ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತರಗಿತ್ತಿ ಪರಪಂಚದಲಿ ಸುತ್ತಿ...

Last Updated 14 ಜೂನ್ 2017, 19:30 IST
ಅಕ್ಷರ ಗಾತ್ರ

ಚಿಟ್ಟೆ ಹಿಡಿಯುವ ಸಾಹಸ ಮಾಡದೆ ಬಾಲ್ಯ ಕಳೆದವರೆಲ್ಲುಂಟು?. ಆದರೆ ಆ ‘ಚಿಟ್ಟೆ ಹಿಡಿಯುವ’ ಸಂತಸ ರಾಮ್‌ಪ್ರಸಾದ್‌ನನ್ನು ಆವರಿಸಿಕೊಂಡಿದ್ದು ಬೇರೆಯದೇ ರೀತಿ.

ಅಕೆರೋಂಟಿಯಾ ಅಟ್ರೊಪೋಸ್, ಡೆತ್ ಹೆಡ್ ಹ್ಯಾಮಕ್, ಪೀರಿಸ್‌ ರ್ಯಾಪಿ, ರಿಂಗ್ಲೆಟ್‌... ಹೀಗೆ ಒಂದೊಂದೇ ಹೆಸರನ್ನು ಪಟಪಟ ಹೇಳುವ ಈ ಹುಡುಗನನ್ನು ನೋಡಿ ಬೆರಗಾದವರೇ ಹೆಚ್ಚು. ಒಂದಿಷ್ಟೂ ತಡವರಿಸದೇ ಚಿಟ್ಟೆಗಳ ಕ್ಲಿಷ್ಟಕರವಾದ ವೈಜ್ಞಾನಿಕ ಹೆಸರುಗಳನ್ನು ಸಲೀಸಾಗಿ ಹೇಳುವುದನ್ನು ನೋಡಿದರೆ ಅಚ್ಚರಿಯಾಗದೇ ಇರಲು ಸಾಧ್ಯವೇ?. ಇಂಥ ನೂರಾರು ಹೆಸರುಗಳನ್ನು ಹೇಳಬಲ್ಲ ಛಾತಿ ಮುಂಬೈ ಖಾರ್‌ಘರ್‌ನ ರಾಮ್ ಪ್ರಸಾದ್‌ ಮಾಹೂರ್‌ಕರ್‌ಗಿದೆ.

ಅದೊಂದು ಸಂಜೆ ಥಾಣೆಯಲ್ಲಿನ ಓವಲೇಕರ್ ವಾಡಿ ಚಿಟ್ಟೆ ಉದ್ಯಾನಕ್ಕೆ ಹೋದಾಗ ರಾಮಪ್ರಸಾದ್‌ಗೆ ಕಣ್ಣ ತುಂಬಾ ಕುತೂಹಲ. ಅಲ್ಲಿರುವ ಚಿಟ್ಟೆಗಳನ್ನು ನೋಡುತ್ತಲೇ ಮೈಮರೆತು ಅವುಗಳೊಂದಿಗೆ ಆಟ ಆಡಿ ಮನೆಗೆ ಬಂದಾಗಲೂ ಚಿಟ್ಟೆಗಳದ್ದೇ ಗುಂಗು ಸುಳಿದಿತ್ತು. ಸಂದರ್ಭ ಎಂಬಂತೆ ಚಿಟ್ಟೆತಜ್ಞ ಮಕರಂದ ಕುಲಕರ್ಣಿ ಭೇಟಿಯೂ ಆಯಿತು. ಅದೇ ಭೇಟಿ, ಚಿಟ್ಟೆಗಳ ಅಂಚೆ ಚೀಟಿಗಳ ಸಂಗ್ರಹಕ್ಕೆ ನೆಪ ಮಾಡಿಕೊಟ್ಟಿದ್ದು. ಚಿಟ್ಟೆ ಗುರುತಿನ ಅಂಚೆ ಚೀಟಿ ಸಂಗ್ರಹ –ಲೆಪಿಫಿಲಾ ಬಗ್ಗೆ ತಿಳಿದಾಗ ಈತನ ಕುತೂಹಲ ಇಮ್ಮಡಿಯಾಯ್ತು. ಚಿಟ್ಟೆಗಳ ಹುಡುಕಾಟ ಶುರುವಾಯ್ತು. ಅಲ್ಲಿಂದ ಲೆಪಿಫಿಲಾ ಹವ್ಯಾಸಕ್ಕೆ ಹಾದಿ ತೆರೆದುಕೊಂಡಿತು.

ಐದನೇ ವಯಸ್ಸಿಗೇ ರಾಮ್‌ಪ್ರಸಾದ್‌ಗೆ ಸ್ನಾಯುಕ್ಷಯ ಸಮಸ್ಯೆ ಕಾಣಿಸಿಕೊಂಡು ಬರಬರುತ್ತಾ ಸ್ನಾಯುಶಕ್ತಿ ಕುಂದುತ್ತಾ ಬಂತು. ಇದರಿಂದ ಈತನ ಚಲನೆಯೂ ಕುಗ್ಗಿತು. ಆದರೆ ಕುತೂಹಲ, ಕಲಿಕೆಯ ಆಸಕ್ತಿ ಕುಗ್ಗಲಿಲ್ಲ. ಚಿಟ್ಟೆಗಳ ಹೆಸರನ್ನು ಸೆಕೆಂಡುಗಳಲ್ಲೇ ನೆನೆಸಿಕೊಳ್ಳಬಲ್ಲ ಹದಿಮೂರು ವಯಸ್ಸಿನ ರಾಮಪ್ರಸಾದ್‌ ಸ್ಮರಣಶಕ್ತಿ ಕಂಡು ಸೋಲದವರೇ ಇಲ್ಲ.

ಚಿಟ್ಟೆಗಳಿರುವ ಹಲವು ಅಂಚೆಚೀಟಿಗಳು, ಪೋಸ್ಟ್ ಕಾರ್ಡ್‌ಗಳು ಹಾಗೂ ಚಿಟ್ಟೆಯ ವಿನ್ಯಾಸವಿರುವ ವಸ್ತುಗಳು, ರೇಷ್ಮೆ ಬಟ್ಟೆಯ ಕಂಪೆನಿಯ ಲೇಬಲ್‌ಗಳು ಈತನ ಬಳಿಯಿವೆ. ಎರಡು ವರ್ಷಗಳ ಅವಧಿಯಲ್ಲಿ 65 ದೇಶಗಳ ಅಂಚೆ ಚೀಟಿಗಳು ಸಂಗ್ರಹದಲ್ಲಿ ಸೇರಿಕೊಂಡಿವೆ. ‘ನನಗೆ ಚಿಟ್ಟೆಗಳೆಂದರೆ ತುಂಬಾ ಇಷ್ಟ. ಏಕೆಂದರೆ ಅವು ಸುಂದರ ಹಾಗೂ ಸ್ಫೂರ್ತಿದಾಯಕ’ ಎಂದು ಮುಗ್ಧವಾಗಿ ನುಡಿಯುತ್ತಾನೆ ಈ ಪೋರ.

ಚಿಟ್ಟೆಗಳ ಅಂಚೆಚೀಟಿ ಸಂಗ್ರಹದೊಂದಿಗೆ ಆಯಾ ದೇಶಗಳ ಸಂಸ್ಕೃತಿಯ ಕುರಿತೂ ತಿಳಿದುಕೊಳ್ಳುತ್ತಿದ್ದಾನೆ. ‘ಭಾರತದಲ್ಲಿ ಚಿಟ್ಟೆಯ ಮೊದಲ ಅಂಚೆ ಚೀಟಿ ಆರಂಭಗೊಂಡಿದ್ದು 1981ರಲ್ಲಿ, ಭೂತಾನ್‌ನಲ್ಲಿ ಎರಡು ಸೆಟ್‌ಗಳು ಬಿಡುಗಡೆಯಾಗಿದ್ದು 1968ರಲ್ಲಿ’ ಎಂದು ಪೂರ್ಣ ಮಾಹಿತಿಯನ್ನೂ ನೀಡುವನು ಈತ.
ಶಾಲೆ, ಅಪಾರ್ಟ್‌ಮೆಂಟ್ ಹಾಗೂ ಚಿಟ್ಟೆ ಪಾರ್ಕ್‌ ಇವಿಷ್ಟು ರಾಮ್‌ಪ್ರಸಾದ್  ನೆಚ್ಚಿನ ತಾಣಗಳು. ವೀಲ್ ಚೇರ್ ಮೇಲೆ ಚಿಟ್ಟೆ ಪಾರ್ಕ್‌ಗೆ ಹೋಗಲು ಸಾಧ್ಯವಾಗುವುದರಿಂದ ಅಲ್ಲಿಗೇ ಹೆಚ್ಚು ಬಾರಿ ಕರೆದುಕೊಂಡು ಹೋಗುತ್ತಿದ್ದೆವು ಎನ್ನುತ್ತಾರೆ ತಾಯಿ ಪೂಜಾ.

ಅಂಚೆ ಚೀಟಿ ಸಂಗ್ರಹಿಸುವುದು ಮಾತ್ರವಲ್ಲ, ಚಿಟ್ಟೆಗೆ ಸಂಬಂಧಿಸಿದ ಯಾವುದೇ ಪುಸ್ತಕವಿದ್ದರೂ ರಾಮ್‌ಪ್ರಸಾದ್‌ಗೆ ಓದುವ ತುಡಿತ. ದಿ ವೊಯೇಜ್ ಆಫ್ ಬೀಗಲ್‌, ಕಾಮನ್‌ ಬಟರ್‌ಫ್ಲೈಸ್‌ ಆಫ್ ಇಂಡಿಯಾ, ದಿ ಬುಕ್ ಆಫ್ ಇಂಡಿಯನ್ ಬಟರ್‌ಫ್ಲೈಸ್‌ ಹೀಗೆ ಸಾಕಷ್ಟು ಪುಸ್ತಕಗಳನ್ನೂ ಓದಿದ್ದಾನೆ.

‘ನನ್ನಿಷ್ಟದ ಚಿಟ್ಟೆ ಪುಸ್ತಕ ಎಂದರೆ, ‘ಆನ್‌ ದಿ ರೂಫ್ ಆಫ್ ದಿ ವರ್ಲ್ಡ್’ ಎಂದು ನಗುತ್ತಾನೆ. ಆಗಾಗ್ಗೆ ಚಿಟ್ಟೆ ಕುರಿತ ಪುಟ್ಟ ಲೇಖನಗಳನ್ನೂ ಬರೆಯುತ್ತಾನೆ. ಐದನೇ ಮಹಡಿಯಲ್ಲಿನ ಮನೆ ರಾಮ್‌ಗೆ ಚಿಟ್ಟೆ ಹಿಡಿಯಲು  ಪ್ರಶಸ್ತ ಜಾಗವಾಗಿದೆ.

ಚಿಟ್ಟೆಗಳನ್ನು ಸೆಳೆಯಲು ದಾಸವಾಳ, ಗುಲಾಬಿ ಹಾಗೂ ಇನ್ನಿತರ ಹೂವಿನ ಗಿಡಗಳನ್ನು ನೆಟ್ಟಿದ್ದಾನೆ. ಬಾಲ್ಕನಿಯಲ್ಲಿ ಚಿಟ್ಟೆ ಬರುವುದನ್ನೇ ಕಾಯುತ್ತಾ ಕೂರುವುದು  ನೆಚ್ಚಿನ ಕೆಲಸ ಎನ್ನುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT