ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶರಣಧರ್ಮ ಕಾಳಜಿ ತೋರಲಿ’

Last Updated 18 ಜೂನ್ 2017, 19:30 IST
ಅಕ್ಷರ ಗಾತ್ರ

ಪ್ರಸ್ತುತ ಸಂದರ್ಭದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸೂತ್ರಗಳು ಸಿಗುವುದು 12ನೇ ಶತಮಾನದ ಶರಣರ ತಾತ್ವಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಎನ್ನುವುದು ಕರ್ನಾಟಕದ ಬಹುತೇಕ ಸಮುದಾಯಗಳ ಜನರ ಅಭಿಪ್ರಾಯ. ಅನುಷ್ಠಾನ ಕ್ರಮಗಳಲ್ಲಿ ಮಾತ್ರ ವಿರೋಧಾಭಾಸಗಳು ಎದ್ದು ಕಾಣುತ್ತಿವೆ. ಅವುಗಳ ನಿವಾರಣೆಯ ಪ್ರಯತ್ನಗಳೇ ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯಕ್ರಮಗಳಾಗಬೇಕಿವೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಸವಾಭಿಮಾನಿಗಳೂ, ಶರಣ ಸಂಸ್ಕೃತಿಯ ಅನುಪಾಲಕರೂ ಆಗಿರುವುದು ಮೆಚ್ಚುಗೆಯ ವಿಷಯ. ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಬಸವ ಜಯಂತಿ ದಿನ. ಇದೀಗ ಬಸವಣ್ಣನವರ ಭಾವಚಿತ್ರವನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಕಿಸಲು ಆದೇಶಿಸಿರುತ್ತಾರೆ. ಗಾಂಧಿ, ಅಂಬೇಡ್ಕರ್ ಭಾವಚಿತ್ರಗಳ ಸಾಲಿನಲ್ಲಿ ಇದೊಂದು ಎನ್ನುವುದಾದರೆ ಅದಕ್ಕೆ ಅರ್ಥವಿಲ್ಲ. ಅರ್ಥ ಬರುವುದು ಯಾವಾಗ ಎಂದರೆ,  ಕಚೇರಿ ಸಿಬ್ಬಂದಿಯಿಂದ  ಮೊದಲುಗೊಂಡು ಅಧಿಕಾರಿಗಳು ಮತ್ತು ಸಾರ್ವಜನಿಕರು ಅವರವರ ಕರ್ತವ್ಯ ಪಾಲನೆಯಲ್ಲಿ ಬಸವಾದಿ ಶರಣರ ತತ್ವಗಳನ್ನು ಮೈಗೂಡಿಸಿಕೊಂಡಾಗ.

ರಾಜ್ಯದ ಮಹಿಳಾ ವಿಶ್ವವಿದ್ಯಾಲಯಕ್ಕೆ ಶರಣೆ ಅಕ್ಕಮಹಾದೇವಿ ಹೆಸರಿಟ್ಟಾದ ಮೇಲೆ ಅದನ್ನು ಆ ನೆಲೆಯಲ್ಲಿ ಬೆಳೆಸಲು ಪ್ರಯತ್ನಗಳಾಗಬೇಕು. ಆದರೆ, ಸಿದ್ದರಾಮಯ್ಯನವರು ಇತ್ತೀಚಿನ ದಿನಗಳಲ್ಲಿ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ವಿಷಯದಲ್ಲಿ ತಾತ್ವಿಕತೆಗಿಂತ ರಾಜಕೀಯ ಮತ್ತು ಜಾತಿ ಪಕ್ಷಪಾತ ಧೋರಣೆ ಹೊಂದಿದ್ದಾರೆ ಎನ್ನುವ ಭಾವನೆ ವ್ಯಕ್ತವಾಗಿದೆ. ಮೊದಲ ನಿದರ್ಶನವಾಗಿ ಹೇಳುವುದಾದರೆ ಉಡುಪಿಯ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಯವರು ಪಾಲ್ಗೊಂಡರೂ ಶಿಷ್ಟಾಚಾರ ಮರೆತು  ಕಾರ್ಯಕ್ರಮದಿಂದ ದೂರ ಉಳಿದದ್ದು. ಇಂಥ ಅನುಭವ ದಾವಣಗೆರೆ ಜನರಿಗೂ ಆಗಿದೆ.

ಬಸವಾದಿ ಶರಣರ ತತ್ವಗಳನ್ನು ನಿಜದ ನೆಲೆಯಲ್ಲಿ ಅನುಷ್ಠಾನಗೊಳಿಸಲು ಶ್ರಮಿಸಿದ ಕರ್ನಾಟಕದ ಗಾಂಧಿ, ಶರಣ ಹರ್ಡೇಕರ್ ಮಂಜಪ್ಪ ಅವರು  ವಿರಕ್ತಮಠದ ಅಂದಿನ ಶ್ರೀಗಳಾಗಿದ್ದ ಮೃತ್ಯುಂಜಯ ಅಪ್ಪಗಳು ಅವರೊಂದಿಗೆ ‘ಬಸವ ಜಯಂತಿ’ ಆಚರಣೆ ಆರಂಭಿಸಿದರು. ಈ ಜಯಂತಿಯ ಬಗ್ಗೆ ಪ್ರಚುರಪಡಿಸಲು ಅದರ ಮುನ್ನಾ ದಿನಗಳಲ್ಲಿ ಆರಂಭಿಸಿದ ಜಾಗೃತಿಯಾತ್ರೆಯೇ ‘ಬಸವ ಪ್ರಭಾತ್ ಫೇರಿ’. ಇದು ಆರಂಭವಾಗಿ ಈಗ 100 ವರ್ಷ.  ಆ ಪ್ರಯುಕ್ತ ದಾವಣಗೆರೆ ಜನರು ನಮ್ಮ ಜೊತೆಗೂಡಿ ಚಿತ್ರದುರ್ಗ ಮುರುಘಾಮಠದ  ಡಾ. ಶಿವಮೂರ್ತಿ ಮುರುಘಾ ಶರಣರ ಮಾರ್ಗದರ್ಶನದಲ್ಲಿ ಶತಮಾನೋತ್ಸವ ಸಮಾರಂಭ ಆಚರಿಸಲು ಮುಖ್ಯಮಂತ್ರಿಯವರನ್ನು ಆಹ್ವಾನಿಸಿದ್ದರು. ಇದೇ ಏಪ್ರಿಲ್ 29ಕ್ಕೆ ಕಾರ್ಯಕ್ರಮ ಏರ್ಪಾಡಾಗಿ ಆಹ್ವಾನ ಪತ್ರಿಕೆಗಳೂ ಮುದ್ರಣಗೊಂಡಿದ್ದವು. ಆದರೆ ಸಿದ್ದರಾಮಯ್ಯನವರು ದುಬೈಗೆ ಹೋಗುವ ಸಲುವಾಗಿ ಇದನ್ನು ಮುಂದೂಡಿದರು. ನಂತರ ಇದೇ ದಾವಣಗೆರೆ ಮತ್ತು ಪಕ್ಕದ ಜಿಲ್ಲೆಗಳಿಗೆ ಎರಡು– ಮೂರು ಬಾರಿ ಬಂದು ಇತರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಬಸವ ಸಂಸ್ಕೃತಿ ಆಧಾರಿತ ಕಾರ್ಯಕ್ರಮಕ್ಕೆ ಬರದೆ ದಾವಣಗೆರೆಯಲ್ಲಿ ನಡೆದ ಶಾಮನೂರು ಶಿವಶಂಕರಪ್ಪ ಅವರ ಹುಟ್ಟುಹಬ್ಬದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಬಸವಾಭಿಮಾನಿಗಳಿಗೆ ನೋವುಂಟು ಮಾಡಿದೆ.

ಅಖಿಲ ಭಾರತ ವೀರಶೈವ ಮಹಾಸಭಾದ  ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರು ಸಿದ್ದರಾಮಯ್ಯನವರನ್ನು ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಸನ್ಮಾನಿಸಿದ್ದರು. ಅದರ ಋಣ ತೀರಿಸಲು ಮುಖ್ಯಮಂತ್ರಿ ದಾವಣಗೆರೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಆ ಮೂಲಕ ವೀರಶೈವ ಲಿಂಗಾಯತರ ಒಂದು ಗುಂಪನ್ನು ಮಾತ್ರ ಓಲೈಸುತ್ತಿದ್ದಾರೆ ಎನ್ನುವುದು ಇಲ್ಲಿನ ಎಲ್ಲ ಜಾತಿಯ ಯುವಕರ ಮಾತಾಗಿದೆ. ಹೀಗೆ ಪರಸ್ಪರ ಓಲೈಕೆ, ಅಭಿನಂದನೆಗಳು ಪರಸ್ಪರರ ರಾಜಕೀಯ ಅಸ್ತಿತ್ವಕ್ಕೆ ಎನ್ನುವುದಾದರೆ ಅದು ಬಸವತತ್ವ ಅಭಿಮಾನ ಹೇಗಾಗುತ್ತದೆ? ಆದ್ದರಿಂದ, ಸಿದ್ದರಾಮಯ್ಯನವರು ಶರಣರ ಆಶಯದ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಮೂಲಕ ಅವರ ಶರಣಧರ್ಮ ಕಾಳಜಿ ಪ್ರದರ್ಶಿಸಬೇಕು.
-ಬಸವಪ್ರಭು ಸ್ವಾಮೀಜಿ, ವಿರಕ್ತಮಠ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT