ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಲದ ಕಣ್ಣು’ ತೆರೆಯುತ್ತಾ...

Last Updated 19 ಜೂನ್ 2017, 19:30 IST
ಅಕ್ಷರ ಗಾತ್ರ

ಹಾಸನದಂತಹ ಅರೆಮಲೆನಾಡಿನಲ್ಲೂ ಕಳೆದ 2–3 ವರ್ಷಗಳಿಂದ ಬರ ಆವರಿಸಿ ಕುಡಿಯುವ ನೀರಿಗೂ ತತ್ವಾರವಾಗಿರುವಾಗ, ಈ ಜಲಕ್ಷಾಮವನ್ನು ಎದುರಿಸುವುದು ಹೇಗೆಂದು ನಾವೊಂದಿಷ್ಟು ಸಮಾನಮನಸ್ಕರು, ಪರಿಸರ ಕಾಳಜಿಯುಳ್ಳವರು ವರ್ಷದ ಹಿಂದಿನಿಂದಲೇ ಗಂಭೀರವಾಗಿ ಚರ್ಚಿಸಲಾರಂಭಿಸಿದ್ದೆವು. ಹಾಗೆ ಪರಿಸರ ಸಂಬಂಧಿತ ಚಟುವಟಿಕೆ, ಬರವಣಿಗೆ, ನ್ಯಾಯಾಲಯ ಹೋರಾಟಗಳಲ್ಲಿ ನಮ್ಮಲ್ಲಿ ಅನೇಕರು ವೈಯಕ್ತಿಕ ನೆಲೆಯಲ್ಲಿ ಮಾತ್ರವಲ್ಲದೆ ಸಂಸ್ಥೆಗಳ ಮೂಲಕವೂ ತೊಡಗಿಸಿಕೊಂಡಿದ್ದೆವು.

ಸಮುದಾಯವನ್ನು ಒಟ್ಟು ಸೇರಿಸಿ ಕೆಲಸ ಮಾಡಲು ಅನೇಕ ಬಾರಿ ಪ್ರಯತ್ನಿಸಿ ವಿಫಲರಾಗಿದ್ದೆವು. ಆದರೆ, ಬರದ ಬೇಗೆ ತಾಳದೇ, ಕೃಷಿಸಾಲ ತೀರಿಸಲಾಗದೇ ರೈತರು ನಿತ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ಕಾಣುವಾಗ, ಪರಿಹಾರವಾಗಿ ‘ನಾವೇನೂ ಮಾಡಲು ಆಗುತ್ತಿಲ್ಲವಲ್ಲಾ’ ಎಂಬ ಪಾಪಪ್ರಜ್ಞೆ ತೀವ್ರವಾಗಿ ಕಾಡುತ್ತಿತ್ತು.

ಟ್ಯಾಂಕರ್ ನೀರು, ಗೋಮಾಳ ನಿರ್ಮಾಣ, ಮೇವು ಬ್ಯಾಂಕ್‌ನಂತಹ ತಾತ್ಕಾಲಿಕ ಪರಿಹಾರಗಳಿಗಿಂತಲೂ ಕೊಂಚ ಶ್ರಮವಾದರೂ ಕೆರೆ, ಕಲ್ಯಾಣಿಗಳ ಪುನಶ್ಚೇತನ, ಮಳೆ ನೀರಿನ ಸಮರ್ಪಕ ಸಂಗ್ರಹಣೆಗೆ ಅಣಿಯಾಗುವ ಶಾಶ್ವತವಾದ ಕೆಲಸಗಳೇ ಮುಖ್ಯವೆಂದು ಮನದಟ್ಟಾಗಿತ್ತು.

ಈ ಕುರಿತು ಪರಿಸರವಿಜ್ಞಾನ ಲೇಖಕ ನಾಗೇಶ ಹೆಗಡೆ, ಕೆರೆ ಪುನಶ್ಚೇತನ ತಜ್ಞ ಶಿವಾನಂದ ಕಳವೆ, ಹಿರಿಯ ಭೂ ಮತ್ತು ಅಂತರ್ಜಲ ವಿಜ್ಞಾನಿ ಎಸ್.ಜಿತೇಂದ್ರಕುಮಾರ್ ಅವರೊಂದಿಗೆ ನಿರಂತರವಾಗಿ ಚರ್ಚಿಸುತ್ತಾ ಬಂದೆವು. ಜಿತೇಂದ್ರಕುಮಾರ್ ಅವರು ದಿವಂಗತ ಬಿ.ಪಿ. ರಾಧಾಕೃಷ್ಣ ಅವರೊಂದಿಗೆ ಸೇರಿ ಬರೆದ ‘ಅಂತರ್ಜಲ’ ಪುಸ್ತಕ ಮತ್ತು ಕಳವೆಯವರು ಬರೆದ ‘ಜೀವಜಲ ಸಂರಕ್ಷಣೆಗೆ ಕೆರೆ ಕಾಯಕ’ ಕಿರುಹೊತ್ತಿಗೆಗಳು ನಮ್ಮ ಕೆಲಸಕ್ಕೆ ದಿಕ್ಸೂಚಿಯಾದವು.

ಸುತ್ತಮುತ್ತಲ ಕೆರೆ, ಕಟ್ಟೆ, ಕಲ್ಯಾಣಿಗಳ ಕ್ಷೇತ್ರಾಧ್ಯಯನವೂ ಸಾಗಿತ್ತು. ಹಾಸನ ಜಿಲ್ಲೆಯಾದ್ಯಂತ ಹೊಯ್ಸಳರ ಕಾಲದ ಪಾಳು ಬಿದ್ದ, ಒಣಗಿದ ಅನೇಕ ಕಲ್ಯಾಣಿಗಳಿರುವುದು ತಿಳಿದುಬಂತು. ಆದರೆ ಪುನಶ್ಚೇತನ ಕೆಲಸಗಳನ್ನು ಪ್ರಾರಂಭಿಸಲು ಬೇಕಾದ ಸಾರ್ವಜನಿಕ ಒತ್ತಡ ಮಾತ್ರ ನಮ್ಮಲ್ಲಿನ್ನೂ ನಿರ್ಮಾಣವಾಗಿರಲಿಲ್ಲ.

ಸಿಕ್ಕಿತು ಪ್ರೇರಣೆ
ಇದೇ ಸಂದರ್ಭದಲ್ಲಿ ‘ಪ್ರಜಾವಾಣಿ‘ ವಿಶೇಷ ಸಂಚಿಕೆ ‘ನೀರ ನೆಮ್ಮದಿಯ ನಾಳೆ’ ಹೊರಬಂದಿದ್ದು ಅನೇಕ ಜಲಸಂರಕ್ಷಣೆಯ ಮಾದರಿಗಳನ್ನು ನಮಗೆ ನೀಡಿತು. ಜಲತಜ್ಞ ಶ್ರೀ ಪಡ್ರೆಯವರು ಬರೆದ ಮಹಾರಾಷ್ಟ್ರದ ಪಾನಿ ಫೌಂಡೇಶನ್ನಿನ ಅನುಭವ ಕಥನ ನಮ್ಮನ್ನು ಪ್ರೇರೇಪಿಸಿತು. ಆ ಫೌಂಡೇಶನ್ನಿನ ಜಾಲತಾಣದಲ್ಲಿ ಸಿಕ್ಕಿದ್ದೇ ಅಮೀರ್‌ ಖಾನ್ ಅವರ ‘ದಿ ಬ್ಯಾಟಲ್ ಎಗೆನೆಷ್ಟ್ ಡ್ರಾಟ್’ ಸಾಕ್ಷ್ಯಚಿತ್ರ. ಅದನ್ನು ಆಸಕ್ತರಿಗೆ ಏಪ್ರಿಲ್ 19ರಂದು ‘ಹಾಸನ ಫಿಲಂ ಸೊಸೈಟಿ’ಯ ವತಿಯಿಂದ ಪ್ರದರ್ಶಿಸಲಾಯ್ತು.

ಅದಕ್ಕೆ ಹಾಸನದ ಕೆಲ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಪರಿಸರಾಸಕ್ತರು, ಬರಹಗಾರರು, ಪತ್ರಕರ್ತರು, ಕಲಾವಿದರು, ಹೋರಾಟಗಾರರು, ಉಪನ್ಯಾಸಕರು, ಆಸಕ್ತರೆಲ್ಲರೂ ಬಂದಿದ್ದರು. ಸಾಕ್ಷ್ಯಚಿತ್ರ ಅನೇಕ ಸಾಧ್ಯತೆಗಳನ್ನು ನಮ್ಮ ಮುಂದೆ ತೆರೆಯಿತು. ಎಲ್ಲರೂ ಸೇರಿ ಮುಂದೇನು ಮಾಡಬಹುದೆಂಬ ಕುರಿತು ಹಲವು ಸುತ್ತಿನ ಚರ್ಚೆಗಳಾದವು.

ಪರಿಸರ ಸಂಬಂಧಿತ ಎಲ್ಲ ಚಟುವಟಿಕೆಗಳಲ್ಲಿ ನಿರಂತರ ಸಂಘಟಿತವಾಗಿ ತೊಡಗಿಕೊಳ್ಳಲು ‘ಹಸಿರುಭೂಮಿ ಪ್ರತಿಷ್ಠಾನ’ ಸ್ಥಾಪನೆಯಾಯ್ತು. ಹಾಸನದ ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಅವರು ವಿಶೇಷ ಆಸಕ್ತಿಯಿಂದ ಈ ಕೆಲಸದ ನೇತೃತ್ವ ವಹಿಸಿದ್ದರಿಂದ ಇದೊಂದು ಸರ್ಕಾರಿ ಹಾಗೂ ಸಾರ್ವಜನಿಕ ಸಹಭಾಗಿತ್ವದ ಮಹತ್ವದ ಚಟುವಟಿಕೆಯಾಯ್ತು. ಈ ಕೆಲಸಗಳಿಗಾಗಿ ಅವರು ಸ್ವತಃ ಒಂದು ತಿಂಗಳ ಸಂಬಳವನ್ನೂ ದೇಣಿಗೆಯಾಗಿ ನೀಡಿದರು. ನಮ್ಮ ತಂಡದ ಸಂಘಟಿತ ಪ್ರಯತ್ನವಾಗಿ, ನಮ್ಮಲ್ಲಿ ವಿಶೇಷ ಸಾಮರ್ಥ್ಯವಿರುವ ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ಹಂಚಿಕೊಂಡಿದ್ದರಿಂದ ಕೆಲಸ ತ್ವರಿತಗತಿಯಲ್ಲಿ ಮುಂದೆ ಸಾಗಿತು. 

ತಿಂಗಳೊಳಗೆ ಮಳೆ ಹಿಡಿದುಬಿಡುವ ಸಂದರ್ಭ ಇದ್ದಿದ್ದರಿಂದ ಊರವರ ಸಹಕಾರಕ್ಕಾಗಿ ಗ್ರಾಮದಲ್ಲಿ ಸಭೆಗಳನ್ನು ನಡೆಸಿದೆವು. ಶ್ರಮದಾನಕ್ಕೆ ಪ್ರಚಾರ ನಡೆಸುತ್ತಾ ಮೇ 1 ರಂದು ಬೆಳಿಗ್ಗೆಯೇ ಹಾಸನದಿಂದ 5 ಕಿ.ಮೀ. ದೂರವಿದ್ದ ದೊಡ್ಡಕೊಂಡಗೊಳದ ಒಣಗಿನಿಂತ ಮೂರೂ ಕಲ್ಯಾಣಿಗಳಲ್ಲಿ ಕೆಲಸ ಪ್ರಾರಂಭಿಸಿಯೇಬಿಟ್ಟೆವು. ಸಂಜೆಯೊಳಗೆ ಮೂರೂ ಕಲ್ಯಾಣಿಗಳಲ್ಲಿ ನೀರಿನ ಚಿಲುಮೆ ಕಂಡಿದ್ದು ನಮ್ಮ ತಂಡದ ಉತ್ಸಾಹವನ್ನು ಇಮ್ಮಡಿಗೊಳಿಸಿತು. ಅಧಿಕಾರಿಗಳೂ ಶ್ರಮದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷ. ಬೆಂಗಳೂರಿನಿಂದ ಚಿತ್ರ ನಟ ಚೇತನ್ ಬಂದಿದ್ದು, ಹಾಸನದ ಶಾಸಕರು ಉಚಿತ ಯಂತ್ರವನ್ನು ಕೆಲಸಕ್ಕೆ ನೀಡಿದ್ದು, ದಾನಿಗಳು ಹಣ, ಸಲಕರಣೆಗಳನ್ನು ನೀಡಿದ್ದು ಒಳ್ಳೆಯ ಕೆಲಸಕ್ಕೆ ಸಿಕ್ಕ ಸಾಥ್.

ಯಾವುದೋ ಕೆರೆ, ಕಲ್ಯಾಣಿಗಳಿಗೆ ಹೂಳೆತ್ತುವುದೆಂದು ದಿಢೀರನೆ ನುಗ್ಗಿ ಕೆಲಸ ಪ್ರಾರಂಭಿಸದೇ ಅವುಗಳ ವೈಜ್ಞಾನಿಕ ಸಮೀಕ್ಷೆ ನಡೆಸಿ ಅಂತರ್ಜಲ ಸಾಧ್ಯತೆ ಹೆಚ್ಚಿರುವೆಡೆಯೇ ಕೆಲಸ ಪ್ರಾರಂಭಿಸಬೇಕೆಂದು ನಿರ್ಧರಿಸಿದ್ದೆವು. ಭೂಕಂಪನಶಾಸ್ತ್ರವನ್ನು ಅಧ್ಯಯನ ಮಾಡಿ ಭೂಪದರಗಳ ಕಂಪನದಿಂದ ಅಂತರ್ಜಲವನ್ನು ನಿಖರವಾಗಿ ಗುರುತಿಸಬಲ್ಲ ವಿಶೇಷವಾದ ‘ಸಿಸ್ಮೋಗ್ರಾಫ್’ ಭೂಉಪಕರಣವನ್ನು ಸ್ವಂತವಾಗಿ ತಯಾರಿಸಿ ಕಳೆದ ಹತ್ತು ವರ್ಷದಿಂದ ಪ್ರಯೋಗನಿರತರಾದ ಪ್ರೊ.ರಮೇಶ್ ನಮ್ಮ ತಂಡದಲ್ಲಿದ್ದು, ಅವರು ಅಂತರ್ಜಲವಿರುವ ಕುರಿತು ಅಧ್ಯಯನದ ಮೂಲಕ ಪುಷ್ಟಿ ನೀಡಿದ್ದರು.

ಒಸರಿತು ನೀರು
ಕಲ್ಯಾಣಿ, ಕೆರೆಗಳೆಂದರೆ ಮಳೆನೀರಿನ ಸಂಗ್ರಹಾಗಾರಗಳಷ್ಟೇ ಅಲ್ಲ. ಬದಲಿಗೆ ನಮ್ಮ ಪೂರ್ವಿಕರು ಕೆರೆಯನ್ನು ಕಟ್ಟುವ ಜಾಗದಲ್ಲಿ ಅಂತರ್ಜಲವಿರುವ ಸಾಧ್ಯತೆಗಳನ್ನು ಪಾರಂಪರಿಕ ಜ್ಞಾನದಿಂದ ತಿಳಿದು ಕಟ್ಟಿರುವ ಜಲತಾಣಗಳು ಅವು. ನಾವದನ್ನು ಆಧಾರವಾಗಿಟ್ಟುಕೊಂಡು, ಭೂವಿಜ್ಞಾನ ಮತ್ತು ಅಂತರ್ಜಲಶಾಸ್ತ್ರವನ್ನೂ ಬಳಸಿ, ಭೂಕಂಪನಶಾಸ್ತ್ರವನ್ನೂ ಜೊತೆಗಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಸಾಧ್ಯವಾದರೆ ಕೆರೆ, ಕಟ್ಟೆಗಳ ಆಳದ ಉಪಗ್ರಹ ಚಿತ್ರಣವನ್ನೂ (ಸೆಟೆಲೈಟ್ ಮ್ಯಾಪಿಂಗ್) ಪಡೆದುಕೊಂಡು ಅತ್ಯಂತ ವ್ಯವಸ್ಥಿತವಾಗಿ ಕೆಲಸಕ್ಕೆ ಇಳಿಯಬೇಕೆಂಬುದು ನಮ್ಮ ನಿರ್ಧಾರವಾಗಿತ್ತು.

ಮಲೆನಾಡು ಭಾಗದ ಕೆರೆಗಳ ವಿಸ್ತೀರ್ಣ ಹೆಚ್ಚು. ಆಳ ಕಡಿಮೆ. ಜೊತೆಗೆ ಕಳೆದ 50-100 ವರ್ಷಗಳ ಹೂಳು ಅವುಗಳಲ್ಲಿ ಶೇಖರವಾಗಿದೆ. ಹೀಗಾಗಿ ನಮ್ಮ ಉದ್ದೇಶ, ಕೆರೆ, ಕಲ್ಯಾಣಿಗಳನ್ನು ಆದಷ್ಟೂ ಆಳಕ್ಕೆ ತೋಡುವುದು, ಅಂತರ್ಜಲ ಹೆಚ್ಚಿರುವ ಭಾಗದಲ್ಲಿ, ಕಲ್ಯಾಣಿಯಲ್ಲಾದರೆ ಐದಾರಡಿ, ಕೆರೆಗಳಲ್ಲಿ ಹದಿನೈದಿಪ್ಪತ್ತು ಅಡಿ ಆಳದಲ್ಲಿ ಮುಚ್ಚಿ ಹೋಗಿರುವ ಜಲದ ಕಣ್ಣನ್ನು ಬಿಡಿಸಿ ತನ್ನಷ್ಟಕ್ಕೇ ನೀರು ಒಸರುವ ಜಾಗವನ್ನು ಗುರುತಿಸುವುದು.

ಮತ್ತೊಂದೆಡೆ ಮಳೆ ನೀರು ಹರಿದು ಬರುವ ಎಲ್ಲಾ ದಾರಿಗಳನ್ನು, ಒತ್ತುವರಿಗಳನ್ನು ತೆರವು ಮಾಡಿ, ಸ್ವಚ್ಛಗೊಳಿಸಿ ಜಲ ತಾಣಗಳಲ್ಲಿ ಮಳೆ ನೀರಿನ ಸಂಗ್ರಹ ಹೆಚ್ಚುವಂತೆ ಮಾಡುವುದು. ಹೀಗೆಂದೇ ನಾವು ಹೂಳೆತ್ತುವುದಕ್ಕೆ ಸೀಮಿತಗೊಳ್ಳದೇ ಕೆರೆ, ಕಲ್ಯಾಣಿಗಳ ‘ಪುನಶ್ಚೇತನ’ ‘ಪುನರ್‌ನಿರ್ಮಾಣ’ಕ್ಕೆ ಆದ್ಯತೆ ನೀಡಬೇಕೆಂದು ನಿರ್ಧರಿಸಿದ್ದೆವು. ಅಂತರ್ಜಲ ಒಸರುವ ಜಾಗದಲ್ಲಿ ಆಳವಾದ ‘ಜಲಚಿಲುಮೆ ತಳ’ ನಿರ್ಮಾಣ ಮಾಡಿಕೊಳ್ಳುವುದು ನಮ್ಮ ಉದ್ದೇಶವಾದ್ದರಿಂದಲೇ ಮಾನವ ಶ್ರಮದ ಜೊತೆಗೆ ಅವಶ್ಯಕತೆಯಿರುವ, ತುರ್ತಿನ ಕೆಲಸಕ್ಕೆ ಯಂತ್ರಗಳನ್ನೂ ಬಳಸಿದೆವು. ಈ ‘ಜಲಚಿಲುಮೆ ತಳ’ದ ಕಲ್ಪನೆ ಹೆಚ್ಚಾಗಿ ಇನ್ನೂ ಬಳಕೆಗೆ ಬಂದಿಲ್ಲ.

ಅಕ್ಷಯ ಪಾತ್ರೆ
‘ಜಲಚಿಲುಮೆ ತಳ’ವನ್ನು ಮಾಡಿಕೊಂಡರೆ ಅದು ಮಳೆಯಿಲ್ಲದ ಸಮಯದಲ್ಲಿಯೂ ‘ಅಕ್ಷಯ ಪಾತ್ರೆ’ಯಂತೆ ಕೆಲಸ ಮಾಡುತ್ತದೆ, ಅಲ್ಲಿ ಬೇಸಿಗೆ ಕಾಲದಲ್ಲೂ ಸದಾ ನೀರಿರುತ್ತದೆ, ಮತ್ತು ಬಳಸಿದಷ್ಟೂ ಮತ್ತೆ ನೀರು ಶೇಖರವಾಗುತ್ತದೆ, ಇದರಲ್ಲಿನ ನೀರು ಇಡೀ ಪ್ರಾಕೃತಿಕ ವ್ಯವಸ್ಥೆ ಸುಸ್ಥಿತಿಯಲ್ಲಿಡಲು ಅನುವು ಮಾಡಿಕೊಡುತ್ತದೆ, ವಿಸ್ತಾರವಾದ ಕೆರೆಗಳಲ್ಲಿ ಒಂದಲ್ಲ ಎರಡು ಮೂರಾದರೂ ಇಂತಹ ‘ಜಲ ಚಿಲುಮೆಯ ಅಕ್ಷಯ ಪಾತ್ರೆ’ಗಳನ್ನು ರೂಪಿಸಿಕೊಳ್ಳಬಹುದು’ ಎಂಬ ಜಿತೇಂದ್ರಕುಮಾರ್‌ ಅವರ ಸಲಹೆಯನ್ನೇ ಧ್ಯೇಯವಾಗಿಟ್ಟುಕೊಂಡು ಮುನ್ನಡೆದೆವು.

ದೊಡ್ಡಕೊಂಡಗೊಳದ ಮೂರೂ ಕಲ್ಯಾಣಿಗಳ ಪುನಶ್ಚೇತನದ ನಂತರ ಒಣಗಿ ನಿಂತ ಮೂರೂವರೆ ಎಕರೆ ಕೆರೆಯಲ್ಲಿ ಯಂತ್ರಗಳ ಮೂಲಕ 20 ದಿನಗಳು ಹೂಳೆತ್ತುವ ಕೆಲಸ ಮಾಡಿದಾಗ, ಕೆಲವೆಡೆ ವೃತ್ತಾಕಾರವಾಗಿ ನೀರು ಉಕ್ಕುತ್ತಿರುವ ದೃಶ್ಯ. ಅದು ಸುತ್ತ ತೆರೆಗಳನ್ನೆಬ್ಬಿಸಿ ಹರಡುತ್ತಿರುವ ಚಿತ್ರಣ ಕಂಡಾಗ ನಮಗೆ ಸಂಭ್ರಮ. ಈ ಜಾಗವೇ ‘ಜಲಚಿಲುಮೆ’ ಎಂಬುದನ್ನು ಉಕ್ಕುವ ಜಲವೇ ಸಾಬೀತುಪಡಿಸುತ್ತಿತ್ತು. ನಂತರವೀಗ ಒಂದೆರಡು ಮಳೆಯೂ ಆಗಿ ಕೆರೆಯಲ್ಲಿ ನೀರು ತುಂಬುತ್ತಿದೆ. ಹೀಗೆ ನಾವು ಪುನಶ್ಚೇತನ ಮಾಡುವ ಅರ್ಧದಷ್ಟಾದರೂ ಕೆರೆಗಳಲ್ಲಿ ಜಲಚಿಲುಮೆ ಸಿಕ್ಕರೂ ಅವುಗಳೆಲ್ಲಾ ‘ಅಕ್ಷಯ ಕೆರೆ’ಗಳೇ ಆಗಿಬಿಡಬಹುದು!  

ನಮ್ಮ ಪ್ರಯತ್ನದ ಬಗೆಗೆ ತಿಳಿದ ಸಕಲೇಶಪುರದ ಉಪವಿಭಾಗಾಧಿಕಾರಿಯೂ ತಮ್ಮ ವ್ಯಾಪ್ತಿಯಲ್ಲಿ ಇದೇ ಮಾದರಿಯ ಕೆಲಸಕ್ಕೆ ಕೈ ಹಾಕಿದರು. ಇದರ ಜೊತೆಗೇ ಹಸಿರುಭೂಮಿ ಪ್ರತಿಷ್ಠಾನದಿಂದ, ಈ ಕೆಲಸಗಳನ್ನು ವ್ಯಾಪಕಗೊಳಿಸಲು ಜಿಲ್ಲೆಯ ಜಲ ಕಾರ್ಯಕರ್ತರಿಗಾಗಿ ಕಾರ್ಯಾಗಾರವನ್ನೂ ಏರ್ಪಡಿಸಿಕೊಂಡೆವು. ನಮಗಿಂತ ಮೊದಲೇ ಅಲ್ಲಲ್ಲಿ ಕಲ್ಯಾಣಿಗಳ ಹೂಳೆತ್ತಲು ತೊಡಗಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಯುವಕರೂ ಕೆಲಸದಲ್ಲಿ ಮತ್ತಷ್ಟು ಚುರುಕಾಗಿ, ನಮಗೆ ಜೊತೆಯಾದರು. ಹೀಗಾಗಿ ಕಲ್ಯಾಣಿ, ಕೆರೆಗಳ ಪುನಶ್ಚೇತನ ಕೆಲಸ ಹಾಸನ ಜಿಲ್ಲೆಯಲ್ಲಿ ವ್ಯಾಪಕವಾಗುತ್ತಾ ಜಲಾಂದೋಲನದ ರೂಪ ಪಡೆಯುತ್ತಾ ಹೋಯ್ತು.

ತಿಂಗಳೊಪ್ಪತ್ತಿನಲ್ಲಿ, ಹಾಸನದ ಜವೇನಹಳ್ಳಿಮಠದ ಕಲ್ಯಾಣಿ, ತಿರುಪತಿಹಳ್ಳಿಯ ಗೋಕಟ್ಟೆ ಮತ್ತು ಭೂತಯ್ಯನ ಕೆರೆ, ಚನ್ನರಾಯಪಟ್ಟಣ ತಾಲ್ಲೂಕಿನ ನಾಗರನವಿಲೆ ಕಲ್ಯಾಣಿ, ಬೇಲೂರು ತಾಲ್ಲೂಕು ಹಳೇಉತ್ಪಾತನಹಳ್ಳಿ ಕಲ್ಯಾಣಿ, ಸಕಲೇಶಪುರ ಬ್ಯಾಕರವಳ್ಳಿಯ ಓದಯ್ಯನ ಕೆರೆ, ಆಲೂರು ಹಳೆಪಾಳ್ಯದ ಕಲ್ಯಾಣಿ, ಅರಕಲಗೂಡು ಹಾನಗಲ್ ಗ್ರಾಮದ ಕೆರೆ, ಯಲಗುಂದ, ಚಿಕ್ಕಡಲೂರು ಕಲ್ಯಾಣಿ, ಹೊಳೆನರಸೀಪುರ ತಾಲ್ಲೂಕಿನ ಕಿನ್ನರಹಳ್ಳಿ, ಅರಸೀಕೆರೆ ತಾಲ್ಲೂಕಿನ ಬಾಣಾವರದ ಕಲ್ಯಾಣಿ... ಹೀಗೆ ಸಾಲು, ಸಾಲು ಜಲತಾಣಗಳು ಸರ್ಕಾರಿ ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ಪುನಶ್ಚೇತನಗೊಂಡವು.

ಕೆರೆಗಳ ಕೆಲಸ ಬೆಟ್ಟದಷ್ಟಿದೆ. ಆದರೆ ತ್ವರಿತ ಕೆಲಸಕ್ಕಾಗಿ ಯಂತ್ರಗಳನ್ನು ಬಳಸಲು ಹೆಚ್ಚಿನ ಹಣದ ಅವಶ್ಯಕತೆ ಇದೆ. ಕೆರೆಗಳ ಪುನಶ್ಚೇತನವನ್ನು ಗ್ರಾಮಸ್ಥರು ತಮ್ಮದೇ ಕೆಲಸವೆಂಬಂತೆ ನಿಂತು ಮಾಡಿಸುವ ಉತ್ಸಾಹ ತೋರಬೇಕಿದೆ. ನಮ್ಮೀ ನೀರಿನ ಕೆಲಸಗಳು ಜನರಿಗೆ ಸಾಧ್ಯತೆಯ ಮಾದರಿಗಳಷ್ಟೇ. ಎಲ್ಲೆಡೆಯೂ ನಾವೇ ಮಾಡಲು ಸಾಧ್ಯವೇ? ಇದರಿಂದ ಪ್ರೇರಿತರಾಗಿ ಗ್ರಾಮಸ್ಥರೇ ವ್ಯಾಪಕವಾಗಿ ಜಲಸಂರಕ್ಷಣೆಯ ಕಾರ್ಯದಲ್ಲಿ ತೊಡಗುತ್ತಾ ಹೋದರಷ್ಟೇ ನಮ್ಮ ಶ್ರಮ ಸಾರ್ಥಕ. ಜಲಸಂವರ್ಧನೆ ಕೆಲಸವನ್ನು ಸಂಘಟಿತವಾಗಿ ಮಾಡಿದರೆ,  ಕೆಲವೇ ವರ್ಷದಲ್ಲಿ  ಹಾಸನ ಜಿಲ್ಲೆಯಾದ್ಯಂತ ಜಲವನ್ನು ಉಕ್ಕಿಸಬಹುದೆಂಬ ‘ಹಸಿರುಭೂಮಿ ಪ್ರತಿಷ್ಠಾನ’ದ ನಂಬಿಕೆಯನ್ನು ಇದುವರೆಗಿನ ಯಶಸ್ಸು ಬಲಗೊಳಿಸಿದೆ.

ಪ್ರತಿ ಗ್ರಾಮದಲ್ಲೂ ಇಂತಹ ಕೆರೆ ಕಟ್ಟೆ, ಕಲ್ಯಾಣಿಗಳ ಪುನಶ್ಚೇತನವನ್ನು ಗ್ರಾಮಸ್ಥರೇ ಸ್ವಯಂ ಪ್ರೇರಣೆಯಿಂದ ಮಾಡಿಕೊಳ್ಳಬೇಕು. ಮಳೆ ನೀರಿನ ಸಮರ್ಪಕ ಸಂಗ್ರಹ ಮತ್ತು ಅದರ ಸರಿಯಾದ ಮರುಪೂರಣದಿಂದ ಅಂತರ್ಜಲ ಹೆಚ್ಚಾಗುತ್ತದೆ. ಇಂತಹ ರಚನಾತ್ಮಕ ಕೆಲಸಗಳಿಗೆ ಎಲ್ಲ ಪ್ರಜ್ಞಾವಂತ ಅಧಿಕಾರಿಗಳೂ ಖಂಡಿತಾ ಸಹಕಾರ ನೀಡುತ್ತಾರೆ. ಊರಿನ ಕೆರೆಯ ಕೆಲಸ ದೇವಸ್ಥಾನ ನಿರ್ಮಾಣದ ಕೆಲಸದಂತೆಯೇ ಮಿಗಿಲೆಂದು ದಾನಿಗಳಿಗೂ ಮನವರಿಕೆಯಾದರೆ, ಮಹತ್ವದ ನೀರಿನ ಕೆಲಸ ಸಾಕಾರವಾಗುತ್ತದೆ.         
ಡಾ.ಎಚ್.ಎಲ್.ನಾಗರಾಜ್  ಹಾಸನ ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT