ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಸರಣಿ ಸ್ಫೋಟ: ವಿಳಂಬ ತೀರ್ಪು, ಕಾಣದ ತಾರ್ಕಿಕ ಅಂತ್ಯ

Last Updated 18 ಜೂನ್ 2017, 19:30 IST
ಅಕ್ಷರ ಗಾತ್ರ

ಮುಂಬೈಯಲ್ಲಿ ಸರಣಿ ಬಾಂಬ್‌ ಸ್ಫೋಟಗಳು ನಡೆದದ್ದು 1993ರಲ್ಲಿ. ಅಂದರೆ ಸರಿಸುಮಾರು 24 ವರ್ಷಗಳ ಹಿಂದೆ. ಆಗ 257 ಜನ ಸಾವಿಗೀಡಾಗಿದ್ದರು, 713 ಜನ ತೀವ್ರವಾಗಿ ಗಾಯಗೊಂಡಿದ್ದರು. ಈ ಘೋರ ಹತ್ಯಾಕಾಂಡಕ್ಕೆ ಕಾರಣರಾದವರ ಪೈಕಿ ಆರು ಮಂದಿ  ‘ತಪ್ಪಿತಸ್ಥರು’ ಎಂದು ವಿಶೇಷ ಟಾಡಾ ನ್ಯಾಯಾಲಯ ಈಗ ತೀರ್ಪು ನೀಡಿದೆ. ಅವರಿಗೆ ವಿಧಿಸುವ ಶಿಕ್ಷೆ ಪ್ರಮಾಣದ ಬಗ್ಗೆ ಇನ್ನು ಮೇಲೆ ನಿರ್ಧಾರ ತೆಗೆದುಕೊಳ್ಳಲಿದೆ. ಇದು ಎರಡನೇ ಹಂತದ ವಿಚಾರಣೆಯ ತೀರ್ಪು. ಮೊದಲ ಹಂತದ ವಿಚಾರಣೆ ಮುಗಿದಿದ್ದು 2007ರಲ್ಲಿ. ಅಂದರೆ 14 ವರ್ಷ ಹಿಡಿಯಿತು.  ಆಗ ನೂರು ಮಂದಿಯನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ನೀಡಲಾಗಿತ್ತು. ಅವರಲ್ಲಿ ಯಾಕೂಬ್‌ ಮೆಮನ್‌ಗೆ ಮಾತ್ರ ಗಲ್ಲು ಶಿಕ್ಷೆ ಕಾಯಂ  ಮಾಡಿ  ನೇಣಿಗೇರಿಸಲಾಯಿತು. ಉಳಿದವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಮೊದಲ ಹಂತದ ವಿಚಾರಣೆ ಮುಗಿಯುವ ವೇಳೆಗೆ ಇನ್ನಷ್ಟು ಸಂಗತಿಗಳು ಬೆಳಕಿಗೆ ಬಂದು ಎರಡನೇ  ಹಂತದಲ್ಲಿ ಏಳು ಆರೋಪಿಗಳ ವಿಚಾರಣೆ  ನಡೆಸಲಾಯಿತು. ಅವರಲ್ಲಿ ಒಬ್ಬನನ್ನು ಸಾಕ್ಷ್ಯಾಧಾರದ ಕೊರತೆ ಕಾರಣ ಖುಲಾಸೆ ಮಾಡಲಾಗಿದೆ. ಅಂದರೆ ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದೂ ತಡ, ನಿರಪರಾಧಿಗೆ ಬಿಡುಗಡೆಯೂ ತಡ. ಪ್ರಮುಖ ಅಪರಾಧಿ ಅಬು ಸಲೇಂ ಅನೇಕ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಆದರೆ ಆತನನ್ನು ಸೆರೆ ಹಿಡಿದು ಭಾರತಕ್ಕೆ ಹಸ್ತಾಂತರಿಸಿದ್ದು ಪೋರ್ಚುಗಲ್ ಸರ್ಕಾರ. ಹೀಗಾಗಿ ಹಸ್ತಾಂತರ ಕಾಲಕ್ಕೆ ಮಾಡಿಕೊಂಡ ಒಪ್ಪಂದ ಆತನ ಮೇಲಿನ ಕೆಲವು ಆಪಾದನೆ ಮತ್ತು ಶಿಕ್ಷೆಗಳಿಗೆ ಅಡ್ಡ ಬರುತ್ತಿದೆ. ಅಂತರರಾಷ್ಟ್ರೀಯ ಒಪ್ಪಂದಗಳನ್ನು ಗೌರವಿಸಬೇಕಾದ ಕಾರಣ ಇವೆಲ್ಲವನ್ನೂ  ಸಹಿಸಿಕೊಳ್ಳುವುದು ಅನಿವಾರ್ಯ.

ಇಷ್ಟಕ್ಕೇ ಈ ಪ್ರಕರಣ ಮುಗಿದಿಲ್ಲ. ದಾವೂದ್‌ ಇಬ್ರಾಹಿಂ, ಟೈಗರ್‌ ಮೆಮೊನ್‌ ಸೇರಿದಂತೆ ಇನ್ನೂ 24 ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನು ನ್ಯಾಯದ ಕಟಕಟೆಗೆ ತಂದು ನಿಲ್ಲಿಸಿ ತಪ್ಪಿಗೆ ಶಿಕ್ಷೆ ವಿಧಿಸುವ ತನಕವೂ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವುದಿಲ್ಲ. ನೂರಾರು ಅಮಾಯಕರನ್ನು ಕೊಂದವರು, ಕೊಲ್ಲಿಸಿದವರು ಪಾರಾಗಲು ಬಿಡಬಾರದು.  ಪ್ರಮುಖ ಆರೋಪಿಗಳು ಪಾಕಿಸ್ತಾನ, ದುಬೈನಲ್ಲಿ ಆಶ್ರಯ ಪಡೆದಿದ್ದಾರೆ. ಅಪರಾಧಿಗಳ ವಿನಿಮಯಕ್ಕೆ ಈ ದೇಶಗಳ ಜತೆ ಒಪ್ಪಂದ ಇಲ್ಲ. ವಾಸ್ತವವಾಗಿ ಪೋರ್ಚುಗಲ್ ಜತೆ ಕೂಡ ಇಂತಹ ಒಪ್ಪಂದ ಇರಲಿಲ್ಲ. ಆದರೆ ಅತ್ಯುನ್ನತ ಮಟ್ಟದಲ್ಲಿ ನಡೆದ ಮಾತುಕತೆ, ಮನವೊಲಿಕೆ ಫಲ ಕೊಟ್ಟಿದ್ದರಿಂದ ಅಬು ಸಲೇಂ ಭಾರತದ ವಶವಾದ. ಆದ್ದರಿಂದ ವಿದೇಶಗಳಲ್ಲಿ ತಲೆಮರೆಸಿಕೊಂಡ ಅಪರಾಧಿಗಳನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮುಂದುವರಿಸಬೇಕು. ಭಯೋತ್ಪಾದನೆಯ ಬಿಸಿ ಬಹಳಷ್ಟು ದೇಶಗಳಿಗೆ ತಟ್ಟಿರುವುದರಿಂದ ಈ ಕಾರ್ಯ ಸುಲಭವೂ ಆಗಬಹುದು. 

ಎಷ್ಟೇ ಆದರೂ,  ಈಗ ಹೊರಬಿದ್ದಿರುವುದು 2ನೇ ಹಂತದ ವಿಚಾರಣೆಯ ತೀರ್ಪು. ಅಲ್ಲಿಗೆ, ಇಂತಹ ಗಂಭೀರ ಸ್ವರೂಪದ ಪ್ರಕರಣದ ಎರಡು ಹಂತಗಳ ವಿಚಾರಣೆಗೆ ಸುಮಾರು ಕಾಲು ಶತಮಾನ ಬೇಕಾಯಿತು. ಇದು ನಮ್ಮ ನ್ಯಾಯದಾನ ವ್ಯವಸ್ಥೆಯಲ್ಲಿನ ವಿಳಂಬಕ್ಕೆ ಕನ್ನಡಿ. ತಪ್ಪಿತಸ್ಥರಿಗೆ ಶಿಕ್ಷೆ ತಡವಾಗುತ್ತ ಹೋದಂತೆ, ನ್ಯಾಯವ್ಯವಸ್ಥೆ ಬಗ್ಗೆ ಜನರಲ್ಲಿ ವಿಶ್ವಾಸ ಕೂಡ ಸಹಜವಾಗಿಯೇ ಕಡಿಮೆಯಾಗುತ್ತದೆ. ಇದು ಹೀಗೆಯೇ ಮುಂದುವರಿಯುವುದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ತುಂಬ ಅಪಾಯಕಾರಿ. ಶಿಕ್ಷೆಯ ಭಯ ಇದ್ದಾಗ ಮಾತ್ರ ಅಪರಾಧಗಳು ಕಡಿಮೆಯಾಗುತ್ತವೆ. ಅದನ್ನು ಸಮರ್ಥಿಸುವ ಅನೇಕ ನಿದರ್ಶನಗಳು ನಮ್ಮ ಮುಂದಿವೆ. ಆದ್ದರಿಂದ ನ್ಯಾಯಾಲಯಗಳಲ್ಲಿ ವಿಳಂಬ ತಪ್ಪಿಸುವ ಮತ್ತು ತ್ವರಿತ ವಿಚಾರಣೆಗೆ ಬೇಕಾದ ಅನುಕೂಲ ಒದಗಿಸುವುದರ ಬಗ್ಗೆ ನ್ಯಾಯಾಂಗ ಮತ್ತು ಶಾಸಕಾಂಗಗಳು ಆಲೋಚಿಸಬೇಕು.

ಮುಂಬೈ ಸರಣಿ ಸ್ಫೋಟಕ್ಕೆ ಮುಖ್ಯ ಪ್ರೇರಣೆ ಅಯೋಧ್ಯೆಯ ವಿವಾದಾತ್ಮಕ ಕಟ್ಟಡದ ನೆಲಸಮ. ಮುಂಬೈ ಕೋಮುಗಲಭೆ ಹಾಗೂ ಸ್ಫೋಟದ ವಿಚಾರಣೆ ನಡೆಸಿದ ಶ್ರೀ ಕೃಷ್ಣ ಆಯೋಗ ಕೂಡ ಇದನ್ನೇ ಹೇಳಿತ್ತು. ಆದ್ದರಿಂದ, ಮತದ ಆಸೆಯಿಂದ  ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ಬೇಳೆ ಬೇಯಿಸಿಕೊಳ್ಳುವ ರಾಜಕಾರಣವನ್ನು ರಾಜಕೀಯ ಪಕ್ಷಗಳು ಇನ್ನಾದರೂ ಬಿಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT