ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಗೋ ತಗೊಳ್ಳಿ ಅರ್ಕಾ ಈರುಳ್ಳಿ!

Last Updated 12 ಜೂನ್ 2017, 19:30 IST
ಅಕ್ಷರ ಗಾತ್ರ

ಸುಮಾರು 40 ಮಂದಿ ರೈತರು ಸಹಕಾರ ತತ್ವದಡಿ ಅತಿ ಕಡಿಮೆ ನೀರು ಬಳಸಿ ಅರ್ಕಾ ಕಲ್ಯಾಣ ತಳಿಯ ಈರುಳ್ಳಿ ಬೀಜೋತ್ಪಾದನೆ ಮಾಡಿದ್ದು, ಮಾದರಿ ಹೆಜ್ಜೆಯಿಟ್ಟ ಕಥೆಯಿದು. ‘ಕಡಿಮೆ ನೀರಿನಲ್ಲೂ ಅಧಿಕ ಪ್ರಮಾಣದ ಈರುಳ್ಳಿ ಬೀಜೋತ್ಪಾದನೆ ಆಗಿರುವುದು ನಮಗೆ ಆನಂದವನ್ನುಂಟು ಮಾಡಿದೆ’ ಎನ್ನುತ್ತಾರೆ ಈ ಸಾಧನೆ ಮಾಡಿದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಹೊಸಕುಂದೂರು ಗ್ರಾಮದ ರೈತರು.

ಕಳೆದ ಮುಂಗಾರು ಹಂಗಾಮಿನಲ್ಲಿ ಈ ಗ್ರಾಮದ ಐವತ್ತು ಮಂದಿ ರೈತರು ಈರುಳ್ಳಿ ಬೀಜೋತ್ಪಾದನೆ ಕುರಿತು ತಜ್ಞರಿಂದ ಸಲಹೆ ಹಾಗೂ ಮಾರ್ಗದರ್ಶನ ಪಡೆಯಲು ಹಿರಿಯೂರು ಬಬ್ಬೂರು ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಕೃಷಿ ತಜ್ಞರು ಕಡಿಮೆ ನೀರು ಬಳಸಿ ಹೆಚ್ಚಿನ ಆದಾಯ ತಂದುಕೊಡುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ ಅರ್ಕಾ ಕಲ್ಯಾಣ ತಳಿಯ ಈರುಳ್ಳಿ ಬೀಜೋತ್ಪಾದನೆ ವಿಧಾನವನ್ನು ಅವರಿಗೆ ಪರಿಚಯಿಸಿದ್ದರು.

ಆಗ ಎಲ್ಲ ರೈತರಿಗೆ ತಲಾ ಎರಡು ಕೆ.ಜಿಯಂತೆ ಈರುಳ್ಳಿ ಬೀಜವನ್ನು ಕೃಷಿ ವಿಜ್ಞಾನ ಕೇಂದ್ರದವರು ವಿತರಿಸಿದ್ದರು. ಈರುಳ್ಳಿ ಗೆಡ್ಡೆ ಹಾಗೂ ಬೀಜೋತ್ಪಾದನೆ ಮಾಡುವ ಕುರಿತು ತಜ್ಞರಿಂದ ತರಬೇತಿ ಪಡೆದ ನಂತರ ಬೀಜ ಬಿತ್ತನೆ ಮಾಡಿ, ಇಳುವರಿ ತೆಗೆದರು. ನಂತರ ಕಟಾವು ಮಾಡಿದ 30ರಿಂದ 35 ಗ್ರಾಂ ತೂಕದ ಈರುಳ್ಳಿ ಗೆಡ್ಡೆಯನ್ನು ಬೀಜೋತ್ಪಾದನೆಗೆ ಇಟ್ಟುಕೊಂಡು ದೊಡ್ಡ ಹಾಗೂ ಸಣ್ಣಗೆಡ್ಡೆಯನ್ನು ಮಾರಾಟ ಮಾಡಿದರು. ಅದರಿಂದಲೂ ಕೈತುಂಬಾ ಆದಾಯ ಗಳಿಸಿದರು.

ಬೀಜೋತ್ಪಾದನೆ ವಿಧಾನ: ಬೀಜೋತ್ಪಾದನೆಯ ಗೆಡ್ಡೆಯನ್ನು ಒಂದು ತಿಂಗಳು ನೆರಳಿನಲ್ಲಿ ಇಟ್ಟಿದ್ದೆವು. ಜಮೀನಿನಲ್ಲಿ ಕೊಟ್ಟಿಗೆ ಗೊಬ್ಬರ ಚೆಲ್ಲಿ ಹಸನು ಮಾಡಿದ್ದೆವು. ಕೃಷಿ ತಜ್ಞರ ಸಲಹೆಯಂತೆ ಲಘು ಪೋಷಕಾಂಶಗಳಾದ ಜಿಂಕ್‌, ಬೋರಾನ್‌, ಜಿಪ್ಸಂ, ವ್ಯಾಮ್‌, ಬೋರ್‌್ಯಾಕ್ಸ್‌, ಟ್ರೈಕೋಡರ್ಮಾ ಗೊಬ್ಬರವನ್ನು ಜಮೀನಿಗೆ ಹಾಕಿದ್ದೆವು. ಹನಿ ನೀರಾವರಿ ಪದ್ಧತಿ ಅನುಸರಿಸಿ ಆರು ಅಂಗುಲ ಅಂತರದಲ್ಲಿ ಈರುಳ್ಳಿ ಗೆಡ್ಡೆ ಊರಿದ್ದೆವು ಎಂದು ಆನಂದಪ್ಪ ವಿವರಿಸುತ್ತಾರೆ.

ಬೆಳೆ ನಾಟಿ ಮಾಡಿದ ಹದಿನೈದು ದಿನಕ್ಕೆ ಕ್ಲೋರೋಪರಿಪಸ್‌, ಮತ್ತೆ ಹತ್ತು ದಿನದ ನಂತರ ಕಾನ್‌ಫಿಡರ್‌, ರೀಜೆಂಟಾ ಸಿಂಪಡಣೆ ಮಾಡಿದೆವು. 15 ದಿನದ ನಂತರ ರೋಗರ್‌ ಕವಚ್‌ ಔಷಧವನ್ನು ನೀಡಲಾಯಿತು. ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಇರುವುದರಿಂದ ಹೆಚ್ಚು ಔಷಧ ಸಿಂಪಡಣೆ ಮಾಡಲಿಲ್ಲ ಎಂದು ರಾಜಪ್ಪ ಹೇಳುತ್ತಾರೆ.

ಬೆಳೆಯ ಕಳೆ ತೆಗೆಸುವುದು, ಕೀಟನಾಶಕ ಔಷಧಿ ಸಿಂಪಡಣೆ ಮಾಡುವುದು ಸೇರಿದಂತೆ ಈರುಳ್ಳಿ ಬೀಜೋತ್ಪಾದನೆಯ ಗೆಡ್ಡೆ ಊಣಿದಾಗಿನಿಂದ ಹಿಡಿದು ಕಟಾವು ಮಾಡುವ ಹೊತ್ತಿಗೆ ಒಂದು ಎಕರೆಗೆ ₹ 70ರಿಂದ 80 ಸಾವಿರ ವೆಚ್ಚವಾಗುತ್ತದೆ.

ಒಂದು ಎಕರೆಗೆ ಸುಮಾರು ನಾಲ್ಕು ಕ್ವಿಂಟಲ್‌ ಈರುಳ್ಳಿ ಬೀಜ ಉತ್ಪಾದನೆ ಆಗುತ್ತದೆ. ಪ್ರತಿ ಕೆ.ಜಿಗೆ ₹ 1,500ರಂತೆ ಬೆಲೆ ಸಿಕ್ಕರೂ ಒಟ್ಟು ಲಕ್ಷಾಂತರ ರೂಪಾಯಿ ಆದಾಯ ಸಿಗುತ್ತದೆ. ಒಂದೂವರೆ ಇಂಚು ನೀರಿನಲ್ಲಿ ಬೆಳೆದಿರುವ ಅರ್ಕಾ ಕಲ್ಯಾಣ ತಳಿ ಬೀಜ ನಮಗೆ ಸಂತಸವನ್ನುಂಟು ಮಾಡಿದೆ. ಕಾರಣ ಈ ಹಿಂದೆ ನೀರು ಹಾಯಿಸುವ ಮೂಲಕ ನಾಟಿ ತಳಿಯ ಈರುಳ್ಳಿ ಬೀಜೋತ್ಪಾದನೆ ಮಾಡುತ್ತಿದ್ದೆವು. ಹೆಚ್ಚು ನೀರು, ಹಣ ಹಾಗೂ ಶ್ರಮ ವಿನಿಯೋಗಿಸುತ್ತಿದ್ದೆವು. ಆದರೆ ಆದಾಯಕ್ಕಿಂತ ಕೈಸುಟ್ಟುಕೊಂಡಿದ್ದೇ ಹೆಚ್ಚು ಎನ್ನುತ್ತಾರೆ ಬೆಳೆಗಾರ ರೇವಣ್ಣ.

ಅರ್ಕಾ ಕಲ್ಯಾಣ ತಳಿಯ ಈರುಳ್ಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಇದೆ. ಕೀಟಬಾಧೆ ನಿಯಂತ್ರಣಕ್ಕೆ ಈರುಳ್ಳಿ ಬೀಜೋತ್ಪಾದನೆ ಹೊಲದ ಸುತ್ತಲೂ ಬೆಳೆಯಾಗಿ ಒಂದು ಸಾಲು ಮೆಕ್ಕೆಜೋಳ ಬೆಳೆಯಲಾಗುತ್ತದೆ. ಇದರಿಂದ ಹೊರಗಿನಿಂದ ಬರುವ ಕೀಟಗಳು ಮೆಕ್ಕೆಜೋಳದ ಮೇಲೆ ಕೂರುವುದರಿಂದ ಈರುಳ್ಳಿಗೆ ಶೇ 50ರಷ್ಟು ಕೀಟಬಾಧೆ ನಿಯಂತ್ರಣವಾಗುತ್ತದೆ. ಹಾಗೆಯೇ ಮೆಕ್ಕೆಜೋಳದ ದಂಟು ಜಾನುವಾರುಗಳಿಗೆ ಮೇವಾಗುತ್ತದೆ. ಬರುವ ಗುಣಮಟ್ಟದ ಮೆಕ್ಕೆಜೋಳನ್ನು ಮಾರಾಟ ಮಾಡುವುದರಿಂದ ಅದರಿಂದಲೂ ಆದಾಯ ಬರುತ್ತದೆ.

ಬೀಜಕ್ಕೆ ಬೇಡಿಕೆ: ‘ನಾವು ಸುಮಾರು 20 ವರ್ಷಗಳಿಂದಲೂ ನಾಟಿ ಈರುಳ್ಳಿ ಬೀಜೋತ್ಪಾದನೆ ಮಾಡುತ್ತಿದೆವು. ಈ ಅರ್ಕಾ ಕಲ್ಯಾಣ ತಳಿಯಂತೆ ಈರುಳ್ಳಿ ಬೀಜ ಇಳುವರಿ ಬರುತ್ತಿರಲಿಲ್ಲ. ಎಕರೆಗೆ ಎರಡು ಕ್ವಿಂಟಲ್‌ನಷ್ಟು ಉತ್ಪಾದನೆ ಆಗುತ್ತಿತ್ತು. ಅಷ್ಟೇ ಅಲ್ಲದೆ ನಾಟಿ ಈರುಳ್ಳಿ ಬೀಜಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇರಲಿಲ್ಲ. ಬೆಳೆದ ಈರುಳ್ಳಿ ಬೀಜ ಮಾರಾಟ ಮಾಡುವುದು ಕಷ್ಟವಾಗುತ್ತಿತ್ತು. ಆದರೆ  ಅರ್ಕಾ ಕಲ್ಯಾಣ ತಳಿಯ ಬೀಜ ಗುಣಮಟ್ಟದಿಂದ ಇರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಗೆ ಇದೆ’ ಎನ್ನುತ್ತಾರೆ ಶಿವಕುಮಾರ್.

ನಾಟಿ ಈರುಳ್ಳಿ ಬೀಜೋತ್ಪಾದನೆಯನ್ನು ನೀರು ಹಾಯಿಸುವ ಮೂಲಕ ಬೆಳೆಯುತ್ತಿದೆವು. ಬೇಸಿಗೆಯಲ್ಲಿ ಅರ್ಧ ಎಕರೆಯಲ್ಲಿ ಈರುಳ್ಳಿ ಬೀಜೋತ್ಪಾದನೆ ಮಾಡಲು ಬೋರ್‌ವೆಲ್‌ನಲ್ಲಿ ಎರಡೂವರೆ ಇಂಚು ನೀರಿದ್ದರೂ ಸಾಕಾಗುತ್ತಿರಲಿಲ್ಲ. ಆದರೆ ಹನಿ ನೀರಾವರಿ ಪದ್ಧತಿ ಅನುಸರಿಸಿ ಕೇವಲ ಒಂದೂವರೆ ಇಂಚು ನೀರಿನಲ್ಲಿ ಅರ್ಧ ಎಕರೆ ಅರ್ಕಾ ಕಲ್ಯಾಣ ತಳಿ ಈರುಳ್ಳಿ ಬೀಜೋತ್ಪಾದನೆ ಮಾಡಲಾಗಿದೆ. ಬೆಳೆಯು ಸಮೃದ್ಧವಾಗಿ ಬಂದಿರುವುದು ಸಂತಸವನ್ನುಂಟು ಮಾಡಿದೆ ಎನ್ನುತ್ತಾರೆ ಬೆಳೆಗಾರರಾದ ರವೀಂದ್ರ, ತೇಜಪ್ಪ.
ಮಾಹಿತಿಗೆ: 90085 55454

**

ಕೃಷಿ ತಂತ್ರಜ್ಞರಿಂದ ನೆರವು
ಅರ್ಕಾ ಕಲ್ಯಾಣ ತಳಿ ನಾಟಿ ಮಾಡುವಾಗ 30ರಿಂದ 35 ಗ್ರಾಂ ಈರುಳ್ಳಿ ಗೆಡ್ಡೆಯನ್ನು ರೈತರು ಆಯ್ಕೆ ಮಾಡಿಕೊಳ್ಳಬೇಕು. ನುಸಿಬಾಧೆಯನ್ನು ಪ್ರಾರಂಭಿಕ ಹಂತದಲ್ಲಿಯೇ ನಿಯಂತ್ರಿಸಲು ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಬೆಳೆ ಹೂವಿನ ಹಂತದಲ್ಲಿ ಇರುವಾಗ ಜೇನು ನೊಣಗಳ ಪರಾಗಸ್ಪರ್ಶ ಹೆಚ್ಚು ಆಗಬೇಕು. ಇದರಿಂದ ಈರುಳ್ಳಿ ಕಾಳು ಗಟ್ಟಿಯಾಗುವ ಜತೆಗೆ ಇಳುವರಿಯೂ ಹೆಚ್ಚಾಗುತ್ತದೆ. ಈ ತಳಿಯ ಬೀಜೋತ್ಪಾದನೆ ಮಾಡುವ ರೈತರಿಗೆ ಮೂರು ಜೇನಿನ ಪೆಟ್ಟಿಗೆ, ಹನಿ ನೀರಾವರಿ ಉಪಕರಣ, ಜೈವಿಕ ಕೀಟನಾಶಕಗಳಾದ ಟ್ರೈಕೊಡರ್ಮ ಹಾಗೂ ಸುಡೋಮೋನಸ್ ಸೂಕ್ಷ್ಮಾಣು ಜೀವಾಣು ವಿತರಿಸಲಾಗಿದೆ ಎನ್ನುತ್ತಾರೆ ಹಿರಿಯೂರಿನ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಪ್ರಕಾಶ್‌ ಕೆರೂರೆ.

ಮಾರುಕಟ್ಟೆ ಸೌಲಭ್ಯ: ಅರ್ಕಾ ಕಲ್ಯಾಣ ಈರುಳ್ಳಿ ಬೀಜೋತ್ಪಾದನೆ ಕುರಿತು ಮಾಹಿತಿ ನೀಡಲು ಬೀರೇನಹಳ್ಳಿಯಲ್ಲಿ ರೈತಕ್ಷೇತ್ರ ಪಾಠಶಾಲೆ ಇದೆ. ಈ ತಳಿಯ ಈರುಳ್ಳಿ ಬೀಜೋತ್ಪಾದನೆ ಮಾಡಿದ ರೈತರು ಈರುಳ್ಳಿ ಬೀಜೋತ್ಪಾದನೆ ಸಂಘ ರಚಿಸಿಕೊಳ್ಳಬೇಕು. ಅದನ್ನು ಕೃಷಿ ವಿಜ್ಞಾನ ಸಂಸ್ಥೆಯಲ್ಲಿ ನೋಂದಣಿ ಮಾಡಿಸಿದಲ್ಲಿ ಇಲಾಖೆ ವತಿಯಿಂದ ರೈತರಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುವುದು ಎನ್ನುತ್ತಾರೆ ಹಿರಿಯೂರಿನ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎಸ್‌.ಬಿ.ಸಾಲಿಮಠ.
ಬೀಜದ ಮಾಹಿತಿಗೆ: 8193 289160, 94808 38201

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT