ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಭಾರತಕ್ಕೆ ಹೊಸ ಪರಿಭಾಷೆ

‘ನಗರಗಳಿಗೆ ವಾಸಯೋಗ್ಯತೆಯ ಅಂಕ ನೀಡುವುದು ನಮ್ಮ ಮುಂದಿನ ಹೆಜ್ಜೆ...’
Last Updated 12 ಜೂನ್ 2017, 19:30 IST
ಅಕ್ಷರ ಗಾತ್ರ

l ಎಂ. ವೆಂಕಯ್ಯ ನಾಯ್ಡು
ಝುಂಜುನು ಎನ್ನುವುದು ರಾಜಸ್ತಾನದ ಒಂದು ಶಾಂತ ನಗರ. ಇಲ್ಲಿನ ಜನಸಂಖ್ಯೆ 1.18 ಲಕ್ಷ. ಆದಾಯ ಸಂಗ್ರಹ ಹಾಗೂ ಸಂಪನ್ಮೂಲ ನಿರ್ವಹಣೆಯಲ್ಲಿ ತಾನು ಯಾವ ಸ್ಥಾನದಲ್ಲಿ ಇದ್ದೇನೆ ಎಂಬುದನ್ನು ಗೊತ್ತುಮಾಡಿಕೊಳ್ಳಬೇಕಾದ ಸ್ಥಿತಿ ಇಲ್ಲಿನ ನಗರ ಪಂಚಾಯಿತಿಗೆ ಒಂದು ದಿನ ಎದುರಾಯಿತು. ಇದನ್ನು ಗೊತ್ತುಮಾಡಲು ಇದ್ದ ಉತ್ತಮ ಮಾರ್ಗ ಎಂದರೆ ಕ್ರೆಡಿಟ್ ರೇಟಿಂಗ್ ಮೊರೆ ಹೋಗುವುದು. ಅದನ್ನು ಮಾಡಿಸಲಾಯಿತು.

ಈ ನಗರಕ್ಕೆ ‘ಎ’ ಮಾನ್ಯತೆ ದೊರೆಯಿತು. ಹೂಡಿಕೆಗೆ ಪೂರಕವಾದ ಶ್ರೇಣಿ ಇದು. ಹೊರಜಗತ್ತಿಗೆ ಅಷ್ಟೇನೂ ಗೊತ್ತಿರದ ಆಂಧ್ರಪ್ರದೇಶದ ಕರ್ನೂಲ್, ಕರ್ನಾಟಕದ ಬೆಳಗಾವಿ, ಒಡಿಶಾದ ಕಟಕ್ ಮತ್ತು ಜಾರ್ಖಂಡ್ ರಾಜ್ಯದ ರಾಂಚಿ ನಗರಗಳು ಕೂಡ ಇದೇ ಮಾದರಿಯಲ್ಲಿ ಶ್ರೇಣಿ ಪಡೆದವು.

ಎಎ+ ಶ್ರೇಣಿಯನ್ನು ಪಡೆದ ನವದೆಹಲಿ ಪುರಸಭೆ, ನವಿ ಮುಂಬೈ ಮತ್ತು ಪುಣೆ ನಗರಗಳು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಆರಂಭಿಸಿದ ನಗರಾಭಿವೃದ್ಧಿ ಕಾರ್ಯಕ್ರಮಗಳ ಅಡಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರಲು ಬೇಕಿರುವ ಸಂಪನ್ಮೂಲ ಸಂಗ್ರಹಣೆಗೆ ಮುನಿಸಿಪಲ್ ಬಾಂಡ್ ಹೊರಡಿಸಲು ಈಗ ಅಂದಾಜು 20 ನಗರಗಳು ಸಜ್ಜಾಗಿವೆ. ದೇಶದ ನಗರಗಳಲ್ಲಿ ಆಗುತ್ತಿರುವ ಬದಲಾವಣೆಯ ಒಂದು ದೃಶ್ಯವನ್ನು ಇದು ಜನರಿಗೆ ನೀಡುತ್ತದೆ.

ನಗರ ಪುನರುತ್ಥಾನದ ಬಗ್ಗೆ ಹೇಳಲು ಇನ್ನಷ್ಟು ವಿಚಾರಗಳಿವೆ. ಅಸ್ಸಾಂನ ದಿಬ್ರುಗಡ, ಬಿಹಾರದ ಬೆಗೂಸರಾಯ್, ಛತ್ತೀಸಗಡದ ಅಂಬಿಕಾಪುರ, ಉತ್ತರ ಪ್ರದೇಶದ ಬಹರಾಯಿಚ್ ಸೇರಿದಂತೆ ಐದುನೂರು ನಗರಗಳು ಈಗ ಐದು ವರ್ಷಗಳ ಕ್ರಿಯಾ ಯೋಜನೆಯೊಂದನ್ನು ಅನುಷ್ಠಾನಕ್ಕೆ ತರುತ್ತಿವೆ. ಈ ಮಾದರಿಯ ಕಾರ್ಯಕ್ರಮ ದೇಶದಲ್ಲಿ ಇದೇ ಮೊದಲು.

ಪ್ರತಿ ಮನೆಗೂ ನೀರಿನ ಸಂಪರ್ಕ ಕಲ್ಪಿಸುವುದು, ಪ್ರತಿ ವ್ಯಕ್ತಿಗೆ ದಿನಕ್ಕೆ 135 ಲೀಟರ್ ನೀರಿನ ಪೂರೈಕೆ ಆಗುವಂತೆ ನೋಡಿಕೊಳ್ಳುವುದು, ಒಳಚರಂಡಿ ವ್ಯವಸ್ಥೆ ವಿಸ್ತರಿಸುವುದು, ಅಟಲ್ ನಗರ ಪರಿವರ್ತನೆ ಹಾಗೂ ಪುನರುತ್ಥಾನ ಅಭಿಯಾನ (ಅಮೃತ್) ಯೋಜನೆಯ ಅಡಿ ಯಾಂತ್ರೀಕೃತವಲ್ಲದ ಸಾರಿಗೆ ವ್ಯವಸ್ಥೆ ಅಭಿವೃದ್ಧಿಪಡಿಸುವುದು ಇದರಲ್ಲಿ ಸೇರಿವೆ. ಅಮೃತ್ ಯೋಜನೆಯ ಅಡಿ ₹ 78 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ. ಇದರಲ್ಲಿ ಕೇಂದ್ರದ ಪಾಲು ₹ 37 ಸಾವಿರ ಕೋಟಿ.

ನಗರ ಯೋಜನೆಯನ್ನು ಮತ್ತು ಅನುಷ್ಠಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ತಿರುಪತಿ, ಅಜ್ಮೇರ್, ಆಗ್ರಾ ಸೇರಿದಂತೆ 60 ನಗರಗಳು ಐದು ವರ್ಷಗಳ ಸ್ಮಾರ್ಟ್‌ ಸಿಟಿ ಯೋಜನೆಯನ್ನು ತೀವ್ರಗತಿಯಲ್ಲಿ ಕಾರ್ಯರೂಪಕ್ಕೆ ತರುತ್ತಿವೆ. ಇಲ್ಲಿ ಪ್ರತಿ ನಗರದಲ್ಲಿ ₹ 2,000 ಕೋಟಿ ಬಂಡವಾಳ ಹೂಡಿಕೆ ಆಗುತ್ತಿದೆ. 2013ರ ಕಂಪೆನಿ ಕಾಯ್ದೆ ಅಡಿ ರಚಿಸಿರುವ ಕಂಪೆನಿಗಳ ಮೂಲಕ ಸ್ಮಾರ್ಟ್‌ ಸಿಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ನಿರ್ಧಾರಗಳನ್ನು ತ್ವರಿತವಾಗಿ ಕೈಗೊಳ್ಳುವುದು, ಕೆಲಸಗಳು ಕಾಲಕಾಲಕ್ಕೆ ಆಗಬೇಕು ಎಂಬುದು ಇದರ ಉದ್ದೇಶ. ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿರುವ 60 ನಗರಗಳಲ್ಲಿ ಒಟ್ಟು ₹ 1.33 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ಪ್ರಸ್ತಾವ ಇದೆ. ಇದರಲ್ಲಿ ಕೇಂದ್ರದ ಪಾಲು ಎಂದು ₹ 30 ಸಾವಿರ ಕೋಟಿ ನೀಡಲಾಗುತ್ತಿದೆ.

ದೇಶದ ಶೇಕಡ 70ರಷ್ಟಕ್ಕಿಂತ ಹೆಚ್ಚು ನಗರವಾಸಿಗಳು ಅಮೃತ್ ಹಾಗೂ ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿರುವ ನಗರಗಳಲ್ಲಿ ವಾಸಿಸುತ್ತಿದ್ದಾರೆ. ಈ ನಗರಗಳು ಈಗ ಸಮಗ್ರ ಮೂಲಸೌಕರ್ಯ ಅಭಿವೃದ್ಧಿ ಕ್ರಿಯಾಯೋಜನೆಯನ್ನು ಅನುಸರಿಸುತ್ತಿವೆ. ನಮ್ಮ ದೇಶದ ಸಂಸ್ಕೃತಿ ಹಾಗೂ ಪರಂಪರೆ ಶ್ರೀಮಂತವಾಗಿವೆ. ಇವುಗಳನ್ನು ರಕ್ಷಿಸುವುದು ನಮ್ಮ ಕೆಲಸ. ‘ಹೃದಯ್’ ಯೋಜನೆಯ ಅಡಿ ಅಮೃತಸರ, ಮಥುರಾ, ವಾರಾಣಸಿ, ಗಯಾ, ದ್ವಾರಕಾ, ವರಂಗಲ್‌ನಲ್ಲಿ ಪರಂಪರೆಗೆ ಸಂಬಂಧಿಸಿದ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ.

ಎರಡೂವರೆ ಸಾವಿರಕ್ಕಿಂತ ಹೆಚ್ಚಿನ ನಗರಗಳು ಮತ್ತು ಪಟ್ಟಣಗಳಲ್ಲಿ ಬಡವರಿಗೆ 18.75 ಲಕ್ಷ ಮನೆಗಳನ್ನು ನಿರ್ಮಿಸಲು ಎರಡು ವರ್ಷಗಳಲ್ಲಿ ಅನುಮೋದನೆ ನೀಡಲಾಗಿದೆ. ಇದಕ್ಕೆ ₹1.04 ಲಕ್ಷ ಕೋಟಿ ಬಂಡವಾಳ ಹೂಡಲಾಗುತ್ತದೆ. 2004ರಿಂದ 2014ರ ನಡುವಣ ಅವಧಿಯಲ್ಲಿ ಕೇವಲ 13.80 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು.

ಉತ್ತಮ ಕೆಲಸ ಮಾಡಬೇಕು ಎನ್ನುವ ವಿಚಾರದಲ್ಲಿ ನಗರಗಳು ಹಾಗೂ ಪಟ್ಟಣಗಳ ನಡುವೆ ಸ್ಪರ್ಧೆ ನಡೆಯುತ್ತಿದೆ. ಹಲವು ಸ್ಪರ್ಧಾತ್ಮಕ ಸುತ್ತುಗಳ ಮೂಲಕ ಸ್ಮಾರ್ಟ್‌ ಸಿಟಿ ಯೋಜನೆಗೆ 98 ನಗರಗಳನ್ನು ಆಯ್ಕೆ ಮಾಡಲಾಗಿದೆ. ಈ ಉತ್ಸಾಹದ ಪರಿಣಾಮವಾಗಿ, ಸ್ವಚ್ಛ ಭಾರತ ಅಭಿಯಾನದ ಅಡಿ ಹಾಕಿಕೊಂಡಿರುವ 66 ಲಕ್ಷ ಶೌಚಾಲಯಗಳ ನಿರ್ಮಾಣದ ಗುರಿಯಲ್ಲಿ, 33 ಲಕ್ಷಕ್ಕಿಂತ ಹೆಚ್ಚು ಶೌಚಾಲಯಗಳ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದೆ.

ಸ್ವಚ್ಛತೆಯ ವಿಚಾರದಲ್ಲಿ ಉತ್ತಮ ರ‍್ಯಾಂಕ್ ಪಡೆಯಲು ಈಗ ನಗರ ಹಾಗೂ ಪಟ್ಟಣಗಳು ಹಾತೊರೆಯುತ್ತಿವೆ. ಆರುನೂರಕ್ಕಿಂತ ಹೆಚ್ಚಿನ ನಗರ ಹಾಗೂ ಪಟ್ಟಣಗಳು, ‘ನಮ್ಮಲ್ಲಿ ಬಯಲು ಬಹಿರ್ದೆಸೆ ಇಲ್ಲ’ ಎಂದು ಘೋಷಿಸಿಕೊಂಡಿವೆ. ಈ ಘೋಷಣೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿದೆ. ಸ್ವಚ್ಛತೆಯ ವಿಚಾರದಲ್ಲಿ ಮೈಸೂರು ತಾನು ಮೊದಲು ಹೊಂದಿದ್ದ ಮಟ್ಟವನ್ನು ಕಾಯ್ದುಕೊಂಡಿದ್ದರೂ, ಇಂದೋರ್ ಅದಕ್ಕಿಂತ ಮುಂದೆ ಸಾಗಿ ಅತ್ಯಂತ ಸ್ವಚ್ಛ ನಗರ ಎಂಬ ಪಟ್ಟ ದಕ್ಕಿಸಿಕೊಂಡಿದೆ.

ನಗರಾಭಿವೃದ್ಧಿ ಯೋಜನೆಗಳನ್ನು ರೂಪಿಸುವ ಕ್ರಮದಲ್ಲಿ ಮೂಲಭೂತ ಬದಲಾವಣೆ ತರಬೇಕು ಎಂಬ ಉದ್ದೇಶದಿಂದ,  ಕಳೆದ ಎರಡು ವರ್ಷಗಳಲ್ಲಿ ಯೋಜನೆಗಳಿಗೆ ಸಂಬಂಧಿಸಿದ ನಿಯಮಗಳನ್ನು ರಚಿಸುವಾಗ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ನಗರ ಆಡಳಿತ ಸಂಸ್ಥೆಗಳ ಅಭಿಪ್ರಾಯ ಪಡೆಯಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆ ರೂಪಿಸುವಾಗ 2.5 ಕೋಟಿ ಜನ ಭಾಗವಹಿಸಿ ತಮ್ಮ ಆದ್ಯತೆಗಳು ಏನು ಎಂಬುದನ್ನು ತಿಳಿಸಿದ್ದಾರೆ. ಭಾರತವು ಒಂದು ತಂಡವಾಗಿ ಕೆಲಸ ಮಾಡಿದ್ದರ ಪರಿಣಾಮವಾಗಿ, ನಗರ ಮೂಲಸೌಕರ್ಯ ಅಭಿವೃದ್ಧಿಗೆ ₹ 4.5 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಅಲ್ಪಾವಧಿಯಲ್ಲಿ ಒಪ್ಪಿಗೆ ನೀಡಲು ಸಾಧ್ಯವಾಗಿದೆ.

ನಗರಗಳು ಆರ್ಥಿಕ ಬೆಳವಣಿಗೆಯ ಯಂತ್ರಗಳಿದ್ದಂತೆ. ಹಾಗಾಗಿ, ಅಲ್ಲಿ ವಾಣಿಜ್ಯೋದ್ಯಮ ನಡೆಸುವುದು ಸುಲಭ ಆಗಬೇಕು. ಅದರಲ್ಲೂ ಮುಖ್ಯವಾಗಿ ಅಲ್ಲಿ ಕಟ್ಟಡ ನಿರ್ಮಾಣ ಅನುಮತಿಗಳು ವೇಗವಾಗಿ ಸಿಗುವಂತೆ ಆಗಬೇಕು. ದೆಹಲಿ ಮತ್ತು ಮುಂಬೈನಲ್ಲಿ ಆನ್‌ಲೈನ್‌ ಅನುಮತಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ಮೊದಲು ಅನುಮತಿ ಪಡೆಯಲು ಒಂದು ವರ್ಷ ಬೇಕಾಗುತ್ತಿತ್ತು. ಹೊಸ ಕ್ರಮದಿಂದಾಗಿ 30 ದಿನಗಳಲ್ಲಿ ಅನುಮತಿ ಸಿಗುತ್ತಿದೆ. 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಇನ್ನೂ 50 ನಗರಗಳು ಇದೇ ಮಾದರಿಯನ್ನು ಅಳವಡಿಸಿಕೊಳ್ಳಲಿವೆ.

ನಗರ ಆಡಳಿತ ಸಂಸ್ಥೆಗಳ ಉತ್ಸಾಹವನ್ನು ಗಮನಿಸಿ ನಾವು ಪರಿವರ್ತನೆ ತರುವಂತಹ ಸುಧಾರಣೆಗಳತ್ತ ಗಮನ ಹರಿಸಿದ್ದೇವೆ. ಇದರ ಅಡಿ ಜನನ ಮತ್ತು ಮರಣ ಪ್ರಮಾಣಪತ್ರ, ಕಡಿಮೆ ಅಪಾಯದ ಕಟ್ಟಡ ನಿರ್ಮಾಣ ಅನುಮತಿ, ಮ್ಯುಟೇಷನ್‌ಗಳನ್ನು ಮೊದಲು ನೀಡಿ, ಆಮೇಲೆ ಪರಿಶೀಲಿಸುವ ವ್ಯವಸ್ಥೆ ಬರಲಿದೆ. ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಅನಿಶ್ಚಿತತೆಗಳನ್ನು ಕೊನೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ, ಮುನಿಸಿಪಲ್ ಬಾಂಡ್‌ಗಳ ಮೂಲಕ ಸಂಪನ್ಮೂಲ ಸಂಗ್ರಹಿಸಲು ಕ್ರೆಡಿಟ್ ರೇಟಿಂಗ್ ಮಾಡಿಸುವ ವ್ಯವಸ್ಥೆ ತರಲಾಗುತ್ತದೆ, ನಗರ ಆಡಳಿತ ಸಂಸ್ಥೆಗಳಲ್ಲಿ ತಾಂತ್ರಿಕ ಪರಿಣತರನ್ನು ನೇಮಿಸಿಕೊಂಡು ನಗರಾಭಿವೃದ್ಧಿ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿ ಆಗಿಸುವ ಉದ್ದೇಶ ಹೊಂದಲಾಗಿದೆ.

ಭಾರತದ ನಗರಗಳು ಈಗ ಹೊಸ ಪರಿಭಾಷೆಗಳನ್ನು ಅಪ್ಪಿಕೊಳ್ಳುತ್ತಿವೆ. ಒಳ್ಳೆಯ ಆರಂಭ ಮಾಡಿಯಾಗಿದೆ. ನಗರಗಳಿಗೆ ವಾಸಯೋಗ್ಯತೆಯ ಅಂಕ ನೀಡುವುದು ನಮ್ಮ ಮುಂದಿನ ಹೆಜ್ಜೆ.
ಲೇಖಕ ಕೇಂದ್ರ ನಗರಾಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT