ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಿದಿರಾ ಮೋಡಿ ಆಟದ ಮಜಾ?

Last Updated 12 ಜೂನ್ 2017, 19:30 IST
ಅಕ್ಷರ ಗಾತ್ರ

–ಮಯೋರಾ

***

ಆ ಗ್ರಾಮದ ಮುಖ್ಯ ಬೀದಿಯಲ್ಲಿ ಭಾರಿ ಜನಜಂಗುಳಿ ಸೇರಿತ್ತು. ಸುತ್ತಲೂ ನಿಂತಿದ್ದ ಟ್ರ್ಯಾಕ್ಟರ್‌ಗಳಲ್ಲೂ ಜನವೋ ಜನ. ನಡುವೆ ವಿವಿಧ ವೇಷಧಾರಿಗಳು ಕುಣಿಯುತ್ತಿದ್ದರು. ಕೆಲವರು ಹೆಣ್ಣಿನ ಉಡುಪು ಧರಿಸಿ ವಿಚಿತ್ರವಾಗಿ ಮಾತಾಡುತ್ತಿದ್ದರು. ಒಂಥರಾ ಕುಣಿತ, ಮೈಯಲ್ಲಿ ದೇವರು ಬಂದಂತೆ ಜಿಗಿದಾಟ. ಅದೇನೆಂದು ಕೇಳಿದಾಗ ಗುಂಪಿನಲ್ಲಿ ಇದ್ದವರು ‘ಅಷ್ಟೂ ಗೊತ್ತಾಗಲ್ಲೇನು, ಮೋಡಿ ಆಟದ ಮಜಾ’ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು.

ಕೆಲವರ ಕೈಯಲ್ಲಿ ಬೇವಿನ ಸೊಪ್ಪು, ಬೂದಿ ಇದ್ದರೆ, ಮತ್ತೆ ಕೆಲವರು ಕೈಯಲ್ಲಿ ಎಡಮೂರಗಿ ಬಳ್ಳಿಬೆತ್ತ ಹಿಡಿದು ಅತ್ತಿಂದಿತ್ತ ಇತ್ತಿಂದತ್ತ ಅಲೆಯುತ್ತಾ ಏನೋ ಸನ್ನೆ ಮಾಡುತ್ತಾ ಆಟಕ್ಕೆ ಕಳೆ ತರುತ್ತಿದ್ದರು. ಗುಂಪಿನಲ್ಲಿ ಮತ್ತೆ ಇಬ್ಬರು ಮೈಅಲುಗಾಡಿಸುತ್ತಾ ಹಲಗೆ ಬಾರಿಸುವ ದೃಶ್ಯ ಗಮನ ಸೆಳೆಯಿತು.

ಬಾದಾಮಿ ತಾಲ್ಲೂಕಿನ ನಂದಕೇಶ್ವರ ಗ್ರಾಮದಲ್ಲಿ ನಡೆದ ಈ ‘ಮೋಡಿ’ ಆಟ ನೋಡಲು ಅಪಾರ ಜನಸಮೂಹವೇ ನೆರೆದಿತ್ತು. ಚೌಕಾಕಾರದ ಬಯಲು ಜಾಗದಲ್ಲಿ ಈ ಆಟದ ಖದರ್ ನಡೆಯುತ್ತದೆ. ಖಾಲಿ ಜಾಗದಲ್ಲಿ ವಿವಿಧ ಬಣ್ಣಗಳಿಂದ ಸುಮಾರು ಐದು ರಂಗ ಹೊಯ್ದಿರುತ್ತಾರೆ. ಪ್ರತಿ ರಂಗದಲ್ಲಿ ಲಿಂಬೆಹಣ್ಣು, ಕಾಯಿ, ತತ್ತಿ, ನೀರು ತುಂಬಿದ ಗಡಿಗೆಯಲ್ಲಿ ಕಳ್ಳಿಬಳ್ಳಿ, ಕುಂಬಳಕಾಯಿ ಹೀಗೆ ಒಂದೊಂದು ವಿಧದ ವಸ್ತುಗಳನ್ನಿಟ್ಟು ಆಟ ಆಡುವುದು ‘ಮೋಡಿ’ ಆಟದ ವಿಶೇಷ.

ಈ ಆಟದಲ್ಲಿ ಎರಡು ಗುಂಪುಗಳಿದ್ದು, ಒಂದು ರಂಗದಲ್ಲಿದ್ದ ವಸ್ತುವನ್ನು ಬೇಧಿಸಿ ತರುವುದು ಮತ್ತು ಈ ವಸ್ತುವನ್ನು ಬೇಧಿಸಿ ಒಯ್ಯುವವನನ್ನು ಕಾಯುವುದು ಈ ಆಟದ ವಿಶೇಷ. ಆದರೆ ರಂಗದಲ್ಲಿನ ವಸ್ತು ಕದಿಯಬಾರದು ಎಂದು ಇನ್ನೊಂದು ಗುಂಪು ಅವರನ್ನು ಹಿಮ್ಮೆಟ್ಟಿಸಿ ಏನೋ ವಿಚಿತ್ರ ಮಂತ್ರ ಹಾಕಿ ಕೈಯಲ್ಲಿನ ಸೊಪ್ಪನ್ನು ಎರಚುತ್ತಾರೆ. ಆಗ ರಂಗದಲ್ಲಿನ ವಸ್ತುವನ್ನು ಬಾಯಿಯಿಂದ ಒಯ್ಯುವವ ಮೂರ್ಛೆ ಬಂದು ಬಿದ್ದಂತೆ ಮಾಡುತ್ತಾನೆ. ಹೀಗೆ ಆಟ ಪ್ರತಿಯೊಂದು ರಂಗದ ವಸ್ತುವನ್ನು ಕದಿಯುವ ತನಕ ನಡೆಯುತ್ತದೆ.

ಐದು ರಂಗದ ಎದುರು ದೇವಿ ರೂಪವಾಗಿ ಮಣ್ಣು ಮೂರ್ತಿಯನ್ನು ಪ್ರತಿಷ್ಠಾಪಿಸಿರುತ್ತಾರೆ. ಅದಕ್ಕೆ ಕಾಳಮ್ಮ, ಶಕ್ತಿದೇವಿ ಎಂದೆಲ್ಲಾ ಕರೆಯುತ್ತಾರೆ. ‘ಮೋಡಿ’ ಮಾಡಿ ಮೈಮರೆಸಿ ರಂಗದಲ್ಲಿನ ವಸ್ತು ಕದಿಯುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ. ರಂಗ ಪ್ರವೇಶಿಸಿ ವಸ್ತು ಒಯ್ಯುವ ಸಂದರ್ಭದಲ್ಲಿ ಅದನ್ನು ಬಚಾವ್ ಮಾಡಲು ಇನ್ನೊಂದು ಗುಂಪಿನವರು ದೇವಿ ಎದುರಿನ ಸೊಪ್ಪು, ಬೂದಿಯನ್ನು ಎರಚಿ ಅದನ್ನು ಬಿಡಿಸುವ ಪರಿ ರೋಮಾಂಚನಕಾರಿ.

ಮೋಡಿಕಾರರಾಗಿ ‘ಮೋಡಿ’ ಮಾಡಿ ರಂಗ ಬೇಧಿಸಿ ವಸ್ತು ಕದ್ದೊಯ್ಯುವ ಕಾಯಕದಲ್ಲಿ ಶಿವಪ್ಪ ಕೋಟೆಕಲ್ಲ ತಂಡವಿದ್ದರೆ, ಇವರ ವಿರೋಧಿ, ಅಂದರೆ ರಂಗದಲ್ಲಿ ವಸ್ತು ಗಾಯಬ್ ಆಗದಂತೆ ಕಾಯುವಲ್ಲಿ ಮಲ್ಲಪ್ಪ ಕರಸಪ್ಪನ್ನವರ ತಂಡವಿತ್ತು. ಎರಡೂ ಗುಂಪಿನಲ್ಲಿ ಒಬ್ಬೊಬ್ಬರು ಹೆಣ್ಣಿನ ವೇಷ ಧರಿಸಿದವರಿದ್ದು ಆಟಕ್ಕೆ ಕಳೆ ಕಟ್ಟಿದ್ದರು.

ನಂದಕೇಶ್ವರ ಗ್ರಾಮದ ಈ ಮೋಡಿ ಆಟಗಾರರು ಸರಿಸುಮಾರು 60 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು. ‘ಸುಮಾರು 30 ವರ್ಷಗಳಿಂದ ಮೋಡಿ ಆಟ ಆಡುತ್ತಿದ್ದೇವೆ. ಗ್ರಾಮದಲ್ಲಿ ಮಳೆ, ಬೆಳೆ ಸುಸೂತ್ರವಾಗಿ ಆಗಲಿ, ಸಂತಸ ನೆಮ್ಮದಿ ನೆಲೆಸಿರಲಿ. ಗ್ರಾಮದ ವಸ್ತುಗಳು ಕಳ್ಳತನವಾಗದಿರಲಿ ಎನ್ನುವ ಉದ್ದೇಶದಿಂದ ಹಬ್ಬ ಹುಣ್ಣಿಮೆ ಸಂದರ್ಭದಲ್ಲಿ ಈ ಮೋಡಿಕಾರ ಆಟ ಆಡುತ್ತೇವೆ’ ಎನ್ನುತ್ತಾರೆ ಕೋಟೆಕಲ್ಲ.

ಇತ್ತೀಚಿನ ದಿನಗಳಲ್ಲಿ ಮೋಡಿಕಾರ ಆಟ ಕಡಿಮೆ ಆಗುತ್ತಿದ್ದು, ಈ ಗ್ರಾಮೀಣ ಸಂಪ್ರದಾಯ ಎಲ್ಲಿ ಕಣ್ಮರೆಯಾಗುವುದೋ ಎಂಬ ಭೀತಿ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT