ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲುಗಳ ನಡುವೆ ಅಂತರ!

Last Updated 16 ಜೂನ್ 2017, 19:30 IST
ಅಕ್ಷರ ಗಾತ್ರ

ಅವನಿ ಕಾಲೇಜಿಗೆ ಹೋಗುತ್ತಿರುವ ಹದಿಹರೆಯದ ಹುಡುಗಿ. ಚೆಂದವಿದ್ದರೂ ಏಕೋ ಮುಖ ಮಾತ್ರ ಯಾವಾಗಲೂ ಗಂಟು. ಮಾತೂ ಕಡಿಮೆಯೇ. ಕಾರಣ ಸೊಕ್ಕು, ಜಂಭವಲ್ಲ; ಹಲ್ಲುಗಳ ನಡುವೆ ಇರುವ ಅಂತರ. ಅದರಿಂದಾಗಿ ಆಕೆಗೆ ಬಾಯಿ ತೆರೆಯಲೇ ಮುಜುಗರ. ದಂತವೈದ್ಯರಲ್ಲಿ ಸಲಹೆ ಕೇಳಿ ಸರಿಪಡಿಸೋಣ ಅಂದರೆ ಮನೆಯಲ್ಲಿರುವ ಅಜ್ಜಿಯ ವಿರೋಧ. ‘ಹಲ್ಲಿನ ನಡುವೆ ಸಂದಿ ಇದ್ದರೆ ಅದೃಷ್ಟವಂತರು. ಅದನ್ನು ಏನಾದರೂ ಮಾಡಿಬಿಟ್ಟರೆ ಅದೃಷ್ಟ ಕೈ ಕೊಡುತ್ತೆ. ಏನೂ ಬೇಡ.’ ಆತ್ಮವಿಶ್ವಾಸ- ಅದೃಷ್ಟದ ನಡುವೆ ಮಾಡುವುದೇನು ಎಂದು ತೋಚದೆ, ಈಗೀಗ ಕಾಲೇಜು ಬೇಡ – ಎನ್ನುವ ಮನಃಸ್ಥಿತಿ ಅವನಿಯದ್ದು.

ಹಲ್ಲುಗಳ ನಡುವೆ ಅಂತರ ಅಥವಾ ಸಂದುಗಳು ಅನೇಕರಲ್ಲಿ ಕಂಡುಬರುತ್ತವೆ. ಈ ರೀತಿಯ ಅಂತರದಿಂದ ಸಾಮಾನ್ಯವಾಗಿ ಯಾವುದೇ ರೀತಿಯ ಹಾನಿ ಇಲ್ಲ. ಆದರೆ ಬಾಯಿ ತೆಗೆದೊಡನೆ ಕಾಣುವ ಈ ಸಂದುಗಳು ಮುಖದ ಅಂದವನ್ನು ತಗ್ಗಿಸುತ್ತದೆ. ಆತ್ಮವಿಶ್ವಾಸ ಹೆಚ್ಚಲು ಪ್ರಮುಖ ಪಾತ್ರ ವಹಿಸುವ ಹಲ್ಲುಗಳೇ ಅವುಗಳ ಮಧ್ಯೆ ಉಂಟಾಗಿರುವ ಅಂತರ ಕಿರಿಕಿರಿಯನ್ನುಂಟು ಮಾಡಬಲ್ಲದು. ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯಲು ತಡೆಯೊಡ್ಡಬಹುದು. ಅದನ್ನು ಚಿಕಿತ್ಸೆಯ ಮೂಲಕ ಸರಿಪಡಿಸುವ ತೀರ್ಮಾನ ವ್ಯಕ್ತಿಗತವಾದದ್ದು. ಉದಾಹರಣೆಗೆ, ಖ್ಯಾತ ಗಾಯಕಿ ಮಡೋನಾ ಮತ್ತು ಹಾಲಿವುಡ್ ನಟ ಎಡ್ಡಿ ಮರ್ಫಿ ತಮ್ಮ ಅಂತರವಿರುವ ಹಲ್ಲುಗಳ ನಗುವಿಗಾಗಿಯೇ ಪ್ರಸಿದ್ಧರು! ಭಾರತದಲ್ಲಿ ಕೆಲವರು ಹಲ್ಲುಗಳ ನಡುವೆ ಇರುವ ಅಂತರ ಅದೃಷ್ಟವನ್ನು ತರುತ್ತದೆ ಎಂದು ನಂಬುತ್ತಾರೆ. ಆಫ್ರಿಕಾದಲ್ಲಿ ಸ್ತ್ರೀಯರಿಗೆ ಇದು ಫಲವಂತಿಕೆ ಮತ್ತು ಸೌಂದರ್ಯದ ಲಕ್ಷಣವಾಗಿದ್ದರೆ, ಫ್ರಾನ್ಸಿನಲ್ಲಿ ಹೀಗಿದ್ದರೆ ಭಾಗ್ಯವಂತರು! ಹಲ್ಲುಗಳ ನಡುವೆ ಅಂತರ, ಸೌಂದರ್ಯದ ದೃಷ್ಟಿಯಿಂದ  ಚೆಂದವೋ ಅಲ್ಲವೋ ಎಂಬುದು ಅವರವರ ವೈಯಕ್ತಿಕ ನಿರ್ಧಾರ. ಆದರೆ ಅದೃಷ್ಟ-ಫಲವಂತಿಕೆ-ಭಾಗ್ಯಕ್ಕೂ ಹಲ್ಲುಗಳ ನಡುವಿನ ಅಂತರಕ್ಕೂ ಯಾವುದೇ ಸಂಬಂಧವಿಲ್ಲ.

ಯಾವುದೇ ಹಲ್ಲುಗಳ ನಡುವೆ ಅಂತರ ಕಾಣಬಹುದಾದರೂ ಹೆಚ್ಚಿನ ಸಂದರ್ಭಗಳಲ್ಲಿ ಮೇಲಿನ ದವಡೆಯ ಮುಂಭಾಗದ ಬಾಚಿ ಹಲ್ಲುಗಳ ನಡುವೆ ಅಂತರವಿರುತ್ತದೆ. ಅದು ಪ್ರಮುಖವಾಗಿ ಕಾಣುವ ಸ್ಥಳವಾಗಿರುವುದರಿಂದ ಜನರು ಗಮನಿಸುವುದೂ ಹೆಚ್ಚು. ಇದನ್ನು ‘ಡಯಾಸ್ಟೇಮಾ’ ಎಂದು ಕರೆಯಲಾಗುತ್ತದೆ.

ಮಕ್ಕಳಲ್ಲಿ ಕಂಡುಬರುವ ಹಾಲುಹಲ್ಲುಗಳಲ್ಲಿ ಅಂತರದ ಪ್ರಮಾಣ ಹೆಚ್ಚು. ಹಲ್ಲಿನ ಬೆಳವಣಿಗೆಯ ದೃಷ್ಟಿಯಿಂದ ಇದು ಒಳ್ಳೆಯದು. ಸೌಂದರ್ಯ, ಸ್ಪಷ್ಟ ಮಾತು, ಮುಖದ ಬೆಳವಣಿಗೆ, ಅಗಿಯುವಿಕೆಗಳ ಜೊತೆಗೆ ಹಾಲುಹಲ್ಲುಗಳು ಮುಂದೆ ಬರಲಿರುವ ಶಾಶ್ವತ ಹಲ್ಲುಗಳಿಗೆ ಸರಿಯಾದ ಪಥವನ್ನು ತೋರುವ ಮಾರ್ಗದರ್ಶಕವಾಗಿ ಕಾರ್ಯ ನಿರ್ವಹಿಸುತ್ತವೆ. ಹಾಲುಹಲ್ಲುಗಳು ಬಿದ್ದು ಆ ಜಾಗಕ್ಕೆ ಬರುವ ಶಾಶ್ವತ ಹಲ್ಲುಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಹೀಗೆ ಹಾಲುಹಲ್ಲುಗಳ ನಡುವಿನ ಅಂತರ ಈ ಹಾಲು-ಶಾಶ್ವತ ಹಲ್ಲುಗಳ ಗಾತ್ರದ ವ್ಯತ್ಯಾಸವನ್ನು ಸರಿತೂಗಿಸಲು ಸಹಾಯಕ.

ಚಿಕಿತ್ಸೆ
* ಹಲ್ಲಿನ ನಡುವಿನ ಅಂತರ, ಅಂತರಕ್ಕೆ ಕಾರಣ, ವ್ಯಕ್ತಿಯ ವಯಸ್ಸು ಮತ್ತು ಅನುಕೂಲತೆಗೆ ಅನುಗುಣವಾಗಿ ಹಲ್ಲಿನ ಅಂತರ ಮುಚ್ಚಲು ನಾನಾ ಚಿಕಿತ್ಸಾಕ್ರಮಗಳು ಲಭ್ಯವಿವೆ.

* ಮಕ್ಕಳಿಗೆ ಸಾಧಾರಣವಾಗಿ ಯಾವುದೇ ರೀತಿಯ ಚಿಕಿತ್ಸೆ ಅಗತ್ಯವಿಲ್ಲ. ಹಾಲುಹಲ್ಲು ಬಿದ್ದು ಶಾಶ್ವತ ಹಲ್ಲು ಬಂದಂತೆ ಅಂತರ ತಾನಾಗಿ ಮುಚ್ಚುತ್ತದೆ. ಬಾಲ್ಯದಿಂದಲೇ ಬೆರಳು ಚೀಪುವಿಕೆ, ನಾಲಿಗೆ ಹೊರಚಾಚುವಿಕೆಯನ್ನು ತಡೆಗಟ್ಟಬೇಕು. ನಿಯಮಿತವಾಗಿ ದಂತವೈದ್ಯರ ಬಳಿ ಭೇಟಿ ಮಾಡಿ ಹಲ್ಲುಗಳ ಬೆಳವಣಿಗೆಯನ್ನು ಗಮನಿಸಿ ಸಲಹೆ ಪಡೆಯಬೇಕು.

  * ಸಣ್ಣ ಅಂತರವಾದಲ್ಲಿ ಹಲ್ಲಿನ ಬಣ್ಣದ್ದೇ ಕಾಂಪೋಸಿಟ್ ಫಿಲ್ಲಿಂಗ್, ಅಥವಾ ಹಲ್ಲಿಗೆ ತೆಳುವಾದ ಪದರ ವೆನಿಯರಿಂಗ್ ಮಾಡಿ ಅಂತರ ಮುಚ್ಚಬಹುದು.
* ಹಲ್ಲು ಇಲ್ಲದಿದ್ದಲ್ಲಿ ಅಥವಾ ಆಕಾರದಲ್ಲಿ ದೋಷವಿದ್ದರೆ ಕ್ಯಾಪ್, ಕೃತಕ ದಂತಗಳನ್ನು ಹಾಕಿ ಸರಿಪಡಿಸಬಹುದು.

* ಫ್ರೀನಮ್ ದೊಡ್ಡದಿದ್ದಲ್ಲಿ ಮೊದಲು ಸಣ್ಣ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಸರಿಮಾಡಿ ನಂತರ ಅಂತರವನ್ನು ಮುಚ್ಚಲಾಗುತ್ತದೆ.

* ಹಲ್ಲಿಗೆ ತಂತಿ ಹಾಕಿ ನಿರ್ದಿಷ್ಟ ಜಾಗಕ್ಕೆ ಬರುವಂತೆ ಆ ಮೂಲಕ ಅಂತರ ಮುಚ್ಚುವಂತೆ ಆರ್ಥೊಡಾಂಟಿಕ್  ಚಿಕಿತ್ಸೆಯಿಂದ ಸಾಧ್ಯ. ಅಂತರ ಮುಚ್ಚಿದರೂ ಮತ್ತೆ ಮರುಕಳಿಸುವ ಸಾಧ್ಯತೆ ಇರುವುದರಿಂದ ಶಾಶ್ವತವಾಗಿ ಹಲ್ಲಿನ ಹಿಂಭಾಗದಲ್ಲಿ ಒಂದು ಸಣ್ಣ ತಂತಿ ಕೂರಿಸಬೇಕಾಗಬಹುದು.

* ಮೂಳೆಯ ಸೋಂಕಿದ್ದಾಗ ಅದನ್ನು ಮೊದಲು ನಿಯಂತ್ರಣಕ್ಕೆ ತರಲಾಗುತ್ತದೆ. ನಂತರ ಸಡಿಲವಾದ ಹಲ್ಲಿಗೆ ತಂತಿ ಬಿಗಿದು ಗಟ್ಟಿಯಾಗಿಸಿ ಮತ್ತಷ್ಟು ಅಲುಗಾಡದಂತೆ, ದೂರಸರಿಯದಂತೆ ಚಿಕಿತ್ಸೆ ಮಾಡಲಾಗುತ್ತದೆ.

* ಹಲ್ಲುಗಳ ನಡುವೆ ಅಂತರವಿದ್ದಾಗ ಚಿಂತಿಸಬೇಕಾಗಿಲ್ಲ; ಅದನ್ನು ಮುಚ್ಚಲು, ಹತ್ತಿರ ತರಲು ಸಾಧ್ಯವಿದೆ. ಅದರೊಂದಿಗೇ ಒಸಡು, ಹಲ್ಲು ಮತ್ತು ಮೂಳೆಯ ಆರೋಗ್ಯಕ್ಕಾಗಿ ಬ್ರಶಿಂಗ್ ಮತ್ತು ನಿಯಮಿತ ತಪಾಸಣೆ ಅಗತ್ಯ.

**

ಹಲ್ಲಿನ ಅಂತರಕ್ಕೆ ಕಾರಣಗಳು
* ಹಲ್ಲುಗಳು ಮತ್ತು ದವಡೆಯ ಗಾತ್ರ ಒಂದಕ್ಕೊಂದು ಹೊಂದದಿದ್ದಾಗ, ಎಂದರೆ ಹಲ್ಲುಗಳು ತೀರಾ ಸಣ್ಣ ಅಥವಾ ದವಡೆ ಉದ್ದವಾಗಿದ್ದಾಗ ಹಲ್ಲುಗಳ ನಡುವೆ ಅಂತರವಿರುತ್ತದೆ.

* ಹಲ್ಲಿನ ಆಕಾರದಲ್ಲಿ ವ್ಯತ್ಯಾಸವಿದ್ದಾಗ (ಸಾಮಾನ್ಯವಾಗಿ ಬದಿಬಾಚಿಹಲ್ಲುಗಳು ಕೋನಾಕೃತಿಯಾಗಿದ್ದಾಗ) ಮುಂಬಾಚಿಹಲ್ಲುಗಳಲ್ಲಿ ಅಂತರವಿರುತ್ತದೆ.

* ಹಾಲು ಹಲ್ಲುಗಳು ಬಿದ್ದು ಶಾಶ್ವತ ಹಲ್ಲುಗಳು ಹುಟ್ಟುವಾಗ ಕೆಲವೊಮ್ಮೆ ಎಲ್ಲವೂ ಬರದೇ ಇರುವ ಸಾಧ್ಯತೆ ಇದೆ. ಹಲವು ಬಾರಿ ಹಾಲು ಹಲ್ಲುಗಳು ಬೀಳದೇ ಹಾಗೇ ಉಳಿದುಬಿಡುತ್ತವೆ. ಇವು ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಹಲ್ಲುಗಳ ನಡುವೆ ಅಂತರ ಕಾಣುತ್ತದೆ.

* ಮೇಲಿನ ತುಟಿಯನ್ನು ಒಸಡಿಗೆ ಸೇರಿಸುವ ಹಲ್ಲಿನ ಮೇಲ್ಭಾಗದ ಚರ್ಮದ ತೆಳು ಪದರವನ್ನು ಫ್ರೀನಮ್ ಎನ್ನಲಾಗುತ್ತದೆ. ಇದು ದೊಡ್ಡದಿದ್ದಾಗ ಹಲ್ಲುಗಳು ದೂರವಾಗುತ್ತವೆ.

* ಬೆರಳು ಚೀಪುವಿಕೆ, ನಾಲಿಗೆ ಹೊರಚಾಚುವಿಕೆಯಂಥ ಬಾಲ್ಯದಿಂದ ರೂಢಿಯಾದ ಚಟಗಳಿಂದ ಹಲ್ಲುಗಳ ಮೇಲೆ ಒತ್ತಡ ಬಿದ್ದು, ಹೊರಚಾಚಿ ನಡುವೆ ಅಂತರ ಉಂಟಾಗಬಹುದು. ಈ ಕಾರಣದಿಂದ ಉಂಟಾದ ಅಂತರವನ್ನು ತಡೆಗಟ್ಟದಿದ್ದಲ್ಲಿ ಒತ್ತಡ ಹೆಚ್ಚಿದಂತೆ ಹಲ್ಲುಗಳ ಅಂತರವೂ ಹೆಚ್ಚಬಹುದು.

* ಹಲ್ಲಿನ ಸುತ್ತಲಿನ ಒಸಡಿನ ಕೆಳಭಾಗದಲ್ಲಿರುವ ಮೂಳೆ ಹಲ್ಲನ್ನು ಬಿಗಿಯಾಗಿ ಹಿಡಿದಿಡುವ ಕಾರ್ಯ ನಿರ್ವಹಿಸುತ್ತದೆ. ಒಸಡಿನ ಉರಿಯೂತ, ಮೂಳೆಗೆ ಹಬ್ಬಿ ಸೋಂಕಾದಾಗ  ಹಲ್ಲು ಸಡಿಲವಾಗುತ್ತದೆ. ಇದರಿಂದ ಹಲ್ಲು ಅತ್ತಿತ್ತ ತಿರುಗಿ ಅಂತರ ಕಾಣಬಹುದು. ಚಿಕಿತ್ಸೆ ದೊರಕದೇ ಮುಂದುವರಿದರೆ ಹಲ್ಲು ಬಿದ್ದುಹೋಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT