ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟದಲ್ಲಿ ಮಳೆ ನೀರಿಗೊಂದು ಮನೆ

Last Updated 13 ಜೂನ್ 2017, 5:54 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಈ ಮನೆಯ ಗೇಟ್‌ ದಾಟಿ ಪಡಸಾಲೆಗೆ ಹೋಗಿ ನಿಂತರೆ ಕಾಲ ಕೆಳಗೆ ನೀರು ಧುಕುಮುತ್ತಿರುವ ಶಬ್ದ ಕೇಳಿಸುತ್ತದೆ. ಒಂದು ಮೂಲೆಯಲ್ಲಿ ನೆಲದಲ್ಲಿ ಮುಚ್ಚಿರುವ ಮೂರು ಅಡಿ ಉದ್ದಗಲದ ಕಬ್ಬಿಣದ ಬಾಗಿಲು ಕಾಣಿಸುತ್ತದೆ. ಅದಕ್ಕೆ ಸದಾ ಬೀಗ. ಅದನ್ನು ತೆಗೆದು ಬಾಗಿಲಿನಿಂದ ಕೆಳಗೆ ಇಣುಕಿದರೆ ಕಾಣಿಸುತ್ತದೆ  ವಿಶಾಲವಾದ ನೆಲ ಮಾಳಿಗೆಯ ನೀರಿನ ಸಂಗ್ರಹಣೆ ತೊಟ್ಟಿ.

25 ಅಡಿ ಉದ್ದ, 25 ಅಡಿ ಅಗಲ ಮತ್ತು 12.5 ಅಡಿ ಆಳದ ನೆಲ ಮಾಳಿಗೆ. ಅಲ್ಲಿ ನೆಲ ಕಾಣುವಷ್ಟು ಶುಭ್ರವಾದ ಜಲ ರಾಶಿ ಇತ್ತು. ಬೇಸಿಗೆ ಕಾಲದಲ್ಲಿ ಕೊಳವೆಬಾವಿಗಳಿಂದ ನೀರು ಸಂಗ್ರಹಣೆ ಮಾಡಿ, ತೋಟಗಳಿಗೆ ಹಾಯಿಸುವುದು ಪ್ರತಿಯೊಬ್ಬ ರೈತನೂ ಮಾಡುವ ಕಾಯಕ. ಆದರೆ, ಇವರು ಬೇಸಿಗೆ ಕಾಲದಲ್ಲಿ ತೋಟದಲ್ಲಿನ ಕೊಳವೆಬಾವಿಗಳಲ್ಲಿ ಸಿಗುವ ಅಲ್ಪಸ್ವಲ್ಪ ನೀರನ್ನು ಸಂಗ್ರಹಿಸಿ ತೋಟಕ್ಕೆ ಹಾಯಿಸಲು ಮತ್ತು ಮಳೆಗಾಲದಲ್ಲಿ ಬೀಳುವ ಮಳೆ ನೀರನ್ನು ತೊಟ್ಟಿಯಲ್ಲಿ ಸಂಗ್ರಹಿಸುತ್ತಿದ್ದಾರೆ.

ಇವರು ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರಿ ನಿಂದ 10 ಕಿ.ಮೀ. ದೂರದ ಹಿರೇಎಮ್ಮಿಗನೂರು ಗ್ರಾಮದ ರೈತ ಎಂ.ಕೆ.ದೇವೇಂದ್ರಪ್ಪ. 2017ರ ಜನವರಿಯಲ್ಲಿ ಈ ತೋಟದ ಮನೆಯನ್ನು ನಿರ್ಮಿಸಿದ್ದಾರೆ. ಇದೇ 9ರಂದು ಸುರಿದ ಮಳೆಯಿಂದಾಗಿ 9.5 ಅಡಿಯಷ್ಟು ನೀರು ನೆಲಮಾಳಿಗೆ ತೊಟ್ಟಿಯಲ್ಲಿ ಸಂಗ್ರಹವಾಗಿದೆ.

ತೋಟದ ಮನೆಯ ಚಾವಣಿಯ ಸುತ್ತ ಎರಡು ಅಡಿ ಎತ್ತರದ ನಾಲ್ಕು ಇಂಚಿನ ಗೋಡೆಯನ್ನು ಕಟ್ಟಲಾಗಿದೆ. ಮಳೆಗಾಲದಲ್ಲಿ ಮನೆಯ ಮೇಲೆ ಬೀಳುವ ನೀರನ್ನು ನೆಲಮಾಳಿಗೆ ತೊಟ್ಟಿಯಲ್ಲಿ ಸಂಗ್ರಹಿಸಲು ಎರಡು  ಇಂಚಿನ ಕೊಳವೆಯನ್ನು ಗೋಡೆಯ ಹೊರ ಭಾಗದಲ್ಲಿ ತಂದು ತೊಟ್ಟಿಗೆ ಸಂಪರ್ಕಿಸಲಾಗಿದೆ.

ಸೂರ್ಯನ ಕಿರಣ ತೊಟ್ಟಿಯಲ್ಲಿನ ನೀರಿನ ಮೇಲೆ ಬಿದ್ದರೆ ಪಾಚಿ ಕಟ್ಟುತ್ತದೆ. ಇದರಿಂದ ನೀರು ಮಲಿನಗೊಳ್ಳುತ್ತದೆ. ಇದಕ್ಕಾಗಿ ತೊಟ್ಟಿ ಯಲ್ಲಿ ಸೂರ್ಯನ ಬೆಳಕು ಬೀಳದಂತೆ ವ್ಯವಸ್ಥೆ ಮಾಡಲಾಗಿದೆ. ಮಳೆಗಾಲದಲ್ಲಿ ಸಂಗ್ರಹಿಸಿದ ನೀರನ್ನು ಮಳೆ ಕೈಕೊಟ್ಟಲ್ಲಿ ತೋಟಕ್ಕೆ ಹಾಯಿಸಬಹುದು. ಗೃಹ ಬಳಕೆಗೂ ಬಳಸಬಹುದು ಎನ್ನುತ್ತಾರೆ ದೇವೇಂದ್ರಪ್ಪ.

ನಿರ್ಮಾಣದ ವ್ಯವಸ್ಥೆ: ಮೂರು ಎಕರೆ ಅಡಿಕೆ ತೋಟದಲ್ಲಿ ಐದು ಕೊಳವೆ ಬಾವಿಗಳಿವೆ. ಇದರಲ್ಲಿ ಮೂರರಲ್ಲಿ ಮಾತ್ರ ಒಂದರಿಂದ ಒಂದೂವರೆ ಇಂಚಿನಷ್ಟು ನೀರು ಬರುತ್ತದೆ. ಸಮೀಪದ ಎರಡು ಮಾವಿನ ತೋಟಗಳಲ್ಲಿ ಮೂರು ಕೊಳವೆಬಾವಿಗಳಿವೆ. ಅವು ಗಳಲ್ಲೂ ಇಷ್ಟೇ ನೀರು ಬರುತ್ತಿದೆ. ಇದರಿಂದ ಆರು ಕೊಳವೆಬಾವಿಗಳ ನೀರನ್ನು ಒಂದೆಡೆ ಸಂಗ್ರಹಿಸಲು ನಿರ್ಧರಿಸಿದೆ ಎನ್ನುತ್ತಾರೆ ಅವರು.

ತೊಟ್ಟಿಯ ಮಧ್ಯದಲ್ಲಿ ಒಂದು ಅಡಿ ದಪ್ಪದ ಕಾಂಕ್ರೀಟ್‌ ಕಂಬವನ್ನು ಹಾಕಿಸಿದ್ದಾರೆ. ತೊಟ್ಟಿಯ ಮೇಲ್ಚಾವಣಿಯ ಕೆಳಗೆ ಪ್ಲಸ್‌ ಆಕಾರ ದಲ್ಲಿ ಗೋಡೆಯವರೆಗೆ ತೊಲೆಗಳನ್ನು (ಬೀಮ್‌) ಹಾಕಲಾಗಿದೆ. ಮೇಲ್ಚಾವಣಿ ಯನ್ನು ಕಾಂಕ್ರೀಟ್‌ನಿಂದ ನಿರ್ಮಿಸಲಾ ಗಿದೆ. ಅಲ್ಲದೆ, ಮೇಲ್ಚಾವಣಿಗೆ ಎಂಟು ಇಂಚಿನ ಎರಡು ರಂದ್ರಗಳನ್ನು ಮಾಡಲಾಗಿದೆ. ಇದು ತೊಟ್ಟಿಯಲ್ಲಿನ ನೀರಿಗೆ ಗಾಳಿ ಬಂದು ಹೋಗಲು ಅಳವಡಿಸಲಾಗಿದೆ. ತೊಟ್ಟಿಯ ತಳ ಭಾಗದಲ್ಲಿ ಒಂದು ಕಡೆ ಮೂರು ಅಡಿ ಆಳ ಮತ್ತು ಎರಡು ಅಡಿ ಅಗಲದ ಗುಂಡಿಯನ್ನು ನಿರ್ಮಿಸಿ, ನೀರನ್ನು ತೋಟಕ್ಕೆ ಹಾಯಿಸಲು ಮೋಟರ್‌ ಅಳವಡಿಸಲಾಗಿದೆ.

ತೊಟ್ಟಿಯ ಮೇಲ್ಚಾವಣಿ ಮೇಲೆ 25 ಅಡಿ ಉದ್ದ, 15 ಅಡಿ ಅಗಲದ ಚಿಕ್ಕ ಕೊಠಡಿಯನ್ನು ನಿರ್ಮಿಸಲಾಗಿದ್ದು, ಕೊಠಡಿಯ ಮೇಲ್ಚಾವಣಿಗೆ ಕಾಂಕ್ರೀಟ್‌ ಹಾಕಲಾಗಿದೆ. ಕೊಠಡಿಯಲ್ಲಿ ಬಿಸಿ ಗಾಳಿ ಹೊರ ಹೋಗಲು ಮೇಲ್ಚಾವಣಿಯ ಕೆಳಗೆ ಸುತ್ತಲೂ 5 ವೆಂಟಿಲೇಟರ್‌ಗಳು ಹಾಗೂ ಬೆಳಕಿಗಾಗಿ ಎರಡು ಕಿಟಕಿಗಳನ್ನು ಅಳವಡಿಸಲಾಗಿದೆ.
ನೆಲ ಮಾಳಿಗೆ, ಕೊಠಡಿ ನಿರ್ಮಾಣ, ಕೊಳವೆಗಳು, ಮೋಟಾರ್‌ ಅಳವಡಿಕೆ ಮತ್ತಿತರ ವೆಚ್ಚ ಸೇರಿ ಒಟ್ಟು ₹ 14 ಲಕ್ಷ ಖರ್ಚಾಯಿತು. ಇದನ್ನು ವೀಕ್ಷಿಸಲು ನೂರಾರು ರೈತರು ಬಂದು ಹೋಗುತ್ತಿದ್ದಾರೆ ಎಂದು ದೇವೇಂದ್ರಪ್ಪ ಮಾಹಿತಿ ನೀಡಿದರು.

ಉತ್ತಮ ಆದಾಯದ ನಿರೀಕ್ಷೆ: ಈ ವ್ಯವಸ್ಥೆಯಿಂದಾಗಿ ಈ ಬೇಸಿಗೆಯಲ್ಲಿ ನೀರಿನ ತೊಂದರೆ ಕಾಣಿಸಿಲ್ಲ. ಕೊಳವೆಬಾವಿಗಳಿಂದ ಬರುವ ನೀರಿನಿಂದ ಮೂರು ದಿನದಲ್ಲಿ ತೊಟ್ಟಿ ತುಂಬುತ್ತದೆ.  ದೇವೇಂದ್ರಪ್ಪ ಅವರಿಗೆ ಅಡಿಕೆ ಜತೆ ಆರು ಎಕರೆ ಪ್ರದೇಶದಲ್ಲಿ ಮಾವಿನ ತೋಟವೂ ಇದೆ. ಬೇಸಿಗೆಯಲ್ಲಿ ಮಾವಿನ ತೋಟಗಳಿಗೆ ನೀರನ್ನು ಕೊಳವೆ ಮೂಲಕ ಹಾಯಿಸಲಾಗಿತ್ತು. ಪ್ರತಿ ಮರಕ್ಕೂ ಅರ್ಧ ಇಂಚಿನ ಕೊಳವೆಯನ್ನು ಅಳವಡಿಸಲಾಗಿದೆ.

ತೊಟ್ಟಿಯಿಂದ ಬರುವ ನೀರು ರಭಸವಾಗಿರುವುದರಿಂದ ಇಡೀ ಮಾವಿನ ತೋಟಗಳಲ್ಲಿರುವ 400 ಗಿಡಗಳಿಗೆ ಒಂದೇ ದಿನಕ್ಕೆ ನೀರು ಸಿಗುತ್ತದೆ. ಆಲ್ಫನ್ಸ್‌ ತಳಿಯ ಮಾವಿನ ತೋಟವನ್ನು ವಾರ್ಷಿಕ ₹ 2.70 ಲಕ್ಷದಂತೆ, ಮೂರು ವರ್ಷಕ್ಕೆ ₹ 5.10 ಲಕ್ಷಕ್ಕೆ ಖೇಣಿ ನೀಡಲಾಗಿತ್ತು. ಸಮೃದ್ಧವಾಗಿ ನೀರು ಕೊಡುತ್ತಿರುವು ದರಿಂದ ಸದ್ಯಕ್ಕೆ ಅಡಿಕೆ ತೋಟ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಮಳೆಗಾಲದಲ್ಲಿ ಮತ್ತಷ್ಟು ನೀರನ್ನು ಸಂಗ್ರಹಿಸಲಾಗುವುದು ಎನ್ನುತ್ತಾರೆ ಅವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT