ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಂದ್ ರಾಷ್ಟ್ರಪತಿ ಅಭ್ಯರ್ಥಿ

Last Updated 19 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರದ ರಾಜ್ಯಪಾಲ ಮತ್ತು ಬಿಜೆಪಿಯ ಹಿರಿಯ ದಲಿತ ತಲೆಯಾಳುಗಳಲ್ಲಿ ಒಬ್ಬರಾದ ರಾಮ ನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲಾಗಿದೆ.

ಆಕ್ರಮಣಕಾರಿ ಹಿಂದುತ್ವವಾದಿ ಹುರಿಯಾಳನ್ನು ನಿರೀಕ್ಷಿಸಿದ್ದ ಪ್ರತಿ­ಪಕ್ಷಗಳೆಡೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಜೋಡಿ ಮತ್ತೊಂದು ಅನಿರೀಕ್ಷಿತ ಎಸೆತ ಹಾಕಿದೆ.

ಬಿಜೆಪಿಯನ್ನು ನಿಯಂತ್ರಿಸುವ ಮಾತೃಸಂಸ್ಥೆ ಆರ್.ಎಸ್.ಎಸ್. ಒಪ್ಪಿಗೆಯಿಂದಲೇ ಕೋವಿಂದ್ ಅವರ ಆಯ್ಕೆ ಯಾಗಿದೆ ಎಂಬ ಬಗ್ಗೆ ಯಾವ ಸಂಶಯವೂ ಇಲ್ಲ. ಎಲೆಮರೆಯ ಕಾಯಿಯಂತೆ ಕೆಲಸ ಮಾಡಿದ ಆರೆಸ್ಸೆಸ್– ಬಿಜೆಪಿ ನಿಷ್ಠ ಕೋವಿಂದ್ ಅವರಿಗೆ ಆಕ್ರಮಣಕಾರಿ ಹಿಂದುತ್ವವಾದಿಯ ಬಹಿರಂಗ ಚಹರೆ ಇಲ್ಲ. ಬಿಜೆಪಿಗೆ ಮತ್ತು ಆರೆಸ್ಸೆಸ್‌ಗೆ ಅವರು ಹಲವು ನಿಷ್ಠರನ್ನು ರೂಪಿಸಿಕೊಟ್ಟಿದ್ದಾರೆ.

ಹೀಗಾಗಿ ದಲಿತ ಕೋವಿಂದ್ ಅವರ ಆಯ್ಕೆ ಪ್ರತಿಪಕ್ಷಗಳನ್ನು ಪೇಚಿಗೆ ಸಿಲುಕಿಸಿರುವುದು ನಿಚ್ಚಳ. ಅವರ ಹೆಸರಿನ ಘೋಷಣೆಯ ನಂತರ ತಕ್ಷಣ ಪ್ರತಿಕ್ರಿಯೆ ನೀಡುವುದು ಕೂಡ ಪ್ರತಿಪಕ್ಷಗಳಿಗೆ ಕಷ್ಟವಾಗಿದ್ದೇ ಈ ಮಾತಿಗೆ ಸಾಕ್ಷಿ. ಯಾವುದೇ ರಾಜಿ ಮಾಡಿಕೊಳ್ಳದೆ ಬಿಜೆಪಿಯ ಕಡುವಿರೋಧಿ ಪ್ರತಿಪಕ್ಷಗಳನ್ನು ಬಾಯಿ ಕಟ್ಟಿ ಹಾಕುವುದು ಮತ್ತು ಬಿಜೆಪಿ ಯೊಂದಿಗೆ ಕೊಡು ಕೊಳುವ ರಾಜಿಗೆ ಸಿದ್ಧವಾಗಿರುವ ಪ್ರತಿಪಕ್ಷಗಳನ್ನು ನೇರವಾಗಿ ಒಲಿಸಿಕೊಳ್ಳುವ ಮೋದಿ-ಷಾ ಜೋಡಿಯ ರಣತಂತ್ರ ಸದ್ಯಕ್ಕೆ ಫಲಿಸಿದಂತೆ ತೋರುತ್ತಿದೆ.

ಪಕ್ಷಕ್ಕೆ ಹೊರಗಿನವರಾದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರಂತಹ ಅಭ್ಯರ್ಥಿಯನ್ನು ತರುವ ಕುರಿತು ಆರೆಸ್ಸೆಸ್ ಒಲವು ತೋರಲಿಲ್ಲ. ಕಲಾಂ ಅಂತಹವರನ್ನು ಕರೆತಂದು ಪಟ್ಟ ಕಟ್ಟುವ ಉದ್ದೇಶ ಈಗಾಗಲೆ ಈಡೇರಿದೆ. ಕಲಾಂ ಅವರಿಂದ ಬಿಜೆಪಿ ಮತ್ತು ಆರೆಸ್ಸೆಸ್‌ನ ನೇರ ವಿಷಯಸೂಚಿಗಳಿಗೆ ಯಾವ ಸಮ­ರ್ಥನೆಯೂ ದೊರೆಯಲಿಲ್ಲ. ಹೀಗಾಗಿ ಈ ಬಾರಿ ಪಕ್ಷದ ಒಳಗಿನ ಅಭ್ಯರ್ಥಿಯೇ ಆಗಬೇಕು ಎಂಬುದು ಆರೆಸ್ಸೆಸ್ ಇಂಗಿತ. ಈ ಇಂಗಿತವನ್ನು ಗಮನದಲ್ಲಿ ಇರಿಸಿಕೊಂಡು ‘ಸರ್ವಸಮ್ಮತಿಯ ಅಭ್ಯರ್ಥಿ’ ಯೊಬ್ಬರನ್ನು ಹುಡುಕಿ ತೆಗೆಯಲಾಗಿದೆ.

ದಲಿತ ವಿರೋಧಿ ಎಂಬ ಪ್ರತಿಪಕ್ಷಗಳ ಟೀಕೆಯನ್ನು ಮೊಂಡು ಮಾಡುವುದು ಕೂಡ ಕೋವಿಂದ್ ಆಯ್ಕೆಯ ಹಿಂದಿನ ಮರ್ಮ. ಉತ್ತರಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಎದ್ದಿರುವ ದಲಿತ ಬಂಡಾಯದ ಮೊನಚನ್ನು ಕಳಚುವುದು ಮತ್ತು ದೇಶದಾದ್ಯಂತ ದಲಿತ ಸಮುದಾಯಕ್ಕೆ ಸಂದೇಶ ದಾಟಿಸುವುದೂ ಈ ಆಯ್ಕೆಯ ಉದ್ದೇಶ. 2019ರ ಲೋಕಸಭಾ ಚುನಾವಣೆಗಳನ್ನೂ ದೃಷ್ಟಿಯಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಆದರೆ ಸ್ಪೃಶ್ಯ ದಲಿತ ಒಳಪಂಗಡವೊಂದಕ್ಕೆ ಸೇರಿದ ಕೋವಿಂದ್ ಅವರನ್ನು ದೇಶದ ದಲಿತ ಸಮುದಾಯ ತನ್ನ ಪ್ರತಿನಿಧಿ ಎಂದು ಅಷ್ಟು ಸಲೀಸಾಗಿ ಅಂಗೀಕರಿಸುವುದೇ ಎಂಬ ಪ್ರಶ್ನೆ ಮುಂಬರುವ ದಿನಗಳಲ್ಲಿ ಬಿಜೆಪಿಗೆ ಎದುರಾದರೆ ಆಶ್ಚರ್ಯ ಇಲ್ಲ. ಕೋವಿಂದ್ ಅವರು ‘ಕೋರಿ’ ಜನಾಂಗಕ್ಕೆ ಸೇರಿದವರು. ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಒಡಿಶಾದಲ್ಲಿ ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಲಾಗಿರುವ ಈ ಜನಾಂಗದ ಪರಂಪರಾಗತ ಕಸುಬು ನೇಕಾರಿಕೆ. ಒರಟು ಬಟ್ಟೆ ಎಂಬ ಅರ್ಥ ನೀಡುವ ಹಿಂದಿ ಶಬ್ದ ‘ಕೋರ’ದಿಂದ ಹುಟ್ಟಿದ್ದು ಕೋರಿ ಪದ. ಒರಟು ಬಟ್ಟೆಯನ್ನು ನೇಯುವ ಕುಲದವರು ಕೋರಿಗಳು. ಉತ್ತರಪ್ರದೇಶದ ಚಮ್ಮಾರೇತರ ದಲಿತ ಜನಾಂಗಗಳ ಪೈಕಿ ಕೋರಿಯೂ ಒಂದು. ಉತ್ತರಪ್ರದೇಶದಲ್ಲಿ ಕೋರಿ ಜಾತಿಯ ಜನರ ಸಂಖ್ಯೆ 2011ರ ಜನಗಣತಿಯ ಪ್ರಕಾರ 22 ಲಕ್ಷಕ್ಕಿಂತ ತುಸುವೇ ಹೆಚ್ಚು. ಕೋರಿ ಜಾತಿಯ ದಲಿತರು ದನದ ಮಾಂಸವನ್ನು ತಿನ್ನುವುದಿಲ್ಲ. ಇತರೆ ರಾಜ್ಯಗಳಲ್ಲಿ ಬಹುತೇಕ ಕೋರಿಗಳು ಭೂರಹಿತರು ಮತ್ತು ಕೃಷಿ ಕಾರ್ಮಿಕರು. ಉತ್ತರಪ್ರದೇಶದಲ್ಲಿ ಜಾಟವರೆಂದು ಕರೆಯಲಾಗುವ ಚಮ್ಮಾರ ಜನಾಂಗ ಇತ್ತೀಚಿನ ವರ್ಷಗಳವರೆಗೆ ಮಾಯಾವತಿಯವರ ಹಿಂದೆ ಹೆಬ್ಬಂಡೆಯಂತೆ ನಿಂತಿತ್ತು. ಆದರೆ ಇತ್ತೀಚೆಗೆ ಈ ಜನಾಂಗದ ಮತಗಳು ತುಸುಮಟ್ಟಿಗೆ ಚೆದುರಿ ಹೋಗಿದ್ದು ಹೌದು. ಈ ಜನಾಂಗದ ಗೊಡವೆಯನ್ನು ಬಿಟ್ಟು ಮಾಯಾವತಿ ಅವರ ಕುರಿತು ಬಹುಕಾಲದಿಂದ ಮುನಿಸಿಕೊಂಡಿರುವ ಚಮ್ಮಾರೇತರ ದಲಿತ ಜನಾಂಗಗಳನ್ನು ಒಲಿಸಿಕೊಳ್ಳಲು ನೆಲಮಟ್ಟದಲ್ಲಿ ವರ್ಷಾನುಗಟ್ಟಲೆ ಸದ್ದಿಲ್ಲದೆ ಶ್ರಮಿಸಿದೆ ಬಿಜೆಪಿ. ಉತ್ತರಪ್ರದೇಶದಲ್ಲಿ ಜಾಟವರ ಪ್ರಮಾಣ ಶೇ 12. ಮಾಯಾವತಿಯವರಿಗೆ ಬಹುತೇಕ ನಿಷ್ಠವಾಗಿದ್ದ ಈ ಮತ ಭಂಡಾರವನ್ನು ಬದಿಗಿರಿಸಿತ್ತು ಬಿಜೆಪಿ. ಉಳಿದ ಶೇ 9ರಷ್ಟು ದಲಿತ ಜಾತಿಗಳಲ್ಲಿ ಡೋಮ, ಧೋಬಿ, ಪಾಸಿ, ಕೋರಿ, ವಾಲ್ಮೀಕಿ ಇತ್ಯಾದಿಗಳು ಸೇರಿದ್ದವು. ಮಾಯಾವತಿ ಅವರ ರಾಜ್ಯಭಾರದಲ್ಲಿ ಚಮ್ಮಾರರು ಮಾತ್ರವೇ ಪ್ರಯೋಜನ ಪಡೆದರೆಂದು ಈ ಜಾತಿಗಳಲ್ಲಿ ಮೂಡಿದ್ದ ಅಸಮಾಧಾನದ ರಾಜಕೀಯ ಲಾಭವನ್ನು ಬಿಜೆಪಿ ಪಡೆಯಿತು. ರಣತಂತ್ರ ಮತ್ತು ನೆಲಮಟ್ಟದ ಶ್ರಮದ ಧಾರಾಳ ಫಸಲನ್ನು ಲೋಕಸಭೆ ಮತ್ತು ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಕಟಾವು ಮಾಡಿರುವುದು ನಿಚ್ಚಳ ಗೋಚರ. ಇತರೆ ರಾಜ್ಯಗಳಲ್ಲಿಯೂ ಸೃಶ್ಯ ದಲಿತರನ್ನು ಒಲಿಸಿಕೊಳ್ಳುವ ಪಕ್ಷದ ತಂತ್ರ ಹೊಸದೇನೂ ಅಲ್ಲ.

ಕಾನ್ಪುರದ ದಲಿತ ಕುಟುಂಬವೊಂದರಲ್ಲಿ ಜನಿಸಿದ ರಾಮನಾಥ ಕೋವಿಂದ ಅವರದು ಪ್ರಾಮಾಣಿಕ ಮತ್ತು ಮಣ್ಣಿನೊಂದಿಗೆ ಬೆಸೆದ ನಾಯಕನದು. ದೀರ್ಘ ಕಾಲ ರಾಜಕಾರಣದಲ್ಲಿದ್ದರೂ ಆರೋಪಗಳಿಲ್ಲ. ಬದುಕಿನದ್ದುಕ್ಕೂ ಬಡವರು, ವಂಚಿತರ ವಿಷಯಗಳ ಕುರಿತು ಹೋರಾಡಿದವರು. ಸುಶಿಕ್ಷಿತರು. ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ ವಕೀಲಿ ವೃತ್ತಿ ನಡೆಸಿ ಕಾಯಿದೆ ಕಾನೂನುಗಳ ತಿಳಿವಳಿಕೆ ಹೊಂದಿದವರು. ರಾಷ್ಟ್ರಪತಿಯಾಗಿ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಬಲ್ಲ ಛಾತಿಯುಳ್ಳುವರು. ಒಡಿಶಾದ ಪರಿಶಿಷ್ಟ ಪಂಗಡಕ್ಕೆ ಸೇರಿದ ದ್ರೌಪದಿ ಮುರ್ಮು ಈ ಬಾಬತ್ತಿನಲ್ಲಿ ಹಿಂದುಳಿದಿದ್ದರು. ಇದೇ ಕಾರಣಕ್ಕಾಗಿ ರಾಷ್ಟ್ರಪತಿ ಸ್ಥಾನಕ್ಕೆ ಅವರ ಉಮೇದುವಾರಿಕೆ ಅಂತಿಮ ಸುತ್ತನ್ನು ತಲುಪಲಿಲ್ಲ.

ಕಾನೂನು ಕ್ಷೇತ್ರದಲ್ಲಿನ ಅಪಾರ ಅನುಭವ, ಸಂವಿಧಾನದ ಬಗೆಗಿನ ಜ್ಞಾನ ದೇಶಕ್ಕೆ ನೆರವಾಗಲಿದೆ.
ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT