ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುರ್ವೇದ ಶಿಕ್ಷಣಕ್ಕೆ ಆ್ಯಪ್‌

Last Updated 13 ಜೂನ್ 2017, 19:30 IST
ಅಕ್ಷರ ಗಾತ್ರ

ಆಯುರ್ವೇದ ವೈದ್ಯಕೀಯ ಶಿಕ್ಷಣದ ಪಠ್ಯ ಸಂಸ್ಕೃತ ಭಾಷೆಯಲ್ಲಿ ಇದೆ. ಆಯುರ್ವೇದ ವೈದ್ಯರಾಗಬಯಸುವವರಿಗೆ ಸಂಸ್ಕೃತ ಭಾಷೆಯ ಜ್ಞಾನ ಅಗತ್ಯ.

ಆದರೆ, ಆಯುರ್ವೇದ ಕೋರ್ಸ್‌ಗೆ ಪ್ರವೇಶ ಪಡೆಯುವ ಬಹುತೇಕ ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷೆ ಗೊತ್ತಿರುವುದಿಲ್ಲ. ಸಂಸ್ಕೃತ ಕಲಿತರಷ್ಟೇ ಪಠ್ಯ ಅರಿಯಲು ಸಾಧ್ಯ. ಹೀಗಾಗಿ ಹಲವು ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಕಾಡುತ್ತಿದೆ.

ಇದಕ್ಕೆ ಪರಿಹಾರವೆಂಬಂತೆ ಬೆಂಗಳೂರಿನ ಅಟಾವಿಸ್ಟಿಕ್ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆ ಹೊಸ ಆ್ಯಪ್‌ವೊಂದನ್ನು ತಯಾರಿಸಿದೆ.

ಇದರಲ್ಲಿ ಆಯುರ್ವೇದ ಶಿಕ್ಷಣಕ್ಕೆ ಸಂಬಂಧಿಸಿದ 2.75ಲಕ್ಷಕ್ಕೂ ಅಧಿಕ ಶ್ಲೋಕಗಳನ್ನು ಅಳವಡಿಸಲಾಗಿದೆ.

ಶ್ಲೋಕಗಳ ಅರ್ಥ, ಪದಕೋಶ, ಪದವಿಭಾಗ, ಸಂಧಿಸೂಚಕ, ಅನ್ವಯಾರ್ಥ, ಭಾವಾರ್ಥ ಮತ್ತು ಶ್ಲೋಕಗಳನ್ನು ಛಂದೋಬದ್ಧವಾಗಿ ಉಚ್ಛರಿಸುವ ಕ್ರಮವನ್ನು ಈ ಆ್ಯಪ್ ಮೂಲಕ ಕಲಿಯಬಹುದು.

50ಕ್ಕೂ ಹೆಚ್ಚು ಸಂಸ್ಕೃತ ಪಂಡಿತರು 5 ವರ್ಷ ಶ್ರಮವಹಿಸಿ ಈ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ.

ಈ ಆ್ಯಪ್ ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಲಭ್ಯವಿದೆ. ಇದರ ಮೂಲಕ ಶ್ಲೋಕಗಳ ಭಾಷಾಂತರವಷ್ಟೇ ಅಲ್ಲದೆ, ಅವುಗಳ ಅರ್ಥವನ್ನೂ ಸುಲಭವಾಗಿ ಕಲಿಯಬಹುದು ಎಂಬುದು ಸಂಸ್ಥೆಯ ಅಭಿಪ್ರಾಯ.

ಇದರಲ್ಲಿ ಮೇಧಾಯು ಪ್ಯೂಪಿಲ್‌, ಮೇಧಾಯು ಟ್ಯೂಟರ್, ಮೇಧಾಯು ಕ್ಲಿನಿಷಿಯನ್, ಮೇಧಾಯು ಕಂಟ್ರೋಲ್ ಎಂಬ ನಾಲ್ಕು ವಿಭಾಗಗಳಿವೆ.

ಪ್ಯೂಪಿಲ್‌ ವಿಭಾಗವನ್ನು ವಿದ್ಯಾರ್ಥಿಗಳಿಗೆಂದೇ ರಚಿಸಲಾಗಿದೆ. ಇದರಲ್ಲಿ ಆಯಾ ವರ್ಷದ ಪಠ್ಯಭಾಗ ಇರುತ್ತದೆ. ಶ್ಲೋಕಗಳನ್ನು ಎಮ್‌ಪಿ3 ಮಾಧ್ಯಮದಲ್ಲಿ ವಿವರಿಸಲಾಗಿದೆ.  ವಿದ್ಯಾರ್ಥಿಗಳಿಗೆ ಅರ್ಥವಾಗದ ಸಂಸ್ಕೃತ ಪದದ ಅರ್ಥ ತಿಳಿಯಲು ಸರ್ಚ್‌ ಬಾರ್ ಸೌಲಭ್ಯ ಮತ್ತು ಪದಕೋಶವನ್ನು ಅಳವಡಿಸಲಾಗಿದೆ.

ಆಯುರ್ವೇದ ಶಿಕ್ಷಣಕ್ಕೆ ಸಂಬಂಧಿಸಿದ ಚಿತ್ರಗಳನ್ನು ಒಳಗೊಂಡಿರುವ ಮೀಡಿಯಾಜೋನ್‌, ದಿನಚರಿ, ಕ್ವಿಕ್‌ ನೋಟ್ಸ್‌ನಂತಹ ಸೌಲಭ್ಯಗಳೂ ಇದರಲ್ಲಿವೆ.
ಮೇಧಾಯು ಟ್ಯೂಟರ್‌ ವಿಭಾಗವನ್ನು ಅಧ್ಯಾಪಕರಿಗಾಗಿ ರಚಿಸಲಾಗಿದೆ. ಇದರಲ್ಲಿ ಆಯುರ್ವೇದ ಶಿಕ್ಷಣಕ್ಕೆ ಸಂಬಂಧಿಸಿದ ಗ್ರಂಥಗಳು ಇರುತ್ತವೆ. ಅಧ್ಯಾಪಕರು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪಠ್ಯ, ಚಿತ್ರಗಳನ್ನು ಇಲ್ಲಿ ಪ್ರಕಟಿಸಬಹುದು.

ಮೇಧಾಯು ಕ್ಲಿನಿಷಿಯನ್ ವಿಭಾಗವನ್ನು ಆಯುರ್ವೇದ ವೈದ್ಯರಿಗಾಗಿ ರಚಿಸಲಾಗಿದೆ. ಮೇಲಿನ ಎರಡೂ ವಿಭಾಗಗಳನ್ನೂ ಇದರಲ್ಲಿ ಅಳವಡಿಸಲಾಗಿದೆ. ಅಲ್ಲದೆ ವೈದ್ಯರ ಅನುಕೂಲಕ್ಕಾಗಿ ಪಿಡಿಎಫ್‌ ಕನ್‌ವರ್ಷನ್, ಅಪಾಯಿಂಟ್‌ಮೆಂಟ್‌ ಟ್ರ್ಯಾಕರ್‌ ಕೂಡ ಇದರಲ್ಲಿದೆ.

ಆಯುರ್ವೇದ ಕಂಟ್ರೋಲ್‌ ವಿಭಾಗವನ್ನು ಆಯುರ್ವೇದ ವಿದ್ಯಾ ಸಂಸ್ಥೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ರಚಿಸಲಾಗಿದೆ. ಜತೆಗೆ ಮೇಧಾಯು ಸೋಷಿಯಲ್ ಎಂಬ ಪ್ರತ್ಯೇಕ ವಿಭಾಗವೂ ಇದರಲ್ಲಿದೆ.

ಈ ತಂತ್ರಾಂಶವನ್ನು ಆಯುರ್ವೇದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ವೈದ್ಯರಷ್ಟೇ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಆಯುರ್ವೇದ ವಿದ್ಯಾರ್ಥಿಗಳಿಗೆ ಈ ಆ್ಯಪ್‌ ಗುರುವಿನಂತೆ ಶಿಕ್ಷಣ ಒದಗಿಸುತ್ತದೆ ಎಂದು ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀನಿಧಿ ಹೇಳುತ್ತಾರೆ.

ಮುಂದಿನ ದಿನಗಳಲ್ಲಿ ಪ್ಲೇ ಸ್ಟೋರ್‌ನಲ್ಲೂ ಈ ಆ್ಯಪ್‌ ಲಭ್ಯವಾಗಲಿದೆ. ಅಲ್ಲದೆ ದೇಶದ ಇತರೆ ಭಾಷೆಗಳಿಗೆ ವಿಸ್ತರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಮತ್ತು ಮಾಹಿತಿಗಾಗಿ  www.medhayu.com ಭೇಟಿ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT