ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶಕ್ಕೆ ಕನ್ನಡಿಗ ಜೀವಾ..

Last Updated 18 ಜೂನ್ 2017, 19:30 IST
ಅಕ್ಷರ ಗಾತ್ರ

ಜೀವಕುಮಾರ್‌ ಅವರು ಭಾರತದ ಕಬಡ್ಡಿ ಲೋಕದಲ್ಲಿ  ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಕನ್ಯಾಕುಮಾರಿಯಲ್ಲಿ ಹುಟ್ಟಿದ ಇವರು ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿ ದಶಕಗಳು ಉರುಳಿವೆ. 2007 ರಿಂದ ವಿವಿಧ ಟೂರ್ನಿಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ಇವರು, 2010ರಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ ನಡೆದಿದ್ದ ಸ್ಯಾಫ್‌ ಕ್ರೀಡಾಕೂಟ ಮತ್ತು ಅದೇ ವರ್ಷ ಚೀನಾದಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾ ಕೂಟಗಳಲ್ಲಿ ಚಿನ್ನ ಗೆದ್ದ ಭಾರತ ತಂಡದಲ್ಲಿಯೂ ಆಡಿದ್ದರು.

ಗಾಯದ ಸಮಸ್ಯೆ ಎಡಬಿಡದೆ ಕಾಡಿದ್ದರಿಂದ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದ ಇವರು ಪ್ರೊ ಕಬಡ್ಡಿ ಲೀಗ್‌ನಲ್ಲಿ (ಪಿಕೆಎಲ್‌) ಯು ಮುಂಬಾ ತಂಡದ ಪರ ಶ್ರೇಷ್ಠ ಸಾಮರ್ಥ್ಯ ತೋರಿ ಗಮನ ಸೆಳೆದಿದ್ದರು. ಪಿಕೆಎಲ್‌ನ ಐದನೇ ಆವೃತ್ತಿಯಲ್ಲಿ ಉತ್ತರ ಪ್ರದೇಶ ತಂಡದ ಪರ ಆಡುವ ಅವಕಾಶ ಪಡೆದಿರುವ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

*ಈ ಬಾರಿ ಉತ್ತರ ಪ್ರದೇಶ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದೀರಿ. ಹೇಗನಿಸುತ್ತಿದೆ?
ಹಿಂದಿನ ನಾಲ್ಕು ಆವೃತ್ತಿಗಳಲ್ಲಿ ಯು ಮುಂಬಾ ತಂಡದಲ್ಲಿ ಆಡಿದ್ದೆ. ಈ ಬಾರಿಯ ಆಟಗಾರರ ಹರಾಜಿನಲ್ಲಿ  ಉತ್ತರ ಪ್ರದೇಶ ತಂಡ ₹52 ಲಕ್ಷ ನೀಡಿ ಖರೀದಿಸಿದೆ. ತಂಡದಲ್ಲಿರುವ ಬಹುತೇಕ ಆಟಗಾರರ ಪರಿಚಯ ಇದೆ.  ಹೊಸ ಫ್ರಾಂಚೈಸ್‌ ಆಗಿರುವ ಕಾರಣ ಅಲ್ಲಿನ  ವಾತಾವರಣಕ್ಕೆ ಹೊಂದಿಕೊಳ್ಳಬೇಕು. 

*ಯು ಮುಂಬಾ ಜೊತೆಗಿನ ಒಡನಾಟ ಹೇಗಿತ್ತು?
ಪ್ರೊ ಕಬಡ್ಡಿ ಲೀಗ್‌ನ ಮೊದಲ ಆವೃತ್ತಿಯಿಂದಲೂ ಯು ಮುಂಬಾ ತಂಡದಲ್ಲಿ ಆಡಿದ್ದೆ. ತಂಡದಲ್ಲಿರುವ ಆಟಗಾರರು ಮತ್ತು ಸಿಬ್ಬಂದಿಗಳ ಜೊತೆ ಉತ್ತಮ ಒಡನಾಟ ಇತ್ತು. ಹೀಗಾಗಿ ತವರಿನ ತಂಡದಲ್ಲಿ ಆಡುತ್ತಿದ್ದೇನೆ ಎಂಬ ಭಾವನೆ ಮನೆಮಾಡಿತ್ತು. ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಾಗ ನಾನೂ ತಂಡದಲ್ಲಿದ್ದೆ ಎಂಬುದು ಹೆಮ್ಮೆಯ ಸಂಗತಿ.

*ಈ ಬಾರಿಯ ಆಟಗಾರರ ಹರಾಜಿನಲ್ಲಿ ಹಣದ ಹೊಳೆಯೇ ಹರಿಯಿತು. ಹೀಗಿದ್ದರೂ ಕೆಲ ಅನುಭವಿಗಳು ಅವಕಾಶ ವಂಚಿತರಾದರಲ್ಲವೆ?
ಹರಾಜಿನಲ್ಲಿ ಪಾಲ್ಗೊಂಡಿದ್ದ 12 ಫ್ರಾಂಚೈಸ್‌ಗಳು ಒಟ್ಟು ₹46.99 ಕೋಟಿ ವೆಚ್ಚ ಮಾಡಿ 227 ಆಟಗಾರರನ್ನು ಖರೀದಿಸಿದವು. ಇದು ಪ್ರೊ ಕಬಡ್ಡಿ ಲೀಗ್‌ನ ಜನಪ್ರಿಯತೆಯನ್ನು ಸಾರುತ್ತದೆ. ಹೀಗಿದ್ದರೂ ಕೆಲ ಅನುಭವಿ ಆಟಗಾರರಿಗೆ ಅವಕಾಶ ಸಿಕ್ಕಿಲ್ಲ ಎಂಬ ಅಸಮಾಧಾನ ಇದೆ. ಕರ್ನಾಟಕದ ರಾಜಗುರು, ಕಿರಣ್‌ ಮತ್ತು ದಕ್ಷಿಣ ವಲಯದ ಅತ್ಯುತ್ತಮ ರೈಡರ್‌ ಎನಿಸಿದ್ದ ಶ್ರೀರಾಮ್‌ ಅವರಿಗೆ ಅವಕಾಶ ಸಿಗದಿರುವುದು ಅಚ್ಚರಿ ತಂದಿದೆ. ಆಟಗಾರರ ನಡುವಣ ಪೈಪೋಟಿ ಎಷ್ಟು ಕಠಿಣವಾಗಿದೆ ಎಂಬು ದಕ್ಕೆ ಇದು ನಿದರ್ಶನವೂ ಆಗಿದೆ.

*ಈ ಬಾರಿ ತಂಡಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಆಗುವ ಲಾಭವೇನು?
ಕಬಡ್ಡಿ ಕ್ರೀಡೆಯ ಕಂಪನ್ನು ದೇಶದ ಎಲ್ಲಾ ಭಾಗಗಳಿಗೂ ಪಸ ರಿಸುವ ಉದ್ದೇಶದಿಂದ ಆಯೋಜ ಕರು ತಂಡಗಳ ಸಂಖ್ಯೆ ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ. ಇದರಿಂದ ಆಟಗಾರರಿಗೂ ಹೆಚ್ಚಿನ ಪ್ರಯೋ ಜನವಾಗಿದೆ.

*ಈ ಬಾರಿ ಹೊಸ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದೆ. ಈ ನಿರ್ಧಾರದ ಹಿಂದಿನ ಉದ್ದೇಶ ಏನಿರಬಹುದು ?
ವಿಶ್ವಕಪ್‌, ಸ್ಯಾಫ್‌ ಮತ್ತು  ಏಷ್ಯನ್‌ ಕ್ರೀಡಾಕೂಟಗಳಲ್ಲಿ ಮೊದಲಿನಿಂದಲೂ ಭಾರತವೇ ಪ್ರಾಬಲ್ಯ ಮೆರೆಯುತ್ತಾ ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ  ಇರಾನ್‌, ಜಪಾನ್‌, ಇಂಗ್ಲೆಂಡ್‌ ತಂಡಗಳು ನಮಗೆ ಪ್ರಬಲ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆದಿವೆ. ರಾಷ್ಟ್ರೀಯ ತಂಡವನ್ನು ಇನ್ನಷ್ಟು ಶಕ್ತಿಯುತವಾಗಿಸು ವುದು ಈಗಿನ ಮಟ್ಟಿಗೆ ಅಗತ್ಯವಾಗಿದೆ. ಹೀಗಾಗಿಯೇ ಈ ಬಾರಿ ‘ಯಂಗ್‌ ಟ್ಯಾಲೆಂಟ್‌ ಪೂಲ್‌’ ಎಂಬ ಯೋಜನೆ  ರೂಪಿಸಿ 18 ರಿಂದ 22 ವರ್ಷದೊಳಗಿನ ಆಟಗಾರರನ್ನು ಗುರುತಿಸುವ ಕೆಲಸ ಮಾಡಲಾಗಿದೆ.

*ಪಿಕೆಎಲ್‌ ಶುರುವಾದ ನಂತರ ಆಟಗಾರರ ಜೀವನದಲ್ಲಿ ಯಾವೆಲ್ಲಾ ಬದಲಾವಣೆಗಳಾಗಿವೆ?
ಮೊದಲೆಲ್ಲಾ ಕಬಡ್ಡಿ ಆಟಗಾರರೆಂದರೆ ಮೂಗು ಮುರಿಯುವವರೇ ಹೆಚ್ಚಿದ್ದರು. ಪಿಕೆಎಲ್‌ ಶುರುವಾದ ಬಳಿಕ ಮುಖ್ಯವಾಗಿ ಆಟಗಾರರ ಆರ್ಥಿಕ ಸ್ಥಿತಿ ಸುಧಾರಿಸಿದೆ.  ಜನ ನಮ್ಮನ್ನೂ ಗುರುತಿಸುತ್ತಿದ್ದಾರೆ. ಕ್ರಿಕೆಟಿಗರ ಹಾಗೆ ಕಬಡ್ಡಿ ಆಟಗಾರರ ಹಸ್ತಾಕ್ಷರ ಪಡೆಯಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಾರೆ.

*ಹೊಸ ತಂಡದ ಬಗ್ಗೆ ಹೇಳಿ?
ತಂಡಕ್ಕೆ ಆಯ್ಕೆಯಾಗಿರುವ ಎಲ್ಲರೂ ಸಮರ್ಥರಾಗಿದ್ದಾರೆ. ಉತ್ತರ ಪ್ರದೇಶದ ಅಲಿಘಡದಲ್ಲಿ ಈಗಾಗಲೇ ತರಬೇತಿ ಶಿಬಿರ ಆರಂಭವಾಗಿದ್ದು ಜುಲೈ 27 ಕ್ಕೆ ಮುಕ್ತಾಯವಾಗಲಿದೆ.  ಶಿಬಿರದಲ್ಲಿ ಆಟಗಾರರಿಂದ ಮೂಡಿಬರುವ ಸಾಮರ್ಥ್ಯದ ಆಧಾರದಲ್ಲಿ ಯಾರನ್ನು ನಾಯಕನನ್ನಾಗಿ ನೇಮಿಸಬೇಕು, ಆಡುವ ಬಳಗದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬುದನ್ನು ತಂಡದ ಕೋಚ್‌ ತೀರ್ಮಾನಿಸುತ್ತಾರೆ.

*ನೀವು ಈಗಾಗಲೇ ಕಬಡ್ಡಿಯಲ್ಲಿ ಸಾಕಷ್ಟು ನೈಪುಣ್ಯ ಸಾಧಿಸಿದ್ದೀರಿ. ಹೀಗಿದ್ದರೂ  ನಿಮ್ಮ ಆಟದಲ್ಲಿ ಏನು ಸುಧಾರಣೆ ಯಾಗಬೇಕು ಎಂದು ಭಾವಿಸುತ್ತೀರಿ?
ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ.  ಈಗ ಎಷ್ಟೇ ಪ್ರಾವಿಣ್ಯತೆ ಪಡೆದಿದ್ದರೂ, ಇನ್ನೂ ಹೊಸ ಕೌಶಲಗಳನ್ನು ಕಲಿಯುವುದು ಇದ್ದೇ ಇರುತ್ತದೆ. ಈಗ ಸಾಕಷ್ಟು ಮಂದಿ ಹೊಸಬರು ಕಬಡ್ಡಿ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಅವರು ನಮ್ಮ ಆಟವನ್ನು ನೋಡಿರುತ್ತಾರೆ. ಆದರೆ ಅವರ ಆಟವನ್ನು ನಾವು ಗಮನಿಸಿರುವುದಿಲ್ಲ. ಹೀಗಾಗಿ ಹೊಸ ಹುಡುಗರು ಹೇಗೆ ಆಡು ತ್ತಾರೆ ಎಂಬುದನ್ನು ಗುರುತಿಸಿ ಬಳಿಕ ಅದಕ್ಕನುಗುಣವಾದ ಯೋಜನೆ ರೂಪಿಸಬೇಕು. ಈ ನಿಟ್ಟಿನಲ್ಲಿ ಬದಲಾವಣೆಗೆ ಒಗ್ಗಿ ಕೊಳ್ಳುವುದು ಅತ್ಯಗತ್ಯ. ಇಲ್ಲದಿದ್ದರೆ ಹೊಸ ಅಲೆಯ ಎದುರು ಕೊಚ್ಚಿ ಹೋಗುವ ಅಪಾಯವಿರುತ್ತದೆ.

*ತಂಡದಲ್ಲಿ ಡಿಫೆಂಡರ್‌ಗಳ ಮಹತ್ವ ಏನು?
ಲೀಗ್‌ನ ಎಲ್ಲಾ ಪಂದ್ಯಗಳು ಮ್ಯಾಟ್‌ನಲ್ಲಿ ನಡೆಯುವುದ ರಿಂದ ರೈಡರ್‌ಗಳಿಗೆ ಹೆಚ್ಚು ಅನುಕೂಲವಾಗಿದೆ. ಹೀಗಾಗಿ ಎದುರಾಳಿ ರೈಡರ್‌ ಅನ್ನು ಹಿಡಿಯಲು ಅವಸರಿಸಬಾರದು. ಆತ ನನ್ನು ರಕ್ಷಣಾವ್ಯೂಹದೊಳಗೆ ಬಿಟ್ಟು ಬಳಿಕ ಹಿಡಿತಕ್ಕೆ ಪಡೆಯಬೇಕು. ಜೊತೆಗೆ ಅಗತ್ಯ ಬಿದ್ದಾಗ ರೈಡಿಂಗ್‌ನಲ್ಲೂ ಮಿಂಚಿ ತಂಡದ ಖಾತೆಗೆ ಪಾಯಿಂಟ್‌ ಸೇರ್ಪಡೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿರುತ್ತದೆ.

*ಹರಾಜಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಇತ್ತಲ್ಲವೇ?
ಕರ್ನಾಟಕದಲ್ಲಿ ಪ್ರತಿಭಾನ್ವಿತರಿಗೇನೂ ಬರವಿಲ್ಲ. ಆದರೆ ಈ ಕ್ರೀಡೆಯಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟ ಎಂದು ಭಾವಿಸಿ ಅನೇಕರು ಕ್ರೀಡೆಯಿಂದ ವಿಮುಖರಾಗಿದ್ದಾರೆ. ಹೀಗಾಗಿ ರಾಜ್ಯದ ಆಟಗಾರರ ಸಂಖ್ಯೆ ಕ್ಷೀಣಿಸಿದೆ. ಪಿಕೆಎಲ್‌ ಶುರುವಾದ ನಂತರ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಹಲವು ಮಂದಿ ಕಬಡ್ಡಿ ಕಲಿಯಲು ಮುಂದಾಗುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ  ಅಕಾಡೆಮಿಗಳೂ ತಲೆ ಎತ್ತಿವೆ. ಬೆಂಗ ಳೂರು ಬುಲ್ಸ್‌ ಫ್ರಾಂಚೈಸ್‌  ಕೂಡ ಪ್ರತಿಭಾನ್ವೇಷಣೆಗೆ ಮುಂದಾ ಗಿದೆ. ಜೊತೆಗೆ ಬಿ.ಸಿ. ರಮೇಶ್ ಅವರ ಅಕಾಡೆಮಿಯಿಂದಲೂ ಅನೇಕರು ಮುಂಚೂಣಿಗೆ  ಬರುತ್ತಿದ್ದಾರೆ.

*ಫಿಟ್‌ನೆಸ್‌ ಕಾಪಾಡಿಕೊಳ್ಳಲು ಏನು ಮಾಡುತ್ತೀರಿ?
ಲೀಗ್‌ ಶುರುವಾದ ನಂತರ ನಿರಂತರವಾಗಿ ಪಂದ್ಯಗಳನ್ನು ಆಡಬೇಕಾಗುತ್ತದೆ. ಹೀಗಾಗಿ ಅಭ್ಯಾಸದ ಜೊತೆಗೆ ಫಿಟ್‌ನೆಸ್‌ಗೂ  ಮಹತ್ವ ನೀಡುತ್ತಿದ್ದೇನೆ. ನಿತ್ಯ ಜಿಮ್‌ನಲ್ಲಿ ಕೆಲ ಹೊತ್ತು ದೇಹ ದಂಡಿಸುತ್ತೇನೆ. ನಂತರ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಅನು ವಾಗುವಂತಹ  ಕಸರತ್ತುಗಳನ್ನು ಮಾಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT