ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 14–6–1967

Last Updated 13 ಜೂನ್ 2017, 19:30 IST
ಅಕ್ಷರ ಗಾತ್ರ

ಅಮೆರಿಕದ ಬೇಹುಗಾರಿಕೆ ವಿಮಾನ ಧ್ವಂಸ ಎಂದು ಚೀನ
ಪೀಕಿಂಗ್, ಜೂ. 13– 
ಅಮೆರಿಕಕ್ಕೆ ಸೇರಿದ ಚಾಲಕನಿಲ್ಲದ ಬೇಹುಗಾರಿಕೆ ವಿಮಾನವೊಂದನ್ನು ದಕ್ಷಿಣ ಚೀನದ ಕಾಂಗ್ವಿ ಪ್ರದೇಶದ ಮೇಲೆ ಚೀನೀ ಫೈಟರ್ ವಿಮಾನವೊಂದು ನಿನ್ನೆ ಹೊಡೆದು ಕೆಡವಿತೆಂದು ನವಚೀನ ವಾರ್ತಾ ಸಂಸ್ಥೆ ವರದಿ ಮಾಡಿದೆ.

‘ಗೂಢಚರ್ಯೆ ಮತ್ತು ಪ್ರಚೋದನೆ ಉದ್ದೇಶಗಳಿಂದ’ ಈ ವಿಮಾನವು ಚೀನೀ ವಾಯು ಪ್ರದೇಶಕ್ಕೆ ಅತಿಕ್ರಮಿಸಿ ಬಂದಿದ್ದಿತೆಂದು ಈ ವರದಿ ತಿಳಿಸಿದೆ.

ಮುಂದಿನ ವರ್ಷದಿಂದ ಹೈಸ್ಕೂಲುಗಳಲ್ಲಿ ಐಚ್ಛಿಕ ವಿಷಯಗಳ ಬೋಧನೆ ಇಲ್ಲ
ಬೆಂಗಳೂರು, ಜೂನ್‌ 13– 
1968–69ರ ಶಿಕ್ಷಣ ವರ್ಷದಿಂದ ರಾಜ್ಯದ ಹೈಸ್ಕೂಲ್ ವಿದ್ಯಾಭ್ಯಾಸದಲ್ಲಿ ಐಚ್ಛಿಕ ವಿಷಯಗಳು ಇರುವುದಿಲ್ಲ.

ಐಚ್ಛಿಕ ವಿಷಯಗಳನ್ನು ಕಲಿಸಲು ಮೀಸಲಾಗಿಡುತ್ತಿರುವ ಸಮಯವನ್ನು  ಭಾಷಾ ತರಗತಿಗಳಿಗೆ ಉಪಯೋಗಿಸಲಾಗುವುದು. ‘ವಿದ್ಯಾರ್ಥಿಗೆ ಭಾಷಾ ಜ್ಞಾನ ಬಂದರೆ ಮಾತ್ರ ತಾನು ಕಲಿತ ಇತರ ವಿಷಯಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಸಾಧ್ಯ’ ಎಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ತಿಳಿಸಿದರು.

‘ಶಿಕ್ಷಣ ಆಯೋಗವು ಮಾಡಿರುವ ಶಿಫಾರಸಿನ ಪ್ರಕಾರ ಈ ಕ್ರಮವು ಜಾರಿಗೆ ಬರಲಿದೆ’ ಎಂದು ಅವರು ವರದಿಗಾರರಿಗೆ ತಿಳಿಸಿದರು.

ಎಂಜಿನಿಯರಿಂಗ್, ವೈದ್ಯ ಹೊರತು ಐದು ವರ್ಷಗಳಲ್ಲಿ ಎಲ್ಲ ಮಟ್ಟದಲ್ಲೂ ಕನ್ನಡ ಮಾಧ್ಯಮ
ಬೆಂಗಳೂರು, ಜೂ. 13– 
ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಬಿಟ್ಟು ಉಳಿದ ಶಿಕ್ಷಣದ ಇತರ ಎಲ್ಲ ಘಟ್ಟಗಳಲ್ಲೂ ಮುಂದಿನ ಐದು ವರ್ಷಗಳೊಳಗೆ ಕನ್ನಡವನ್ನು ಬೋಧನ ಮಾಧ್ಯಮವಾಗಿ ಜಾರಿಗೆ ತರಲಾಗುವುದು.

ರಾಜ್ಯದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಈ ಬದಲಾವಣೆ ಹತ್ತು ವರ್ಷಗಳೊಳಗೆ ಅನುಷ್ಠಾನಕ್ಕೆ ಬರುವುದು ಎಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು ವರದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT