ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯೂಬಾ ಜತೆಗಿನ ಒಬಾಮ ಒಪ್ಪಂದ ರದ್ದು

ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸರ್ಕಾರದ ಹೊಸನೀತಿ ಜಾರಿ: ಡೊನಾಲ್ಡ್‌ ಟ್ರಂಪ್‌
Last Updated 17 ಜೂನ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌/ ಮಿಯಾಮಿ: ಬರಾಕ್‌ ಒಬಾಮ ಅವರು ಅಧ್ಯಕ್ಷರಾಗಿದ್ದ ವೇಳೆ ಕ್ಯೂಬಾ ಜತೆಗೆ ಮಾಡಿಕೊಂಡಿರುವ ಎಲ್ಲಾ ಒಪ್ಪಂದಗಳನ್ನು  ರದ್ದುಪಡಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶನಿವಾರ ಘೋಷಣೆ ಮಾಡಿದ್ದಾರೆ.

ಕ್ಯೂಬಾ ಅಧ್ಯಕ್ಷ ರೌಲ್‌ ಕ್ಯಾಸ್ಟ್ರೊ ಅವರ ಸೇನಾಡಳಿತಕ್ಕೆ ಆರ್ಥಿಕ ನೆರವು ಗಳನ್ನು ನಿಲ್ಲಿಸಲಾಗುವುದು ಎಂದು ಟ್ರಂಪ್‌ ಹೇಳಿದ್ದಾರೆ. ಇದು  ಹಲವು ದಶಕ ಶೀತಲಸಮರ ನಡೆಸಿದ ರಾಷ್ಟ್ರಗಳ ಮಧ್ಯೆ ಮತ್ತೆ ಸಂಘರ್ಷಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

‘ತಕ್ಷಣದಿಂದ ಜಾರಿಗೆ ಬರುವಂತೆ ಕ್ಯೂಬಾದೊಂದಿಗೆ ಹಿಂದಿನ ಸರ್ಕಾರ  ಮಾಡಿಕೊಂಡಿರುವ ಏಕಪಕ್ಷೀಯ ಎಲ್ಲ ಒಪ್ಪಂದಗಳನ್ನು ರದ್ದು ಮಾಡುತ್ತಿದ್ದೇನೆ. ಚುನಾವಣೆ ಪ್ರಚಾರದ ವೇಳೆ ನೀಡಿದ ಭರವಸೆಯಂತೆ ಹೊಸ ನೀತಿಯನ್ನು ಘೋಷಿಸುತ್ತಿದ್ದೇನೆ’ ಎಂದು ಟ್ರಂಪ್‌ ಹೇಳಿದ್ದಾರೆ.

‘ನಮ್ಮ ಸರ್ಕಾರದ ಹೊಸ ನೀತಿ ಕ್ಯೂಬಾ ಮತ್ತು ಅಮೆರಿಕದ ಜನರಿಗೆ ಒಳಿತು ಮಾಡಲಿದೆ. ಕ್ಯೂಬಾ ನಾಗರಿಕರನ್ನು ಶೋಷಿಸುವ ಮತ್ತು ದುರ್ಬಳಕೆ ಮಾಡುವ ಸೇನಾ ಏಕಸ್ವಾಮ್ಯಕ್ಕೆ ಅಮೆರಿಕ ಆರ್ಥಿಕವಾಗಿ ಆಸರೆ ಆಗುವುದನ್ನು ನಾವು ಬಯಸುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಕ್ಯೂಬಾ ಜತೆಗಿನ ನಮ್ಮ ಹೊಸ ನೀತಿ ಅಮೆರಿಕದ ಕಾನೂನಿನಂತೆಯೇ ಮುಂದುವರಿಯಲಿದೆ’ ಎಂದು ಮಿಯಾಮಿಯಲ್ಲಿ ಕ್ಯೂಬಾದ ಅಮೆರಿಕ ಸಮುದಾಯ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಹೇಳಿದರು.

‘ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡದ ಹೊರತು ಕ್ಯೂಬಾದ ವಿರುದ್ಧ  ಹೇರಲಾಗಿರುವ ನಿರ್ಬಂಧಗಳನ್ನು ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ’ ಎಂದರು.

‘ಕ್ಯೂಬಾ ಆಡಳಿತ ಶಾಸನಸಭೆಯನ್ನು  ಮತ್ತು ಅದರ ಅಭಿಪ್ರಾಯಗಳನ್ನು ಗೌರವಿಸಬೇಕು  ಎಲ್ಲ ರಾಜಕೀಯ ಪಕ್ಷಗಳಿಗೆ ಅಧಿಕೃತ ಮಾನ್ಯತೆ ನೀಡಬೇಕು.  ಮುಕ್ತ ಮತ್ತು ಅಂತರರಾಷ್ಟ್ರೀಯ ಮೇಲ್ವಿಚಾರಣೆ ಇರುವಂತೆ ಚುನಾವಣೆಗಳನ್ನು ನಡೆಸಬೇಕು’ ಎಂದು ಆಗ್ರಹಿಸಿದರು.

‘ಕ್ಯೂಬಾದ ಸೇನೆಗೆ ನೀಡಲಾಗುತ್ತಿರುವ ಆರ್ಥಿಕ ನೆರವಿನ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುವುದು. ಪ್ರವಾಸೋದ್ಯಮದ ಮೇಲಿನ ನಿರ್ಬಂಧವನ್ನು ಮುಂದುವರಿಸಲಾಗುವುದು’ ಎಂದು ಅಮೆರಿಕ ಅಧ್ಯಕ್ಷರು ತಿಳಿಸಿದ್ದಾರೆ.

ಟ್ರಂಪ್‌ ಆಡಳಿತ ರದ್ದು ಮಾಡಿದ ಹಿಂದಿನ ಒಬಾಮ ಸರ್ಕಾರದ ಮೂರನೇ ದೊಡ್ಡ ಒಪ್ಪಂದ ಇದಾಗಿದೆ.

ಕ್ಯೂಬಾ ಖಂಡನೆ
ಹವಾನ:
ಎರಡು ದೇಶಗಳ ಒಪ್ಪಂದಗಳ ಮೇಲೆ ನಿಯಂತ್ರಣ ಹೇರುವ ಟ್ರಂಪ್‌ ಅವರ ಕ್ರಮವನ್ನು ಕ್ಯೂಬಾ ಸರ್ಕಾರ ಟೀಕಿಸಿದೆ. ಆದರೆ, ಈ ನಿಟ್ಟಿನಲ್ಲಿ ಅಮೆರಿಕದೊಂದಿಗೆ ‘ಮಾತುಕತೆ’ ನಡೆಸುವುದನ್ನು ಪುನರುಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT