ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವ ಬೆರೆತ ನಕ್ಷತ್ರಗಳ ಕತೆ

Last Updated 14 ಜೂನ್ 2017, 19:30 IST
ಅಕ್ಷರ ಗಾತ್ರ

ಭಾವ ಬೆರೆತ ನಕ್ಷತ್ರಗಳ ಕತೆ

ಹಗಲಲ್ಲಿ ನಿರಾಭರಣ ಸುಂದರಾಂಗ. ರಾತ್ರಿಯಾದರೆ ಮಿಂಚುವ ಸಂಚುಗಾರ. ಮಿಗೆಯಿಲ್ಲದ ಈ ಆಕಾಶನ ಎದೆ ಮೇಲೆ ಅದೆಷ್ಟು ಮಿಂಚುವ ಜೀವ ಕತೆಗಳು. ಚೆನ್ನಮ್ಮನ ದಂಡೆ ಕಥೆ, ಬಿಲ್ಲು ಬಾಣದ ಕಥೆ, ತಬ್ಬಲಿ ಧ್ರುವನ ಕಥೆ, ಹೆಕ್ಕಿ ತೆಗೆದರೆ ಅವ್ವನ ಸೀರೆ ಮಡಚಲಾರೆ, ಅಪ್ಪನ ರೊಕ್ಕ ಎಣಿಸಲಾರೆ ಎಂಬ ಅಪರಿಮಿತ ಗಣಿತ. ಕಾಣಲು ಕಣ್ಣಗಳಿರಬೇಕು, ಮನವೂ ತೆರೆದಿರಬೇಕು. ಅಂದರೆ ಮಾತ್ರ ದಕ್ಕೀತು ಕಥೆ. ಸಗಣಿ ಸಾರಿಸಿದ ಅಂಗಳದಲ್ಲಿ ಕುಳಿತು ಹೃದಯ ತುಂಬುವ ಕಥೆ ಹೇಳುತ್ತಿದ್ದ ನನ್ನ ನೀಲಗಂಗಮ್ಮಜ್ಜಿ ಕೌತುಕದ ಕಥಾ ಜಗತ್ತಿನ ಒಡತಿ. ಹೆಸರಿಗೆ ತಕ್ಕಂತೆ ನೀಲ ಗಂಗೆ. ಅವಳು ಕಥೆ ಹೇಳಲು ಕುಳಿತರೆ ನಾವೆಲ್ಲ ಹೂವಿಗೆ ಮರುಳಾಗಿ ಹಾರಿ ಬರುವ ಪಾತರಗಿತ್ತಿಗಳು.

ಆಗ ಶಾಲೆ ಬಿಟ್ಟು ಮನೆಗೆ ಬಂದಾಗ, ಹೋಂವರ್ಕ್‌ ಎಂದರೆ ಕಥೆ ಕೇಳುವುದು. ಮರುದಿನ ಶಾಲೆಯಲ್ಲಿ ಗೆಳತಿಯರಿಗೆ ಹುಣಚಿ ಬೋಟಿಗೆ, ಹುಣಚಿ ಬೀಜಕ್ಕೆ ಕಥೆ ಹೇಳಿ ಚಂದಾ ವಸೂಲಿ ಮಾಡಿದ ನೆನಪು. ಗೋದೂಳಿ ಸಮಯಕ್ಕೆ ದನ ಹೊಡೆದುಕೊಂಡು ಹಸಿಮೇವಿನ ಹೊರೆ ಹೊತ್ತು ಬರುತ್ತಿದ್ದ ಅಜ್ಜಿಗೆ ತರಾತುರಿ ಅಡುಗೆ ಚಿಂತೆ ಇರಲಿಲ್ಲ. ಅದರ ಚಾರ್ಜು, ಅವ್ವ ಚಿಕ್ಕಮ್ಮಂದು. ಒಂದು ಕಪ್ ಚಾ ಕಾಸಿ ಕುಡಿದು ಎಲೆ ಚಂಚಿ ಹಿಡಿದು ಕುಳಿತಳೆಂದರೆ ಅವಳು ದ್ರೋಣಾಚಾರ್ಯೆ. ನಾವು ಕೌರವ ಪಾಂಡವ ಮಕ್ಕಳು. ಕಥೆ ಕೇಳಲು ನಾ ಮುಂದೆ ನೀ ಮುಂದೆ ಎಂದು ಅಂಗಿ ಹರಿದುಕೊಳ್ಳುತ್ತಿದ್ದೆವು. ಅವಳ ಕಥೆ ಎಲೆ ಚಂಚಿಯಿಂದ ಬಿಚ್ಚಿಕೊಳ್ಳುತ್ತಿತ್ತು. ಒಬ್ಬರು ಹೋಗಿ ಅಡಿಕೆ ಒಡೆದು ತರಬೇಕು. ಆ ಎಲೆ ಅಡಿಕೆ ರಸ ಒಳಗಿಳಿದಂತೆ ರಸಪಾಕದ ಕಥೆಗಳು ಹೊರ ಬರುತ್ತಿದ್ದವು.

ಆ ದಿನದ ಕಥೆಯನ್ನಿನ್ನೂ ಮರೆತಿಲ್ಲ. ದೇವಲೋಕದ ರಾಜಕುಮಾರ ಹಾರುವ ಕುದುರೆ ಏರಿ ಆಕಾಶದಿಂದ ಹಾರಿ ಬರುವಾಗ ಕೆಳಗೆ, ಗಂಧ ಬೀರುವ ಸೇವಂತಿಗೆ ತೋಟ. ಅಲ್ಲಿ ಕಿರು ಬೆರಳಿನ ಗಾತ್ರದ ಚಿಟ್ಟು ರಾಜಕುಮಾರಿ. ಗಿಡದಿಂದ ಗಿಡಕ್ಕೆ ಪಾತರಗಿತ್ತಿಯಂತೆ ಹಾರುತ್ತಾಳೆ. ಹೂವಿನ ಗಂಧ ಹೀರಿ ನಗುತ್ತಾಳೆ. ಅವಳಿಗೆ ಹಾರುವ ರೆಕ್ಕೆ. ಕುದುರೆಯಿಂದ ಜಾರಿ ಬಿದ್ದ ರಾಜಕುಮಾರ ಅವಳ ಮುಂದೆ ನಿಂತ ತಕ್ಷಣ ಜೋರಾಗಿ ಅಳು. ಕಾರಣ, ಅವಳಿಗೊಬ್ಬ ಮಲತಾಯಿ. ಅವಳು ಈ ಚೋಟುನಿಂದ ಜೇನು ತರಿಸುತ್ತಾಳೆ. ಒಂದು ಹಂಡೆ ಜೇನು ತುಂಬಿಸಿದರೆ ಮಾತ್ರ ಅವಳಿಗೆ ಊಟ. ಯಾರಾದರೂ ನೋಡಿದರೆ ಜೇನು ಹೀರಲು ಆಗುವುದಿಲ್ಲ. ಅದಕ್ಕೆ, ಅಳು. ಅಷ್ಟರಲ್ಲಿ ಮಲತಾಯಿ ಬಂದು ಜೇನು ತಾರದ್ದಕ್ಕೆ ಒದೆಯುತ್ತಾಳೆ. ಚೋಟು ರಾಜಕುಮಾರಿ ಸತ್ತು ಹೋಗುತ್ತಾಳೆ. ರಾಜಕುಮಾರನಿಗೆ ತನ್ನಿಂದಲೇ ಇದೆಲ್ಲ ಆಯಿತೆಂಬ ಸಂಕಟ. ಚೋಟು ರಾಜಕುಮಾರಿಯನ್ನು ತನ್ನ ಲೋಕಕ್ಕೆ ಒಯ್ಯುತ್ತಾನೆ. ಆಕಾಶದಲ್ಲಿ ಅವಳು ನಕ್ಷತ್ರವಾಗುತ್ತಾಳೆ.

ಬಾಲವಿಲ್ಲದ ಬಾಲ್ಯದಲ್ಲಿ ಕೇಳಿದ ಕಥೆ ತಲೆ ಹೊಕ್ಕಿತು. ಸತ್ತವರು ನಕ್ಷತ್ರವಾಗುತ್ತಾರೆಂದು ನಂಬಿದೆವು. ನಾನು ಮೊದಲು ಕಂಡ ಸಾವು ಅಜ್ಜನದು. ಆತ ತಮ್ಮಣ್ಣಪ್ಪ. ಆತ ಸಾಯುವ ಮುನ್ನ ಧ್ಯಾನಕ್ಕೆ ಕುಳಿತವರಂತೆ ಸುತ್ತಲೂ ಮನೆಮಂದಿ ನಿಂತಿದ್ದೆವು. ಅಜ್ಜನ ಜೀವ ಹೊರಟು ಹೋಯಿತು. ಮೊದಲು ಅದು ಕುಂಬಿ ಮೇಲೆ ಕುಳಿತುಕೊಳ್ಳುತ್ತಂತೆ, ನಂತರ ಹಾರಿ ಆಕಾಶದಲ್ಲಿ ನಕ್ಷತ್ರವಾಗುತ್ತಂತೆ. ಹಾಗೆ ಅಜ್ಜನೂ ನಕ್ಷತ್ರವಾದನೆಂದು ಕಥೆ ಕೇಳಿ ನಂಬಿದೆವು. ಮೇಳೆಗೆ ಏರಿ ರಾತ್ರಿ ನೋಡಿದರೆ ಎಷ್ಟೊಂದು ನಕ್ಷತ್ರಗಳು!. ಯಾವ ನಕ್ಷತ್ರದಲ್ಲಿ ಅಜ್ಜನಿದ್ದನೋ ಕಾಣಲಿಲ್ಲ. ಆದರೆ ಬೀಳುವ ನಕ್ಷತ್ರ ಕಂಡು ಓಡಿಬಂದೆವು. ಹೀಗೆ ಸತ್ತವರು ನಕ್ಷತ್ರವಾಗುತ್ತಾರೆ ಎಂದು ಕಥೆ ಕೇಳಿದ ನಮಗೆ ಸತ್ತವರು ದೆವ್ವವಾಗುತ್ತಾರೆಂದು ಅಜ್ಜಿ ಹೇಳಲೇ ಇಲ್ಲ.

ಅಜ್ಜಿ ಸಾಯುವ ಎಂಟು ದಿನ ಮೊದಲು ಮಾತಾಡಿಸಲು ಹೋದೆ. ‘ನಾನು ನಿನ್ನ ಕಥೆ ಕೇಳಿ ಬೆಳೆದೆ. ನನ್ನ ಮಕ್ಕಳಿಗೆ ಆ ಭಾಗ್ಯವಿಲ್ಲ’ ಎಂದೆ. ಕಣ್ಣೀರು ಮಡುಗಟ್ಟಿತು ಇಬ್ಬರಿಗೂ. ‘ಇರು ಹೇಳುವೆ’ ಎಂದು ಎದ್ದು ಕುಳಿತಳು. ಅವಳು ಕಥೆಗೆ ಮುನ್ನ ಹೇಳುತ್ತಿದ್ದ ಹಾಡು –‘ಗುಳು ಗುಳು ಸಿದ್ದೇಶ್ವರ ಪ್ರಭು, ಬಳ ಬಳ ಬಾ ದೊರೆಯೇ’. ಅಷ್ಟಕ್ಕೆ ನಿಲ್ಲಿಸಿದಳು. ಅವಳ ಸಾಯುವ ಸಂಕಟ ಕಥೆ ಹೇಳಿಸಿಕೊಡಲಿಲ್ಲ. ‘ನಾಳೆ ಸತ್ತ ಮೇಲೆ ಚುಕ್ಕಿಯಾಗಿ ಅಲ್ಲಿಂದ ನಿನ್ನ ಮಕ್ಕಳಿಗೆ ಕಥೆ ಹೇಳ್ತೀನಿ’ ಅಂದಳು. ಈಗ ಅವಳಿಲ್ಲ.

ಪ್ರತಿ ಸಾರಿ ಆಕಾಶ ನೋಡುವಾಗ ಅವಳು ಯಾವ ನಕ್ಷತ್ರ ಎಂದು ಸುಮ್ಮನೆ ಕಣ್ಣಾಡಿಸುತ್ತೇನೆ. ನನಗೆ ಕಥೆ ಹೇಳಿ ಕತೆಗಾರ್ತಿ ಮಾಡಿದ್ದು ಸತ್ಯವಾದರೂ ಶಾಲಾ ಮಕ್ಕಳಿಗೆ ಹೇಳಿದಂತೆ ಮನೆ ಮಕ್ಕಳಿಗೆ ಕಥೆ ಹೇಳದ್ದಕ್ಕೆ ಕ್ಷಮೆ ಕೇಳುತ್ತೇನೆ... ಹೋದವರ ಹಿಂದೆ ನೆನಪುಗಳು ನಕ್ಷತ್ರಗಳಾಗಿವೆ ಎಂಬ ಸತ್ಯವನ್ನು  ನಾನೂ ನೀವೂ ಸೈನ್ಸ್‌ ಓದಿದ ಮಕ್ಕಳು ಒಪ್ಪಲಿಕ್ಕಿಲ್ಲ. ಆದರೆ ಮನಸಿನ ಭಾವದೊಳಗೆ ಬೆರೆತು ಉಸಿರಾಡುವ ಇಂಥ ಜೀವ ಕಥೆಗಳನ್ನು ಯಾವ ಸೈನ್ಸ್‌ಗೂ ನಿಯಂತ್ರಿಸಲಾಗಿಲ್ಲ... ಅಲ್ಲವೆ?
–ಲಲಿತಾ ಕೆ. ಹೊಸಪ್ಯಾಟಿ ಹುನಗುಂದ 

***
ಕಥೆಯೆಂಬ ಮೃಷ್ಟಾನ್ನ ಭೋಜನ
ಹುಡುಗರಿದ್ದಾಗ ನಾವು ಇಸ್ಕೂಲಿನ ಉಸಾಬರಿಯಿಂದ ಪಾರಾಗಲು ಪರದಾಡುತ್ತಿದ್ದೆವು. ಮಾಸ್ತರರ ‘ಛಡೀ ಛಂಛಂ, ವಿದ್ಯಾ ಘಂಘಂ’ ಅಸ್ತ್ರಗಳಿಂದ ಬೇಸತ್ತಿದ್ದ ಈ ಎಳೆ ಬದುಕಿನಲ್ಲಿ ‘ಬೇಸಿಗೆ ರಜೆ’ ಬಾಲ್ಯದ ಬಹುದೊಡ್ಡ ಸಂಭ್ರಮ. ಆಗ ನಮ್ಮಜ್ಜಿ ಮನೆಗೆ ಹೋಗಲು ಹಾತೊರೆಯುತ್ತಿದ್ದೆ. ಬಗೆಬಗೆ ಊಟ-ತಿರುಗಾಟ, ರಗಳೆ-ರಂಪಾಟ, ತೀಟೆ-ತಲೆಹರಟೆ ಹಾಗೂ ನನ್ನೆಲ್ಲಾ ಎಡವಟ್ಟುಗಳನ್ನು ಸಹಿಸಿಕೊಂಡು ಪ್ರೀತಿಯಿಂದ ಸಂಭಾಳಿಸುತ್ತಿದ್ದರು ಅಜ್ಜಿ. ಕಥೆ ಹೇಳುವುದರಲ್ಲಿ ನಮ್ಮಜ್ಜಿಯದು ಎತ್ತಿದ ಕೈ. ಊಟದ ನಂತರ ಪಡಸಾಲೆಯಲ್ಲಿ ಎಲೆ ಅಡಿಕೆ ಮೆಲ್ಲುತ್ತಾ ಕೆಂಪನೆ ನಾಲಿಗೆ ಆಡಿಸುತ್ತಾ ಕಥೆ ಹೇಳಲು ಆರಂಭಿಸುತ್ತಿದ್ದಂತೆ ನಾನು, ಓರಗೆಯ ಮಕ್ಕಳೆಲ್ಲಾ ಮುಂದೆ ಕೂತು ಕಿವಿಯಾಗುತ್ತಿದ್ದೆವು.

ಅವತ್ತು ನಮ್ಮಜ್ಜಿ ಬಾಯಿಂದ ಕೇಳಿದ್ದ ‘ತೆನಾಲಿ ರಾಮಕೃಷ್ಣ’ನ ಕಥೆ ಇವತ್ತಿಗೂ ಆಪ್ತವಾಗಿದೆ. ‘ಒಂದಾನೊಂದು ಕಾಲದಲ್ಲಿ ಕೃಷ್ಣದೇವರಾಯ ಎಂಬ ಒಬ್ಬ ರಾಜನಿದ್ದ. ಅವನ ಆಸ್ಥಾನದಲ್ಲಿ ತೆನಾಲಿ ರಾಮಕೃಷ್ಣ ಎಂಬ ಜಾಣ ಮಂತ್ರಿಯಿದ್ದ’ ಎಂದು ಶುರುವಾಗುತ್ತಿದ್ದಂತೆಯೇ ನಮ್ಮೆಲ್ಲರ ಕಣ್ಣುಗಳರಳಿ ಕಿವಿಗಳು ನೆಟ್ಟಗಾಗಿಬಿಡುತ್ತಿದ್ದವು. ‘ಕೃಷ್ಣದೇವರಾಯ ಒಮ್ಮೆ ಗೋಡೆ ಮೇಲೆ ಗೆರೆಯೆಳೆದು, ಅದನ್ನು ಮುಟ್ಟದೇ, ಅಳಿಸದೆ ಚಿಕ್ಕದು ಮಾಡಿ ತೋರಿಸಬೇಕೆಂದು ಸವಾಲು ಹಾಕುತ್ತಾನೆ. ಯಾರಿಂದಲೂ ಅದು ಸಾಧ್ಯವಾಗುವುದೇ ಇಲ್ಲ. ಕೊನೆಗೆ ತೆನಾಲಿ ರಾಮನಿಗೆ ವಿಚಾರ ತಿಳಿದು ಆ ಸಮಸ್ಯೆ ಬಿಡಿಸಲು ಮುಂದಾಗುತ್ತಾನೆ’... ಮುಂದುವರೆದಿತ್ತು ಕಥೆ. ಈ ಕ್ಷಣಕ್ಕಂತೂ ನಮ್ಮೆಲ್ಲರ ಕುತೂಹಲದ ಕಟ್ಟೆಯೊಡೆದು ಮುಂದೆ ಏನಾಯ್ತಜ್ಜೀ ಎಂದು ಪಿಳಿಪಿಳಿನೆ ಕಣ್ಣು ಮಿಟುಕಿಸುತ್ತಾ ಕೇಳಲಾಗಿ, ಅಜ್ಜಿ ಬಾಯೊಳಗಿದ್ದ ಎಲೆಯಡಿಕೆಯನ್ನು ತುಪುಕ್ಕೆಂದು ಉಗಿಯುತ್ತಾ, ‘ತೆನಾಲಿರಾಮ ಆ ಚಿಕ್ಕ ಗೆರೆ ಪಕ್ಕ ದೊಡ್ಡ ಗೆರೆ ಎಳೆದ. ಆಗ ಮಹಾರಾಜ ಬರೆದಿದ್ದ ಗೆರೆ ಚಿಕ್ಕದಾಯಿತು. ರಾಜ ಅವನಿಗೆ ಚಿನ್ನದ ವರಹಗಳನ್ನು ಕೊಟ್ಟು ಸತ್ಕರಿಸಿದ’ ಎನ್ನುತ್ತಿದ್ದಂತೆಯೇ ಬೆರಗಿನಿಂದ ನಾವೆಲ್ಲಾ ಹಲ್ಲುಗಿಂಜಿಬಿಡುತ್ತಿದ್ದೆವು.

ಆ ಕಥೆಯಲ್ಲಿದ್ದ ನೀತಿ ಮಾತ್ರ ಇಂದಿಗೂ ಬೆರಗು ಉಳಿಸಿದೆ. ‘ಇನ್ನೊಬ್ಬನನ್ನು ಚಿಕ್ಕವನನ್ನಾಗಿ ಮಾಡಬೇಕಿದ್ದರೆ, ನೀನು ದೊಡ್ಡವನಾಗಬೇಕು. ಅವನನ್ನು ಮುಟ್ಟುವುದಕ್ಕೆ ಹೋಗುವ ಬದಲು ನೀನೇ ಬೆಳೆಯಬೇಕು. ಅವರ ತಂಟೆಗೆ ಹೋಗದೆ ನಿನ್ನ ಸ್ಥಾನ ನೀನು ಕಂಡುಕೋಬೇಕು. ಇದೇ ಈ ಕಥೆಯ ನೀತಿ ಮಗು’ ಎನ್ನುತ್ತಿದ್ದರು. ಎಷ್ಟೊಂದು ಸರಳವಾಗಿ ಮಾನವೀಯ ಮೌಲ್ಯಗಳನ್ನು ಕಥೆಗಳ ಮೂಲಕ ತುಂಬುತ್ತಿದ್ದರಲ್ಲಾ ಎಂದೆನಿಸುತ್ತದೆ. ಅದಕ್ಕೇ ಹೇಳೋದು, ಊಟಕ್ಕೆ ಮಜ್ಜಿಗೆ ಲೇಸು, ಮನೆಗೆ ಅಜ್ಜಿ ಲೇಸೆಂದು.

–ಹೃದಯರವಿ ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT