ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

“ಟೀಕೆಗಳಿಗೆ ಫಿಲ್ಟರ್!”

Last Updated 13 ಜೂನ್ 2017, 19:30 IST
ಅಕ್ಷರ ಗಾತ್ರ

ಅಂದು ಸಂಗೀತಾಳಿಗೆ ಸಂಭ್ರಮ. ಅವಳ ಆಪ್ತಸ್ನೇಹಿತೆ ಸರಸ್ವತಿ ಮನೆಗೆ ಊಟಕ್ಕೆ ಬರುವವಳಿದ್ದಾಳೆ. ಸಂಗೀತಾಳ ಸಂಭ್ರಮಕ್ಕೆ ಅದೇ ಕಾರಣ.  ಸಂಗೀತಾ ಮನೆಗೆ ಬಂದ ಕೆಲವೇ ಕ್ಷಣಗಳಲ್ಲಿ ಆ ಸಂಭ್ರಮ ಠುಸ್ಸೆಂದು ಇಳಿದು ಹೋಯಿತು. ಕಾರಣ ಇಷ್ಟೇ. ಹಲವಾರು ವರ್ಷಗಳ ನಂತರ ಭೇಟಿಯಾದ ಸ್ನೇಹಿತೆಯರು ಬಂದವರೇ ಹರಟೆಗೆ ಕುಳಿತರು. ಇಬ್ಬರದೂ ಕಷ್ಟ-ಸುಖ ವಿಚಾರಣೆ ಆಯಿತು. ಗಂಡ-ಮಕ್ಕಳ ಬಗ್ಗೆ ಮಾತನಾಡಿಯಾಯಿತು. ಸಂಗೀತಾ ಭಾರತದಲ್ಲಿದ್ದರೆ, ಸರಸ್ವತಿ ಇರುವುದು ಅಮೆರಿಕದಲ್ಲಿ. ಹರಟೆ ಮುಂದುವರೆದು, ಎಲ್ಲಾ ವಿಷಯ ಮುಗಿಸಿ ಸರಸ್ವತಿ ತನ್ನ ಇನ್ನೊಬ್ಬ ಸ್ನೇಹಿತೆ ರತ್ನಳ ಬಗ್ಗೆ ಹೇಳಿದಳು. ಆಶ್ಚರ್ಯಕರವಾಗಿ ಆ ಸ್ನೇಹಿತೆ ಸಂಗೀತಾಳಿಗೂ ಆಪ್ತವಾಗಿದ್ದಳು. ‘ನೋಡೇ ಸಂಗೀತಾ, ಆ ರತ್ನ ಯಾವಾಗಲೂ ನಿನ್ನ ಬಗ್ಗೆ ವ್ಯಂಗವಾಗಿ ಮಾತನಾಡುತ್ತಾಳೆ.

‘‘ನೀನು ಬರೇ ಬಡಾಯಿ ಕೊಚ್ಚಿಕೊಳ್ಳುತ್ತೀಯಾ, ನಿನಗೆ ಕೊಬ್ಬು ಜಾಸ್ತಿ’’ ಎಂದು ನಿನ್ನನ್ನು ಹಾಸ್ಯ ಮಾಡುತ್ತಾಳೆ ಎಂದಳು. ಸರಸ್ವತಿಯೇನೋ ಹರಟೆ ಹೊಡೆಯುವ ಭರದಲ್ಲಿ ಅದನ್ನು ಹೇಳಿದಳು. ಕೇಳಿದಾಕ್ಷಣ, ಸಂಗೀತಾಳ ಮನಸ್ಸು ಕ್ಷೋಭೆಗೊಳಗಾಯಿತು. ಹೇಗೋ ಸ್ನೇಹಿತೆಗೆ ಊಟ ಬಡಿಸಿ ಮನೆಗೆ ಕಳಿಸಿದಳು. ‘ರತ್ನ ನನ್ನೊಂದಿಗೆ ಚೆನ್ನಾಗಿಯೇ ಇರುತ್ತಾಳಲ್ಲಾ? ಇವಳ ಹತ್ತಿರ ಹೀಗ್ಯಾಕೆ ಹೇಳಿದಳು? ಇವಳಿಗೂ ನನ್ನ ಹತ್ತಿರ ಬಂದು ಅದನ್ನು ಹೇಳುವ ಅವಶ್ಯಕತೆ ಏನಿತ್ತು?’ ಎಂದು ಚಿಂತಿಸತೊಡಗಿದಳು.

ಹೌದು, ಈ ಸರಸ್ವತಿಯ ಹಾಗೆ ಕೆಲವರು ಇರುತ್ತಾರೆ. ನಮ್ಮ ಬಗ್ಗೆ ಒಳ್ಳೆಯದನ್ನು ಯಾರಾದರೂ ಹೇಳಿದಾಗ, ಬಂದು ಹೇಳುವುದಿಲ್ಲ. ಅದೇ ಏನೋ ಕೆಟ್ಟದನ್ನು ಹೇಳಿದಾಗ ನಮಗೆ ಬಂದು ತಲುಪಿಸಿಯೇ ಬಿಡುತ್ತಾರೆ. ಈ ಜನರಲ್ಲಿ ಎರಡು ವಿಧಗಳಿರುತ್ತವೆ. ಒಂದು ವಿಧದ ಜನರು ಗಾಸಿಪ್ ಮಾಡುವ ನೆಪದಲ್ಲಿ, ದುರುದ್ದೇಶ ಏನೂ ಇಲ್ಲದೆಯೇ ಕೇಳಿದ್ದೆಲ್ಲಾ ಇನ್ನೊಬ್ಬರಿಗೆ ತಲುಪಿಸುತ್ತಾರೆ. ಅದೇ ಇನ್ನೊಂದು ವಿಧದ ಜನರು – ಹೇಳಿರುವುದು ಒಂದಂಶವಾದರೆ, ಅದಕ್ಕೆ ಉಪ್ಪು-ಖಾರಗಳನ್ನು ಸೇರಿಸಿ, ಅದನ್ನು ಹತ್ತರಷ್ಟು ಮಾಡಿ ಯಾರ ಬಗ್ಗೆ ವಿಷಯ ಇತ್ತೋ, ಅವರಿಗೆ ತಲುಪಿಸುತ್ತಾರೆ. ಎಲ್ಲೋ ಮನಸ್ಸಿನಲ್ಲಿ, ಅವರಿಗೂ ಕೂಡ ಆ ವ್ಯಕ್ತಿಯ ಕಡೆಗೆ ಅದೇ ನಕಾರಾತ್ಮಕ ಭಾವನೆ ಇರುತ್ತದೆ. ತಾವು ನೇರವಾಗಿ ಹೇಳಲಿಕ್ಕೆ ಆಗದ್ದನ್ನು ‘ಅವರು ಹೇಳಿದರು’ ಎಂದು ಹೇಳಿಬಿಡುತ್ತಾರೆ. ಇದರಿಂದ ಆಗಬಹುದಾದ ಪರಿಣಾಮಗಳು ಹಲವು. ಕೇಳಿದ ವ್ಯಕ್ತಿಗೆ ಬೇಸರ/ದುಃಖ, ಹಾಗೆಯೇ ಯಾರು ಆ ಟೀಕೆ ಮಾಡಿದರೋ ಅವರ ಮೇಲೆ ಸಿಟ್ಟು/ಕೋಪ/ನಕಾರಾತ್ಮಕ ಭಾವನೆ. ಇನ್ನು ಕೆಲವರು ಹೇಳುವುದನ್ನೆಲ್ಲಾ ಹೇಳಿ ನಂತರ ‘ದಯವಿಟ್ಟು ಅವಳಿಗೆ ಹೋಗಿ ಹೇಳಬೇಡ, ನನ್ನಿಂದ ಗೊತ್ತಾಯಿತು ಎಂದರೆ ಬೇಸರವಾಗುತ್ತದೆ’ ಎಂದೂ ಸೇರಿಸುತ್ತಾರೆ. ನೊಂದ ವ್ಯಕ್ತಿಗೆ ದುಃಖವನ್ನು ಮನಸ್ಸಿನಲ್ಲಿಟ್ಟುಕೊಂಡು ಹೊರಕ್ಕೂ ಹಾಕಲಾಗದೇ, ನೋವನ್ನು ತಿನ್ನುವ ಪರಿಸ್ಥಿತಿ.

ನಾವೂ ಕೂಡ ಆದಷ್ಟು ಇತರರ ಟೀಕೆಗಳಿಗೆ ಫಿಲ್ಟರ್ ಹಾಕೋಣ. ಉದಾ: ಇತರರು ನಿಮ್ಮ ಸೋದರಿಯ ಬಗ್ಗೆ ಒಳ್ಳೆಯ ಮಾತನಾಡಿದರೆ, ಬಂದು ಅವಳಿಗೆ ತಲುಪಿಸಿ. ಆಗ ನಿಮ್ಮ ಸೋದರಿಗೂ ಸಂತಸ. ಹೇಳಿದ ವ್ಯಕ್ತಿಯ ಮೇಲೂ ಒಳ್ಳೆಯ ಭಾವನೆ ಮೂಡುತ್ತದೆ. ಅದೇ ಯಾರೋ ಕುಹಕದ ಮಾತನಾಡಿದರೆ, ನೀವು ಅಲಕ್ಷಿಸಿ. ಹಾಗೆಯೇ ಯಾರ ಬಗ್ಗೆ ಹೇಳಿದರೋ, ಅವರಿಗೆ ಖಂಡಿತ ತಲುಪಿಸಬೇಡಿ.  ಅದನ್ನು ಮರೆತುಬಿಡಿ. ಸ್ವಸ್ಥ ಸಮಾಜಕ್ಕಾಗಿ ನಾವು ಇಷ್ಟಾದರೂ ಪ್ರಯತ್ನ ಮಾಡೋಣ.

**

ಮಾನಸಿಕ ಸಂತೋಷ
ಮನಸ್ಸಿಗೆ ಸಂತಸ/ನೆಮ್ಮದಿ ತಂದುಕೊಳ್ಳುವುದು ನಮ್ಮ ಕೈಯಲ್ಲಿದೆ. ನಮಗೆ ನಮ್ಮ ‘ನಡೆ-ನುಡಿ’ ಎನ್ನುವುದು ಸರಿ ಎನಿಸಿದರೆ ಯೋಚಿಸುವ ಅಗತ್ಯವಿಲ್ಲ. ಇತರರು ಏನೇ ಹೇಳಲಿ, ಬಹಳಷ್ಟು ಜನರಿಗೆ ‘ಗಾಸಿಪ್’ ಎನ್ನುವುದು ಒಂದು ರೀತಿಯ ಟೈಮ್‌ಪಾಸ್ ಚಟುವಟಿಕೆ. ಈ ಗಾಸಿಪ್ ಮಾಡುವಾಗ ಇವೆಲ್ಲಾ ಸಾಮಾನ್ಯ. ಆದರೆ ಒಬ್ಬರ ಮಾತನ್ನು ಇನ್ನೊಬ್ಬರಿಗೆ ಮುಟ್ಟಿಸುವ ವ್ಯಕ್ತಿ, ನಾಳೆ ನಮ್ಮ ಬಗ್ಗೆಯೂ ಹೀಗೇ ಇನ್ನೊಬ್ಬರಿಗೆ ಹೇಳುವ ಸಂಭವವಿದೆ ಎಂದು ತಿಳಿದಿರಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT