ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಕೊಳದಲ್ಲಿ ಹೊಳೆವ ಮೀನು!

Last Updated 15 ಜೂನ್ 2017, 19:30 IST
ಅಕ್ಷರ ಗಾತ್ರ

‘ನಾನು ಈಜು ಕಲಿತಿದ್ದು ಎರಡನೇ ತರಗತಿಯಲ್ಲಿದ್ದಾಗ. ಆದರೆ ರಾಷ್ಟ್ರಮಟ್ಟದ  ಈಜು ಸ್ಪರ್ಧೆಯಲ್ಲಿ ಪದಕ ಗಳಿಸಿದಾಗ ನಾನು ಎಂಟನೇ ತರಗತಿ. ಒಂದು ಪದಕಕ್ಕಾಗಿ ಆರು ವರ್ಷ ನಿರಂತರ ಅಭ್ಯಾಸ ಮಾಡಿದ್ದೇನೆ. ಗೆಲುವು ಸುಲಭ ಅಲ್ಲ; ಅದು ತತ್‌ಕ್ಷಣ ಸಿಗುವ ಫಲವಲ್ಲ, ಹಾಗೆಯೇ ಸೋಲು ಕೂಡ ಮುಕ್ತಾಯವಲ್ಲ ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ’

ತುಂಬ ಸ್ಪಷ್ಟವಾಗಿ ಅಷ್ಟೇ ಆತ್ಮವಿಶ್ವಾಸದಿಂದ, ‘ಗುಂಡು ಹೊಡೆದ ಹಾಗೆ’ ಅನ್ನುತ್ತಾರಲ್ಲಾ ಹಾಗೆ ಮಾತನಾಡುತ್ತಿದ್ದರು ಮಿಲನಾ ನಾಗರಾಜ್‌. ಅರೇ, ಈ ಹುಡುಗಿ ಸಿನಿಮಾ ನಟಿಯಲ್ಲವೇ? ಇದೇನು ಈಜು ಸ್ಪರ್ಧೆಯಲ್ಲಿ ಗೆದ್ದ ಕಥೆ ಹೇಳುತ್ತಿದ್ದಾಳೆ ಎಂದು ಹುಬ್ಬೇರಿಸಬೇಡಿ. ಅಂದು ಎಂಟನೇ ತರಗತಿಯಲ್ಲಿ ನೀಲಿಕೊಳದ ಜಲದಿಂದ ತಲೆಯೆತ್ತಿ ಗೆಲುವಿನ ನಗುವಲ್ಲಿ ತೇಲಿದ್ದ ಆ ಹುಡುಗಿ ಮತ್ತು ‘ಚಾರ್ಲಿ’, ‘ಬೃಂದಾವನ’, ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದ ಈ ಮಿಲನಾ ನಾಗರಾಜ್‌ ಇಬ್ಬರೂ ಒಬ್ಬರೇ!

2013ರಲ್ಲಿ ‘ನಮ್‌ ದುನಿಯಾ ನಮ್‌ ಸ್ಟೈಲ್‌’ ಸಿನಿಮಾ ಮೂಲಕ ಸಿನಿಜಗತ್ತಿಗೆ  ಜಿಗಿದ ಮಿಲನಾ, ಹಾಸನ ಮೂಲದವರು. ಬಾಲ್ಯದಲ್ಲಿ ಈಜುಕೊಳದ ಇನ್ನೊಂದು ತುದಿಯೇ ಅವರಿಗೆ ಸಾಧನೆಯ ಗುರಿಯಾಗಿತ್ತು. ನಂತರ ಎಂಜಿನಿಯರಿಂಗ್‌  ಮಾಡಲೆಂದು ಬೆಂಗಳೂರಿಗೆ ಬಂದು, ಅಲ್ಲಿ ‘ಮಿಸ್‌ ಕರ್ನಾಟಕ’ ಸೌಂದರ್ಯಸ್ಪರ್ಧೆಯಲ್ಲಿ ಗೆದ್ದು, ಅಲ್ಲಿಂದ ಮಾಡೆಲಿಂಗ್‌, ನಂತರ ಸಿನಿಮಾ ಜಗತ್ತಿಗೆ ಅವರ ಬದುಕು ಹೊರಳಿಕೊಂಡರೂ ಅವರೊಳಗೆ ಇಂದಿಗೂ ಪ್ರವಹಿಸುತ್ತಿರುವುದು ಬಾಲ್ಯದ ಈಜುಗಾರ್ತಿಯ ಛಲವೇ.

ಹಾಗಾಗಿಯೇ ಈಗ ಸಿನಿಮಾ ಜಗತ್ತಿನ ಬಗ್ಗೆ ಮಾತಾಡುತ್ತಿರುವಾಗಲೂ ಆ ಈಜುಗಾರ್ತಿ ಮತ್ತೆ ಮತ್ತೆ ಇಣುಕುತ್ತಿರುತ್ತಾರೆ. ಕ್ರೀಡಾಪಟುವಿಗೆ ಇರಬೇಕಾದ ಛಲ, ಸ್ಪಷ್ಟತೆ, ಸಕಾರಾತ್ಮಕ ಮನಸ್ಥಿತಿ ಎಲ್ಲವೂ ಅವರಲ್ಲಿದೆ. ಆ ದೃಷ್ಟಿಯಿಂದ ಅವರನ್ನು ಚಂದನವನವೆಂಬ ಕೊಳದಲ್ಲಿ ಹೊಳೆಯುತ್ತ ಈಜುವ ಚೆಂದದ ಮೀನಿಗೆ ಹೋಲಿಸಬಹುದು. 
ಮೂರೂವರೆ ವರ್ಷಗಳ ಚಿತ್ರಜಗತ್ತಿನ ಪಯಣದಲ್ಲಿ ಸೋಲು–ಗೆಲುವುಗಳು ಅವರನ್ನು ದಿಕ್ಕೆಡಿಸಿಲ್ಲ. ಬದಲಿಗೆ ನಿನ್ನೆಗಳನ್ನು ಹಿಂದಕ್ಕೆ ನೂಕಿ ಇನ್ನಷ್ಟು ಉತ್ಸಾಹದಿಂದ ಮುಂದಕ್ಕೆ ಜಿಗಿಯುವ ಕೌಶಲವನ್ನು ಕಲಿಸಿವೆ.

ಸದ್ಯ ರಾಘವೇಂದ್ರ ರಾಜಕುಮಾರ್‌ ಅವರ ಜತೆ ‘ಮಿಸ್ಟರ್‌ ಜಾನಿ’, ಮಲಯಾಳಂ ಭಾಷೆಯ ‘ಅವರುಡೆ ರಾವುಕಲ್‌’, ಜತೆಗೆ ಭರತ್‌ ಜೆ. ನಿರ್ದೇಶನದ ‘ಫ್ಲೈ’ ಮೂರು ಚಿತ್ರಗಳು ಪೂರ್ತಿಯಾಗಿವೆ. ಇದೇ ವರ್ಷ ಬಿಡುಗಡೆಯಾಗಲಿವೆ ಕೂಡ.

‘ಸುಮ್ಮನೆ ಒಂದಿಷ್ಟು ಸಿನಿಮಾ ಮಾಡುತ್ತಿರುವುದು ಮತ್ತು ಒಳ್ಳೆಯ ಸಿನಿಮಾ ಮಾಡುವುದಕ್ಕೂ ತುಂಬ ವ್ಯತ್ಯಾಸವಿದೆ. ಇಷ್ಟು ವರ್ಷಗಳ ಅನುಭವದಲ್ಲಿ ಒಂದು ಒಳ್ಳೆಯ ಸಿನಿಮಾ ಮಾಡುವುದು ಎಷ್ಟು ಮುಖ್ಯ ಎನ್ನುವುದು ನನಗೆ ಮನವರಿಕೆ ಆಗಿದೆ’ ಎಂದು ನೇರವಾಗಿಯೇ ಹೇಳುವ ಅವರು ‘ಯಾವುದೇ ಕಲಾವಿದರಿಗೆ ತಮ್ಮೊಳಗಿನ ಅಭಿನಯ ಪ್ರತಿಭೆಯನ್ನು ಸಾಬೀತು ಮಾಡುವಂಥ ಪಾತ್ರಗಳು ಸಿಕ್ಕುವುದು ತುಂಬ ಅವಶ್ಯ. ‘ಫ್ಲೈ’ ಸಿನಿಮಾದಲ್ಲಿ ನಾನು ಅಂಥ ಪಾತ್ರ ನಿರ್ವಹಿಸಿದ್ದೇನೆ. ಅಲ್ಲದೇ ಆ ಸಿನಿಮಾಗೆ ಸಾಕಷ್ಟು ಸಮಯವನ್ನು ವ್ಯಯಿಸಿದ್ದೇನೆ’ ಎನ್ನುತ್ತಾರೆ. ಆದರೆ ಆ ಚಿತ್ರದಲ್ಲಿ ಎಂಥ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೀರಿ ಎಂದು ಕೇಳಿದರೆ ಗುಟ್ಟು ಬಿಟ್ಟುಕೊಡದೇ ‘ಕಾದು ನೋಡಿ’ ಎಂದು ಸುಮ್ಮನೇ ನಗುತ್ತಾರೆ.

ಹಾಗೆಯೇ ‘ಮಿಸ್ಟರ್‌ ಜಾನಿ’ ಮತ್ತು ಮಲಯಾಳಂನ ಸಿನಿಮಾದಲ್ಲಿಯೂ ತುಂಬ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿರುವ ತೃಪ್ತಿ ಅವರಿಗಿದೆ. ಹೀಗೆ ಭಿನ್ನ ಮತ್ತು ಸತ್ವಯುತ ಪಾತ್ರಗಳಲ್ಲಿ ನಟಿಸುವುದು ಅವರ ಆದ್ಯತೆಯೂ ಹೌದು. ಅದಕ್ಕಾಗಿ ಅವರು ಕಾಯಲೂ ಸಿದ್ಧರಿದ್ದಾರೆ.

ತಾವು ನಟಿಸಿರುವ ಸಿನಿಮಾಗಳು ಸೂಪರ್‌ಹಿಟ್‌ ಆಗಿಲ್ಲ ಎಂಬುದು ಅವರ ಧೃತಿಗೆಡಿಸಿಲ್ಲ. ಈ ಕುರಿತು ಮಾತನಾಡುವಾಗ ಮತ್ತದೇ ಕ್ರೀಡಾಪಟುವಿನ ನಿರಂತರ ಪರಿಶ್ರಮದ ನಿದರ್ಶನವನ್ನು ಮುಂದಿಡುತ್ತಾರೆ. ಸೋಲು–ಗೆಲುವುಗಳನ್ನು ಸಮನಾಗಿ ಕಾಣುವ ಸ್ಥಿತಪ್ರಜ್ಞ ಮನಸ್ಥಿತಿ ಅವರದು.

‘ನಾನು ಮೂಲಭೂತವಾಗಿ ವಸ್ತುನಿಷ್ಠ ಮನಸ್ಥಿತಿಯವಳು. ನನಗೆ ನಾನೇ ದೊಡ್ಡ ವಿಮರ್ಶಕಳು. ಸಿನಿಮಾ ಮುಗಿದ ಮೇಲೆ ಆ ಸಿನಿಮಾವನ್ನು ಜನರು ಹೇಗೆ ಸ್ವೀಕರಿಸಬಹುದು ಎಂಬ ಸಣ್ಣ ಸುಳಿವು ನಮಗೆ ಮೊದಲೇ ಸಿಕ್ಕಿರುತ್ತದೆ. ಆದ್ದರಿಂದ ಅಂಧವಾಗಿ ಯಾವುದೇ ಸಿನಿಮಾ ಅಥವಾ ಪಾತ್ರದ ಮೇಲೆ ನಿರೀಕ್ಷೆಗಳನ್ನು ಬೆಳೆಸಿಕೊಳ್ಳುವುದೇ ಇಲ್ಲ. ಹಾಗೆಯೇ ನನ್ನ ಸಿನಿಮಾವನ್ನು ಯಾರಾದರೂ ಟೀಕಿಸಿದರೆ ಅದು ಚೆನ್ನಾಗಿದೆ ಎಂದು ವಾದಿಸಲೂ ಹೋಗುವುದಿಲ್ಲ’ ಎಂದು ಸ್ಪಷ್ಟವಾಗಿಯೇ ನುಡಿಯುತ್ತಾರೆ ಮಿಲನಾ.
ಒಂದು ಪಾತ್ರವನ್ನು ಒಪ್ಪಿಕೊಂಡ ಮೇಲೆ ಅದಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುವುದು ಮಿಲನಾ ಅವರು ರೂಢಿಸಿಕೊಂಡು ಬಂದಿರುವ ತತ್ವ. 

‘ಒಂದೊಂದು ಪಾತ್ರಕ್ಕೆ ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು ಎಂದರೆ ಅಂಥ ಪಾತ್ರಗಳು ಸೃಷ್ಟಿಯಾಗಬೇಕು. ಅಂಥ ಪಾತ್ರಗಳಲ್ಲಿ ನಟಿಸಿದ ಮೇಲೆ ನಂತರ ಸಾಮಾನ್ಯ ಪಾತ್ರಗಳನ್ನು ಒಪ್ಪಿಕೊಳ್ಳಲಿಕ್ಕೆ ಮನಸ್ಸೇ ಆಗುವುದಿಲ್ಲ. ಯಾರೋ ಬಂದು ನೀವ್ಯಾಕೆ ಸಿನಿಮಾ ಮಾಡ್ತಿಲ್ಲ ಎಂದು ಕೇಳುತ್ತಾರೆ ಎಂಬ ಕಾರಣಕ್ಕೆ ನಾನು ಸಿನಿಮಾ ಮಾಡಲಿಕ್ಕಾಗುವುದಿಲ್ಲ. ಆ ಸಿನಿಮಾ ನನಗೆ ಇಷ್ಟವಾಗಬೇಕು. ಹಾಗಿದ್ದಾಗ ಮಾತ್ರ ನಾನು ಒಪ್ಪಿಕೊಳ್ಳುವುದು’ ಎಂದು ಅವರು ಖಡಕ್ಕಾಗಿ ಉತ್ತರಿಸುತ್ತಾರೆ.

ತೆರೆಯ ಮೇಲಷ್ಟೇ ಅಲ್ಲ, ತೆರೆಯ ಹಿಂದೆಯೂ ಚಿತ್ರರಂಗದಲ್ಲಿ ಹೆಣ್ಣಿಗೆ ಇರುವ ಸವಾಲುಗಳ ಬಗ್ಗೆ ಕೂಡ ಅವರು ದಿಟ್ಟವಾಗಿಯೇ ಮಾತನಾಡುತ್ತಾರೆ.

‘ಪ್ರತಿಭೆ ಅನ್ನುವುದು ಎಲ್ಲದಕ್ಕೂ ಮೀರಿದ್ದು. ನೋಡಲು ಚೆನ್ನಾಗಿದ್ದು ಪ್ರತಿಭೆಯೂ ಇದ್ದರೆ ಉಳಿದವ್ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಅವಕಾಶಗಳು ನಿಮ್ಮನ್ನು ಅರಸಿಕೊಂಡು ಬರುತ್ತವೆ. ಆದರೆ ಸಿಕ್ಕಿದ ಅವಕಾಶಗಳಲ್ಲಿಯೇ ನಮ್ಮ ಪ್ರತಿಭೆಯನ್ನು ಸಾಬೀತುಪಡಿಸಿ­ಕೊಳ್ಳ­ಬೇಕು. ಆಗ ಇನ್ನಷ್ಟು ಅವಕಾಶ­ಗಳು ಖಂಡಿತ ಬರುತ್ತವೆ’ ಎನ್ನುವ ಅವರಿಗೆ ಗೆಲುವಿನ ಅವಸರ ಇಲ್ಲ.

‘ಒಬ್ಬರಿಗೆ ಒಂದೇ ವರ್ಷಕ್ಕೆ ಯಶಸ್ಸು ಸಿಗಬಹುದು. ಇನ್ನೊಬ್ಬರಿಗೆ ಐದು ವರ್ಷ ಆಗಬಹುದು. ಮತ್ತೊಬ್ಬರಿಗೆ ಹತ್ತು ವರ್ಷ ಆಗಬಹುದು.  ಹಾಗಂತ ಬೇಜಾರಾಗಿ ನಾವು ಸೋತುಬಿಟ್ಟರೆ ಅಲ್ಲಿಗೆ ಎಲ್ಲವೂ ಮುಗಿದುಹೋಗುತ್ತದೆ. ಇಲ್ಲಿ ಯಾರೂ ಬಂದು ನಮಗೆ ಯಶಸ್ಸನ್ನು ತಂದುಕೊಡುವುದಿಲ್ಲ. ನಮಗೆ ಬೇಕು ಎಂದರೆ ನಾವು ಕಾಯಬೇಕು ಅಷ್ಟೆ’ ಎಂದು ಕರಾರುವಾಕ್‌ ಆಗಿ ಹೇಳುವ ಮಿಲನಾ ಯಶಸ್ಸಿನ ಅಡ್ಡದಾರಿಗಳತ್ತ ತಲೆಹಾಕಿಯೂ ಮಲಗುವವರಲ್ಲ.

ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದರೂ ಅವರೊಳಗಿನ ಸ್ವಿಮ್ಮರ್‌ ಇನ್ನೂ ಜೀವಂತವಾಗಿದ್ದಾಳೆ. ಆದರೆ ಆ ಈಜುಗಾರ್ತಿಗೀಗ ಸ್ಪರ್ಧೆಯ ಒತ್ತಡವಿಲ್ಲ. ಗೆಲ್ಲಲೇಬೇಕಾದ ಅನಿವಾರ್ಯತೆಯಿಲ್ಲ. ಆದರೆ ಈಜುಕೊಳಕ್ಕೆ ಮತ್ತೊಂದು ತುದಿಯಂತೂ ಇದ್ದೇ ಇರುತ್ತದೆ. ಆ ಆಚೆಯ ದಡವನ್ನು ಲಕ್ಷ್ಯವಿಟ್ಟುಕೊಂಡು  ಈಜುವ ಖಯಾಲಿ ಮಿಲನಾ ಅವರೊಳಗೆ ಇನ್ನೂ ಇದೆ. ಸ್ಪರ್ಧೆಯ ಉತ್ಸಾಹವೀಗ ಸಾವಧಾನದ ಬೆನ್ನೇರಿದೆ. ಅದೇ ಮನಸ್ಥಿತಿ ಅವರ ನಟನಾ ಬದುಕನ್ನೂ ಮುನ್ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT