ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆ ಶುರು

ಸರ್ವಸಮ್ಮತ ಅಭ್ಯರ್ಥಿಗೆ ಎನ್‌ಡಿಎ ಯತ್ನ
Last Updated 14 ಜೂನ್ 2017, 19:42 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಹದಿಮೂರನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ  ಚುನಾವಣೆಗಾಗಿ  ಕೇಂದ್ರ ಚುನಾವಣಾ ಆಯೋಗ ಬುಧವಾರ ಅಧಿಸೂಚನೆ ಹೊರಡಿಸಿತು.

ಅಧಿಸೂಚನೆ ಹೊರಬಿದ್ದ ಕೆಲವೇ ತಾಸುಗಳಲ್ಲಿ ಮೂವರು ಹಿರಿಯ ಸಚಿವರನ್ನು ಒಳಗೊಂಡ ಬಿಜೆಪಿ ಉನ್ನತ ಸಮಿತಿಯು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿತು.

ರಾಷ್ಟ್ರಪತಿ ಚುನಾವಣೆಗೆ ತಮ್ಮ ಅಭ್ಯರ್ಥಿ ಯಾರೆಂದು ಬಿಜೆಪಿ ಮತ್ತು ಮಿತ್ರಪಕ್ಷಗಳು ವಾರದೊಪ್ಪತ್ತಿನಲ್ಲಿ ಸಾರಲಿವೆ. ಸರ್ಕಾರ ಇಳಿಸುವ ಹುರಿಯಾಳು ಯಾರೆಂದು ಕಾದು ನೋಡಿ ತಮ್ಮ ಪ್ರತ್ಯೇಕ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕೇ ಬೇಡವೇ ಎಂದು ಪ್ರತಿಪಕ್ಷಗಳು ತೀರ್ಮಾನಿಸಲಿವೆ.

ಪ್ರತಿಪಕ್ಷಗಳೂ ಒಪ್ಪಬಹುದಾದ ಅಭ್ಯರ್ಥಿಯನ್ನು ಹೂಡುವ ಸಂಬಂಧ ಬಿಜೆಪಿ ನೇಮಕ ಮಾಡಿರುವ ಉನ್ನತ ಸಮಿತಿಯ ಮೂವರು ಸದಸ್ಯರು ಮುಂಬರುವ ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ. ಹಿರಿಯ ಸಚಿವರಾದ ರಾಜನಾಥ್ ಸಿಂಗ್, ವೆಂಕಯ್ಯನಾಯ್ಡು ಹಾಗೂ ಅರುಣ್ ಜೇಟ್ಲಿ ಉನ್ನತ ಸಮಿತಿಯ ಸದಸ್ಯರು.

ಬಿಜೆಪಿ ಮಿತ್ರಪಕ್ಷಗಳಲ್ಲದೇ ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಮಾಯಾವತಿ ಅವರ ಬಿಎಸ್‌ಪಿ ಜೊತೆ ಈ ಸಮಿತಿ ಈಗಾಗಲೇ ಸಮಾಲೋಚನೆ ನಡೆಸಿ ಬೆಂಬಲ ಕೋರಿದೆ.

ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಐದು ವರ್ಷಗಳ ಅಧಿಕಾರಾವಧಿ ಮುಂಬರುವ ಜುಲೈ 24ರಂದು ಮುಕ್ತಾಯಗೊಳ್ಳಲಿದೆ. ಪ್ರಧಾನಿ ಮೋದಿಯವರು ಇದೇ 24ರಂದು ಅಮೆರಿಕೆಯ ಭೇಟಿಗೆ ಪ್ರಯಾಣ ಬೆಳೆಸಲಿದ್ದಾರೆ. ಅವರ ನಿರ್ಗಮನಕ್ಕೆ ಮುನ್ನ 23ರಂದೇ ಎನ್.ಡಿ.ಎ. ಅಭ್ಯರ್ಥಿಯನ್ನು ಪ್ರಕಟಿಸಲಾಗುವುದು ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

ಪ್ರತಿಪಕ್ಷಗಳ ನಾಯಕರಾದ ಶರದ್ ಯಾದವ್, ಸೀತಾರಾಂ ಯೆಚೂರಿ, ಡೆರೆಕ್ ಓ ಬ್ರಯನ್, ಗುಲಾಂ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ರಾಮಗೋಪಾಲ್ ಯಾದವ್, ಇಂದು ಇಲ್ಲಿ ಸಭೆ ಸೇರಿ ರಾಷ್ಟ್ರಪತಿ ಅಭ್ಯರ್ಥಿ ಕುರಿತು ಸಮಾಲೋಚನೆ ನಡೆಸಿದರು.


ಸುಮಿತ್ರಾ ಮಹಾಜನ

ಎನ್‌ಡಿಎ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ, ಜಾರ್ಖಂಡ್ ರಾಜ್ಯಪಾಲರಾದ ದ್ರೌಪದಿ ಮುರ್ಮು, ಕೇಂದ್ರ ಸಚಿವ ತಾವರ್‌ ಚಂದ್ ಗೆಹ್ಲೋಟ್‌, ಅಕಾಲಿದಳದ ನಾಯಕ  ಪ್ರಕಾಶ್ ಸಿಂಗ್ ಬಾದಲ್ ಅವರ ಹೆಸರುಗಳು ಮುಂದೆ ಬಂದಿವೆ.
ಪ್ರತಿಪಕ್ಷಗಳು ಮೀರಾಕುಮಾರ್, ಗೋಪಾಲಕೃಷ್ಣ ಗಾಂಧಿ ಅವರ ಹೆಸರು­ಗಳನ್ನು ಪ್ರತಿಪಕ್ಷಗಳು ಪರಿಗಣಿಸುತ್ತಿವೆ.

ಒಟ್ಟು 776 ಮಂದಿ ಸಂಸತ್ ಸದಸ್ಯರು, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 4,120 ಶಾಸಕರು ಹೊಸ ರಾಷ್ಟ್ರಪತಿಯನ್ನು ಆರಿಸಲಿದ್ದಾರೆ.
ಈ 4,986 ಮಂದಿ ಮತದಾರರ ಒಟ್ಟು ಮತ ಮೌಲ್ಯ 10.98 ಲಕ್ಷ. ಗೆಲ್ಲುವ ಅಭ್ಯರ್ಥಿ ಸರಳ ಬಹುಮತ ಗಳಿಸಿದರೆ ಸಾಕು.


ದ್ರೌಪದಿ ಮುರ್ಮು

ಉತ್ತರಪ್ರದೇಶ ಮತ್ತು ಉತ್ತರಾಖಂಡದ ಘನ ಗೆಲುವಿನ ನಂತರವೂ ರಾಷ್ಟ್ರಪತಿ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಬಲ್ಲ ಪೂರ್ಣ ಬಹುಮತ ಬಿಜೆಪಿ ನೇತೃತ್ವದ ಎನ್‌ಡಿಎಗೆ ದಕ್ಕಿಲ್ಲ. ಈ ಕೊರತೆಯನ್ನು ತುಂಬಿಸಿ­ಕೊಂಡು ಗೆಲ್ಲುವ ಆತ್ಮವಿಶ್ವಾಸವನ್ನು ಎನ್‌ಡಿಎ ಹೊಂದಿದೆ.

ಸುಮಾರು 18 ಸಾವಿರ ಮತಗಳ ಕೊರತೆಯನ್ನು ಎದುರಿಸಿದೆ. ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಪ್ರತಿಪಕ್ಷಗಳಿಗೆ ಒಂದೂವರೆ ಲಕ್ಷ ಮತಗಳ ಕೊರತೆಯಿದೆ. ವೈ.ಎಸ್.ಆರ್. ಕಾಂಗ್ರೆಸ್ ಮತ್ತು ಟಿ.ಆರ್.ಎಸ್. ತಮ್ಮ ಬೆಂಬಲ ಎನ್.ಡಿ.ಎ. ಅಭ್ಯರ್ಥಿಗೆ ಎಂದು ಈಗಾಗಲೆ ಸಾರಿವೆ. ಅಣ್ಣಾ ಡಿ.ಎಂ.ಕೆ. ಮತ್ತು ಬಿಜು ಜನತಾದಳದ ಬೆಂಬಲವೂ ತನಗೆ ದೊರೆಯುವುದೆಂಬ ವಿಶ್ವಾಸವನ್ನು ಎನ್.ಡಿ.ಎ. ಹೊಂದಿದೆ.


ಪ್ರಕಾಶ್ ಸಿಂಗ್ ಬಾದಲ್

ನಾಮಪತ್ರಗಳನ್ನು ಸಲ್ಲಿಸಲು ಇದೇ 28 ಕಡೆಯ ದಿನ. ಮರು ದಿನ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ಅವುಗಳನ್ನು ಜುಲೈ 1ರ ಒಳಗಾಗಿ ವಾಪಸು ಪಡೆಯಬಹುದು. ಮತದಾನ ಜರುಗಿದಲ್ಲಿ, ಜುಲೈ 20ರಂದು ಮತಗಳ ಎಣಿಕೆ ನಡೆಯಲಿದೆ. ಅಲ್ಲಿಂದಾಚೆಗೆ ನಾಲ್ಕು ದಿನಗಳ ನಂತರ ಹಾಲಿ ರಾಷ್ಟ್ರಪತಿಯವರು ನಿವೃತ್ತರಾಗಲಿದ್ದು, ಮರುದಿನ ಹೊಸ ರಾಷ್ಟ್ರಪತಿ ಅಧಿಕಾರ ಸ್ವೀಕರಿಸಲಿದ್ದಾರೆ.


ತಾವರ್‌ ಚಂದ್ ಗೆಹ್ಲೋಟ್

ಪಾಟಾಳಿ ಮಕ್ಕಳ್ ಕಚ್ಚಿಯ ಅನ್ಬುಮಣಿ ರಾಮದಾಸ್, ಬಿ.ಎಸ್.ಪಿ.ಯ ಸತೀಶ್ ಮಿಶ್ರಾ, ಎನ್.ಸಿ.ಪಿ.ಯ ಪ್ರಫುಲ್ ಪಟೇಲ್ ಅವರೊಂದಿಗೆ ವೆಂಕಯ್ಯನಾಯ್ಡು ಸಮಾಲೋಚನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT