ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಲಲ್ಲಿ ಬೆಳಕಿತ್ತ ಭಗವತಿ

Last Updated 17 ಜೂನ್ 2017, 19:30 IST
ಅಕ್ಷರ ಗಾತ್ರ

l  ಕೃಷ್ಣ ಎಸ್‌.ದೀಕ್ಷಿತ್‌

ಅದು 1942ರ ಆಗಸ್ಟ್‌ 7 ಮತ್ತು 8ನೇ ತಾರೀಖು. ಮುಂಬೈಯ ಗ್ವಾಲಿಯರ್‌ ಟ್ಯಾಂಕ್‌ನಲ್ಲಿ ಎರಡು ದಿನಗಳ ಕಾಂಗ್ರೆಸ್‌ ಮಹಾ ಅಧಿವೇಶನ ನಡೆದಿತ್ತು. ಕುತೂಹಲಕ್ಕಾಗಿ ಹೋಗಿದ್ದ  ಗಣಿತಶಾಸ್ತ್ರದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಪ್ರಫುಲ್ಲಚಂದ್ರ ನಟವರಲಾಲ್‌ ಭಗವತಿ  ಮಹಾತ್ಮ ಗಾಂಧಿಯವರ ಮೋಡಿಗೆ ಒಳಗಾದ. ಮುಂದೆ ಅದು ಆತನ ಜೀವನದ ಗತಿಯನ್ನೇ ಬದಲಿಸಿತು.

ಗಣಿತದ ಸಹವಾಸವನ್ನು ಅರ್ಧಕ್ಕೇ ತೊರೆದ ಭಗವತಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು. ಅರುಣ್‌ ಪಟವರ್ಧನ್‌ ಹಾಗೂ ಅರುಣಾ ಅಸಿಫ್‌ ಅಲಿ ಸ್ಥಾಪಿಸಿದ್ದ ಸೋಷಲಿಸ್ಟ್‌ ಪಾರ್ಟಿ ಕಾರ್ಯಕರ್ತರಾದರು.

ಚಳವಳಿಯ ಭರಾಟೆಗೆ ಬಿದ್ದು ನಾಲ್ಕು ತಿಂಗಳ ಕಾಲ ಭೂಗತರಾಗಿದ್ದರು. ತಿಂಗಳೊಪ್ಪತ್ತು ಜೈಲು ವಾಸವನ್ನೂ ಅನುಭವಿಸಿದರು. ದೇಶಭಕ್ತಿಯ ಕಿಚ್ಚು ಹೆಚ್ಚಾದಂತೆಲ್ಲಾ ಅವರೊಳಗಿದ್ದ ವಕೀಲ ಪ್ರಬುದ್ಧನಾದ. ಬಾಂಬೆ ಸರ್ಕಾರಿ ಕಾನೂನು ಕಾಲೇಜಿನಲ್ಲಿ  ಕಾನೂನು ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪೂರೈಸಿದ ಭಗವತಿ, 1948ರ ಫೆಬ್ರುವರಿ 24ರಂದು ವಕೀಲನಾಗಿ ಸನ್ನದು ಪಡೆದರು. ಅಲ್ಲಿಂದ ಅವರು ಕ್ರಮಿಸಿದ ಹಾದಿ ಸುದೀರ್ಘ.

1921ರ ಡಿಸೆಂಬರ್ 21ರಂದು ಗುಜರಾತ್‌ನಲ್ಲಿ ಜನಿಸಿದ ಭಗವತಿ 1941ರಲ್ಲಿ ಮುಂಬೈಯ ಎಲ್ಫಿನ್‌ಸ್ಟನ್‌ ಕಾಲೇಜಿನಲ್ಲಿ ಗಣಿತ ವಿಷಯದಲ್ಲಿ ಪದವಿ ಪಡೆದರು. ಗುಜರಾತಿನ ಶೈವ ಸಂಪ್ರದಾಯದ ಕುಟುಂಬಕ್ಕೆ ಸೇರಿದ ಇವರ ತಂದೆ ನಟವರಲಾಲ್‌ ಎಚ್. ಭಗವತಿ ಕೂಡಾ ಸುಪ್ರೀಂ ಕೋರ್ಟ್‌  ನ್ಯಾಯಮೂರ್ತಿಯಾಗಿದ್ದವರು.

ಪಿ.ಎನ್.ಭಗವತಿ 1960ರ ಜುಲೈ 21ರಂದು ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿಯಾದರು. 1967ರ ಸೆಪ್ಟೆಂಬರ್ 16ರಿಂದ 1973ರ ಜುಲೈ 16ರವರೆಗೆ ಇದೇ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ. ನಂತರ ಸುಪ್ರೀಂ ಕೋರ್ಟ್‌ಗೆ ಬಡ್ತಿ.  1985ರಲ್ಲಿ ಭಾರತದ  ಮುಖ್ಯ ನ್ಯಾಯಮೂರ್ತಿಯೂ ಆದರು.  1986ರ ಡಿಸೆಂಬರ್ 21ರವರೆಗೆ ಈ ಸ್ಥಾನದಲ್ಲಿದ್ದರು. 

‘ಯಾವ ವ್ಯಕ್ತಿಯ ಹಕ್ಕಿಗೆ ಚ್ಯುತಿ ಆಗಿದೆಯೊ ಆತನೇ ಕೋರ್ಟ್‌ ಮೆಟ್ಟಿಲು ತುಳಿಯಬೇಕು’ ಎಂಬ ಆಂಗ್ಲೊ ಸ್ಯಾಕ್ಸ್‌ ನ್ಯಾಯಶಾಸ್ತ್ರ ಪದ್ಧತಿಗೆ ಬದಲಾವಣೆ ತಂದವರು ಇವರು. ಇದರ ಪ್ರತಿಫಲವೇ  1981ರಿಂದ ಆರಂಭಗೊಂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಪರಂಪರೆ.  ‘ನಾಗರಿಕನೊಬ್ಬ ಜೀವಿಸುವುದು ಎಂದರೆ ಜೀವನ ಅರಳುವಂತೆ ಬದುಕುವ ಹಕ್ಕು’ ಎಂಬುದು ಭಗವತಿ ಅವರ ಗಟ್ಟಿ ನಿಲುವಾಗಿತ್ತು. ಇದಕ್ಕಾಗಿಯೇ 1978ರಲ್ಲಿ ಮೇನಕಾ ಗಾಂಧಿ ಪ್ರಕರಣದಲ್ಲಿ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಂಡ ಸರ್ಕಾರದ ಕ್ರಮ ತಪ್ಪು ಎಂಬ ಠಸ್ಸೆ ಒತ್ತಿದರು.

ತನಿಖಾ ಪತ್ರಿಕೋದ್ಯಮಕ್ಕೆ ಸದಾ ಮನ್ನಣೆ ನೀಡಿದರು. ಆಗ್ರಾದ ಮಹಿಳಾ ಸಂರಕ್ಷಣಾ ನಿಲಯಗಳಲ್ಲಿ ಮಹಿಳೆಯರ ದುಃಸ್ಥಿತಿ ಕುರಿತಂತೆ ‘ಇಂಡಿಯನ್ ಎಕ್ಸ್‌ಪ್ರೆಸ್‌’ ಪತ್ರಿಕೆಯ ವಾಚಕರ ವಿಭಾಗಕ್ಕೆ ಡಾ.ಉಪೇಂದ್ರ ಭಕ್ಷಿ ಎಂಬುವರು ಒಂದು ಪೋಸ್ಟ್‌ ಕಾರ್ಡ್‌ನಲ್ಲಿ ಬರೆದ ಪತ್ರವನ್ನೇ ರಿಟ್‌ ಪಿಟಿಷನ್‌ ಆಗಿ ಪರಿಗಣಿಸಿದವರು ಭಗವತಿ. ‘ಕೋರ್ಟ್‌ ಮೆಟ್ಟಿಲೇರಲು ಕೈಫಿಯತ್ತು, ವಕಾಲತ್ತು, ಅರ್ಜಿದಾರ ಇರಲೇ ಬೇಕೆಂದಿಲ್ಲ’ ಎನ್ನುವ ಮೂಲಕ ಮೊಕದ್ದಮೆಗಳ ಸಾಮಾಜಿಕ ಕ್ರಿಯಾಶೀಲತೆಗೆ ರತ್ನಗಂಬಳಿ ಹಾಸಿದರು.

‘ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದೇನೆ’ ಎಂದು ತಿಹಾರ್ ಜೈಲಿನಲ್ಲಿದ್ದ ಫ್ರಾನ್ಸಿಸ್‌ ಕೊರೇಲಿ ಎಂಬ ಕೈದಿ ಸುಪ್ರೀಂ ಕೋರ್ಟ್‌ಗೆ ಬರೆದ ಪತ್ರವನ್ನೇ ಮೊಕದ್ದಮೆಯನ್ನಾಗಿ ಪರಿಗಣಿಸಿ ಜೈಲುಗಳ ಸುಧಾರಣೆಗೆ ನ್ಯಾಯಾಂಗದ ಮೂಲಕ ಇಂಬು ನೀಡಿದರು.

1982ರಲ್ಲಿ ಬಚ್ಚನ್‌ಸಿಂಗ್‌ ಪ್ರಕರಣದಲ್ಲಿ ಮರಣದಂಡನೆ ಪದ್ಧತಿಯನ್ನು ವಿರೋಧಿಸುವ ಮೂಲಕ, ‘ನಾಗರಿಕ ಸಮಾಜದ ಯಾವೊಬ್ಬನ ಜೀವ  ತೆಗೆಯುವ ಹಕ್ಕು ಸರ್ಕಾರಕ್ಕೂ ಇಲ್ಲ’ ಎಂದು ಸ್ಪಷ್ಟವಾಗಿ ಸಾರಿದ್ದರು. ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಲ್ಲಿ ಇವರೊಬ್ಬರೇ ಹೀಗೆ ಹೇಳಿದ್ದು.

1979ರಲ್ಲಿ ಬಿಹಾರದ ಜೈಲಿನಲ್ಲಿದ್ದ ಹುಸೈನಾರ ಖಟೂನ್‌, ‘ನಾನು ಬಡವನಿದ್ದೇನೆ. ವಕೀಲರನ್ನು ನೇಮಿಸಿಕೊಂಡು ಕೇಸು ನಡೆಸುವ ಶಕ್ತಿ ನನಗಿಲ್ಲ’ ಎಂದು ಬರೆದ ಪತ್ರವನ್ನು ಪಿಟಿಷನ್‌ ಆಗಿ ಪರಿಗಣಿಸಿದ ಭಗವತಿ ದೇಶದಲ್ಲಿ ಕಾನೂನು ನೆರವಿನ ಘಟಕಗಳ ಸ್ಥಾಪನೆಗೆ ತಿದಿಯೊತ್ತಿದರು.

‘ಸರ್ಕಾರಗಳು ತುರ್ತು ಸಂದರ್ಭಗಳಲ್ಲಿ ಮಾತ್ರವೇ ಸುಗ್ರೀವಾಜ್ಞೆ ಹೊರಡಿಸಬೇಕು. ಅವು ಆರು ತಿಂಗಳಷ್ಟೇ  ಜೀವಂತ ಇರುತ್ತವೆ. ಅಷ್ಟರೊಳಗೆ ಶಾಸನಸಭೆಯಲ್ಲಿ ಮಸೂದೆ ಅಂಗೀಕಾರ ಆಗಬೇಕು. ಮನಸ್ಸಿಗೆ ಬಂದಂತೆಲ್ಲಾ ಅವುಗಳನ್ನು ಪುನರಾವರ್ತಿಸಲು ಬರುವುದಿಲ್ಲ’ ಎಂದು ಘೋಷಿಸಿದ್ದು ಇದೇ ಭಗವತಿ.

ಬರದ ಛಾಯೆಯಲ್ಲಿ ನರಳುತ್ತಿದ್ದ ಕರ್ನಾಟಕ 80ರ ದಶಕದಲ್ಲಿ, ಅನ್ಯರು ರಾಜ್ಯ ಪ್ರವೇಶಿಸುವುದಕ್ಕೆ ಷರತ್ತು ವಿಧಿಸಿತ್ತು. ಸರ್ಕಾರದ ಈ ಕ್ರಮಕ್ಕೆ ಅಂದಿನ ಅಡ್ವೊಕೇಟ್‌ ಜನರಲ್‌ ಆಗಿದ್ದ ಸಂತೋಷ ಹೆಗ್ಡೆಯವರನ್ನು ಸುಪ್ರೀಂ ಕೋರ್ಟ್‌ನಲ್ಲಿ ತರಾಟೆಗೆ ತೆಗೆದುಕೊಂಡು, ‘ಏನು ಹೆಗ್ಡೆಯವರೇ ನಿಮ್ಮ ಕರ್ನಾಟಕ ಭಾರತ ದೇಶದಿಂದ ಯಾವಾಗ ಸ್ವಾತಂತ್ರ್ಯ ಪಡೆದಿದೆ’ ಎಂದು ಪ್ರಶ್ನಿಸಿದ್ದರು.  ಕಾರ್ಮಿಕ ಹಕ್ಕುಗಳು, ಸಲಿಂಗ ಕಾಮಿಗಳ ಹಕ್ಕುಗಳು ಹಾಗೂ ಅಂತರರಾಷ್ಟ್ರೀಯ ದತ್ತು ಸ್ವೀಕಾರ ನಿಯಮಗಳನ್ನು ತಮ್ಮ ತೀರ್ಪುಗಳ ಮೂಲಕವೇ ವಿಶದಪಡಿಸಿದ್ದರು.

ಭಗವತಿ ಅವರ ಎಲ್ಲ ನಡೆಗಳೂ ಪ್ರಶ್ನಾತೀತವಾಗಿದ್ದವು ಎಂದೇನಿಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾಜಕೀಯ ನಾಯಕರನ್ನು ಏಕಾಏಕಿ ಬಂಧಿಸಿ ಸೆರೆಮನೆಗೆ ದೂಡುತ್ತಿದ್ದ ಇಂದಿರಾಗಾಂಧಿ ಸರ್ಕಾರದ ನಡೆಯನ್ನು ಇವರು ಕಣ್ಮುಚ್ಚಿ ಬೆಂಬಲಿಸಿದರು. ಮುಂದೆ ಇಂದಿರಾ ಸರ್ಕಾರ ಪತನಗೊಂಡು ಮೊರಾರ್ಜಿ ದೇಸಾಯಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಆಳುವ ಸರ್ಕಾರದ ಪರ ವಾಲಿದ್ದರು. 

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಇಂದಿರಾ ಜಯಭೇರಿ ಬಾರಿಸುತ್ತಿದ್ದಂತೆಆಕೆಗೊಂದು ಪತ್ರ ಬರೆದು, ‘ನೀನು ಭಾರತದ ದುರ್ಗೆ. ಬಡವರ ಪಾಲಿನ ಆಶಾಕಿರಣ’ ಎಂದು ಹಾಡಿ ಹೊಗಳಿದ್ದರು.

ಇದನ್ನು ಕಂಡ ಸಂವಿಧಾನ ತಜ್ಞ ಹೋಮಿ ಮಾಣೆಕ್‌ಜಿ ಸೀರ್‌ವಾಯಿ ಅವರು ಭಗವತಿ ಅವರನ್ನು ‘ಒಬ್ಬ ಸ್ವಾರ್ಥಿ ಮತ್ತು ಸಮಯ ಸಾಧಕ’ ಎಂದು ಜರಿದಿದ್ದರು. ನ್ಯಾಯಮೂರ್ತಿ ಮುಧೋಳಕರ್‌ ಅವರಂತೂ, ‘ಇಂಥವರಿಂದ ನ್ಯಾಯಾಂಗದ ಸ್ವಾತಂತ್ರ್ಯ ಹಾಳಾಗುತ್ತಿದೆ. ಇವರೊಬ್ಬ ಗೆದ್ದೆತ್ತಿನ ಬಾಲ ಹಿಡಿಯುವ  ಮನುಷ್ಯ’ ಎಂದು ಟೀಕಾ ಪ್ರಹಾರ ನಡೆಸಿದ್ದರು.

2007ರಲ್ಲಿ ಪದ್ಮವಿಭೂಷಣ ಪ್ರಶಸ್ತಿ, 1982ರಲ್ಲಿ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಕಲಾ ಮತ್ತು ವಿಜ್ಞಾನ ಅಕಾಡೆಮಿ ಫೆಲೊಷಿಪ್‌ಗೆ ಪಾತ್ರವಾಗಿದ್ದರು. 1995ರಿಂದ 2009ರವರೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಸದಸ್ಯರಾಗಿದ್ದರು. 2001ರಿಂದ 2003ರವರೆಗೆ ಈ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ತಜ್ಞರ ಸಮಿತಿ ಸದಸ್ಯರಾಗಿ 27 ವರ್ಷ ಸೇವೆ ಸಲ್ಲಿಸಿದ್ದರು.

ಇವರು ನೀಡಿದ ತೀರ್ಪುಗಳನ್ನು ಅಮೆರಿಕದ ಸುಪ್ರೀಂ ಕೋರ್ಟ್, ಆಸ್ಟ್ರೇಲಿಯಾ, ಆಫ್ರಿಕಾ ದೇಶಗಳು, ಶ್ರೀಲಂಕಾ, ಪಾಕಿಸ್ತಾನದ ಕೋರ್ಟ್‌ಗಳು ಆಗಾಗ್ಗೆ ಉಲ್ಲೇಖಿಸಿವೆ ಎಂಬುದೇ ಇವರ ಬುದ್ಧಿಮತ್ತೆಗೆ ಸಾಕ್ಷಿ. 

ಉಳ್ಳವರು ಮತ್ತು ಬಡವರ ನಡುವಿನ ವ್ಯತ್ಯಾಸ ಚೆನ್ನಾಗಿ ಅರಿತಿದ್ದ ಭಗವತಿ ಮೊನ್ನೆ ಗುರುವಾರ ಕಣ್ಮುಚ್ಚಿದ್ದಾರೆ. ದೇಶ ಅವರನ್ನು ಬಹುಕಾಲ ನೆನಪಿನಲ್ಲಿ ಇಟ್ಟುಕೊಂಡಿರುತ್ತದೆ.

ಲೇಖಕ: ಸಹಾಯಕ ಸಾಲಿಸಿಟರ್‌ ಜನರಲ್‌
ನಿರೂಪಣೆ: ಬಿ.ಎಸ್.ಷಣ್ಮುಖಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT