ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ಎದುರಿಸುವ ಸುಲಭೋಪಾಯ

Last Updated 17 ಜೂನ್ 2017, 19:30 IST
ಅಕ್ಷರ ಗಾತ್ರ

l ಕ್ಯಾರ್ಟಿನ್‌ ಬೆನ್‌ಹೋಲ್ಡ್
ಲಂಡನ್‌ ನಗರದಲ್ಲಿ ಬುಧವಾರದ ಬೆಳಗು ಎಂದಿನಂತಿರಲಿಲ್ಲ. ಆಕಾಶದಲ್ಲಿ ದಟ್ಟ ಕಪ್ಪು ಹೊಗೆ ಕಂಡು ನಗರವಾಸಿಗಳು ದಿಗಿಲುಗೊಂಡಿ
ದ್ದರು. ಗಗನಚುಂಬಿ ಅಪಾರ್ಟ್‌ಮೆಂಟ್‌ ಕಟ್ಟಡಕ್ಕೆ ಬೆಂಕಿ ಬಿದ್ದು, ಹೊಗೆ ಆಕಾಶದೆತ್ತರಕ್ಕೆ ಏರಿತ್ತು. ದುರಂತದಲ್ಲಿ 17 ಮಂದಿ ಮೃತಪಟ್ಟು, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. 

ಬೆಂಕಿ ಅವಘಡಕ್ಕೆ ಭಯೋತ್ಪಾದನೆ ಕೃತ್ಯ ಕಾರಣವಾಗಿರಲಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಮೊದಲು ಪ್ರಸಾರವಾದ ದೃಶ್ಯಾವಳಿಗಳನ್ನು ನೋಡಿದರೆ, ಇದು ಕೂಡ ಉಗ್ರರ ಅಟ್ಟಹಾಸದ ದುಷ್ಕೃತ್ಯ ಎಂದೇ ಅನೇಕರು ಆರಂಭದಲ್ಲಿ ಭಾವಿಸಿದ್ದರು.  ಅದು ತಪ್ಪು ಎನ್ನುವುದು ಆನಂತರ ಗೊತ್ತಾಯಿತು. ಬೆಂಕಿ ಆಕಸ್ಮಿಕದಿಂದ ಹೊತ್ತಿ ಉರಿಯುತ್ತಿದ್ದ ವಸತಿ  ಕಟ್ಟಡದಿಂದ ಕೆಲವರು ಜಿಗಿಯುತ್ತಿರುವ ದೃಶ್ಯಗಳು ಮನಕಲಕುವಂತಿದ್ದವು. ಅದನ್ನೆಲ್ಲ ನೋಡುತ್ತಿದ್ದರೆ, ಅಮೆರಿಕದ ನ್ಯೂಯಾರ್ಕ್‌ ನಗರದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳ ಮೇಲೆ 2001 ಸೆಪ್ಟೆಂಬರ್‌ 11ರಂದು  (9/11) ಭಯೋತ್ಪಾದಕರು ನಡೆಸಿದ್ದ ಭೀಕರ ಸ್ವರೂಪದ ದಾಳಿಯೇ ಕಣ್ಣೆದುರು ಬಂದಂತಾಗುತ್ತಿತ್ತು.

ಮಾಧ್ಯಮಗಳಲ್ಲಿ ಘಟನೆ ವರದಿಯಾಗುತ್ತಿದ್ದಂತೆಯೇ ನನ್ನ ಮೊಬೈಲ್‌ಗೆ ಆತಂಕ ಭರಿತ ಸಂದೇಶಗಳು ಬರತೊಡಗಿದವು.  ಸಂಪಾದಕರು ವಿವರಗಳನ್ನು ಕೇಳುವುದರ ಜತೆಗೆ ಕುಟುಂಬದ ಸದಸ್ಯರು ಮತ್ತು ವಿದೇಶಗಳಲ್ಲಿನ ಸ್ನೇಹಿತರು  ಕೂಡ, ‘ನೀನು ಸುರಕ್ಷಿತವಾಗಿದ್ದೀಯಾ’ ಎಂದು ಆತಂಕದಿಂದ ಪ್ರಶ್ನಿಸಿದರು. 12 ವಾರಗಳಲ್ಲಿ ನಾಲ್ಕನೆ ಬಾರಿಗೆ ನಾನು ಸುರಕ್ಷಿತನಾಗಿದ್ದೇನೆ ಎಂದು ಫೇಸ್‌ಬುಕ್‌ನಲ್ಲಿ ದಾಖಲಿಸಿದ್ದೆ.

ಲಂಡನ್‌ ನಗರದಲ್ಲಿ ಸಾಮಾನ್ಯವಾಗಿ ಸಹಜಸ್ಥಿತಿ ನೆಲೆಸಿರುತ್ತದೆ.  ಪೊಲೀಸ್‌ ಅಧಿಕಾರಿಗಳು ಮಷಿನ್‌ಗನ್‌ ಜತೆಗೆ ರೈಲ್ವೆ ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆ ಮೇಲೆ ನಿಗಾ ಇರಿಸಿರುತ್ತಾರೆ.  ಪ್ರಮುಖ ಸೇತುವೆಗಳಲ್ಲಿ ನಿರ್ಮಿಸಿರುವ  ಉಕ್ಕು ಮತ್ತು ಸಿಮೆಂಟ್‌ನ ತಡೆಗೋಡೆಗಳು ಪಾದಚಾರಿಗಳಿಗೆ ಸುರಕ್ಷತೆ ಒದಗಿಸುತ್ತಿವೆ.  ವಾಟರ್‌ಲೂ ಸೇತುವೆ ಮೂಲಕ  ಕಚೇರಿಗೆ ಬೈಕ್‌ ಮೇಲೆ ತೆರಳುವಾಗ ತುರ್ತು ಸಂದರ್ಭಗಳಲ್ಲಿ ಪಾರಾಗು
ವುದು ಹೇಗೆ ಎಂದು ನಾನು ಕೂಡ ಆಲೋಚಿಸುತ್ತಿರುತ್ತೇನೆ.

ನನ್ನ ಮಕ್ಕಳು ಓದುವ ಶಾಲೆಯ ಆಡಳಿತ ಮಂಡಳಿ ನನಗೆ ಟಿಪ್ಪಣಿಯೊಂದನ್ನು ಕಳಿಸಿ, ಮಕ್ಕಳನ್ನು ಅಧ್ಯಯನದ ಅಂಗವಾಗಿ  ಸೆಂಟ್ರಲ್‌ ಲಂಡನ್‌ಗೆ ಕರೆದೊಯ್ಯುವುದನ್ನು ಪರಾಮರ್ಶಿಸುತ್ತಿದ್ದು, ಸಾಧ್ಯವಾದಷ್ಟರಮಟ್ಟಿಗೆ ಸುರಂಗ ಮಾರ್ಗ ಮತ್ತು ಸಾರ್ವಜನಿಕ ಸಾರಿಗೆ ಬಳಸುವುದನ್ನು ತಪ್ಪಿಸುವುದಾಗಿ ತಿಳಿಸಿದ್ದರು.  ಇದನ್ನೆಲ್ಲ ನೋಡಿದಾಗ, ಸಹಜ ಸ್ಥಿತಿ ಎಂದರೆ ಇದೇನಾ ಎಂದು ನಾನು ಪ್ರಶ್ನಿಸಿಕೊಂಡಿದ್ದೆ.

ಥೇಮ್ಸ್‌ ನದಿಯ ಸಮೀಪದ ಬೋರೊ ಮಾರುಕಟ್ಟೆಯಲ್ಲಿನ ಆಕರ್ಷಕ ಬಾರ್ ಆ್ಯಂಡ್ ರೆಸ್ಟೊರೆಂಟ್‌ ಕೂಡ ಬುಧವಾರವೇ ಪುನರಾರಂಭಗೊಂಡಿತ್ತು.   ಉಗ್ರರ ದಾಳಿ ನಡೆದ ಎರಡು  ವಾರಕ್ಕಿಂತ ಮುಂಚೆಯೇ ರೆಸ್ಟೊರೆಂಟ್‌ ಬಾಗಿಲು ತೆರೆದಿತ್ತು.  ಕೆಲ ದಿನಗಳ ಹಿಂದೆ ಭಯೋತ್ಪಾದಕರು ಮಾರುಕಟ್ಟೆಯಲ್ಲಿ ಎದುರಿಗೆ ಸಿಕ್ಕವರನ್ನೆಲ್ಲ ಹರಿತವಾದ ಆಯುಧದಿಂದ ಇರಿಯುತ್ತ ಸಾಗಿದ್ದರು. 

ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಾಪ್‌ ಸಂಗೀತ ಕಾರ್ಯಕ್ರಮದಲ್ಲಿ ಉಗ್ರನೊಬ್ಬ ಆತ್ಮಾಹುತಿ ಮಾಡಿಕೊಂಡು ಹಲವರ ಸಾವಿಗೆ ಕಾರಣನಾಗಿದ್ದ ಒಂದು ವಾರದ ನಂತರ ಈ ಘಟನೆ ನಡೆದಿತ್ತು. ಅದಕ್ಕೂ ಮುಂಚೆ ಭಯೋತ್ಪಾದಕನೊಬ್ಬ ವೆಸ್ಟ್‌ಮಿನಿಸ್ಟರ್‌ ಸೇತುವೆ ಮೇಲೆ ಪಾದಚಾರಿಗಳ ಮೇಲೆಯೇ ಕಾರು ಚಲಾಯಿಸಿದ್ದ. ಈ ಘಟನೆಗೂ  ಮೊದಲು ಆತ ಸಂಸತ್ತಿನ ಹೊರಗೆ ಪೊಲೀಸ್‌ನಿಗೆ ಇರಿದಿದ್ದ. ಈ  ಎಲ್ಲ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿತ್ತು.

ಈ ಎಲ್ಲ ಘಟನೆಗಳಿಗೆ ಸಾಕ್ಷಿಯಾಗಿದ್ದ ಲಂಡನ್‌ ನಗರದಲ್ಲಿ, ಕೆಲ ದಿನಗಳ ಕಾಲ ನೆಮ್ಮದಿ ನೆಲೆಸಿದ್ದಂತೆ ಕಂಡುಬಂದಿತ್ತು. ಆದರೆ, ಮೊನ್ನೆ ಬುಧವಾರದ ಬೆಳಗು ನಗರ ವಾಸಿಗಳಲ್ಲಿ ಮತ್ತೆ ದಿಗಿಲು ಮೂಡಿಸಿತ್ತು. ಭಯೋತ್ಪಾದಕರ ದಾಳಿಯಿಂದ ಧೃತಿಗೆಡದ ಲಂಡನ್‌ ನಿವಾಸಿಗಳು ತಮ್ಮ ದಿನನಿತ್ಯದ ಬದುಕಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿರಲಿಲ್ಲ. ಇಂತಹ ಘಟನೆಗಳು ಸದ್ಯಕ್ಕೆ ಅಲ್ಲಿ ದಿನನಿತ್ಯದ ಭಾಗಗಳಾಗಿ ಬಿಟ್ಟಿವೆ. 

ಸುರಂಗ ಮಾರ್ಗದಲ್ಲಿ ಸಾಗುವ ರೈಲು ಯಾವುದೋ ಕಾರಣಕ್ಕೆ ಕೆಲ ಕಾಲ ಸ್ಥಗಿತಗೊಂಡರೆ, ಪ್ರಯಾಣಿಕರು ಕ್ಷಣಕಾಲ ಆತಂಕಕ್ಕೆ ಒಳಗಾಗುತ್ತಾರೆ. ರೈಲು ಹೊರಡುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.  ಸೌತ್‌ ಹೈಸ್ಕೂಲ್‌ನ ಹೊರಗೆ ವಿದ್ಯಾರ್ಥಿಗಳು ತಮಾಷೆಗಾಗಿ ಹೇಳುತ್ತಿದ್ದ,  ‘ಕ್ಷಮಿಸಿ ಟೀಚರ್‌, ಮನೆಗೆ ತೆರಳುವ ಮಾರ್ಗ ಮಧ್ಯೆ ಭಯೋತ್ಪಾದಕರ ದಾಳಿ ನಡೆಯುತ್ತಿದ್ದರಿಂದ ನಿನ್ನೆ ಹೋಮ್‌ವರ್ಕ್‌ ಮಾಡಲು ಸಾಧ್ಯವಾಗಲಿಲ್ಲ’  ಎನ್ನುವ ಮಾತು ನಗರದಲ್ಲಿನ ಸದ್ಯದ  ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.

ಹಬೆ ಹೊರ ಹೋಗುವ ಕೊಳವೆ ಒಡೆದ ದೊಡ್ಡ ಸದ್ದು ಕೇಳಿದ ನನ್ನ ನೆರೆಮನೆಯವರು ಏನೋ ಅನಾಹುತವಾಗಿದೆ ಎಂದು ಗಾಬರಿಯಿಂದ ನನ್ನೊಂದಿಗೆ ತಮ್ಮ ಆತಂಕ ಹಂಚಿಕೊಂಡಿದ್ದರು. ಭಯೋತ್ಪಾದಕರು ಮತ್ತೆ ದಾಳಿ ನಡೆಸಿದ್ದಾರೆ ಎಂದೇ ತಾವು ಭಾವಿಸಿದ್ದಾಗಿ  ಹೇಳಿದ ಅವರು, ತಾವು ವೃಥಾ ಗಾಬರಿಗೊಂಡಿದ್ದನ್ನು ಹೇಳಿಕೊಂಡು ನಕ್ಕಿದ್ದರು.

ಲಂಡನ್‌ ನಗರದಲ್ಲಿ ಹಲವು ವರ್ಷಗಳಿಂದ ಕಂಡು ಬರದ ಇಂತಹ ಉಗ್ರರ ದಾಳಿಗಳು ಈಗ ಏಕಾಏಕಿ ಹೆಚ್ಚಳಗೊಂಡಿರುವುದು ಏಕೆಂದು ಅನೇಕರಲ್ಲಿ ಪ್ರಶ್ನೆಗಳು ಉದ್ಭವಿಸಿರಬಹುದು.  ಐರಿಷ್‌ ರಿಪಬ್ಲಿಕನ್ ಆರ್ಮಿಯು (ಐಆರ್‌ಎ) ದಶಕಗಳ ಕಾಲ ಲಂಡನ್‌ನಲ್ಲಿ ಹಿಂಸಾಕೃತ್ಯಗಳನ್ನು ಎಸಗುತ್ತ ಬಂದಿತ್ತು.  2005ರಲ್ಲಿ (7/7) ನಾಲ್ವರು ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 52 ಜನರು ಮೃತಪಟ್ಟಿದ್ದರು.  2013ರಲ್ಲಿ ಸೈನಿಕನೊಬ್ಬನನ್ನು ಹಾಡಹಗಲೇ ಕೊಂದು ಹಾಕಲಾಗಿತ್ತು. ಈ ಘಟನೆಗಳ ನಂತರ ಲಂಡನ್‌ನಲ್ಲಿ ಅಹಿತಕರ ಘಟನೆಗಳು ನಡೆದಿರಲಿಲ್ಲ. ಪ್ಯಾರಿಸ್‌, ಬ್ರಸೇಲ್ಸ್‌ ಮತ್ತು ಬರ್ಲಿನ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದರೂ ಲಂಡನ್‌ ನಗರದಲ್ಲಿ ಇಂತಹ ದುಷ್ಕೃತ್ಯಗಳು ನಡೆದಿರಲಿಲ್ಲ.

‘ಇತ್ತೀಚಿನ ಉಗ್ರರ ದಾಳಿಗೆ ಪ್ರತಿಯಾಗಿ, ಜನರು ಮನೆಯಿಂದ ಹೊರ ಬಂದು  ನಿರ್ಭೀತಿಯಿಂದ  ಎಲ್ಲೆಡೆ ಸಂಚರಿಸಿ ಸಾಂಪ್ರದಾಯಿಕ ಸಂಭ್ರಮಾಚರಣೆಗಳಲ್ಲಿ  ಭಾಗವಹಿಸುವ ಮೂಲಕ, ಪ್ರತಿಕೂಲತೆಗಳನ್ನು ಮೆಟ್ಟಿನಿಲ್ಲುವುದರ ಬಗ್ಗೆ ಸ್ಪಷ್ಟ ಸಂದೇಶ ನೀಡಿ’ ಎಂದು ಕಳೆದ ವಾರಾಂತ್ಯದಲ್ಲಿ  ಮೇಯರ್‌ ಲಂಡನ್‌ ಸಾದಿಕ್‌ ಖಾನ್‌ ಅವರು ನಗರವಾಸಿಗಳಿಗೆ ಮನವಿ ಮಾಡಿಕೊಂಡಿದ್ದರು.

‘ಮಾರುಕಟ್ಟೆ ಪುನರಾರಂಭಗೊಂಡಾಗ ಜನರು ಹಿಂಜರಿಕೆ ಇಲ್ಲದೆ ಪೇಟೆಗೆ ಧಾವಿಸಿ ಬಂದಿದ್ದರು,  ಲಂಡನ್‌ ಮಹಾನಗರವಾಗಿದ್ದರೂ, ಇಲ್ಲಿ ನೆಲೆಸಿರುವವರೆಲ್ಲ ಒಂದೇ ಸಮುದಾಯದವರಂತೆ ಇದ್ದಾರೆ’ ಎಂದು  ಬೋರೊ ಮಾರುಕಟ್ಟೆಯಲ್ಲಿ ತಿನಿಸುಗಳ ಮಳಿಗೆ ಹೊಂದಿರುವ ನನ್ನ ಸ್ನೇಹಿತೆ ನಡ್ಜಾ ಸ್ಟೋಕ್ಸ್‌ ನನಗೆ ಹೇಳಿದ್ದಳು,

ಮಾರ್ಚ್‌ನಲ್ಲಿ ವೆಸ್ಟ್‌ಮಿನಿಸ್ಟರ್‌ ಸೇತುವೆ ಮೇಲೆ ದಾಳಿ ನಡೆದ ನಂತರ,  ‘ಉಗ್ರಗಾಮಿಗಳೆಲ್ಲ ತಮ್ಮ ಕೃತ್ಯದಿಂದ, ಇದು ಲಂಡನ್‌ ನಗರ ಎನ್ನುವುದನ್ನು ನಮಗೆಲ್ಲ ನೆನಪಿಸಿಕೊಟ್ಟಿದ್ದಾರೆ. ನೀವು (ಉಗ್ರರು) ಏನೇ ಮಾಡಿದರೂ ನಾವು ನಮ್ಮ ಜೀವನೋತ್ಸಾಹ ಕಳೆದುಕೊಳ್ಳುವುದಿಲ್ಲ’ ಎಂದು ಸಬ್‌ವೇ ಸಿಬ್ಬಂದಿ ಬರೆದಿದ್ದ ಬರಹ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಪ್ರಚಾರ ಪಡೆದಿತ್ತು. ಈ ಸಂದೇಶವನ್ನು ಸಾವಿರಾರು  ಜನರು ಹಂಚಿಕೊಂಡಿದ್ದರು. 

ಪ್ರಧಾನಿ ಕೂಡ ಇದನ್ನು ಉಲ್ಲೇಖಿಸಿ  ಲಂಡನ್‌ ವಾಸಿಗಳ ಜೀವನೋತ್ಸಾಹಕ್ಕೆ  ಬೆನ್ನು ತಟ್ಟಿದ್ದರು. ಆ ನಂತರ ನಡೆದ ಎರಡು ದಾಳಿಗಳ ಸಂದರ್ಭದಲ್ಲಿ ನ್ಯೂಯಾರ್ಕ್‌ ಟೈಮ್ಸ್ ಪತ್ರಿಕೆಯು ‘ಬ್ರಿಟನ್‌ ತಲ್ಲಣ’ ತಲೆಬರಹದಡಿ ಪ್ರಕಟಿಸಿದ ವರದಿಯನ್ನು ಸ್ಥಳೀಯರು ತೀವ್ರವಾಗಿ ಟೀಕಿಸಿದ್ದರು.  ನಾವು ಭಯಭೀತರಾಗಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಎಂತಹದೇ ಬಿಕ್ಕಟ್ಟಿನ ಸಂದರ್ಭದಲ್ಲೂ ಹೇಡಿಗಳಂತೆ ವರ್ತಿಸದ ಬ್ರಿಟಿಷರ ಜೀವನೋತ್ಸಾಹವನ್ನು ಯಾರಾದರೂ ಮೆಚ್ಚತಕ್ಕ ಸಂಗತಿಯಾಗಿದೆ. ಆದರೂ, ‘ಉಗ್ರರ ಉಪಟಳದಿಂದಾಗಿ, ನಮಗೆ ಲಂಡನ್‌ನಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ’ ಎಂದು ಅನೇಕರು ಒಪ್ಪಿಕೊಳ್ಳುತ್ತಾರೆ.

‘ಇತ್ತೀಚಿನ ದಿನಗಳಲ್ಲಿ ರೈಲಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಲು ನಾನು ಇಷ್ಟಪಡುವೆ. ಒಂದು ವೇಳೆ ಪ್ರಯಾಣ ಅನಿವಾರ್ಯವಾದರೆ, ಮುಂದಿನ ಇಲ್ಲವೆ ಹಿಂದಿನ ಬೋಗಿಯಲ್ಲಿ ಪ್ರಯಾಣಿಸುವೆ’ ಎಂದು ಪಶ್ಚಿಮ ಲಂಡನ್ನಿನ 21 ವರ್ಷದ ವಿದ್ಯಾರ್ಥಿ ಗುಸ್ತಾವೊಲು ಹೇಳುತ್ತಾನೆ.   ಲಂಡನ್ನಿನ ವಿಭಿನ್ನ ತಲೆಮಾರಿನ ಜನರು, ಹಲವಾರು ಪ್ರತಿಕೂಲ ಸನ್ನಿವೇಶಗಳ ಹೊರತಾಗಿಯೂ ನಗರ ಸಹಜಸ್ಥಿತಿಗೆ ಬಂದಿರುವುದನ್ನು ತಮ್ಮದೇ ದೃಷ್ಟಿಕೋನದಿಂದ ವಿಶ್ಲೇಷಿಸುತ್ತಾರೆ. 

ಉತ್ತರ ಲಂಡನ್ನಿನ ಟ್ಯಾಕ್ಸಿ ಚಾಲಕನಾಗಿರುವ ಮಿಕ್‌ ಬೇಲಿ (63) ಅವರು, ದ್ವಿತೀಯ ಮಹಾಯುದ್ಧದ ದಿನಗಳಲ್ಲಿನ ಬ್ಲ್ಯಾಕ್‌ಔಟ್ಸ್‌ ಮತ್ತು ಬಾಂಬ್‌ ದಾಳಿಗಳ ಕುರಿತ ವಿಸ್ಮಯಕಾರಿ ಘಟನೆಗಳನ್ನು ನೋಡುತ್ತ, ಕೇಳುತ್ತಲೇ ಬೆಳೆದವರು.  ಬಾಂಬ್‌ ದಾಳಿ ಸಂದರ್ಭದಲ್ಲಿ ಇವರ ಕುಟುಂಬದ ಸದಸ್ಯರು ಆಶ್ರಯ ತಾಣದಿಂದ ಹೊರ ಬಂದು ನೋಡಿದಾಗ ಇವರು ಹುಟ್ಟಿ ಬೆಳೆದಿದ್ದ ಮನೆ ಸಂಪೂರ್ಣವಾಗಿ ನಾಶವಾಗಿತ್ತಂತೆ. ಹೀಗಾಗಿ ಇತರ ಕುಟುಂಬಗಳ ಜತೆ ಇವರ ತಂದೆ – ತಾಯಿ ಬೇರೊಂದು ಸ್ಥಳಕ್ಕೆ ಮನೆ ಸ್ಥಳಾಂತರಿಸಿದ್ದರಂತೆ.

1983ರಲ್ಲಿ ಕ್ರಿಸ್‌ಮಸ್‌ ಖರೀದಿ  ಸಂಭ್ರಮದ ದಿನಗಳಲ್ಲಿ  ಹೆರಾಡ್ಸ್‌ ಡಿಪಾರ್ಟಮೆಂಟ್‌ ಸ್ಟೋರ್‌ನ ಹೊರಭಾಗದಲ್ಲಿ  ‘ಐಆರ್‌ಎ’  ಕಾರ್‌ ಬಾಂಬ್‌ ಸ್ಫೋಟಿಸಿದಾಗ ಮಿಕ್‌ ಬೇಲಿ ಅಗ್ನಿಶಾಮಕ ಪಡೆಯಲ್ಲಿ ಕೆಲಸ ಮಾಡುತ್ತಿದ್ದರು.  ಇತ್ತೀಚೆಗೆ ಬೋರೊ ಮಾರುಕಟ್ಟೆ ಪ್ರದೇಶದಲ್ಲಿ ಉಗ್ರರು ನಡೆಸಿದ ದಾಳಿ ಘಟನೆ ನೋಡಿದಾಗ, ‘ನನಗೆ, ಐಆರ್‌ಎ ನಡೆಸುತ್ತಿದ್ದ ದಾಳಿಗಳು ನೆನಪಾಗುತ್ತವೆ. ಜನರು ಇಂತಹ ಘಟನೆಗಳಿಂದ ವಿಚಲಿತರಾಗದೇ ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಸಹಜವಾಗಿ ತೊಡಗಿಕೊಂಡಿದ್ದಾರೆ’  ಎಂದು ಮಿಕ್‌ ಬೇಲಿ ಹೇಳುತ್ತಾರೆ.

ಲಂಡನ್‌ನಲ್ಲಿ ಪೊಲೀಸ್‌ ಆಗಿರುವ ತಮ್ಮ ಮಗನಿಗೆ ಯಾವುದೇ ಅಪಾಯ ಎದುರಾಗದಿರಲಿ ಎಂದು ಅವರು ಆಶಿಸುತ್ತಾರೆ. ಉಗ್ರರ ಉಪಟಳದ ಹೊರತಾಗಿಯೂ ಪೊಲೀಸ್‌ ವೃತ್ತಿ ತೊರೆಯದಿರಲು ಅವರ ಮಗ ನಿರ್ಧರಿಸಿದ್ದಾನೆ.

ಇಸ್ಲಾಂ ಹೆಸರಿನಲ್ಲಿ ನಡೆಯುತ್ತಿರುವ ಈ ದಾಳಿಗಳನ್ನು ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿರುವುದಕ್ಕೆ ಅವರು ಕಳವಳ ವ್ಯಕ್ತಪಡಿಸುತ್ತಾರೆ. ‘ಎಲ್ಲ ಧರ್ಮಗಳ ಜನರು ವಾಸಿಸುವ ಸ್ಥಳದಲ್ಲಿಯೇ ನನ್ನ ಮನೆ ಇದೆ.  ಮುಸ್ಲಿಮರ ಜತೆಗೂ ನಾನು ಕೆಲಸ ಮಾಡಿರುವೆ. ತಪ್ಪು ದಿಕ್ಕಿನಲ್ಲಿ ಬೆರಳು ಮಾಡಿ ತೋರಿಸುವಾಗ ನಾವು ತುಂಬ ಎಚ್ಚರಿಕೆವಹಿಸಬೇಕು. ಲಂಡನ್‌  ತುಂಬ ವಿಶಿಷ್ಟವಾದ ನಗರವಾಗಿದೆ. ವಿಶ್ವದ ವಿವಿಧ ಭಾಗಗಳ ಜನರು ಇಲ್ಲಿ ನೆಲೆಸಿದ್ದಾರೆ’  ಎಂದೂ ಅವರು ಹೇಳುತ್ತಾರೆ.

‘ಭಯೋತ್ಪಾದನೆಯು ಈ ದೇಶಕ್ಕೆ ದೀರ್ಘ ಸಮಯದವರೆಗೆ   ಬೆದರಿಕೆ ಒಡ್ಡಲಾರದು. ಬುಧವಾರ ನಡೆದ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆಯು ಮೂರು ಉಗ್ರರ ದಾಳಿಯಲ್ಲಿ ಸತ್ತವರ ಸಂಖ್ಯೆಗಿಂತ ಹೆಚ್ಚಿಗೆ ಇದೆ’ ಎಂದು ಬೇಹುಗಾರಿಕೆ ಸಂಸ್ಥೆ ‘ಎಂಐ6’ನ ಮಾಜಿ ಅಧಿಕಾರಿಯಾಗಿರುವ ರಿಚರ್ಡ್‌ ಥಾಮ್ಸನ್‌ ಅವರು ನನ್ನೊಂದಿಗೆ ಮಾತನಾಡುತ್ತ ಹೇಳಿದ್ದರು.

ಭಯೋತ್ಪಾದನಾ ಸಂಚಿಗೆ ಲಂಡನ್‌ನಲ್ಲಿ ದೊಡ್ಡ ಇತಿಹಾಸವೇ ಇದೆ. ಅವುಗಳ ಪೈಕಿ 1605ರಲ್ಲಿ ನಡೆದಿದ್ದ ‘ಗನ್‌ ಪೌಡರ್‌’ ಸಂಚು ಮಹತ್ವದ್ದು.
ಕ್ಯಾಥೊಲಿಕ್‌ ದೊರೆಯನ್ನು ಸಿಂಹಾಸನದ ಮೇಲೆ ಕೂರಿಸಲು, ದೊರೆ ಜೇಮ್ಸ್‌ನನ್ನು ಹತ್ಯೆ ಮಾಡಿ,  ಸಂಸತ್ ಕಟ್ಟಡ ಸ್ಪೋಟಿಸಲು  ಕ್ಯಾಥೊಲಿಕ್‌  ಬೆಂಬಲಿಗರು  36 ಬ್ಯಾರೆಲ್‌ಗಳಷ್ಟು ಸ್ಫೋಟಕಗಳನ್ನು  ಸಿದ್ಧಪಡಿಸಿ ಸಂಚು ಕಾರ್ಯಗತಗೊಳಿಸಲು ಮುಂದಾಗಿದ್ದರು.

ಸುಳಿವಿನ ಮೇರೆಗೆ ಈ ಸಂಚನ್ನು ವಿಫಲಗೊಳಿಸಲಾಗಿತ್ತು.   ಈ ಘಟನೆಗೆ ಸಂಬಂಧಿಸಿದಂತೆ  ಸ್ಫೋಟಕಗಳ ಕಾವಲಿಗೆ ಇದ್ದ  ಗಾಯ್ ಫಾಕ್ಸ್‌ನನ್ನು ನೇಣಿಗೆ ಹಾಕಲಾಗಿತ್ತು. ಪ್ರತಿ ವರ್ಷ ನವೆಂಬರ್‌ 5ರಂದು ಲಂಡನ್‌ ಜನರು  ಸಿಡಿಮದ್ದುಗಳನ್ನು ಸಿಡಿಸಿ  ಗಾಯ್‌ ಫಾಕ್ಸ್‌ ದಿನ ಆಚರಿಸುತ್ತಾರೆ. ಆ ದಿನ ಕುಟುಂಬದ ಸದಸ್ಯರೆಲ್ಲ ಮನೆಗಳಿಂದ ಹೊರ ಬಂದು ಸಂಭ್ರಮಾಚರಣೆಯಲ್ಲಿ ಭಾಗವಹಿಸುತ್ತಾರೆ. ‘ಭಯೋತ್ಪಾದನೆಯನ್ನು ಇದಕ್ಕಿಂತ ಉತ್ತಮವಾಗಿ ಎದುರಿಸುವ ಬೇರೆ ಮಾರ್ಗವೇ ಇಲ್ಲ’ ಎಂದು ಇತಿಹಾಸ ಬೋಧಿಸುವ ಜಾನ್‌ ರಾಬಿನ್‌ ಹೇಳುತ್ತಾರೆ.
(ನ್ಯೂಯಾರ್ಕ್‌ ಟೈಮ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT