎರಡೂ ರಾಸಾಯನಿಕಗಳು ನೀರಿನಲ್ಲಿ  ಕರಗುವುದಿಲ್ಲ. ಇವನ್ನೇ ಕೆಲವರು ಕೃತಕ ಸಕ್ಕರೆಯೆಂದು ಬಿಂಬಿಸಿರಬಹುದು’ ಎನ್ನುವುದು ಅಧಿಕಾರಿಗಳ ಅನಿಸಿಕೆ.

ನಿಜಾಂಶವಿದ್ದರೆ ಅದು ಭಯೋತ್ಪಾದನೆಗೆ ಸಮ
‘ಪ್ಲಾಸ್ಟಿಕ್‌ ಅಕ್ಕಿ, ಸಕ್ಕರೆ, ಮೊಟ್ಟೆ ತಯಾರಿಸಿ ಮಾರುಕಟ್ಟೆಗೆ ಬಿಟ್ಟು ಯಾರಾದರೂ ಲಾಭ ಗಳಿಸುವುದು ಉಂಟೇ? ಇದು ಅಸಾಧ್ಯವಾದ ಕೆಲಸ. ಇವು ವದಂತಿಗಳು ಎನ್ನುವುದರಲ್ಲಿ ಸಂಶಯವಿಲ್ಲ. ಹಾಗೊಂದು ವೇಳೆ ಜನರು ಮಾತನಾಡಿಕೊಳ್ಳುತ್ತಿರುವಂತೆ, ಚೀನಾದಲ್ಲಿ ತಯಾರಾಗುತ್ತಿವೆ ಎನ್ನಲಾದ ಪ್ಲಾಸ್ಟಿಕ್‌ ಅಕ್ಕಿ, ಪ್ಲಾಸ್ಟಿಕ್‌ ಮೊಟ್ಟೆ ಹಾಗೂ ಪ್ಲಾಸ್ಟಿಕ್‌ ಸಕ್ಕರೆ ನಮ್ಮ ದೇಶಕ್ಕೆ ಕಳ್ಳಮಾರ್ಗದಲ್ಲಿ ಬರುತ್ತಿವೆ.

ದೇಶದ ಅರ್ಥ ವ್ಯವಸ್ಥೆ ಮತ್ತು ದಿನಸಿ ಪದಾರ್ಥಗಳ ಗುಣಮಟ್ಟ ಹಾಳುಗೆಡುವ ಹುನ್ನಾರ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ ಎನ್ನುವ ತರ್ಕಗಳಲ್ಲಿ ನಿಜಾಂಶವಿದ್ದರೆ, ಅದು, ಸದ್ದಿಲ್ಲದೆ ನಮ್ಮ ದೇಶದ ಮೇಲೆ ನಡೆಯುತ್ತಿರುವ ಆರ್ಥಿಕ ಮತ್ತು ಆಹಾರ ಸಂಸ್ಕೃತಿಯ ಮೇಲಿನ ಅತಿ ದೊಡ್ಡ ಭಯೋತ್ಪಾದನೆ’ ಎನ್ನುತ್ತಾರೆ ಹೆಸರು ಹೇಳ ಬಯಸದ ತೂಕ ಮತ್ತು ಅಳತೆ ಮಾಪನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

‘ರಸ್ತೆ ಬದಿ ತಳ್ಳುಗಾಡಿ, ರೆಸ್ಟೊರೆಂಟ್‌ಗಳಲ್ಲಿ ದೊರೆಯುತ್ತಿದ್ದ ಚೀನಾ ಆಹಾರ, ತಿನಿಸುಗಳಲ್ಲಿ ಟೇಸ್ಟಿಂಗ್‌ ಫೌಡರ್‌ ಯಥೇಚ್ಛವಾಗಿರುತ್ತಿತ್ತು. ಆನಂತರ ಎಲ್ಲ ಹೋಟೆಲ್‌, ಮನೆಗಳ ಅಡುಗೆ ಕೋಣೆಗಳಿಗೆ ಟೇಸ್ಟಿಂಗ್‌ ಫೌಡರ್‌ ಕಾಲಿಟ್ಟಿತ್ತು. ಈ ನಿಧಾನ ವಿಷ ಈಗ ಸದ್ದಿಲ್ಲದೇ ಇಡೀ ದೇಶ ಆವರಿಸಿದೆ. ಮನುಷ್ಯನನ್ನು ನಿಧಾನವಾಗಿ ಕೊಲ್ಲುವ ವಿಷವೆನಿಸಿದ ಟೇಸ್ಟಿಂಗ್‌ ಫೌಡರ್‌ ಕ್ಯಾನ್ಸರ್‌, ಹೃದಯಾಘಾತಕ್ಕೆ ಕಾರಣವಾಗುತ್ತಿದೆ.

ಅಡುಗೆ ರುಚಿಯಾಗುತ್ತಿದ್ದಾಗ ಟೇಸ್ಟಿಂಗ್‌ ಫೌಡರ್‌ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಈಗ ಆರೋಗ್ಯ ಕೈಕೊಡುತ್ತಿರುವಾಗ ಎಲ್ಲರೂ ಟೇಸ್ಟಿಂಗ್‌ ಫೌಡರ್‌ ಅಪಾಯದ ಬಗ್ಗೆ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಆತಂಕ ಮತ್ತು ಗೊಂದಲ ಮೂಡಿಸಿರುವ ಚೀನಾದ್ದು ಎನ್ನಲಾಗುತ್ತಿರುವ ಕೃತಕ ಆಹಾರ ಪದಾರ್ಥಗಳ ಬಗ್ಗೆ ಎಚ್ಚರ ವಹಿಸಲೇಬೇಕಿದೆ ಎನ್ನುತ್ತಾರೆ ಅವರು.

ಅಂಕಿ–ಅಂಶ
₹250 ಒಂದು ಕೃತಕ ಮೊಟ್ಟೆ ಅಂದಾಜು ಬೆಲೆ

₹250 ಒಂದು ಕೃತಕ ಮೊಟ್ಟೆ ಅಂದಾಜು ಬೆಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT